Tuesday 27 March 2012

ಹೇಳದೆ ಉಳಿದ ಮಾತು:

ನಮ್ಮ ನೆಲದಲ್ಲಿ ನಮ್ಮದೇ ಆದ ಒಂದು ಪ್ರಾದೇಶಿಕ ಪಕ್ಷ ಇಲ್ಲವೆಂಬ ಭಾವನೆ ಬಹಳಷ್ಟು  ಕನ್ನಡಿಗರಲ್ಲಿದೆ.  ಆದರೆ ನಮ್ಮ ಕನ್ನಡ ನಾಡಿನಲ್ಲಿ ಅನ್ಯ ನಾಡಿನ ಬಹಳಷ್ಟು ಪ್ರಾದೇಶಿಕ ಪಕ್ಷಗಳಿವೆ. "ಎ.ಐ.ಡಿ.ಎಂ.ಕೆ" ಕಳೆದ ನಾಲ್ಕು ದಶಕಗಳಿಂದ ಇಲ್ಲಿ ಮನೆ ಮಾಡಿದೆ. ಹಿಂದೆ ಕೆ.ಜಿ.ಎಫ಼್ ನಲ್ಲಿ ಅವರ ಶಾಸಕರು ಸಹ ಆಯ್ಕೆಯಾಗಿದ್ದರು. ಬೆಂಗಳೂರಿನ ಗಾಂಧಿನಗರದಿಂದ ಆ ಪಕ್ಷದ ಶಾಸಕರು ಆಯ್ಕೆ ಯಾಗಿದ್ದೂ ಸಹ ಇದೆ. ಬಂಗಾರಪ್ಪನವರು ಉತ್ತರ ಪ್ರದೇಶದ "ಎಸ್.ಪಿ"ಯನ್ನು ಕನ್ನಡಿಗರಿಗೆ ಕಾಣಿಕೆಯಾಗಿ ಕೊಟ್ಟಿದ್ದೂ ಇದೆ. ಇನ್ನು ಮಾಯಾವತಿಯವರ "ಬಿ.ಎಸ್.ಪಿ" ಸಹ ಇದೆ. ಮಹಾರಾಷ್ಟ್ರದ "ಶಿವಸೇನೆ" ಯನ್ನು ಪ್ರಮೋದ್ ಮುತಾಲಿಕ್ ಅವರು ಕರೆದುಕೊಂಡು ಬಂದಿದ್ದರು. ಕಾರಣಾಂತರದಿಂದ ಅದನ್ನು "ಶ್ರೀರಾಮಸೇನೆ" ಎಂದು ಬದಲಿಸಿದರು. ಎನ್.ಟಿ.ರಾಮರಾವ್ ಅವರು "ತೆಲುಗು ದೇಶಂ" ಅನ್ನು ಕನ್ನಡಕ್ಕೆ ಡಬ್ ಮಾಡಿ "ಕನ್ನಡ ದೇಶಂ" ಎಂದು ಇಲ್ಲಿ ಬೆಳೆಸಲು ನೋಡಿದರು. ಅದು ಕೆಲವು ಕಾರಣಗಳಿಂದ ಸಾಧ್ಯವಾಗಲಿಲ್ಲ. ಬಿಹಾರದ ಲಾಲು ಪ್ರಸಾದ್ ಅವರು ಆರ್.ಜೆ.ಡಿ ಯನ್ನು ಇಲ್ಲಿ ತರಲು ಸೂಕ್ತ ಸಮಯ, ಸಂಧರ್ಬಕ್ಕಾಗಿ ಕಾಯುತ್ತಿದ್ದಾರೆ. ಇತ್ತೀಚೆಗೆ ನಮ್ಮ ಕೆಲವು ಶಾಸಕರು ಮಹರಾಷ್ಟ್ರದ ಶರತ್ ಪವಾರ್ ಅವರ "ಎನ್.ಸಿ.ಪಿ"ಯನ್ನು  ರತ್ನಕಂಬಳಿ ಹಾಸಿ ಕರೆತರಲು ಹೊರಟಿದ್ದಾರೆ. ಬೆಳಗಾವಿಯಲ್ಲಿ "ಎಂ.ಇ.ಎಸ್" ಸದಸ್ಯರು ಶಾಸಕರಾಗಿ, ನಗರ ಸಭೆ ಸದಸ್ಯರಾಗಿ, ಪುರ ಪಿತೃವಾಗಿ ಎಲ್ಲಾ ಬಗೆಯ ಅಧಿಕಾರವನ್ನು ಅನುಭವಿಸಿದ್ದಾರೆ. ಮುಂದಿನ ವರ್ಷಗಳಲ್ಲಿ ಕರ್ನಾಟಕದ ಆಡಳಿತ  ಜಯಲಲಿತಾ, ಲಾಲು, ಶರತ್ ಪವಾರ್, ಮುಂತಾದವರ ಕೈಗೆ ಬಂದರೆ ಕನ್ನಡಿಗರು ಆಶ್ಚರ್ಯಪಡುವಂತಹದ್ದೇನೂ ಇಲ್ಲ.

Monday 26 March 2012

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು: ( ಭಾಗ-೪)

ಕಳೆದ ಸಂಚಿಕೆಯಿಂದ:
                
ಸಧ್ಯದ ಪರಿಸ್ತಿತಿಯನ್ನು ಅವಲೋಕಿಸಿದಾಗ, ನಮ್ಮಲ್ಲಿ ಯಾರೂ ಪ್ರಾದೇಶಿಕ ಪಕ್ಷವನ್ನು ಸ್ಥಾಪನೆ ಮಾಡುವ ನಾಯಕರೇ ಇಲ್ಲವೇ ಎಂದು ಕೂಲಂಕುಶಿತವಾಗಿ ಪರಿಶೀಲಿಸಿದಾಗ ಕಂಡುಬರುವ ಹೆಸರುಗಳು ಕುಮಾರ ಸ್ವಾಮಿ, ಯಡೆಯೂರಪ್ಪ ಮತ್ತು ಸಿದ್ದರಾಮಯ್ಯ. ಇವರೆಲ್ಲರೂ ಬೇರೆ ಬೇರೆ ಪಕ್ಷಗಳಲ್ಲಿ ಇದ್ದಾರೆ. ಇವರೆಲ್ಲರೂ ಅವರ ಜಾತಿಯ/ವರ್ಗದ ನಾಯಕನೆಂದೇ ಪ್ರಸಿದ್ದರು. ಇವರುಗಳು ಸಹ ಎಲ್ಲಾ ವರ್ಗದ ಜನರನ್ನು ಹೊಂದಿಸಿಕೊಂಡು/ತೂಗಿಸಿಕೊಂಡು ಹೋಗುವ ಸಂಭವಗಳು ಕಾಣುತ್ತಿಲ್ಲ. ಇವರಿಗೆ ಅವರದೇ ಆದ ತೊಡಕುಗಳಿವೆ. ಅದನ್ನು ಬಿಟ್ಟು ಹೊರಬರುವುದು ಕಷ್ಟ. ಕುಮಾರ ಸ್ವಾಮಿ ಯವರು ೪/೫ ಜಿಲ್ಲೆಗಳನ್ನು ಹೊರತುಪಡಿಸಿ ಮಿಕ್ಕೆ ಕಡೆ ಅಷ್ಟಕಷ್ಟೇ. ಇನ್ನು ಯಡೆಯೂರಪ್ಪ ಮತ್ತು ಸಿದ್ದರಾಮಯ್ಯ ಅವರ ಕಥೆಯೂ ಅಷ್ಟೇ. ಇವರೂ ಮೂರೂ ಜನ ಒಂದು ಕಡೆ ಸೇರಿ, ತಮ್ಮ ತಮ್ಮ ಅಹಂ ಬಿಟ್ಟು ಉಳಿದ ಎಲ್ಲಾ ಜಾತಿ/ಪಂಗಡ/ವರ್ಗದ ಜನರ ಜೊತೆ ಸೇರಿ ಕನ್ನಡ ಮತ್ತು ಕರ್ನಾಟಕದ ಅಭಿವೃದ್ದಿಯ ಬಗ್ಗೆ ಚಿಂತಿಸಿದರೆ ಒಂದು ಹೊಸ ಶಕೆ ಉದಯವಾಗಬಹುದೇನೋ? ಆದರೆ ಇದು ಸಾಧ್ಯವೇ? ಇವರ ಮನಸ್ಥಿತಿ ಇದಕ್ಕೆ ಒಪ್ಪಿಗೆ ಕೊಡುತ್ತದೆಯೇ? ಇವರುಗಳು ಒಬ್ಬರಿಗೊಬ್ಬರನ್ನು ನಂಬುವ ಸ್ತಿತಿಯಲ್ಲಿದ್ದಾರೆಯೆ? ಅಕಸ್ಮಾತ್ ಇವರುಗಳು ಒಬ್ಬರನೊಬ್ಬರು ಅಧಿಕಾರದ ಆಸೆಗೆ ಕೂಡಿಕೊಂಡರೂ ಮತದಾರ ಈ ಮೂವರನ್ನೊ ನಂಬುವ ಸ್ಥಿತಿಯಲ್ಲಿದ್ದಾನೆಯೇ? ಹೀಗೆ ನೂರೆಂಟು ಉತ್ತರವಿಲ್ಲದ ಪ್ರಶ್ನೆಗಳು.

ಜಾತ್ಯಾತೀಯ ಜನತಾದಳ ಪಕ್ಷವು ರಾಷ್ಟೀಯ ಪಕ್ಷವೋ? ಪ್ರಾದೇಶಿಕ ಪಕ್ಷವೊ? ಎಂಬುದು ಅವರ ಪಕ್ಷದವರಿಗೇ ಗೊಂದಲವಿರುವಂತಿದೆ. ಈಗಲೇ ಒಂದು ಪ್ರಾದೇಶಿಕ ಪಕ್ಷವು ಬೇಕೆಂದರೆ (ದಿಡೀರ್ ತಿಂಡಿಯ ಹಾಗೆ) ನಾನಿದ್ದೇನೆ ಎನ್ನುತ್ತಾರೆ ಕುಮಾರ ಸ್ವಾಮಿ. ಇದರ ಜೊತೆ ಸಂಯುಕ್ತ ಜನತಾದಳ, (ಇದು ನಿಜವಾಗಲೂ ರಾಜ್ಯದಲ್ಲಿ ಇದೆಯಾ?) ಶ್ರೀರಾಮುಲು ಅವರ ಬಿ.ಎಸ್.ಆರ್ ಪಕ್ಷವು ಸೇರಬಹುದೇನೋ?                                           (ಮುಗಿಯಿತು) (ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ)

Sunday 25 March 2012

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು: ( ಭಾಗ-೩)

ಕಳೆದ ಸಂಚಿಕೆಯಿಂದ:

ಕನ್ನಡದ ಸಂಘ, ಸಂಸ್ಥೆಗಳು, ರಾಜ್ಯ ರೈತ ಸಂಘ, ಕಾರ್ಮಿಕ ಸಂಘಗಳು, ಸಿನಿಮಾ ನಟರ ಅಭಿಮಾನಿ ಸಂಘಗಳು ಹೀಗೆ ಮುಂತಾದ ಸಂಘಟನೆಗಳಲ್ಲಿ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಈಗ ಅವರೆಲ್ಲಾ ಬೇರೆ ಬೇರೆ ಪಕ್ಷಗಳಲ್ಲಿ ಹರಿದು ಹಂಚಿ ಹೋಗಿದ್ದಾರೆ. ಮೊದಲು ಅವರೆಲ್ಲಾ ಒಗ್ಗೂಡಿ ಒಂದೇ ನಾಯಕತ್ವದ ಅಡಿಯಲ್ಲಿ ಒಂದಾದರೆ ಅದು ಒಂದು ದೊಡ್ಡ ಶಕ್ತಿಯಾಗುತ್ತದೆ. ಆದರೆ ಅವರಲ್ಲಿ ಆಗಾಗ ಜರಗುವ ಒಳಜಗಳಗಳಿಂದಾಗಿ ಅವರು ಏನೂ ಮಾಡಲಾಗದಂತಹ ಸ್ಥಿತಿಗೆ ತಲುಪಿದ್ದಾರೆ. ಅವರು ಇದರಿಂದ ಆದಷ್ಟೂ ಮೊದಲು ಹೊರಗೆ ಬಂದರೆ ರಾಜಕೀಯವಾಗಿ ಬೆಳೆಯಬಹುದು. ಮೊದಲು ಇವರು ಎಲ್ಲರೊಂದಿಗೂ ಹೊಂದಿಕೊಂಡು ಒಗ್ಗಾಟ್ಟಾಗಿ ಹೋಗಬೇಕು.  ರಾಜಕೀಯ ಪ್ರಜ್ನೆ, ದೂರದೃಷ್ಟಿಯ ಕೊರತೆ ಅವರನ್ನು ಎದ್ದು ಕಾಡುತ್ತಿದೆ. ಕೆಲವರಿಗೆ ಇವರ ಬಗ್ಗೆ ಒಳ್ಳೆಯ ಆಶಾಭಾವನೆ ಇದೆ. ಕಾಲವೇ ಇದಕ್ಕೆ ಉತ್ತರಿಸಬೇಕು. 
                                                                                     
ಡಾ.ರಾಜ್ ಕುಮಾರ್ ಅವರಿಗೆ "ಗೊಕಾಕ್ ಚಳುವಳಿ" ಸಂಧರ್ಭದಲ್ಲಿ ಸಿಕ್ಕ ಅಭೂತಪೂರ್ವ ಜನಬೆಂಬಲ ಒಂದು ಹೊಸ ಪ್ರಾದೇಶಿಕ ಪಕ್ಷಕ್ಕೆ ಉದಯವಾಗಬಹುದೆಂಬ ಕನಸನ್ನು ಬಹಳಷ್ಟು ಮಂದಿ ಕಂಡಿದ್ದರು. ಅವರನ್ನು ಎಲ್ಲಾ ಜಾತಿ,ಮತ, ವರ್ಗದವರೂ ಪ್ರೀತಿಸುತ್ತಿದ್ದರು. ವಿದ್ಯಾವಂತರು, ಅವಿದ್ಯಾವಂತರು, ಬಡವರು, ಶ್ರೀಮಂತರು ಹೀಗೆ ಎಲ್ಲರಿಗೂ ಅವರ  ಮೇಲೊಂದು ಒಳ್ಳೆಯ ಅಭಿಪ್ರಾಯವಿತ್ತು ಮತ್ತು ವಿಶ್ವಾಸವಿತ್ತು.  ಆದರೆ ರಾಜ್ ಕುಮಾರ್ ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ. ಅಕಸ್ಮಾತ್ ರಾಜ್ ಕುಮಾರ್ ಅವರು ಅದರ ಬಗ್ಗೆ ಆಸಕ್ತಿ ವಹಿಸಿದ್ದಿದ್ದರೆ ಕರ್ನಾಟಕದ ರಾಜಕೀಯ ಒಂದು ಹೊಸ ದಿಕ್ಕೆಗೆ ಹೊರಳುತ್ತಿತ್ತೇನೋ? ರಾಜಕೀಯದಲ್ಲಿ ಆಸಕ್ತಿ ಇರುವವರು ಇಲ್ಲಿ ಜನಪ್ರಿಯರಾಗಲಿಲ್ಲ. ಜನಪ್ರಿಯರಾಗಿರುವವರಿಗೆ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ. ಹೀಗಾಗಿ ನಮ್ಮ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಏನೋ ಒಂದು ತೊಡಕು.
                                                         
ನಮ್ಮ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವು ಇರಬೇಕೆಂಬ ಕನಸು ಕಂಡವರು ಹಲವು ಮಂದಿ. ಇದರ ಬಗ್ಗೆ ಕೆಲವು ಪ್ರಯತ್ನಗಳಾದವು. ಕೆಲವು ಸ್ವಲ್ಪ ಮಟ್ಟಿನ ಯಶಸ್ಸು ಕಂಡವು. ಆದರೆ ಈ ಪಕ್ಷಗಳಾವುವೂ ಕನ್ನಡದ, ಪ್ರಾದೇಶಿಕ ಮನಸ್ಸನ್ನು ಹೊಂದಿರಲಿಲ್ಲ. ಕೇವಲ ಸ್ವಾರ್ಥಕ್ಕೆ ಹುಟ್ತಿಕೊಂಡಂತಾಗಿತ್ತು. ಆದ್ದರಿಂದ ಅವುಗಳಿಗೆ ಸಿಗಬೇಕಾಗಿದ್ದ ಯಶಸ್ಸು ಸಿಗಲಿಲ್ಲ. ದೇವರಾಜ ಅರಸು ಅವರು ಇಂದಿರಾ ಗಾಂಧಿಯವರ ಮೇಲಿನ ಕೋಪದಿಂದ ಒಂದು ಪ್ರಾದೇಶಿಕ ಪಕ್ಷವನ್ನು ಕಟ್ಟಿ ಆಮೇಲೆ ಅದನ್ನು ಕಾಂಗ್ರೆಸ್ ನಲ್ಲಿ ವಿಲೀನಗೊಳಿಸಿದರು. ಇವರಿಗೆ ರಾಜ್ಯದಲ್ಲಿ ಒಂದು ಪ್ರಾದೇಶಿಕ ಪಕ್ಷವನ್ನು ಕಟ್ಟಬೇಕೆಂಬ ಬಯಕೆ ನಿಜವಾಗಲೂ ಇರಲಿಲ್ಲ. ಕೇವಲ  ಪ್ರತಿಷ್ಟೆಗೆ ಕಟ್ಟಿದರು. ನಂತರ ಬಂಗಾರಪ್ಪನವರು "ಕರ್ನಾಟಕ ಕ್ರಾಂತಿರಂಗ" ಎಂಬ ಪಕ್ಷವನ್ನು ಕಟ್ಟಿದರು. ಇವರಿಗೆ ಸ್ವಲ್ಪ ಮಟ್ಟಿನ ಯಶಸ್ಸೊ ಸಿಕ್ಕಿತ್ತು. ಆಮೇಲೆ ಅದನ್ನು ಕಾಂಗ್ರೆಸ್ ನಲ್ಲಿ ವಿಲೀನ ಗೊಳಿಸಿದರು. ಇವರೂ ಕಾಂಗ್ರೆಸ್ ಮೇಲಿನ ಕೋಪದಿಂದ ಪಕ್ಷವನ್ನು ಕಟ್ಟಿದರೇ ಹೊರತು ಅದನ್ನು ಮುಂದುವರೆಸಿಕೊಂಡು ಹೋಗುವ ಬಗ್ಗೆ ಅವರಿಗೇ ವಿಶ್ವಾಸವಿರಲಿಲ್ಲ. ಅವರಿಗೆ ಮೊದಲು ನಾನು ಏನು ಎಂದು ಕಾಂಗ್ರೆಸ್ ನವರಿಗೆ ತೋರಿಸಬೇಕಾಗಿತ್ತು ಅಷ್ಟೇ. ರಾಮಕೃಷ್ಣ ಹೆಗ್ಗಡೆಯವರು "ನವ ನಿರ್ಮಾಣ ವೇದಿಕೆ" ಎಂಬ ರಾಜಕೀಯ ಸಂಘಟನೆಯನ್ನು ಹುಟ್ಟುಹಾಕಿದರು. ಇಲ್ಲೂ ಸ್ವಯಂ ಪ್ರತಿಷ್ಟೆ. ಇವರಿಗೆ ಜನತಾ ಪಕ್ಷಕ್ಕೆ ತಾವೇನು ಎಂಬುದನ್ನು ತೋರಿಸಬೇಕೆಂಬ ಅನಿವಾರ್ಯತೆ. ಹೀಗಾಗಿ ಇದೂ ಉದ್ದಾರವಾಗಲಿಲ್ಲ. ಎ.ಕೆ.ಸುಬ್ಬಯ್ಯನವರು "ಕನ್ನಡ ನಾಡು" ಎಂಬ ಪಕ್ಷವನ್ನು ಕಟ್ಟಲು ಹೊರಟು ನಗೆಪಾಟಲಾದರು. ವಿಜಯ ಸಂಕೇಶ್ವರರ "ಕನ್ನಡನಾಡು" ಚುನಾವಣೆಯಲ್ಲಿ ಸ್ಪರ್ಧಿಸಿ ಒಂದು ಸ್ಥಾನ ಗಳಿಸಿ ಕೊನೆಗೆ ಭಾ.ಜ.ಪದಲ್ಲಿ ಸೇರಿಕೊಂಡಿತು. ಇತ್ತೀಚೆಗೆ ಬಳ್ಳಾರಿಯ ಬಿ.ಶ್ರೀರಾಮುಲು "ಬಿ.ಎಸ್.ಆರ್.ಪಕ್ಷ"ವೆಂದು ಹೊಸ ಪಕ್ಷವನ್ನು ಕಟ್ಟಿದ್ದಾರೆ. ಇದೂ ಕೇವಲ ಪ್ರತಿಷ್ಟೆಗೆ. ಇವರಿಗೆ ನಾನು ಯಾರು? ಏನು? ಎಂಬುದನ್ನು ಬಿ.ಜೆ.ಪಿ.ಗೆ ತೋರಿಸಬೇಕೆಂಬ ರಣ ಉತ್ಸಾಹ.                                                                  (ಮಿಕ್ಕಿದ್ದು ನಾಳೆಗೆ)  


Saturday 24 March 2012

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು: ( ಭಾಗ-೨)

ಕಳೆದ ಸಂಚಿಕೆಯಿಂದ:

ಆದರೆ ನಮ್ಮ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವು ಯಾಕಿಲ್ಲ? ನಮ್ಮ ರಾಜ್ಯದಲ್ಲೂ ಒಂದು ಪ್ರಾದೇಶಿಕ ಪಕ್ಷ ಬರಬೇಕು. ಅದು ಅಧಿಕಾರ ಹಿಡಿಯಬೇಕೆಂಬ ಬಯಕೆ ಅನೇಕ ಕನ್ನಡಿಗರಿಗೆ ಇದೆ. ಆದರೆ ಅದು ಸಾಧ್ಯವಾಗುವುದು ಯಾವಾಗ? ಒಬ್ಬ ಹೊಸ ನಾಯಕನ ಅನ್ವೇಷಣೆಯಲ್ಲಿ ಕನ್ನಡಿಗರಿದ್ದಾರೆ. ಆ ಹೊಸ ನಾಯಕನಿಗೆ ಕನ್ನಡದ  ಮತ್ತು ಕರ್ನಾಟಕದ ಬಗ್ಗೆ ಪ್ರೀತಿ, ಅಭಿಮಾನವಿರಬೇಕು, ಅವನಿಗೆ ಎಲ್ಲಾ ಜಾತಿ/ವರ್ಗದ ಬೆಂಬಲವಿರಬೇಕು, ಹಣ ಬೆಂಬಲವಿರಬೇಕು. ಸತ್ಚಾರಿತ್ರ ಹೊಂದಿರಬೇಕು. ಇವೆಲ್ಲಾ ಇರುವ ಹೊಸ ನಾಯಕನಿಗಾಗಿ ಕರ್ನಾಟಕ ಮತ್ತು ಕನ್ನಡಿಗರು ಕಾಯುತ್ತಿದ್ದಾರೆ.

ಯಾಕೆ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವು ಜನಪ್ರಿಯವಾಗುವುದಿಲ್ಲ? ಕನ್ನಡಿಗರು ಯಾಕೆ ಈ ಪ್ರಾದೇಶಿಕ ಪಕ್ಷಗಳನ್ನು ನಂಬುವುದಿಲ್ಲ? ಯಾಕೆಂದರೆ, ನಮ್ಮ ನಾಯಕರುಗಳಿಗೆ ಕನ್ನಡಕ್ಕೆ, ಕರ್ನಾಟಕಕ್ಕೆ ಏನಾದರೂ ಮಾಡಬೇಕೆಂಬ ಬಯಕೆ ಇಲ್ಲ. ಇವರದು ಕೇವಲ ಸ್ವಾರ್ಥ. ಇವರಿಗೆ ಪ್ರಾದೇಶಿಕ ಪಕ್ಷವನ್ನು ಕಟ್ಟುವ ಬಗ್ಗೆಯಾಗಲೀ, ಅದರ ರೂಪರೇಖೆಗಳಾಗಲೀ ಗೊತ್ತಿಲ್ಲ. ಅದನ್ನು ಸರಿಯಾಗಿ ಬೆಳೆಸಿ ಅಧಿಕಾರಕ್ಕೆ ತರವ ಬಗ್ಗೆ ಯಾವುದೇ ಕನಸಾಗಲೀ, ದೂರದೃಷ್ಟಿಯಾಗಲೀ ಇಲ್ಲ. ಇವರಿಗೆ ಈಗಲೇ ಅಧಿಕಾರ ಸಿಗಬೇಕು. ಅಷ್ಟೇ. ಇವರಿಗೆ ಕೇವಲ ಅಧಿಕಾರ ಮೋಹ. ಅಧಿಕಾರಕ್ಕೆ ಏನು ಬೇಕಾದರೂ ಮಾಡುತ್ತಾರೆ. ಇವರಿಗೆ ಮೊದಲು ನಾನು, ನನ್ನದು ಎಂಬದರ ಚಿಂತೆ. ರಾಜ್ಯದ ಬಗ್ಗೆ ಇವರಿಗೆ ಯಾವುದೇ ಪ್ರೀತಿಯಾಗಲೀ ಇಲ್ಲ. ಅಧಿಕಾರಕ್ಕೆ ಬರುವ ತನಕ ಕನ್ನಡ/ಕರ್ನಾಟಕದ ಬಗ್ಗೆ ಮಾತನಾಡುತ್ತಾರೆ. ಒಮ್ಮೆ ಅಧಿಕಾರ ಸಿಕ್ಕ ಕೂಡಲೇ ಕನ್ನಡ/ಕರ್ನಾಟಕ ಎರಡನ್ನೂ ಮರೆತು ತಮ್ಮ ಸ್ವಂತ ಅಭಿವೃದ್ದಿಯ ಬಗ್ಗೆ ಗಮನ ಕೊಡುತ್ತಾರೆ. ಇದು ಈ ರಾಜ್ಯದ ಸಾಮಾನ್ಯ ಪ್ರಜೆಯ ಅನುಮಾನ.

ಇಂದು ಒಂದು ಹೊಸ ಪಕ್ಷವನ್ನು ಕಟ್ಟಿ ಅಧಿಕಾರಕ್ಕೆ ತರುವುದು ಸುಲಭವಾದ ಮಾತೇನೂ ಅಲ್ಲ. ನಮ್ಮ ರಾಜ್ಯದಲ್ಲಿ ಅದು ಬಹಳ ಕಷ್ಟ. ಕರ್ನಾಟಕದಲ್ಲಿ ಮೊದಲಿಂದಲೂ ಜಾತಿ ರಾಜಕಾರಣವೇ ಹೆಚ್ಚು. ಯಾರಿಗೆ ಜಾತಿಯ ಬಲವಿದೆಯೋ ಅವರೇ ಗೆಲ್ಲುವುದು. ಇಲ್ಲಿ ಜಾತಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಂತರದ ಸ್ಥಾನ ಹಣ. ಮೂರನೆಯದು ಮಠಾಧೀಶರದು. ಇದು ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಮತ್ತೊಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಮ್ಮ ರಾಜ್ಯದಲ್ಲಿ ವೀರಶೈವರು ಜಾತಿಯ ಲೆಕ್ಕಾಚಾರದಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಒಕ್ಕಲಿಗರಿಗೆ ಎರಡನೆಯ ಸ್ಥಾನ,  ಹೀಗೆ ಮುಂದುವರೆಯುತ್ತದೆ.

ಯಾರೇ ಪಕ್ಷವನ್ನು ಹೊಸದಾಗಿ ಹುಟ್ಟು ಹಾಕಿದರೂ ಒಂದು ಸಿದ್ದಾಂತ, ಗುರಿ ಮತ್ತು ತಾಳ್ಮೆ ಅತ್ಯವಶ್ಯಕ. ಈ ಗುಣಗಳಿಲ್ಲದ್ದಿದ್ದರೆ ಆ ಪಕ್ಷಕ್ಕೆ ಆಯಸ್ಸು ಬಹಳ ಕಡಿಮೆ. ಈಗ ಹೆಚ್ಚಿನ ರಾಜಕಾರಣಿಗಳ ಗುರಿ ನಮ್ಮ ಪಕ್ಷವನ್ನು ಇಂದೇ ಸ್ಥಾಪಿಸಿ ನಾಳೆಯೇ ಅಧಿಕಾರಕ್ಕೆ ತರಬೇಕೆನ್ನುವುದು. ಅತಿ ಹೆಚ್ಚು ದುಡ್ಡು ಮಾಡುವುದೇ ಸಿದ್ದಾಂತ. ಅದಿಕಾರಕ್ಕೆ ಏನು ಬೇಕಾದರೂ ಮಾಡಲು ತಯಾರು. ಹೀಗಿದ್ದರೆ ಯಾವ ಪಕ್ಷವೂ ಉದ್ದಾರವಾಗುವುದಿಲ್ಲ.  ಆದಕಾರಣದಿಂದ ಪಕ್ಷವನ್ನು ಮೊದಲು ಸರಿಯಾದ ಗುರಿ, ಸಿದ್ದಾಂತಗಳಿಗೆ ಅನುಗುಣವಾಗಿ ಪಕ್ಷವನ್ನು ಬೆಳೆಸಬೇಕಾದ ನಾಯಕ ನಿರಬೇಕಾಗಿರುವುದು ಇಂದು ಅತ್ಯಂತ ಅವಶ್ಯಕ. ಕನ್ನಡಿಗರಿಗೆ ಯಾವುದೊ ಪ್ರಾದೇಶಿಕ ಪಕ್ಷವೆಂಬ ಹೆಸರಿಟ್ಟುಕೊಂಡು ಬಂದರೆ ಅದು ಬೇಕಿಲ್ಲ. ಅದನ್ನು ಸ್ವೀಕರಿಸಲು ಅವರ ಮನ ಒಪ್ಪುವುದಿಲ್ಲ. ಆ ಪ್ರಾದೇಶಿಕ ಪಕ್ಷವು ಕನ್ನಡದ ಮನಸ್ಸುಳ್ಳ ಮತ್ತು ಕರ್ನಾಟಕದ ಏಳಿಗೆಗೆ ಕಂಕಣ ಬದ್ದವಾಗಿರಬೇಕಾಗುತ್ತದೆ. ಇಲ್ಲದಿದ್ದರೆ ಅದೂ ಮತ್ತೊಂದು ರಾಜಕೀಯ ಪಕ್ಷವಂತಾಗುತ್ತದೆ ಅಷ್ಟೇ.                         (ಮಿಕ್ಕಿದ್ದು ನಾಳೆಗೆ)         


Friday 23 March 2012

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು: ( ಭಾಗ-೧)


ಪ್ರತಿ ರಾಜ್ಯವೂ ರಸಗೊಬ್ಬರ, ಕಲ್ಲಿದ್ದಲು, ವಿದ್ಯುತ್, ಅಡುಗೆ ಅನಿಲ, ರೈಲು ಸಂಪರ್ಕ ಹೀಗೆ ಹತ್ತು ಹಲವು ಕಾರಣಗಳಿಗಾಗಿ ಕೇಂದ್ರ ಸರ್ಕಾರದೆ ಮುಂದೆ ಕೈ ಚಾಚಬೇಕಾಗುತ್ತದೆ. ಕೆಂದ್ರದಲ್ಲಿ ಯಾವ ಪಕ್ಷ ಅಧಿಕಾರದಲ್ಲಿರುತ್ತದೆಯೋ, ಅದೇ ಪಕ್ಷ ರಾಜ್ಯದಲ್ಲಿದ್ದರೆ ಹೆಚ್ಚಿನ ಸೌಲಭ್ಯ ಸಿಗುತ್ತದೆ. ಇಲ್ಲದಿದ್ದರೆ ಎಲ್ಲದಕ್ಕೂ ಕೈ ಚಾಚಿ ಅವರ ಮುಂದೆ ನಡು ಬಾಗಿಸಿ ಕೂಡಬೇಕು. ಇಂತಹ ಪರಿಸ್ಥಿತಿ ಬರಬಾರದೆಂದರೆ ಪ್ರಾದೇಶಿಕ ಪಕ್ಷವೇ ಮದ್ದು. ಇದನ್ನು ನಮ್ಮ ದೇಶದ ಕೆಲವು ರಾಜ್ಯಗಳು ಚೆನ್ನಾಗಿ ಅರ್ಥ ಮಾಡಿಕೊಂಡಿವೆ. ನಾವು ಇದನ್ನು ಅರ್ಥ ಮಾಡಿಕೊಂಡಿಲ್ಲ ಅಷ್ಟೇ.

ನಮ್ಮ ದೇಶದಲ್ಲಿ ಸಮ್ಮಿಶ್ರ ಸರ್ಕಾರದ ಆಡಳಿತ ಶುರುವಾಗಿ ದಶಕಗಳೇ ಉರುಳಿವೆ. ಕೇಂದ್ರದಲ್ಲಿ ಕಾಂಗ್ರೆಸ್, ಬಿ.ಜೆ.ಪಿ ಮತ್ತು ತೃತೀಯ ರಂಗದ ನೇತೃತ್ವದ ಆಡಳಿತವನ್ನು ಪ್ರಜೆಗಳು ಕಂಡಿದ್ದಾರೆ. ಇನ್ನು ಮುಂದೆಯೂ ಒಂದೇ ಪಕ್ಷದ ಆಡಳಿತ ಕೇಂದ್ರದಲ್ಲಿ ಬರುವುದೆ ಕಷ್ಟವೇನೋ? ಪರಿಸ್ಥಿತಿ ಹೀಗಿರಬೇಕಾದರೆ ಪ್ರಾದೇಶಿಕ ಪಕ್ಷಗಳಿಗೆ ಕೇಂದ್ರದಲ್ಲಿ ಹೆಚ್ಚಿನ ಮರ್ಯಾದೆ, ಪ್ರಾಶಸ್ತ್ಯ. ಯಾವ ಪ್ರಾದೇಶಿಕ ಪಕ್ಷ ಹೆಚ್ಚಿನ ಲೋಕಸಭಾ ಸ್ಥಾನಗಳನ್ನು ರಾಜ್ಯದಲ್ಲಿ ಗೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಪಕ್ಷಕ್ಕೆ/ಗುಂಪಿಗೆ ಬೆಂಬಲ ಸೂಚಿಸುತ್ತದೆಯೋ ಆ ಪ್ರಾದೇಶಿಕ ಪಕ್ಷಕ್ಕೆ ರಾಜ ಮರ್ಯಾದೆ. ಕನ್ನಡಿಗರ ಕನಸು ಶುರುವಾಗುವುದು ಇಲ್ಲೆಂದಲೇ.  ಕರ್ನಾಟಕದಲ್ಲಿ ಒಂದು ಪ್ರಾದೇಶಿಕ ಪಕ್ಷವೊಂದು ಹುಟ್ಟಿ ರಾಜ್ಯದಲ್ಲಿ ಅಧಿಕಾರಾಕ್ಕೆ ಬಂದು, ಹೆಚ್ಚಿನ ಲೋಕಸಭಾ ಸ್ಥಾನಗಳನ್ನು(೨೦-೨೮) ಗೆದ್ದು ಕೆಂದ್ರದಲ್ಲಿ ನಮ್ಮನ್ನು ಗಮನಿಸುವಂತೆ ಮಾಡುವುದು.

ನಮ್ಮ ರಾಜ್ಯದ ಪ್ರಜೆಗಳು ಕಾಂಗ್ರೆಸ್, ಜನತಾ ಪಕ್ಷ, ಜನತಾ ದಳ ಮತ್ತು ಬಾ.ಜ.ಪ ಆಡಳಿತವನ್ನು ಕಂಡಿದ್ದಾರೆ. ಇವೆಲ್ಲವೂ ರಾಷ್ಟೀಯ ಪಕ್ಷಗಳು. ರಾಜ್ಯದ ಕನ್ನಡಿಗರಿಗೆ ಒಂದು ಆಸೆ ನಮ್ಮದೇ ಪ್ರಾದೇಶಿಕ ಪಕ್ಷದ ಆಡಳಿತವನ್ನೂ ನೋಡೋಣ. ಪ್ರಾದೇಶಿಕ ಪಕ್ಷದ ಆಡಳಿತದಲ್ಲಿ  ಕೆಲವು ರಾಜ್ಯಗಳುಅಭಿವೃದ್ದಿ ಹೊಂದಿವೆ.  ಆ ರಾಜ್ಯಗಳ ಅಭಿವೃದ್ದಿ ಅವನಿಗೆ ಹೀಗೊಂದು ಆಸೆ ಹುಟ್ಟಿಸಿದೆ. ಪ್ರಾದೇಶಿಕ ಪಕ್ಷವೊಂದಿದದ್ದರೆ ನಮಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ಪಡೆದುಕೊಳ್ಳಬಹುದು. ನಮ್ಮ ಮಾತು ಕೇಂದ್ರದಲ್ಲಿ ನಡೆಯುತ್ತದೆ. ಅನಿಲ, ರೈಲು ಸಂಪರ್ಕ, ರಸಗೊಬ್ಬರ, ವಿದ್ಯುತ್ ಹೀಗೆ ಸಕಲ ಸೌಲಭ್ಯಗಳಿಗೆ ಹೆಚ್ಚು ಪರದಾಡಬೇಕಿಲ್ಲ ಎಂಬ ಆಸೆ.                                                 

ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಪ್ರಾದೇಶಿಕ ಪಕ್ಷವೇ ಅಧಿಕಾರಕ್ಕೆ ಬಂದಿದೆ.  ಹಾಗೆ ನೋಡಿದರೆ ಇಡೀ ಭಾರತಧಲ್ಲಿ ಸುಮಾರು ೨೦೦೦ ದಿಂದೀಚೆಗೆ ಪ್ರಾದೇಶಿಕ ಪಕ್ಷದ ಮಹತ್ವ ಹೆಚ್ಚುಹೆಚ್ಚಾಗಿ ಕಾಣಿಸುತ್ತಿದೆ. ನಮ್ಮೆ ನೆರೆಯ ತಮಿಳುನಾಡಿನಲ್ಲಿ ದಶಕಗಳಿಂದಲೂ ಪ್ರಾದೇಶಿಕ ಪಕ್ಷವೇ ಅಧಿಕಾರಕ್ಕೆ ಬರುತ್ತಿದೆ. ಆಂದ್ರಪ್ರದೇಶದಲ್ಲಿ ತೆಲುಗು ದೇಶಂ ಪಕ್ಷವು ಅಧಿಕಾರದ ರುಚಿ ನೋಡಿದೆ. ಬಿಹಾರ, ಅಸ್ಸಾಂ, ಕಾಶ್ಮೀರ, ಒಡಿಶಾ, ಪಕ್ಷಿಮ ಬಂಗಾಲ ಹೀಗೆ ಹಲವು ರಾಜ್ಯಗಳು ಪ್ರಾದೇಶಿಕ ಪಕ್ಷದ ಆಳ್ವಿಕೆಗೆ ಬರುತ್ತಿವೆ. ಕೆಲವು ರಾಜ್ಯಗಳು ಅಭಿವೃದ್ದಿ ಪಥದಲ್ಲಿ ನಿಜವಾಗಲೂ ಮುಂದುವರೆಯುತ್ತಿವೆ.     (ಮಿಕ್ಕಿದ್ದು ನಾಳೆಗೆ)  

 

Saturday 17 March 2012

ಮಲ್ಟಿಪ್ಲೆಕ್ಸ್/ಪಿ.ವಿ.ಆರ್.ಮಾಲ್ ನಲ್ಲಿ ಕನ್ನಡ ಚಿತ್ರಗಳು:

ಇತ್ತೀಚೆಗೆ ನಟಿ ತಾರ ಅವರನ್ನು  ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆಯನ್ನಾಗಿ ಸರ್ಕಾರ ನೇಮಿಸಿದೆ. ಅವರಿಗೆ ಮೊದಲು ಅಭಿನಂದನೆಗಳು. ಅವರು ಕನ್ನಡ ಚಿತ್ರರಂಗದ ಒಳಹೊರಗನ್ನು ಚೆನ್ನಾಗಿ ಬಲ್ಲವರು ಮತ್ತು ಕನ್ನಡ ಚಿತ್ರರಂಗದ ಬಗ್ಗೆ ಕಾಳಜಿ ಮತ್ತು ಅಭಿಮಾನ ಹೊಂದಿರುವವರು. ಕನ್ನಡ ಚಿತ್ರರಂಗದ ಸಮಸ್ಯೆಗಳನ್ನು ಚೆನ್ನಾಗಿ ಅರಿತಿರುವಂತಹವರು. ಅವರು ಅಧಿಕಾರ ಸ್ವೀಕಾರ ಮಾಡಿದ ನಂತರ ಅವರು ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರಪ್ರದರ್ಶನದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ಅವುಗಳಲ್ಲಿ ಶೇ.೫೦ ರಷ್ಟನ್ನು ಕನ್ನಡ ಚಿತ್ರಗಳಿಗಾಗಿ ಮೀಸಲಿಡುವಂತೆ ಮಾಡಲಾಗುವುದು ಎಂದು ಹೇಳಿರುವರು. ಇದು ನಿಜವಾಗಲೂ ಒಂದು ಒಳ್ಳೆಯ ನಿರ್ದಾರ. (ಅವರು ಇದರಲ್ಲಿ ಎಷ್ಟು ಯಶಸ್ವಿಯಾಗುತ್ತಾರೋ ಕಾಲವೇ ನಿರ್ಣಯಿಸಬೇಕು.)  ಈಗಿನ ಮಾಲ್/ಮಲ್ಟಿಪ್ಲೆಕ್ಸ್/ಪಿ.ವಿ.ಆರ್ ಗಳಲ್ಲಿ ಕನ್ನಡ ಚಿತ್ರವು ಕೇವಲ ೩-೪ ಪರದೆಯಲ್ಲಿ, ಕೇವಲ ೨-೩ ಪ್ರದರ್ಶನ ಮಾತ್ರ ಕಾಣುತ್ತಿದೆ. (ಮಲ್ಟಿಪ್ಲೆಕ್ಸ್/ಪಿ.ವಿ.ಆರ್ ಮೊದಮೊದಲು ನಮ್ಮ ನಗರದಲ್ಲಿ ಶುರುವಾದಾಗ ಅದರಲ್ಲಿ ಕನ್ನಡ ಚಿತ್ರಗಳಿಗೆ ಮೊದಲ ಅದ್ಯತೆಯನ್ನು ಕೊಡದಿದ್ದರೆ ಅದರ ಪರವಾನಗಿಯನ್ನು ರದ್ದು ಪಡಿಸುವೆವು ಎಂದು ಸರ್ಕಾರ ತಿಳಿಸಿತ್ತು. ಪಾಪ, ಅದಕ್ಕೆ ಈಗ ಜಾಣ ಕುರುಡು )  ಉಳಿದ ೮-೧೦ ಪರದೆಗಳಲ್ಲಿ ಪರಭಾಷಾಚಿತ್ರಗಳದ್ದೇ ಹಾವಳಿ. ಕರ್ನಾಟಕದ ಬಿಡಿ ಚಿತ್ರಮಂದಿರಗಳದ್ದೂ ಇದೇ ಸಮಸ್ಯೆ. ಕರ್ನಾಟಕದಲ್ಲಿರುವ ಸುಮಾರು ೬೫೦ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವ ಚಿತ್ರಮಂದಿರಗಳು ಸುಮಾರು ೩೫೦-೪೦೦ ಇರಬಹುದು, ಉಳಿದವುಗಳಲ್ಲಿ ಮತ್ತದೇ ಪರಭಾಷಾ ಚಿತ್ರಗಳು. ಇದರ ಬಗ್ಗೆಯೂ ಸರಿಯಾದ ನಿರ್ಣಯಗಳನ್ನು ತಾರ ಅವರು ತೆಗೆದುಕೊಳ್ಳಲಿ. ಇಡೀ ಭಾರತದಲ್ಲಿ ಒಂದು ವರ್ಷ ಪ್ರದರ್ಶನ ಕಂಡಿರುವ ಚಿತ್ರಗಳು ಕೇವಲ ಕನ್ನಡ ಚಿತ್ರಗಳು ಎಂಬ ದಾಖಲೆ ಈಗಲೂ ಇದೆ. ಆದರೊ ಮಲ್ಟಿಪ್ಲೆಕ್ಸ್/ಪಿ.ವಿ.ಆರ್/ಮಾಲ್ ಗಳವರಿಗೆ ಏನೋ ಪೊಗರು.

ಸರ್ಕಾರ/ನಿರ್ಮಾಪಕರು ಚಿತ್ರಮಂದಿರದ ಸಮಸ್ಯೆಗಳಿಗೆ ಏನು ಮಾಡಬಹುದು?

ವರ್ಷ ಪೂರ್ತಿ ನಾಲ್ಕು ಪ್ರದರ್ಶನವೂ ಕೇವಲ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವ ಚಿತ್ರಮಂದಿರಗಳಿಗೆ :-
* ಉಚಿತ ವಿದ್ಯುತ್ ಮತ್ತು ನೀರು ಸರಬರಾಜು ಮಾಡಬಹುದು.
* ಆಸ್ತಿ ತೆರಿಗೆಯನ್ನು ರದ್ದುಗೊಳಿಸಬಹುದು.

ಮಿಕ್ಕಂತೆ:-

* ಬೆಂಗಳೂರು ನಗರ ಅಭಿವೃದ್ದಿ ಪ್ರಾಧಿಕಾರ ನಿರ್ಮಿಸುವ ಪ್ರತಿ ಬಡಾವಣೆಯಲ್ಲಿ ಕನಿಷ್ಟ ಎರಡು ಚಿತ್ರಮಂದಿರಗಳನ್ನು ನಿರ್ಮಿಸಿ ಅವುಗಳನ್ನು ಕನ್ನಡ ಚಿತ್ರಗಳಿಗೆ ಮಾತ್ರ ಮೀಸಲಿಡಬಹುದು. 
* ಸರ್ಕಾರದ ಶಂಕರ್ ನಾಗ್ ಮತ್ತು ಪುಟ್ಟಣ್ಣ ಚಿತ್ರಮಂದಿರಗಳಲ್ಲಿ ಕೇವಲ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವುದು.
 ಸರ್ಕಾರವೇ ಪ್ರತಿ ಜಿಲ್ಲೆ/ತಾಲ್ಲೂಕು ಗಳಲ್ಲಿ ೫೦೦ ಜನ ಕುಳಿತುಕೊಳ್ಳಬಹುದಾದ ಕನಿಷ್ಟ ಎರಡು ಚಿತ್ರಮಂದಿರಗಳನ್ನು ನಿರ್ಮಿಸಿ, ಅದನ್ನು ಕನ್ನಡ ಚಿತ್ರಗಳಿಗೆ ಮಾತ್ರ ಮೀಸಲಿಡಬಹುದು.
* ಪಿವಿಆರ್/ಮಲ್ಟಿಪ್ಲೆಕ್ಸ್ ಮುಂತಾದ ಮಾಲ್ ಗಳಲ್ಲಿನ ಚಿತ್ರಮಂದಿರಗಳಲ್ಲಿ ಶೇ.೫೦% ರಷ್ಟನ್ನು ಕನ್ನಡ ಚಿತ್ರಗಳಿಗೆ ಮೀಸಲಿಡಬೇಕೆಂಬ ಕಾನೂನು ಜಾರಿಗೊಳಿಸಬಹುದು.  ಇಲ್ಲದಿದ್ದರೆ ಅವುಗಳ ಪರವಾನಗಿಯನ್ನು ರದ್ದುಗೊಳಿಸಬಹುದು.
* ಸರ್ಕಾರ ಖಾಸಗಿಯವರಿಂದ ಚಿತ್ರಮಂದಿರವನ್ನು ೧೦/೨೦ ವರ್ಷಕ್ಕೆ ಲೀಸ್ ತೆಗೆದುಕೊಂಡು ಅದನ್ನು ಕನ್ನಡ ಚಿತ್ರಗಳಿಗೆ ಮೀಸಲಿಡಬಹುದು.
* ಎಲ್ಲಾ ಚಿತ್ರಮಂದಿರಗಳಲ್ಲಿ ೨ ಪ್ರದರ್ಶನವನ್ನು ಕೇವಲ ಕನ್ನಡ ಚಿತ್ರಗಳಿಗೆ ಮೀಸಲಿಡಬಹುದು.
* ಸರ್ಕಾರ ಸಾರ್ವಜಿನಿಕರ ಸಹಭಾಗಿತ್ವದಲ್ಲಿ ಚಿತ್ರಮಂದಿರಗಳನ್ನು ನಿರ್ಮಿಸಿ ಅದನ್ನು ಕನ್ನಡ ಚಿತ್ರಗಳಿಗಾಗಿ ಮೀಸಿಲಿಡಬಹುದು.
* ಸರ್ಕಾರ ಮತ್ತು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಲಿಯ ಸಹಭಾಗಿತ್ವದಲ್ಲಿ ಚಿತ್ರಮಂದಿರವನ್ನು ನಿರ್ಮಾಣ ಮಾಡಿ ಅದನ್ನು ಕೇವಲ ಕನ್ನಡ ಚಿತ್ರಗಳಿಗಾಗಿ ಮೀಸಲಿಡಬಹುದು.

ನಿರ್ಮಾಪಕರು:

* ಕನ್ನಡ ಚಿತ್ರ ನಿರ್ಮಾಪಕರೇ ನಗರ/ತಾಲೂಕು/ಜಿಲ್ಲಾ ಮಟ್ಟದಲ್ಲಿ ಚಿತ್ರಮಂದಿರಗಳನ್ನು ನಿರ್ಮಿಸಿ ಅದರಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವುದು. (ರಾಕ್ ಲೈನ್, ಕುಮಾರ ಸ್ವಾಮಿ, ಶಿವಣ್ಣ ಮುಂತಾದವರು ಈಗಾಗಲೇ ಇಂತಹ ಪ್ರಯತ್ನದಲ್ಲಿದ್ದಾರೆ), ದ್ವಾರಕೀಶ್, ಕೊಬ್ರಿ ಮಂಜು, ಉಪೇಂದ್ರ, ರವಿಚಂದ್ರನ್, ರಾಮು, ಮುನಿರತ್ನ ಮುಂತಾದವರು ಈ ಪ್ರಯತ್ನ ಮಾಡಬಹುದು. ಅವರಿಗೆ ಅದು ಒಂದು ಆಸ್ತಿಯಂತಾಗುತ್ತದೆ.
* ನಿರ್ಮಾಪಕರು ನಗರದ/ತಾಲ್ಲೂಕು/ಜಿಲ್ಲಾ ಮಟ್ಟದಲ್ಲಿ ಕೆಲವು ಚಿತ್ರಮಂದಿರಗಳನ್ನು ಲೀಸ್ ಮುಖಾಂತರ ತೆಗೆದುಕೊಳ್ಳಬಹುದು.

Tuesday 13 March 2012

ಕನ್ನಡದ ವಾರ್ತಾವಾಹಿನಿಗಳು:


ಕನ್ನಡದಲ್ಲಿ  ವಾರ್ತೆಗಳು ಅಂದಾಕ್ಷಣ ಸರ್ಕಾರದ ದೂರದರ್ಶನವನ್ನೇ ಕನ್ನಡಿಗರು ಮೊದಲು ಅವಂಲಬಿಂಸಬೇಕಾಗಿತ್ತು.  ಅದೂ ೨೦ ನಿಮಿಷ ಮಾತ್ರ. ನಂತರ ವಾಹಿನಿಗಳ ಭರಾಟೆ ಶುರುವಾದಾಗ ಕನ್ನಡದಲ್ಲಿ ಮೊದಲು ವಾರ್ತೆಗಳನ್ನು ೨೪ ಗಂಟೆ ತಂದವರು ಉದಯಾ ಟಿ.ವಿಯವರು, "ಉದಯಾ ವಾರ್ತೆಗಳು" ಮುಖಾಂತರ. ವಾರ್ತೆಗಳಿಗಾಗಿಯೇ ಒಂದು ವಾಹಿನಿ ಕನ್ನಡಿಗರಿಗೆ ಹೊಸದು, ಅದೂ ೨೪ ಗಂಟೆಗಳು. ಮೊದಲಿಗೆ ಇದರ ಬಗ್ಗೆ ಕನ್ನಡಿಗರಿಗೆ ಕುತೂಹಲ ಇತ್ತು.  ಉದಯಾ ವಾರ್ತೆಗಳು ಕನ್ನಡದಲ್ಲಿ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡಲಿಲ್ಲ ಮತ್ತು ಜನಪ್ರಿಯತೆಯನ್ನೂ ಗಳಿಸಲಾಗಲಿಲ್ಲ.  ನಂತರ ಬಂದವರು ಟಿ.ವಿ.೯. ಇದು ಕನ್ನಡಿಗರಿಗೆ ಪರಿಚಯವಾಗಿ ೫ ವರ್ಷಗಳು ಕಳೆದಿವೆ. ಈ ವಾಹಿನಿ ೨೪ ಗಂಟೆಗಳೂ ಸುದ್ದಿ ಕೊಡುವೆವು ಎಂದು ಬಂದಾಗ ಕನ್ನಡಿಗರು ಇದರ ಬಗ್ಗೆ ಮೊದಮೊದಲು ಉತ್ಸಾಹ ತೋರಲಿಲ್ಲ. ಆದರೆ ಟಿ.ವಿ.೯ ಅವರು ವಾರ್ತೆಗಳ ಜೊತೆಗೆ ಮನೋರಂಜನೆಯನ್ನೂ ಸ್ವಲ್ಪ ಬಡಿಸಿ ಹೊಸ ಪ್ರಯತ್ನವನ್ನು ಜಾರಿಗೆ ತಂದರು. ಅದರ ಜೊತೆಜೊತೆಗೆ ಸಮಾಜದಲ್ಲಿ ನಡೆಯುವ ಬ್ರಷ್ಟಾಚಾರ, ಮೂಢನಂಬಿಕೆ, ಭವಿಷ್ಯ, ಲೇಡೀಸ್ ಕ್ಲಬ್,  ಆಹಾರದಲ್ಲಿ ಕಲಬೆರೆಕೆ ಮುಂತಾದ ವಿಷಯದ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮನೆಮಾತಾದರು. ಇಡೀ ಭಾರತದಲ್ಲಿ ವಾರ್ತಾವಾಹಿನಿಯೊಂದು ೫೨.೬೯ (ಇತೀಚಿನ ಹೊಸ ರೇಟಿಂಗ್) ಟಿ.ಆರ್.ಪಿ ಗಳಿಸಿ ಸುದ್ದಿಯಾಯಿತು. ಇದರ ನಡುವೆ ಸುವರ್ಣ ೨೪ x ೭ ಎಂಬ ಮತ್ತೊಂದು ವಾರ್ತಾ ವಾಹಿನಿಯೊಂದು ಶುರುವಾಯಿತು. ಇದೂ ಸಹ ಟಿ.ವಿ.೯ ರವರಂತೆಯೇ ವಾರ್ತೆಗಳ ಜೊತೆ ಮನೋರಂಜನೆ, ಬ್ರಷ್ಟಾಚಾರ, ಮೂಢನಂಬಿಕೆ, ಭವಿಷ್ಯ, ಸುಹಾಸಿನಿ, ಆಹಾರದಲ್ಲಿ ಕಲಬೆರೆಕೆ ಮುಂತಾದ ವಿಷಯದ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮನೆಮಾತಾಯಿತು.  ಟಿ.ವಿ. ೯ ಅವರು ಮಾಧ್ಯಮ ಕ್ಷೇತ್ರಕ್ಕೆ ಕೊಡುವ ರಾಮನಾಥ ಗೋಯಂಕಾ ಪ್ರಶಸ್ತಿಯನ್ನು ಕಳೆದ ೨ ವರ್ಷರ್ಗಳಿಂದ ಪಡೆದುಕೊಳ್ಳುತ್ತಿದ್ದಾರೆ. ಜನ ತಮ್ಮತಮ್ಮಲ್ಲಿ ಮಾತನಾಡಿಕೊಳ್ಳುವ ವಿಷಯ ಬಂದಾಗ ಟಿ.ವಿ. ೯ ಮತ್ತು ಸುವರ್ಣ ನ್ಯೂಸ್ ವಿಷಯ ಬಂದುಹೋಗುತಿತ್ತು. ಹಾಗಿತ್ತು ಅವರ ಜನಪ್ರಿಯತೆ. ಈಗ ಜನರಿಗೆ ಸ್ವಲ್ಪ ಬೇಜಾರಾಗಿದೆ. ತೋರಿಸುವುದನ್ನೇ ತೋರಿಸುತ್ತಾರೆ  ಮತ್ತು ಪರಭಾಷಾ ಚಿತ್ರಗಳ ಬಗ್ಗೆ ಅನಗತ್ಯ ಪ್ರಚಾರ ಮತ್ತು ವಿಪರೀತ ವ್ಯಾಮೋಹ. ಈಗ ಹೇಗಾಗಿದೆ ಪರಿಸ್ಠಿತಿ ಎಂದರೆ ಅದರಲ್ಲಿ ಬರುವ ಸುದ್ದಿ ಇದರಲ್ಲಿ, ಇದರಲ್ಲಿ ಬರುವ ಸುದ್ದಿ ಅದರಲ್ಲಿ ಎಂಬಂತಾಗಿದೆ. ಎರಡಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಈಗಲಾದರೂ ಅವರು ಎಚ್ಚೆತ್ತುಕೊಳ್ಳಬೇಕು. ಈಗ ಹೊಸದಾಗಿ "ಸಮಯ", "ಜನಶ್ರೀ" "ಕಸ್ತೂರಿ ನ್ಯೂಸ್", ಪಬ್ಲಿಕ್ ಟಿ.ವಿ ಎಂಬ ನಾಲ್ಕು ವಾರ್ತಾವಾಹಿನಿಗಳು ಪ್ರಾರಂಭವಾಗಿವೆ. ಕಳೆದ ತಿಂಗಳಲ್ಲಿ ಬಂದ ಪತ್ರಕರ್ತನೊಬ್ಬನ ಮೇಲ್ವಿಚಾರಣೆಯಲ್ಲಿ ನಡೆಯುತ್ತಿರುವ ಪಬ್ಳಿಕ್ ಟಿ.ವಿ.ಯ ಬಗ್ಗೆ ಜನರಲ್ಲಿ ಕುತೂಹಲ ಇದೆ.
ಕನ್ನಡ ವಾಹಿನಿಗಳ ಪರಭಾಷಾ ಮೋಹ:
ಇತ್ತೀಚೆಗೆ ಟಿ.ವಿ.೯ ಮತ್ತು ಸುವರ್ಣ ನ್ಯೂಸ್ ನಲ್ಲಿ  ಇತ್ತೀಚೆಗೆ ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್ ಚಿತ್ರಗಳ ಬಗ್ಗೆ ಮತ್ತು ಅದರಲ್ಲಿ ನಟಿಸುವ ನಟ, ನಟಿಯರ ಬಗ್ಗೆ ಬಹಳಷ್ಟು ವಿಚಾರಗಳು ಬರುತ್ತಿವೆ. ಉದಾ: ಮಗಧೀರನ ನಿಶ್ಚಿತಾರ್ಥ, ಜೂ.ಎನ್.ಟಿ.ಆರ್.ಕಲ್ಯಾಣ, ಬಿಸಿನೆಸ್ ಚಿತ್ರದ ಮೇಕಿಂಗ್  ಮತ್ತು ಕಲೆಕ್ಷನ್, ಚಿರಂಜೀವಿ ಮತ್ತು ಬಾಲಕೃಷ್ಣ ಗಲಾಟೆ, ಕೊಲವರಿ ಸಮಾಚಾರ, ಅಗ್ನಿಪಥ್ ಮೇಕಿಂಗ್, ರಚ್ಚನ ಆರ್ಭಟ ಹೀಗೆ ಅನೇಕ ವಿಚಾರಗಳು. ಸುವರ್ಣ ನ್ಯೂಸ್ ಅವರೇನು ಕಮ್ಮಿಯಿಲ್ಲ. ಇದರಲ್ಲೂ ಸಹ ಪರಭಾಷಾ ಚಿತ್ರಗಳ ಪ್ರಚಾರದಲ್ಲಿ ಎತ್ತಿದ ಕೈ. ಅವರ "ಸಿನಿಮಾ ಹಂಗಾಮ" ಕಾರ್ಯಕ್ರಮದಲ್ಲಿ ಕನ್ನಡದ ಚಿತ್ರಗಳಿಗಿಂತಾ ಪರಭಾಷಾ ಚಿತ್ರಗಳ ಬಗ್ಗೆ ಸುದ್ದಿ ಬಹಳ ಬರುತ್ತಿದೆ. ಇದೆಲ್ಲಾ ನಮಗೇಕೆ. ಅದೂ ಕನ್ನಡದ ವಾಹಿನಿಗಳಲ್ಲಿ.  ಬೇರೆ ಭಾಷಾ ಚಿತ್ರಗಳ ಬಗ್ಗೆ ಯಾರಿಗೆ ತಿಳಿದುಕೊಳ್ಳೂವ ಅಸಕ್ತಿ ಇದೆಯೋ ಅವರು ಆ ವಾಹಿನಿಗಳನ್ನು ನೊಡುತ್ತಾರೆ. ನಮ್ಮ ಭಾಷೆಯ ಚಿತ್ರಗಳ ಬಗ್ಗೆ ಬೇರೆ ಭಾಷಾ ವಾಹಿನಿಯವರು ಎನೂ ತೋರಿಸುವುದಿಲ್ಲ ಅಲ್ಲವೇ? ನೀವು ಯಾಕೆ ಆ ಚಿತ್ರಗಳ ಬಗ್ಗೆ ಇಲ್ಲಿ ಪ್ರಸಾರ ಮಾಡಬೇಕು? ಕನ್ನಡದ ವಾಹಿನಿಗಳು ಎಂದೆಂದೂ ಕನ್ನಡವಾಗಿರಲಿ.  ಕನ್ನಡದಲ್ಲಿ ಪರಭಾಷಾ ಚಿತ್ರಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಾ ಅವರನ್ನು ಯಾಕೆ ಕೊಂಡಾಡುತ್ತೀರಾ? ಆಂಧ್ರ/ತಮಿಳುನಾಡು/ಮಹರಾಷ್ಟ್ರಗಳಲ್ಲಿ ಅವರದೇ ಆದ ಪ್ರತ್ಯೇಕ ವಾಹಿನಿಗಳಿವೆ. ಆ ವಾಹಿನಿಗಳಲ್ಲಿ ಅವರು ಅವರ ಭಾಷೆಯ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಾರೆ. ಅವರ ಚಿತ್ರಗಳಿಗೆ ಪ್ರಚಾರ ಕೊಡುತ್ತಾರೆ. ಅವರು ಬಳಸಿ ಬಿಸಾಕಿದ್ದನ್ನು ಕನ್ನಡಿಗರಿಗೆ ಪಂಚಭಕ್ಷ ಪರಮಾನವೆಂದು ಯಾಕೆ ಉಣಬಡಿಸುತ್ತೀರ? ಈ ತಂಗಳನ್ನು ತಿನ್ನಲು ಕನ್ನಡಿಗರಿಗೇನು ಕರ್ಮ? ನಿಮ್ಮ ಕಾರ್ಯಕ್ರಮಗಳನ್ನು ನೋಡುವವರು ಕರ್ನಾಟಕದಲ್ಲಿರುವ ಕನ್ನಡಿಗರು ಎಂಬುದು ನಿಮಗೆ ನೆನಪಿರಲಿ. ಹೊರ ರಾಜ್ಯ/ದೇಶದಲ್ಲಿ ನಿಮ್ಮ ವಾಹಿನಿಯು ಬರುತ್ತಿದ್ದರೆ ಅದನ್ನು ನೋಡುವುದು ಸಹಾ ನಮ್ಮ ಕನ್ನಡಿಗರೇ ತಿಳಿಯಿರಿ. ಈ ಎರಡು ವಾಹಿನಿಗಳು ಕನ್ನಡಿಗರ ಗಂಟಲೊಳಗೆ ಬಿಸಿ ಕಡುಬನ್ನು ಬಲವಂತವಾಗಿ ತಳ್ಳುತ್ತಿದೆ. ಇದನ್ನು ನುಂಗುವುದೋ ಬಿಡುವುದೋ ಗೊತ್ತಾಗದೆ ಕನ್ನಡಿಗರು ಕಣ್ಣು ಬಾಯಿ ಬಿಡುವಂತಾಗಿದೆ.
ನನ್ನ ಫೇಸ್ ಬುಕ್ ಬರಹ:
ಸುವರ್ಣ  ನ್ಯೂಸ್ ೨೪ X ೭ ನವರಿಗೆ ತಾವು ಪ್ರಾಯೋಜಿಸಿದ "ಕೊಲವರಿ ಮೇನಿಯಾ (?) ಇನ್ ಬೆಂಗಳೂರು" ಕಾರ್ಯಕ್ರಮದ ಬಗ್ಗೆ ಅದೇನೋ ಮೋಹ, ಯಾಕೆ ಅಂತ ಗೊತ್ತಿಲ್ಲ. ಅದನ್ನು ವಾರಕ್ಕೊಮ್ಮೆ ಅದನ್ನು ಪುನಃ ಪುನಃ ಪ್ರಸಾರ ಮಾಡಿ ನಮಗೆ ಬಲವಂತದ ಮಾಘಸ್ನಾನವನ್ನು ಮಾಡಿಸುತ್ತಿದ್ದಾರೆ. ಅವರಿಗೆ ಯಾರು ಹೇಳಿದ್ದಾರೋ ಗೊತ್ತಿಲ್ಲ ಕನ್ನಡಿಗರಿಗೆ ಅದನ್ನು ವಾರಕ್ಕೊಮ್ಮೆ ನೋಡದಿದ್ದರೆ ಊಟ, ನಿದ್ದೆ ಬರುವುದಿಲ್ಲ ಎಂದು. ವಿಶ್ವೇಶ್ವರ ಭಟ್ ಅವರೇ ನಿಮಗೆ ನಿಮ್ಮ ಕಾರ್ಯಕ್ರಮ ಅಷ್ಟು ಇಷ್ಟವಾಗಿದ್ದರೆ ನೀವು ಅದನ್ನು ಸಿ.ಡಿ ಮಾಡಿಸಿಕೊಂಡು ನಿಮ್ಮ ಮನೆಯಲ್ಲಿ/ಕಛೇರಿಯಲ್ಲಿ ಅಷ್ಟೇ ಯಾಕೆ ನಿಮ್ಮ ಸ್ನಾನದ ಮನೆಯಲ್ಲೂ ದಿನದ ೨೪ ಗಂಟೆಯೂ ೩೬೫ ದಿನವೂ ವೀಕ್ಷಿಸಿ. ಯಾರೂ ಬೇಡವೆನ್ನುವುದಿಲ್ಲ. ನೀವು ಕನ್ನಡದ ವಾಹಿನಿಯವರಾಗಿ ಆ ಕಾರ್ಯಕ್ರಮವನ್ನು ಪ್ರಾಯೋಜಿಸಿರುವುದೇ ಮಹಾಪರಾಧ ಮತ್ತು ನೀವು ಕನ್ನಡಿಗರಿಗೆ ಮಾಡಿರುವ ದ್ರೋಹ. ನೀವು ಇನ್ನೂ ಒಂದು ಕೆಲಸ ಮಾಡಬಹುದು. ಅದರ ೬ ಕೋಟಿ ಸಿ.ಡಿ ಮಾಡಿ ಕನ್ನಡಿಗರ ಮನೆಮನೆಗೆ ರಮ್ಯಾ, ರಾಗಿಣಿ, ಯೋಗಿ ಮುಖಾಂತರ ತಲುಪಿಸಿದರೆ ನಾವು ಅದನ್ನು ಮಹಾ ಪ್ರಸಾದ ಅಂತ ಸ್ವೀಕರಿಸಿ ದೇವರಮನೆಯಲ್ಲಿಟ್ಟು ದಿನವೂ ಪೂಜೆ ಮಾಡಿ ಬೆಳಗ್ಗೆ ಎದ್ದ ತಕ್ಷಣ ಮೊದಲು ಅದನ್ನು ನೋಡಿ, ಕೇಳಿ ದಿನವನ್ನು ಪ್ರಾರಂಭಿಸುತ್ತೇವೆ. ಇಂಥ ಹುಚ್ಚು ಅಭಿಮಾನವನ್ನು ಕಂಡು ಧನುಷ್ ಅವರಿಗೆ ಮಾತೇ ಬತುತಿಲ್ಲವಂತೆ. ಜೈ,ಕನ್ನಡಾಂಬೆ.

Saturday 10 March 2012

ಐ.ಎ.ಎಸ್ ಮತ್ತು ಐ,ಪಿ.ಎಸ್:

ಸಚಿವೆ ಶೋಭಾ ಅವರು "ಕರ್ನಾಟಕದಲ್ಲಿ ಐ.ಪಿ.ಎಸ್ ಮತ್ತು ಐ.ಎ.ಎಸ್ ಅದಿಕಾರಿಗಳಲ್ಲಿ ಕನ್ನಡಿಗರು ಬೆರೆಳೆಣಿಕೆಯಷ್ಟಿದ್ದರೆ ಅನ್ಯಭಾಷಿಕರು ೮೦% ರಷ್ಟು ಹೊರ ರಾಜ್ಯದವರಾಗಿದ್ದಾರೆ. ಅನ್ಯ ರಾಜ್ಯದವರಿಗೆ ಭಾಷಾ ಸಮಸ್ಯೆ ಇದೆ. ಹೀಗಿರುವಾಗ ಅವರು ಜನಸಾಮಾನ್ಯರಿಗೆ ಹೇಗೆ ಸ್ಪಂದಿಸುತ್ತಾರೆ  ಇದನ್ನು ಅರಿತು ವಿದ್ಯಾರ್ಥಿ ದೆಸೆಯಲ್ಲಿ ಗುರಿ ಇಟ್ಟು ಕೊಂಡು ಐ..ಎ.ಎಸ್ ಮತ್ತು ಐ.ಪಿ.ಎಸ್ ಸ್ಥಾನಗಳನ್ನು ಕರ್ನಾಟಕದವರು ತುಂಬಬೇಕು" ಎಂದು ಇತ್ತೀಚಿನ ಒಂದು ಸಮಾರಂಭದಲ್ಲಿ ಹೇಳಿರುತ್ತಾರೆ. ಇದು ಖಂಡಿತಾ ಒಂದು ಒಳ್ಳೆಯ ಸಲಹೆ, ನಮ್ಮ ಕನ್ನಡದ ಮಕ್ಕಳಿಗೆ. ಕನ್ನಡಿಗರು ಕೇವಲ ಬೆರೆಳೆಣಿಕೆಯಷ್ಟು ಮಂದಿ ಮಾತ್ರ ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುತ್ತಾರೆ. ಪರಭಾಷಿಕರು ಇದರಲ್ಲಿ ಯಾವಾಗಲೂ ಮುಂದಿರುತ್ತಾರೆ. ನಮ್ಮ ಕನ್ನಡಿಗರು ಇದರಲ್ಲಿ ಉತೀರ್ಣರಾಗಿ ನಮ್ಮ ರಾಜ್ಯಕ್ಕೆ ಸೇವೆ ಸಲ್ಲಿಸಲು ಉತ್ತಮ ಅವಕಾಶ. ಹೀಗಾದಾಗ ಆಡಳಿತದಲ್ಲಿ ಕನ್ನಡವನ್ನು ಸರಿಯಾಗಿ ಜಾರಿಗೆ ತರಲು ಸಹಕಾರಿಯಾಗುತ್ತದೆ ಮತ್ತು ಜನರ ಕಷ್ಟಗಳನ್ನು ಸರಿಯಾಗಿ ಅದಿಕಾರಿಗಳು ಅರ್ಥ ಮಾಡಿಕೊಳ್ಲಲು ಅವರಿಗೆ ಸಹಕಾರಿಯಾಗುತ್ತದೆ. ನಮ್ಮ ಕರ್ನಾಟಕದಲ್ಲಿ ದೊಡ್ಡ ದೊಡ್ಡ ಸರಕಾರಿ ಅಧಿಕಾರಿಗಳು ಪರಭಾಷಿಕರೇ ಆಗಿದ್ದಾರೆ. ಅವರಲ್ಲಿ ಕೇವಲ ಒಂದಿಬ್ಬರು ಮಾತ್ರ ಕನ್ನಡ ಕಲಿತು ಕನ್ನಡದಲ್ಲಿ ಜನರ ಹತ್ತಿರ ಉತ್ತಮವಾಗಿ ವ್ಯವಹರಿಸುತ್ತಾರೆ. (ಉದಾ.ಪಂಜಾಬ್ ರಾಜ್ಯದವರಾದ ಚಿರಂಜೀವಿ ಸಿಂಗ್ ಇಲ್ಲಿ ಬಂದು ಕನ್ನಡವನ್ನು ಕಲಿತು ಜನಸಾಮಾನ್ಯರ ಜೊತೆ ಕನ್ನಡದಲ್ಲಿ ವ್ಯವಹರಿಸಿ ಅವರ ಕಷ್ಟಗಳಿಗೆ ಸ್ಪಂದಿಸಿರುತ್ತಾರೆ.)
ಅನ್ಯ ರಾಜ್ಯದ ಅಧಿಕಾರಿಗಳ ಜೊತೆ ಜನರಿಗೆ ಅವರ ಸಮಸ್ಯೆಯನ್ನು ಹೇಳಿಕೊಳ್ಳುವುದು ಬಹಳ ಕಷ್ಟವಾಗುತ್ತದೆ. ಪೋಷಕರು ತಮ್ಮ ತಮ್ಮ ಮಕ್ಕಳನ್ನು ಈ ಪರೀಕ್ಷೆಗಳಿಗೆ ಸಜ್ಜುಗೊಳಿಸಬಹುದು. ನಮ್ಮ  ಮಕ್ಕಳು ಕೇವಲ ಡಾಕ್ಟರ್ ಮತ್ತು ಇಂಜಿನಿಯರ್ ಆದರೆ ಸಾಕೆಂದು ಹೆಚ್ಚಿನ ಜನ ಯೋಚಿಸುತ್ತಾರೆ. ಇದರ ಬಗ್ಗೆ ಯೋಚಿಸುವವರು ಬಹಳ ಕಮ್ಮಿ. ನಮ್ಮ ಭಾರತದ ಬಿಹಾರ್, ಪಂಜಾಬ್ ಮತ್ತು ತಮಿಳುನಾಡಿನ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಐ.ಎ.ಎಸ್,ಐ.ಪಿ.ಎಸ್ ಅಧಿಕಾರಿಗಳಾಗಿ ಇಡೀ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಕನ್ನಡದ ಮಕ್ಕಳೂ ಇದರಲ್ಲಿ ಮುಂದುವರೆಯಲು ಯೋಚಿಸಬಹುದು.

Wednesday 7 March 2012

ವಿಶ್ವ ಮಹಿಳಾ ದಿನ

ಮಾರ್ಚ್ ೮ ವಿಶ್ವ ಮಹಿಳಾ ದಿನ. ಸಮಸ್ತ ಮಹಿಳಾ ಕುಲಕೋಟಿಗೆ ನಮ್ಮ ಅಭಿನಂದನೆಗಳು. ನಿಮ್ಮ ಪ್ರೀತಿ, ವಾತ್ಸಲ್ಯ, ತ್ಯಾಗ, ದೈರ್ಯ, ಸ್ವಾಭಿಮಾನಗಳಿಗೆ ನಿಮಗೆ ನೀವೇ ಸಾಟಿ. ಅದಕ್ಕೆ ತಾನೆ ನಿಮ್ಮನ್ನು ಕುರಿತು ಹೇಳಿರುವುದು "ಎಲ್ಲರ ಮನೆಯಲ್ಲೂ ದೇವರು ಇರದ ಕಾರಣ ಪ್ರತಿಯೊಬ್ಬರ ಮನೆಯಲ್ಲೂ ತಾಯಂದಿರು ಇರುವುದು" ಎಂದು. ನಿಮ್ಮನ್ನು ಕೇವಲ ಒಂದು ದಿನಕ್ಕೆ ಸ್ತೀಮಿತಗೊಳಿಸದೆ ವರ್ಷದ ೩೬೫ ದಿನವೂ ನಿಮ್ಮದೇ. ಈ ದಿನೆ ಕೇವಲ ಒಂದು ಆಚರಣೆಗಾಗಿ ಮಾತ್ರ. ನೀವಿಲ್ಲದೆ ಯಾವ ಮನೆಯೂ ಬೆಳಗುವುದಿಲ್ಲ. ತಾಯಿಯಾಗಿ, ಅಕ್ಕನಾಗಿ, ತಂಗಿಗಾಗಿ, ಸ್ನೇಹಿತೆಯಾಗಿ, ಹೆಂಡತಿಯಾಗಿ, ಅತ್ತೆಯಾಗಿ, ಅಜ್ಜಿಯಾಗಿ ನಿಮ್ಮ ಪ್ರೀತಿ, ವಿಶ್ವಾಸಗಳನ್ನು ಗಳಿಸಿದವರು ನಾವೆಂಬುದು ನಮಗೆ ಹೆಮ್ಮೆ.
ಕೇವಲ ನಮ್ಮ ಮನೆಯ ಹೆಣ್ಣು ಮಕ್ಕಳು ಮಾತ್ರ ಸುಖ, ಸಂತೋಷ, ನೆಮ್ಮದಿಯಿಂದ ಇರಬೇಕು ಎಂಬ ಭಾವನೆ ಬಿಟ್ಟು, ಈ ಜಗತ್ತಿನ ಪ್ರೆತಿಯೊಂದು ಹೆಣ್ಣುಮಗುವೂ ಸುಖ, ಸಂತೋಷ ಮತ್ತು ನೆಮ್ಮದಿಯಿಂದ ಇರುವೆಂತೆ ಈ ಸಮಾಜ, ಪರಿಸರ ನಡೆದುಕೊಂಡರೆ ಸಾಕು. ಇದು ನಾವು ನಿಮಗೆ ನೀಡುವ ಗೌರವ ಅಂತ ನನ್ನ ಭಾವನೆ. ಬಾಳಿನ ಪ್ರತಿಯೊಂದು ಹಂತದಲ್ಲಿ ನಿಮ್ಮ ಕಾಣಿಕೆ ಇಲ್ಲದಿದ್ದರೆ ನಾವು ಎನಾಗುತ್ತಿದ್ದೆವೋ ಎಂದು ಊಹಿಸಿಕೊಳ್ಳುವುದೂ ಕಷ್ಟ. ಪ್ರತಿಯೊಂದು ಹೆಣ್ಣು ಕಲಿತರೆ ಶಾಲೆ ತೆರೆದಂತೆ ಎಂದು ದೊಡ್ಡವರು ಹೇಳಿರುವುದು ಎಷ್ಟು ಸತ್ಯ. ಹಾಗೆಯೆ ಒಲಿದರೆ ನಾರಿ, ಮುನಿದರೆ ಮಾರಿ, ಕೆರಳಿದರೆ ಹೆಮ್ಮಾರಿ  ಎಂಬುದೂ ಸರಿ. ಈ ಸಮಾಜದಲ್ಲಿ ಸ್ವಲ್ಪ ಮಾರಿ, ಹೆಮ್ಮಾರಿಯಾಗೂ ಕೆಲವು ಸಲ ನಡೆದುಕೊಳ್ಳಬೇಕಾಗುತ್ತದೆ. ತಾಯಿಯೇ ಮಗುವಿಗೆ ಮೊದಲ ಗುರು. ಪ್ರತಿಯೊಬ್ಬ ಮನುಷ್ಯನೊ ತನ್ನ ತಾಯಿಗೆ ಕೊಡುವ ಗೌರವ, ಪ್ರೀತಿಯನ್ನು ಬೇರಾರಿಗೂ ಕೊಡಲಾರ.
ಈ ಸಮಾಜವು ನಿಮ್ಮನ್ನು ಅನೇಕಬಾರಿ ಕೆಟ್ಟದಾಗೂ ನಡೆಸಿಕೊಂಡಿದೆ. ನಿಮ್ಮ ಮೇಲೆ ಅತ್ಯಾಚಾರ ಅನಾಚಾರಗಳಿಗೂ ಕೊನೆಯಿಲ್ಲ. ಇದು ಯಾಕೆ ಹೀಗಾಗುತ್ತಿದೆ. ಪ್ರತಿಯೊಬ್ಬ ಗಂಡಸೂ ಅವರ ಮನೆಯ ಹೆಣ್ಣು ಮಕ್ಕಳ ಮೇಲೆ ತೋರುವ ಕಾಳಜಿ ಬೇರೆ ಹೆಣ್ಣು ಮಕ್ಕಳ ಮೇಲೆ ಯಾಕೆ ತೋರುವುದಿಲ್ಲ?  ಇದಕ್ಕೆ ಸರಿಯಾದ ಶಿಕ್ಷಣದ ಕೊರತೆಯೆ? ಇಲ್ಲಾ ಸಿನಿಮಾ/ಟಿ.ವಿಗಳ ಹಾವಳಿಯೆ? ಇದನ್ನು ಪ್ರಜ್ನಾವಂತರು ತಿಳಿಹೇಳಬೇಕು. ನಿಮಗೆ ಮತ್ತೊಮ್ಮೆ ಶುಭಾಷಯಗಳು ಮತ್ತು ನಿಮಗೆ ನಮ್ಮ ಅನಂತ ನಮಸ್ಕಾರಗಳು.

 

Tuesday 6 March 2012

ಕನ್ನಡದ ಮೊದಲ 3D ಪತ್ರಿಕೆ

ಕನ್ನಡದ ಮುದ್ರಣ ಪ್ರಪಂಚದಲ್ಲಿ ೩ನೇ ಮಾರ್ಚ್ ೨೦೧೨ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನವೆಂದರೆ ಯಾರು ತಪ್ಪಾಗಿ ಭಾವಿಸಲಾರರೆಂದು ನನ್ನ ಅನಿಸಿಕೆ.  ಆ ದಿನ ಕನ್ನಡದ ರೊಪತಾರ ಸಿನಿ ಪತ್ರಿಕೆ ಕನ್ನಡದಲ್ಲಿ ಇದುವರೆವಿಗೂ ಯಾರೂ ಮಾಡಲಾರದಂತ ಸಾಹಸವನ್ನು ಬಹಳ ಯಶಸ್ವಿಯಾಗಿ ಸದ್ದಿಲ್ಲದೆ ಮಾಡಿ ಮುಗಿಸಿದೆ. ಅದು ಸುಲಭದ ಕೆಲಸವಲ್ಲ. ಅದಕ್ಕೆ ತುಂಬಾ ಶ್ರಮ ಅಗತ್ಯ ಮತ್ತು ಅದು ಬಹಳ ಹಣ ಬೇಡುವ ಕೆಲಸವೂ ಹೌದು. ಕನ್ನಡದ ಓದುಗರನ್ನು ನಂಬಿ ಇಂತಹ ಸಾಹಸ ಮಾಡುವುದು ಸುಲಭದ ಮಾತಲ್ಲ.  ಕನ್ನಡಿಗರು ಸ್ವಂತದ ಹಣ ಖರ್ಚು ಮಾಡಿ ಕನ್ನಡದ ಪತ್ರಿಕೆಗಳನ್ನು ಓದುವುದು ಕಡಿಮೆ ಎಂಬುದು ಎಲ್ಲರಿಗೂ ತಿಳಿದ ಸತ್ಯ. ಅಂತಹದರಲ್ಲಿ ಇವರ ಪ್ರಯತ್ನ ಸ್ವಾಗತಾರ್ಹ. ಅದನ್ನು ಅವರು ಕೇವಲ ೨೦ ರೂಪಾಯಿಗಳಲ್ಲಿ ಕನ್ನಡಿಗರಿಗೆ ಒದಗಿಸಿರುವುದು ಅವರ ಹೆಗ್ಗುರುತು. ನಾನು  ನನ್ನ ಫೇಸ್ ಬುಕ್ ನಲ್ಲಿ "ನಾನು ಈಗ ತಾನೆ 3D ರೂಪತಾರ ತೆಗೆದುಕೊಂಡೆ. ನಿಜವಾಗಲೂ ಸೂಪರ್. ಕನ್ನಡಿಗರ ಪ್ರತಿಯೊಬ್ಬರ ಮನೆಯಲ್ಲೂ ಇದು ಇರಬೇಕು. ಇಲ್ಲದಿದ್ದರೆ ಅವರು ನಿಜವಾಗಲೂ ಕನ್ನಡಿಗರಾಗಲು ಅರ್ಹರಲ್ಲ ಎಂದು ನನ್ನ ಭಾವನೆ. ನಾನು ಎಷ್ಟು ರೋಮಾಂಚನ ಆಗಿದ್ದೇನೆಂದರೆ ನನಗೆ ಬರೆಯಲು ಪದಗಳೇ ಸಿಗುತ್ತಿಲ್ಲ. ಕ್ಷಮಿಸಿ." ಎಂದು ಬರೆದು ಅಂಟಿಸಿದ್ದೆ. ಅದನ್ನು ಮೆಚ್ಚಿದವರು ಕೆಲವರಾದರೆ, ಕೆಲವರಿಗೆ ನಾನು ಬರೆದಿದ್ದು ಇಷ್ಟವಾಗಲಿಲ್ಲ.  ನಾನು ಬಳಸಿದ ಶಬ್ದ ಅತಿರೇಕವಾಯಿತು ಎಂದು ಅವರ ಅನಿಸಿಕೆ. ನಾನು ಬರೆದು ಅದನ್ನು ಫ಼ೇಸ್ ಬುಕ್ ಮೇಲೆ ಅಂಟಿಸಿದ ಮೇಲೆ ನನಗೂ ಹಾಗೆ ಆನ್ನಿಸಿತು. ನಾನು ಅದನ್ನು ಉದ್ದೇಶಪೂರ್ವಕವಾಗಿ ಬಳಸಿಲ್ಲ. ಅದರಿಂದ ಕೆಲವರ ಮನಸ್ಸಿಗೆ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ. ಕನ್ನಡದಲ್ಲಿ ಯಾರಾದರೂ ಇಂತಹ ಹೊಸ ಪ್ರಯತ್ನ ಮಾಡಿದರೆ ನಾವು ಕನ್ನಡಿಗರು ಅವರನ್ನು ಪ್ರೋತ್ಸಾಹಿಸಕಾದದ್ದು ನಮ್ಮ ಆದ್ಯ ಕರ್ತವ್ಯ ಎಂದು ನನ್ನ ಭಾವನೆ. ಇಲ್ಲದಿದ್ದರೆ ಅದರಿಂದ ಮೊದಲು ನಷ್ಟವಾಗುವುದು ಕನ್ನಡಿಗರಿಗೇ ಎಂದು ನಾನು ಬಲವಾಗಿ ನಂಬಿದ್ದೇನೆ. ಇಂತಹ ಪ್ರಯತ್ನ ಭಾರತ ದೇಶದಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ನಡೆದಿದೆ. ಅದರಲ್ಲಿ ಕನ್ನಡವೂ ಒಂದು ಎಂಬುದು ನಮ್ಮ ಕನ್ನಡಿಗರಿಗೆ ಹೆಮ್ಮೆ ತರುವ ವಿಷಯ. ಇದನ್ನು ಹೊರತಂದ ರೂಪತಾರ ಬಳಗಕ್ಕೆ ವಂದನೆಗಳು. ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ.

Saturday 3 March 2012

ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳ ಸಮಸ್ಯೆಗಳು:

ಕನ್ನಡ ಚಿತ್ರರಂಗದ ಮುಖ್ಯ ಸಮಸ್ಯೆ ಎಂದರೆ  ಕನ್ನಡ ಚಿತ್ರಗಳನ್ನು ಪ್ರದರ್ಶಿಸುವುದಕ್ಕೆ ಚಿತ್ರಮಂದಿರಗಳಿಲ್ಲ ಎಂಬ ಕೂಗು. ಇದು ಈಗ ಮಾತ್ರವೇ ಅಲ್ಲ. ಡಾ.ರಾಜ್ ಕುಮಾರ್ ಅವರ ಕಾಲದಿಂದಲೂ ಇದೇ ಸಮಸ್ಯೆ. ಈಗಲೂ ಇದೇ ಸಮಸ್ಯೆ. ಇಂದು ಕನ್ನಡ ಚಿತ್ರಕ್ಕೆ ನಮ್ಮ ರಾಜ್ಯದಲ್ಲಿ ನಾವೇ ಹೊಡೆದಾಡಬೇಕಾದ ಪರಿಸ್ಥಿತಿ ಬಂದಿರುವುದಕ್ಕೆ ಎನು ಕಾರಣ?  ಚಿತ್ರರಂಗದ ಒಳಹೊರಗು ಬಲ್ಲ ಚಿತ್ರರಂಗದ ಉದ್ಯಮದವರೇ ಇದಕ್ಕೆ ಕಾರಣ.  ಚಿತ್ರದ ನಿರ್ಮಾಕರಿಗೆ/ಹಂಚಿಕೆದಾರರಿಗೆ ಮತ್ತು ನಟರಿಗೆ ಕೆಂಪೇಗೌಡ ರಸ್ತೆಯಲ್ಲಿ ಚಿತ್ರಮಂದಿರ ಸಿಕ್ಕಿದರೆ ಸಾಕು, ಬೇರೆಲ್ಲಿಯೂ ಬೇಡ. ಬೆಂಗಳೂರು ಎಂದರೆ ಕೇವಲ ಕೆಂಪೇಗೌಡ ರಸ್ತೆ ಮಾತ್ರವೇ? ಇಲ್ಲಿ ಮಾತ್ರ ಕನ್ನಡ ಚಿತ್ರ ನಡೆಯತ್ತದೆಯೇ? ಬೇರೆಲ್ಲಿಯೂ ನಡೆಯವುದಿಲ್ಲವೇ? ಹಾಗಾಗಲು ಯಾರು ಕಾರಣ, ನೀವೆ ಅಲ್ಲವೇ. ಕರ್ನಾಟಕದಲ್ಲಿ ಇರುವುದು ಕೇವಲ ೬೫೦ ಚಿತ್ರಮಂದಿರಗಳು. ಇದರಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವ ಚಿತ್ರಮಂದಿರಗಳ ಸಂಖ್ಹೆ ಸುಮಾರು ೪೦೦ ಇರಬಹುದು.  ಉಳಿದ ೨೫೦  ಚಿತ್ರಮಂದಿರಗಳು ಪರಭಾಷಾ ಚಿತ್ರಗಳಿಗೆ ಮೀಸಲು. ಹೀಗಿರುವಾಗ ನಮ್ಮ ಕನ್ನಡ ಚಿತ್ರಗಳನ್ನು ೧೦೦೦ ಚಿತ್ರಮಂದಿರಗಳಲ್ಲಿ ಪ್ರದರ್ಶಿಸುವುದು ಯಾವಾಗ? ಮೊದಲು ಈಗಿರುವ ಕನ್ನಡ ಚಿತ್ರ ಪ್ರದರ್ಶಿಸುವ ಚಿತ್ರಮಂದಿರಗಳ ಸಂಖ್ಯೆಯನ್ನು ಕನಿಷ್ಟ ೬೦೦ಕ್ಕೆ ಹೆಚ್ಚು ಮಾಡಿಕೊಳ್ಳುವುದು. ಕರ್ನಾಟಕಾದ್ಯಂತ ಚಿಕ್ಕ ಚಿಕ್ಕ ಚಿತ್ರಮಂದಿರಗಳನ್ನು ಸ್ಥಾಪಿಸುವುದು. ಇದು ನಮ್ಮ ಕನ್ನಡ ಚಿತ್ರನಿರ್ಮಾಪಕರು ಮನಸ್ಸು ಮಾಡಿದರೆ ಕಷ್ಟವೇನಾಗಲಾರದು.
೮೦-೯೦ರ ಇಸವಿಯಲ್ಲಿ ಕನ್ನಡ ೫೦-೬೦, ತೆಲುಗು/ತಮಿಳು ಚಿತ್ರಗಳು ೨೦೦ ರಿಂದ ೩೦೦ ಮತ್ತು ಹಿಂದಿ ಚಿತ್ರಗಳು ೫೦೦ ಚಿತ್ರಮಂದಿರಗಳಲ್ಲಿ ಪ್ರದರ್ಶಿತವಾಗುತ್ತಿದ್ದವು.  ಈಗ ಕನ್ನಡ ೧೦೦-೧೫೦,ತೆಲುಗು ೨೦೦೦, ತಮಿಳು ೩೦೦೦್ ಮತ್ತು ಹಿಂದಿ ಚಿತ್ರಗಳು  ೫೦೦೦ ಚಿತ್ರಗಳು ವಿಶ್ವಾದಾದ್ಯಂತ ಪ್ರದರ್ಶಿತವಾಗುತ್ತಿವೆ. ಕೇವಲ ೨೦ವರ್ಷಗಳಲ್ಲಿ ಎಂತಹ ಬದಲಾವಣೆ. ಅವರಿಗೆ ಇದು ಹೇಗೆ ಸಾಧ್ಯವಾಯಿತು. ನಮಗೇಕೆ ಇದು ಸಾಧ್ಯವಾಗುತ್ತಿಲ್ಲ? ಮಾರುಕಟ್ಟೆಯನ್ನು ವಿಸ್ತರಿಸುವುದನ್ನು ನೀವುಗಳು ಕಲಿಯುವುದು ಯಾವಾಗ? ಇಂದು ಪ್ರಪಂಚವೇ ಒಂದು ಹಳ್ಳಿಯಂತೆ ಕಾಣುತ್ತಿದೆ. ಆದರೆ ನೀವುಗಳು ಮಾತ್ರ ಮಾರುಕಟ್ಟೆಯನ್ನು ವಿಸ್ತರಿಸುವುದನ್ನು ಬಿಟ್ಟು ಕನ್ನಡ ಚಿತ್ರಗಳನ್ನು ನೋಡುವವರೇ ಇಲ್ಲ ಎಂದು ಹಳೇ ಪುರಾಣವನ್ನೇ ಊದುವಿರಲ್ಲ. ಮಾರುಕಟ್ಟೆ ತಾನಾಗೆ ಹುಡುಕಿಕೊಂಡು ಬರುವುದಿಲ್ಲ. ಅದನ್ನು ನೀವು ಹುಡುಕಿಕೊಂಡು ಹೋಗಬೇಕು. ಬರೀ ಒಳ್ಳೆಯ ಚಿತ್ರಗಳನ್ನು ತೆಗೆಯುವುದು ಮಾತ್ರ ಸಾಕಾಗುವುದಿಲ್ಲ. ಅದನ್ನು ಸರಿಯಾಗಿ, ಸರಿಯಾದ ಸಮಯದಲ್ಲಿ ಎಲ್ಲಾ ಕಡೆ ಎಲ್ಲಾ ಜನರಿಗೆ ತಲುಪಿಸುವುದು ಬಹಳ ಮುಖ್ಯ   ಇಲ್ಲದಿದ್ದರೆ ನಮ್ಮ ಮಾರುಕಟ್ಟೆ ಯನ್ನು ಬೇರೆಯವರಿಗೆ ಬಿಟ್ಟು ಕೊಡಬೇಕಾಗಬಹುದು. ಹೇಗೆ ಪ್ರಚಾರ ಮಾಡಬೇಕೆಂಬುದನ್ನು ಯಾವುದಾದರೊ ಪ್ರಚಾರ ಮಾಡುವ ಸಂಸ್ಥೆಗೆ ವಹಿಸಿ. ಚಿತ್ರದ ವಿವರಗಳನ್ನು ಫ಼ೇಸ್ ಬುಕ್/ಟ್ವಿಟ್ಟರ್/ಯುಟ್ಯೂಬ್/ಮೊಬೈಲ್ ಮುಖಾಂತರ ಪ್ರಚಾರಪಡಿಸಿ. ಬಸ್ ಟಿಕೀಟುಗಳು/ರೈಲ್ವೆ ಟಿಕೀಟುಗಳು ಎಲ್ಲಾಕಡೆ ಆನ್ ಲೈನ್ ನಲ್ಲಿ ಸಿಗುವ ಹಾಗೆ ನಿಮ್ಮ ಚಿತ್ರದ ಟಿಕೀಟುಗಳು ಎಲ್ಲಾಕಡೆ ಸಿಗುವ ಹಾಗೆ ನೋಡಿಕೊಳ್ಳಿ. ಹೀಗೆ ಮಾಡುವ ಮುಖಾಂತರ ಚಿತ್ರಮಂದಿರಕ್ಕೆ ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸಬಹುದು.
ಬೆಂಗಳೂರಿನ ಎಲ್ಲಾ ಬಡಾವಣೆಯಲ್ಲೂ ಕನ್ನಡಿಗರಿದ್ದಾರೆ. ಈಗ ಬೆಂಗಳೂರು ಎಲ್ಲಾ ಕಡೆ ಬೆಳೆದಿದೆ. ಎಷ್ಟೊ ಕಡೆ ಚಿತ್ರಮಂದಿರಗಳೇ ಇಲ್ಲ. ಇದ್ದರೆ ಅಲ್ಲಿ  ಬೇರೆ ಭಾಷಾ ಚಿತ್ರಗಳು ನಡೆಯತ್ತವೆ. ಕನ್ನಡ ಚಿತ್ರ ಅಲ್ಲಿ ಪ್ರದರ್ಶಿತ ವಾಗುವುದಿಲ್ಲ. ಅಲ್ಲಿರುವ ಜನಗಳು ವಿಧಿ ಇಲ್ಲದೆ ಬೇರೆ ಚಿತ್ರಗಳನ್ನು ನೋಡುತ್ತಾರೆ. ನೀವು ಅಲ್ಲೆಲ್ಲಾ ಯಾಕೆ ಪ್ರದರ್ಶಿಸುವುದಿಲ್ಲ. ಅದೇ ರೀತಿ ಕನ್ನಡ ಚಿತ್ರಗಳನ್ನು ರಾಜ್ಯದ ಉದ್ದಗಲಕ್ಕೂ ಪ್ರದರ್ಶಿಸಿ. ಕರ್ನಾಟಕದ ಯಾವುದೇ ಹಳ್ಳಿ, ತಾಲ್ಲೂಕು, ಜಿಲ್ಲೆ ಬಿಡಬೇಡಿ. ಬೆಂಗಳೂರಿನಲ್ಲಿ ಬಿಡುಗಡೆಯಾದ ದಿನವೇ ಇಲ್ಲಿಯೂ ಬಿಡುಗಡೆಯಾಗಬೇಕು. ಕನ್ನಡ ಚಿತ್ರಗಳನ್ನು ತೆಲುಗು/ತಮಿಳು/ಮಲೆಯಾಳಂ/ಗುಜರಾತಿ/ಒರಿಯಾ/ಭೋಜಪುರಿ/ಬಂಗಾಲಿ/ಹಿಂದಿ ಹೀಗೆ ಬೇರೆ ಬೇರ ಭಾಷೆಗಳಿಗೆ ಡಬ್ ಮಾಡಿ ಆ ರಾಜ್ಯಗಳಲ್ಲಿ ಪ್ರಚರ್ಶಿಸಿ ಮಾರುಕಟ್ಟೆಯನ್ನು  ವಿಸ್ತರಿಸಬಹುದು. ಅಲ್ಲದೇ ಕನ್ನಡ ಚಿತ್ರಗಳನ್ನು ಹೊಸೂರು, ಕೃಷ್ಣಗಿರಿ, ಸೇಲಂ, ಮಧುರೈ,  ಚೆನ್ನೈ, ಅನಂತಪುರ, ಹಿಂದುಪುರ, ಹೈದರಾಬಾದ್, ವಿಜಯವಾಡ, ತಿರುಪತಿ, ಮುಂಬೈ, ಪುಣೆ, ಸೊಲ್ಲಾಪುರ, ಗೋವಾ, ಕಾಸರಗೋಡು, ಕೊಚ್ಚಿನ್ ಅಲ್ಲದೇ ವಿದೇಶಗಳಾದ ಅಮೇರಿಕ, ಬ್ರಿಟನ್, ಸಿಂಗಪುರ, ಮಲೇಶಿಯಾ, ಆಸ್ಟ್ರೆಲಿಯಾ, ನ್ಯೂಜಿಲೆಂಡ್, ದುಬೈ ,ಜಪಾನ್, ಜರ್ಮನಿ ಇಲ್ಲೆಲ್ಲಾ ಬಿಡುಗಡೆ ಮಾಡಬಹುದು. ಇಲ್ಲೆಲ್ಲಾ ಲಕ್ಷಗಟ್ಟಲೆ ಕನ್ನಡಿಗರಿದ್ದಾರೆ ನೆನಪಿಡಿ. ಪುನೀತ್ ಅವರ ಎಲ್ಲಾ ಚಿತ್ರಗಳು ಇಲ್ಲೆಲ್ಲಾ ಬಿಡುಗಡೆಯಾಗಿ ಯಶಸ್ವಿಯಾಗಿರುತ್ತದೆ. ಉಳಿದವರದು ಯಾಕಿಲ್ಲ? ಕೇವಲ ಕೆಲವೇ ಕೆಲವು ಕನ್ನಡ ಚಿತ್ರಗಳು ಹೊರ ರಾಜ್ಯ/ದೇಶಗಳಲ್ಲಿ ಬಿಡುಗಡೆ ಯಾದರೆ ಸಾಲದು. ಎಲ್ಲಾ ಕನ್ನಡ ಚಿತ್ರಗಳೂ ಬಿಡುಗಡೆಯಾಗಬೇಕು. ಅಗ ನಮ್ಮ ಮಾರುಕಟ್ಟೆ ವಿಸ್ತಾರವಾಗಿ ನಾವೂ ಸಹ ೧೦೦ ಕೋಟಿ ಬಂಡವಾಳ ಹೂಡಬಹುದು. ಚಿತ್ರಗಳನ್ನು ೨೦-೩೦ ಕೋಟಿ ಖರ್ಚು ಮಾಡಿ ತೆಗೆಯುತ್ತೀರ, ಆದರೆ ಅದರ ಪ್ರತಿಗಳು ಕೇವಲ ೨೦ ರಿಂದ ೩೦ರ ಮೇಲೆ ಹೋಗುವುದಿಲ್ಲ. ಚಿತ್ರಗಳ ಪ್ರತಿಗಳು ೨೦೦ ರಿಂದ ೩೦೦ರಷ್ಟಾದರೂ ಇರಬೇಕು ಮತ್ತು ಚಿತ್ರಗಳನ್ನು ಸ್ಯಾಟಲೈಟ್ ಮುಖಾಂತರ ಒಟ್ಟಿಗೇ ಎಲ್ಲಾ ಕೆಂದ್ರಗಳಲ್ಲೂ ಪ್ರದರ್ಶಿಸಬಹುದು.  ನಮ್ಮ ಚಿತ್ರಗಳು ಕನಿಷ್ಠ ೧೦೦೦ ಚಿತ್ರಮಃದಿರಗಳಲ್ಲಿ ಬಿಡುಗಡೆ ಕಾಣಬೇಕು. ಆಗ ನಾವು ಸಹ  ಯಶಸ್ವಿಯಾಗಬಹುದು. ಮುಂಗಾರು ಮಳೆ, ದುನಿಯಾ, ಜಾಕಿ, ಆಪ್ತಮಿತ್ರ, ಆಪ್ತರಕ್ಷಕ, ಈ ಚಿತ್ರಗಳು ಬೇರೆ ರಾಜ್ಯ/ದೇಶ ಗಳಲ್ಲಿ ಯಶಸ್ವಿಯಾದ ಕೆಲವು ಚಿತ್ರಗಳು. ಇವರಿಗೆ ಸಾಧ್ಯವಾಗಿದ್ದು ಬೇರೆಯವರಿಗೂ ಸಾಧ್ಯವಲ್ಲವೇ