Monday 30 April 2012

ನಮ್ಮ ಕನ್ನಡ ಸಾಫ್ಟ್ ವೇರ್ ಯುವ ಜನತೆ: ಭಾಗ-೧

ಸಾಮಾನ್ಯವಾಗಿ ದೊಡ್ಡವರಾದ ಮೇಲೆ ಬಹಳ ಜನ ಕೆಲಸ/ವ್ಯಾಪಾರ/ಮದುವೆ/ಮಕ್ಕಳು/ಮನೆ ಹೀಗೆ ಅಂತ ಕಳೆದುಹೋಗುತ್ತಾರೆ. ಆದರೆ ಕೆಲವು ಕನ್ನಡದ ಹುಡುಗರು ತಾವು ಮಾಡುವ ಕೆಲಸ, ಕಾರ್ಯಗಳ ಜೊತೆ ಕನ್ನಡವನ್ನು ಮರೆಯದೆ ಕನ್ನಡವನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದು ಬಹಳ ಹೆಮ್ಮೆಯ ವಿಷಯ. ಇತ್ತೀಚೆಗೆ ನಮ್ಮ  ಕನ್ನಡ ಕುವರರಾದ ಶ್ರೀ. ಓಂ ಶಿವಪ್ರಕಾಶ್ ಅವರು ಕನ್ನಡದಲ್ಲಿ ಮಾಹಿತಿ ತಂತ್ರಜ್ನಾನದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಇ-ಪುಸ್ತಕವನ್ನು ಹೊರತಂದಿದ್ದಾರೆ. ಶ್ರೀ. ವಿ.ಕೆ.ಅರವಿಂದ್ ಅವರು ಯೂನಿಕೋಡ್ ತಂತ್ರಾಂಶದಲ್ಲಿ ಇರುವ ಕೆಲವು ತಪ್ಪುಗಳನ್ನು ಸರಿಪಡಿಸಿ ಕನ್ನಡಿಗರಿಗೆ ಹೊಸ ಫಾಂಟ್ "ಗುಬ್ಬಿ" ಮತ್ತು "ನವಿಲು" ಕಾಣಿಕೆ ಕೊಟ್ಟಿರುವುದು ಬಹಳ ಸಂತೋಷ. ಗಣಕಯಂತ್ರಕ್ಕೆ ಕನ್ನಡದ ಮಾತನ್ನು ಕಳಿಸಿದ ಟಿ.ಸಿ.ಶ್ರೀಧರ್ ಅವರ ಕೊಡುಗೆ ಅತ್ಯಂತ ಮಹತ್ವದ್ದ್ದು. ಅವರು ದೃಷ್ಟಿ ವಿಕಲಚೇತನರಾಗಿದ್ದು ಅವರು ಕಣ್ಣಿಲ್ಲದವರಿಗೆ ಮತ್ತು ಕಣ್ಣಿದ್ದೂ ಕನ್ನಡ ಓದಲು ಬರೆಯಲು ಬಾರದವರಿಗಾಗಿ ಕನ್ನಡದಲ್ಲಿ ಒಂದು ತಂತ್ರಾಂಶವನ್ನು ಅಭಿವೃದ್ದಿಪಡಿಸಿದ್ದಾರೆ. ಇವರ ಕನ್ನಡ ಪ್ರೀತಿ ಬಹಳ ದೊಡ್ಡದು. ಇವರ ಬಗ್ಗೆ ಇನ್ನೂ ಹೆಚ್ಚು ವಿಚಾರ ತಿಳಿದುಕೊಳ್ಳಲು http://shreeworld.blogspot.com  ನೋಡಬಹುದು.

ಅಮೇರಿಕದಲ್ಲಿ ಕೆಲಸವನ್ನು ಮಾಡಿ ಕೈತುಂಬಾ ಹಣವನ್ನು ಎಣಿಸುತ್ತಿದ್ದ ಶ್ರೀ.ವಿ.ಲಕ್ಷ್ಮಿಕಾಂತ್ ಅವರು ಕೇವಲ ಕನ್ನಡದ ಅಭಿಮಾನದಿಂದ ಅಲ್ಲಿನ ಕೆಲಸವನ್ನು ಬಿಟ್ಟು ಬಂದು www.totalkannada.com ಅನ್ನು ಪ್ರಾರಂಭಿಸಿ ಕನ್ನಡ ಚಿತ್ರಗಳ/ಭಾವಗೀತೆ/ಜನಪದ ಗೀತೆ/ನಾಟಕಗಳ ಸಿ.ಡಿ, ಡಿ.ವಿ.ಡಿ., ಕಥೆ, ಕಾದಂಬರಿ, ಸಾಹಿತ್ಯದ ಪುಸ್ತಕಗಳು, ಕನ್ನಡದ ಬರಹಗಳುಳ್ಳ ಅಂಗಿ, ಕನ್ನಡದ ಬಾವುಟ,ಕನ್ನಡದ ಅಂಕಿಗಳುಳ್ಳ ಗೋಡೆ ಗಡಿಯಾರ ಹೀಗೆ ಕನ್ನಡಕ್ಕೆ ಸಂಭಂದಪಟ್ಟ ಸಕಲ ವಸ್ತುಗಳು ದೊರೆಯುವ ತಾಣವನ್ನಾಗಿ ಮಾಡಿರುವ ಶ್ರೀಯುತರ ಕನ್ನಡದ ಪ್ರೀತಿಯನ್ನು ಏನೆಂದು ಬಣ್ಣಿಸುವುದು. ಪದಗಳೇ ಅರ್ಥವನ್ನು ಕಳೆದುಕೊಳ್ಳುತ್ತವೆ. ಬರಹ ತಂತ್ರಾಂಶವನ್ನು ರೂಪಿಸಿದ ಶ್ರೀ.ಶೇಷಾದ್ರಿ ವಾಸು ಅವರನ್ನು ಹೇಗೆ ತಾನೆ ಮರೆಯುವುದು?

 ಈ ಯುವ ಪಡೆ ಕೇವಲ ಕನ್ನಡದ ಮೇಲಿನ ಪ್ರೀತಿಗಾಗಿ ಈ ಕೆಲಸಗಳನ್ನು ಮಾಡುತ್ತಿದ್ದಾರೆ.  ಈ ಹುಡುಗರಿಗೆ ಹಣ, ಕೀರ್ತಿ ಯಾವುದೂ ಮುಖ್ಯವಲ್ಲ. ಇವರಿಗೆ ಯಾರೂ ಅವರನ್ನು ಗಮನಿಸುವುದೂ ಸಹ ಬೇಕಿಲ್ಲ. ತಮ್ಮ ಪಾಡಿಗೆ ತಾವು ಕನ್ನಡವನ್ನು ಕಟ್ಟುವ  ಕೆಲಸವನ್ನು ಮಾಡುತ್ತಿರುತ್ತಾರೆ.  ಇಂತಹವರ ಯುವ ಸಂತತಿ ನೂರು, ಸಾವಿರ, ಲಕ್ಷವಾಗಲಿ, ಇವರ ಕನ್ನಡ ಸೇವೆ ನಿರಂತರವಾಗಲಿ.

ಮೊಬೈಲ್ ನಲ್ಲಿ/ ಅಂತರ್ಜಾಲದಲ್ಲಿ/ಗಣಕಯಂತ್ರದಲ್ಲಿ ಕನ್ನಡವನ್ನು ಹೇಗೆ ಬಳಸಬೇಕು, ಹೇಗಿದ್ದರೆ ಚೆನ್ನ ಎಂಬುದರ ಬಗ್ಗೆಯೇ ಇವರ ಚಿಂತೆ. ಇಂತಹವರಿಂದಲೇ ನಮಗೆ ಇಂದು ಯೂ ಟ್ಯೂಬ್, ಗೂಗಲ್, ವಿಕಿ ಪೀಡಿಯಾ ಮುಂತಾದ ಮಿಂಬಲೆ ತಾಣಗಳು ಕನ್ನಡದಲ್ಲಿ ಸಿಗುತ್ತಿರುವುದು. ಇವರುಗಳ ಕನ್ನಡದ ಅಭಿಮಾನ, ಪ್ರೀತಿ, ಶ್ರಮ ಯಾವುದೇ ಕಲಾವಿದ, ಕವಿ, ಸಾಹಿತಿಗಳಿಗಿಂತ ಕಡೆಮೆಯೇನಲ್ಲ. ಇವರುಗಳು ಯಾರೂ ಜನಪ್ರಿಯ ವ್ಯಕ್ತಿಗಳಲ್ಲ. ಇವರ ಹೆಸರು ಕೂಡಾ ತಕ್ಷಣಕ್ಕೆ ಜ್ನಾಪಕಕ್ಕೆ ಬರುವುದಿಲ್ಲ, ಆದರೆ ಇವರುಗಳು ಮಾಡುವ ಕೆಲಸಗಳು ಅತ್ಯದ್ಭುತ. ಫೇಸ್ ಬುಕ್ ನಲ್ಲಿ ಕನ್ನಡವನ್ನು ತರಲು ಹೊರಟಿರುವುದು ಇಂತಹದೇ ನಮ್ಮ ಕನ್ನಡದ ಯುವ ಪಡೆ.  ಅವರ ಪ್ರಯತ್ನಕ್ಕೆ ಯಶಸ್ಸು ಸಿಗಲಿ. (ಮಿಕ್ಕಿದ್ದು ನಾಳೆಗೆ)

Monday 23 April 2012

ಪ್ರಚಾರ ಕಾರ್ಯದಲ್ಲಿ ನಾವೇಕೆ ಹಿಂದೆ? (ಭಾಗ-೩)

ಕಳೆದ ಸಂಚಿಕೆಯಿಂದ:

ತಮಿಳಿಗೆ ಈಗಾಗಲೇ ಶ್ರೀಲಂಕಾ, ಸಿಂಗಪೂರ್, ಮಲೇಶಿಯಾ, ಕೊಲಾಲಾಂಪುರ್ ದೇಶಗಳಲ್ಲಿ ಅಧಿಕೃತ ಸ್ಥಾನಮಾನ ದೊರಕಿದೆ. ವಿಶ್ವಸಂಸ್ಥೆಯಲ್ಲಿ ತಮಿಳನ್ನು ಒಂದು ಅಧಿಕೃತ ಭಾಷೆಯನ್ನಾಗಿ ಮಾಡಲು ತಮಿಳರು ಸದ್ದಿಲ್ಲದೆ ಕಾರ್ಯದಲ್ಲಿ ತೊಡಗಿದ್ದಾರೆ. ನಾವು ಇನ್ನೂ ಕರ್ನಾಟಕದಲ್ಲಿ ಕನ್ನಡವನ್ನು ಸರಿಯಾಗಿ ಆಡಳಿತ ಭಾಷೆಯನ್ನಾಗಿ ಮಾಡಲು ಪರದಾಡುತ್ತಿದ್ದೇವೆ. ರಜನಿಕಾಂತ್ ಅವರ ಜನ್ಮದಿನವನ್ನು (೧೨ ಡೆಸೆಂಬರ್)  ಅಂತರಾಷ್ಟ್ರೀಯ ಸ್ಟೈಲ್ ದಿನವನ್ನಾಗಿ ಮಾಡಲು ಹೊರಟಿದ್ದಾರೆ.  ನೋಡಿ ಅವರು ಎಷ್ಟು ಮುಂದೆ ಯೋಚಿಸುತ್ತಾರೆ. ನಾವು ಎಷ್ಟು ಹಿಂದೆ ಉಳಿದಿದ್ದೇವೆ ಯೋಚಿಸಿ.

ಇದರಲ್ಲಿ ನಾವು ಎಲ್ಲಾ ತಪ್ಪುಗಳನ್ನು ಸರ್ಕಾರದ ಮೇಲೆ ಹಾಕಿ ಸುಮ್ಮನಾಗುತ್ತೇವೆ. ಇದರಲ್ಲಿ ನಮ್ಮ ಸಾರ್ವಜನಿಕರದೂ (ಕನ್ನಡಿಗರ) ತಪ್ಪೂ ಬಹಳಷ್ಟಿದೆ. ನಾವು ಎಷ್ಟು ಜನ ಮನೆಗೆ/ಕಛೇರಿಗೆ ಕನ್ನಡ ಪತ್ರಿಕೆ ತರಿಸುತ್ತೇವೆ. ಎಷ್ಟು ಜನ ತಿಂಗಳಿಗೆ ಎರಡು ಕನ್ನಡ ಚಿತ್ರವನ್ನು ನೋಡುತ್ತಾರೆ. ಎಷ್ಟು ಜನರ ಮನೆಯಲ್ಲಿ ನಮ್ಮ ಕವಿ/ಸಾಹಿತಿಗಳ ಕನಿಷ್ಟ ೨ ಪುಸ್ತಕಗಳಿವೆ. ಎಷ್ಟು ಜನರಿಗೆ ಸರಿಯಾಗಿ ಕನ್ನಡ ಓದಲು, ಬರೆಯಲು ಬರೆಯುತ್ತದೆ? ಎಷ್ಟು ಜನ ಮಕ್ಕಳಿಗೆ ಕನ್ನಡ ಒದಲು ಬರೆಯಲು ಕಲಿಸುತಿದ್ದಾರೆ? ಮೊನ್ನೆ ಉಗಾದಿ ಹಬ್ಬದ ವಿಶೇಷ ಸಂದರ್ಭಕ್ಕಾಗಿ ಸುಧಾ, ತರಂಗ, ವಿಜಯ ಕರ್ನಾಟಕ ಪತ್ರಿಕಗಳು ಒಂದು ವಿಶೇಷಾಂಕವೊಂದನ್ನು ಹೊರ ಹೊರತಂದಿದ್ದಾರೆ. ನಮ್ಮಲ್ಲಿ ಎಷ್ಟು ಜನ ಅದನ್ನು ತಂದು ಓದಿದ್ದಾರೆ? ಹಬ್ಬಕ್ಕೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುವ ನಾವು ೧೦೦/೧೫೦ ರೂಪಾಯಿಗಳನ್ನು ಖರ್ಚು ಮಾಡಲು ಹಿಂದೆ ಮುಂದೆ ನೋಡುತ್ತೇವೆ  ನಾವು ಏನನ್ನೂ ಮಾಡದೆ ಸುಮ್ಮನೆ ಕನ್ನಡ ಕನ್ನಡ ಅಂತ ಬಾಯಲ್ಲಿ ಹೇಳಿದರೆ ಕನ್ನಡ ಉಳಿಯುತ್ತದೆಯೇ? ಮೊದಲು ನಾವು ಸರಿಯಾದರೆ ಸಮಸ್ತವೂ ಸರಿಯಾಗುತ್ತದೆ. ನಮ್ಮ ಅಭಿಮಾನ ಕೇವಲ ಬಾಯಲ್ಲಿ ಇರವ ಬದಲು ಹೃದಯದಲ್ಲಿದ್ದರೆ ಮಾತ್ರ ಕನ್ನಡ ಉಳಿದೀತು ಬೆಳೆದೀತು.

ಈಗಿನ ಕಾಲದಲ್ಲಿ ಸರಿಯಾದ ಪ್ರಚಾರವಿಲ್ಲದೆ ಯಾವ ಕೆಲಸ ಕಾರ್ಯಗಳೂ ಆಗುವುದಿಲ್ಲ. ಇನ್ನಾದರೂ ಸರ್ಕಾರ, ಸಾರ್ವಜನಿಕರು ಇದರ ಬಗ್ಗೆ ಎಚ್ಚೆತ್ತುಕೊಂಡು ಸರಿಯಾದ ರೀತಿಯಲ್ಲಿ ನಮ್ಮ ಭಾಷೆ, ರಾಜ್ಯವನ್ನು ರಾಷ್ಟ್ರ ಮತ್ತು ಜಾಗತಿಕ ಮಟ್ಟದಲ್ಲಿ ಒಂದು ಬ್ರಾಂಡ್ ಆಗಿ ನಿಲ್ಲಿಸಲು ಪ್ರಯತ್ನ ಪಟ್ಟರೆ ಮಾತ್ರ ಕನ್ನಡ, ಕರ್ನಾಟಕ ಮುಂದಿನ ಪೀಳಿಗೆಗೆ ಉಳಿದೀತು. (ಮುಗಿಯಿತು) (ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.)

Sunday 22 April 2012

ಪ್ರಚಾರ ಕಾರ್ಯದಲ್ಲಿ ನಾವೇಕೆ ಹಿಂದೆ? (ಭಾಗ-೨)

ಕಳೆದ ಸಂಚಿಕೆಯಿಂದ:

ಕೇವಲ ಸರ್ಕಾರ ಮಾತ್ರವೇ ಅಲ್ಲ, ನಮ್ಮ ಚಿತ್ರರಂಗಕ್ಕೂ ಸಹ ತಮ್ಮ ತಮ್ಮ ಚಿತ್ರಗಳಿಗೆ ಸರಿಯಾದ ಪ್ರಚಾರ ಮಾಡುವುದು ಗೊತ್ತಿಲ್ಲ. ಅದನ್ನು ನಮ್ಮವರು ಹಿಂದಿ ಚಿತ್ರರಂಗವನ್ನು ನೋಡಿ ಕಲಿಯುವುದು ಬಹಳಷ್ಟಿದೆ. ನಮ್ಮ ಕೆಲವು ಚಿತ್ರಗಳು ಸರಿಯಾದ ಪ್ರಚಾರವಿಲ್ಲದೆ ಸೋತು ಸೊರಗಿರುವುದುಂಟು. ಉದಾ: ಮಾತಾಡ್ ಮಾತಾಡ್ ಮಲ್ಲಿಗೆ, ಮತ್ತೆ ಮುಂಗಾರು  ಮುಂತಾದ ಚಿತ್ರಗಳನ್ನು ನಾವು ಸರಿಯಾಗಿ ಪ್ರಚಾರ ಮಾಡಿದ್ದರೆ, ಆ ಚಿತ್ರಗಳನ್ನು ಇಡೀ ಭಾರತದಲ್ಲಿ ಬಿಡುಗಡೆ ಮಾಡಬಹುದಾಗಿತ್ತು.  ಅದರ ಕಥೆ, ಚಿತ್ರ ಕಥೆಯು ಇಡೀ ಭಾರತಕ್ಕೆ ಹೊಂದುವಂತಿತ್ತು.  ಡಾ.ರಾಜ್, ವಿಷ್ಣು, ನರಸಿಂಹರಾಜು, ಬಾಲಕೃಷ್ಣ, ಕಲ್ಪನ, ಜಯಂತಿ, ಭಾರತಿ, ವಜ್ರಮುನಿ ಮುಂತಾದ  ಕಲಾವಿದರನ್ನು ನಾವು ಕೇವಲ ಕರ್ನಾಟಕಕ್ಕೆ ಸೀಮಿತಗೊಳಿಸಿಕೊಂಡೆವು. ಅವರಿಗೆ ಇನ್ನೂ ದೊಡ್ಡ ಮಟ್ಟದ ಗೌರವ, ಮರ್ಯಾದೆ ಭಾರತದ ಮಟ್ಟದಲ್ಲಿ ಸಿಗಬೇಕಿತ್ತೆಂಬುದು ನನ್ನ ಸ್ವಂತ ಅಭಿಪ್ರಾಯ. ಒಂದು ಚಿತ್ರವನ್ನು  ಪ್ರಚಾರದಿಂದ ಗೆಲ್ಲಿಸಬಹುದೆಂದು ಮೈಲಾರಿ, ಸಾರಥಿ ಮುಂತಾದ ಚಿತ್ರಗಳು ತೋರಿಸಿಕೊಟ್ಟಿದೆ. ಶಿವಣ್ಣ, ದರ್ಶನ್ ಅವರು ಇಡೀ ಕರ್ನಾಟಕದಾದ್ಯಾಂತ ಪ್ರವಾಸ ಮಾಡಿ ಗೆಲುವನ್ನು ತಂದುಕೊಟ್ಟರು. (ಯಾವ ಚಿತ್ರವೂ ಕೇವಲ ಪ್ರಚಾರ ಮಾತ್ರ ದಿಂದಲೆ ಗೆಲ್ಲುವುದಿಲ್ಲ. ಅದು ಅದಕ್ಕೆ ಪೂರಕವಾಗಿರಬೇಕು) ಹೀಗೆ ಆಗಾಗ ಒಂದೆರೆಡು ಪ್ರಯತ್ನಗಳಾಗುತ್ತಿವೆ ಅಷ್ಟೇ. ನಾವು ಅದನ್ನು ಸಹ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತಗೊಳಿಸಿಬಿಟ್ಟಿದ್ದೇವೆ. ನಮ್ಮ ಚಿತ್ರಗಳು ರಾಷ್ಟ್ರಮಟ್ಟದಲ್ಲಿ ಯಶಸ್ಸು ಕಾಣುವುದು ಯಾವಾಗ?

ತಮಿಳು/ಹಿಂದಿ ಚಿತ್ರಗಳ ಬಗ್ಗೆ ಆಂಗ್ಲ ಭಾಷಾ ಟಿ.ವಿ.ವಾಹಿನಿಗಳು ಮಾತನಾಡುತ್ತಿವೆ. ನಮ್ಮ ಚಿತ್ರಗಳ ಬಗ್ಗೆ ಇಡೀ ರಾಷ್ಟ್ರ ಮಾತನಾಡುವುದು ಯಾವಾಗ? ಅವರಿಗೆ ಸಾಧ್ಯವಾಗುವುದು ನಮಗೇಕೆ ಸಾಧ್ಯವಾಗುವುದಿಲ್ಲ? ತೆಲುಗು/ತಮಿಳು/ಹಿಂದಿ ಭಾಷಾ ಚಿತ್ರಗಳು ಅವರ ರಾಜ್ಯಗಳಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿ ಪಕ್ಕದ ಕರ್ನಾಟಕಕ್ಕೆ ಬಂದು ಇಲ್ಲಿ ಕೂಡ ಯಶಸ್ವಿಯಾಗುತ್ತವೆ. ಅವರ ಚಿತ್ರಗಳು ೨೦೦೦/೩೦೦೦ ಚಿತ್ರಮಂದಿರಗಳಲ್ಲಿ ಎಲ್ಲಾ ರಾಜ್ಯ/ದೇಶಗಳಲ್ಲಿ ಬಿಡುಗಡೆ ಯಾದರೆ, ನಾವು ನಮ್ಮ ಕನ್ನಡ ಚಿತ್ರವನ್ನು ೧೦೦/೧೫೦ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಒದ್ದಾಡುತ್ತೇವೆ. ನಾವು ನಮ್ಮ ನೆರೆಹೊರೆಯ ಚಿತ್ರರಂಗದವರಿಂದ ಕಲಿಯುವುದು ಸಾಕಷ್ಟಿದೆ.  ನಮ್ಮಲ್ಲಿ ಪ್ರಚಾರದ ಕೊರತೆ ಬಹಳಷ್ಟು ಕಾಡುತ್ತಿದೆ.

ಬೆಂಗಳೂರಿನಲ್ಲಿ ಅನೇಕ ಐ,ಪಿ.ಎಲ್. ಸಿ.ಸಿ.ಎಲ್,  ಕ್ರಿಕೆಟ್ ಪಂದ್ಯಗಳು, ಹಾಕಿ ಪಂದ್ಯಗಳು ನಡೆಯುತ್ತಿರುತ್ತವೆ. ಅದನ್ನು ಖಾಸಿಗಿ ಟಿ.ವಿ. ವಾಹಿನಿಗಳು ಇಡೀ ವಿಶ್ವದಲ್ಲಿ ಪ್ರಸಾರಮಾಡುತ್ತಾರೆ. ಈ ಸಮಯ, ಸಂದರ್ಭವನ್ನು ಉಪಯೋಗಿಸಿಕೊಂಡು ನಾವು ನಮ್ಮ ಕನ್ನಡ ಚಿತ್ರಗಳು, ನಾಟಕ, ರಂಗಭೂಮಿ, ಜನಪದ, ಯಕ್ಷಗಾನ ಮುಂತಾದ ಕಲೆ ಮತ್ತು ಸಾಹಿತ್ಯದ ಬಗ್ಗೆ ಪ್ರಚಾರ ಮಾಡಿ, ಅದನ್ನು ಇಡೀ ವಿಶ್ವವೇ ಗಮನಿಸುವಂತೆ ಮಾಡಬಹುದು. ನಮ್ಮ ರಾಜ್ಯದಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಒಳ್ಳೆಯ ರಾಯಭಾರಿಯನ್ನು ನೇಮಿಸುವ ಮೂಲಕ ನಾವು ಅದನ್ನು ಇಡೀ ವಿಶ್ವಕ್ಕೆ ಮನವರಿಕೆ ಮಾಡಿಕೊಡಬಹುದು. ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಮೊದಲು ನಾವು ಮನಸ್ಸು ಮಾಡಬೇಕಷ್ಟೇ.

ಇನ್ನು ದಿನಪತ್ರಿಕೆಗಳ ವಿಚಾರಕ್ಕೆ ಬಂದರೆ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳಾದ ಕನ್ನಡ ಪ್ರಭ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಜಯ ವಾಣಿ ಪತ್ರಿಕೆಗಳು ಕೇವಲ ೫-೬ ನಗರಗಳಲ್ಲಿ ಪ್ರಕಟಣೆಯನ್ನು ಹೊಂದಿವೆ. ವಿಜಯ ಕರ್ನಾಟಕ ೧೦ ನಗರಗಳಲ್ಲಿ ಪ್ರಕಟಣೆಯನ್ನು ಹೊಂದಿದೆ. ಉದಯವಾಣಿ ಮಾತ್ರ ನಮ್ಮ ರಾಜ್ಯದ ಹೊರಗಡೆ ಮುಂಬೈನಲ್ಲಿ ಪ್ರಕಟಣೆಯನ್ನು ಹೊಂದಿವೆ. ತೆಲುಗು/ತಮಿಳು/ಮಲೆಯಾಳಂ/ಹಿಂದಿ ಪತ್ರಿಕೆಗಳು ೨೦ಕ್ಕಿಂತಲೂ ಹೆಚ್ಚು ನಗರಗಳಲ್ಲಿ ದೇಶದ ಎಲ್ಲಾ ಮಹಾನಗರಗಳಲ್ಲೂ ಪ್ರಕಟಸುತ್ತದೆ. ಮೊದಲು ನಾವು ನಮ್ಮ ರಾಜ್ಯ, ಭಾಷೆಯ ಬಗ್ಗೆ ಕೇವಲ ಬಾಯಿಮಾತಿನ ಅಭಿಮಾನ ಬಿಟ್ಟು ಹೃದಯದಲ್ಲಿ ಅಭಿಮಾನ ಬೆಳೆಸಿಕೊಂಡರೆ ಏನನ್ನಾದರೂ ಸಾದಿಸಬಹುದು. ನಮ್ಮನ್ನು ನಾವು ಜಾಗತಿಕ ಮಟ್ಟದಲ್ಲಿ ತೆರೆದುಕೊಳ್ಳಬೇಕು.  ಇದನ್ನು ಪ್ರಚಾರದ ಮೂಲಕ ಸಾಧಿಸಬೇಕು.  (ಮಿಕ್ಕಿದ್ದು ನಾಳೆಗೆ)

Saturday 21 April 2012

ಪ್ರಚಾರ ಕಾರ್ಯದಲ್ಲಿ ನಾವೇಕೆ ಹಿಂದೆ? (ಭಾಗ-೧)

ಕನ್ನಡ ಭಾಷೆಗೆ ರಾಷ್ಟ್ರೀಯ ಹಾಗೂ ಜಾಗತಿಕ ಮನ್ನಣೆ" ಎಂಬ ಲೇಖನ (ವಿ.ಕ ೧೮/೩/೧೨) ಬರೆದ ಶ್ರೀ ಪುರುಷೋತ್ತಮ ಬಿಳಿಮಲೆ ಅವರಿಗೆ ಧನ್ಯವಾದಗಳು. ಶ್ರೀಯುತರು ಈ ಲೇಖನದಲ್ಲಿ ನಾವುಗಳು ಕನ್ನಡ ಭಾಷೆಗೆ ರಾಷ್ಟ್ರೀಯ ಹಾಗೂ ಜಾಗತಿಕ ಮನ್ನಣೆ ಕೊಡಿಸುವುದರಲ್ಲಿ ನಾವು ಎಷ್ಟು ಹಿಂದೆ ಬಿದ್ದೀದ್ದೇವೆಂದು ಮತ್ತು ಇತರ ರಾಜ್ಯಗಳವರು ಎಷ್ಟು ಮುಂದುವರೆದಿರುವರೆಂದು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಪ್ರತಿಯೊಬ್ಬ ಕನ್ನಡಿಗನೂ ಈ ಲೇಖನವನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ನಮಗೆ ಜ್ನಾನಪೀಠ ತಂದುಕೊಟ್ಟ ಕವಿ/ಸಾಹಿತಿಗಳಿಗೆ ಕರ್ನಾಟಕ ಬಿಟ್ಟು ಬೇರೆ ಕಡೆ ಪ್ರಚಾರವೇ ಸಿಗಲಿಲ್ಲ. ನಾವು ಅವರುಗಳನ್ನು ಆನೆ ಮೇಲೆ ಕೂಡಿಸಿ ರಾಜ ಬೀದಿಗಳಲ್ಲಿ ಮೆರವಣಿಗೆ ಮಾಡಿ ಸಾವಿರಾರು ಜನರ ಮುಂದೆ ಸನ್ಮಾನ ಮಾಡಬೇಕಿತ್ತು, ಈ ತರಹದ ಒಂದು ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಳ್ಳಬೇಕಾಗಿತ್ತು. ಅದನ್ನು ದೇಶದ ಎಲ್ಲಾ ಭಾಷೆಯ ಜನಪ್ರಿಯ ದಿನಪತ್ರಿಕೆಗಳು ಮತ್ತು ಟಿ.ವಿ.ವಾಹಿನಿಗಳಲ್ಲಿ ಪ್ರಚಾರಮಾಡಿದ್ದರೆ ಕರ್ನಾಟಕದಲ್ಲಿ ಕವಿ/ಸಾಹಿತಿಗಳಿಗೆ ಎಷ್ಟು ರಾಜಮರ್ಯಾದೆ ಇದೆ ಎಂದು ಸಮಸ್ತ ಭಾರತೀಯರು ಮೂಗಿನ ಮೇಲೆ ಬೆರಳಿಟ್ಟುಕೊಂಡು  ಮಾತನಾಡಿಕೊಳ್ಳುತ್ತಿದ್ದರು. ಅವರು ಮತ್ತು ಅವರ ಪತ್ನಿ ಜೀವಂತವಿರುವವರಿಗೂ ಗೌರವ ಧನವೆಂದು ಸುಮಾರು ೨೫,೦೦೦ ರೂಪಾಯಿಗಳನ್ನು ಪ್ರತಿ ತಿಂಗಳೂ ಕೊಟ್ಟರೆ, ನಮ್ಮ ಸರ್ಕಾರಕ್ಕೆ ಏನೂ ನಷ್ಟವಾಗುವುದಿಲ್ಲ. ನಮ್ಮ ಕವಿ/ಸಾಹಿತಿಗಳ ಕೃತಿಗಳನ್ನು ಎಲ್ಲಾ ಭಾರತೀಯ ಭಾಷೆಗಳ ಜೊತೆಜೊತೆಗೆ ಆಂಗ್ಲ ಭಾಷೆಯಲ್ಲಿ ತರ್ಜುಮೆ ಮಾಡಿದ್ದರೆ ನಮಗೆ ಇನ್ನೂ ೪-೫ ಜ್ನಾನಪೀಠ ಪ್ರಶಸ್ತಿಗಳು ಬರುತ್ತಿತ್ತೇನೋ? (ಅಡಿಗರು,  ತೇಜಸ್ವಿಯವರು, ಡಿ.ವಿ.ಗುಂಡಪ್ಪನವರು, ಪು.ತಿ.ನರಸಿಂಹಸ್ವಾಮಿಯವರು ಮತ್ತು ಬೈರಪ್ಪನವರಿಗೆ ಈಗಾಗಲೆ ಒಲಿದು ಬರಬೇಕಾಗಿತ್ತು.)  ನಮಗೆ ಮೂರಾದರೂ ಸಾಹಿತ್ಯ ನೊಬೆಲ್ ಪ್ರಶಸ್ತಿಗಳು ಬರಬೇಕಾಗಿತ್ತೆಂದು ಹೇಳುವವರಿದ್ದಾರೆ (ಕುವೆಂಪು ಅವರಿಗೆ, ಮಾಸ್ತಿ ಯವರಿಗೆ ಮತ್ತು ಬೇಂದ್ರೆ ಯವರಿಗೆ.) ಇದು ನಾವು ಸರಿಯಾಗಿ ಪ್ರಚಾರ ಮಾಡದೇ ನಾವೇ ಮಾಡಿಕೊಂಡ ತಪ್ಪು.

ನಮ್ಮ ಕವಿ/ಸಾಹಿತಿಗಳ ಪುಸ್ತಕಗಳು ಎಲ್ಲಾ ಕಡೆಯೂ ಸಿಗುವುದಿಲ್ಲ. ಬೆಂಗಳೂರು, ಮೈಸೂರು, ಮಂಗಳೂರು ಮುಂತಾದ ಕೆಲವು ದೊಡ್ಡ ನಗರಗಳನ್ನು ಹೊರತುಪಡಿಸಿದರೆ ಬೇರೆ ಕಡೆ ನಮ್ಮ ಕವಿ/ಸಾಹಿತಿಗಳ ಪುಸ್ತಕಗಳು ಸರಿಯಾಗಿ ದೊರೆಯುವುದೇ ಇಲ್ಲ.  ಪುಸ್ತಕಗಳು ಎಲ್ಲಾ ದಿನಪತ್ರಿಕೆಗಳನ್ನು ಮಾರುವ ಅಂಗಡಿ, ಕ್ಯಾಸೆಟ್, ಸಿಡಿ. ಮಾರುವ ಅಂಗಡಿಗಳಲ್ಲಿ, ಪೆಟ್ರೋಲ್ ಬಂಕ್ ಗಳಲ್ಲಿ ದೊರಕುವಂತಾಗಬೇಕು. ಆ ಪುಸ್ತಕಗಳ ಮಾರಾಟದ ಹಕ್ಕನ್ನು ತೆಗೆದುಕೊಂಡವರು, ಪ್ರಕಾಶಕರು ಇದರ ಬಗ್ಗೆ ಯೋಚಿಸಬೇಕು. ಹೀಗೆ ಪ್ರತಿಯೊಂದರಲ್ಲೂ ಪ್ರಚಾರದೆ ಕೊರತೆ. ನಾವುಗಳು ಪ್ರಚಾರದಲ್ಲಿ ಬಹಳ ಹಿಂದುಳಿದಿದ್ದೇವೆ.

ನಮ್ಮ ರಾಜ್ಯ, ಭಾಷೆ ಮತ್ತು ಸಂಸ್ಕೃತಿಯಯನ್ನು ನಮಗೆ ಸರಿಯಾಗಿ ಪ್ರಚಾರ ಮಾಡುವುದಕ್ಕೇ ಬರುವುದಿಲ್ಲ ಮತ್ತು ಇದರ ಮಹತ್ವವೂ ನಮಗೆ ಸರಿಯಾಗಿ ತಿಳಿದಿಲ್ಲ. ನಮಗೇನು ಕೊರತೆ ಇದೆ. ಅದನ್ನು ಹೇಗೆ ಸರಿಪಡಿಸಿಕೊಳ್ಳುವುದು ಎಂಬ ಚಿಂತನೆಯೇ ಇಲ್ಲ. ನಾವು ಇದನ್ನು ನಮ್ಮ ಅಕ್ಕಪಕ್ಕದ ರಾಜ್ಯದವರನ್ನು ನೋಡಿಕೊಂಡು ಕಲಿಯಬೇಕಾಗಿದೆ. ತಮಿಳು ನಾಡು, ಕೇರಳ, ಪಕ್ಷಿಮ ಬಂಗಾಲ, ಬಿಹಾರ ಮುಂತಾದ ರಾಜ್ಯಗಳು ಕೇಂದ್ರದ ಮೇಲೆ ಒತ್ತಡ ಹೇರಿ ಗೊಬ್ಬರ, ರೈಲ್ವೆ, ವಿದ್ಯುತ್ ಮುಂತಾದ ಸಕಲ ಸೌಲಭ್ಯಗಳನ್ನು ತಮ್ಮ ರಾಜ್ಯಗಳಿಗೆ ತಂದುಕೊಂಡರೆ, ನಾವು ನಮಗೆ ಅನ್ಯಾಯವಾಯಿತು ಎಂದು ಬೊಬ್ಬೆ ಹೊಡೆದರೆ ಅದನ್ನು ಕೇಳುವವರು ಯಾರು? ಬೇರೆ ರಾಜ್ಯದವರಿಗೆ ಕೇಂದ್ರದಿಂದ ಅನ್ಯಾಯವಾದಗಲೆಲ್ಲಾ, ಆ ರಾಜ್ಯದ ಲೋಕಸಭಾ ಸದಸ್ಯರೆಲ್ಲರೂ (ಯಾವುದೇ ಪಕ್ಷವಿರಲಿ) ಒಗ್ಗಾಟ್ಟಾಗಿ ಅದರ ವಿರುದ್ದ ಹೋರಾಡುತ್ತಾರೆ. ಆದರೆ ನಮ್ಮವರು ಬರೀ ರಾಜಕೀಯ ಮಾಡಿ ಆಗುವ ಕೆಲಸವನ್ನೂ ತಪ್ಪಿಸುವುದರಲ್ಲಿ ನಿಸ್ಸೀಮರು. ಬಿ.ಎಸ್. ಎಡೆಯೂರಪ್ಪನವರು ಕೇಂದ್ರದಲ್ಲಿ ನಮ್ಮ ರಾಜ್ಯದ ಒಬ್ಬ ಪ್ರತಿನಿಧಿಯನ್ನು ಕೇವಲ ಈ ಕೆಲಸಕ್ಕಾಗಿ ನೇಮಿಸಿದ್ದರು. ಆದರೆ ಆ ಮಹಾನುಭಾವರು ಈ ಕೆಲಸ ಮಾಡುವುದನ್ನು ಬಿಟ್ಟು ಬರೀ ರಾಜಕೀಯದಲ್ಲೆ ಸಮಯವನ್ನು ವ್ಯರ್ಥ ಮಾಡಿಬಿಟ್ಟರು.  (ಮಿಕ್ಕಿದ್ದು ನಾಳೆಗೆ)

Thursday 19 April 2012

ಹೊರ ರಾಜ್ಯಗಳಲ್ಲಿ ಕನ್ನಡ ಚಿತ್ರಗಳು:

ಕನ್ನಡದ ಅಭಿಮಾನಿಗಳಿಗೆ ನಮ್ಮ ಕನ್ನಡ ಚಿತ್ರಗಳು ಬೇರೆ ರಾಜ್ಯಗಳಲ್ಲಿ ಪ್ರದರ್ಶಿತವಾಗುವುದು ಬಹಳ ಖುಷಿಯ ಸಂಗತಿ. ಆದರೆ ಆ ಭಾಗ್ಯವು ಇನ್ನೂ ಸಿಕ್ಕಿಲ್ಲ. ನಮಗೆ ಮಾರುಕಟ್ಟೆಯನ್ನು ವಿಸ್ತರಿಸುವ ಬಗ್ಗೆ ಸರಿಯಾದ ತಿಳುವಳಿಕೆಯೇ ಇಲ್ಲ. ಒಂದೆರೆಡು ಬೆರೆಳೆಣಿಕೆಯ ಪ್ರಯತ್ನಗಳು ಆಗಿರುವುದು ಬಿಟ್ಟರೆ ಅದರಲ್ಲಿ ಸಾಕಷ್ಟು ಪ್ರಯೋಜನವಾಗಿಲ್ಲ ಎಂದೇ ಹೇಳಬೇಕು. ಚಿತ್ರರಂಗವೂ ಇದರ ಬಗ್ಗೆ ಸರಿಯಾದ ಯೋಚನೆ ಮತ್ತು ಯೋಜನೆಯನ್ನು ಹಾಕಿಕೊಂಡಿಲ್ಲ. ಇತ್ತೀಚೆಗೆ ನಮ್ಮ ನಟಿ ತಾರಾ ಅವರು ಕರ್ನಾಟಕದ ಚಿತ್ರ ಅಕೆಡೆಮಿಗೆ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿರುವುದು ನಮಗೆಲ್ಲಾ ತಿಳಿದ ವಿಷಯ. ತಾರಾ ಅವರು ನಮ್ಮ ಕನ್ನಡ ಚಿತ್ರಗಳನ್ನು ಹೊರರಾಜ್ಯಗಳಲ್ಲಿ ಪ್ರದರ್ಶಿಸುವ ಚಿಂತನೆಯನ್ನು ಮಾಡಲಾಗುವುದು ಎಂದು ತಿಳಿಸಿರುತ್ತಾರೆ. ಈ ರೀತಿ ಚಿಂತನೆ ಮಾಡುವುದಕ್ಕಾಗಿ ನಮಗೆ ೭೮ ವರ್ಷಗಳು ಬೇಕಾಯಿತು. ಅದು ಕಾರ್ಯ ರೂಪಕ್ಕೆ ಬರಲು ಇನ್ನು ಎಷ್ಟು ವರ್ಷಗಳು ಬೇಕಾಗಬಹುದೋ?

 ಇಷ್ಟುವರ್ಷ ನಮ್ಮಚಿತ್ರರಂಗದ ಹಿರಿತಲೆಗಳು ಏನು ಮಾಡಿದರು? ಅವರಾರಿಗೂ ನಮ್ಮ ಕನ್ನಡ  ಚಿತ್ರಗಳನ್ನು ಹೊರ ರಾಜ್ಯಗಳಲ್ಲಿ ತೆರೆ ಕಾಣಿಸುವ ಮನಸ್ಸಾಗಲಿಲ್ಲವೇ? ಅಥವಾ ಧೈರ್ಯ ಸಾಲಲಿಲ್ಲವೇ? ತಾವಾಯಿತು ತಮ್ಮ ಕೆಲಸವಾಯಿತು ಅಂತ ಅವರೆಲ್ಲಾ ಸುಮ್ಮನಿದ್ದುಬಿಟ್ಟರಾ? ತಾರಾ ಅವರು ಚಿತ್ರರಂಗವನ್ನು ಎಚ್ಚರಿಸಿದಕ್ಕಾಗಿ ಅವರಿಗೆ ಅಭಿನಂದನೆಗಳು. ಸಧ್ಯ ಚಿತ್ರರಂಗದವರಿಗೆ  ಈಗಲಾದರೂ ಎಚ್ಚರಿಕೆ ಆಯಿತಲ್ಲಾ, ಚಿತ್ರರಂಗದವರಿಗೆ ಎಂಥಾ ಗಾಡ ನಿದ್ರೆ? ಕುಂಭಕರ್ಣನೂ ಅವರನ್ನು ನೋಡಿ ನಾಚಿಕೊಳ್ಳಬೇಕು.

ಪರಭಾಷಾ ಚಿತ್ರಗಳು ನಮ್ಮ ರಾಜ್ಯದಲ್ಲಿ ಹೇಗೆ ಬೇರು ಬಿಟ್ಟಿದೆ ನೋಡಿ. ನಮ್ಮ ಚಿತ್ರಳಿಗೆ ನಮ್ಮ ರಾಜ್ಯದಲ್ಲಿ ಚಿತ್ರ ಮಂದಿರಗಳ ಕೊರತೆ.  ನಮಗೆ ನಮ್ಮ ರಾಜ್ಯದಲ್ಲೇ, ನಮ್ಮಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳನ್ನು ಉಳಿಸಿಕೊಳ್ಳುವುದು ಗೊತ್ತಿಲ್ಲ. ಹೀಗಾಗಿ ನಮ್ಮ ರಾಜ್ಯದಲ್ಲಿ ಪರಭಾಷಾ ಚಿತ್ರಗಳದ್ದೇ ಕಾರುಭಾರು. ನಮ್ಮ ರಾಜ್ಯದಲ್ಲಿ ಈಗ ತೆಲುಗು/ತಮಿಳು/ಮಲೆಯಾಳಂ/ಹಿಂದಿ/ಬೆಂಗಾಲಿ/ಮರಾಠಿ/ಆಂಗ್ಲ ಭಾಷಾ ಚಿತ್ರಗಳ ಜೊತೆ ಇತ್ತೀಚೆಗೆ ಭೋಜಪುರಿ ಭಾಷೆಯ ಚಿತ್ರಗಳೂ ತೆರೆಕಾಣಲು ಪ್ರಯತ್ನಿಸುತ್ತಿವೆ. ಪ್ರಪಂಚದ ಯಾವ ರಾಜ್ಯ/ದೇಶದಲ್ಲೂ ಇಷ್ಟು ಭಾಷೆಯ ಚಿತ್ರಗಳು ತೆರೆಕಾಣುವುದಿಲ್ಲವೆನೋ? ನಮ್ಮ ಚಿತ್ರರಂಗವು ಈಗಲಾದಾರೂ ಎಚ್ಚೆತ್ತುಕೊಂಡು ಕನ್ನಡ ಚಿತ್ರಗಳಿಗೆ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳದಿದ್ದರೆ ನಮ್ಮ ಚಿತ್ರಗಳು ಇನ್ನು ಕೇವಲ ೨೫-೩೦ ವರ್ಷಗಳಲ್ಲಿ ಪರಭಾಷಾ ಚಿತ್ರಗಳ ಮಧ್ಯೆ ಕಳೆದುಹೋಗುವಂತಾಗುತ್ತದೆನೋ ಎಂದು ಭಯವಾಗುತ್ತದೆ.

Sunday 15 April 2012

"ಯಾರಿಗೇಳೋಣಾ ನಮ್ಮ ಪ್ರಾಬ್ಲಮ್ಮು, ಕನ್ನಡ ಚಿತ್ರಗಳ ನೋವಿಗೆ ಇಲ್ಲಾ ಮುಲಾಮು"

ನಮ್ಮ ಚಿತ್ರಗಳನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವುದಕ್ಕೆ ತೊಂದರೆ ಮಾಡುತ್ತಿದ್ದಾರೆ, ನಾವು ಕೇಳಿದಷ್ಟು ಚಿತ್ರಮಂದಿರಗಳನ್ನು ಕೊಡುತ್ತಿಲ್ಲ ಎಂದು "ಕೈಟ್ಸ್" ಹಿಂದಿ ಚಿತ್ರದ  ವಿತರಕರು ಇತ್ತೀಚೆಗೆ ಸಿ.ಸಿ.ಐ. ಸಂಸ್ಥೆಗೆ ಮೊರೆ ಹೋಗಿದ್ದರು. ಸಿ.ಸಿ.ಐ ಸಂಸ್ಥೆಯು ಕರ್ನಾಟಕ ಚಲನಚಿತ್ರ ಮಂಡಲಿಗೆ "ಹೀಗೆಲ್ಲಾ ಹೇಳುವ ಅಧಿಕಾರ ನಿಮಗಿಲ್ಲ, ಜತೆಗೆ, ಯಾರು ಬೇಕಿದ್ದರೂ ಎಷ್ಟು ಚಿತ್ರಮಂದಿರಗಳಲ್ಲಿ ಬೇಕಿದ್ದರೂ ಚಿತ್ರಗಳನ್ನು ಪ್ರದರ್ಶಿಸಬಹುದು" ಎಂದು ಎಚ್ಚರಿಕೆ ನೀಡುವ ಜೊತೆಗೆ ೧೬.೮೨ ಲಕ್ಷವನ್ನು ದಂಡದ ರೂಪದಲ್ಲಿ ಕೊಡಬೇಕೆಂದು ತಾಕೀತು ಮಾಡಿದೆ. (ಸಿ.ಸಿ.ಐ-ಇದು ಕೇಂದ್ರ ಸರಕಾರದ ಅಧೀನದಲ್ಲಿರುವ ಸಂಸ್ಥೆ. ಭಾರತದಲ್ಲಿ ಯಾರು ಬೇಕಾದರೂ ವ್ಯಾಪಾರ, ವಹಿವಾಟು ನಡೆಸಬಹುದು. ಇದಕ್ಕೆ ಅಡ್ಡಿ ಉಂಟು ಮಾಡುವ ಕೆಲಸಕ್ಕೆ ಯಾರೇ ಮುಂದಾದರೂ ಈ ಸಂಸ್ಥೆ  ಆ ಪ್ರಕರಣಗಳನ್ನು  ದಾಖಲಿಸಿಕೊಂಡು ತನಿಖೆ ನಡೆಸಿ ದಂಡ ನೀಡುವ ಅಧಿಕಾರವಿದೆ)

ಇದಕ್ಕೆ ನಮ್ಮ ಸರ್ಕಾರ, ವಾಣಿಜ್ಯ ಮಂಡಲಿ, ಹಂಚಿಕೆದಾರರು, ನಿರ್ಮಾಪಕರು ಎಲ್ಲರೂ ಕಾರಣರು. ಇವರಲ್ಲಿ ಯಾರಿಗೂ ಒಗ್ಗಟ್ಟಿಲ್ಲ. ಇವರಿಗೆ ಮುಂದಿನ ಗುರಿ, ಆಲೋಚನೆ ಯಾರಿಗೂ ಇಲ್ಲ. ಈ ತರಹದ ಕಷ್ಟಗಳು ಬಂದಾಗ ಏನು ಮಾಡಬೇಕು ಎಂಬುದು ಯಾರಿಗೂ ತಿಳಿದಿಲ್ಲ. ಇವರಿವರೇ ಒಬ್ಬರಿಗೊಬ್ಬರು ಕಚ್ಚಾಡಿಕೊಂಡು ಜಗಳವಾಡುತ್ತಿದ್ದರೆ ಇಬ್ಬರ ಜಗಳ ಮೂರನೆಯವನಿಗೆ ಲಾಭವೆನ್ನುವಂತೆ ಪರಭಾಷಾಚಿತ್ರರಂಗದವರು ಇಲ್ಲಿ ಮೆರೆಯುವುದಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ನಾವು ಕೇಳಿದಷ್ಟು ಚಿತ್ರಮಂದಿರ ಕೊಡಿ, ಇಲ್ಲದಿದ್ದರೆ ದಂಡ ಕೊಡಿ. ಹೇಗಿದೆ ನೋಡಿ. ಇವರ ನ್ಯಾಯ. ಒಟ್ಟಿನಲ್ಲಿ ಪ್ರಾದೇಶಿಕ ಭಾಷೆಗಳಿಗೆ (ಕನ್ನಡಕ್ಕೆ ಅನ್ಯಾಯವಾಗುವುದೇ ಜಾಸ್ತಿ) ಅನ್ಯಾಯ ಮಾಡುವುದೇ ಕೆಂದ್ರದ ಗುರಿ ಅಂತ ಕಾಣಿಸುತ್ತದೆ.ನಮ್ಮ ಕನ್ನಡ ಚಿತ್ರಗಳಿಗೆ ನಮ್ಮ ರಾಜ್ಯದಲ್ಲಿ ಸರಿಯಾಗಿ ಚಿತ್ರಮಂದಿರಗಳು ಸಿಗುತ್ತಿಲ್ಲ ಎಂಬ ಕೂಗು ಒಂದು ಕಡೆ ಇದ್ದರೆ, ಈಗ ಇವರ ತಕರಾರು. ನಮಗೆ ಸಖತ್ ನಿದ್ದೆ. "ಯಾರಿಗೇಳೋಣಾ ನಮ್ಮ ಪ್ರಾಬ್ಲಮ್ಮು, ಕನ್ನಡದ ನೋವಿಗೆ ಇಲ್ಲಾ ಮುಲಾಮು"

Wednesday 11 April 2012

ಹೀಗೊಂದು ಅಕ್ಷರ ನಮನ:

ಡಾ.ರಾಜ್ ಅವರಿಗೆ ಸಿಕ್ಕಿದಷ್ಟು ವೈವಿದ್ಯಮಯವಾದ ಪಾತ್ರಗಳು ಬೇರೆ ಯಾರಿಗೂ ಚಿತ್ರರಂಗದಲ್ಲಿ ಸಿಗಲಿಲ್ಲ ಎಂದರೆ ತಪ್ಪಾಗಲಾರದು. ಅವರು ತಮ್ಮ, ಆಣ್ಣ, ತಂದೆ, ತಾತ, ಪ್ರೇಮಿ, ವಿರಹಿ, ಗಂಡ, ಭಕ್ತ, ರಾಕ್ಷಸ, ಭಗವಂತ, ಕಳ್ಳ, ರೌಡಿ, ಪೋಲೀಸ್, ಬಾಂಡ್, ಹುಚ್ಚ, ವಿದ್ಯಾವಂತ, ಅವಿದ್ಯಾವಂತ, ಕೆಲಸಗಾರ, ಉದ್ಯಮಿ, ಮೇಯರ್, ದಾಸರಲ್ಲಿ ಕನಕ ದಾಸರು, ಪುರಂದರ ದಾಸರು, ಸ್ವಾಮಿಗಳಲ್ಲಿ ರಾಘ್ಹವೇಂದ್ರ ಸ್ವಾಮಿ ಹೀಗೆ ಅನೇಕ ಪಾತ್ರಗಳು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಅವರು ಮಾಡದೆ ಪಾತ್ರಗಳೇ ಇಲ್ಲವೇನೋ ಎಂಬಂತೆ ನಟಿಸಿ ಕನ್ನಡಿಗರ ಮನ್ನಸ್ಸನ್ನು ಸೂರೆಗೊಂಡರು. ಇಂದು ರಾಜ್ ಅವರು ನಮ್ಮನ್ನು ಅಗಲಿ ೬ ವರ್ಷವಾಗುತ್ತದೆ. ಹುಟ್ಟು ಆಕಸ್ಮಿಕ, ಸಾವು ಖಚಿತ. ಇದು ಎಲ್ಲರಿಗೂ ಗೊತ್ತು. ಆದರೆ ರಾಜ್, ವಿಷ್ಣು, ಶಂಕರ್ ನಾಗ್, ಕಲ್ಪನಾ, ಮಂಜುಳಾ, ನರಸಿಂಹರಾಜು, ವಜ್ರಮುನಿ, ಪ್ರಭಾಕರ್, ತೂಗುದೀಪ ಶ್ರೀನಿವಾಸ್, ಬಾಲಕೃಷ್ಣ, ಅಶ್ವಥ್, ದಿನೇಶ್ ಮುಂತಾದ  ಚಿತ್ರ ಕಲಾವಿದರು ನಮ್ಮನ್ನು ಅಗಲಿ ಅನೇಕ ವರ್ಷಗಳಾದರೂ ಅವರ ನೆನಪು ನಮ್ಮಿಂದ ಮಾಸಿಲ್ಲ. ಇದು ಕಲಾವಿದರು ನಮ್ಮ ಮೇಲೆ ಮಾಡಿದಂತಹ ಮೋಡಿ. ರಾಜ್ ಅವರ ಭಕ್ತ ಕುಂಬಾರ, ಮಯೂರ, ಸಂಪತ್ತಿಗೆ ಸವಾಲ್ ಮುಂತಾದ ಚಿತ್ರಗಳನ್ನು ಮರೆಯಲು ಆಗುವುದೇ?  ವಿಷ್ಣು ಅವರ ನಾಗರ ಹಾವು, ಬಂಧನ, ಮುತ್ತಿನ ಹಾರ, ಮುಂತಾದವುಗಳನ್ನು ಮರೆಯಲು ಸಾಧ್ಯವೇ? ಶಂಕರ್ ನಾಗ್ ಅವರ ಒಂದಾನೊಂದು ಕಾಲದಲ್ಲಿ, ಅವರು ನಿರ್ದೇಶನ ಮಾಡಿದ್ದ ಆಕ್ಸಿಡೆಂಟ್, ಮಿಂಚಿನ ಓಟ, ಟಿ.ವಿ.ಗಾಗಿ ಮಾಡಿದ "ಮಾಲ್ಗುಡಿ  ಡೇಸ್" ಮುಂತಾದವುಗಳನ್ನು ಮರೆತರೆ ಹೇಗೆ? ಇನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಚಿತ್ರಗಳಾದ ಬೆಳ್ಳಿ ಮೋಡ, ಶರ ಪಂಜರ, ಗೆಜ್ಜೆ ಪೂಜೆ, ರಂಗನಾಯಕಿ ಯಾವುದನ್ನು ಮರೆಯುವುದು. ಹೀಗೆ ಮೇಲ್ಕಂಡ ನಟರ/ನಿರ್ದೇಶಕರ ಚಿತ್ರಗಳು/ಹಾಡುಗಳು ಟಿ.ವಿಯಲ್ಲಿ ಬಂದಾಗ ನೋಡುತ್ತಿರುವವರ ಕಣ್ಣು ಅವರಿಗೆ ಅರಿವು ಬಾರದಂತೆ ಒದ್ದೆಯಾಗುತ್ತದೆ. "ಹುಟ್ಟೋದ್ಯಾಕೆ, ಸಾಯೋದ್ಯಾಕೆ, ಏನಾದರೂ ಸಾಧಿಸಿ ಹೋಗೋಕೆ," ಅಂತ ಈ ಮೇಲ್ಕಂಡ ಸಾಧಕರು ನಮಗೆ ತೋರಿಸಿ ಹೋಗಿದ್ದಾರೆ. ಇನ್ನು ನಮ್ಮೆಲ್ಲರ ಸರದಿ. ಏನಾದರೂ ಸಾಧಿಸಿ ಹೋಗೋಕೆ.

ಟಿ.ವಿಯಲ್ಲಿ ಇವರು ನಟಿಸಿರುವ ಚಿತ್ರಗಳನ್ನು ನೋಡಲು ಕುಳಿತಾಗ, ನಮ್ಮ ಪಕ್ಕದಲ್ಲಿ ಕುಳಿತಿರುವ ಮಕ್ಕಳಿಗೆ ಅವರ ಬಗ್ಗೆ ಹೇಳೋಣವೆಂದರೆ ನಮ್ಮ ಗಂಟಲಿನಿಂದ ಸ್ವರ ಬರುವುದೇ ಇಲ್ಲ, ಗಂಟಲು ಕಟ್ಟುತ್ತದೆ. ಚಿಕ್ಕ ಮಕ್ಕಳಿಗೆ ಪೋಗೋ, ಕಾರ್ಟೂನ್ ಹಾಕಿಲ್ಲವೆಂಬ ಕೋಪ, ಕಾಲೇಜ್ ಓದುವ ಈಗಿನ ಮಕ್ಕಳಿಗೆ ಹೆಚ್.ಬಿ.ಒ. ಸ್ಟಾರ್ ಮೂವೀಸ್ ನೋಡಕ್ಕೆ ಬಿಡದೆ ಇನ್ನೇನೋ ಹಾಕಿದ್ದರೆ ಎಂಬ ಅಸಮಧಾನ. ಹಳೆ ನೀರು ಕೊಚ್ಚಿಕೊಂಡು ಹೊಸ ನೀರು ಬರುವುದು ಜಗದ ನಿಯಮ. ಈಗಿನ ಪೀಳಿಗೆಗೆ ನಿಜವಾದ ಅಭಿನಯವೆಂದರೆ ಹೇಗಿರುತ್ತದೆ ಎಂಬ ಕಲ್ಪನೆಯೇ ಇಲ್ಲದ ಹಾಗಿದೆ. ಹಾಗಾಗಿ ನಮ್ಮ ಮಕ್ಕಳಿಗೆ ಇವರ ಚಿತ್ರಗಳನ್ನು ತೋರಿಸುವ ನಮ್ಮ ಆಸೆ ನಮ್ಮಲ್ಲೇ ಉಳಿದುಕೊಂಡು ಬಿಡುತ್ತದೆ.

ಸಂಗೀತಗಾರರಾದ  ಗಂಗೂಬಾಯಿ ಹಾನಗಲ್, ಭೀಮಸೇನ ಜೋಷಿ, ಭಾವಗೀತೆಯ ಸರದಾರ ಅಶ್ವಥ್, ಸಾಹಿತಿಗಳಾದ ಕುವೆಂಪು, ಮಾಸ್ತಿ, ಕಾರಂತರು ಮುಂತಾದವರು ಜ್ನಾಪಕಕ್ಕೆ ಬಂದಾಗ ಹೀಗೇ ಆಗುತ್ತದೆ. ಇನ್ನು ಚಿತ್ರ ಸಾಹಿತಿಗಳಾದ ಉದಯಶಂಕರ್, ಆರ್.ಎನ್.ಜಯಗೋಪಾಲ್, ಕಣಗಾಲ್ ಪ್ರಭಾಕರ ಶಾಸ್ತ್ರಿ ಮುಂತಾದವರು ರಚಿಸಿದ ಹಾಡು ರೇಡಿಯೋದಲ್ಲಿ ಕೇಳಿದಾಗ ಮನಸ್ಸಿಗೆ ಏನೋ ಆನಂದ. ಸಂಗೀತ ನಿರ್ದೇಶಕರಾದ ನಾಗೇಂದ್ರ, ಉಪೇಂದ್ರ ಕುಮಾರ್, ಜಿ.ಕೆ.ವೆಂಕಟೇಶ್, ಎಂ.ರಂಗರಾವ್ ಇವರನ್ನು ಮರೆತರೆ ನಮ್ಮನ್ನು ನಾವೆ ಮರೆತಂತೆ. ಇನ್ನು ನಮ್ಮ ವಾಸ್ತುಶಿಲ್ಪಿ ತಜ್ನ್ಯ ಡಾ.ಸರ್.ಎಂ.ವಿಶೇಶ್ವರಯ್ಯನವರನ್ನು ಯಾರಾದರೂ ಮರೆಯಲು ಸಾಧ್ಯವೇ? ಅದಕ್ಕೆ ಹೇಳುವುದು ಸಾಧಕರಿಗೆ ಸಾವಿಲ್ಲ, ಅವರು ಚಿರಂಜೀವಿ ಅಂತ. ಅವರ ಸಾಧನೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮ ಕರ್ತವ್ಯ. ಇಂದಿನ ಪೀಳಿಗೆಯ ಯುವಜನರು ಈ ಮೆಲ್ಕಂಡ ಸಾಧಕರನ್ನು ಅನುಸರಿಸಿ ಮುಂದುವರೆದರೆ ಅವರ ಕಲಾ ಜೀವನ ಚೆನ್ನಾಗಿರುವುದು. . ನಮ್ಮನ್ನು ಅಗಲಿದ ಎಲ್ಲರಿಗೂ ಒಂದು ಶ್ರದ್ದಾಂಜಲಿಯನ್ನು ಅರ್ಪಿಸಿಬಿಡಿ. ಇದು ನಾವು ಅವರಿಗೆ ಮಾಡುವ ಕರ್ತವ್ಯ ಕೂಡ ಹೌದು.
 


Monday 9 April 2012

ಕನ್ನಡಕ್ಕೆ ಡಬ್ಬಿಂಗ್ ಚಿತ್ರಗಳು ಬೇಕೆ? (ಭಾಗ-೩)

ಕಳೆದ ಸಂಚಿಕೆಯಿಂದ

ಮುಂದೆ ಹೀಗೆ ಮಾಡಬಹುದೆ?

೧. ಎಲ್ಲಾ ಪರಭಾಷಾಚಿತ್ರಗಳು ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಬೇಕು. ಅಥವಾ (ಮೂಲ ಭಾಷೆಯಲ್ಲಿ ೫ ಚಿತ್ರಮಂದಿರ ಮತ್ತು ಇನ್ನು ೧೫ ಚಿತ್ರಮಂದಿರಗಳಲ್ಲಿ ಕನ್ನಡಕ್ಕೆ ಡಬ್ ಆದ ಚಿತ್ರಗಳು.
೨.ಡಬ್ ಆದ ಚಿತ್ರಗಳು ಕೇವಲ ೧೫ ತಿಂದ ೨೦ ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆಯಾಗಬೇಕು. (ಮೂಲ ಭಾಷೆ ಮತ್ತು ಡಬ್ ಅದವು ಸೇರಿ)
೩.ಡಬ್ ಆದಂತಹ ಚಿತ್ರಗಳು.ಶೇಕಡ ೨೦% ಮೀರಿರಬಾರದು. (ಎಲ್ಲಾ ಪರಭಾಷಾ ಚಿತ್ರಗಳು ಡಬ್ ಆಗಿ ಬಂದರೆ ಇಲ್ಲಿನವರಿಗೆ ಕೆಲಸವಿರುವುದಿಲ್ಲ ಮತ್ತು ನಮ್ಮ ನಾಡಿನ ಸಂಸೃತಿ, ಭಾಷೆ, ಸ್ವಾಭಿಮಾನಕ್ಕೆ ಧಕ್ಕೆಯೂ ಉಂಟಾಗುವುದಿಲ್ಲ.ಎಂಬ ಭಾವನೆ)
೫.ಇದು ರಾಜ್ಯದಲ್ಲಿ ಕಾನೂನಾತ್ಮಕವಾಗಿ ಕಾಯಿದೆ ಆಗಬೇಕು. ಇಲ್ಲದಿದ್ದರೆ ಮುಂದೆ ತೊಂದರೆ ಅನುಭವಿಸಬೇಕಾಗಬಹುದು.

ಮೊದಲು ಇದರ ಬಗ್ಗೆ ಕೂಲಂಕುಷಿತವಾಗಿ ಚರ್ಚೆ ನಡೆಯಬೇಕು. ಚರ್ಚೆಯಲ್ಲಿ ನಿರ್ಮಾಪಕರು/ನಿರ್ದೇಶಕರು/ನಟ,ನಟಿಯರು/ಹಂಚಿಕೆದಾರರು/ಸಿನಿಮಾ ಕಾರ್ಮಿಕರು/ಬುದ್ದಿ ಜೀವಿಗಳು/ನಾಡಿನ ಗುರುಹಿರಿಯರು/ಕವಿಗಳು/ವಿದ್ಯಾರ್ಥಿಗಳು, ಸಾರ್ವಜನಿಕರು ಹೀಗೆ ಎಲ್ಲರೂ ಭಾಗವಹಿಸಬೇಕು. ಇದನ್ನು ವಾರ್ತಾಪತ್ರಿಕೆ ಮತ್ತು ಟಿ.ವಿ.ವಾಹಿನಿಗಳು ನೇತೃತ್ವವನ್ನು ವಹಿಸಿಕೊಳ್ಳಬೇಕು. ಇದೆಲ್ಲಾ ಆದನಂತರ ಮತದಾನದ ಮೂಲಕೆ ಜನರ ಸಲಹೆಗಳನ್ನು ಕೇಳಿ ಮುಂದುವರೆಯಬೇಕು. ಇದಕ್ಕೆ ಮೊಬೈಲ್ ನಲ್ಲಿ ಎಸ್.ಎಮ್.ಎಸ್ ಮುಖಾಂತರ ಮತದಾನದ ಉತ್ತರ ಕಂಡುಹಿಡಿದುಕೊಳ್ಳಬಹುದು. ಒಂದು ಮೊಬೈಲ್ ಗೆ ಒಂದು ಮತ, ಹಾಗೆ ಒಂದೇ ವಿಳಾಸಹೊಂದಿದ್ದು ಮೂರು/ನಾಲ್ಕು ಮೊಬೈಲ್ ಹೊಂದಿದ್ದರೊ ಒಂದೇ ಮತ ಎಂದು ಪರಿಗಣಿಸಬಹುದು. ನಾವು ಮೊದಲು ನಮ್ಮ ಭಾಷೆಯ ಉಳಿವು, ಅಳಿವು, ಸಂಸೃತಿ ಹೀಗೆ ಎಲ್ಲವನ್ನು ಅಳೆದು ತೂಗಿ ನಮ್ಮ ತಿರ್ಮಾನವನ್ನು ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಮುಂದಿನ ಪೀಳಿಗೆಗೆ ನಮ್ಮ ತಿರ್ಮಾನದಿಂದ ಯಾವುದೇ ತೊಂದರೆಯಾಗಬಾರದು. ಒಂದು ವೇಳೆ ಡಬ್ಬಿಂಗ್ ಚಿತ್ರಗಳು ಮಾತ್ರ ಯಶಸ್ಸುಗಳಿಸಿ ಮೂಲ ಕನ್ನಡ ಚಿತ್ರಗಳು ಬರುವುದೇ ನಿಂತುಹೋದರೆ? ಇದನ್ನೂ ಯೋಚಿಸಬೇಕು. ಯಾಕೆಂದರೆ ಎಲ್ಲರಿಗೂ ದುಡ್ಡಿನ ಮೇಲೆ ನಿಗ ಇರುತ್ತದೆ. ಕಷ್ಟ ಪಡಲು ಯಾರೂ ತಯಾರಿರುವುದಿಲ್ಲ. ಒಂದು ಸಲ ಕೋಟೆ ಬಾಗಿಲು ತೆಗೆದುಬಿಟ್ಟರೆ ಮತ್ತೆ ಮುಚ್ಚಲಾಗುವುದಿಲ್ಲ. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಎಂಬುದು ಈಗ ಉದ್ಭವಿಸಿರುವ ಮತ್ತೊಂದು ಪ್ರಶ್ನೆ.

ಪರಭಾಷೆಯಿಂದ ಕನ್ನಡಕ್ಕೆ ಡಬ್ ಆದರೆ ನಮ್ಮ ಮೂಲ ಕನ್ನಡ ಚಿತ್ರಕ್ಕೆ ಎನೂ ತೊಂದರೆಯಾಗುವುದಿಲ್ಲ ಎನ್ನುವ ಅಭಿಪ್ರಾಯವೂ ಸಹ ಇದೆ. ಇದಕ್ಕೆ ಕಾರಣ ಕನ್ನಡ ಚಿತ್ರಗಳನ್ನು ನೋಡುವವರ ಸಂಖ್ಯೆ ೧೬%, ತೆಲುಗು ೩೮%  ಮತ್ತು ತಮಿಳು ೩೬%. ಎಂದು ಒಂದು ವರದಿ ಹೇಳುತ್ತದೆ ಎನ್ನುತ್ತಾರೆ. ಅದು ನಿಜವೇ ಆಗಿದ್ದರೆ ಮೂಲ ಕನ್ನಡ ಚಿತ್ರಕ್ಕೆ ಖಂಡಿತಾ ತೊಂದರೆ ಉದ್ಭವಿಸದು. ಮೂಲ ಕನ್ನಡಿಗರು ಪರಭಾಷಾ ಚಿತ್ರಗಳನ್ನು ನೋಡುವುದು ಕಮ್ಮಿ. ಪರಭಾಷೆಯಿಂದ ಕನ್ನಡಕ್ಕೆ ಡಬ್ ಆದರೆ ಅದನ್ನು ನೋಡುವವರು ಜಾಸ್ತಿ ಪರಭಾಷಿಕರೆ. ಹಾಗಾದಲ್ಲಿ ಇದು ಕನ್ನಡಕ್ಕೆ ಒಳ್ಳೆಯದೇ ಎಂದು ಒಂದು ವಾದ.  ಕನ್ನಡ ಚಿತ್ರಗಳು ಈಗಲೂ ಪರಭಾಷಾಚಿತ್ರಗಳಿಂದ ಪೈಪೋಟಿಯನ್ನು ಸದಾ ಎದುರಿಸುತ್ತಲೇ ಇದೆ. ಆದರೂ ಕನ್ನಡ ಚಿತ್ರಗಳು ಗೆಲ್ಲುತ್ತಲೇ ಇದೆ. ಜಾಕಿ, ಮಿಲನ, ಆಪ್ತರಕ್ಷಕ, ಆಪ್ತ ಮಿತ್ರ, ಯಜಮಾನ, ಸುಪರ್, ಮುಂಗಾರು ಮಳೆ, ದುನಿಯಾ,  ಓಂ,  ಜೋಗಿ,  ಸಾರಥಿ ಮುಂತಾದ ಚಿತ್ರಗಳು ಕೋಟಿ ಕೋಟಿ ಹಣ ಬಾಚಿಲ್ಲವೇ.  ಹೀಗಿರಬೇಕಾದರೆ ಡಬ್ ಚಿತ್ರಗಳಿಗೆ ಯಾಕೆ ಭಯ ಪಡಬೇಕು? ಹೀಗೆ ಅನೇಕ  ವಾದಗಳಿವೆ, ಅವರವರ ಅನುಕೂಲಕ್ಕೆ ತಕ್ಕಹಾಗೆ. ಎಲ್ಲಾ ವಾದಗಳೂ ರಾಜಕಾರಣಿಗಳ ಭಾಷಣದ ಹಾಗೆ ಕೇಳಲು ಚೆನ್ನಾಗಿರುತ್ತದೆ. ಆದರೆ ಅದು ಕಾರ್ಯರೂಪಕ್ಕೆ ಬಂದಾಗ ಮಾತ್ರ ಅದರ ನಿಜ ಸ್ವರೂಪ ತಿಳಿಯುವುದು. ನಮ್ಮ ತಿರ್ಮಾನ ಏನೇ ಆದರೂ ಪರಭಾಷಾ ಚಿತ್ರರಂಗದವರಿಗೆ ಒಳಿತು. ಈಗ ಸದ್ಯದ ಮಟ್ಟಿಗೆ ಮತ್ತು ಮುಂದೆ ಕೂಡ ಚಾಲಕನ ಸ್ಥಾನದಲ್ಲಿ ಕುಳಿತಿರುವವರು ಅವರೇ. ನಮ್ಮ ಕನ್ನಡ ಚಿತ್ರಗಳಿಗೆ ಇದರಿಂದ ಅನುಕೂಲವಾಗುವುದೋ, ಇಲ್ಲವೋ ಎಂಬುದು ಕಾಲವೇ ಉತ್ತರಿಸಬೇಕಾದ ಪ್ರಶ್ನೆ.  (ಮುಗಿಯಿತು) (ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ)

Sunday 8 April 2012

ಕನ್ನಡಕ್ಕೆ ಡಬ್ಬಿಂಗ್ ಚಿತ್ರಗಳು ಬೇಕೆ? (ಭಾಗ-೨)

ಕಳೆದ ಸಂಚಿಕೆಯಿಂದ

ಆದರೆ ಇತ್ತೀಚೆಗೆ ಬೇರೆ ಭಾಷೆಯಿಂದ ಡಬ್ ಆದ ಚಿತ್ರಗಳನ್ನು ಕರ್ನಾಟಕದಲ್ಲಿ ಬಿಡುಗದೆಗೆ ಅವಕಾಶ ಮಾಡಿಕೊಡಬೇಕೆಂಬುದು ಕೆಲವರು ತೆರೆಮರೆಯಲ್ಲಿ ಪ್ರಯತ್ನವನ್ನು ಮಾದುತ್ತಿದ್ದಾರೆ. ಅವರಿಗೆ ಕೆಲವು ಚಿತ್ರರಂಗದ ಮಂದಿಯ ಪ್ರೋತ್ಸಾಹವಿದೆ ಮತ್ತು ಬಹುಮಂದಿಯಿಂದ ವಿರೋಧವಿದೆ. ಆದರೊ ಪ್ರಯತ್ನ ತೆರೆಮರೆಯಲ್ಲಿ ಮುಂದುವರೆದಿದೆ. ೨೦೦ ಬೇರೆ ಭಾಷೆಯ ಚಿತ್ರಗಳು ಕನ್ನಡಕ್ಕ ಡಬ್ ಆಗಿ ಬಿಡುಗಡೆಗೆ ಸಿದ್ದವಾಗಿದೆ ಎಂಬ ಸುದ್ದಿ ಚಿತ್ರರಂಗದಲ್ಲಿ ಓಡಾಡುತ್ತಾ ಇದೆ. ವಿರೋಧ ಇರುವ ಮಂದಿಯ ವಾದವೇನೆಂದರೆ ಪರಭಾಷಾಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಬಂದರೆ ಇಲ್ಲಿನ ನಟ/ನಟಿ/ನಿರ್ದೇಶಕ/ಕಾರ್ಮಿಕರು ಮತ್ತಿತರಿಗೆ ಕೆಲಸವಿರುವುದಿಲ್ಲ. ಅವರೆಲ್ಲ ರಸ್ತೆಗೆ ಬಂದುಬಿಡುತ್ತಾರೆ. ಡಬ್ ಆದ ಚಿತ್ರಗಳಿಂದ ನಿಜವಾದ ಕನ್ನಡ ಚಿತ್ರಗಳಿಗೆ ಹೊಡೆತ ಬೀಳುತ್ತದೆ.  ಚಿತ್ರಮಂದಿರಗಳ ಸಮಸ್ಯೆ ಎದುರಾಗುತ್ತದೆ. ಅದಕ್ಕಿಂತ ಮುಖ್ಯವಾಗಿ ಇನ್ನು ಮುಂದೆ ಕನ್ನಡ ಚಿತ್ರಗಳು ಬರುವುದಿಲ್ಲವೇನೋ ಎಂಬ ಭಯ. ಇನ್ನುಮುಂದೆ  ರಿಮೇಕ್ ಮಾಡಲಿಕ್ಕಾಗುವುದಿಲ್ಲವೆಂಬ ಕೊರಗು. ಹಾಗಾಗಿ ಬೇರೆಭಾಷೆಯ ಚಿತ್ರಗಳನ್ನು ಡಬ್ ಮಾಡಲು ನಾವು ಬಿಡುವುದಿಲ್ಲ ಎನ್ನುವುದು.  ಇನ್ನು ಪರವಾಗಿರುವವರ ವಾದವೇನೆಂದರೆ ಕನ್ನಡ ಚಿತ್ರಗಳು ಈಗ ಸರಿಯಾಗಿ ಓಡುತ್ತಿಲ್ಲ. ಹಾಕಿದ ಬಂಡವಾಳ ನಮಗೆ ವಾಪಸ್ಸು ಬರುತ್ತಿಲ್ಲ. ನಾಯಕ ನಟರ ಸಂಭಾವನೆ ಕೋಟಿಗಳಲ್ಲಿ ಇದೆ. ಅಕಸ್ಮಾತ್ ಚಿತ್ರವು ಸೋತರೆ ನಾಯಕನಟರು ಅವರ ಪಾಡಿಗೆ ಅವರು ಇದ್ದು ಬಿಡುತ್ತಾರೆ. ಅವರ ಸಂಭಾವನೆಯನ್ನು ಯಾವ ಕಾರಣಕ್ಕೂ ಕಡಿಮೆ ಮಾಡಿಕೊಳ್ಳುವುದಿಲ್ಲ. ನಾವು ಎಷ್ಟಂತ ನಮ್ಮ ಹಣವನ್ನು ಕಳೆದುಕೊಳ್ಳುವುದು. ಪರಭಾಷಾ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡುವುದರಂದ ಪರಭಾಷಿಕರು ಆ ಚಿತ್ರಗಳನ್ನು ಕನ್ನಡದಲ್ಲಿ ನೋಡುವುದರ ಮುಖಾಂತರ ಅವರು ಕನ್ನಡ ಕಲಿಯಬಹುದು. ಇದರಿಂದ ಕನ್ನಡಕ್ಕೆ ಒಳಿತಲ್ಲವೇ ಎನ್ನುವುದು. ಹಾಗಂತ ಇವರಿಗೆ ಕನ್ನಡದ ಮೇಲೆ ಎನೂ ವಿಶೇಷವಾದ ಅಭಿಮಾನವೇನೂ ಇಲ್ಲ. ಇವರು ಪಕ್ಕಾ ವ್ಯಾಪಾರಿಗಳು. ಇದರಲ್ಲಿ ಮತ್ತೊಂದು ವಿಚಾರವೇನೆಂದರೆ ಇಲ್ಲಿ ಪರಭಾಷಚಿತ್ರಗಳನ್ನು ಕರ್ನಾಟಕದಲ್ಲಿ ಹಂಚಿಕೆ ಮಾಡುವವರಲ್ಲಿ ಹೆಚ್ಚಿನವರು ನಮ್ಮ ಕನ್ನಡ ನಿರ್ಮಾಪಕರೆ. ಇವರುಗಳಿಗೆ  ಪರಭಾಷಾ ಚಿತ್ರಗಳು ಡಬ್ ಆದರೆ ಓಳಿತು. ಯಾಕೆಂದರೆ ಹೆಚ್ಚಿನ ಕರ್ಚುವೆಚ್ಚವಿಲ್ಲದೆ  ಜಾಸ್ತಿ ಹಣ ಮಾಡಬಹುದು ಎಂಬ ದುರಾಲೋಚನೆ.

ಈಗ ಕರ್ನಾಟಕದಲ್ಲಿ ದಬ್ಬಿಂಗ್ ಮಾಡಲು ಅವಕಾಶವಿಲ್ಲ. ದಬ್ಬಿಂಗ್ ಮಾಡಲೇಬಾರದು ಎಂಬುದಕ್ಕೆ ಭಾರತದಲ್ಲಿ ಕಾನೂನೇನೂ ಇಲ್ಲ. ಅಕಸ್ಮಾತ್ ಯಾರದರೂ ತಮ್ಮ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡಿದರೆ ಅದನ್ನು ಎದುರಿಸಲು ಕಾನೂನಾತ್ಮಕವಾಗಿ ಆಗುವುದಿಲ್ಲ. ಈಗ ಹಾಗೇನಾದರೂ ಆದರೆ ಆ ಚಿತ್ರಗಳನ್ನು ಪ್ರದರ್ಶಿಸುವ ಚಿತ್ರಮಂದಿರಗಳ ಮುಂದೆ ಗಲಾಟೆ/ಧರಿಣಿ ಮಾಡುವುದು ಮಾತ್ರ. ಈಗಿರುವ ಏಕೈಕ ಪರಿಹಾರ. "ಯಾರಾದರೂ ತಮ್ಮ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿ ಇಲ್ಲಿ ಬಿಡುಗಡೆಗೆ ಹೊರಟು ಸಾಧ್ಯವಾಗದೆ, ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಎನು ಮಾಡುವುದು? ನ್ಯಾಯಾಲಯದ ತೀರ್ಪು ಅವರ ಪರವಾಗಿ ಬಂದರೆ ಎನು ಮಾಡುತ್ತೀರಾ?" ಎಂದು ಚಿತ್ರರಂಗದವನ್ನು ಪ್ರಶ್ನಿಸಿದರೆ ಅವರಲ್ಲಿ ಉತ್ತರವಿಲ್ಲ.   ಆದರೆ ಅದಕ್ಕೆ ಪರಿಹಾರವೇನು ಎಂಬುದಕ್ಕೆ ಇಬ್ಬರ ಬಳಿಯೂ ಉತ್ತರವಿಲ್ಲ. ದಿಡೀರನೆ ಈ ಸಮಸ್ಯೆ ಉದ್ಭವಿಸಿದರೆ ಅದನ್ನು ಎದುರಿಸುವುದೆ ಹೇಗೆ? ಅವಸರದಲ್ಲಿ ಎನೇನೋ ತೀರ್ಮಾನ ತೆಗೆದುಕೊಂಡರೆ ಮುಂದೆ ನಮಗೇ ತಾನೆ ನಷ್ಟವಾಗುವುದು.  (ಮಿಕ್ಕಿದ್ದು ನಾಳೆಗೆ)

Saturday 7 April 2012

ಕನ್ನಡಕ್ಕೆ ಡಬ್ಬಿಂಗ್ ಚಿತ್ರಗಳು ಬೇಕೆ? (ಭಾಗ-೧)

ಹಿಂದೆ:

ಇದು ಮಿಲಿಯನ್ ಡಾಲರ್ ಪ್ರಶ್ನೆ. ಇದರ ಬಗ್ಗೆ ಸುಮಾರು ೧೯೬೦ರ ದಶಕದಿಂದ ಈ ಪ್ರಶ್ನೆ ಕನ್ನಡ ಚಿತ್ರರಂಗವನ್ನು ಆಗಾಗ ಕಾಡುತ್ತಿದೆ. ಇದರ ಬಗ್ಗೆ ಕನ್ನಡ ಚಿತ್ರರಂಗದ ಅಥಿರಥ ಮಹಾರಥರು ಮತ್ತು ನಾಡಿನ ಗಣ್ಯರೂ ಇದರ ಬಗ್ಗೆ ಚರ್ಚಿಸಿ ಕರ್ನಾಟಕದಲ್ಲಿ ದಬ್ಬಿಂಗ್ ಸಂಸ್ಕೃತಿಗೆ ಅವಕಾಶ ಕೊಡುವುದಿಲ್ಲ ಎಂಬ ಒಮ್ಮತದ ನಿರ್ದಾರಕ್ಕೆ ಬಂದಿದ್ದಾರೆ. ಇದರ ಬಗ್ಗೆ ಅನೇಕ ಚಳುವಳಿಗಳೂ ಆದ ನೆನಪು ಈಗಿನೆ ಹಿರಿಯರಿಗೆ  ಇದೆ. ಆಗ ಇದರ ಬಗ್ಗೆ ಡಾ.ರಾಜ್, ಅ.,ನ.ಕೃ. ಮ.ರಾಮಮೂರ್ತಿ, ವಾಟಾಳ್ ನಾಗರಾಜ್, ಮ.ರಾಮಮೂರ್ತಿ ಮತ್ತು ಇತರ ಗಣ್ಯರು ಚಳುವಳಿ ನಡೆಸಿದ್ದರು. ಆಗಿನ ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಮದ್ರಾಸನ್ನು ಅವಲಂಬಿಸಿತ್ತು. ಕಾಲಾಂತರದಲ್ಲಿ ಕನ್ನಡ ಚಿತ್ರರಂಗ ಅಲ್ಲಿಂದ ಕರ್ನಾಟಕಕ್ಕೆ ಬಂದು ನೆಲೆಗೊಂಡಿತು. ಆಗ ಚಿತ್ರರಂಗದ ನಟ/ನಟಿ, ತಾಂತ್ರಿಕ ವರ್ಗ ಎಲ್ಲವೂ ಮದರಾಸಿನಲ್ಲೇ ಇತ್ತು. ಇದರ ಮಧ್ಯೆ ಕನ್ನಡ ಚಿತ್ರಗಳು ಬೆರೆಳೆಣಿಕೆಯಷ್ಟು ತಯಾರಾಗುತ್ತಿತ್ತು. ಇದರ ಮಧ್ಯೆ ತೆಲುಗು/ತಮಿಳು ಚಿತ್ರಗಳು ಕನ್ನಡಕ್ಕೆ ಡಬ್ಬಿಂಗ್ ರೂಪದಲ್ಲಿ ಬಂದು ಇಲ್ಲಿ ಬಿಡುಗಡೆಯಾಗಿ ಯಶಸ್ವಿಯೂ ಆಗುತ್ತಿತ್ತು. ಇದರ ಹಾವಳಿ ಕ್ರಮೇಣ ಜಾಸ್ತಿಯಾಗುತ್ತಾ ಬಂತು. ಪ್ರೇಕ್ಷಕರೊ ಇದರ ಬಗ್ಗೆ ಒಲವು ತೋರಿಸುತ್ತಿದ್ದರು. ಆಗ ಕನ್ನಡ ಚಿತ್ರರಂಗ ಎಚ್ಚೆಂತುಗೋಂಡು ಡಬ್ಬಿಂಗ್ ಚಿತ್ರಗಳನ್ನು ಇಲ್ಲಿ ಬಿಡುಗಡೆಗೆ ಅವಕಾಶ ಮಾಡಿಕೊಟ್ಟರೆ ನಮ್ಮ ಚಿತ್ರಗಳಿಗೆ ಉಳಿಗಾಲವಿಲ್ಲ ಎಂದು ಭಾವಿಸಿ ಎಲ್ಲಾ ಕಡೆ ಚಳುವಳಿಗಳನ್ನು ಹಮ್ಮಿಕೊಂಡು ಅದರಲ್ಲಿ ಯಶಸ್ವಿಯಾಗಿ ಕರ್ನಾಟಕದಲ್ಲಿ ಡಬ್ಬಿಂಗ್ ಚಿತ್ರಗಳನ್ನು ತಡೆ ಹಿಡಿಯಿತು. ಇದು ಆಗಿನಿಂದಲೂ ಇಲ್ಲಿವರೆಗೆ ಜಾರಿಯಲ್ಲಿದೆ. 

ಈಗ:

ಆದರೂ ಕದ್ದುಮುಚ್ಚಿ ಒಂದೆರೆಡು ಡಬ್ ಆದ ಚಿತ್ರಗಳು ತೆರೆ ಕಂಡಿರುವುದು ಸುಳ್ಳಲ್ಲ. ಆದರೂ ಇದರ ಹಾವಳಿ ಸಧ್ಯಕ್ಕೆ ಇಲ್ಲ,   ಈಗ ನಮಗೆ ಡಬ್ಬಿಂಗ್ ಬೇಕೇ ಬೇಕು ಅಂತ ಯಾರೂ ಹಠ ಹಿಡಿದಿಲ್ಲ ಮತ್ತು ಇದಕ್ಕೆ ಯಾರೂ ಉಪವಾಸ ಸತ್ಯಾಗ್ರಹವನ್ನೂ ಮಾಡುತ್ತಿಲ್ಲ. ಈ ಲೇಖನದಲ್ಲಿ ಡಬ್ಬಿಂಗ್ ಬೇಕೇಬೇಕು ಅಂತಾಗಲೀ ಬೇಡವೇಬೇಡ ಎಂಬುದಾಗಲೀ ಎಂಬ ವಿಷಯದಬಗ್ಗೆ ಬರೆದಿಲ್ಲ. ಈ ಲೇಖನದ ಮುಖ್ಯ ಉದ್ದೇಶ ಯಾರ ಪರ ಅಥವಾ ವಿರೊಧವಾಗೂ ಇಲ್ಲ. ಇದು ಕೇವಲ ಸಮಾನ ಮನಸ್ಕರ ಜೊತೆ  ಒಂದು ಅರೋಗ್ಯಪೂರ್ಣ ಚರ್ಚೆ ಆಗಲಿ ಎಂಬ ಸದುದ್ದೇಶದಿಂದ ಮಾತ್ರ. ಪ್ರತಿಕ್ರಿಯಗಳಿಗೆ ಸ್ವಾಗತ. (ಮಿಕ್ಕಿದ್ದು ನಾಳೆಗೆ)

Thursday 5 April 2012

ಗ್ರಾಹಕ ಸೇವೆ: ಕನ್ನಡಕ್ಕೆ ಅಗ್ರಸ್ಥಾನವಿರಲಿ: ( ಭಾಗ-೨)

ಕಳೆದ ಸಂಚಿಕೆಯಿಂದ:

ನಮ್ಮೆಲ್ಲರ ಬಯಕೆ ಕನ್ನಡವನ್ನು ಕರ್ನಾಟಕದಲ್ಲಿ ಸಾರ್ವಭೌಮ ಭಾಷೆಯನ್ನಾಗಿ ಮಾಡುವುದು ತಾನೆ? ನಾವು  ಬ್ಲಾಗ್ ಮತ್ತು ಫೇಸ್ ಬುಕ್ ನಲ್ಲಿ ಕನ್ನಡದ ಬಗ್ಗೆ ನಮ್ಮ ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತೇವೆ. ಅದರ ಜೊತೆಜೊತೆಗೆ ಸಾರ್ವಜನಿಕವಾಗಿ ಕನ್ನಡವನ್ನು ಬಳಸುವುದನ್ನು ಕಾರ್ಯಗತಗೊಳಿಸೋಣ.  ನಾವೆಲ್ಲರೂ ಬ್ಯಾಂಕ್/ಅಂಚೆ ಕಛೇರಿ, ವಿಮಾ ಕಛೇರಿ/ಸರ್ಕಾರಿ/ಅರೆ ಸರ್ಕಾರಿ ಹೀಗೆ ಎಲ್ಲಾ ಕಡೆ ವ್ಯವಹಾರ ಮಾಡುವಾಗ ಆದಷ್ಟೂ ಕನ್ನದವನ್ನೇ ಬಳಸೋಣ. ನಾವುಗಳು ಉಪಯೋಗಿಸುವ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳ ನೊಂದಣಿ ಸಂಖ್ಯೆಯನ್ನು ಕನ್ನಡದಲ್ಲಿ ಬರೆಸೋಣ. ಎ.ಟಿ.ಎಂ ಗಳಲ್ಲಿ ಹಣವನ್ನು ಪಡೆಯುವಾಗ ಕನ್ನಡದ ಗುಂಡಿಯನ್ನೇ ಒತ್ತಿ. ಬ್ಯಾಂಕ್ ಗಳಲ್ಲಿ ಹಣವನ್ನು ತುಂಬುವಾಗ/ವಾಪಸ್ಸು ಪಡೆಯುವಾಗ ಚಲನ್/ಚಕ್ ಗಳನ್ನು ಕನ್ನಡದಲ್ಲಿ ಬರೆಯಿರಿ. ಉಪಹಾರ ಗೃಹಗಳಲ್ಲಿ ಕನ್ನಡದಲ್ಲಿ ತಿಂಡಿಗಳ ವಿವರ ಇರದಿದ್ದರೆ ಅಲ್ಲಿಂದ ಹೊರಬನ್ನಿ.  ಹೊರಬರುವ ಮೊದಲು ತಿಂಡಿಯ ವಿವರ ಕನ್ನಡದಲ್ಲಿ ಇಲ್ಲ, ಆದ್ದರಿಂದ ನಮಗೆ ಇಲ್ಲಿ ತಿನ್ನಲು ಇಷ್ಟವಿಲ್ಲ, ನಾವು ಹೊರಡುತ್ತಿದ್ದೇವೆ ಎಂದು ಹೇಳಿ ಬನ್ನಿ.  ಮುಂದಿನ ಸಾರಿ ನೀವು ಅಲ್ಲಿಗೆ ಹೋಗುವಷ್ಟರಲ್ಲಿ ಅಲ್ಲಿ ತಿಂಡಿಗಳ ವಿವರ ಕನ್ನಡದಲ್ಲಿ ಇರುತ್ತದೆ. ಯಾರಿಗಾದರೂ ಉಡುಗೊರೆ ಕೊಡುವ ಸಂಧರ್ಭ ಬಂದಾಗ ಅವರಿಗೆ ಕನ್ನಡದ ಪುಸ್ತಕಗಳನ್ನು ಕೊಡಿ. ಮನೆಗೆ ಕನ್ನಡದ ದಿನಪತ್ರಿಕೆ/ವರ್ಷದ ವಿಶೇಷಾಂಕಗಳನ್ನು ತರಿಸಿ. ಕನ್ನಡ ಚಿತ್ರಗಳನ್ನು ಚಿತ್ರಮಂದಿರದಲ್ಲಿ ನೋಡಿ. ಕನ್ನಡದ ನಾಟಕಗಳನ್ನು ಸಮಯವಿದ್ದಾಗ ನೋಡಿ. ಮಕ್ಕಳಿಗೆ ಕನ್ನಡ ಬರೆಯುವುದು ಮತ್ತು ಓದುವುದನ್ನು ಕಲಿಸಿಕೊಡಿ. ಕನ್ನಡದ ಭಾವಗೀತೆ/ಜನಪದ/ಸಿನಿಮಾ ಸಂಗೀತದ ಸಿ.ಡಿ (ಅಡಕತಟ್ಟೆ) ಇರಲಿ. ಮನೆಯಲ್ಲಿ ಕನ್ನಡ ಸಾಹಿತಿಗಳ ೩/೪ ಪುಸ್ತಕಗಳಾದರೂ ಇರಲಿ. ಇದೆಲ್ಲವೂ ಕನ್ನಡಿಗರಿಗೆ ಗೊತ್ತು. ಇದರಲ್ಲಿ ಹೊಸದೇನೂ ಇಲ್ಲ. ಆದರೆ ಇಂಥ ಚಿಕ್ಕ ಚಿಕ್ಕ ಕೆಲಸಗಳನ್ನು ಕನ್ನಡಿಗರು ಮಾಡುವುದಿಲ್ಲ. ಅವರಿಗೆ ಏನೋ ಸಂಕೋಚ. ಯಾರಾದರೂ ಏನಾದರೂ ಅಂದುಕೊಂಡರೆ ನಮ್ಮ ಬಗ್ಗೆ  ಅಂತ. ಅಂದುಕೊಳ್ಳುವವರು ಅಂದುಕೊಳ್ಳಲಿ ಬಿಡಿ. ಅದರಿಂದ ನಮಗೇನು ನಷ್ಟ?

ಮೊದಲು ಅವರು ಮಾಡಲಿ, ಇವರು ಮಾಡಲಿ ಎಂದು ಸಬೂಬು ಹೇಳುವುದು ಬಿಟ್ಟು, ನಾವೇ (ಸಾವಿರಾರು ಮಂದಿ ಇರುವ ಫೇಸ್ ಬುಕ್ ಸ್ನೇಹಿತರು) ಕನ್ನಡವನ್ನು ಸಾರ್ವಜನಿಕವಾಗಿ ಬಳಸಲು ಶುರು ಮಾಡೋಣ. ಹೀಗೆ ಮಾಡಿದರೆ ಕನ್ನಡ ಉದ್ದಾರ ಆಗುತ್ತದೇಯೇ ಎಂದು ಕೆಲವು ಸಿನಿಕರು ಪ್ರಶ್ನೆ ಮಾಡುತ್ತಾರೆ. ಅವರಿಗೆ ನನ್ನ ವಿನಮ್ರ  ಮನವಿ, ನಾವ್ಯಾರೂ ಕನ್ನಡವನ್ನು ಉದ್ದಾರ ಮಾಡುವುದು ಬೇಡ. ಈಗಾಗಲೇ ನಮ್ಮ ಕವಿವರ್ಯರು, ಸಾಹಿತಿಗಳು, ಆ ಕೆಲಸವನ್ನು ಮಾಡಿ ಕನ್ನಡಕ್ಕೆ ೮ ಜ್ನಾನಪೀಠ ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಾರೆ. ರಾಜ್ಯ/ರಾಷ್ಟ/ಜಾಗತಿಕ ಮಟ್ಟದಲ್ಲಿ ನಾವು ಕನ್ನಡ/ಕರ್ನಾಟಕ ವನ್ನು ಪ್ರಚಾರಮಾಡಿದರೆ ಸಾಕು. ನಾವು, ನೀವು, ಅವರು, ಇವರು  ಎಲ್ಲಾರೂ ಸೇರಿಕೊಂಡು ನಮ್ಮ ನಿತ್ಯ ಜೀವನದಲ್ಲಿ ಕನ್ನಡವನ್ನು ಬಳಸಿ ಅದನ್ನು  ಮುಂದಿನ ಜನಾಂಗಕ್ಕೆ ಬಿಟ್ಟರೆ, ಅದೇ ನಾವು ಕನ್ನಡಕ್ಕೆ ಮಾಡುವ ಬಹುದೊಡ್ಡ ಉಪಕಾರ. ತಮಿಳರು/ತೆಲುಗರು/ಗುಜರಾತಿಗಳು/ಬೆಂಗಾಲಿಗಳು ದಶಕಗಳ ಕಾಲದಿಂದ ಇದನ್ನೇ ಮಾಡುತ್ತಿರುವುದು. ನಾವುಗಳು ಅದನ್ನು ಮಾಡುತ್ತಿಲ್ಲ ಅಷ್ಟೇ. ಮನೆ ಒಳಗೆ ಕನ್ನಡವನ್ನು ಬಳಸುವುದಕ್ಕಿಂತ ಹೆಚ್ಚು ಅದನ್ನು ಹೊರಗಡೆ ಬಳಸಿದರೆ ಸಾಕು. ಈ ಕೆಲಸ ನೋಡುವುದಕ್ಕೆ ಚಿಕ್ಕ ಕೆಲಸವಾಗಿ ಕಂಡರೂ ಅದು ಮಾಡುವ ಪರಿಣಾಮ ಬಹಳ ದೊಡ್ಡದು. ಎಲ್ಲಾ ಕೆಲಸವೂ ಚಿಕ್ಕದಾಗಿ ಮೊದಲುಗೊಂಡು ದೊಡ್ಡದಾಗಿ ಬೆಳೆಯುತ್ತದೆ. ಸ್ವಾತಂತ್ರ ಸಂಗ್ರಾಮವೂ ಮೊದಲ ಚಿಕ್ಕದಾಗಿ ಮೊದಲುಗೊಂಡು ಬೃಹುದಾಕಾರವಾಗಿ ಬೆಳೆದಿದ್ದು ಮತ್ತು ಕೊನೆಗೆ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು. ಇದು ಎಲ್ಲಾರಿಗೂ ಗೊತ್ತಿರುವಂತಹ ಸಂಗತಿಯೇ ಆಗಿದೆ. ನಾವು ಇನ್ನೇನೂ ಮಾಡುವುದು ಬೇಡ. ಕನ್ನಡ ಅದರ ಪಾಡಿಗೆ ಅದು ಉಳಿಯುತ್ತದೆ ಮತ್ತು ಬೆಳೆಯುತ್ತದೆ. (ಮುಗಿಯಿತು)             (ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.)

Wednesday 4 April 2012

ಗ್ರಾಹಕ ಸೇವೆ: ಕನ್ನಡಕ್ಕೆ ಅಗ್ರಸ್ಥಾನವಿರಲಿ: ( ಭಾಗ-೧)

"ಎಲ್ಲಿಯವರೆಗೆ ನಾವು ಸೇವೆಯನ್ನು ಕನ್ನಡದಲ್ಲಿ ಕೇಳುವುದಿಲ್ಲವೋ ಅಲ್ಲಿಯವರೆಗೆ ಉತ್ಪಾದಕ ನಮ್ಮ ಹಕ್ಕನ್ನು ಕಡೆಗಣಿಸುತ್ತಾನೆ" ಎಂಬ ಲೇಖನವನ್ನು  ಬರೆದ ಶ್ರೀ.ಕಲ್ಯಾಣರಾಮನ್ ಚಂದ್ರಶೇಖರನ್ ಅವರಿಗೆ ಅಭಿನಂದನೆಗಳು. (ವಿ.ಕ.೧೭/೩/೧೨) ಶ್ರೀಯುತರು ಇದರ ಬಗ್ಗೆ ಬಹಳ ಚೆನ್ನಾಗಿ ಬರೆದು ಗ್ರಾಹಕರ ಹಕ್ಕುಗಳನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಇದರ ಬಗ್ಗೆ ಇರುವ ಕಾನೂನುಗಳು ಹೇಗೆ ಗ್ರಾಹಕರ ಸಹಕಾರಿ ಎಂಬುದನ್ನೂ ವಿವರಿಸಿದ್ದಾರೆ. ಉತ್ಪಾದಕ ತಾನು ತಯಾರಿಸಿದ ವಸ್ತುವನ್ನು ಯಾವ ರಾಜ್ಯದಲ್ಲಿ ವಿತರಿಸುವಾಗ/ಮಾರಾಟ ಮಾಡುತ್ತಾನೋ, ಆ ರಾಜ್ಯದ ಭಾಷೆಯಲ್ಲಿ ಅದರ ಬಗ್ಗೆ ಮಾಹಿತಿಯನ್ನು ನೀಡಬೇಕಾಗಿರುವುದು ಅವನ ಕರ್ತವ್ಯ. ಆಂದರೆ ಕರ್ನಾಟಕದಲ್ಲಿ ಕನ್ನಡ, ಆಂಧ್ರ ದಲ್ಲಿ ತೆಲುಗು ಇತ್ಯಾದಿ. ಇದು ಜನ ಸಾಮಾನ್ಯರು ಬಳಸುವ ಎಲ್ಲಾ ವಸ್ತುಗಳಿಗೆ ಅನ್ವಯಿಸುತ್ತದೆ. ಗ್ರಾಹಕನೇ ದೇವರು, ಸಾರ್ವಭೌಮ ಎಂಬುದನ್ನು ಹೆಚ್ಚಿನ ಗ್ರಾಹಕರು ಅರಿತಿಲ್ಲ. ಸರ್ಕಾರ ಕಾನೂನನ್ನು ರಚಿಸಬಹುದು. ಅದರ ಬಗ್ಗೆ ಜನರಿಗೆ ಕಾಲಕಾಲಕ್ಕೆ ತಿಳುವಳಿಕೆಯನ್ನು ಟಿ.ವಿ ಮತ್ತು ದಿನಪತ್ರಿಕೆಗಳ ಮುಖಾಂತರ ಕೊಡಬಹುದು. ಆದರೆ  ಹೆಚ್ಚಿನ ಗ್ರಾಹಕರಿಗೆ ಇದರ ಬಗ್ಗೆ ತಿಳುವಳಿಕೆ ಇಲ್ಲ. ಹೆಚ್ಚಿನ ಜನರು  ರಾಜಕೀಯ, ಕ್ರೀಡೆ, ಸಿನಿಮಾ ಇತ್ಯಾದಿ ವಿಷಯಗಳನ್ನು ಓದುತ್ತಾರೆಯೇ ಹೊರತು ಅವರಿಗೆ ಬೇರೆ ವಿಷಯಗಳ ಬಗ್ಗೆ ಏನೋ ಒಂದು ಅಸಡ್ಡೆ. ಓದಿದ ವಿದ್ಯಾವಂತ ಜನರೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಲುವುದಿಲ್ಲ. ಇನ್ನು ಅವಿದ್ಯಾವಂತರ ಪಾಡೇನು.

ಜನರು ಮಾರುಕಟ್ಟೆಯಲ್ಲಿ ಯಾವುದೇ ಪದಾರ್ಥಗಳನ್ನು ಖರೀದಿಸಿದಾಗ, ಅದರಲ್ಲಿ  ಯಾವ ಭಾಷೆಯಲ್ಲಿ ಮಾಹಿತಿ ಇದೆ ಎಂಬುದನ್ನು ತಿಳಿದುಕೊಂಡು ಕನ್ನಡದಲ್ಲಿ ಮಾಹಿತಿ ಇಲ್ಲದಿದ್ದರೆ ಆ ಪದಾರ್ಥವನ್ನು ತಯಾರಿಸಿದಾತನನ್ನು ಸಂಪರ್ಕಿಸಿ ಅವನಿಗೆ ಎಚ್ಚರಿಕೆಯನ್ನು ಕೊಡಬೇಕು. ಎಲ್ಲರೂ ಕನ್ನಡದಲ್ಲಿ ಮಾಹಿತಿಯನ್ನು ಕೊಡಿ ಎಂದು ಆಗ್ರಹಿಸಬೇಕು. ನಮ್ಮ ಫೇಸ್ ಬುಕ್ ಸ್ನೇಹಿತರಿಗೆ ಈ ಅನುಭವವಾದಾಗ ಮತ್ತು ಅದನ್ನು ಅವರು ಎಲ್ಲರಲ್ಲೂ ಹಂಚಿಕೊಂಡಾಗ ನಾವೆಲ್ಲರೂ ಆ ಉತ್ಪಾದಕನಿಗೆ ಮಿಂಚಂಚೆ ಕಳುಹಿಸೋಣ. ಆಗ ಅವನು ಕನ್ನಡದಲ್ಲಿ ಮಾಹಿತಿಯನ್ನು ಕೊಡಲೇಬೇಕಾಗುತ್ತದೆ. ಹೀಗೆ ಮಾಡುವುದರಿಂದ ನಮಗೆ ಎರಡು ಪ್ರಯೋಜನವಾಗುತ್ತದೆ. ಮೊದಲು ಆ ಪದಾರ್ಥದ ಸರಿಯಾದ ಮಾಹಿತಿ ಮತ್ತು ಉಪಯೋಗ ಮತ್ತೊಂದು ಕನ್ನಡದ ಬೆಳವಣಿಗೆ. ಯಾವುದೇ ಉತ್ಪಾದಕ ತನ್ನ ಉತ್ಪನ್ನವನ್ನು ಕರ್ನಾಟಕದಲ್ಲಿ ಮಾರಾಟ ಮಾಡುವಾಗ ಕನ್ನಡವನ್ನು ಬಳಸಲು ತೊಡಗುತ್ತಾನೆ.                          
(ಮಿಕ್ಕಿದ್ದು ನಾಳೆಗೆ)