Thursday 31 May 2012

" ಅಣ್ಣಾ ಬಾಂಡ್ "

ಮೊನ್ನೆ " ಅಣ್ಣಾ ಬಾಂಡ್ " ಚಿತ್ರ ನೋಡಲು ಹೋಗಿದ್ದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ  ಚಿತ್ರ ನೋಡಿದ ಮೇಲೆ ಭ್ರಮನಿರಸನವಾಯಿತು. ರಾಘಣ್ಣ, ಶಿವಣ್ಣ, ಪುನೀತ್, ಪಾರ್ವತಮ್ಮ ಅವರುಗಳು ತಮ್ಮ ಸ್ವಂತ ಬ್ಯಾನರ್ ನಲ್ಲಿ ಚಿತ್ರವನ್ನು ತೆಗೆದಾಗ ಬಹಳಷ್ಟು ಸಮಯ ಕಥೆ, ಸಂಭಾಷಣೆ, ಹಾಡುಗಳು, ಸಂಗೀತ, ನಿರ್ದೇಶಕ ಹೀಗೆ ಎಲ್ಲದರ ಬಗ್ಗೆಯೂ ಸಾಕಷ್ಟು ಚರ್ಚೆ ಮಾಡಿ ನಂತರ ಶ್ರದ್ದೆ, ಪ್ರೀತಿಯಿಂದ ಚಿತ್ರವನ್ನು ಮಾಡಿರುವುದನ್ನು ನಾವೆಲ್ಲರೂ ಈ ಹಿಂದೆ  ನೋಡಿದ್ದೇವೆ. ಅವರಿಗೆ ಕಥೆ ಒಪ್ಪಿಸುವುದು ಸುಲಭದ ಮಾತಲ್ಲ. ಇದು ಗಾಂಧಿನಗರದ ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯ. ಹಾಗಾಗಿ ಅವರ ಸ್ವಂತ ಬ್ಯ್ನಾನರ್ ಚಿತ್ರಗಳು ಅತ್ಯಂತ ಯಶಸ್ವಿಯಾಗಿರುತ್ತದೆ. ಇದು ರಾಜ್, ವರದಣ್ಣ ಅವರ ಕಾಲದಿಂದಲೂ ಬಂದಿರುವ ರೂಢಿ. ಆದರೆ ಅಣ್ಣಾ ಬಾಂಡ್ ವಿಷಯದಲ್ಲಿ ಇವರುಗಳು ಯಾಕೆ ಯಾಮಾರಿದರು? ನಿರ್ದೇಶಕ ಸೂರಿಯ ಬಗ್ಗೆ ವಿಪರೀತ ನಂಬಿಕೆಯೇ ಚಿತ್ರವನ್ನು ಹಾಳುಮಾಡಿದೆ. ಪುನೀತ್ ಅವರನ್ನು ಚಿತ್ರದಲ್ಲಿ ಸರಿಯಾಗಿ ದುಡಿಸಿಕೊಂಡಿಲ್ಲ. ಅವರನ್ನು ಕೇವಲ ಫೈಟ್ ಮತ್ತು ಡ್ಯಾನ್ಸ್ ಗೆ ಮಾತ್ರ ಸೀಮಿತಗೊಳಿಸಿದ್ದಾರೆ. ಪುನೀತ್ ರಂತಹ ಸಹಜ ನಟನನ್ನು ಎಷ್ಟು ಚೆನ್ನಾಗಿ ಉಪಯೋಗಿಸಿಕೊಳ್ಳಬಹುದಾಗಿತ್ತು. ಇನ್ನು ಪ್ರಿಯಾಮಣಿ, ನಿಧಿ ಸುಬ್ಬಯ್ಯ, ಅವಿನಾಶ್, ಜಾಕಿ ಶರಾಫ್ ಪಾತ್ರ ಪೋಷಣೆಯೇ ಚೆನ್ನಾಗಿಲ್ಲ. ನಿಧಿ ಸುಬ್ಬಯ್ಯ ಅವರಿಗೆ ಪುನೀತ್ ಚಿತ್ರದಲ್ಲಿ ನಟಿಸುವ ಆಸೆ ಬಹಳ ಇತ್ತು. ಆದರೆ ಇದು ಕೇವಲ ಅವರ ಆಸೆ ಪೂರೈಸಿತು ಅಷ್ಟೆ.  ಇದರಿಂದ ಅವರಿಗೆ  ಏನೂ ಪ್ರಯೋಜನವಾದಂತಿಲ್ಲ. ರಂಗಾಯಣ ರಘು ಪಾತ್ರ ಕೂಡ ಅಷ್ಟೇ ಕೇವಲ ಮಾತು, ಅದೂ ಅರ್ಥವಿಲ್ಲದ ಬಡಬಡಿಕೆ. ಹಾಗಾಗಿ ಅವರ ಪಾತ್ರವೂ ಮನಸ್ಸಿಗೆ ನಿಲ್ಲುವುದಿಲ್ಲ. ಒಳ್ಳೆಯ ನಟರು, ದೊಡ್ಡ ಬ್ಯಾನರ್ ಮತ್ತು ಕನ್ನಡದ ಅತ್ಯಂತ ಜನಪ್ರಿಯ ನಟ ಇವೆಲ್ಲವನ್ನೂ ಇಟ್ಟುಕೊಂಡು ಒಂದು ಅತ್ಯದ್ಭುತ ಚಿತ್ರವನ್ನು ಕೊಡಬಹುದಾಗಿತ್ತು. ಆದರೆ ಸೂರಿ ಎಲ್ಲವನ್ನೂ ಹಾಳುಮಾಡಿಬಿಟ್ಟರು. ಸೂರಿ ನಾವು ನಿಮ್ಮನ್ನು ಕ್ಷಮಿಸುವುದಿಲ್ಲ. ಪುನೀತ್ ಅವರೇ ನಿಮ್ಮ ಮೇಲೆ ಬಹಳ ಜವಾಬ್ದಾರಿ ಇದೆ ಮತ್ತು ನಿಮ್ಮ ಮೇಲೆ ನಾವು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ನೀವು ನಮ್ಮನ್ನು ನಿರಾಸೆಗೊಳಿಸದಿರಿ.

ಪ್ರೇಮ್, ಸೂರಿ, ಯೋಗರಾಜ್ ಭಟ್, ಅವರುಗಳು ಹೀಗೇಕಾಗುತ್ತಿದ್ದಾರೆ ಎಂಬುದು ದೊಡ್ಡ ಪ್ರಶ್ನೆ. ನೀವುಗಳು ಯಶಸ್ವಿ ಚಿತ್ರಗಳನ್ನು ಕೊಟ್ಟವರು. ಆದರೆ ಈಗ ಎಲ್ಲಿ ಹೊಯಿತು ನಿಮ್ಮ  ಸೃಜನಶೀಲತೆ, ಕ್ರಿಯಾಶೀಲತೆ? ಏನೂ ಕೊಟ್ಟರೂ ಕನ್ನಡ ಜನ ನೋಡುತ್ತಾರೆ ಎಂಬ ಭ್ರಮೆಯೇ?  ಬರೀ ಗಿಮಿಕ್ ನಿಂದ ಚಿತ್ರವನ್ನು ಗೆಲ್ಲಿಸಲಾಗುವುದಿಲ್ಲ. ಕಥೆ, ಚಿತ್ರಕಥೆ , ಸಾಹಿತ್ಯ, ಸಂಗೀತ, ಛಾಯಾಗ್ರಹಣ, ನಟನೆ ಇವುಗಳು ಯಾವುದೇ ಚಿತ್ರಕ್ಕೂ ಬಹಳ ಮುಖ್ಯ. ಇದರ ಮೇಲೆ ನಿರ್ದೇಶಕನ ಸೃಜನಶೀಲತೆ ಮತ್ತು ಅವನು ಅದನ್ನು ಹೇಗೆ ಕಟ್ಟಿಕೊಡುವವನು ಎಂಬುದರ ಮೇಲೆ ಚಿತ್ರದ ಯಶಸ್ಸು ಅಡಗಿರುವುದು. ಇದರಲ್ಲಿ ಯಾವುದೊಂದು ಸರಿಯಾಗಿಲ್ಲದಿದ್ದರೂ ಚಿತ್ರ ಮಲಗಿಕೊಂಡು ಬಿಡುತ್ತದೆ. ಇದು ನಿಮಗೆ ಗೊತ್ತಿಲ್ಲದ ವಿಷಯವೇನಲ್ಲ, ಅದರಲ್ಲೂ ಜನಪ್ರಿಯ ನಟ ಆ ಚಿತ್ರದಲ್ಲಿದ್ದರೆ ಚಿತ್ರದ ತೂಕ ಹೆಚ್ಚುತ್ತದೆ ಮತ್ತು ಆ ಚಿತ್ರದ ಬಗ್ಗೆ ಜನರ ಕುತೂಹಲ ಸಹ ಅತ್ಯಂತ ಮೇಲ್ಮಟ್ಟದಲ್ಲಿರುತ್ತದೆ. ಆದರೂ ಯಾಕೆ ನೀವು ಹೀಗೆ ಮಾಡುವಿರಿ?  ಪ್ರೇಮ್ " ರಾಜ್ " ಚಿತ್ರವನ್ನು, ಭಟ್ಟರು " ಪರಮಾತ್ಮ " ಮತ್ತು ಸೂರಿ " ಅಣ್ಣಾ ಬಾಂಡ್ " ಚಿತ್ರವನ್ನು ಹಾಳು ಮಾಡಿಬಿಟ್ಟರು. ಈ ಮೂವರಿಗೂ ಪುನೀತ್ ಅವರ ಜನಪ್ರಿಯತೆ ಮತ್ತು ಅವರ ಸಹಜ ನಟನಾ ಕೌಶಲ್ಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದು ಬರಲಿಲ್ಲ. ಈ ಮೂವರಿಗೂ ಒಂದು ಭ್ರಮೆ ಆವರಿಸಿಕೊಂಡಂತಿದೆ. ನಾವು ಹೇಗೆ ಮಾಡಿದರೂ ಚಿತ್ರವನ್ನು ಕನ್ನಡ ಪ್ರೇಕ್ಷಕರು ನೋಡುತ್ತಾರೆ ಎಂದು. ಕ್ಷಮಿಸಿ, ಅಭಿಮಾನಿ ದೇವರುಗಳಿಗೆ ವರ ಕೊಡುವುದೊ ಗೊತ್ತು ಮತ್ತು ಶಾಪ ಕೊಡುವುದೂ ಗೊತ್ತು.

Tuesday 29 May 2012

ಜನರಿಕ್ ಔಷಧ ಮಳಿಗೆ

ಕಳೆದ ಭಾನುವಾರ ೨೭/೫/೧೨ ರಂದು ಪ್ರಸಾರವಾದ " ಸತ್ಯಮೇವ ಜಯತೆ " ಕಾರ್ಯಕ್ರಮವನ್ನು ನೋಡಿದವರಿಗೆ " ಜನರಿಕ್ ಡ್ರಗ್ಸ್ ಮಳಿಗೆ " ಬಗ್ಗೆ ಗೊತ್ತಿರುತ್ತದೆ. ನೋಡದೇ ಇರುವವರಿಗಾಗೆ ಜನರಿಕ್ ಓಷಧ ಮಳಿಗೆ ಎಂದರೆ ಏನು ಎಂಬ ಬಗ್ಗೆ ಚಿಕ್ಕ ಮಾಹಿತಿ. ಈಗ ನಾವು ಕೊಳ್ಳುತ್ತಿರುವ ಔಷಧಗಳನ್ನು ಜನರಿಕ್ ಔಷಧ ಮಳಿಗೆಯಲ್ಲಿ  ಕೊಂಡರೆ ನಮಗೆ ಅದು ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತದೆ. ನಾವು ಅದನ್ನೇ ಇತರ ಔಷಧ ಅಂಗಡಿಗಳಲ್ಲಿ ಕೊಂಡರೆ ಒಂದಕ್ಕಿಂತ ಹೆಚ್ಚಿನೆ ಬೆಲೆಗೆ ಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಕಾರ್ಯಕ್ರಮದಲ್ಲಿ ತೋರಿಸಿದಂತೆ ಸುಮಾರು ೨೩೦೦ ಬೆಲೆಯ ಔಷಧಿಗಳು ಈ ರೀತಿಯ ಜನರಿಕ್ ಔಷಧ ಮಳಿಗೆಗಳಲ್ಲಿ ಕೇವಲ ೩೫೦ ರೂಪಾಯಿಗಳಿಗೆ ದೊರಕುತ್ತದೆ.  ಕಾರ್ಯಕ್ರಮದ ಕೊನೆಯಲ್ಲಿ ಈ ರೀತಿಯ ಔಷಧ ಮಳಿಗೆಗಳು ಈಗ ಕೇವಲ ರಾಜಸ್ಥಾನ ರಾಜ್ಯದಲ್ಲಿ ಇದೆ. ಇದು ಇಡೀ ಭಾರತದಲ್ಲಿ ದೊರೆಯಬೇಕು ಎಂಬ ಸದಾಶಯದೊಂದಿಗೆ ಕಾರ್ಯಕ್ರಮ ಮುಗಿಯಿತು. ಒಂದು ಸೊಂತೋಷದ ಸುದ್ದಿ ಏನೆಂದರೆ ರಾಜ್ಯ ವೈದ್ಯ ಶಿಕ್ಷಣ ಇಲಾಖೆ  ಜನರಿಕ್ ಡ್ರಗ್ಸ್ ಮಳಿಗೆ  ಯನ್ನು ಪ್ರಾರಂ ಭಿಸುತ್ತಿದೆ. ಇಲ್ಲಿ ಜನರು ಶೇ.೫೦ರ ರಿಯಾಯಿತಿ ದರದಲ್ಲಿ ಔಷಧ ಪಡೆಯಬಹುದು ಎಂಬ ಸುದ್ದಿ ಇದೆ (೨೬/೫/೧೨ ಪತ್ರಿಕೆಯಲ್ಲಿ)  ನಮ್ಮ ರಾಜ್ಯದ ೧೦ ವೈದ್ಯ ಕಾಲೇಜಿನಲ್ಲಿ ಜೂನ್ ೧೫ ರಿಂದ ಶೇ.೫೦ರ ರಿಯಾಯಿತಿ ದರದಲ್ಲಿ ಔಷಧ ದೊರಕಲಿದೆ. ಅದು ಯಾವ ಕಾಲೇಜು ಮತ್ತಿತರ ವಿವರಗಳು ಯಾರಿಗಾದರೂ ದೊರಕಿದರೆ ಅವರು ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡು ಇತರರಿಗೆ ತಿಳಿಸಿದರೆ ಬಹಳ ಪ್ರಯೋಜನವಾಗುವುದು.

Monday 28 May 2012

ರೆಬೆಲ್ ಸ್ಟಾರ್ " ಅಂಬರೀಷ್ "

" ಏ ಬುಲ್ ಬುಲ್ ಮಾತಾಡಕ್ಕಿಲ್ವಾ? " ಅಂತ ಕನ್ನಡ ಚಿತ್ರರಂಗಕ್ಕೆ ಪಡ್ಡೆ ಹುಡುಗನಾಗಿ ಕಾಲಿಟ್ಟ ಅಂಬಿ ನೋಡ ನೋಡುತ್ತಲೇ " ಇಲ್ಲೇ ಸ್ವರ್ಗ, ಇಲ್ಲೇ ನರಕ ಮೇಲೇನಿಲ್ಲಾ ಸುಳ್ಳು " ಎಂಬ ಅಧ್ಯಾತ್ಮದ ಪಾಠವನ್ನು ಮಾಡಿಬಿಟ್ಟರು. ಆಮೇಲೆ ಸ್ವಾಭಿಮಾನ ಅಡ್ಡ ಬಂದಾಗ "ಕುತ್ತೇ, ಕನ್ವರ್ ನಹೀ ಕನ್ವರ್ ಲಾಲ್ ಬೊಲೊ " ಎಂದು ಘರ್ಜಿಸಿದಾಗ ಎದುರಾಳಿ ಒಂದೇ ಏಟಿಗೆ ಸುಸ್ತು.  ಈ ೪೦ ವರ್ಷಗಳಲ್ಲಿ ಅನೇಕ ಏಳು ಬೇಳುಗಳನ್ನು ಕಂಡ ಅಂಬಿ ಯಾವುದಕ್ಕೂ/ಯಾರಿಗೂ ಕೇರ್ ಮಾಡದ ವ್ಯಕ್ತಿತ್ವ ಅವರದು. ಅನೇಕ ನಿರ್ಮಾಪಕರು ಅವರು ಒಪ್ಪಿಕೊಂಡ ದುಡ್ಡು ಕೊಡದೇ ಹೊದರೂ ಅವರು ಯಾರನ್ನೂ ದೂಷಿಸಲಿಲ್ಲ. ಅವರ ಯಾವ ಚಿತ್ರಗಳು  ನಿರ್ಮಾಪಕನಿಗೆ ಕೈ ಕಚ್ಚಲಿಲ್ಲ.

ಕನ್ನಡ ಚಿತ್ರರಂಗದಲ್ಲಿ ಅಂಬರೀಷ್ ಅವರಿಗೆ ಒಂದು ವಿಶಿಷ್ಟ ಸ್ಠಾನವಿದೆ. ಅಂಬಿ ಎಂದರೆ ಕಣ್ಣ ಮುಂದೆ ಬರುವುದು ಅವರ ಸ್ನೇಹ, ಹಾಸ್ಯ, ಕೀಟಲೆ, ಕೊಡುಗೈ ದಾನಿ. ಯಾವುದೇ ಸಮಸ್ಯೆ ಚಿತ್ರರಂಗದಲ್ಲಿ ಕಂಡುಬಂದರೆ ಅಲ್ಲಿ ಅಂಬಿಯ ಮಾತೇ ಅಂತಿಮ. ಚಿತ್ರರಂಗದಲ್ಲಿ ಅವರ ಮಾತನ್ನು ತಳ್ಳಿಹಾಕುವ ಧೈರ್ಯ ಯಾರಿಗೂ ಇಲ್ಲ. ಚಿತ್ರ ರಂಗದ ಒಳಹೊರಗನ್ನು ಚೆನ್ನಾಗಿ ಬಲ್ಲ ಅಂಬಿಯ ವ್ಯಕ್ತಿತ್ವದ ಮುಂದೆ ಬೇರೆಯವರ ಮಾತು ಗೌಣ.  ಅಂಬರೀಷ್ ಅವರು ತಮ್ಮ ಕಲಾ ಜೀವನದಲ್ಲಾಗಲೀ, ನಿತ್ಯ ಜೀವನದಲ್ಲಾಗಲೀ ಹೆಚ್ಚು ತಲೆ ಕೆಡಿಸಿಕೊಳ್ಳದ ವ್ಯಕ್ತಿತ್ವ ಅವರದು. ಅವರು ಇನ್ನೂ ಹೆಚ್ಚಿನ ಗಮನ ನಟನೆಗೆ ಕೊಡಬಹುದಾಗಿತ್ತೇನೋ? ಅವರ ಸ್ನೇಹಿತರ ಬಳಗ ಬಹಳ ದೊಡ್ಡದು. ಅವರಿಗೆ ಇಡೀ ಭಾರತದಲ್ಲಿ ಮತ್ತು ಹೊರ ದೇಶದಲ್ಲಿ ಸಾವಿರಾರು ಸ್ನೇಹಿತರಿದ್ದಾರೆ. ಸ್ನೇಹ ಎಂದರೆ ಇನ್ನೊಂದು ಹೆಸರೇ ಅಂಬರೀಷ್.

ಪುಟ್ಟಣ್ಣನವರ ಹೆಚ್ಚಿನ ಚಿತ್ರಗಳಲ್ಲಿ ನಟಿಸಿರುವ ಅಂಬರೀಷ್ ತಮ್ಮ ರೆಬೆಲ್ ಪಾತ್ರದಿಂದ ನಮ್ಮ ಮನ ಸೊರೆಗೊಂಡವರು ನಾಗರಹೊಳೆ ಚಿತ್ರದ ಅಂಥೋಣಿ, ನಾಗರಹಾವು ಚಿತ್ರದ ಜಲೀಲ, ಕಿಲಾಡಿ ಜೊಡಿ ಚಿತ್ರದ ಕರಾಟೆ ಗುರು, ಶುಭ ಮಂಗಳ ಚಿತ್ರದ ಮೂಗ, ರಂಗನಾಯಕಿಯ ಪಾತ್ರ,  ಹೀಗೆ ಬಂದು ಹಾಗೆ ಹೋಗುವ ಪಾತ್ರದಲ್ಲೂ ಅಂಬಿ ಸೂಪರ್.  ಅವರ  ಚಿತ್ರ ಜೀವನದಲ್ಲಿ " ಅಂತ " ಮತ್ತು  " ಚಕ್ರವ್ಯೂಹ " ಸರ್ವಕಾಲೀನ ಯಶಸ್ವಿ ಚಿತ್ರಗಳು. ಅವರು ಸೌಮ್ಯ ಚಿತ್ರಗಳಲ್ಲಿ ನಟಿಸಿದ್ದು ಬಹಳ ಕಡಿಮೆ. ಅದರಲ್ಲಿ  ಅತ್ಯಂತ ಗರ್ಮನಾರ್ಹವಾದದ್ದು " ಒಲವಿನ ಉಡುಗೊರೆ " ಮತ್ತು " ಹೃದಯ ಹಾಡಿತು ". ಅದನ್ನು ನೋಡಿದ ಪ್ರೇಕ್ಷಕರು ಅಂಬಿಯ ಇನ್ನೊಂದು ನಟನಾ ಮುಖವನ್ನು ನೋಡಿದರು.

ಮನೆಯಲ್ಲಿ ಹಿರಿಯರಿಗೆ ೬೦ ವರ್ಷತುಂಬಿದಾಗ  ಅವರ ಬಂಧು, ಬಳಗ, ಸ್ನೇಹಿತರು ಎಲ್ಲರೂ ಒಟ್ಟಾಗಿ ಸೇರುವುದು ವಾಡಿಕೆ. ಇಂದು ಕನ್ನಡ ಚಿತ್ರರಂಗದ ಹಿರಿಯಣ್ಣ ಅಂಬರೀಷ್ ಅವರಿಗೆ ೬೦ ವರ್ಷದ ಸಂಭ್ರಮ. ಇದರ ಜೊತೆಗೆ ಅವರು ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿ ೪೦ ವರ್ಷಗಳಾಗುತ್ತವೆ. ಕನ್ನಡ ಚಿತ್ರರಂಗವು ಮೂರು ದಿನ ಸ್ವಯಂಘೋಷಿತ ಬಂದ್ ಮಾಡಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪಾಲ್ಗೊಳ್ಳಲ್ಲಿದೆ.  ಅಂಬಿಯನ್ನು ಹರಸಲು ಅಕ್ಕ ಪಕ್ಕದ ರಾಜ್ಯಗಳಿಂದ ಹೆಸರಾಂತ ನಟರು, ನಿರ್ದೇಶಕರು, ಸ್ನೇಹಿತರು ಬರಲಿದ್ದಾರೆ . ಅಂಬಿ ಅಭಿಮಾನಿಗಳಿಗೆ  ಇದು ಮನೆ ಹಬ್ಬ ಇದ್ದಂತೆ. ಹುಡುಗಾಟದ ಹುಡುಗ ಅಂಬಿಗೆ " ಹುಟ್ಟು ಹಬ್ಬದ ಶುಭಾಶಯ " ಹೇಳಲು ಮರೆಯದಿರಿ.

ಸರ್, ನೀವು ಇನ್ನಾದರೂ ಸಿಗರೇಟ್ ಕಮ್ಮಿ ಮಾಡಿ. ನಿಮ್ಮನ್ನು ಪ್ರೀತಿಸುವ ಅಭಿಮಾನಿಗಳಿಗಾದರೂ ನೀವು ಸಿಗರೇಟ್ ಬಿಡಲೇಬೇಕು. ಇದು ನಮ್ಮ ಒತ್ತಾಯ ಕೂಡ ಹೌದು. ಇಲ್ಲ  ಅಂತ ದಯವಿಟ್ಟು ಹೇಳಬೇಡಿ. ನೀವು ಒಮ್ಮೆ ಮಾತು ಕೊಟ್ಟರೆ ಮುಗೀತು. ಅದನ್ನು ಯಾವ ಕಾರಣಕ್ಕೂ ತೆಗೆಯುವುದಿಲ್ಲ. ನಮಗೆ ನೀವು ಬೇಕು. ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ. ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ದೇವರು ಸುಖ, ಸಂತೋಷ, ಆರೋಗ್ಯ, ನೆಮ್ಮದಿ ಎಲ್ಲವನ್ನೂ ಕೊಟ್ಟು ಕಾಪಾಡಲಿ. ನಿಮಗೆ ಮತ್ತೊಮ್ಮೆ ಜನ್ಮ ದಿನದ ಶುಭಾಷಯಗಳು.

Saturday 26 May 2012

ಕನ್ನಡ ಲಿಪಿಗಳು:

ಕನ್ನಡದಲ್ಲಿ ಇತ್ತೀಚೆಗೆ ಕನ್ನಡದ ಲಿಪಿಗಳನ್ನು ಸರಳೀಗೊಳಿಸಬೇಕು, ಕನ್ನಡದಲ್ಲಿ ಜಾಸ್ತಿ ಅಕ್ಷರಗಳಿವೆ ಅದನ್ನು ಕಡಿಮೆ ಮಾಡಬೇಕು. ಒತ್ತಕ್ಷರಗಳನ್ನು ಕಡಿಮೆ ಮಾಡಬೇಕು ಅವುಗಳನ್ನು ಬಳಸುವುದು ಕಷ್ಟ ಎಂಬ ವಾದ ವಿವಾದಗಳು ಹರಿದು ಬರುತ್ತಿವೆ. ಕೆಲವರಿಗೆ " ಶ, ಷ, ಸ, ಹ " ಮುಂತಾದ ಲಿಪಿಗಳು ಬೇಡ, ಮತ್ತೆ ಕೆಲವರಿಗೆ ಮಹಾ ಪ್ರಾಣ ಬೇಡ.  ಇದು ಇಂದಿನ ಮಾತಲ್ಲ. ವರ್ಷಕ್ಕೊಂದು ಬಾರಿ ಹೀಗೆ ಸುಮ್ಮನೆ ಜನ ಸಾಮಾನ್ಯರಲ್ಲಿ ಗೊಂದಲವೆಬ್ಬಿಸುತ್ತಿದ್ದಾರೆ. ತಮಿಳಿನಲ್ಲಿ ’ಕ " ಅಕ್ಷರವಿಲ್ಲ, ಹಾಗಾಗಿ ಕನ್ನಡಕ್ಕೊ " ಕ " ಅಕ್ಷರ ಬೇಡ. " ಕ " ಬದಲಿಗೆ  " ಗ " ಅಕ್ಷರವನ್ನು ಬಳಸೋಣ ಎಂಬ ಪುಕ್ಕಟ ಸಲಹೆ.   ಅವರಿಗೆ " ಕ " ಅಕ್ಷರ ಬೇಡ ಎನಿಸಿದರೆ ಅದು ಅವರ ಇಚ್ಚೆ.  (ಅವರು  " ವಿನಾಯಕ "ನಿಗೆ " ವಿನಾಯಗ " ಎಂದು ಹೇಳಿದರೆ ನಾವು ಹಾಗೆಯೇ ಹೇಳಬೇಕೇನು)  " ಕನ್ನಡ " ಕ್ಕೆ   ಗನ್ನಡ ಎನ್ನಬೇಕೇನು? ನಾವು ಅವರಂತೆ ಯಾಕಾಗಬೇಕು? ಪ್ರತಿಯೊಂದು ಭಾಷೆಗೊ ಅದರದೇ ಆದ ಲಯ, ಸೊಗಸು, ವಯ್ಯಾರ, ಒನಪು ಇರುತ್ತದೆ. ಪ್ರತಿಯೊಂದು ಭಾಷೆಯೂ ಬೇರೆ ಬೇರೆಯಾಗಿದ್ದರೇನೇ ಚೆನ್ನ, ಅದೇ ವೈವಿದ್ಯತೆ. ಅನೇಕ ಭಾಷಾ ವಿಜ್ಞಾನಿಗಳು ಕನ್ನಡ ಒಂದು ಅತ್ಯದ್ಭುತ ಭಾಷೆ, ಅದು ವೈಜ್ಞಾನಿಕವಾಗಿ ೯೯.೯೯% ಸರಿಯಾಗಿದೆ. " ನಾವು ಏನನ್ನು ಹೇಳುತ್ತೇವೆಯೋ ಅದನ್ನೇ ಕನ್ನಡದಲ್ಲಿ ಬರೆಯಬಹುದು ಮತ್ತು ಏನನ್ನು ಬರೆಯುತ್ತೇವೆಯೋ ಅದನ್ನೇ ಓದಬಹುದು. ಇದು ಜಗತ್ತಿನಲ್ಲಿ ಕೇವಲ ಕೆಲವೇ ಕೆಲವು ಭಾಷೆಗಳಿಗೆ ಅನ್ವಯವಾಗುತ್ತದೆ "  ಎಂದು ಅನೇಕ ಬಾರಿ ಹೇಳಿದ್ದಾರೆ. ಅದು ಸತ್ಯ ಕೂಡ ಹೌದು.  ನಾವುಗಳು ಸ್ವಲ್ಪ ಸರಿಯಾಗಿ ಯೋಚಿಸಿದರೆ ನಮಗೆ ಅದು ಸರಿ ಎಂದು ಕೂಡ ಅನ್ನಿಸುತ್ತದೆ. ಕೆಲವರಿಗೆ ಅದೇಕೋ ಅದು ಪಥ್ಯವಾದಂತಿಲ್ಲ.  ಕನ್ನಡದಲ್ಲಿ ಸಂಖ್ಯೆಗಳನ್ನೂ ಸಹ ಕನ್ನಡದ ಲಿಪಿಯಲ್ಲೇ ಬರೆಯಬಹುದು. ಇದೂ ಸಹ ಕೆಲವೇ ಭಾರತೀಯ ಭಾಷಗಳಲ್ಲಿ ಇಲ್ಲ.

ಮೊದಲು ನಮ್ಮ ವರ್ಣಮಾಲೆಯಲ್ಲಿ ೫೨ ಅಕ್ಷರಗಳು ಇದ್ದವು. ಕ್ರಮೇಣ ಅದನ್ನು ೫೦ ಕ್ಕೆ ಇಳಿಸಿದರು. ( " ೠ, ಆಃ " ಬೇಡ ಎಂದು.)  ಈಗ ೪೯ ಕ್ಕೆ ಇಳಿಸಿದ್ದಾರೆ. ( " ಜ್ಞ" ಬೇಡ ಎಂದು.) ಮುಂದೆ ಅದನ್ನು ಎಷ್ಟಕ್ಕೆ ಇಳಿಸುತ್ತಾರೋ ಗೊತ್ತಿಲ್ಲ. ಈಗ ನಾವು ಬಳಸುತ್ತಿರುವ ಕನ್ನಡದಿಂದ ಯಾರಿಗಾದರೂ ತೊಂದರೆ  ಉಂಟಾಗಿದ್ದರೆ, ಅವರು ಕನ್ನಡವನ್ನು ಚೆನ್ನಾಗಿ ಕಲಿತಿಲ್ಲ ಅಷ್ಟೇ. ಸ್ವಲ್ಪ ಪ್ರಯತ್ನ ಪಟ್ಟರೆ ಕಲಿಯಬಹುದು. ಅದು ಮಹಾ ದೊಡ್ಡ ವಿಷಯ ಅಲ್ಲ. ಈಗಿರುವ ಕನ್ನಡವನ್ನು ನಾವೆಲ್ಲೆರೂ ಕಲಿತಿಲ್ಲವೇ? ನಮ್ಮ ಮಕ್ಕಳೂ ಸಹ ಇದೇ ಕನ್ನಡವನ್ನು ಕಲಿತಿರುವುದು.  ಚಿಕ್ಕ ಮಕ್ಕಳೂ ಸಹ ಕಲಿಯುವುದರಲ್ಲಿ ಹಿಂದೆ ಬಿದ್ದಿಲ್ಲ. ಮಕ್ಕಳು ಇನ್ನೂ ಚೆನ್ನಾಗಿ ಬೇಗ ಅರ್ಥಮಾಡಿಕೊಳ್ಳುತ್ತಾರೆ. ನಾವು ಮೊದಲು ಸರಿಯಾಗಿ ಕಲಿತು  ನಂತರ ಅವರಿಗೆ ಕಲಿಸಬೇಕು ಅಷ್ಟೇ. ಇದನ್ನೇ ಕಷ್ಟ ಎಂದರೆ ಹೇಗೆ? ಒಂದೊಂದೇ ಲಿಪಿಯನ್ನು ಕಡಿಮೆ ಮಾಡಿಕೊಳ್ಳೂತ್ತಾ, ಕೊನೆಗೆ ಕನ್ನಡಕ್ಕೆ ಲಿಪಿ ಯಾಕೆ ಬೇಕು ಎಂಬ ವಾದ ಬಂದರೂ ಆಶರ್ಯವಿಲ್ಲ. ಈಗಿರುವ ಕನ್ನಡ ಹಳಗನ್ನಡ ಅಲ್ಲ, ಬಹಳ ಸರಳವಾಗಿದೆ. ಓದಲಿಕ್ಕಾಗಲೀ ಅಥವಾ ಬರೆಯಲಿಕ್ಕಗಲೀ ಕಷ್ಟ ಪಡಬೇಕಾಗಿಲ್ಲ. ಸ್ವಲ್ಪ ಪ್ರಯತ್ನ ಪಟ್ಟರೆ ಎಲ್ಲವೂ ಸರಳ, ಸುಲಭ. ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ಭಾಷೆಯನ್ನಗಲೀ ಕಲಿಯಲು ಮೊದಲು ಪ್ರೀತಿ, ಅಭಿಮಾನವಿದ್ದರೆ ಸಾಕು. ಅದಿಲ್ಲದಿದ್ದರೆ ಎಲ್ಲವೂ ಕಷ್ಟ. ಭಾಷಾ ವಿದ್ವಾಂಸರು, ವಿಜ್ಞಾನಿಗಳು ಈ ಮೊದಲೇ ನಮಗೆ ಸುಂದರ, ಸುಮಧುರ ಲಿಪಿಯನ್ನು ಕೊಟ್ಟಿರಬೇಕಾದರೆ ನಾವು ಅದನ್ನು ಸರಿಯಾಗಿ ಉಪಯೋಗಿಸಿ ಅದನ್ನು ಜೀವಂತವಾಗಿ ಇಡಲು ಪ್ರಯತ್ನಿಸೊಣ. ಅದನ್ನು ಹಾಳು ಮಾಡುವುದು ಎಷ್ಟು ಸರಿ? ಇದರ ಬದಲು ಕನ್ನಡವನ್ನು ಆಂಗ್ಲ ಲಿಪಿಯಲ್ಲೇ ಬರೆಯಬಹುದಲ್ಲಾ? ಯಾಕೆ ಇಷ್ಟು ಕಷ್ಟ ಪಡಬೇಕು?

ಕನ್ನಡವು ಹಳಗನ್ನಡದಿಂದ ಸಾಕಷ್ಟು ರೂಪಾಂತರ ಹೊಂದಿ ನಡುಗನ್ನಡವಾಗಿ ಈಗ ಸರಳಗನ್ನಡವಾಗಿದೆ. ಇನ್ನಷ್ಟು ಅದನ್ನು ಎಳೆಯುವುದು ಬೇಡ. ಮತ್ತಷ್ಟು ಎಳೆದರೆ ತುಂಡಾಗುವುದು. " ಕನ್ನಡ ಒಂದು ರಾಷ್ಟ್ರೀಯ ಭಾಷೆ. ಅದು ತನ್ನದೇ ಆದ ಭಾಷೆ ಸಂಪತ್ತನ್ನು ಹೊಂದಿದೆ, ಹೀಗಾಗಿ ಬದಲಾವಣೆಯ ಆಲೋಚನೆಯೇ ಸರಿಯಲ್ಲ. ಭಾಷೆಯನ್ನು ಅದರ ಬೆಳವಣಿಗೆಯ ದೃಷ್ಟಿಯಿಂದ ನೋಡಬೇಕು. ಲಿಪಿ ಎಂಬುದು ಒಂದು ಸಂಸ್ಕೃತಿ. ಇದನ್ನು ಬದಲಿಸಿದರೆ ಸಂಸ್ಕೃತಿಯನ್ನೇ ಬದಲಿಸಿದಂತೆ " ಎಂದು ಡಾ.ಚಿದಾನಂದ ಮೂರ್ತಿಯವರು ಸರಿಯಾಗಿಯೇ ಹೇಳಿದ್ದಾರೆಂದು ನನ್ನ ಭಾವನೆ. ಕನ್ನಡದಲ್ಲಿ ಆಗಬೇಕಾದ ಕೆಲಸಗಳು ಬಹಳ ಇವೆ. ಆ ಕೆಲಸಗಳನ್ನು ಮಾಡುವುದಕ್ಕೆ ಪ್ರಯತ್ನಿಸೋಣ. ಅದು ಸರಿಯಿಲ್ಲ, ಇದು ಸರಿಯಿಲ್ಲ ಅಂತ ಹೇಳಿ ನಾವುಗಳು ನಿಂತ ಜಾಗದಲ್ಲೇ ಸುತ್ತಾಡುತ್ತಿದ್ದೇವೆ. ಇತರ ಭಾಷಿಕರು ನಮ್ಮಿಂದ ಈಗಾಗಲೇ ಬಹಳ ದೂರ ಸಾಗಿದ್ದಾರೆ. ನಾವೆಲ್ಲರೂ ಹೀಗೆ ತಪ್ಪುಗಳನ್ನೇ ಹುಡುಕುತ್ತಾ ಕಾಲ ಕಳೆಯುತ್ತಿದ್ದೇವೆ ಅಂತ ನನಗನಿಸುತ್ತದೆ.




Friday 25 May 2012

ಯೋಜನೆಗಳು

ನಮ್ಮ ರಾಜ್ಯ/ದೇಶ, ಜನ ಸಾಮಾನ್ಯರಿಗೆ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಆದರೆ ಆ ಯೋಜನೆಗಳು ನಿಜವಾಗಿ ಕಾರ್ಯರೂಪಕ್ಕೆ ಬಂದರೆ ಎಷ್ಟು ಚೆನ್ನಾಗಿರುತ್ತಿತ್ತು, ಆದರೆ ಅದು ಹಾಗಾಗಿಲ್ಲ. ಇದು ನಮ್ಮ ದೇಶದ/ರಾಜ್ಯದ ಸಾಮಾನ್ಯ ಪ್ರಜೇಗೂ ಗೊತ್ತು. ಆ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದರಲ್ಲಿ ನಮ್ಮ ಅಧಿಕಾರಿಗಳು ಎಡವಿದ್ದಾರೆ. ಒಮ್ಮೆ ರಾಜೀವ್ ಗಾಂಧಿಯವರು, ನಾನು ಒಂದು ರೂಪಾಯಿಯನ್ನು ಯಾವುದಾದರೂ ಯೋಜನೆಗೆ ಬಿಡುಗಡೆ ಮಾಡಿದರೆ ಅದು ಜನ ಸಮಾನ್ಯರಿಗೆ ತಲುಪುವಾಗ ಕೇವಲ ೧೬ ಪೈಸೆಗಳಾಗುವುವು ಎಂದು ಒಮ್ಮೆ ಹೇಳಿದ್ದರು. ಯೋಜನೆಗಳಿಗಾಗಿ ಬಿಡುಗಡೆಯಾಗುವ ಪ್ರತಿಯೊಂದು ಪೈಸೆಯೂ ನಿಜವಾದ ಅರ್ಥದಲ್ಲಿ ಉಪಯೋಗಕ್ಕೆ ಬರುವಂತಿದ್ದರೆ ನಮ್ಮ ರಾಜ್ಯ/ದೇಶ, ಇಡೀ ಪ್ರಪಂಚದಲ್ಲೇ ಮೊದಲ ಸ್ಥಾನದಲ್ಲಿರುತ್ತಿತ್ತು.  ಅನೇಕ ಯೋಜನೆಗಳು ಕೇವಲ ದುಡ್ಡು ತಿನ್ನುವುದಕ್ಕಾಗಿಯೇ ರೂಪಗೊಂಡತಹವದ್ದು.  ನಮ್ಮ ರಾಜ್ಯ/ದೇಶದ ಯಾವುದೇ ಯೋಜನೆಗಳನ್ನು ನೋಡಿ, ಅನೇಕ ಯೋಜನೆಗಳು ಪ್ರಾರಂಭದಲ್ಲಿ ತುಂಬಾ ಚೆನ್ನಾಗಿಯೇ ಇರುತ್ತವೆ, ಕ್ರಮೇಣ ಹಾದಿ ತಪ್ಪುತ್ತದೆ. ಉದಾಹರಣೆಗೆ: ಖಾಸಗಿ ಶಾಲೆಯಲ್ಲಿ ೨೫% ಬಡ ಮಕ್ಕಳಿಗೆ ಶಿಕ್ಷಣ, ಮಕ್ಕಳಿಗೆ ಬಿಸಿಯೂಟ, ರೈತರಿಗೆ ೨-೪% ಸಾಲ, ಗೊಬ್ಬರಕ್ಕೆ ಸಹಾಯಧನ, ಉಚಿತ ಶಿಕ್ಷಣ/ಆರೊಗ್ಯ, ಆಶ್ರಯ, ಭಾಗ್ಯಲಕ್ಷಿ ಯೋಜನೆಗಳು, ಮಕ್ಕಳಿಗೆ ಶಾಲೆಗೆ ಹೋಗಲು ಸೈಕಲ್, ಹೆಣ್ಣು ಮಕ್ಕಳಿಗೆ ಉಚಿತ ಹೊಲಿಗೆ ಯಂತ್ರ, ಸ್ವಂತ ಉದ್ಯೋಗಕ್ಕಾಗಿ ಸಾಲ, ಹೀಗೆ  ಎಲ್ಲವೂ ಚೆನ್ನಾಗಿದೆ, ಆದರೆ ಅದು ಕೇವಲ ಕಾಗದದ ಮೇಲೆ. ನಿಜವಾಗಿ ಅದು ದೊರಕ ಬೇಕಾದವರಿಗೆ ದೊರಕಿದರೆ ಚೆನ್ನ. ಸಾರ್ವಜನಿಕರು ಇದರ ಬಗ್ಗೆ ಸರಿಯಾಗಿ ತಿಳಿದುಕೊಂಡು ಇಂತಹ ಯೋಜನೆಗಳನ್ನು ತಮ್ಮ ಉಪಯೋಗಕ್ಕಾಗಿ ಬಳಸಿಕೊಳ್ಳಬೇಕು. ಕೆಲವರು ಇದರ ಪ್ರಯೋಜನವನ್ನೂ ಪಡೆದುಕೊಂಡಿದ್ದಾರೆ. ಆದರೆ ಸಾಮಾನ್ಯವಾಗಿ ಅದು ರಾಜಕೀಯ ವ್ಯಕ್ತಿಗಳ ಹಿಂಬಾಲಕರಿಗಾಗಿ ಉಪಯೋಗವಾಗುತ್ತಿದೆ.  ಅನೇಕ ಕಾರಣಗಳಿಂದಾಗಿ ಅದು ತಲಪಬೇಕಾದ ಜನರಿಗೆ ತಲಪುವುದಿಲ್ಲ. ಎಲ್ಲೆಲ್ಲೂ ಕೇವಲ ರಾಜಕೀಯ ಕಾರಣಗಳೇ ತುಂಬಿರುತ್ತದೆ. ಅದರಿಂದ ನಮಗೇನು ಲಾಭ ಸಿಗುತ್ತದೆ ಎಂಬುದರ ಮೇಲೆಯೇ ಅದು ಅವಲಂಬಿಸಿರುತ್ತದೆ.

Wednesday 23 May 2012

"ಇರುವುದೆಲ್ಲವ ಬಿಟ್ಟು ಇರದಿರುವದೆರೆಡೆಗೆ ಚೇತನ"

ಪಾಕೀಸ್ತಾನದಲ್ಲಿ ಬಾಲೀವುಡ್ ಚಿತ್ರಗಳಿಂದ ನಮ್ಮ ಚಿತ್ರಗಳಿಗೆ ಹೊಡೆತ ಬೀಳುತ್ತಿದೆ, ಆದ್ದರಿಂದ ಬಾಲೀವುಡ್ ಚಿತ್ರಗಳನ್ನು ನಿಷೇದಿಸಿ ಎಂದು ಕೂಗು ಹಬ್ಬಿದೆ. ಈಗ ಹಾಲೀವುಡ್ ಚಿತ್ರಗಳು ಹಿಂದಿಗೆ ಡಬ್ ಆಗಿ ಭಾರತದಲ್ಲಿ ಬಿಡುಗಡೆ ಯಾಗುತ್ತಿವೆ.  ಇಂತಹ ಡಬ್ ಆದ ಚಿತ್ರಗಳಿಂದ ಮೂಲ ಹಿಂದಿ ಚಿತ್ರಕ್ಕೆ ಧಕ್ಕೆ ಉಂಟಾಗುತ್ತಿದೆ. ಆದ್ದರಿಂದ ಡಬ್ ಆದ ಹಾಲೀವುಡ್ ಚಿತ್ರಗಳನ್ನು ನಿಷೇದಿಸಿ ಎಂದು ಮಹೇಶ್ ಭಟ್ ಮುಂತಾದ ಚಿತ್ರ ನಿರ್ದೇಶಕರು ಕೂಗೆಬ್ಬಿಸಿದ್ದಾರೆ. ಹಿಂದಿಯ ನಿರ್ಮಾಪಕರು ಕೂಡ ಇವರಿಗೆ ಜೊತೆಗೂಡಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸೂಕ್ತ ವೇದಿಕೆ ಸಹ ಸಿದ್ದವಾಗುತ್ತಿದೆ. ಡಬ್ಬಿಂಗ್ ನಿಷೇದಿಸುವಂತೆ  ಕೇಂದ್ರ ಸಚಿವಾಲಯದ ಮೇಲೆ ಒತ್ತಡ ಹೇರಲು ಯೋಜನೆ ಹಾಕಿಕೊಳ್ಳುತ್ತಿದ್ದಾರೆ. ಆಂಧ್ರ ಪ್ರದೇಶದ ವಾಣಿಜ್ಯ ಮಂಡಲಿಯ ಅಧ್ಯಕ್ಷ ಸುರೇಶ್ ಬಾಬು ಡಬ್ಬಿಂಗ್ ವಿರೋಧಿ ನಿಲುವು ತಾಳಿದ್ದಾರೆ. ಇಂತಹ ಚಿತ್ರಗಳಿಂದ ನಮ್ಮ ಮಾರುಕಟ್ಟೆಗೆ ಹೊಡೆತ ಎಂದು ಹೇಳುತ್ತಾರೆ. ಮಲೆಯಾಳಂ ಚಿತ್ರರಂಗದಲ್ಲೂ ಡಬ್ಬಿಂಗ್ ನಿಷೇದಿಸಬೇಕೆಂಬ ಕೂಗು ಕೇಳಿಬರುತ್ತಿದೆ. ಒಂದೆಡೆ ಹಿಂದಿ, ತೆಲುಗು, ಮಲೆಯಾಳಂ ಚಿತ್ರರಂಗದವರು ಡಬ್ ಚಿತ್ರಗಳ ವಿರೋಧಿಗಳಾಗುವ ಹೊತ್ತಿಗೆ ಕನ್ನಡದಲ್ಲಿ ಡಬ್ ಚಿತ್ರಗಳು ಬೇಕು ಎಂಬ ಕೂಗು. ಇದಕ್ಕಲ್ಲವೇ ಕವಿ ಹೇಳಿರುವುದು "ಇರುವುದೆಲ್ಲವ ಬಿಟ್ಟು ಇರದಿರುವದೆರೆಡೆಗೆ ಚೇತನ" ಎಂದು.  ಮಿಕ್ಕ ವಿವರಗಳಿಗಾಗಿ ೨೦/೪/೧೨ ರ  (www.vijayanextepaper.com) ನೋಡಿ.

Tuesday 22 May 2012

ವಿಚ್ಚೇದನ ಸಮಸ್ಯೆ:

ನನ್ನ ಗಂಡ ಮದುವೆಯಾಗಿ ಎರಡು ತಿಂಗಳಾದರೂ ಫೇಸ್ ಬುಕ್ ನಲ್ಲಿ ತಾನು ಮದುವೆಯಾದ ಸುದ್ದಿಯನ್ನು ಅಪ್ ಲೋಡ್ ಮಾಡದ ಕಾರಣ ನನಗೆ ಅವನಿಂದ ವಿಚ್ಚೇದನ ಬೇಕು" ಎಂದು ಯುವತಿಯೊಬ್ಬಳು ನ್ಯಾಯಾಲಯದಲ್ಲಿ ಅರ್ಜಿಯನ್ನು ಹಾಕಿಕೊಂಡಿರುವ ಸುದ್ದಿ ಟಿ.ವಿಯಲ್ಲಿ ನೋಡಿ ವಿಚಿತ್ರವೆನಿಸಿತು. ಇಂದು ವಿಚ್ಚೇದನ ಸಮಸ್ಯೆ ಮಹಾನಗರಗಳಷ್ಟೆ ಅಲ್ಲ ಸಣ್ಣ ಪುಟ್ಟ ನಗರಗಳನ್ನೂ ಕಾಡುತ್ತಿದೆ. ಇಂದಿನ ಜನಾಂಗದ ತರುಣ/ತರುಣಿಯರು ವಿದ್ಯಾವಂತರು, ಬುದ್ದಿವಂತರು, ಆರ್ಥಿಕವಾಗಿಯೂ ಸಹ ತಮ್ಮ ಕಾಲಮೇಲೆ ನಿಲ್ಲಬಲ್ಲಂತವರು. ಸ್ವಲ್ಪ ತಾಳ್ಮೆ, ವಿಶ್ವಾಸ, ಪ್ರೀತಿಯಿಂದ ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಜೀವನ ಸಾಗಿಸಿದರೆ ಅವರವರ ತಂದೆ ತಾಯಿಯರು ಕೊನೆಕಾಲದಲ್ಲಿ ನೆಮ್ಮದಿಯಿಂದ ಇರುವರೆನೋ? ಮದುವೆಯಾಗಿ ಮಗಳು ಒಂದೆರೆಡು ತಿಂಗಳಿಗೇ ತನ್ನ ತವರು ಮನೆಗೆ ಜಗಳವಾಡಿ ಕೊಂಡು ಬಂದರೆ ಅವರ ತಂದೆ ತಾಯಿ ಸಹ ಏನು ಮಾಡಿಯಾರು? ಮಗನಿಗೆ ಮದುವೆ ಮಾಡಿ ಸೊಸೆ ಬಂದ ಖುಷಿ ಕೆಲವೇ ತಿಂಗಳಲ್ಲಿ ಮರೆಯಾದರೆ, ಆ ಹಿರಿಯರನ್ನು ಸಂತೈಸುವವರು ಯಾರು? ಮನೆಯಲ್ಲಿ ಇನ್ನೂ ಮದುವೆಯಾಗದವರು ಇದ್ದರೆ ಅವರ ಮುಂದಿನ ಭವಿಷ್ಯದ ಬಗ್ಗೆ ಹಿರಿಯರಿಗೆ ಏನೂ ಮಾಡಲೂ ತೋಚುವುದಿಲ್ಲ. ಈಗ ಯಾವುದೋ ಕ್ಷುಲ್ಲಕ ಕಾರಣದಿಂದ ವಿಚ್ಚೇದವಾದರೆ ಮುಂದೆ ಅವರ ಜೀವನ ಹೇಗೆ? ಅಕಸ್ಮಾತ್ ಮಕ್ಕಳಿದ್ದರೆ ಅವರ ಗತಿ ಏನು? ಇವರ ಜಗಳದಲ್ಲಿ ಮಕ್ಕಳು ಪಾಪ ಏನು ಮಾಡಬೇಕು? ಹೀಗೆ ಪ್ರಶ್ನೆ ಮೇಲೆ ಪ್ರಶ್ನೆಗಳು. ಇಂದು ಮಾಡಿದ ತಪ್ಪು ಮುಂದೆ ಅವರಿಗೆ ಅರಿವಾದರೂ ಸಹ ಏನು ಪ್ರಯೋಜನ? ನೀವು ಬೇರೆ ಮದುವೆ ಆಗಬಹುದು, ಇಲ್ಲಾ ಒಂಟಿ ಜೀವನ ನಡೆಸಬಹುದು. ಅದು ನಿಮ್ಮ ಇಷ್ಟ, ನಿಮ್ಮ ಬದುಕು. ಆದರೆ ಅದು ನಿಮ್ಮ ಮಕ್ಕಳನ್ನು ಕಾಡಬಾರದು. ಅವರಿಗೆ ಅದು ಹೊರೆಯಾಗಬಾರದು. ಎಲ್ಲವನ್ನೂ ಗಮನಿಸಿ ಯಾರಿಗೂ ತೊಂದರೆ ಆಗದ ಹಾಗೆ ಒಂದು ಒಳ್ಳೆಯ ನಿರ್ಧಾರ ತೆಗೆದುಕೊಳ್ಳ್ಬಲ್ಲ ಪ್ರಯತಿನಿಸಬಹುದು.

ದೈಹಿಕವಾಗಿ, ಮಾನಸಿಕವಾಗಿ ನಿಮಗೆ ಕಿರುಕುಳವಾಗುತ್ತಿದ್ದರೆ, ವರದಕ್ಷಿಣೆ ಮುಂತಾದ ಸಮಸ್ಯೆಗಳಿದ್ದರೆ ಅಥವಾ ನಿಮಗೆ ನಿಜವಾಗಿಯೂ ಅವನ/ಅವಳ ಜೊತೆ ಬಾಳುವುದು ಸಾದ್ಯವೇ ಆಗುವುದಿಲ್ಲ ಎಂದರೆ ಮಾತ್ರ ವಿಚ್ಚೇದನದ ಬಗ್ಗೆ ಯೋಚಿಸಬಹುದು. ವಿಚ್ಚೇದನ  ಕಟ್ಟ ಕಡೆಯ ಅಸ್ತ್ರವಾಗಬೇಕೇ ಹೊರತು ಅದೇ ಮೊದಲ  ಪರಿಹಾರವಾಗಬಾರದು. ಕಾಲವು ಯಾರನ್ನೂ ಕಾಯುವುದಿಲ್ಲ ಅಲ್ಲವೇ? ಮುಖ್ಯವಾಗಿ ನಾವು ಕಂಡ ಕನಸುಗಳೆಲ್ಲವೂ ನಿಜ ಜೀವನದಲ್ಲಿ ನನಸಾಗುವುದು ಬಹಳ ಕಷ್ಟ. ಕೇವಲ ೧೦% ಸಹ ಒಂದೊಂದು ಸಲ ನಿಜವಾಗುವುದಿಲ್ಲ. ಜೀವನವೆನ್ನುವುದು  ಆಶ್ಚರ್ಯಗಳ ಅಗರ, ಅದು ಹೀಗೇ ಆಗುತ್ತದೆ ಎಂದು ಹೇಳುವುದಕ್ಕಾಗುತ್ತದೆಯೇ? ವಿಚ್ಚೇದನ ಬಯಸುವವರು ತಮ್ಮ ತಮ್ಮ ತಂದೆ, ತಾಯಿಯರನ್ನು,  ಅವರು ಬದುಕುತ್ತಿರುವುದನ್ನು ನೋಡಿ ಅರಿತುಕೊಂಡರೆ, ಇಂತಹ ವಿಚ್ಚೇದನಕ್ಕೆ ಸ್ವಲ್ಪ ವಾದರೂ ಕಡಿವಾಣ ಹಾಕಬಹುದು. ಸಣ್ಣ ಪುಟ್ಟ ಸಂಗತಿಗಳನ್ನು ದೊಡ್ಡದು ಮಾಡಿಕೊಂಡು ನಮ್ಮ ಹಿರಿಯರು ವಿಚ್ಚೇದನ ಪಡೆದಿದ್ದರೆ ಇಡೀ ಭಾರತದಲ್ಲಿ ಬರೀ ವಿಚ್ಚೇದಿತರೇ ತುಂಬಿರುತ್ತಿದ್ದರೆನೋ? ಪಾಶ್ಚಿಮಾತ್ಯ ದೇಶದಲ್ಲಿ ವಿಚ್ಚೇದನ ಒಂದು ಹಕ್ಕು ಎಂದು ಪರಿಗಣಿಸಿದರೆ, ನಮ್ಮ ದೇಶದಲ್ಲಿ  ಒಂದು ಸಮಸ್ಯೆಯಾಗಿರುವುದು ವಿಪರ್ಯಾಸ.

Monday 21 May 2012

ಮಾಜಿ ಶಾಸಕರ ನಿವೃತ್ತಿ ವೇತನ:

ನಮ್ಮ ರಾಜ್ಯದಲ್ಲಿ ಸುಮಾರು ೭೦೦ ಮಾಜಿ ಶಾಸಕರಾಗಿದ್ದಾರೆ. ಒಂದು ಸಲ ಶಾಸಕರಾದರೆ ೨೫,೦೦೦, ಎರಡು ಬಾರಿ ಶಾಸಕರಾದರೆ ೩೦,೦೦೦ ಮತ್ತು ಮೂರಕ್ಕಿಂತ ಹೆಚ್ಚು ಬಾರಿ ಶಾಸಕರಾದರೆ ೩೫,೦೦೦ ನಿವೃತ್ತಿ ವೇತನ ಜೀವನಪರ್ಯಂತ ಪಡೆಯಬಹುದು. ಆ ಶಾಸಕನ ಮರಣದ ನಂತರ ೫೦% ಅವರ ಕುಟುಂಬ ವರ್ಗ ಪಡೆಯಬಹುದು.  ಶಾಸಕರು ಮಾಜಿಯಾದ ಬಳಿಕ ವಿಧಾನ ಪರಿಷತ್, ಸಂಸತ್ತು, ರಾಜ್ಯಸಭೆಗೆ ಆಯ್ಕೆಯಾಗಿ ಅಲ್ಲಿ ಮಾಜಿಗಳಾದರೆ ಎಲ್ಲಾ ಕಡೆಯೂ ನಿವೃತ್ತಿ ವೇತನ ಪಡೆಯಲು ಅರ್ಹರು.
ಜನ ಸಾಮಾನ್ಯರು ಒಮ್ಮೆ ಆಪರೇಷನ್ ಮಾಡಿಸಿಕೊಂಡರೆ ಲಕ್ಷ ಲಕ್ಷ ಖರ್ಚು. ಆದರೆ   ಶಾಸಕರು  ರಾಜೀನಾಮೆ ಕೊಟ್ಟು ಆಪರೇಷನ್ ಮಾಡಿಸಿಕೊಂಡರೆ ಕೋಟಿ ಕೋಟಿ ಸಂಪಾದನೆ. ಜೊತೆಗೆ ಮಂತ್ರಿ ಪದವಿ, ಗೂಟದ ಕಾರು, ಬಂಗಲೆ, ಸಹಾಯಕ, ಮತ್ತಿನ್ನೇನು ಬೇಕ್ರಿ?. ಹಾಜಿ ಶಾಸಕರಿಗೆ ವೇತನದ ಜೊತೆಗೆ  ೫ ಲಕ್ಷ ಕಾರ್ ಲೋನಿಗೆ, ೫೦,೦೦೦ ಗಣಕಯಂತ್ರಕ್ಕೆ, ೫೦,೦೦೦ ವಿಮಾನ ಪ್ರಯಾಣಕ್ಕೆ, ವೈದ್ಯಕೀಯ ಖರ್ಚು ಬೇರೆ, ದೊರವಾಣಿಗೆ ೧೦,೦೦೦, ಪೆಟ್ರೋಲ್ ಗಾಗಿ ೪,೦೦೦, ಸಹಾಯಕ ಹುಡುಗನಿಗಾಗಿ ೫,೦೦೦, ಕ್ಷೇತ್ರದ ಭತ್ಯೆ ೧೫,೦೦೦ ಮತ್ತು ಶಾಸನ ಸಭೆ ನಡೆಯುವಾಗ ಒಂದು ದಿನಕ್ಕೆ ೬೦೦ ರೂಪಾಯಿಗಳು. ಒಂದು ಬಾರಿ ವಿದೇಶ ಸುತ್ತುವ ಯೋಗ, ಲ್ಯಾಪ್ ಟಾಪ್, ಮೊಬೈಲ್ ಉಚಿತ.  ಅದೃಷ್ಟ ಚೆನ್ನಾಗಿದ್ದರೆ ವರ್ಷಕ್ಕೆ ೩-೪ ಬಾರಿ ರೆಸಾರ್ಟ್ ಯೋಗ. ಶಾಸಕರಾಗಲು ಬೇಕಾದ ಎಲ್ಲಾ ಅರ್ಹತೆಗಳು ನಿಮ್ಮಲ್ಲಿದ್ದರೆ ಒಮ್ಮೆ  ಪ್ರಯತ್ನಿಸಿ. ಇನ್ನೇನು ಚುನಾವಣೆಗಳು ಬರುವ ಸಂಭವವಿದೆ.

Sunday 20 May 2012

ಪಾಶ್ಚಿಮಾತ್ಯ ಕಂಪನಿಗಳ ಕುತಂತ್ರ:

ಪಾಶ್ಚಿಮಾತ್ಯ ಕಂಪನಿಗಳು ಕಾಳಿಕಾ ದೇವಿಯ ಕೈಯಲ್ಲಿ ಬೀರ್ ಬಾಟಲ್, ಬಿಕನಿಯ ಮೇಲೆ ಸರಸ್ವತಿ, ಲಕ್ಷ್ಮಿ ಚಿತ್ರಗಳು, ಚಪ್ಪಲಿ, ಬೂಟಿನ ಮೇಲೆ "ಓಂ" ಚಿಹ್ನೆ ಅಥವಾ ಹನುಮಾನ್, ಗಣಪತಿ ಚಿತ್ರಗಳನ್ನು ಮುದ್ರಿಸಿ ತಮ್ಮ ಉತ್ಪನ್ನಗಳನ್ನು ಮಾರಾಟಕ್ಕೆ ಬಿಡುತ್ತಿರುವುದು ನಿನ್ನೆ ಮೊನ್ನೆಯ ಮಾತಲ್ಲ. ಸುಮಾರು ವರ್ಷಗಳಿಂದ ಇದು ನಡೆಯುತ್ತಲೇ ಬಂದಿದೆ. ಹಿಂದು ಸಂಘಟನೆಗಳು ಇದರ ಬಗ್ಗೆ ಕೂಗಿ ಗಲಾಟೆ ಎಬ್ಬಿಸಿದಾಗ ಮಾತ್ರ,  ಕ್ಷಮಿಸಿ ಎನ್ನುವ ನಾಟಕ ಮಾಡುತ್ತಾರೆ. ಇದು ವಿಕೃತ ಮನಸ್ಸಿನ ಪರಮಾವಧಿ. ಇದು ಘೋರ ಅಪರಾಧ. ತಪ್ಪಿತಸ್ತರಿಗೆ ಸರಿಯಾದ ಶಿಕ್ಷೆ ಆದರೆ ಮಾತ್ರ ಇಂತಹ ವಿಕೃತಿಗೆ ಕಡಿವಾಣ ಹಾಕಬಹುದು. ಇದಕ್ಕಾಗಿಯೇ ಕಾನೂನು ಸಹ ಇದೆ. ಪ್ರತಿಯೊಂದು ಜಾತಿ/ಧರ್ಮಕ್ಕೊ ಅದರದೇ ಆದ ನಂಬಿಕೆ, ಸಂಸ್ಕೃತಿ, ಅಚಾರ, ವಿಚಾರಗಳು ಇರುತ್ತದೆ. ಅದನ್ನು ಹೀಯಾಳಿಸುವುದಾಗಲೀ, ವಿಕೃತವಾಗಿ ಚಿತ್ರಿಸುವ ಹಕ್ಕಾಗಲೀ ಯಾರಿಗೂ ಇಲ್ಲ. ನಿಜವಾದ ಧರ್ಮ ಪಾಲಕರು ಯಾರೂ ಇಂತಹ ಕೆಲಸವನ್ನು ಮಾಡುವುದಿಲ್ಲ. ತನ್ನ ಧರ್ಮವನ್ನು ಯಾರು ನಿಜವಾಗಿ ಪ್ರೀತಿಸುತ್ತಾರೋ, ಗೌರವಿಸುತ್ತಾರೊ ಅಂಥಹವರು ಮಾತ್ರ ಬೇರೆಯ ಧರ್ಮವನ್ನು ಗೌರವಿಸುತ್ತಾರೆ. ನಿಜವಾದ ಬಲಶಾಲಿ ಮಾತ್ರ ಮತ್ತೊಬ್ಬ ಬಲಶಾಲಿಯನ್ನು ಗೌರವಿಸುತ್ತಾನೆ.

Saturday 19 May 2012

ಹಾಡುಗಳ ಮಹತ್ವ:


ನಮ್ಮ ಭಾರತೀಯ ಚಿತ್ರಗಳಲ್ಲಿ, (ಅದು ಯಾವುದೇ ಭಾಷೆಯಲ್ಲಿರಲಿ) ಹಾಡುಗಳಿಲ್ಲದಿದ್ದರೆ, ಏನೊ ಒಂದು ರೀತಿಯ ಹಪಹಪಿ. ಕೆಲವು ಚಿತ್ರಗಳು ಕೇವಲ ಹಾಡುಗಳಿಂದಲೇ ಯಶಸ್ವಿಯಾಗಿರುವುದುಂಟು. ನಮ್ಮಲ್ಲಿ ಚಲನಚಿತ್ರ ಗೀತೆಗಳಿಗೆ ಹೆಸರಾದ ಹಾಡುಗಾರರೆಂದರೆ, ಮುಖೇಶ್, ಮಹಮದ್ ರಫಿ, ಕಿಶೋರ್ ಕುಮಾರ್, ಲತಾ ಮಂಗೇಶ್ಕರ್, ಆಶಾ ಭೊನ್ಲೆ, ಹಿಂದಿ ಚಿತ್ರಗೀತೆಗಳಿಗೆ ಮತ್ತು ಘಂಟಸಾಲ, ಪಿ.ಬಿ.ಶ್ರೀನಿವಾಸ್, ಯೇಸುದಾಸ್, ಎಸ್.ಪಿ.ಬಾಲಸುಬ್ರಮಣ್ಯಂ, ಪಿ.ಆರ್.ಸುಶೀಲ, ಎಸ್.ಆರ್.ಜಾನಕಿ, ಚಿತ್ರ, ಎಲ್.ಆರ್.ಈಶ್ವರಿ ದಕ್ಷಿಣ ಭಾರತಕ್ಕೆ. ಇವರೆಲ್ಲಾ ಗಾನ ಗಂಧರ್ವ ಕಿನ್ನರರು. ನಮ್ಮ ರಾಜ್ ಕುಮಾರ್ ನಾಯಕ ನಟರಾಗಿದ್ದುಕೊಂಡು ಗಾಯನಕ್ಕಾಗಿ "ರಾಷ್ಟ್ರ ಪ್ರಶಸ್ತಿ" ಪಡೆದ ಭಾರತೀಯ ಚಿತ್ರರಂಗದ ಏಕೈಕ ಗಾನ ಗಂಧರ್ವ ಕಿನ್ನರ. ಹಾಡುಗಳು ಎಂದಾಕ್ಷಣ ತಕ್ಷಣಕ್ಕೆ ಹೊಳೆಯುವುದು. ಆ ಹಾಡುಗಳ ಸಾಹಿತ್ಯ, ಅದನ್ನು ಬರೆದವರು, ಸಂಗೀತ ಸಂಯೋಜನೆ ಮಾಡಿದವರು, ಹಾಡಿದವರು ಮತ್ತು ಆ ದೃಶ್ಯವನ್ನು ಕಟ್ಟಿಕೊಟ್ಟ ನಿರ್ದೇಶಕರು, ಈ ನಾಲ್ವರೂ ನೆನಪಾಗುತ್ತಾರೆ.  ಈ ಎಲ್ಲಾ ಸರಸ್ವತಿ ಪುತ್ರ/ಪುತ್ರಿಯರಿಂದ ಒಂದು ಅದ್ಭುತ ಸೃಷ್ಟಿಯಾಗುತ್ತದೆ.
ಹಾಡುಗಳು ನಮ್ಮನ್ನು ಅಳಿಸತ್ತದೆ, ನಗಿಸುತ್ತದೆ, ನಿದ್ದೆ ಮಾಡಿಸುತ್ತದೆ, ಕುಣಿಸುತ್ತದೆ, ವಿರಹ ಉಂಟುಮಾಡತ್ತದೆ, ಪ್ರೀತಿ ಮೂಡಿಸುತ್ತದೆ, ಪ್ರೇಮಿಸುವಂತೆ ಮಾಡಿಸುತ್ತದೆ, ರಸಿಕನನ್ನಾಗಿ ಮಾಡುತ್ತದೆ, ಅಣ್ಣ-ತಂಗಿ ಬಾಂಧವ್ಯ ಬೆಸೆಯತ್ತದೆ, ತಂದೆ/ತಾಯಿ/ಗುರು/ಹಿರಿಯರನ್ನು ಗೌರವಿಸುವಂತೆ ಮಾಡಿಸುತ್ತದೆ, ಸ್ನೇಹಕ್ಕೆ ಕಟ್ಟು ಬೀಳಿಸುತ್ತದೆ, ದೈವಕ್ಕೆ  ಶರಣಾಗಿಸುತ್ತದೆ,  ದೇಶ ಭಕ್ತಿ ತುಂಬುತ್ತದೆ, ನಾಡು/ನುಡಿ ಬಗ್ಗೆ ಪ್ರೇಮ ಉಕ್ಕಿಸುತ್ತದೆ, ನಮ್ಮನ್ನು ನೋಯಿಸುತ್ತದೆ, ನಲಿಸುತ್ತದೆ, ಒಟ್ಟಾಗಿ ಕೂಡಿ ಬದುಕಲು ಕಲಿಸುತ್ತದೆ, ಒಬ್ಬಂಟಿಯಾಗಿದ್ದಾಗ ಸಂಗಾತಿಯಾಗುತ್ತದೆ, ಜೀವದ ಬೆಲೆ ತಿಳಿಸಿಕೊಡುತ್ತದೆ, ಅದಕ್ಕಿಂತ ಹೆಚ್ಚಾಗೆ ನಾವು ಸೋತಾಗ ನಮ್ಮನ್ನು ಕೈಹಿಡಿದು ಮುಂದೆ ನಡೆಸುತ್ತದೆ, ಬದುಕು ಕಟ್ಟಿಕೊಡತ್ತೆ. ಒಂದು ಕ್ಷಣ ನಮ್ಮನ್ನು ನಾವೇ ಮರೆಯುವಂತೆ ಮಾಡುತ್ತದೆ. ಹೀಗೆ ಎಲ್ಲವನ್ನೂ ಮಾಡುವ ಶಕ್ತಿ ಕೇವಲ ಹಾಡುಗಳಿವೆ. ಮೂರು ನಿಮಿಷದ ಹಾಡು ಇನ್ನೇನು ಮಾಡಬೇಕು?   ಸಾಕಲ್ವಾ.....

ಅಣುಸ್ಥಾವರಗಳು:

ಜಪಾನ ಒಂದು ಪುಟ್ಟ ದ್ವೀಪ ರಾಷ್ಟ, ಅಲ್ಲಿ ಭೂಕಂಪ, ಸುನಾಮಿ ಸರ್ವೇಸಾಮಾನ್ಯ. ಕಳೆದ ವರ್ಷ ಮಾರ್ಚ್ ನಲ್ಲಿ ಸಂಭವಿಸಿದ ಭೂಕಂಪದಲ್ಲಿ ಅಲ್ಲಿರುವ ಅನೇಕ ಅಣುಸ್ಥಾವರಗಳು ಹಾನಿಗೊಂಡವು. ಆಲ್ಲಿ ಪರಮಾಣು ವಿರೋಧಿ ಚಳುವಳಿ ಪ್ರಾರಂಭವಾಯಿತು. ಅಲ್ಲಿನ ಸರ್ಕಾರ ಜನರ ಪ್ರತಿಭಟನೆಗೆ ಮಣಿದು ತನ್ನಲ್ಲಿದ್ದ ಎಲ್ಲಾ ಅಣುಸ್ಥಾವರಗಳನ್ನು ಮುಚ್ಚಿದೆ. ನನಗೆ ಆಶ್ಚರ್ಯವಾದ ಸಂಗತಿ ಏನೆಂದರೆ, ಜಪಾನ್ ಸರ್ಕಾರ ತನ್ನ ಪ್ರಜೆಗಳ ಗೌರವ, ಆರೋಗ್ಯ ಮತ್ತು ಯೋಗಕ್ಷೇಮಮನ್ನು ಯಾವ ರೀತಿ ಕಾಪಾಡುತ್ತದೆ ಎಂದು. ಅಲ್ಲಿ ಇಲ್ಲಿಯ ತನಕ ವಿದ್ಯುತ್ ಅಭಾವ ಎಂಬುದೇ ಇಲ್ಲ. ಅಲ್ಲಿ ಪವರ್ ಕಟ್ ಮಾತೇ ಇಲ್ಲ. ಇದೆಲ್ಲವೂ ಅಣುಸ್ಥಾವರದಿಂದ ಆದ ಪ್ರಯೋಜನ. ಆದರೂ ಅವರಿಗೆ ತಮ್ಮ ಪ್ರಜೆಗಳ ಬಗೆಗಿನ ಕಾಳಜಿಗಾಗಿ ತನ್ನೆಲ್ಲಾ ಅಣುಸ್ಥಾವರವನ್ನು ಮುಚ್ಚಿದೆ ಎಂದರೆ ಅದು ನಿಜಕ್ಕೂ ಮೆಚ್ಚುವಂತಹದ್ದು.  ಈಗ ಆಲ್ಲಿ ಯಾವುದೇ ಅಣುಸ್ಥಾವರ ಇಲ್ಲ.      ನಾವು ಇಲ್ಲಿ ನಮ್ಮ ದೇಶದಲ್ಲಿ ಒಂದೊಂದೇ ಅಣು ಸ್ಥಾವರವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದೇವೆ (ಈಗ ನಮ್ಮಲ್ಲಿ ೧೯ ಅಣುಸ್ಥಾವರವಿದೆ) ಜಪಾನ್ ರಾಷ್ಟ್ರವೇನೋ ಎಚ್ಚೆತ್ತುಕೊಂಡು ತನ್ನಲ್ಲಿದ್ದ ಎಲ್ಲಾ ಅಣುಸ್ಥಾವರವನ್ನು ಮುಚ್ಚಿದೆ. ಈಗ ಅದು ಪರಮಾಣು ಸ್ಥಾವರ ಮುಕ್ತ ರಾಷ್ಟ್ರ. ನಾವು ಈಗ ಪರಮಾಣು ರಾಷ್ಟ್ರವಾಗಲು ಹೊರಟಿದ್ದೇವೆ.  ಈಗ ನಾವೂ ಕೂಡ ಭೂಕಂಪ, ಸುನಾಮಿಯ ಹಾವಳಿ ಅನುಭವಿಸಿದ್ದೇವೆ. ಅಕಸ್ಮಾತ್ ಭೂಕಂಪ, ಸುನಾಮಿಗಳು ಮತ್ತೊಮ್ಮೆ ಮಗದೊಮ್ಮೆ  ಆಗಿ, ಇಂತಹ ಅಣುಸ್ಥಾವರಕ್ಕೆ ಧಕ್ಕೆ ಉಂಟಾದರೆ, ನಮ್ಮನ್ನು ಆ ದೇವರೇ ಕಾಪಾಡಬೇಕು.
ಅಣುಸ್ಥಾವರದಿಂದ ನಮಗೆ ವಿದ್ಯುತ್ ಕೊರತೆಯುಂಟಾಗುವುದಿಲ್ಲ, ನಿಜ ಆದರೆ ಅದರ ದುಶ್ಪರಿಣಾಮದಿಂದ ಜನರ ಜೀವಕ್ಕೆ ಅಪಾಯಯುಂಟಾದರೆ ಯಾರು ಹೊಣೆ? ಯಾಕೆಂದರೆ ಇದರಂದ ತೊಂದರೆಗೆ ಈಡಾಗುವುದು ಕೇವಲ ಬಡಜನತೆ, ಅಮಾಯಕರು. ರಾಜಕಾರಣಿಗಳಿಗೆ ಇದರಿಂದ ಏನೂ ತೊಂದರೆ ಆಗುವುದಿಲ್ಲ. ನಮ್ಮ ಸರ್ಕಾರಕ್ಕೆ, ರಾಜಕಾರಣಿಗಳಿಗೆ ಅದನ್ನು ಸರಿಯಾಗಿ ನಿಭಾಯಿಸುವುದು ಗೊತ್ತಿಲ್ಲ. ಇದಕ್ಕೆ ಪಕ್ಕಾ ಉದಾಹರಣೆಯೆಂದರೆ  ಭೂಪಾಲ್ ದುರಂತ.  ಭೂಪಾಲ್ ದುರಂತವು ಇನ್ನೂ ನಮ್ಮ ಕಣ್ಣ ಮುಂದಿದೆ.   ಈಗಲೂ ನಾವು ಆ ಅನಾಹುತದಿಂದ ಎಚ್ಚೆತ್ತುಕೊಂಡಿಲ್ಲ.  ಅಲ್ಲಿ ಆರೋಗ್ಯ ಸಮಸ್ಯೆ ಇದೆ. ಹುಟ್ಟುವ ಮಕ್ಕಳು ಅಂಗವಿಕಲರಾಗೇ ಹುಟ್ಟುತ್ತಿದ್ದಾರೆ.  ಅವರನ್ನು ಕೇಳುವವರು ಯಾರೂ ಇಲ್ಲ.  ಇನ್ನೂ ಅಲ್ಲಿನ ಜನಕ್ಕೆ ನ್ಯಾಯ ಸಿಕ್ಕಿಲ್ಲ. ಸಾವಿರಾರು ಜನರು ಅದರಿಂದ ತಮ್ಮ ಪ್ರಾಣವನ್ನೇ ಕಳೆದುಕೊಂಡರೆ, ಇಂದಿಗೂ ಅಲ್ಲಿ ಅಂಗವಿಕಲ ಮಕ್ಕಳು ಹುಟ್ಟುತ್ತಲೇ ಇದ್ದಾರೆ. ಇದು ಅದರಿಂದ ಉಂಟಾದ ಪರಿಣಾಮ. ನಮ್ಮ ರಾಜಕೀಯ ಪಕ್ಷಗಳಿಗೆ, ರಾಜಕಾರಣಿಗಳಿಗೆ ನಾವುಗಳು ಪ್ರಜೆಗಳಾಗಿ ಕಾಣಿಸುವುದಿಲ್ಲ. ನಾವು ಅವರಿಗೆ ಕೇವಲ ಒಂದು ಮತವಾಗಿ ಕಾಣಿಸುತ್ತೇವೆ. ಇದು ನಮ್ಮ ದೌರ್ಭಾಗ್ಯ.

Thursday 17 May 2012

"ರಘು ದೀಕ್ಷಿತ್" ಎಂಬ ಅಂತರರಾಷ್ಟೀಯ ಪ್ರತಿಭೆ:

"ನಿನ್ನಾ ಪೂಜೆಗೆ ಬಂದೇ ಮಾದೇಶ್ವರಾ," ಎಂಬ ಹಾಡಿನಿಂದ ಕನ್ನಡಿಗರಿಗೆ ಪರಿಚಿತವಾದ ಕಂಚಿನ ಕಂಠದ "ರಘು ದೀಕ್ಷಿತ್" ಎಂಬ  ಅಚ್ಚ ಕನ್ನಡ ಪ್ರತಿಭೆ ನಮ್ಮ ರಾಜ್ಯ/ದೇಶದ ಗಡಿಗಳನ್ನು ದಾಟಿ ಈಗ ಅಂತರರಾಷ್ಟೀಯ ಮಟ್ಟದಲ್ಲಿ ತನ್ನ ಪ್ರತಿಭೆಯನ್ನು ತೋರಿಸಲು ಹೊರಟಿದ್ದಾರೆ. ಅವರು ಅನೇಕ ದೇಶಗಳಲ್ಲಿ ಈಗಾಗಲೇ ನಮ್ಮ ಕನ್ನಡದ "ಶಿಶುನಾಳ ಷರೀಫ"ರ ಹಾಡುಗಳನ್ನು ಪಾಕ್ಷಿಮಾತ್ಯ ಸಂಗೀತದ ಧಾಟಿಯಲ್ಲಿ ಪ್ರಚಾರ ಪಡಿಸಿದ್ದಾರೆ. ಅವರು ಅಲ್ಲಿ ಅತ್ಯಂತ ಯಶಸ್ವಿಯೂ ಆಗಿದ್ದಾರೆ. ಅವರ ಬಗ್ಗೆ ಹೊರದೇಶದ ಅನೇಕ ಪತ್ರಿಕೆಗಳಲ್ಲಿ ಒಳ್ಳೆಯ ವಿಮರ್ಶೆಯನ್ನೂ ಪಡೆದುಕೊಂಡಿದ್ದಾರೆ. ಲಂಡನ್ನಿನ "ಗಾರ್ಡಿಯನ್" ಪತ್ರಿಕೆ "one of the happiest music bands" ಎಂದು ಇವರನ್ನು ಹೊಗಳಿದೆ. ಲಂಡನ್ ನಲ್ಲಿ ಇವರು ಪ್ರತಿ ವರ್ಷದ ಸಂಗೀತೋತ್ಸವದಲ್ಲಿ ಇವರು ಪ್ರದರ್ಶನವನ್ನು ಕೊಡುತ್ತಾರೆ. ಈಗ ರಘು ಬ್ರಿಟನ್ನಿನ ರಾಣಿ ೨ ನೇ ಎಲಿಜಬತ್ ಅವರ ಸಿಹಾಸನಾರೋಹಣದ ವಜ್ರ ಮಹೋತ್ಸದಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುತ್ತಿರುವ ಏಕೈಕ ಹಾಡುಗಾರ.  ಹೆಚ್ಚಿನ ಮಾಹಿತಿಗೆ  (www.vijaykarnataka.com) ನೋಡಬಹುದು. ಒಂದು ಬೇಸರದ ಸಂಗತಿ ಎಂದರೆ ಇವರಿಗೆ ಕನ್ನಡ ಚಿತ್ರರಂಗದಲ್ಲಿ ಸಲ್ಲಬೇಕಾದ ಸ್ಥಾನಮಾನ  ಇನ್ನೂ ಸಿಕ್ಕಿಲ್ಲ. ಇವರಂತೆಯೇ ಗಾಯಕರಾದ ರಾಜೇಶ್ ಕೃಷ್ಣನ್, ಹೇಮಂತ್, ಬದ್ರಿ ಪ್ರಸಾದ್, ಶಾಸ್ತ್ರಿ, ವಾರಿಯರ್ ಮುಂತದವರು ಮತ್ತು ಗಾಯಕಿಯರಾದ ಎಂ.ಡಿ.ಪಲ್ಲವಿ, ಸುನೀತಾ, ಸಂಗೀತಾ ಕಟ್ಟಿ, ದಿವ್ಯಾ ರಾಘವನ್ ಹೀಗೆ ಇನ್ನೂ ಅನೇಕರಿದ್ದಾರೆ. ಇವರು ಹಾಡಿರುವ ಹಾಡುಗಳು ಜನಪ್ರಿಯವಾಗಿವೆ, ಕನ್ನಡಿಗರು ಇವರನ್ನು ಮೆಚ್ಚಿದ್ದಾರೆ. ಆದರೂ ಇವರುಗಳಿಗೆ ಕನ್ನಡ ಚಿತ್ರರಂಗದಿಂದ ಸಿಗಬೇಕಾದಷ್ಟು ಪ್ರೋತ್ಸಾಹ ಸಿಕ್ಕಿಲ್ಲ. ಸಂಬಂಧಪಟ್ಟವರು ಗಮನಿಸಿ ಇದನ್ನು ಸರಿಪಡಿಸಬೇಕು.


Tuesday 15 May 2012

"ಕಠಾರಿವೀರ ಸುರಸುಂದರಾಗಿ"

ಸ್ವರ್ಗ, ನರಕ ಮತ್ತು ಒಳ್ಳೆಯದನ್ನು ಮಾಡಿದರೆ ಸ್ವರ್ಗ್ಪ ಪ್ರಾಪ್ತಿ, ಕೆಟ್ಟದ್ದನ್ನು ಮಾಡಿದರೆ ನರಕ ಕಟ್ಟಿಟ್ಟ ಬುತ್ತಿ ಎಂಬ  ಕಲ್ಪನೆ ಶತಮಾನಗಳಷ್ಟು ಹಳೆಯದು. ಇದನ್ನು ಎಲ್ಲಾ ಧರ್ಮಗಳ ಜನರೂ ಸಮಾನ್ಯವಾಗಿ ನಂಬುತ್ತಾರೆ. ನಂಬಿಕೆ ಮತ್ತು ಭಾವನೆಗಳು ಅವರವರಿಗೆ ಬಿಟ್ಟಿದ್ದು, ಅದನ್ನು ಪ್ರಶ್ನಿಸುವುದು ತಪ್ಪು. ನಮ್ಮ ಪೂರ್ವಿಕರು ಬಹಳ "ಬುದ್ದಿವಂತ"ರು. ನಮ್ಮ ಜನರು ಯಾವಾಗಲೂ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಲಿ, ಒಳ್ಳೆಯದನ್ನು ಯೋಚಿಸಲಿ ಎಂದು ಹರಿಯಬಿಟ್ಟ ಈ ಕಲ್ಪನೆ ಬಹಳ ಚೆನ್ನಾಗಿದೆ ಮತ್ತು ಇದು ಇದು ಎಲ್ಲಾ ಕಾಲಕ್ಕೂ ಅನ್ವಯ. ಇದನ್ನು ನೋಡಿದವರು ಮತ್ತು ಅನುಭವಿಸಿದವರು ನಮ್ಮ ನಡುವೆ ಯಾರೂ ಇಲ್ಲ ಮತ್ತು ಇರುವುದಕ್ಕೆ ಸಾಧ್ಯವೂ ಇಲ್ಲ. ನಮ್ಮ ಪುರಾಣ ಪುಣ್ಯ ಕಥೆಗಳಲ್ಲಿ ಇದರ ಬಗ್ಗೆ ಸುಂದರ ಚಿತ್ರಣವಿದೆ. ನಮ್ಮ ಚಿತ್ರರಂಗದ ಮಂದಿ ಅನೇಕ ಭಾರತೀಯ ಭಾಷೆಗಳಲ್ಲಿ ಸ್ವರ್ಗ ನರಕವನ್ನು ಇದು ಹೀಗೆ ಇರಬಹುದು ಎಂದು ಚಿತ್ರಿಸಿದ್ದಾರೆ. ನಮ್ಮ ಕನ್ನಡ ಚಿತ್ರರಂಗದ ಮಂದಿ ಇನೂ ಒಂದು ಹೆಜ್ಜೆ ಮುಂದೆ ಹೋಗಿ ಸ್ವರ್ಗ ಮತ್ತು ನರಕವನ್ನು ನಮ್ಮ ಕೈಗೆಟುಕುವಷ್ಟು ಹತ್ತಿರ ತಂದಿದ್ದಾರೆ "ಕಠಾರಿವೀರ ಸುರಸುಂದರಾಂಗಿ" ಎಂಬ ೩ ಡಿ ಚಿತ್ರದ ಮೂಲಕ.  ಅದ್ಭುತವಾದ ಛಾಯಾಗ್ರಹಣ "ವೇಣು" ಅವರಿಂದ.  ಈ ಚಿತ್ರದಲ್ಲಿ  ನಿಜವಾದ ನಾಯಕ "ವೇಣು" ಎಂದರೆ "ಉಪೇಂದ್ರ" ಕೋಪ ಮಾಡಿಕೊಳ್ಳಬಾರದು.  ಕನ್ನಡಕ್ಕೆ ನಿಜವಾದ ಡೈಲಾಗ್ ಕಿಂಗ್ "ಉಪೆಂದ್ರ" , ಕನ್ನಡಕ್ಕೆ ಒಬ್ಬರೇ ರೆಬೆಲ್ ಸ್ಟಾರ್ "ಅಂಬರೀಷ್", ಕನ್ನಡಕ್ಕೆ ಒಬ್ಬಳೇ ಪದ್ಮಾವತಿ "ರಮ್ಯಾ". ಈ ತರಹದ ಕಥೆಗಳಲ್ಲಿ ಕಥೆ ಹುಡುಕುವುದಕ್ಕೆಂತ ಚಿತ್ರದ ತಾಂತ್ರಿಕತೆಗೆ ಮಹತ್ವ ಕೊಡುವುದು ಒಳ್ಳೆಯದು. ಆ ನಿಟ್ಟಿನಲ್ಲಿ ಈ ಚಿತ್ರ "ಸೂಪರ್". ಚಿತ್ರವನ್ನು ಮನೆಮಂದಿಯೊಂದಿಗೆ ಕುಳಿತು ನೋಡಬಹುದು. ಮಕ್ಕಳನ್ನು ಕರೆದುಕೊಂಡು ಹೋಗಿ, ಖುಷಿಪಡುತ್ತಾರೆ. ಚಿತ್ರವನ್ನು ನಮ್ಮ ಕನ್ನಡಿಗರು ಗೆಲ್ಲಿಸಿದರೆ ಇನ್ನು ಮುಂದೆ ಕನ್ನಡದಲ್ಲೂ ೩ ಡಿ ಚಿತ್ರಗಳು ಹೆಚ್ಚಿಗೆ ಬರಬಹುದು. ಮುನಿರತ್ನಂ ಅವರನ್ನು ಖಂಡಿತವಾಗಿ ಅಭಿನಂದಿಸಬಹುದು ಅದ್ದೂರಿ ಚಿತ್ರವನ್ನು ಕನ್ನಡ್ದಿಗರಿಗೆ ಕೊಟ್ಟಿದ್ದಕ್ಕೆ.  ಅವರು ಹೇಳಿರುವಂತೆ ಇದು ಕನ್ನಡದ ಮೊದಲ ೩ಡಿ ಚಿತ್ರವಂತೂ  ಖಂಡಿತಾ ಅಲ್ಲ.  ಈ ಮೊದಲು "ಕಾಡಿನ ಜಾತ್ರೆ" "ಸೂಪರ್ ಬಾಯ್" ಮತ್ತು "ನಮ್ಮ ಭೂಮಿ" ಎಂಬ ಚಿತ್ರಗಳು ತೆರೆಕಂಡಿತ್ತು.  ಆ ಮೂರೂ ಚಿತ್ರಗಳು ಕನ್ನಡಿಗರಿಗೆ ಹಿಡಿಸದ ಕಾರಣ ಬಂದಷ್ಟೇ ವೇಗದಲ್ಲಿ ಕಂಬಿಕಿತ್ತಿತ್ತು.

"ಪರಿಸರ ಸ್ನೇಹಿ" ಸಮಾಧಿ

" ಪರಿಸರಕ್ಕೆ ಹಾನಿ ಮಾಡುವ ಶಾಶ್ವತ ಗೋರಿಗಳನ್ನು ನಿಷೇದಿಸಲು ಕೇರಳದ ಚರ್ಚ್ ಗಳು ಮುಂದಾಗಿವೆ. ಸೀಮೆಂಟ್ ನಿಂದ ನಿರ್ಮಿಸಿರುವ ಗೋರಿಗಳನ್ನು ಮತ್ತೆ ಬಳಸುವುದಕ್ಕೆ ಆಗುವುದಿಲ್ಲ ಮತ್ತು ಕಾಫಿನ್, ಪ್ಲಾಸ್ಟಿಕ್, ಪೈಬರ್ ನಿಂದ ತಯಾರಾದ ವಸ್ತುಗಳು ಭೂಮಿಯಲ್ಲಿ ಕೊಳೆಯುವುದಿಲ್ಲ. ಹಾಗಾಗಿ ಈ ಎಲ್ಲಾ ವಸ್ತುಗಳನ್ನು ನಿಷೇದಿಸಿ ಕೇರಳದ ಎರ್ನಾಕುಲಂನಲ್ಲಿರುವ "ಸೇಂಟ್ ಮೇರಿ ಕೆಥೆಡ್ರಲ್ ಬಾಸಿಲಿಕಾದ ಆಡಳಿತ ಮಂಡಲಿ "ಪರಿಸರ ಸ್ನೇಹಿ" ಸಮಾಧಿ ನಿರ್ಮಾಣ ಮಾಡಿದೆ. ಕ್ರಿಶ್ಚಿಯನ್ ಕುಟುಂಬಗಳು ಮೊದಲಿಗೆ ವಿರೋಧ ವ್ಯಕ್ತ ಪಡಿಸಿದರೂ, ಸಮಸ್ಯೆಯನ್ನು ಅವರಿಗೆ ಅರಿವಾಗುವ ಹಾಗೆ ವಿವರಿಸಿದ ಮೇಲೆ ಅವರು ಒಪ್ಪಿಗೆ ಸೂಚಿಸಿದ್ದಾರೆ.  ಪರಿಸರಕ್ಕೆ ಹಾನಿಯುಂಟು ಮಾಡುವ ಸಮಾಧಿಗಳ ಬದಲು ಸರಳವಾಗಿ ಶವ ಸಂಸ್ಕಾರ ಮಾಡಿ ಸಮಾಧಿ ಮೇಲೆ ಹುಲ್ಲು ಮುಂತಾದವುಗಳನ್ನು ಇರಿಸುವ ವ್ಯವಸ್ಥೆಯನ್ನು ಚರ್ಚ್ ಗಳು ಜಾರಿಗೆ ತಂದಿವೆ " ಈ ಸುದ್ದಿಯು ಮೊನ್ನೆ ದಿನಪತ್ರಿಕೆಯನ್ನು ಓದುತ್ತಿರುವಾಗ ನನ್ನನ್ನು  ಬಹಳ ಆಕರ್ಷಿಸಿತು. ಬೊಂಗಳೂರಿನಂತ ಮಹಾನಗರಗಳಲ್ಲಿ  ಹೊಸದಾಗಿ ಸ್ಮಶಾನವನ್ನು ನಿರ್ಮಿಸಿಲ್ಲ. ಜಾಗದ ಸಮಸ್ಯೆ, ಜಾಗ ಇದ್ದರೂ ಅದರಲ್ಲಿ ನಿವೇಶನವನ್ನು  (ಸೈಟ್) ಮಾಡಿ ವಿಂಗಡಿಸಿ ದುಡ್ಡು ಮಾಡುವ ಯೋಚನೆ. ಇರುವ ಹಳೇ ಸ್ಮಶಾನವನ್ನೇ ಜನರು ಅವಲಂಬಿಸಿದ್ದಾರೆ. ಆ ಸ್ಮಶಾನದಲ್ಲ್ಲಿ ಜಾಗದ ಸಮಸ್ಯೆ. ಜಾಗವು ಸಾಕಾಗುತಿಲ್ಲ.  ವಿದ್ಯುತ್ ಚಿತಾಗಾರದಿಂದ ಇಂತಹ ಸಮಸ್ಯೆ ಪರಿಹಾರವಾದರೂ, ಶವವನ್ನು ನಮ್ಮ ದೇಶದಲ್ಲಿ ಹೂಳುವುದೇ ಹೆಚ್ಚು. ಎಲ್ಲಾ ಶವಗಳನ್ನು ಸುಡಲು ಹೇಳುವುದು ಆಗದ ಮಾತು. ಜಾತಿ/ಧರ್ಮ/ಸಂಪ್ರದಾಯ/ಆಚರಣೆಗಳು ಅಡ್ಡ ಬರುತ್ತದೆ.   ನಮ್ಮ ದೇಶದ ಅನೇಕ ನಗರಗಳಲ್ಲೂ ಈ ಸಮಸ್ಯೆ ಇದೆ. ಇದಕ್ಕೆ ಏನಾದರೂ ಒಂದು ಪರಿಹಾರವನ್ನು ಸಂಬಂಧಪಟ್ಟವರು ಯೋಚಿಸಬೇಕು.

Tuesday 1 May 2012

ನಮ್ಮ ಕನ್ನಡ ಸಾಫ್ಟ್ ವೇರ್ ಯುವ ಜನತೆ: ಭಾಗ-೨

ಹಿಂದಿನ ಸಂಚಿಕೆಯಿಂದ:

ಕನ್ನಡದ ಏಳಿಗೆಗಾಗಿ ಪಣ ತೊಟ್ಟಿರುವ ಈ ನಮ್ಮ ಯುವ ಪಡೆ  ಏನ್ ಗುರು ಕಾಫಿ ಆಯ್ತಾ, ಗಾಂಚಲಿ ಬಿಡಿ ಕನ್ನಡ ಮಾತಾಡಿ,  ಟ್ರಾನ್ಸ್ ಲೇಟರ್ ಕಮ್ಮುನಿಟಿ ಫ಼ಾರ್ ಕನ್ನಡ, ಕನ್ನಡ ಕಟ್ಟೆ, ಸ್ನೇಹಲೋಕ, ಫೇಸ್ ಬುಕ್ ಕನ್ನಡ ಸಂಘ, ಕನ್ನಡ ಕಲಾ ವೇದಿಕೆ ಮುಂತಾದ ಗುಂಪುಗಳನ್ನು ರಚಿಸಿ ನಮ್ಮ ರಾಜ್ಯ, ಭಾಷೆಯ ಬಗ್ಗೆ ಕಳಕಳಿ ಹೊಂದಿ ತಮ್ಮ ಕೈಲಾದ ಸೇವೆಯನ್ನು ಗಣಕಯಂತ್ರದ ಮೂಲಕ ಮಾಡಿ ಕನ್ನಡವನ್ನು ಜೀವಂತವಾಗಿ ಇಡಲು ಪ್ರಯತ್ನಿಸುತ್ತಿದ್ದಾರೆ. ಅವರನ್ನು  ಎಷ್ಟು ಅಭಿನಂದಿಸಿದರೂ ಸಾಲದು.  ಇವು ಕೇವಲ ಕೆಲವು ಉದಾಹರಣೆಗಳು ಮಾತ್ರ.

ಗೂಗಲ್ ನ್ಯೂಸ್ ನಲ್ಲಿ ಬೇರೆ ಭಾಷೆಗಳ ವರದಿಗಳು ಬರುತ್ತಿವೆ, ಆದರೆ ಕನ್ನಡದಲ್ಲಿ ಬರುತ್ತಿಲ್ಲ ಇದಕ್ಕೆ ಏನಾದರೂ ಮಾಡೊಣ ಎಂದು ಒಬ್ಬರು ಹೇಳಿದರೆ, ಅವರಿಗೆ ಕೈ ಜೋಡಿಸಲು ಸಾವಿರಾರು ಮಂದಿ ನಮ್ಮ ಕನ್ನಡ ಯುವ ಸೈನ್ಯ ಸಿದ್ದ.  ಹೀಗೆ ಕನ್ನಡವನ್ನು ಕಟ್ಟುವ ನಮ್ಮ ಯುವ ಸೈನ್ಯವನ್ನ್ನು ಎಲ್ಲಾ ಕನ್ನಡಿಗರು ಪ್ರೋತ್ಸಾಹಿಸಬೇಕಾದದ್ದು  ಆದ್ಯ ಕರ್ತವ್ಯ. ಹೀಗೆ ನಮ್ಮ ಯುವ ಪಡೆ ಕನ್ನಡವನ್ನು ಸದ್ದಿಲ್ಲದೆ ಕಟ್ಟುವ ಕೆಲಸದಲ್ಲಿ ತೊಡಗಿದ್ದಾರೆ.  ಈ ತಂತ್ರಾಶಗಳನ್ನು ನಾವು ಮೊಬೈಲ್, ಗಣಕಯಂತ್ರ, ಲ್ಯಾಪ್ ಟಾಪ್ ಮುಂತಾದವುಗಳಲ್ಲಿ ಅಡವಳಿಸಿಕೊಂಡು ಅದನ್ನು ಸರಿಯಾದ ರೀತಿಯಲ್ಲಿ ಬಳಸುವುದೇ ನಾವು ಅವರಿಗೆ ಕೊಡುವ ಗೌರವ.

ಅನೇಕರು ಫೇಸ್ ಬುಕ್ ನಲ್ಲಿ ಆಂಗ್ಲ ಲಿಪಿಯಲ್ಲಿ ಕನ್ನಡವನ್ನು ಬರೆಯುತ್ತಾರೆ. ಅಂತಹವರು ದಯವಿಟ್ಟು ಇಂತಹ ತಂತ್ರಾಂಶಗಳನ್ನು ಬಳಸಿಕೊಂಡು ಕನ್ನಡದ ಲಿಪಿಯಲ್ಲೇ ತಮ್ಮ ಅಭಿಪ್ರಾಯಗಳನ್ನು, ಅನಿಸಿಕೆಗಳನ್ನು ಬಳಸಿದರೆ ಎಲ್ಲರಿಗೂ ಸಂತೋಷವಾಗುವುದು.  ನಾವು ಕಚೇರಿಗಳಲ್ಲಿ ಸಾಮಾನ್ಯವಾಗಿ ಆಂಗ್ಲ ಭಾಷೆಯಲ್ಲಿ ಬರೆಯುತ್ತೇವೆ, ನಾವು ಕನ್ನಡವನ್ನು ಹೊರಗಡೆ ಬಳಸುವುದೂ ಸಹ ಕಮ್ಮಿ.  ಕೇವಲ ನಾವು ಕನ್ನಡವನ್ನು ಮಾತನಾಡಿದರೆ ಸಾಲದು, ನಮಗೆ ಓದಲು ಮತ್ತು ಬರೆಯಲು ಬಂದರೆ ನಾವು ಅದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ಸಹಾಯಕವಾಗುವುದು.

ಸಾಫ್ಟ್ ವೇರ್ ನಲ್ಲಿ ಕೆಲಸ ಮಾಡುವವರು ಸಾವಿರಾರು ರೂಪಾಯಿಗಳನ್ನು ಸಂಪಾದಿಸುತ್ತಾರೆ., ಜೀವನವನ್ನು ಬಹಳ ಮೋಜಿನಲ್ಲಿ ಕಳೆಯುತ್ತಾರೆ.  ಅವರಿಗೆ ಸಮಾಜದ ಬಗ್ಗೆ ಪ್ರೀತಿ, ಗೌರವ ಇಲ್ಲ, ಅವರು ಸಮಾಜಕ್ಕಾಗಿ ಏನೊ ಮಾಡುವುದಿಲ್ಲ ಎಂಬುದು ಅನೇಕರ ತಪ್ಪು ತಿಳುವಳಿಕೆ. (ಅಂತಹವರು ಇರಬಹುದು, ಇರಲಿ ಬಿಡಿ ಅವರ ಸಹವಾಸ ನಮಗೇಕೆ?) ನಮಗೆ ನಮ್ಮ ಕನ್ನಡದ ಹುಡುಗರು ಮುಖ್ಯ. ಅವರ ಸಾಧನೆ, ಪರಿಶ್ರಮ ಮುಖ್ಯ.  ಈ ನಮ್ಮ ಕನ್ನಡ ಯುವ ಪಡೆಯ ಸಾಧನೆಗಳನ್ನು ನೋಡಿ. ಇಂತಹ ಅನೇಕ ಕೆಲಸಗಳನ್ನು  ಸದ್ದಿಲ್ಲದೆ ಮಾಡುತ್ತಿರುತ್ತಾರೆ.  ಅವರಿಗೆ ಒಳ್ಳೆಯದಾಗಲಿ. ಶುಭವಾಗಲಿ. (ಮುಗಿಯಿತು)