Saturday 30 June 2012

"ಕನ್ನಡದ ಪೂಜಾರಿ"

ಚಿಕ್ಕಮಗಳೂರು ಜಿಲ್ಲೆಯ ಹಿರೇಮಗಳೂರಿನ ಕಣ್ಣನ್ ಅವರ "ಹರಟೆ" ಕಾರ್ಯಕ್ರಮವನ್ನು (ಉದಯ ಟಿ.ವಿಯವರು ಪ್ರಸಾರ ಮಾಡುತ್ತಿದ್ದ) ಬಹಳಷ್ಜ್ಟು ಜನರು ನೋಡಿದ್ದಾರೆ.  ಅದು ಬಹಳ ಜನಪ್ರಿಯವಾಗಿತ್ತು. ಈಗಲೂ ಹಬ್ಬ ಮುಂತಾದ ವಿಶೇಷ ಸಂಧರ್ಭದಲ್ಲಿ ಆ ಕಾರ್ಯಕ್ರಮ ಬರುತ್ತದೆ. ಅವರ ನಾಲಿಗೆ ಮೇಲೆ ಕನ್ನಡ ಕುಣಿದಾಡುವುದನ್ನು ನೋಡುವುದೇ ಒಂದು ಸೊಗಸು.  ಒಂದು ಆಚ್ಚರಿಯ ಸಂಗತಿ ಎಂದರೆ ಅವರ ಮಾನೆಯ ಮಾತು ತಮಿಳು, ಅವರ ಕನ್ನಡ ಸೇವೆ ಬಹಳ ದೊಡ್ಡದು.   ಅವರು ದೇವರಿಗೆ ಸಂಸ್ಕೃತ ಶ್ಲೋಕದ ಬದಲಿಗೆ ಕನ್ನಡದ ದೇವರನಾಮಗಳಿಂದ ಪೂಜೆಯನ್ನು ಸಲ್ಲಿಸಿ ಇತರ ಅರ್ಚಕರಿಗೆ ಮಾದರಿಯಾಗಿದ್ದಾರೆ.  ಅನೇಕ ಭಕ್ತರ ಮನಗೆದ್ದಿದ್ದಾರೆ. ಹಿರೇಮಗಳೂರಿನ "ಶ್ರೀ ರಾಮ" ದೇವಸ್ಥಾನದಲ್ಲಿ ದೇವರಿಗೆ ಕನ್ನಡದಲ್ಲಿ ಮಾತ್ರ ಪೂಜೆ, ಪುನಸ್ಕಾರಗಳು. ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳಲ್ಲೂ, ಮದುವೆ, ಮುಂಜಿ ಮುಂತಾದ ಕಾರ್ಯಕ್ರಮಗಳು  ಸಂಸ್ಕೃತದಲ್ಲಿ ನಡೆಯುವುದು ಎಲ್ಲರಿಗೂ ತಿಳಿದ ವಿಚಾರ. ಅದು ಎಷ್ಟು ಜನರಿಗೆ ಅರ್ಥವಾಗುವುದೋ, ಇಲ್ಲವೋ ತಿಳಿಯದು.  ಅವರು ಮದುವೆ, ಮುಂಜಿ,  ಮುಂತಾದ ಎಲ್ಲಾ ಶುಭ ಕಾರ್ಯಕ್ರಮವನ್ನೂ ಸಹ ಕನ್ನಡದಲ್ಲಿ ನೆರವೇರಿಸುವರು ಮತ್ತು ಅದರ ಅರ್ಥವನ್ನು ಎಲ್ಲರಿಗೂ ತಿಳಿಯುವ ಹಾಗೆ ಕನ್ನಡದಲ್ಲಿ ವಿವರಿಸುವರು. ಅವರು ತಮ್ಮಂತೆಯೇ ೮-೧೦ ಶಿಷ್ಯಂದಿರನ್ನೂ ತಯಾರು ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಕರ್ನಾಟಕದ ಉಳಿದ ದೇವಸ್ಥಾನಗಳಲ್ಲಿ ಕನ್ನಡದಲ್ಲಿ ಪೂಜೆ ಪುನಸ್ಕಾರಗಳು ನಡೆಯುವಂತಾಗಲಿ. ಯುವ ಅರ್ಚಕರು ಮತ್ತು ಯುವ ಭಕ್ತರು ಇದರ ಬಗ್ಗೆ ಯೋಚಿಸಿ ಕಾರ್ಯಕ್ರಮವನ್ನು ಹಮ್ಮಿಕೊಂಡರೆ ಒಳ್ಳೆಯದು.

Thursday 28 June 2012

ಬ್ರಾಂಡ್ ಮತ್ತು ಜನರಿಕ್ ಓಷಧಗಳು : ಭಾಗ-೪

ಜನರಿಕ್ ಓಷಧಗಳಿಗೆ ಹೆಚ್ಚು ಪ್ರಚಾರವಿರುವುದಿಲ್ಲ ಅಷ್ಟೇ. ಬ್ರಾಂಡ್ ಓಷಧಗಳನ್ನು ತಯಾರಿಸುವ ಕಂಪನಿಗಳು ಓಷಧಗಳನ್ನು ಸಂಶೋಧಿಸುವಾಗ ತಮ್ಮ ಸಮಯ ಮತ್ತು ಸಾಕಷ್ಟು ಹಣವನ್ನು ಖರ್ಚುಮಾಡಿರುತ್ತವೆ. ಪ್ರಚಾರ ಮಾಡಬೇಕಿರುತ್ತದೆ, ಮಾರುಕಟ್ಟೆಯ ಸಮೀಕ್ಷೆ ಮಾಡಬೇಕಿರುತ್ತದೆ ಮತ್ತು  ಆ ಓಷಧವನ್ನು ವಿವಿಧ ಹಂತಗಳಲ್ಲಿ ಪರೀಕ್ಷಿಸಬೇಕಾಗಿರುತ್ತದೆ.  ಹಾಗಾಗಿ ಬ್ರಾಂಡ್ ಓಷಧದ ಬೆಲೆ ಹೆಚ್ಚಾಗಿರುತ್ತದೆ. ಈ ಓಷಧಿಗಳಿಗೆ ಅದನ್ನು ತಯಾರಿಸುವ ಕಂಪನಿಗಳು ಹಕ್ಕುಸ್ವಾಮ್ಯ (ಪೇಟೆಂಟ್) ಪಡೆದುಕೊಂಡಿರುತ್ತವೆ. ಆಗ ಅದನ್ನು ಬೇರೆ ಕಂಪನಿಗಳು ಅದನ್ನು ತಯಾರು ಮಾಡುವಹಾಗಿಲ್ಲ. ಕೆಲವು ವರ್ಷಗಳ ನಂತರ ಹಕ್ಕುಸ್ವಾಮ್ಯ ರದ್ದಾಗುತ್ತದೆ. ಆಗ ಇತರೆ ಕಂಪನಿಗಳು ಆ ಬ್ರಾಂಡ್ ಓಷಧವನ್ನು ತಯಾರುಮಾಡಬಹುದು, ಆದರೆ ಅದೇ ಹೆಸರನ್ನು ಇಡುವಹಾಗಿಲ್ಲ. ಬೇರೆ ಹೆಸರಿನಲ್ಲಿ ಬಿಡುಗಡೆ ಮಾದಬಹುದು. ಉದಾ: ಹಕ್ಕುಸ್ವಾಮ್ಯ ರದ್ದಾದ ತಲೆನೋವಿನ ಮಾತ್ರೆಗೆ ಸಾರಿಡಾನ್ ಹೆಸರನ್ನು ಇಡುವ ಹಾಗಿಲ್ಲ.

ಹಕ್ಕುಸ್ವಾಮ್ಯ ರದ್ದಾದ ಓಷಧಗಳನ್ನು ಇತರೆ ಕಂಪನಿಗಳು ತಯಾರಿಸುವಾಗ, ಸಂಶೋಧನೆಗಾಗಿ ಹಣ ಖರ್ಚುಮಾಡಬೇಕಿಲ್ಲ, ಸಮಯ ಉಳಿಯುತ್ತದೆ ಮತ್ತು ಈಗಾಗಲೇ ಅದು ಪರೀಕ್ಷಿಲ್ಪಟ್ಟಿರುತ್ತದೆ. ಪುನ: ಮಾರುಕಟ್ಟೆಯ ಸಮೀಕ್ಷೆ ಬೇಕಿರುವುದಿಲ್ಲ. ಹೀಗಾಗಿ ಜನರಿಕ್ ಓಷಧಗಳನ್ನು ತಯಾರಿಸುವ ಕಂಪನಿಗಳಿಗೆ ಹೆಚ್ಚಿನ ಹಣ ಉಳಿತಾಯವಾಗುತ್ತದೆ. ಹೀಗಾಗಿ ಜನರಿಕ್ ಓಷಧಿಗಳು ಬಹಳ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ದೊರಕುತ್ತದೆ. ಈ ಓಷಧಿಗಳನ್ನು ವರ್ಲ್ಡ್ ಹೆಲ್ತ್ ಆರ್ಗನೈಜ಼ೇಷನ್ ಮಾನ್ಯ ಮಾಡಿದೆ. ಈ ಜನರಿಕ್ ಓಷಧಿಗಳು ನಮ್ಮ ದೇಶದಿಂದ ಹೊರ ದೇಶಗಳಿಗೆ  ಲಕ್ಷಗಟ್ಟಲೆ  ರಫ್ತಾಗುತ್ತಿದೆ, ಆದರೆ ಅದು ನಮ್ಮ ದೇಶದ ಜನರಿಗೆ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ. ಇದು ನಮ್ಮ ದೇಶದ ಜನರ ದುರಂತವೇ ಸರಿ.

ಈಗ ಮಾರುಕಟ್ಟೆಯಲ್ಲಿ ಜನರಿಕ್ ಓಷಧಿಗಳು ದೊರೆಯುತ್ತವೆ, ಅದನ್ನು ಬಳಸಿಕೊಳ್ಳುವುದು ಬಿಡುವುದು ಅವರವರ ಇಚ್ಚೆಗೆ ಬಿಟ್ಟಿದ್ದು. ಇನ್ನೂ ಇದರ ಬಗ್ಗೆ ಹೆಚ್ಚಿನ ತಿಳುವಳಿಕೆ ಬೇಕಾಗಿದ್ದಲ್ಲಿ ಗೂಗಲ್ ನಲ್ಲಿ ಜನರಿಕ್ ಓಷಧಿಗಳು ಎಂದು ಹುಡುಕಿದರೆ ಅದರಲ್ಲಿ ಪುಟಗಟ್ಟಲೆ ಮಾಹಿತಿ ಸಿಗುತ್ತದೆ.  ಆಸಕ್ತರು ಗಮನಿಸಬಹುದು. (ಮುಗಿಯಿತು)

Wednesday 27 June 2012

ಬ್ರಾಂಡ್ ಮತ್ತು ಜನರಿಕ್ ಓಷಧಗಳು : ಭಾಗ-೩


ಇದನ್ನು ಉದಾಹರಣೆಯೊಂದಿಗೆ ವಿವರಿಸಬೇಕಾದರೆ ನಮಗೆ ತಲೆನೋವು ಬಂದಾಗ ನಾವು ಸಾರಿಡಾನ್ ಮಾತ್ರೆಯನ್ನು ತೆಗೆದುಕೊಳ್ಳುತ್ತೇವೆ. ಸಾರಿಡಾನ್ ಮಾತ್ರೆ ನಮಗೆ ಮಾರುಕಟ್ಟೆಯಲ್ಲಿ ೧೫ ರೂಪಾಯಿಗಳಾಗುತ್ತದೆ (೧೦ಕ್ಕೆ.)  ಅದೇ ನಾವು ಜನರಿಕ್ ಓಷಧ ಅಂಗಡಿಯಲ್ಲಿ ನಮಗೆ ತಲೆನೋವು ಹೋಗುವ ಮಾತ್ರೆ  ಅಂದಾಜು ೨-೩ ರೂಪಾಯಿಗಳ ಒಳಗೆ ಸಿಗುತ್ತದೆ (೧೦ಕ್ಕೆ.) ಇದೇ ಜನರಿಕ್ ಮತ್ತು ಇತರೆ ಬ್ರಾಂಡ್ ಓಷಧಿಗಳ ವ್ಯತ್ಯಾಸ. ತಲೆನೋವು ನಿವಾರಿಸುವ ಅನೇಕ ಮಾತ್ರೆಗಳು ಮಾರುಕಟ್ಟೆಯಲ್ಲಿ ಲಭ್ಯ. ಅದನ್ನು ಇತರ ಕಂಪನಿಗಳೂ ಸಹ ತಯಾರಿಸುತ್ತವೆ, ಬೇರೆಬೇರೆ ಹೆಸರುಗಳಲ್ಲಿ (ಅನಾಸಿನ್,  ಆಸ್ಪ್ರೋ, ಇತ್ಯಾದಿ.) ನಾವು ಯಾವ ಕಂಪನಿಯ ಮಾತ್ರೆಯನ್ನು ತೆಗೆದುಕೊಂಡರೂ ತಲೆನೋವು ಹೋಗುವುದಿಲ್ಲವೇ, ಹಾಗೆ ನಾವು ನಮಗೆ ತಲೆನೋವು ಬಂದಾಗ ಜನರಿಕ್ ಓಷಧಿಯನ್ನೂ ಸಹ ತೆಗೆದುಕೊಳ್ಳಬಹುದು.

ಜನರಿಕ್ ಓಷಧಿಗಳಿಗೆ ಬೇರೆ ಬೇರೆ ರಾಸಾಯನಿಕ ಹೆಸರುಗಳು ಇರುತ್ತದೆ ಅಷ್ಟೇ. ಉದಾ: ಮಧುಮೇಹ ರೋಗಕ್ಕೆ ಜನರಿಕ್ ಓಷಧದ ಹೆಸರು ಮೆಟಫಾರ್ಮಿನ್ (Metapharmin) ಅದೇ ಬ್ರಾಂಡ್ ಓಷಧದ ಹೆಸರು ಗ್ಲುಕೋಫೇಜ್ (Glucophage) ಹಾಗೆಯೇ ಬಿ.ಪಿ.ಗೆ ಜನರಿಕ್ ಓಷಧದ ಹೆಸರು ಮೆಟಪ್ರೊಲಾಲ್ (Metaprolal) ಬ್ರಾಂಡ್ ಓಷಧದ ಹೆಸರು ಲೋಪ್ರೆಸ್ಸೊರ್ (Lopressor) ಇತ್ಯಾದಿ. ಜನರಿಕ್ ಓಷಧಗಳು ಬೇರೆ ಬೇರೆ ಆಕಾರಗಳಲ್ಲಿ ಇರಬಹುದು, ಅದು ಬೇರೆ ರುಚಿಯಲ್ಲಿರಬಹುದು ಮತ್ತು ಬೇರೆ ಬೇರೆ ಬಣ್ಣಗಳಲ್ಲಿರಬಹುದು. ಆದರೆ ಅದು ಯಾವುದೇ ಬ್ರಾಂಡ್ ಓಷಧದಂತೆಯೇ ಕೆಲಸಮಾಡುತ್ತದೆ ಮತ್ತು ಈ ಓಷಧಿಗಳು ಬ್ರಾಂಡ್ ಓಷಧಿಗಳಂತೆ ಪರಿಣಾಮಕಾರಿಯೂ ಹೌದು. ಜನರಿಕ್ ಓಷಧಗಳು ಸಹ ಸರ್ಕಾರದ ನೀತಿ ನಿಯಮಗಳಿಗೆ ಒಳಪಟ್ಟಿರುತ್ತದೆ.  (ಮಿಕ್ಕಿದ್ದು ನಾಳೆಗೆ)

Tuesday 26 June 2012

ಬ್ರಾಂಡ್ ಮತ್ತು ಜನರಿಕ್ ಓಷಧಗಳು : ಭಾಗ-೨








ಪತ್ರಿಕೆಯಲ್ಲಿ ವರದಿಯಾಗಿರುವಂತೆ ಜನರಿಕ್ ಓಷಧಿಗಳಿಗೂ ಮತ್ತು ಇತರೆ ಬ್ರಾಂಡ್ ಓಷಧಿಗಳ ಬೆಲೆಯ ವ್ಯತ್ಯಾಸ ಈ ರೀತಿ ಇದೆ.


    ಖಾಯಿಲೆ                                          ಜನರಿಕ್                          ಬ್ರಾಂಡ್                                            
೧.    ಹುಳದ ಮಾತ್ರೆ(೧ ಕ್ಕೆ)                         ೧.೬೦                        ೧೮.೪೦                                        
೨.    ಬಿ.ಪಿ (೧೪ ಮಾತ್ರೆಗೆ)                          ೩.೬೦                        ೪೬.೮೭                                         
೩.    ಬೊಜ್ಜು ನಿವಾರಕ (೧೦ ಮಾತ್ರೆಗೆ)        ೧೨.೫೦                    ೧೦೪.೪೯                                       
೪.    ಆಂಟಿ ಬಯೋಟಿಕ್ ೨೫೦ ಮೆಂ.ಜಿ
 (೧೦ ಮಾತ್ರೆಗೆ)                                       ೨೬.೫೦                     ೯೨.೫೦                                           
೫.    ಆಂಟಿ ಬಯೋಟಿಕ್ ೫೦೦ ಮೆಂ.ಜಿ
 (೧೦ ಮಾತ್ರೆಗೆ)                                         ೧೩.೫೦                  ೯೯.೫೦                                                    
೬.    ಶೀತ (೧೦ ಮಾತ್ರೆಗೆ)                             ೧.೨೦                  ೩೭.೫೦                                                   
೭.    ಮಧುಮೇಹ (೨೦ ಮಾತ್ರೆಗೆ)                    ೮.೨೦                 ೨೩.೭೯                                                              
೮.    ನೋವು ನಿವಾರಕ(೧೫ ಮಾತ್ರೆಗೆ)             ೨.೬೦                  ೫೨.೩೦                                                                                                                                                                                                                                
೯.    ಆಸಿಡಿಟಿ (೧೦ ಮಾತ್ರೆಗೆ)                          ೧೦.೬೦             ೮೦.೦೮      
೧೦    ಜ್ವರ (೧೫ ಮಾತ್ರೆಗೆ)                               ೪.೬೦              ೧೮.೧೫            
               

ಸುಲಭವಾಗಿ ಹೇಳಬೇಕೆಂದರೆ ಜನರಿಕ್ ಓಷಧಿಗಳೆಂದರೆ ಅದು ಬ್ರಾಂಡ್ ಓಷಧಿಗಳಲ್ಲ. ಮಾರುಕಟ್ಟೆಯಲ್ಲಿ ಜನರಿಕ್ ಓಷಧಿ ಮತ್ತು ಬ್ರಾಂಡ್ ಓಷಧಿಗಳು ದೊರೆಯುತ್ತವೆ. ಜನರಿಗೆ ಬ್ರಾಂಡ್ ಓಷಧಿಗಳ ಮೇಲೆ ಹೆಚ್ಚು ನಂಬಿಕೆ. ಜನರಿಕ್ ಓಷಧಿಗಳ ಮೇಲೆ ಇಲ್ಲ, ಹಾಗಾಗಿ ಈ ಓಷಧಿಗಳು ತುಂಬಾ ಹೆಸರುವಾಸಿಯಾಗಿಲ್ಲ. ಜನರಿಕ್ ಓಷಧಗಳ ಬಗ್ಗೆ ನಮ್ಮ ದೇಶದ ಹೆಚ್ಚಿನ ಜನರಿಗೆ ತಿಳಿದಿಲ್ಲ. ಇದು ಹೆಚ್ಚಿನ ಜನರಿಗೆ ಗೊತ್ತಾಗಿದ್ದು, ಇತ್ತೀಚಿನ  " ಸತ್ಯಮೇವ ಜಯತೆ " ಕಾರ್ಯಕ್ರಮದಲ್ಲಿ ಅಮೀರ್ ಖಾನ್ ಇದರ ಬಗ್ಗೆ ತಿಳಿಸಿದಾಗಲೇ ಎಂದರೆ ಅದು ಅತಿಶಯೋಕ್ತಿ ಏನಲ್ಲ.    
                                                                                      
ಜನರಿಕ್ ಓಷಧಗಳ ಬಗ್ಗೆ ಹೆಚ್ಚಿನ ಮಾಹಿತಿ ಇರುವವರು, ವೈದ್ಯರಿಗೆ ಜನರಿಕ್ ಓಷಧಗಳನ್ನು ಬರೆದುಕೊಡುವಂತೆ ಕೇಳುವುದಿಲ್ಲ. ಕೇಳಲು ಏನೋ ಸಂಕೋಚ. ಮಾಹಿತಿ ಇರುವ ಹೆಚ್ಚಿನ ವೈದ್ಯರು ತಮ್ಮ ರೋಗಿಗಳಿಗೆ ಇದರ ಬಗ್ಗೆ ತಿಳಿಸುವುದಿಲ್ಲ. ವೈದ್ಯರು ಇದರಲ್ಲಿ ಹೆಚ್ಚಿನ ಪಾತ್ರವನ್ನು ವಹಿಸಬೇಕು. ಕೆಲವರಿಗೆ ಜನರಿಕ್ ಓಷಧಿಗಳೆಂದರೆ ಏನೋ ಅಸಡ್ಡೆ. ಅದು ತಂಬಾ ಕಡಿಮೆ ಬೆಲೆಯಲ್ಲಿ ದೊರಕುವ ಕಾರಣ ಅದು ಸರಿಯಾಗಿ ಕೆಲಸ ಮಾಡುವುದಿಲ್ಲವೇನೋ ಎಂಬ ಅಂಜಿಕೆ. ಆದರೆ ಅದು ಹಾಗೇನೂ ಇಲ್ಲ. ಸಾರ್ವಜನಿಕರು ಜನರಿಕ್ ಓಷಧವೆಂದರೆ ಅಸಡ್ಡೆ ಪಡುವಂತಹದ್ದೇನೂ ಇಲ್ಲ. ಆ ಓಷಧಗಳೂ ಸಹ ಇತರೆ ಬ್ರಾಂಡ್ ಓಷಧಗಳ ಹಾಗೆಯೇ ಕೆಲಸ ಮಾಡುತ್ತದೆ. ಜನರಿಕ್ ಓಷಧವೂ ಸಹ ರೋಗಿಯನ್ನು ಗುಣಪಡಿಸುತ್ತದೆ. ಅದರಲ್ಲಿಯೂ ಸಹ ನಮ್ಮ ರೋಗವನ್ನು ಗುಣಪಡಿಸುವ ಶಕ್ತಿ ಇರುತ್ತದೆ. ನಮಗೆ ಈಗ ಏನಾಗಿದೆಯೆಂದರೆ ನಾವು ದಿನವೂ ಈ ಬ್ರಾಂಡ್ ಓಷಧಿಗಳ ಜಾಹೀರಾತುಗಳನ್ನು ನೋಡಿ ನೋಡಿ, ಅದರ ಬಗ್ಗೆ ಕೇಳಿ ಕೇಳಿ ನಮಗೆ ಅದೇ ಮೆದುಳಿನಲ್ಲಿ ಕುಳಿತುಕೊಂಡುಬಿಟ್ಟಿದೆ. ಈಗ ನಮಗೆ ಯಾರು ಏನೇ ಹೇಳಿದರೂ ರುಚಿಸದಂತಾಗಿಬಿಟ್ಟಿದೆ, ಹಾಗಾಗಿ ನಮಗೆ ವೈದ್ಯರೇ ಜನರಿಕ್ ಓಷಧಗಳನ್ನು ಶಿಫಾರಸ್ಸು  ಮಾಡಿದರೂ ನಾವು ಅದನ್ನು ತೆಗೆದುಕೊಳ್ಳಲು ಹಿಂದೆ ಮುಂದೆ ನೋಡಬೇಕಾದ  ಪರಿಸ್ಥಿತಿಯನ್ನು ನಾವೇ ತಂದುಕೊಂಡು ಬಿಟ್ಟಿದ್ದೇವೆ.  (ಮಿಕ್ಕಿದ್ದು ನಾಳೆಗೆ)

Monday 25 June 2012

ಬ್ರಾಂಡ್ ಮತ್ತು ಜನರಿಕ್ ಓಷಧಗಳು : ಭಾಗ-೧

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು (ಕೇಂದ್ರ ಸರ್ಕಾರ) ಗ್ಲಾಕ್ಸೊಸ್ಮಿತ್ ಕ್ಲೈನ್, ರಾನ್ ಬಕ್ಸಿ, ಡಾ.ರೆಡ್ಡೀಸ್, ಮುಂತಾದ ಪ್ರಖ್ಯಾತ ಔಷಧಿ ತಯಾರಿಸುವ ಕಂಪನಿಗಳು ತಮ್ಮ ಉತ್ಪಾದನಾ ವೆಚ್ಚಕ್ಕಿಂತ ಶೇ.೧,೧೨೩ ರಷ್ಟು ಹೆಚ್ಚು ದರದಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟಮಾಡುತ್ತಿವೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಔಷಧಿಗಳಿಗೆ ಗರಿಷ್ಟ ರೀಟೇಲ್ ದರವನ್ನು ನಿಗದಿಪಡಿಸಿ ಮಾರಾಟ ಮಾಡಬೇಕಾದ ಈ ಕಂಪನಿಗಳು ಅತ್ಯಧಿಕ ದರವನ್ನು ನಿಗದಿಪಡಿಸುತ್ತವೆ (ಸುಮಾರು ೧,೦೦೦ ಪಟ್ಟು.) ಇದರಲ್ಲಿ ವಿತರಕರು, ಸಗಟು ವ್ಯಾಪಾರದಾರರು, ರೀಟೇಲ್ ವ್ಯಾಪಾರಸ್ಥರು ಈ ವಂಚನೆಯಲ್ಲಿ ಪಾಲ್ಗೊಂಡು ಗ್ರಾಹಕರಿಗೆ ವಂಚಿಸುತ್ತಾರೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಈ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿದಾಗ ನನಗೆ ಸತ್ಯಮೇವ ಜಯತೆ ಕಾರ್ಯಕ್ರಮದ ನೆನಪು ಬಂತು.

ಆ ಕಾರ್ಯಕ್ರಮದಲ್ಲಿ ಜನರಿಕ್ ಓಷದ ಮಳಿಗೆಗಳ ಬಗ್ಗೆ ವಿವರಿಸುತ್ತಾ ಸುಮಾರು ೨,೩೦೦ ಬೆಲೆಯ ಔಷಧಿಗಳು ಈ ರೀತಿಯ ಜನರಿಕ್ ಔಷಧ ಮಳಿಗೆಗಳಲ್ಲಿ ಕೇವಲ ೩೫೦ ರೂಪಾಯಿಗಳಿಗೆ ದೊರಕುತ್ತದೆ. ಇದು ಇತರೆ ಔಷಧ ಮಳಿಗೆ ಮತ್ತು ಜನರಿಕ್ ಔಷಧ ಮಳಿಗೆಗಳ ವ್ಯ್ತತ್ಯಾಸ. ಈ ರೀತಿಯ ಜನರಿಕ್ ಓಷಧ ಮಳಿಗೆಗಳು ನಮ್ಮ ದೇಶದ ಎಲ್ಲಾ ರಾಜ್ಯಗಳಲ್ಲೂ ಇದ್ದರೆ ಸಾರ್ವಜನಿಕರಿಗೆ ಬಹಳ ಉಪಯುಕ್ತವಾಗುವುದು ಎಂದು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೈದ್ಯರು ತಿಳಿಸಿದ್ದರು. ಮೇಲಿನ ಸುದ್ದಿ ಇದನ್ನು ಪುಷ್ಟೀಕರಿಸುತ್ತದೆ. ಈ ಓಷಧಗಳನ್ನು ಕಂಡು ಹಿಡಿಯಲು, ತಯಾರಿಸಲು ಮತ್ತು ಜನರ ಮೇಲೆ ಪ್ರಯೋಗಿಸಿ ಅದು ಸೂಕ್ತವಾಗಿ ಕೆಲಸ ಮಾಡುತ್ತದೆ ಎಂದರೆ ಮಾತ್ರ ಆ ಓಷದವು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತದೆ. ಇಲ್ಲದ್ದಿದ್ದರೆ ಇಲ್ಲ. ಈ ಅವಧಿಯಲ್ಲಿ ನಮಗೆ ಬಹಳಷ್ಟು ಸಮಯ, ಹಣ ಖರ್ಚಾಗುತ್ತದೆ ಎಂದು ಈ ಕಂಪನಿಗಳ ವಾದ. ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡರೂ ೧,೦೦೦ ಪಟ್ಟು ಹೆಚ್ಚಿನ ಬೆಲೆ ಎಂದರೆ, ಅದು ಕಂಪನಿಗಳ ಧನದಾಹವೆಂದೇ ಹೇಳಬೇಕು.

ಜೂನ್ ೨೧ ರಿಂದ ಕರ್ನಾಟಕದ ೨೦ ಜಿಲ್ಲೆಗಳಲ್ಲಿ ಮಾರುಕಟ್ಟೆ ದರದ ಅರ್ಧಕ್ಕಿಂತ ಕಡಿಮೆ ದರದಲ್ಲಿ ಜನರಿಕ್ ಔಷಧ ಲಭ್ಯ ಎಂಬ ಮಾಹಿತಿ ರಾಜ್ಯ ಸರ್ಕಾರದಿಂದ ಬಂದಿದೆ. ನಗರದ ವಿಕ್ಟೋರಿಯಾ ಆಸ್ಪತ್ರೆಯ ಜನತಾ ಬಜಾರ್ ಮಳಿಗೆಯಲ್ಲಿ ದೊರಯುವ ಮಾಹಿತಿ ಇದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬಹುದು. (ಈಗಾಗಲೇ ಅನೇಕ ಅಂಗಡಿಗಳಲ್ಲಿ ಜನರಿಕ್ ಓಷಧಗಳು ದೊರಕುತ್ತಿವೆ.) ವೈದ್ಯರು ತಮ್ಮ ಬಳಿ ಬರುವ ರೋಗಿಗಳಿಗೆ ಜನರಿಕ್ ಓಷಧಗಳನ್ನು ಶಿಫಾರಸ್ಸು ಮಾಡಿದರೆ ಒಳ್ಳೆಯದು. ಇಂದಿನ ದಿನಗಳಲ್ಲಿ ವೈದ್ಯಕೀಯ ಖರ್ಚು ಬಹಳ ಜಾಸ್ತಿಯಾಗಿದೆ. ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಬಹಳ ಹೊರೆಯಾಗುತ್ತಿದೆ.  ಜನರೂ ಸಹ ವೈದ್ಯರಿಗೆ ಜನರಿಕ್ ಓಷಧಿಗಳನ್ನು ಬರೆದುಕೊಡುವಂತೆ ವಿನಂತಿಸಬೇಕು. ಸಾಧಾರಣವಾಗಿ ವೈದ್ಯರು ಜನರಿಕ್ ಓಷಧಗಳನ್ನು ಬರೆದುಕೊಡುವುದಿಲ್ಲ. ಅವರು ಬರೆದುಕೊಡುವುದು ಕೇವಲ ಬ್ರಾಂಡ್ ಓಷಧಿಗಳನ್ನೇ. ಅವರು ಯಾಕೆ ಬರೆದುಕೊಡುವುದಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯವೇ.  "ವೈದ್ಯರು ಜನರಿಕ್ ಓಷಧಗಳನ್ನು ಶಿಫಾರಸು ಮಾಡಬೇಕು, ಇಲ್ಲದಿದ್ದರೆ ಅಂತಹವರನ್ನು ಗಂಭೀರವಾಗಿ ಪರಿಗಣಿಸಲಾಗುವುದು " ಎಂದು ಸರ್ಕಾರವೇನೋ ಹೇಳುತ್ತದೆ. ಆದರೆ ಅದು ನಮ್ಮ ದೇಶದಲ್ಲಿ ಸಾಧ್ಯವೇ ಎಂಬುದು ಪ್ರಶ್ನೆ. ಜನರಿಕ್ ಓಷದಗಳು ಕೇವಲ ಚಿಕ್ಕ ಪುಟ್ಟ ಖಾಯಿಲೆಗಳಿಗೆ ಮಾತ್ರವಲ್ಲದೇ  ಕ್ಯಾನ್ಸರ್, ಮೂತ್ರ ಪಿಂಡ ರೋಗ, ಮಧುಮೇಹ, ಹೃದ್ರೋಗ ಮುಂತಾದ ಖಾಯಿಲೆಗಳಿಗೂ ಜನರಿಕ್ ಓಷಧಗಳು ಲಭ್ಯ.   (ಮಿಕ್ಕಿದ್ದು ನಾಳೆಗೆ)


Tuesday 19 June 2012

ಶೇರು ಮಾರುಕಟ್ಟೆ : ಸರಣಿ ಲೇಖನ ಭಾಗ -8

ಕಳೆದ ಸಂಚಿಕೆಯಿಂದ

ನೀವು ಹೇಗೆ  ಈ ವ್ಯವಹಾರದಲ್ಲಿ ಹಣ ಮಾಡಬಹುದು ಎಂಬುದಕ್ಕೆ ಒಂದು ಚಿಕ್ಕ ಉದಾಹರಣೆ : ನೀವು ಒಂದು ಇನ್ಫೋಸಿಸ್ ಶೇರನ್ನು ೨,೦೦೦ ರೊಪಾಯಿಗಳಲ್ಲಿ ಕೊಂಡು ಮುಂದೆ ನೀವು ಅದನ್ನು ೨,೫೦೦ ರೂಪಾಯಿಗಳಿಗೆ ಮಾರಿದರೆ ನಿಮಗೆ ೫೦೦ ರೂಪಾಯಿಗಳ ಲಾಭವುಂಟಾಗುವುದು. ನೀವು ಈ ಶೇರನ್ನು ಒಂದು ವರ್ಷದ ತನಕ ಇಟ್ಟುಕೊಂಡು ಮುಂದೆ ಅದನ್ನು ಮಾರಿದರೆ ನಿಮಗೆ ಬಂದ ಲಾಭಕ್ಕೆ ನೀವು ತೆರಿಗೆ ಕಟ್ಟುವ ಹಾಗಿಲ್ಲ. ನಿಮಗೆ ಕಂಪನಿಯಿಂದ ವರ್ಷಕ್ಕೊಮ್ಮೆ ಬರುವ ಲಾಭಂಶಕ್ಕೂ ತೆರೆಗೆ ಕಟ್ಟುವಹಾಗಿಲ್ಲ. ನೀವು ಶೇರನ್ನು ಒಂದು ವರ್ಷದ ಒಳಗೆ ಮಾರಿದರೆ ನಿಮಗೆ ಬರುವ ಲಾಭಕ್ಕೆ ನೀವು ತೆರಿಗೆ ಕಟ್ಟಬೇಕಾಗುತ್ತದೆ. ಅದೇ ಇನ್ಫೋಸಿಸ್ ಶೇರನ್ನು ನೀವು ೨,೦೦೦ ಕೊಂಡು ೧,೫೦೦ಕ್ಕೆ ಮಾರಿದರೆ ನಿಮಗೆ ೫೦೦ ರೊಪಾಯಿಗಳ ನಷ್ಟವುಂಟಾಗುತ್ತದೆ. ಶೇರುಗಳು ದಿನವೂ ಏರಿಳಿತದಲ್ಲಿ ತೊಡಗಿಕೊಂಡಿರುತ್ತವೆ. ನಿಮಗೆ ಮುಖ್ಯವಾಗಿ ಈ ವ್ಯವಹಾರದಲ್ಲಿ ಯಾವೆ ಶೇರನ್ನು ಯಾವಾಗ ಖರೀದಿಸಬೇಕು ಮತ್ತು ಅದನ್ನು ಯಾವಾಗ ಮಾರಾಟ ಮಾಡಬೇಕು ಎಂಬ ಜ್ಞಾನ, ಅತ್ಯಂತ ಅವಶ್ಯಕ. ಇದು ಇಲ್ಲದಿದ್ದ ಪಕ್ಷದಲ್ಲಿ ನೀವು ಈ ಶೇರು ಮಾರುಕಟ್ಟೆಯಿಂದ ದೂರವಿರುವುದು ಮೇಲು. ಆದರೆ ಇದನ್ನು ನಿಮಗೆ ಕಲಿಸುವ ವ್ಯವಸ್ಥೆ ಇದೆ. ಮೊದಲು ನಿಮಗೆ ಇದರ ಬಗ್ಗೆ ಆಸಕ್ತಿ ಇದ್ದರೆ ನೀವು  ಒಂದು ಕೈ ನೋಡಬಹುದು.

ಇದು ಒಂದು ದೊಡ್ಡ ವ್ಯವಹಾರ. ವೈಜ್ಞಾನಿಕವಾಗಿ ದೀರ್ಘ ಕಾಲಕ್ಕೆ ಹಣ ಹೂಡಿದರೆ ಹೆಚ್ಚಿನ ಮಟ್ಟದ ಯಶಸ್ಸು ಸಿಗುತ್ತದೆ. ಹಾಗಾಗಿ ಇದರ ಬಗ್ಗೆ ಹೆಚ್ಚಿನ ಜ್ಞಾನ, ತಿಳುವಳಿಕೆ ಅತ್ಯವಶ್ಯಕ. ಈ ಲೇಖನ ಶೇರು ಮಾರುಕಟ್ಟೆಯ ಕುರಿತು ಒಂದು ಚಿಕ್ಕ ಮಾಹಿತಿ ಅಷ್ಟೇ. ಇದು ಒಂದು ದೊಡ್ಡ ಸರೋವರ ಇದ್ದಂತೆ. ಇದರಲ್ಲಿ ನಿತ್ಯವೂ ಕಲಿಕೆಯು ಇರುತ್ತದೆ.

ನಿಮಗೆ ಇದ್ಯಾವುದರ ತಲೆ ಬಿಸಿ ಬೇಕಾಗಿಲ್ಲ. ನಿಮಗೆ ಇವೆಲ್ಲವನ್ನು ಕಲಿಯಲು ಆಸಕ್ತಿ ಮತ್ತು ಸಮಯವಿಲ್ಲವೆಂದರೆ ಅಂಥವರು ಮ್ಯೂಚುಯ ಫಂಡ್ ನಲ್ಲಿ ಹಣ ಹೂಡಬಹುದು. ಇದಕ್ಕೂ ಸಹ ಸ್ವಲ್ಪ ಮಟ್ಟಿನ ಜ್ಞಾನ, ತಿಳುವಳಿಕೆ ಅತ್ಯವಶ್ಯಕ. (ಮುಗಿಯಿತು)


Monday 18 June 2012

ಶೇರು ಮಾರುಕಟ್ಟೆ : ಸರಣಿ ಲೇಖನ ಭಾಗ -೭

ಶೇರು ಮಾರುಕಟ್ಟೆ : ಸರಣಿ ಲೇಖನ ಭಾಗ -೭

ಕಳೆದ ಸಂಚಿಕೆಯಿಂದ

ಹೊಸದಾಗಿ ಶೇರು ಮಾರುಕಟ್ಟೆಯನ್ನು ಪ್ರವೇಶಿಸುವವರಿಗೆ " ಪ್ಯಾನ್ ಕಾರ್ಡ್ " ಅವಶ್ಯಕ. ಅವರು ಡಿಪಾಜಿಟರಿ ಪಾರ್ಟಿಸಿಪೆಂಟರಿ ಬಳಿ  " ಡಿ ಮ್ಯಾಟ್ " ಖಾತೆ ಹೊಂದಿರಬೇಕು. (ಇದು ಒಂಥರಾ ಬ್ಯಾಂಕ್ ಖಾತೆ ಹೊಂದಿರುವ ಹಾಗೆ) ಇಂಡಿಯಾ ಇನ್ಫೋಲಿನ್, ಇಂಡಿಯಾ ಬುಲ್, ಮೋತಿಲಾಲ್ ಒಸ್ವಾಲ್, ಶೇರ್ ಖಾನ್, ವೇ ಟು ವೆಲ್ತ್ ಮುಂತಾದ ಕೆಲವು ಡಿಪಾಜಿಟರಿ ಪಾರ್ಟಿಸಿಪೆಂಟರಿಗಳನ್ನು ಅಥವಾ ಶೇರು ಬ್ರೋಕರ್ ಗಳನ್ನು ಶೇರು ಮಾರುಕಟ್ಟೆಯ ವ್ಯವಹಾರಕ್ಕಾಗಿ ಸಂಪರ್ಕಿಸಬಹುದು. ಶೇರುಗಳನ್ನು ಕೊಳ್ಳಲು/ಮಾರಲು ಇವರುಗಳು ನಿಮಗೆ ಸಹಾಯ/ಸಲಹೆ ನೀಡುತ್ತಾರೆ ಮತ್ತು ಇದಕ್ಕೆ ಕಮೀಷನ್ ಸಹ ಇರುತ್ತದೆ. ಇಂತಹ ಡಿಪಾಜಿಟರಿ ಪಾರ್ಟಿಸಿಪೆಂಟರಿಯಲ್ಲಿ ನೀವು ಹಣವನ್ನು ಜಮೆ ಮಾಡಿದರೆ ಅದರಲ್ಲಿ ನೀವು ಶೇರುಗಳನ್ನು ಕೊಳ್ಳಬಹುದು. ಮುಂದೆ ನೀವು ಶೇರುಗಳನ್ನು ಮಾರಿದರೆ ಆ ಹಣವು ನಿಮ್ಮ ಖಾತೆಗೆ ಜಮೆಯಾಗುವುದು. ನಿಮಗೆ ಬೇಕಾದಾಗ ನೀವು ಹಣವನ್ನು ವಾಪಸ್ಸು ಪಡೆಯಬಹುದು. ನೀವು ಈ ವ್ಯವಹಾರವನ್ನು ಆನ್ ಲೈನ್ ಮುಖಾಂತರವೂ ಮಾಡಬಹುದು. ಕೆಲವು ಬ್ಯಾಂಕ್ ಗಳಲ್ಲಿ ಡಿ ಮ್ಯಾಟ್ ಖಾತೆಯ ಸೌಲಭ್ಯವೂ ಇದೆ. ಊದಾ: ಐ.ಸಿ.ಐ.ಸಿ.ಐ., ಹೆಚ್.ಡಿ.ಎಫ಼್.ಸಿ., ಎಸ್.ಬಿ.ಐ. ಇತ್ಯಾದಿ. ಉಳಿತಾಯ ಖಾತೆಯನ್ನು ಡಿ ಮ್ಯಾಟ್ ಖಾತೆಗೆ ಲಿಂಕ್ ಮಾಡುವ ಸೌಲಭ್ಯವೂ ಸಹ ಇದೆ.

ಇವತ್ತು ಹಣ ಹೂಡಿ ನಾಳೆ ಅದು ಎರಡರಷ್ಟು, ಮೂರರಷ್ಟು ಆಗುವುದೆಂದು ನಂಬುವವರಿಗೆ ಇದು ಅವರ ಮೆಚ್ಚಿನ ತಾಣವಲ್ಲ. ಇದಕ್ಕೆ ಸ್ವಲ್ಪ ಹೆಚ್ಚಿನ ವಿದ್ಯೆ, ಬುದ್ದಿ, ಸಹನೆ, ತಾಳ್ಮೆ, ಧೈರ್ಯ, ಆಸಕ್ತಿ ಮುಂತಾದ ಅನೇಕ ವಿಷಯಗಳು ಬೇಕಾಗುತ್ತವೆ. ಎನ್.ಡಿ.ಟಿ.ವಿ ಪ್ರಾಫಿಟ್/ ಸಿ.ಎನ್.ಬಿ.ಸಿ. ಟಿ.ವಿ. ೧೮/ ಸಿ.ಎನ್.ಬಿ.ಸಿ ಆವಾಜ಼್/ಬ್ಲೂಮ್ ಬರ್ಗ್/ಜ಼ೀ ಬ್ಯುಸಿನೆಸ್/ಇ.ಟಿ ನೌ/ ಮುಂತಾದ ಟಿ.ವಿ ವಾಹಿನಿಗಳು ಇದರ ಬಗ್ಗೆ ಅನೇಕ ವಿಚಾರಗಳನ್ನು, ಮಾರುಕಟ್ಟೆಯ ವಿಶ್ಲೇಷಣೆಯನ್ನು ದಿನದ ೨೪ ಗಂಟೆಯೂ ಪ್ರಸಾರ ಮಾಡುತ್ತಿರುತ್ತವೆ. ಕನ್ನಡದಲ್ಲಿ ಸಧ್ಯಕ್ಕೆ ಟಿ.ವಿ.೯ ಪ್ರತಿದಿನ ಬೆಳಗ್ಗೆ ೮-೨೦ ರಿಂದ ೧೦ ನಿಮಿಷಗಳು " ಹಣ ಭವಿಷ್ಯ " ಎಂಬ ಕಾರ್ಯಕ್ರಮವನ್ನು ಬಿತ್ತರಿಸುತ್ತದೆ. ಅದೇ ರೀತಿ ಉದಯ ವಾರ್ತೆಗಳು ಮತ್ತು ಚಂದನ ವಾರಕ್ಕೆ ೩೦ ನಿಮಿಷ ಈ ಶೇರು ಮಾರುಕಟ್ಟೆ ಬಗ್ಗೆ ಕಾರ್ಯಕ್ರಮವನ್ನು ಬಿತ್ತರಿಸುತ್ತದೆ. ಆಂಗ್ಲ ಭಾಷಯಲ್ಲಿ ಬರುವ ಎಕನಾಮಿಕ್ಸ್ ಟೈಮ್ಸ್, ಮಿಂಟ್ ಬ್ಯುಸಿನೆಸ್ ಲೈನ್ ಮುಂತಾದ ಆಂಗ್ಲ ಭಾಷಾ ಪತ್ರಿಕೆಗಳು, ಔಟ್ ಲುಕ್ ಮನಿ, ಔಟ್ ಲುಕ್ ಬ್ಯುಸಿನೆಸ್, ದಲಾಲ್ ಸ್ಟ್ರೀಟ್ ಮುಂತಾದ ಪಾಕ್ಷಿಕಗಳು ಇದರ ಬಗ್ಗೆ ಅನೇಕ ವಿಚಾರ, ವಿಶ್ಲೇಷಣೆಯನ್ನು ಪ್ರಕಟಿಸುತ್ತದೆ. ಇದನ್ನು ಓದಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಆಂಗ್ಲ ಭಾಷೆಯಲ್ಲಿ ಅನೇಕ ಪುಸ್ತಕಗಳು ಪ್ರಕಟವಾಗಿವೆ.  ಶೇರು ಮಾರುಕಟ್ಟೆಯ ಬಗ್ಗೆ ಅನೇಕ ನಗರಗಳಲ್ಲಿ ಸೆಮಿನಾರುಗಳು ನಡೆಯುತ್ತವೆ. ಕುತೂಹಲವಿರುವವರು ಇಂತಹ ಸೆಮಿನಾರುಗಳಲ್ಲಿ ಭಾಗವಹಿಸಿ ಇದರ ಬಗ್ಗೆ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಬಹುದು. ಬೆಂಗಳೂರಿನ ಪೂರ್ಣಿಮಾ ಚಿತ್ರಮಂದಿರದ ಸಮೀಪದಲ್ಲಿರುವ  " ಬೆಂಗಳೂರು ಸ್ಟಾಕ್ ಎಕ್ಸ  ಚೇಂಜ್ " ನಲ್ಲಿಯೂ ಸಹ ಹೊಸದಾಗಿ ಹಣ ಹೂಡುವ  ಆಸಕ್ತಿ ದಾರರಿಗೆ ಇದರ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆ ಇದೆ. ಅಲ್ಲಿ ಒಂದು ಒಳ್ಳೆಯ ಗ್ರಂಥಾಲಯವೂ ಸಹ ಇದೆ. ಇದರ ಸೌಲಭವನ್ನೂ ಸಹ ನೀವು ಪಡೆಯಬಹುದು. ಡಾ.ಭರತ್ ಚಂದ್ರ, ರುದ್ರಮೂರ್ತಿ ಮುಂತಾದ ಅನೇಕ ಮಾರುಕಟ್ಟೆಯ ವಿಶ್ಲೇಷಕರು ಕನ್ನಡದಲ್ಲೂ ಸಹ ಎಲ್ಲರಿಗೂ ಅರ್ಥವಾಗುವ ಹಾಗೆ ತಿಳಿಸಿಕೊಡುವರು. ಇದಕ್ಕೆ ಸ್ವಲ್ಪ ಹಣ ಮತ್ತು ಸಮಯ ಖರ್ಚಾಗುತ್ತದೆ. ಹೀಗೆ ನೀವು ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು  ಹಣ ಹೂಡಿಕೆಮಾಡಿದರೆ ನೀವು ಯಶಸ್ಸು ಕಾಣಬಹುದು. (ಮಿಕ್ಕಿದ್ದು ನಾಳೆಗೆ)

Sunday 17 June 2012

ಶೇರು ಮಾರುಕಟ್ಟೆ : ಸರಣಿ ಲೇಖನ ಭಾಗ -೬

ಕಳೆದ ಸಂಚಿಕೆಯಿಂದ

ಶೇರು ಮಾರುಕಟ್ಟೆಯಲ್ಲಿನ ವ್ಯವಹಾರವು ಕ್ರಮಬದ್ದವಾಗಿ ಮತ್ತು ಹೂಡಿಕೆದಾರರ ಹಿತದೃಷ್ಟಿಯಿಂದ ಮತ್ತು ಕಾನೂನಾತ್ಮಕವಾಗಿ ನಡೆಯುವುದಕ್ಕೆ ಸೆಬಿ (SEBI ) (Securities and Exchange Board of India) ಎಂಬ ಸಂಸ್ಥೆ ಸರ್ಕಾರದ ಪರವಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಬ್ರೋಕರ್ ಗಳು, ಸಬ್ ಬ್ರೋಕರ್ ಗಳು, ರಿಜಿಸ್ಟ್ರಾರ್ ಗಳು, ಲೀಡ್ ಮ್ಯಾನೇಜರ್ ಗಳು, ವ್ಯವಹಾರಕ್ಕೆ ಸಿದ್ದವಾಗಿರುವ ಕಂಪನಿಗಳು ಮುಂತಾದವರು ನೊಂದಾಯಿಸಿಕೊಳ್ಳಬೇಕು. ತಮ್ಮ ಕುಂದು ಕೊರತೆಗಳು ಏನಾದರೂ ಇದ್ದಲ್ಲಿ ಗ್ರಾಹಕರು ಸೆಬಿಯನ್ನು ಸಂಪರ್ಕಿಸಿ ನ್ಯಾಯ ಪಡೆದುಕೊಳ್ಳಬಹುದು. ಇದರಲ್ಲಿ ಎಲ್ಲಾ ತರಹದ ಸುಮಾರು ೫೦೦೦ ಕಂಪನಿಗಳು ನೊಂದಾಯಿಸಲ್ಪಟ್ಟಿರುತ್ತದೆ ಮತ್ತು ವಹಿವಾಟಿಗೆ ಲಭ್ಯವಾಗಿವೆ. ನಮ್ಮಲಿ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಮತ್ತು ಮುಂಬೈ ಸ್ಟಾಕ್ ಎಕ್ಸ್ ಚೆಂಜ್ ಎಂಬ ಎರಡು ಮುಖ್ಯ ಕೆಂದ್ರಗಳಿವೆ. ಅನೇಕ ರಾಜ್ಯಗಳಲ್ಲಿ ಇರುವ ಸ್ಟಾಕ್ ಎಕ್ಸ್ ಚೆಂಜ್ ವಿನಿಮಯ ಕೆಂದ್ರಗಳು ಇದರ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತವೆ.

ನೀವು ಕೆಲವು ವರ್ಷಗಳ ಹಿಂದೆ ನಡೆದ ಸತ್ಯಂ ಕಂಪನಿಯ ಅವ್ಯವಹಾರವನ್ನು ಗಮನಿಸಿದ್ದೀರಿ. ಅಂತಹ ಶೇರಿನಲ್ಲಿ ನೀವು ಹಣ  ಹೂಡಿದ್ದರೆ ನಿಮಗೆ ನಷ್ಟವುಂಟಾಗಿರುತ್ತದೆ.  ಅಂದು ಸುಮಾರು ೪೦೦-೪೫೦ ರೂಪಾಯಿಗಳಲ್ಲಿದ್ದ ಆ ಕಂಪನಿಯ ಶೇರು ಅದರ ಅವ್ಯವಹಾರ ಬಯಲಾಗುತ್ತಿದ್ದಂತೆ ಒಂದೆರೆಡು ದಿನಗಳಲ್ಲಿ ಅದು ಕೇವಲ ೬ ರೂಪಾಯಿಗೆ ಬಂದಿತ್ತು.  ಸತ್ಯಂ ಶೇರುಗಳನ್ನು ೬ ರೂಪಾಯಿಗಳಿಗೆ ಆಂದು ಕೊಂಡವರಿಗೆ ಈಗ ೬೫ ರೊಪಾಯಿಗಳ ಲಾಭದಲ್ಲಿಇದ್ದಾರೆ.  (ಈಗ ಅದು ಸುಮಾರು ೭೦-೮೦ ರೂಪಾಯಿಗಳ ಹತ್ತಿರ ಇದೆ.) ಶೇರು ಮಾರುಕಟ್ಟೆಯಲ್ಲಿನ ವ್ಯವಹಾರ ಈ ರೀತಿ ಇರುತ್ತದೆ. ಶೇರಿನ ಏರಿಳಿತ ಇಲ್ಲಿ ಅತ್ಯಂತ ಸಾಮಾನ್ಯ. ಹಾಗಾಗಿ ಹೂಡಿಕೆ ಮಾಡುವವರು ಮೈ ಎಲ್ಲಾ ಕಣ್ಣಾಗಿರಿಸಿಕೊಂಡು ಈ ಶೇರು ವ್ಯವಹಾರದಲ್ಲಿ ತೊಡಗಿಸಿಕೊಳ್ಳುವುದು ಅತೀ ಮುಖ್ಯ.

ನೀವು ಹರ್ಷದ್ ಮೆಹ್ತ ಎಂಬ ವ್ಯಕ್ತಿಯನ್ನೂ ಸಹ ಈ ಸಮಯದಲ್ಲಿ ಜ್ಞಾಪಕ ಮಾಡಿಕೊಳ್ಳಬಹುದು. ೧೯೯೨ರಲ್ಲಿ ಅತೀ ದೊಡ್ಡ ಹಗರಣವಾಗಿ ಅದು ಗುರುತಿಕೊಂಡಿತ್ತು. ಸುಮಾರು ೫೦೦೦ ಕೋಟಿಗಳ ಅವ್ಯವಹಾರ ಅದಾಗಿತ್ತು.  ಆ ವ್ಯಕ್ತಿ ಈಗ ಇಲ್ಲ.  ಅವರು ೨೦೦೨ ರಲ್ಲಿ ಇಹಲೋಕ ಸೇರಿಕೊಂಡರು. ಕೇತನ್ ಪಾರೇಖ್ ಎಂಬ ಇನ್ನೊಂದು ಹಗರಣವೂ ಸಹ ಅತ್ಯಂತ ದೊಡ್ಡ ಸುದ್ದಿ ಮಾಡಿತ್ತು.

ಇದರಲ್ಲಿ ಹಣ ಹೂಡುವುದು ಹೇಗೆ? ಯಾರು ಹೂಡ ಬಹುದು? ನಾವು ಹೇಗೆ ಒಂದು ಕಂಪನಿಯ ಶೇರುಗಳನ್ನು ಕೊಳ್ಳುವುದು? ಎಲ್ಲಿ ಕೊಳ್ಳುವುದು? ಇದಕ್ಕೆ ಎಷ್ಟು ಬಂಡವಾಳ ಬೇಕು? ಎಂಬ ಅನೇಕ ಪ್ರಶ್ನೆಗಳು ಸಾಮಾನ್ಯರನ್ನು ಬಾಧಿಸಬಹದು. ಇದನ್ನು ಕಲಿಯುವುದು ಹೇಗೆ? ಎಂಬ ನರೆಂಟು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. (ಮಿಕ್ಕಿದ್ದು ನಾಳೆಗೆ)


Saturday 16 June 2012

ಶೇರು ಮಾರುಕಟ್ಟೆ : ಸರಣಿ ಲೇಖನ ಭಾಗ -೫

ಕಳೆದ ಸಂಚಿಕೆಯಿಂದ

ನಿಮ್ಮಲ್ಲಿ ಹೆಚ್ಚಿನ ಹಣ ಇದೆ ಎಂದು ಎಲ್ಲಾ ಹಣವನ್ನೂ ಈ ಶೇರು ಮಾರುಕಟ್ಟೆಯಲ್ಲಿ ಹೂಡುವುದು ಜಾಣತನದ ಕೆಲಸವಲ್ಲ. ಹೂಡಿಕೆಯ ಮೊದಲು ನೀವು ಯಾವ ವಯಸ್ಸಿನಲ್ಲೀದ್ದೀರಿ ಮತ್ತು ನೀವು ಎಷ್ಟು ರಿಸ್ಕ್ ತೆಗೆದುಕೊಳ್ಳಲು ಅರ್ಹರಿದ್ದೀರಿ ಎಂಬುದೂ ಬಹಳ ಮುಖ್ಯ. ಉದಾಹರಣೆಗೆ ನೀವು ೩೦ ವರ್ಷಗಳ ಒಳಗಿದ್ದರೆ ನೀವು ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಬಹುದು. ನಿಮ್ಮಲ್ಲಿರುವ ಹಣದಲ್ಲಿ ಹೆಚ್ಚಿನ ಭಾಗವನ್ನು (ಸುಮಾರು ೬೦-೭೦% ಹಣವನ್ನು)  ಶೇರು ಮಾರುಕಟ್ಟೆಯಲ್ಲಿ ಹೂಡಬಹುದು ಮತ್ತು ಉಳಿದ ಹಣವನ್ನು ಬ್ಯಾಂಕ್ ನಲ್ಲಿ ನಿಶ್ಚಿತ ಠೇವಣಿಯಲ್ಲಿ ಇಡಬಹುದು. ಆದರೆ ನಿಮಗೆ ೬೦ ವಷಗಳಾಗಿದ್ದರೆ ನೀವು ನಿಮ್ಮ ಎಲ್ಲಾ ಹಣವನ್ನು ಶೇರು ಮಾರುಕಟ್ಟೆಯಲ್ಲಿ ಹೂಡಬಾರದು. (ಸುಮಾರು ೨೫-೩೦%) ಹಣವನ್ನು ಶೇರು ಮಾರುಕಟ್ಟೆಯಲ್ಲಿ ಹೂಡಿ ಉಳಿದ ಹಣವನ್ನು ಬ್ಯಾಂಕ್ ನಲ್ಲಿ ನಿಶ್ಚಿತ ಠೇವಣಿಯಲ್ಲಿ ಇಡಬೇಕು. ಇದು ಒಂದು ಉದಾಹರಣೆ ಮಾತ್ರ. ನೀವು ಎಷ್ಟು ಹಣ ಹೂಡಬಹುದು ಮತ್ತು ನೀವು ಎಷ್ಟು ರಿಸ್ಕ್ ತೆಗೆದುಕೊಳ್ಳಲು ಅರ್ಹರಿದ್ದೀರಿ ಎಂಬುದು ಎಲ್ಲರಿಗಿಂತ ನಿಮಗೇ ಹೆಚ್ಚು ತಿಳಿದಿರುತ್ತದೆ.

ಅನೇಕ ಹಣಕಾಸು ತಜ್ಞರು ಯಾವಾಗಲೂ ಒಂದು ಮಾತು ಹೇಳುತ್ತಾರೆ. ಅದು ಬಹಳ ಮುಖ್ಯ ಕೂಡ ಹೌದು. ಮೊದಲು ನಿಮ್ಮ ಅವಶ್ಯಕತೆಗೆ ಹಣವನ್ನು ತೆಗೆದು ಇಡಿ.  ಅದು ೩-೪ ತಿಂಗಳ ನಿಮ್ಮ ಮನೆಯ ಪ್ರತಿ ತಿಂಗಳ ಖರ್ಚಿನಷ್ಟಿರಬೇಕು. ನಂತರ ಪ್ರತಿ ತಿಂಗಳೂ ನಿಮಗೆ ಒಂದು ನಿಶ್ಚಿತವಾದ (ಫಿಕ್ಸೆಡ್ ಇನ್ ಕಂ) ಹಣವನ್ನು ಬರುವ ಹಾಗೆ ಮಾಡಿಕೊಳ್ಳಿ. ಅದು ನಿಮ್ಮ ಪ್ರತಿ ತಿಂಗಳ ಮನೆಯ ಖರ್ಚಿನಷ್ಟಿರಬೇಕು. ನಂತರ ಉಳಿದ ಹಣವನ್ನು ನೀವು ನಿಮ್ಮ ಹಣವನ್ನು ಬೆಳೆಸಲು ಉಪಯೋಗಿಸಿ. ಇದು ಅತ್ಯಂತ ನಿಜ ಕೂಡ ಹೌದು. ನಿಮಗೆ ವ್ಯವಹಾರದಲ್ಲಿ ಏನೇ ನಷ್ಟವುಂಟಾದರೂ ನಿಮ್ಮ ಮನೆ ಸುವ್ಯವಸ್ಥಿತವಾಗಿ ನಡೆಯಬೇಕು. ಅದಕ್ಕೆ ಯಾವುದೇ ತೊಂದರೆಯಾಗಬಾರದು. ಇದು ಅತ್ಯಂತ ಮುಖ್ಯ. 

ನಮ್ಮಲ್ಲಿ ಹೆಚ್ಚಿನ ಹಣ ಇಲ್ಲ, ಹಾಗಾಗಿ ನಾವು ಈ ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಹಾಗಿಲ್ಲ ಎನ್ನುವ ಹಾಗಿಲ್ಲ. ಈಗ ನೀವು ಒಂದು ಶೇರನ್ನೂ ಕೂಡ ಖರೀದಿ ಮಾಡಬಹುದು. ಪ್ರತಿ ತಿಂಗಳೂ ಒಂದೊಂದು ಶೇರನ್ನು ಖರೀದಿಸಿ ನಿಮ್ಮ ಬಳಿ ಇಟ್ಟುಕೊಂಡು ಒಳ್ಳೆಯ ಬೆಲೆ ಬಂದಾಗ ಅದನ್ನು ಮಾರಬಹುದು. ನೀವು ಒಂದು ಸಲ ಈ ವ್ಯವಹಾರಕ್ಕೆ ಕಾಲಿಟ್ಟ ನಂತರ ನಿಮಗೆ ಅನೇಕ ಕಲ್ಪನೆಗಳು ಬರುತ್ತದೆ. ಅದರಂತೆ ಮುಂದುವರೆಸಿ.

Friday 15 June 2012

ಶೇರು ಮಾರುಕಟ್ಟೆ : ಸರಣಿ ಲೇಖನ ಭಾಗ -೪

ಕಳೆದ ಸಂಚಿಕೆಯಿಂದ

ಈ ಶೇರು ಮಾರುಕಟ್ಟೆಯಲ್ಲಿ ಕೆಲವು ನಿಮಿಷಗಳ ಅಂತರದಲ್ಲಿ ಹಣ ಮಾಡಬಹುದು. ಕೆಲವರು ದಿನಗಳ ಅಂತರದಲ್ಲಿ, ಮತ್ತೆ ಕೆಲವರು ಅಲ್ಪಾವಧಿ ಹೂಡಿಕೆ/ಮಧ್ಯಾವದಿ ಹೂಡಿಕೆ ಮತ್ತು ದೀರ್ಘಕಾಲದಲ್ಲಿ ವೈಜ್ಞಾನಿಕವಾಗಿ ಹಣ ಹೂಡಿಕೆ ಮಾಡಿ ಲಾಭಗಳಿಸಿದವರಿದ್ದಾರೆ. ಈ ವ್ಯವಹಾರವನ್ನು ಜೂಜೆಂದು ಪರಿಗಣಿಸಿ ಸಾಕಷ್ಟು ಹಣವನ್ನು ಕೆಲವೇ ನಿಮಿಷಗಳ ಅಂತರದಲ್ಲಿ ಕಳೆದುಕೊಡವರಿದ್ದಾರೆ. ನೀವು ಹಣವನ್ನು ಹೂಡುವ ಕಂಪನಿಯ, ಹಳೆಯ ಕಂಪನಿಯಾಗಿದ್ದರೆ ಆ ಕಂಪನಿಯ ಬಗ್ಗೆ ಕೆಲವೊಂದು ಅಂಶಗಳನ್ನಾದರೂ ತಿಳಿದುಕೊಂಡಿರಬೇಕು. ನೀವು ಹೂಡುತ್ತಿರುವ ಕಂಪನಿಯು ಎಷ್ಟು ವರ್ಷ ಹಳೆಯದು? ಅದನ್ನು ಸ್ಥಾಪಿಸಿದವರು ಯಾರು? ಅದರಲ್ಲಿ ಯಾರು ಯಾರು ಪಾಲುದಾರರಾಗಿದ್ದಾರೆ? ಅದರಲ್ಲಿ ಆ ಕಂಪನಿಯ ಮುಖ್ಯಸ್ಥರು ಎಷ್ಟು ಹಣವನ್ನು ಹೂಡಿದ್ದಾರೆ? ನೀವು ಹೂಡುತ್ತಿರುವ ಕಂಪನಿಯ ಬ್ಯಾಲೆನ್ಸ್ ಶೀಟ್ ಹೇಗಿದೆ? ಅವರಿಗೆ ಸಾಲ ಕೊಟ್ಟಿರುವ ಬ್ಯಾಂಕ್ ಯಾವುದು? ಅವರು ಯಾರಿಗೂ ಸಾಲ ಕೊಡಬೇಕಾಗಿಲ್ಲದಿದ್ದಿರೆ, ಅವರ ಹತ್ತಿರ ಈಗ ಎಷ್ಟು ಹಣ ಉಳಿದಿದೆ? ಅವರು ಆ ಹಣವನ್ನು ಯಾವುದಕ್ಕೆ ಉಪಯೋಗಿಸುತ್ತಿದ್ದಾರೆ. ಅವರು ತಮ್ಮ ಲಾಭವನ್ನು (ಡಿವಿಡೆಂಟ್) ತಮ್ಮ ಶೇರುದಾರರಿಗೆ  ಹಂಚುತ್ತಿದ್ದಾರೆಯೆ? ಹಂಚುತ್ತಿದ್ದರೆ ಎಷ್ಟು? ಮ್ಯೂಚುವಲ್ ಫಂಡ್ ಮತ್ತು ವಿದೇಶಿ ಹೂಡಿಕೆದಾರರು ಇದರಲ್ಲಿ ಹೂಡಿಕೆ ಮಾಡಿದ್ದಾರೆಯೆ? ಮಾಡಿದ್ದರೆ, ಎಷ್ಟು ಮಾಡಿದ್ದಾರೆ? ಹೀಗೆ ಹತ್ತು ಹಲವು ವಿಷಯಗಳನ್ನು ತಿಳಿದು ಹೂಡಿಕೆ ಮಾಡಬೇಕಾಗುವುದು.

ನೀವು ಒಂದು ಹೊಸ ಕಂಪನಿಯಲ್ಲಿ ಹಣವನ್ನು ಹೂಡುವವರಾಗಿದ್ದರೆ ಕೆಲವು ಅಂಶಗಳನ್ನು ಕಂಪನಿಯ ಬಗ್ಗೆ ತಿಳಿದುಕೊಂದಿರಬೇಕಾದದ್ದು ಬಹಳ ಅತ್ಯವಶ್ಯಕ. ಉದಾ: ಕಂಪನಿಯನ್ನು ಸ್ಥಾಪಿಸುತ್ತಿರುವವರು ಯಾರು? ಅದರಲ್ಲಿ ಯಾರು ಯಾರು ಪಾಲುದಾರರಾಗಿದ್ದಾರೆ? ಮ್ಯೂಚುವಲ್ ಫಂಡ್ ಮತ್ತು ವಿದೇಶಿ ಹೂಡಿಕೆದಾರಾರು ಇದರಲ್ಲಿ ಹೂಡಿಕೆ ಮಾಡುತ್ತಿದ್ದಾರೆಯೆ? ಮಾಡುತ್ತಿದ್ದರೆ, ಎಷ್ಟು ಮಾಡುತ್ತಿದ್ದಾರೆ? ಅವರಿಗೆ ಯಾವ ಬ್ಯಾಂಕ್ ಸಾಲ ಕೊಟ್ಟಿದೆ? ಅವರು ತಯಾರಿಸುತ್ತಿರುವ ಪದಾರ್ಥಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆಯಾ? ಅವರು ಕಂಪನಿಯಲ್ಲಿ ಎಷ್ಟು ಹಣವನ್ನು (ಸ್ವಂತ ಹಣ) ಹೂಡಿದ್ದಾರೆ?  ಅವರು ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವ ಕಾರಣವಾದರೂ ಏನು? ಯಾವುದೇ ಕಂಪನಿಯಾದರೂ ಮಾರುಕಟ್ಟೆಯನ್ನು ಪ್ರವೇಶಿಸುವ ಮೊದಲು ಸುಮಾರು ೩ ವರ್ಷಗಳಷ್ಟು ಹಳೆಯದಾಗಿರಬೇಕು ಮತ್ತು ಅದು ಆ ಮೂರು ವರ್ಷವೂ ಲಾಭದಲ್ಲಿ ಇರಬೇಕು. ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ತಿಳಿದುಕೊಂಡಿರಬೇಕು. 

ಯಾರೋ ಹೇಳಿದರೆಂದು ಮತ್ತು ಕಂಪನಿಯ ಬಗ್ಗೆ ಜಾಹಿರಾತುಗಳನ್ನು ಪತ್ರಿಕೆ/ಟಿ.ವಿ.ಯಲ್ಲಿ ಓದಿ/ನೋಡಿ/ಕೇಳಿ ಹಣವನ್ನು ಕುರುಡು ನಂಬಿಕೆಯಿಂದ ಹೂಡಬಾರದು. ಯಾವುದೇ ಕೆಲಸ ಮಾಡುವುದಕ್ಕೂ ಒಂದು ರೀತಿ ನೀತಿ ಇರುತ್ತದೆ. ಅದನ್ನು ಪಾಲಿಸಿದರೆ ನಮಗೆ ಹೆಚ್ಚಿನ ನಷ್ಟವುಂಟಾಗುವದನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ಅದರಲ್ಲಿ ಲಾಭವನ್ನುಗಳಿಸಲು ಸಹಾಯಕವಾಗುವುದು.

Thursday 14 June 2012

ಶೇರು ಮಾರುಕಟ್ಟೆ : ಸರಣಿ ಲೇಖನ ಭಾಗ -೩

ಕಳೆದ ಸಂಚಿಕೆಯಿಂದ

೧೯೭೭ರಲ್ಲಿ ನೀವು ೧,೦೦೦ ರೂಪಾಯಿಗಳಲ್ಲಿ ಇಂದಿರಾ ವಿಕಾಸ್ ಪತ್ರವನ್ನು ತೆಗೆದುಕೊಂಡು ಇಲ್ಲಿಯವರೆಗೆ ಅಂದರೆ ೨೦೧೨ರವರೆಗೆ ಇಟ್ಟುಕೊಂಡಿದ್ದರೆ ನಿಮ್ಮ ಹಣ ೧೯೮೨ರಲ್ಲಿ ದ್ವಿಗುಣವಾಗಿ ೨,೦೦೦, ೧೯೮೭ರಲ್ಲಿ ೪,೦೦೦, ೧೯೯೨ರಲ್ಲಿ ೮,೦೦೦, ೧೯೯೭ರಲ್ಲಿ ೧೬,೦೦೦, ೨೦೦೨ರಲ್ಲಿ ೩೨,೦೦೦, ೨೦೦೭ರಲ್ಲಿ ೬೪,೦೦೦, ೨೦೧೨ರಲ್ಲಿ ೧,೨೮,೦೦೦ ಸಾವಿರವಾಗುತ್ತಿತ್ತು. (ಸುಮಾರು ೧೪.೨೫% ಬಡ್ಡಿಯಂತೆ.) ೫ ವರ್ಷಗಳಲ್ಲಿ ನಿಮ್ಮ ಹಣ ದ್ವಿಗುಣವಾಗುತ್ತಿತ್ತು. ಮುಂದೆ ಅದನ್ನು ೫  ೧/೨ ವರ್ಷಕ್ಕೆ ಮಾರ್ಪಾಡು ಮಾಡಲಾಯಿತು. (ಇಂದಿರಾ ವಿಕಾಸ್ ಪತ್ರವನ್ನು ೧೯೯೬ನೆ ಇಸವಿಯಲ್ಲಿ ನಿಲ್ಲಿಸಿಬಿಟ್ಟತು ಕೇಂದ್ರ ಸರ್ಕಾರ.) ನೀವು ಅದೇ ಹಣವನ್ನು ಬ್ಯಾಂಕ್ ನಲ್ಲಿ ಇಟ್ಟಿದ್ದರೆ ನಿಮ್ಮ ಹಣ ದ್ವಿಗುಣವಾಗಿ ೧೯೮೪ ಮತ್ತು ೨ ತಿಂಗಳಲ್ಲಿ ೨,೦೦೦, ೧೯೯೧ ಮತ್ತು ೪ ತಿಂಗಳಲ್ಲಿ ೪,೦೦೦, ೧೯೯೮ ಮತ್ತು ೬ ತಿಂಗಳಲ್ಲಿ ೮,೦೦೦, ೨೦೦೫ ಮತ್ತು ೮ ತಿಂಗಳಲ್ಲಿ ೧೬,೦೦೦, ೨೦೧೨ ಮತ್ತು ೧೦ ತಿಂಗಳಲ್ಲಿ ಕೇವಲ ೩೨,೦೦೦ ರೂಪಾಯಿಗಳಾಗುತ್ತಿತ್ತು (ಅದು ಸುಮಾರು ೧೦% ಬಡ್ಡಿಯನ್ನು ನಿಮಗೆ ತಂದುಕೊಡುವಂತಿದ್ದರೆ.) ೭ ವರ್ಷ ೨ ತಿಂಗಳಲ್ಲಿ ನಿಮ್ಮ ಹಣ ದ್ವಿಗುಣವಾಗುತ್ತಿತ್ತು.

ಆದರೆ, ಅದೇ ೧,೦೦೦ ರೂಪಾಯಿಗಳನ್ನು ನೀವು  ೧೯೭೭ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯಲ್ಲಿ ಹೂಡಿದ್ದರೆ ಈಗ ನಿಮ್ಮ ಬಳಿ ೭.೭೮ ಲಕ್ಷ ರೂಪಾಯಿ ಇರುತ್ತಿತ್ತು. ೧೯೭೭ರಲ್ಲಿ ರಿಲಯನ್ಸ್ ಕಂಪನಿಗಳ ೧೦೦ ಶೇರುಗಳ ಬೆಲೆ ೧,೦೦೦ ಇತ್ತು. ಪ್ರತಿ ಶೇರಿನ ಬೆಲೆ ೧೦ ರೂಪಾಯಿಗಳು. ಆ ನಿಮ್ಮ ೧೦೦ ಶೇರುಗಳು ನಿಮಗೆ ವರ್ಷಗಳು ಕಳೆದಂತೆ ಹೆಚ್ಚು ಬೋನಸ್ ಶೇರುಗಳಾಗಿ ಪರಿವರ್ತನೆ ಯಾಗಿ  ಮತ್ತು ಆ ಶೇರುಗಳು ಮುಖಬೆಲೆ ಸೀಳಿಕೆ ಯಾಗಿ  (ಸ್ಪ್ಲಿಟ್) ನಿಮ್ಮ ಹತ್ತಿರ ಈಗ ೧,೧೦೦ ಶೇರುಗಳಾಗುತ್ತಿತ್ತು. ಇಂದಿನ ರಿಲಯನ್ಸ್ ಶೇರುಗಳ ಬೆಲೆ ಸುಮಾರು ೭೦೦ ರೂಪಾಯಿಗಳು. ಅಂದರೆ ೧,೧೦೦ x ೭೦೦ = ೭,೭೦,೦೦೦ ರೂಗಳು. ನೀವು ಲಕ್ಷಾಧಿಪತಿಯಾಗುತ್ತಿದ್ದಿರಿ. ನಿಮ್ಮನ್ನು ನೀವು ನಂಬಲ್ಲಿಕ್ಕೇ ಆಗುತ್ತಿಲ್ಲ ಅಲ್ವಾ? ಇನ್ನು ನೀವು ಅಂದು ೧೦,೦೦೦ ರೂಪಾಯಿಗಳನ್ನು ಹೂಡಿದ್ದರೆ???. ಹೌದು, ನಿಜ. ಇದು ಶೇರುಮಾರುಕಟ್ಟೆಯ ರೀತಿ, ರಿವಾಜು, ಬೆಳವಣಿಗೆಯ ಪರಿ. ಇದೇ ರೀತಿ ಎ.ಬಿ.ಬಿ, ಬಿ.ಹೆಚ್.ಇ.ಎಲ್, ಇನ್ಫೋಸಿಸ್, ವಿಪ್ರೋ, ಎಲ್ ಅಂಡ್ ಟಿ, ಆಕ್ಸಿಸ್ ಬ್ಯಾಂಕ್, ಟೈಟಾನ್, ಐ.ಟಿ.ಸಿ, ಎಸ್.ಬಿ.ಐ, ಒ.ಎನ್.ಜಿ.ಸಿ, ಬಜಾಜ್, ಮುಂತಾದ ಕಂಪನಿಗಳಲ್ಲಿ ನೀವು ದೀರ್ಘಾವದಿಯಲ್ಲಿ ಹಣ ಹೂಡಿದ್ದರೆ ನೀವು ಇಂದು ಕೋಟ್ಯಾಧಿಪತಿಯಾಗುತ್ತಿದ್ದಿರಿ. ನಿಮಗೆ ಇದು ಗೊತ್ತಿದ್ದರೆ ನೀವೂ ಒಂದು ಕೈ ನೋಡುತ್ತಿದ್ದಿರಿ, ಅಲ್ವಾ? ಸಮಾಧಾನ...... ನೀವು ಈಗಲೂ ಇದರ ಬಗ್ಗೆ  ಯೋಚಿಸಬಹುದು.

ಮಾರುಕಟ್ಟೆ ನಿಮಗೆ ಅನೇಕ ಅವಕಾಶಗಳನ್ನು ಈ ಹಿಂದೆಯೂ ಕೊಡುತ್ತಲೇ ಬಂದಿದೆ, ಮುಂದೆಯೂ ಕೊಡುತ್ತದೆ. ಆ ಅವಕಾಶಗಳನ್ನು ಸರಿಯಾಗಿ ಗುರುತಿಸಿ ನಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುವುದು ಅವರವರ ಸ್ವಂತ ನಿರ್ಧಾರ. ಒಂದು ಟೆಂಟಿನ ಮನೆಯನ್ನು ಕಟ್ಟುವುದಕ್ಕೆ ಒಂದು ಗಂಟೆ ಸಮಯ ಸಾಕು. ಗುಡಿಸಿಲಿನ ಮನೆ ಕಟ್ಟುವುದಕ್ಕೆ ಒಂದು ದಿನ ಸಾಕು. ಶೀಟಿನ ಮನೆ ಕಟ್ಟುವುದಕ್ಕೆ ಮೂರು ದಿನ ಸಾಕು. ಒಂದು ಸಧೃಡ ಮನೆಯನ್ನು ಕಟ್ಟುವುದಕ್ಕೆ ಸುಮಾರು ೮-೯ ತಿಂಗಳು ಬೇಕಾಗಬಹುದು. ಒಂದು ದೊಡ್ಡ ಬಂಗಲೆ ಕಟ್ಟಲು ೩-೪ ವರ್ಷವೇ ಬೇಕಾಗಬಹುದು. ಕೊಟೆಯನ್ನು ಕಟ್ಟಲು ೨೫-೩೦ ವರ್ಷವೇ ಬೇಕಾಗಬಹುದು. ಹಾಗೆಯೇ ಒಂದು ಸುಂದರ ಸಧೃಡ ಬದುಕನ್ನು ಕಟ್ಟಿಕೊಟ್ಟಲು ತುಂಬಾ ಸಮಯ ಹಿಡಿಯುತ್ತದೆ. ಶೇರು ಮಾರುಕಟ್ಟೆಯಲ್ಲಿ ಹಣ ಹೂಡುವವರಿಗೆ ತಾಳ್ಮೆ ಮತ್ತು ಸಹನೆ ಅತ್ಯಂತ ಅವಶ್ಯಕ. (ಮಿಕ್ಕಿದ್ದು ನಾಳೆಗೆ)

Wednesday 13 June 2012

ಶೇರು ಮಾರುಕಟ್ಟೆ : ಸರಣಿ ಲೇಖನ ಭಾಗ -೨


ನಮ್ಮ ದೇಶದ ಗುಜರಾತಿಗಳು ಮತ್ತು ಮಾರ್ವಾಡಿಗಳು ಈ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವುದು ಹೆಚ್ಚಾಗಿ ಕಂಡುಬರುತ್ತದೆ. ನಮ್ಮ ಕನ್ನಡಿಗರು ಹೆಚ್ಚಾಗಿ ಬ್ಯಾಂಕ್/ಅಂಚೆ ಕಛೇರಿ ಗಳಲ್ಲಿ ನಿಶ್ಚಿತ ಠೇವಣಿಗಳಲ್ಲಿ ಹಣ ಇಟ್ಟು ಅವರು ಕೊಡುವ ೧೦-೧೧% ವಾರ್ಷಿಕ ಬಡ್ಡಿಗೆ ತೃಪ್ತಿಪಟ್ಟುಕೊಳ್ಳುತ್ತಾರೆ. ಇನ್ನು ಕೆಲವರು ಚಿನ್ನವನ್ನು ಒಡವೆ ರೂಪದಲ್ಲಿ ಇಟ್ಟುಕೊಂಡು ತಮ್ಮ ಕಷ್ಟ ಕಾಲದಲ್ಲಿ ಉಪಯೋಗಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ಭೂಮಿಯ ಮೇಲೆ ಹಣವನ್ನು ವಿನಿಯೋಗಿಸುತ್ತಾರೆ. ಕನ್ನಡಿಗರು ಈ ಶೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವುದು ಬಹಳ ಕಡಿಮೆ. ಒಂದು ಜ್ಞಾನದ ಕೊರತೆಯಾದರೆ, ಮತ್ತೊಂದು ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಹೆಚ್ಚಾಗಿ ಕನ್ನಡಿಗರು ಇಷ್ಟಪಡುವುದಿಲ್ಲ. ಆದ ಕಾರಣ ನಮ್ಮಲ್ಲಿ ಈ ಶೇರು ಮಾರುಕಟ್ಟೆಯ ಬಗ್ಗೆ ಕನ್ನಡದಲ್ಲಿ ಬಂದಿರುವ ಪುಸ್ತಕಗಳು ಬಹಳ ಕಡಿಮೆ.  ಕೆಲವು ಪತ್ರಿಕೆಗಳು ಲೇಖನಗಳನ್ನು ಆಗಾಗ ಪ್ರಕಟಿಸುತ್ತವೆ. ಆದರೆ ಅದು ಬಹಳ ಕಡಿಮೆ. ನಮ್ಮ ಕನ್ನಡಿಗರು ಈ ಮಾರುಕಟ್ಟೆಯಿಂದ ದೂರ ಇರಲು ಇದೂ ಸಹ ಒಂದು ಕಾರಣವಿರಬಹುದು. ಆಂಗ್ಲ ಭಾಷೆಯಲ್ಲಿ ಈ ಮಾರುಕಟ್ಟೆಯ ಬಗ್ಗೆ ಸಂಭೃದ್ದ ಮಾಹಿತಿ ಇದೆ. ಗೊಗಲ್ ನಲ್ಲಿಯೂ ಸಹ ಅನೇಕ ಮಾಹಿತಿ ಪಡೆಯಬಹುದು.

ಪ್ರಪಂಚದ ೩ನೇ ಅತೀ ದೊಡ್ಡ ಶ್ರೀಮಂತ ವಾರನ್ ಬಫೆಟ್ ಶೇರು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಹಣ ಸಂಪಾದಿಸಿರುವ ವ್ಯಕ್ತಿ. ಇವರ ಹೂಡಿಕೆ ಕಂಪನಿಯ ಹೆಸರು " ಬರ್ಕ್ ಶೈರ್  ಹಾಥ್ ವೇ ’ ಇವರು ತಮ್ಮ ೧೩-೧೪ನೇ ವಯಸ್ಸಿನಲ್ಲಿ ಈ ಶೇರು ಮಾರುಕಟ್ಟೆಯ ವ್ಯವಹಾರದಲ್ಲಿ ಇಳಿದು, " ಬಫೆಟ್ ಲೀ " ಮುಂತಾದ  ಕೆಲವು ಕಂಪನಿಗಳನ್ನೂ ಸೃಷ್ಟಿಸಿದ್ದಾರೆ. ಭಾರತದಲ್ಲಿ  ಶೇರು ಮಾರುಕಟ್ಟೆಯ ರಾಜನೆಂದು ಪ್ರಸಿದ್ದಿಗೆ ಬಂದವರು ರಾಕೇಶ್ ಜುಂಜುನ್ ವಾಲ. ಇವರು ಅತಿ ದೊಡ್ಡ ಮಾರುಕಟ್ಟೆಯ ವಿಶ್ಲೇಷಕರು ಹಾಗೂ ನಮ್ಮ ಶೇರು ಮಾರುಕಟ್ಟೆಯ ದೊಡ್ದ ಹೂಡಿಕದಾರರಲ್ಲಿ ಒಬ್ಬರು.

ದೂರದಿಂದ ಈ ಶೇರುಮಾರುಕಟ್ಟೆಯನ್ನು ನೋಡುವವರಿಗೆ ಇದೊಂದು ಜೂಜು ತಾಣವಾಗಿಯೂ, ಹತ್ತಿರದಿಂದ ನೋಡುವವರಿಗೆ ಇದೊಂದು ಹಣ, ಸಂಪತ್ತು ವೃದ್ದಿ ಮಾಡುವ ತಾಣವಾಗಿಯೂ ಕಾಣುತ್ತದೆ. ಇದರಲ್ಲಿ ಹಣ ತೊಡಗಿಸಿರುವ ಎಲ್ಲರೂ ಲಕ್ಷಾಧಿಪತಿಗಳೂ, ಕೋಟ್ಯಾಧಿಪತಿಗಳೂ ಆಗಿಲ್ಲ ಎಂಬುದೂ ಸಹ ಅಷ್ಟೇ ಸತ್ಯ. ಅನೇಕರು ತಾವು  ಹೂಡಿದ ಹಣವೆಲ್ಲವನ್ನೂ ಕಳೆದುಕೊಂಡು ರಸ್ತೆಗೆ ಬಂದವರೂ ಇದ್ದಾರೆ ಎಂಬುದೊ ಸಹ ಸತ್ಯ. ಹಾಗದರೆ ಇದು ಏನು? ಇದೊಂದು ಮಾಯಾ ಜಿಂಕೆಯೇ? ಅಲ್ಲ, ಇದು ಎಲ್ಲಾ ತರಹದ ವ್ಯಾಪಾರದಂತೆಯೇ ಇದೂ ಸಹ ಒಂದು ವ್ಯವಹಾರ. ಎಲ್ಲ ವ್ಯವಹಾರದಲ್ಲೂ ಲಾಭ, ನಷ್ಟ ಇರುವಂತೆ ಇದರಲ್ಲಿಯೂ ಲಾಭ, ನಷ್ಟ ಎಲ್ಲವೂ ಇದೆ. (ಮಿಕ್ಕಿದ್ದು ನಾಳೆಗೆ)


Tuesday 12 June 2012

ಶೇರು ಮಾರುಕಟ್ಟೆ : ಸರಣಿ ಲೇಖನ ಭಾಗ -೧

ಹಣ ಯಾರಿಗೆ ಬೇಡ? ಮನುಷ್ಯ ಹುಟ್ಟಿದಾಗಿನಿಂದ ಸಾಯುವ ವರೆಗೂ ಮತ್ತು ಅವನು ಸತ್ತಮೇಲೆ ಅವನ ಅಂತ್ಯಕ್ರಿಯಯನ್ನು ಮಾಡುವ ಅವನ ಮನೆಯವರಿಗೂ ಹಣ ಬೇಕೇಬೇಕು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ನಾಮಕರಣದಿಂದ ತಿಥಿಯವರೆಗೆ. ನಾವು ನೀವೆಲ್ಲರೂ ನಮ್ಮ ಜೀವಿತ ಅವಧಿಯಲ್ಲಿ ಹಣವನ್ನು ನಮ್ಮ ಇತಿಮಿತಿಯಲ್ಲಿ ಸಂಪಾದಿಸುತ್ತೇವೆ. ಕೆಲವರು ಉದ್ಯೋಗವನ್ನು ಮಾಡಿ, ಮತ್ತೆ ಕೆಲವರು ಸ್ವಂತ ಉದ್ಯೋಗವನ್ನು ಮಾಡಿ, ಮತ್ತೆ ಕೆಲವರು ವ್ಯಾಪಾರ ವಹಿವಾಟು ಮಾಡಿ, ಮತ್ತೆ ಕೆಲವರು ಹಣದಿಂದ ಹಣವನ್ನು ಸಂಪಾದಿಸುತ್ತಾರೆ. ಮೊದಲ ಮೂರು ನಮಗೆಲ್ಲರಿಗೂ ತಿಳಿದ ವಿಷಯವೇ ಆಗಿದೆ. ಕೊನೆಯದಾದ ಹಣದಿಂದ ಹಣವನ್ನು ಸಂಪಾದಿಸುವುದು ಹೇಗೆ ಎಂಬುದರ ಬಗ್ಗೆ ಸ್ವಲ್ಪ ಗಮನ ಕೊಡೋಣ. ಇದನ್ನು ಬಂಡವಾಳ ಹೂಡಿಕೆ ಎಂದೂ ಸಹ ಕರೆಯುತ್ತಾರೆ.  ಬಂಡವಾಳ ಎಂದರೆ ಏನು ಎಂಬುದರ ಬಗ್ಗೆ ಸ್ವಲ್ಪ ಚಿಂತನೆಯನ್ನು ಮಾಡೋಣವೇ?

ಬಂಡವಾಳ ಹೂಡುವುದೆಂದರೆ ಜನಸಾಮಾನ್ಯರಲ್ಲಿ ಅದು ಲಕ್ಷ/ಕೋಟಿಗಳ ರೂಪದಲ್ಲಿ ಇರುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಇದು ಸುಳ್ಳು. ಒಂದು ರೀತಿಯಲ್ಲಿ ಹೇಳಬೇಕೆಂದರೆ ಜನ ಸಾಮಾನ್ಯರೂ ಸಹ ಸ್ವಲ್ಪ ಮಟ್ಟಿನ ಬಂಡವಾಳ ಹೂಡಿಕೆದಾರರೇ. ಕೆಲವರು ತಮ್ಮ ಹೆಚ್ಚುವರಿ ಸಂಪಾದನೆಯನ್ನು ಅಥವಾ ತಮ್ಮ ಉಳಿತಾಯದ ಹಣವನ್ನು ನಿಶ್ಚಿತ ಠೇವಣಿಯಾಗಿ ಬ್ಯಾಂಕ್/ಅಂಚೆ ಕಚೇರಿಯಲ್ಲಿ ಇಟ್ಟು ಅದರಲ್ಲಿ ಬರುವ ಬಡ್ದಿಯನ್ನು ಪಡೆಯುತ್ತಾರೆ. ಇದೂ ಸಹ ನಿಮ್ಮ ಹಣ ವೃದ್ದಿಸುತ್ತದೆ.  ಭೂಮಿಯ ಮೇಲೆ ಹಾಕಿದ ಹಣ ನಿಮ್ಮ ಮೂಲ ಹಣವನ್ನು ಅನೇಕ ಬಾರಿ ವೃದ್ದಿಸುತ್ತದೆ. ಚಿನ್ನ, ಬೆಳ್ಳಿಯ ಮೇಲೆ ಹಾಕಿದ ಹಣ ನಿಮಗೆ ದುಪ್ಪಟ್ಟು, ತಿಪ್ಪಟ್ಟಾಗುತ್ತದೆ. ಶೇರು/ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿದ ಹಣ ನಿಮಗೆ ಲಾಭವನ್ನು ತಂದುಕೊಡುತ್ತದೆ.

ಬ್ಯಾಂಕಿ/ಅಂಚೆ ಕಛೇರಿಯಲ್ಲಿ ಹಣ ಇಟ್ಟು ಬಡ್ಡಿ ತೆಗೆದುಕೊಳ್ಳುವುದು, ಭೂಮಿಯ ಮೇಲೆ ಹಣವನ್ನು ವಿನಿಯೋಗಿಸುವುದು, ಚಿನ್ನ ಬೆಳ್ಳಿಯ ಮೇಲೆ ಹಣವನ್ನು ಹೂಡಿಕೆ ಮಾಡುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ಈ ಶೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್ ಬಗ್ಗೆ ನಮ್ಮ ಕನ್ನಡಿಗರಿಗೆ ಹಿಚ್ಚಿನ ಮಾಹಿತಿ ಇಲ್ಲ.  ಕೇವಲ ಕನ್ನಡಿಗರಷ್ಟೇ ಅಲ್ಲ ನಮ್ಮ ಭಾರತ ದೇಶದಲ್ಲೂ ಸಹ ಈ ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿರುವವರು ಕೇವಲ ೨%. ನಮ್ಮ ಭಾರತ ದೇಶದ ಜನಸಂಖ್ಯೆಗೆ ಇಂದು ಸುಮಾರು ೧೨೦ ಕೋಟಿ, ಅದರಲ್ಲಿ ಶೇಕಡ ೨% ಎಂದರೆ ಅದು ಯಾವ ಮೂಲೆಗೆ. (ಮಿಕ್ಕಿದ್ದು ನಾಳೆಗೆ)

Saturday 9 June 2012

ರೈತರ ಗೋಳು:

ನಮ್ಮ ರಾಜ್ಯ/ದೇಶದಲ್ಲಿ ಯಾವುದೇ ಸರ್ಕಾರ ಬಂದರೂ ನಮ್ಮದು ರೈತರ ಪರ ಸರ್ಕಾರ ಎಂದು ಹೇಳುತ್ತಲೇ ಅಧಿಕಾರಕ್ಕೆ ಬಂದಿದೆ. ನಿಜವಾಗಿ ರೈತರ ಪರ ಸರ್ಕಾರವೇ ಆದರೆ, ಸ್ವಾತಂತ್ರ್ಯ ಬಂದು ೬೫ ವರ್ಷಗಳಾದರೂ ನಮ್ಮ ರೈತರು ಯಾಕೆ ಉದ್ದಾರವಾಗಲಿಲ್ಲ?  ಈಗಲೂ ನಮ್ಮ ದೇಶದಲ್ಲಿ ಒಂದು ಹೊತ್ತು ಊಟವೂ ಇಲ್ಲದೆ ನರಳುವರೆಷ್ಟೋ? ಇನ್ನು ನಮ್ಮ  ರೈತರ ಪಾಡಂತೂ ಯಾವ ಶತೃವಿಗೂ ಬರಬಾರದು. ನಮ್ಮ ಅನೇಕ ರೈತರರು ಅವಿದ್ಯಾವಂತರು. ಸರಿಯಾದ ವ್ಯವಹಾರ ಜ್ಞಾನವೂ ಸಹ ಇಲ್ಲ. ಯಾರನ್ನೂ ನಂಬದ ಪರಿಸ್ಥಿತಿಗೆ ಅವರನ್ನು ತಂದು ಬಿಟ್ಟಿದೆ ಈ ಸಮಾಜ ಮತ್ತು ಸರ್ಕಾರ. ಅಭಿವೃದ್ದಿ ಕಾರ್ಯಗಳಿಗೆ ಭೂಮಿಯ ಕೊರತೆ ಊಂಟಾದರೆ ಸರ್ಕಾರಕ್ಕೆ ಮೊದಲು ಕಾಣ ಸಿಗುವುದು ನಮ್ಮ ರೈತರ ಭೂಮಿ.  ಅಭಿವೃದ್ದಿಗಾಗಿ ಅವರ ಕೃಷಿಭೂಮಿಯನ್ನು ಸರ್ಕಾರ ಕಿತ್ತುಕೊಳ್ಳುತ್ತದೆ, ಮುಂದೆ ಅವರು ಅವರ ಜಮೀನಿನಲ್ಲೇ ಕೂಲಿ ಕೆಲಸ ಮಾಡಬೇಕಾದ ಅನಿವಾರ್ಯತೆ. ಕೃಷಿಭೂಮಿ ದಿನವೂ ಕಡಿಮೆಯಾಗುತ್ತಿದ್ದರೂ ಸರ್ಕಾರಕ್ಕೆ ಇದರ ಬಗ್ಗೆ ಚಿಂತೆ ಇಲ್ಲ. ಮತ್ತೊಂದೆಡೆ ಅವರು ಬೆಳೆದ ವಸ್ತುಗಳಿಗೆ ಸರಿಯಾದ ಬೆಲೆ ನಿಗದಿ ಮಾಡುವುದಿಲ್ಲ. ನೆರೆ ಬಂದು ಅವರ ಬೆಳೆಗಳಿಗೆ ಹಾನಿಯಾದರೆ ಅವರಿಗೆ ಪರಿಹಾರ ಸರಿಯಾಗಿ ಕೊಡುವುದಿಲ್ಲ. ಬರ ಬಂದರಂತೂ ಅವರನ್ನು ದೇವರೇ ಕಾಪಾಡಬೇಕು. ಇನ್ನು ಅವರಿಗೆ ಬ್ಯಾಂಕ್ ನಿಂದ ಸಾಲ ಸರಿಯಾಗಿ ದೊರಕುವುದಿಲ್ಲ, ದೊರಕಿದರೂ ಮಧ್ಯವರ್ತಿಗಳ ಕಾಟ. ಹೊರಗಿನಿಂದ ಸಾಲ ತಂದರೆ ಬಡ್ಡಿ ಕಟ್ಟಲಾಗದೆ ಅವರಿಗೆ ಆತ್ಮಹತ್ಯೆಯೇ ಪಾರಿಹಾರ. ರೈತ ವರ್ಷಕ್ಕೆ ಮೂರು ಬೆಳೆ ತೆಗೆಯಲು ಹೊರಟರೆ, ಅವನಿಗೆ ದಕ್ಕುವುದು ಕೇವಲ ಒಂದೊ, ಎರಡೋ. ಅದೂ ಸರಿಯಾಗಿ ಮಳೆಯಾದರೆ ಮಾತ್ರ. ನಮ್ಮ ದೇಶದ್ದು ಮಳೆ ಆದರಿತ ವ್ಯವಸಾಯ. ಮಳೆ ಇಲ್ಲ ಅಂದರೆ ಬೆಳೆ ಇಲ್ಲ.  ಯಾರದೋ ಮಾತು ಕೇಳಿ  ರಸಗೊಬ್ಬರವನ್ನು ಅಗತ್ಯಕ್ಕಿಂತ ಜಾಸ್ತಿ ಹಾಕಿ ಭೂಮಿಯಲ್ಲಿರುವ ಸತ್ವವನ್ನೇ ನಮ್ಮ ರೈತರು ಹಾಳುಮಾಡಿಕೊಂಡಿದ್ದಾರೆ. ನಮ್ಮ ರೈತರು ಸಾವಯುವ ಗೊಬ್ಬರವನ್ನು ಇನ್ನಾದರೂ ಉಪಯೋಗಿಸುವುದನ್ನು ಕಲಿಯಬೇಕು. ಎಲ್ಲದಕ್ಕಿಂತ ಹೆಚ್ಚಾಗೆ ಅವರು ಬೆಳೆದ ಬೆಳೆಗಳನ್ನು ಸರಿಯಾಗಿ ಸಂರಕ್ಷಿಸಿಡಲು ನಮ್ಮ ದೇಶದಲ್ಲಿ ಸರಿಯಾದ ಉಗ್ರಾಣಗಳಿಲ್ಲ ಎಂದರೆ ಅದಕ್ಕಿಂತ ದೊಡ್ಡ ವಿಪರ್ಯಾಸ ಇಲ್ಲ. ನಮ್ಮ ದೇಶದಲ್ಲಿ ಹೀಗೆ ಸುಮ್ಮನ ಕೊಳೆತ ಆಹಾರ ಧಾನ್ಯಗಳು ಸಾವಿರಾರು ಟನ್ ಗಳು. ಉಚ್ಚ ನ್ಯಾಯಾಲಯ ಕೂಡ ಇದನ್ನು ಸರಿಪಡಿಸಿ, ಅಲ್ಲದೇ ಹೀಗೆ ಆಹಾರ ಧಾನ್ಯಗಳು ಕೊಳೆತು ನಾಶವಗುವ ಬದಲು ಬಡವರಿಗೆ ಅದನ್ನು ಹಂಚಿ ಎಂದು ಆ ಮಾಡಿದ್ದರೂ ನಮ್ಮ ಸರ್ಕಾರಗಳಿಗೆ ಜಾಣ ಕಿವುಡು.

Friday 8 June 2012

"ನೇತ್ರದಾನ, ದೇಹದಾನ ಮತ್ತು ಅಂಗಾಂಗ ದಾನ:- " ಸರಣಿ ಲೇಖನ ಭಾಗ - ೩.

ಕಳೆದ ಸಂಚಿಕೆಯಿಂದ:

ವೈದ್ಯರು ನಮ್ಮದೇಶದಲ್ಲಿ ನೇತ್ರಗಳ ಕೊರತೆ ಬಹಳ ಇದೆ. ಸಾರ್ವಜನಿಕರು ತಾವು ಮರಣಹೊಂದಿದ ಮೇಲೆ ತಮ್ಮ ಕಣ್ಣುಗಳನ್ನು ಶರೀರದ ಜೊತೆ ಹೂಳುವ ಅಥವಾ ಸುಡುವ ಬದಲು ದಾನ ಮಾಡಿದರೆ, ಆ ಕಣ್ಣುಗಳಿಂದ ಇಬ್ಬರ ಅಂಧತ್ವ ನಿವಾರಿಸಬಹುದು ಎಂದು ವೈದ್ಯರು ಅನೇಕ ಬಾರಿ ಕರೆ ಕೊಟ್ಟಿರುತ್ತಾರೆ. ನಾಡಿನ ಗಣ್ಯರು ಮತ್ತು ಸಮಾಜದ ಕೆಲ ಬಂದುಗಳು ಈ ಕರೆಗೆ ಓಗೊಟ್ಟು ತಾವು ಸತ್ತ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡಿರುತ್ತಾರೆ. ಕರ್ನಾಟಕದಲ್ಲಿ ಈ ನೇತ್ರದಾನ ಮತ್ತು ದೇಹದಾನ ಸದ್ದಿಲ್ಲದೆ ನಡೆಯುತ್ತಿರುವುದಂತೂ ನಿಜ.  ಆದರೂ ಆಗ ಬೇಕಾದ ಕೆಲಸ ಬೆಟ್ಟದಷ್ಟಿದೆ. ಇದೇ ರೀತಿ ಅಂಗಾಗ ದಾನಗಳೂ ಆಗೊಮ್ಮೆ ಈಗೊಮ್ಮೆ ಆಗುತ್ತಿರುತ್ತದೆ, ನಾವು ಈ ಬಗ್ಗೆ ಪತ್ರಿಕೆ/ಟಿ.ವಿಯಲ್ಲಿ ಓದಿ/ಕೇಳಿ ತಿಳಿದುಕೋಂಡಿರುತ್ತೇವೆ.

ನಮ್ಮ ಕರ್ನಾಟಕದಲ್ಲಿ ರಾಜ್ ಅವರು ತಾವು ಮರಣಹೊಂದಿದ ನಂತರೆ ತಮ್ಮ ಕಣ್ಣುಗಳನ್ನು ದಾನ ಮಾಡಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಅವರ ಅಭಿಮಾನಿಗಳೂ ಸಹ (ಸುಮಾರು ೩೫,೦೦೦) ತಾವು ಸತ್ತ ನಂತರ ತಮ್ಮ ಕಣ್ಣುಗಳನ್ನು ಈ ಪವಿತ್ರ ಕಾರ್ಯಕ್ಕೆ ಉಪಯೋಗಿಸಲು ಬರೆದುಕೊಟ್ಟಿರುತ್ತಾರೆ. ನಾಡಿನ ಕೆಲವು ಗಣ್ಯರು, ಸಾರ್ವಜನಿಕರು ತಾವು ಸತ್ತ ನಂತರ ತಮ್ಮ ಮೃತ ಶರೀರವನ್ನು ದಾನ ಮಾಡಿದ್ದಾರೆ. ಅವರಲ್ಲಿ ನಟ ಲೋಕೇಶ್ ಸಹ ಒಬ್ಬರು. ರಾಜ್ ಪುತ್ರರು ಸಹ ತಮ್ಮ ದೇಹವನ್ನು ನಾವು ಸತ್ತ ನಂತರ ದಾನ ಮಾಡುತ್ತೇವೆ ಎಂದು ಬರೆದುಕೊಟ್ಟಿರುತ್ತಾರೆ.

ವಯುಕ್ತಿಕವಾಗಿ ಹೇಳಬೇಕೆಂದರೆ ನಾನು ಕೆಲವು ಬಾರಿ ರಕ್ತದಾನವನ್ನು ಮಾಡಿರುತ್ತೇನೆ. ಲಯನ್ಸ್ ಕಣ್ಣಿನ ಆಸ್ಪತ್ರೆಗೆ ನಾನು ನನ್ನ ನೇತ್ರಗಳನ್ನು ದಾನಮಾಡುತ್ತೇನೆಂದು ಬರೆದುಕೊಟ್ಟಿದ್ದೇನೆ. ನನಗೆ ದೇಹವನ್ನೂ ಮತ್ತು ಅದರ ಅಂಗಾಗಗಳನ್ನು ದಾನ ಮಾಡುವ ಇಚ್ಚೆ ಇದೆ. ಅದನ್ನೊ ಕೂಡ ಬರೆದುಕೊಡುವವನಿದ್ದೇನೆ. ಇದರ ಬಗ್ಗೆ ನನ್ನ ಮನೆಯವರಿಗೆ, ಸ್ನೇಹಿತರಿಗೆ ಮತ್ತು ಬಂಧುಬಳಗದವರಿಗೆ ಈಗಾಗಲೇ ಅನೇಕ ಸಲ ತಿಳಿಸಿಯೂ ಇದ್ದೇನೆ. (ಮುಗಿಯಿತು)

Thursday 7 June 2012

"ನೇತ್ರದಾನ, ದೇಹದಾನ ಮತ್ತು ಅಂಗಾಂಗ ದಾನ:- " ಸರಣಿ ಲೇಖನ ಭಾಗ - ೨.

ಕಳೆದ ಸಂಚಿಕೆಯಿಂದ:

ವೈದ್ಯರಿಗೆ ದೇಹದಾನ, ಅಂಗಾಗಗಳ ದಾನ ಮಾಡಲು ಯಾವುದೇ ಗೊಂದಲವಿರುವುದಿಲ್ಲ. ಅವರಿಗೆ ತಾವು ಸತ್ತ ನಂತರ ದೇಹವು ಏನಾಗುತ್ತದೆ ಎಂಬ ಬಗ್ಗೆ ಸರಿಯಾದ ತಿಳುವಳಿಕೆ ಇರುತ್ತದೆ, ಜ್ಞಾನ ಇರುತ್ತದೆ. ಹಾಗಾಗಿ ಈಗಿರುವ ಎಲ್ಲಾ ವೈದ್ಯರು, ದಾದಿಗಳು, ವೈದ್ಯಾಧಿಕಾರಿಗಳು, ವೈದ್ಯ ಶಾಸ್ತ್ರವನ್ನು ಭೋಧಿಸುವ ಶಿಕ್ಷಕರು, ಮುಂದೆ ಓದಲು ಬರುವ ವೈದ್ಯ ವಿದ್ಯಾರ್ಥಿಗಳು, ಅವರ ತಂದೆ ತಾಯಿಯರು ಮುಂದೆ ಬಂದು ತಮ್ಮ ದೇಹವನ್ನು, ತಾವು ಸತ್ತನಂತರ ದಾನವಾಗಿ ಕೊಡಲು  ಘೋಷಿಸಿಕೊಂಡು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಡಬಹುದು. ಈ ರೀತಿಯಾಗಿ ಅವರು ತಮ್ಮ ದೇಹದಾನವನ್ನು ಮಾಡಿಬೇರೆಯವರಿಗೆ ಮೇಲ್ಪಂಕ್ತಿಯಾಗಬಹುದು. ಮಠಾಧಿಪತಿಗಳು ತಾವು ಮರಣ ಹೊಂದಿದ ನಂತರ ನೇತ್ರ ದಾನ, ಅಂಗಾಗ ದಾನ ಮತ್ತು ದೇಹದಾನವನ್ನು ಮಾಡುವುದರ ಮೂಲಕ ಸಾಮಾನ್ಯ ಜನರಿಗೆ ತಿಳುವಳಿಕೆ ನೀಡಬಹುದು. ಭಕ್ತರಿಗೆ ಅದೊಂದು ಪುಣ್ಯಕಾರ್ಯವೆಂದು ಅನ್ನಿಸಿ ತಾವೂ ಅದರ ಬಗ್ಗೆ ಯೋಚಿಸಬಹುದು. ಇದೇ ರೀತಿ ಶಾಸಕರು, ಮಂತ್ರಿಗಳು, ಮುಖ್ಯ ಮಂತ್ರಿಗಳು, ನಟರು, ಐ.ಎ.ಎಸ್, ಐ.ಪಿ.ಎಸ್ ಮುಂತಾದ ಅಧಿಕಾರಿಗಳು, ಸಮಾಜ ಹಿರಿಯ ಗಣ್ಯರು ಮುಂತಾದವರು ಸಹ ಇದರ ಬಗ್ಗೆ ಯೋಚಿಸಿ ಇತರರಿಗಿಎ ಮಾದರಿಯಾಗಬಹುದು.

ದಾನಗಳನ್ನು ಯಾರಿಗೂ ಹೇಳದೆ ಮಾಡಬೇಕು, ಆದರೆ ಕೆಲವು ದಾನಗಳನ್ನು ಮಾತ್ರ ಎಲ್ಲರಿಗೂ ತಿಳಿಸಿ ಮಾಡಬೇಕು. ರಕ್ತದಾನ, ನೇತ್ರದಾನ, ಅಂಗಾಂಗ ದಾನ ಮತ್ತು ದೇಹದಾನ ಇವುಗಳನ್ನು ಎಲ್ಲರಿಗೂ ತಿಳಿಸಿ ಮಾಡಿದಾಗ ಅದು ಬೇರೆಯವರ ಮೇಲೂ ಪರಿಣಾಮ ಬೀರಿ ಅವರೂ  ಸಹ ಇಂತಹ ದಾನಗಳನ್ನು ಮಾಡಲು ಮುಂದಾಗಬಹುದು.

ನಮ್ಮ ಬೆಂಗಳೂರಿನಲ್ಲಿ ಸಧ್ಯ " ಬೆಂಗಳೂರು ವೈದ್ಯಕೀಯ ವಿದ್ಯಾಲಯ " ಮತ್ತು  " ಎಮ್.ಎಸ್.ರಾಮಯ್ಯ ವೈದ್ಯಕೀಯ ವಿದ್ಯಾಲಯ " ದಲ್ಲಿ ದೇಹವನ್ನು ದಾನ ಮಾಡುವುದಕ್ಕಾಗಿ ನೊಂದಾಯಿಸಿಕೊಳ್ಳಬಹುದು. ಅಂಗಾಗವನ್ನು ದಾನ ಮಾಡುವುದಕ್ಕಾಗಿ ಬೆಂಗಳೂರಿನ ನಿಮಾನ್ಸ್ನ್ ನಲ್ಲಿರುವ  "ಜೋನಲ್ ಕೋ ಆರ್ಡಿನೇಶನ್ ಕಮಿಟಿ ಆಫ್ ಕರ್ನಾಟಕ ಫಾರ್ ಟ್ರಾನ್ಸ್ ಪ್ಲಾಂಟೇಷನ್" ಸಂಸ್ಥೆಗೆ  ರಾಜ್ಯ ಸರ್ಕಾರ ಅಧಿಕಾರವನ್ನು ನೀಡಿದೆ. ಅಂಗದಾನ, ಅಂಗ ಕಸಿ ಎಲ್ಲವೂ ಈ ಸಂಸ್ಥೆಯ ಅಡಿಯಲ್ಲೇ ನಡೆಯಬೇಕು. ಇದಕ್ಕೆ ಕಾನೂನು ರೀತಿ ಅನುಮತಿ ಪಡೆಯಬೇಕು. ಮೂತ್ರಪಿಂಡ ದಾನವೂ ಸಹ ಎಲ್ಲರೂ ಮಾಡುವಹಾಗಿಲ್ಲ ಮತ್ತು ಮೂತ್ರ ಪಿಂಡ ಕಸಿಯೂ ಕಾನೂನಾತ್ಮಕವಾಗಿಯೇ ನಡೆಯಬೇಕು. ಮೊದಲು ವ್ಯಕ್ತಿಯ ಉಸಿರಾಟ ನಿಂತಾಗ ವ್ಯಕ್ತಿಯು ಮೃತಪಟ್ಟನೆಂದು ವೈದ್ಯಲೋಕ ಹೇಳುತ್ತಿತ್ತು. ಆದರೆ ಈಗ ವ್ಯಕ್ತಿಯ ಮೆದುಳು ಸತ್ತರೆ ಮಾತ್ರ ಸಾವು ಸಂಭವಿಸುತ್ತದೆ ಎಂದು ಇಂದಿನ ವೈದ್ಯಲೋಕ ಹೇಳುತ್ತದೆ. ಉಸಿರಾಟ ನಿಂತಿದ್ದು ಇನ್ನೇನು ವ್ಯಕ್ತಿಯ  ಮೆದುಳೂ ಸಹ ತನ್ನ ಕಾರ್ಯ ನಿಲ್ಲಿಸುತ್ತದೆ ಎಂದಾಗ ವೈದ್ಯರು ದಾನದ ಅಂಗ ತೆಗೆಯುತ್ತಾರೆ. ನೇತ್ರಗಳನ್ನು ವ್ಯಕ್ತಿಯು ಸತ್ತ ನಂತರ ಅರ್ಧ ಗಂಟೆಯ ಒಳಗಾಗಿ ವೈದ್ಯರಿಗೆ ತಿಳಿಸಿದರೆ ಅವರೇ ಬಂದು ಮೃತಶರೀರದಿಂದ ಕಣ್ಣುಗಳನ್ನು ತೆಗೆದುಕೊಂಡು ಹೋಗುವರು. ಅದರಿಂದ ಮೃತ ಶರೀರಕ್ಕೆ ಯಾವುದೇ ಹಾನಿಯಾಗಲೀ ಅಥವಾ ಮುಖದ ಅಂದವಾಗಲೀ ಕೆಡುವುದಿಲ್ಲ. (ಮಿಕ್ಕಿದ್ದು ನಾಳೆಗೆ)

Wednesday 6 June 2012

"ನೇತ್ರದಾನ, ದೇಹದಾನ ಮತ್ತು ಅಂಗಾಂಗ ದಾನ:- " ಸರಣಿ ಲೇಖನ ಭಾಗ - ೧.

ಹಿಂದು, ಇಸ್ಲಾಂ, ಕ್ರೈಸ್ತ, ಜೈನ, ಬುದ್ದ, ಸಿಖ್ ಹೀಗೆ ಎಲ್ಲಾ ಧರ್ಮಗಳೂ ದಾನಕ್ಕೆ ಅತ್ಯಂತ ಮಹತ್ವ ಕೊಟ್ಟಿದೆ. ಎಲ್ಲಾ ಧರ್ಮ ಗ್ರಂಥಗಳಲ್ಲೂ ಇದರ ಬಗ್ಗೆ ಉಲ್ಲೇಖವಿದೆ. ಮನುಷ್ಯ  ಹುಟ್ಟಿದಾಗಿನಿಂದ ಸಾಯುವತನಕ ಅನೇಕ ದಾನ ಧರ್ಮಗಳನ್ನು ಮಾಡುತ್ತಲೇ ಬಂದಿದ್ದಾನೆ. ವಿದ್ಯಾ ದಾನ, ಅನ್ನ ದಾನ, ಭೊ ದಾನ, ಗೊ ದಾನ, ವಸ್ತ್ರ ದಾನ, ರಕ್ತ ದಾನ, ಮೂತ್ರ ಪಿಂಡ ದಾನ, ಅಂಗಾಗ ದಾನ, ಹೊಸದಾಗಿ ಬಂದಿರುವ ವೀರ್ಯ ದಾನ, ಮತ್ತು ಕೊನೆಯದಾಗಿ ದೇಹ ದಾನ ಹೀಗೆ ದಾನಗಳಲ್ಲಿ ಅನೇಕ ದಾನಗಳಿವೆ. ಪ್ರತಿಯೊಂದು ದಾನಕ್ಕೂ ಅದರದೇ ಆದ ಮಹತ್ವ, ಪವಿತ್ರತೆ ಇದೆ. ಅವಶ್ಯಕತೆ ಇರುವವರಿಗೆ ಇರುವವರು ಮಾಡುವ ದಾನ ಅತ್ಯಂತ ಪವಿತ್ರ ಮತ್ತು ಶ್ರೇಷ್ಠ.

ಮನುಷ್ಯ ತಾನು ಸತ್ತಮೇಲೂ ಮಾಡುವ ನೇತ್ರದಾನ, ಅಂಗಾಂಗ ದಾನ ಮತ್ತು ದೇಹ ದಾನಕ್ಕೆ ಬೆಲೆ ಕಟ್ಟಲಾಗುವುದಿಲ್ಲ.  ಈ ಮೂರು ದಾನಗಳನ್ನು ಮಾಡಲು ಆ ವ್ಯಕ್ತಿಗೆ ಬೇರೆಯದೇ ಆದ ಮನಸ್ಟಿತಿ ಬೇಕಾಗುತ್ತದೆ. ಅದು ಎಲ್ಲರಿಂದಲೂ ಸಾಧ್ಯವಿಲ್ಲ. ಮನುಷ್ಯ ಸತ್ತಮೇಲೆ ಮಾಡುವ ಈ ಮೂರು ದಾನಗಳನ್ನು ನೆರವೇರಿಸುವವರು ಅವರ ಮನೆಯವರು ಮಾತ್ರ. ಹಾಗಾಗಿ ದಾನ ಮಾಡಿದ ಮನುಷ್ಯ ಮತ್ತು ಅವರ ಮನೆಯವರು ಇಬ್ಬರೂ ಅಭಿನಂದನಾರ್ಹರು.

ಎಲ್ಲಾ ದಾನಗಳನ್ನೂ ಮಾಡುವ ಮನುಷ್ಯ ರಕ್ತದಾನ, ನೇತ್ರದಾನ, ಅಂಗಾಂಗ ದಾನ ಮತ್ತು ದೇಹ ದಾನವನ್ನು ಮಾಡಲು ಹಿಂಜರಿಯುವುದು ಜಾಸ್ತಿ. ರಕ್ತವನ್ನು ಕೊಟ್ಟರೆ ತನಗೆ ರಕ್ತ ಕಡಿಮೆಯಾಗುವುದು, ನಾನು ಶಕ್ತಿ ಹೀನನಾಗುವೆ ಎಂಬ ಭಯ ಈಗಲೂ ಅನೇಕರಿಗೆ ಇದೆ. ಹಾಗೆಯೇ ತಾನು ಸತ್ತ ನಂತರೆ ಕಣ್ಣುಗಳನ್ನು ದಾನ ಮಾಡಿದರೆ ಮುಂದಿನ ಜನ್ಮದಲ್ಲಿ ತಾನು ಕುರುಡನಾಗಿ ಹುಟ್ಟುವೆನೆಂದು, ಅಂಗಾಗ ದಾನ ಮಾಡಿದರೆ ತಾನು ಅಂಗವಿಕಲನಾಗಿ ಹುಟ್ಟುವೆನೆಂದು, ದೇಹ ದಾನ ಮಾಡಿದರೆ ತನಗೆ ಮುಕ್ತಿ ದೊರೆಯದೆಂದು ಅನೇಕರಿಗೆ ಭಯ ಮತ್ತು ಸಂಶಯ. ಸರಿಯಾದ ಮಾಹಿತಿಯ ಕೊರತೆ, ವಿದ್ಯೆ/ಬುದ್ದಿಯ ಕೊರತೆ, ಕೆಲವು ಮೂಡನಂಬಿಕೆಗಳು, ಧಾರ್ಮಿಕ ಕಾರಣಗಳಿಂದಾಗಿ ನಮ್ಮ ದೇಶದಲ್ಲಿ ರಕ್ತ ದಾನ, ನೇತ್ರದಾನ, ಅಂಗಾಂಗ ದಾನ, ದೇಹ ದಾನ ಮಾಡುವವರು ಬಹಳ ಕಡಿಮೆ. ಇದರ ಬಗ್ಗೆ ಅನೇಕ ವೈದ್ಯರು, ಬುದ್ದಿ ಜೀವಿಗಳು, ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಿಳುವಳಿಕೆ ಕೊಟ್ಟರೂ ಅದು ಎಲ್ಲಾ ಜನರನ್ನೂ, ಸಮುದಾಯವನ್ನೂ ಸರಿಯಾಗಿ ತಲುಪಿಲ್ಲವೆಂದೇ ಹೇಳಬೇಕು ನಮ್ಮ ದೇಶದಲ್ಲಿ ಮೃತ ಶರೀರಗಳು ವೈದ್ಯ ಶಾಸ್ತ್ರ ಕಲಿಯುವ ವಿದ್ಯಾರ್ಥಿಗಳಿಗಾಗಿ ಅತ್ಯಂತ ಅವಶ್ಯಕವಾಗಿ ಬೇಕಾಗಿವೆ. ಮೃತ ಶರೀರಗಳು ಸರಿಯಾದ ಪ್ರಮಾಣದಲ್ಲಿ ದೊರೆಯದೆ ವೈದ್ಯ ವಿದ್ಯಾರ್ಥಿಗಳು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಅವರ ಶಿಕ್ಷಣಕ್ಕೆ ಅಡಚಣೆಯುಂಟಾಗುತ್ತಿದೆ. (ಮಿಕ್ಕಿದ್ದು ನಾಳೆಗೆ)

Sunday 3 June 2012

"ಶುದ್ದ ಜಲ-ಜೀವ ಜಲ"

ಕೇವಲ ೧೦ ಪೈಸೆಗೆ ೧ ಲೀಟರ್ ಶುದ್ದ ಕುಡಿಯುವ ನೀರು, ಕೆಲವು ಕಡೆ ೧ ರೊಪಾಯಿಗೆ ೨ ಲೀಟರ್ ಶುದ್ದ ಕುಡಿಯುವ ನೀರು, ಇಂತಹದ್ದನ್ನು ನೀವುಗಳು ಇತ್ತೀಚೆಗೆ ಕೇಳಿರಬಹುದು. ನಿಜ, ಇದು ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮವೊಂದು ಸದ್ದಿಲ್ಲದೆ ನಡೆಯುತ್ತಿದೆ. ಮೊದಲು ಕೋಲಾರದ ಒಂದು ಗ್ರಾಮೀಣ ಪ್ರದೇಶದಲ್ಲಿ ಈ ರೀತಿ "ಶುದ್ದ ಜಲ" ಘಟಕವೊಂದನ್ನು ಅಲ್ಲಿನ ಗ್ರಾಮೀಣ ವಾಸಿಗಳ ಸಂಘವೊಂದು ಮೊದಲ ಬಾರಿ ಸ್ಥಾಪಿಸಿತು. ಇತ್ತೀಚೆಗೆ ಹೆಚ್.ಕೆ.ಪಾಟೀಲ್ ಮತ್ತು ಸತೀಶ್ ಜಾರಕಿಹೊಳ್ಳಿ ಎಂಬ ಶಾಸಕರು ಉತ್ತರ ಕರ್ನಾಟಕದಲ್ಲಿ ಇಂತಹ ಘಟಕಗಳನ್ನು ಸ್ಥಾಪಿಸಿ ಅಲ್ಲಿನ ಜನರಿಗೆ ಶುದ್ದ ನೀರನ್ನು ಕುಡಿಸುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಅನೇಕ ಕೆರೆ, ನದಿಗಳು ಬತ್ತಿಹೋಗಿ ಅಲ್ಲಿನ ಜನರಿಗೆ, ದನ ಕರುಗಳಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಅವರಿಗೆ ಬೋರ್ ವೆಲ್ ನೀರೇ ಆಧಾರ. ಆ ನೀರಿನಲ್ಲಿ ಫ್ಲೋರೈಡ್ ಅಂಶವು ಜಾಸ್ತಿ ಇದ್ದು, ಕುಡಿಯಲಾರದ ಹಾಗಿದೆ. ಆ ನೀರು ಆರೋಗ್ಯಕ್ಕೆ ಬಲು ಮಾರಕ. ಇಂತಹ ಘಟಕವನ್ನು ಸ್ಥಾಪಿಸಲು ಆಗುವ  ಖರ್ಚು ಸುಮಾರು ೭ ಲಕ್ಷಗಳು. (ಘಟಕಕ್ಕೆ ಸುಮಾರು ೪.೫ ಲಕ್ಷಗಳು, ಕಟ್ಟಡಕ್ಕೆ ೧.೫ ಲಕ್ಷಗಳು ಮತ್ತು ಕೊಳವೆ ಬಾವಿಗಾಗಿ ಸುಮಾರು ೧ ಲಕ್ಷ.) ಒಂದು ಸಲಕ್ಕೆ ಇದು ಸುಮಾರು ೪ ಲಕ್ಷ ಲೀಟರ್ ನೀರನ್ನು ಶುದ್ದೀಕರಿಸುತ್ತದೆ. ನಂತರ ಅದರ ಫಿಲ್ಟರ್ ಗಳನ್ನು ಬದಲಾಯಿಸಿದರೆ ಆಯಿತು. ನಮ್ಮ ರಾಜ್ಯದಲ್ಲಿರುವ ಶಾಸಕರು, ನಟ/ನಟಿಯರು, ನಿರ್ಮಾಪಕರು, ಇನ್ಫೋಸಿಸ್, ಬಯೋಕಾನ್, ವಿಪ್ರೋ ಮುಂತಾದ ಕಂಪನಿಗಳು, ನಮ್ಮಲ್ಲಿರುವ ಶ್ರೀಮಂತ ಮಠಗಳು ಮತ್ತು ಸಮಾಜದ ಇತರೆ ಗಣ್ಯರು ಇಂತಹ ಘಟಕಗಳನ್ನು ಗ್ರಾಮೀಣ ಪ್ರದೇಶದಲ್ಲಿ ಪ್ರಾರಂಬಿಸಿದರೆ ಅಲ್ಲಿನ ಜನತೆಗೆ ಶುದ್ದ ಕುಡಿಯುವ ನೀರು ದೊರಕಿದಂತಾಗುತ್ತದೆ. ನಗರ ಪ್ರದೇಶದಲ್ಲಿ ಇರುವ ನಮಗೆ ಇದರ ಅರಿವು ಬಹಳ ಕಡಿಮೆ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಮತ್ತು ಶೌಚಾಲಯದ ಸಮಸ್ಯೆ ಬಹಳ ಇದೆ.  ಇದರ ಬಗ್ಗೆಯೂ ಯೋಚಿಸಬಹುದು.

Saturday 2 June 2012

" ವೈದ್ಯೋ ನಾರಾಯಣ ಹರಿ "

ಪ್ರತಿಯೊಂದು ವೃತ್ತಿಗೊ ಅದರದೇ ಆದ ಘನತೆ, ಗೌರವ, ಜವಾಬ್ದಾರಿ ಎಲ್ಲವೂ ಇರುತ್ತದೆ. ವೈದ್ಯರು, ಇಂಜಿನಿಯರ್ ಗಳು, ಐ,ಎ.ಎಸ್, ಐ,ಪಿ.ಎಸ್, ಚಾರ್ಟೆಡ್ ಅಕೌಂಟೆಂಟ್, ವಕೀಲರು, ನ್ಯಾಯಾಧೀಶರು ಹೀಗೆ ಸಮಾಜದಲ್ಲಿ ಅನೇಕ ಜನಪ್ರಿಯ ವೃತ್ತಿನಿರುತರಿರುತ್ತಾರೆ. ಪ್ರತಿಯೊಂದು ಹುದ್ದೆಯೂ ಅಪ್ರತಿಮ ವಿದ್ಯೆ, ಬುದ್ದಿ, ಕೌಶಲ್ಯ, ತಾಳ್ಮೆ, ಸಹನೆ, ಜವಾಬ್ದಾರಿ ಎಲ್ಲವನ್ನೂ ಬೇಡುತ್ತದೆ. ಅದರಲ್ಲೂ ವೈದ್ಯ ವೃತ್ತಿ ಒಂದು ತೂಕ ಹೆಚ್ಚೇ ಎಂದು ಹೇಳಿದರೆ ಯಾರೂ ತಪ್ಪು ತಿಳಿಯುವುದಿಲ್ಲ ಎಂದು ನನ್ನ ಭಾವನೆ. ಯಾಕೆಂದರೆ ಅದು ಜೀವದ ಪ್ರಶ್ನೆ, ಹುಟ್ಟು ಸಾವಿನ ಪ್ರಶ್ನೆ. ಒಂದು ಚೂರು ಹೆಚ್ಚು ಕಡಿಮೆಯಾದರೆ ಜೀವವೇ ಹೋಗುವುದು. ಬೇರೆಯ ವೃತ್ತಿಯಲ್ಲಿ ಒಂದು ವೇಳೆ ಹೆಚ್ಚು ಕಡಿಮೆಯಾದರೆ ಅದನ್ನು ಸರಿ ಮಾಡುವ ಅವಕಾಶವಿರುತ್ತದೆ. ಆದರೆ ವೈದ್ಯಕೀಯ ವೃತ್ತಿಯಲ್ಲಿ ಅಂಥಹ ಅವಕಾಶಗಳು ಇರುವುದೇ ಇಲ್ಲವೇನೋ? ಅಂಥಹದರಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಕೆಲಸ ಮಾಡುವ ವೈದ್ಯರು ಯಾವ ದೇವರಿಗೂ ಕಡಿಮೆ ಇಲ್ಲ. ಅದಕ್ಕಾಗಿಯೇ " ವೈದ್ಯೋ ನಾರಾಯಣ ಹರಿ " ಎಂದು ನಮ್ಮ ಧರ್ಮ, ಸಂಸ್ಕೃತಿ ವೈದ್ಯರಿಗೆ ಅತ್ಯಂತ ಮಹತ್ವದ ಸ್ಥಾನವನ್ನು ಕೊಟ್ಟಿದೆ. ಅವರನ್ನು ಕಣ್ಣಿಗೆ ಕಾಣುವ ದೇವರು ಎಂದು ಜನಸಾಮಾನ್ಯರು ನಂಬುತ್ತಾರೆ. ಅವರು ಯಾವ ಮಾತ್ರೆ, ಟಾನಿಕ್ ಹೀಗೆ ಏನು ಬರೆದು ಕೊಟ್ಟರೂ ಅದನ್ನು ಜನರು ತೆಗೆದುಕೊಳ್ಳುತ್ತಾರೆ.  ಅವರು ಏನು ಹೇಳಿದರೂ ಹಾಗೆ ಕೇಳುತ್ತಾರೆ.  ಅವರ ಮೇಲೆ ಜನರಿಗೆ ಅಷ್ಟು ವಿಶ್ವಾಸ, ನಂಬಿಕೆ. ಕೇವಲ ೧೦ನೇ ತರಗತಿ ಓದಿದವನೊಬ್ಬ ಕೈಯಲ್ಲಿ ಸ್ಕೆತಾಸ್ಕೋಪ್ ಹಿಡಿದು ಪ್ಯಾಂಟ್ ಮೇಲೆ ಬಿಳಿ ಕೋಟ್ ಹಾಕಿಕೊಂದು ಬಂದರೂ ಯಾವ ರೋಗಿಯಾಗಲೀ ಅಥವಾ ಅವರ ಸಂಬಂಧಿಕರಾಗಲೀ ಅವರನ್ನು ನೀವು ಎಷ್ಟು ಓದಿದ್ದೀರಾ ಎಂದು ಪ್ರಶ್ನೆ ಸಹ ಮಾಡುವುದಿಲ್ಲ ಅಷ್ಟು ನಂಬಿಕೆ ನಮ್ಮ ಜನರಿಗೆ ವೈದ್ಯರ ಮೇಲೆ.  ನಮ್ಮ ದೇಶದಲ್ಲಿ ಅನೇಕ ವೈದ್ಯರು ನಿಜವಾಗಲೂ ದೇವರ ಸ್ಥಾನದಲ್ಲೇ ಇದ್ದಾರೆ.

ಇತ್ತೀಚೆಗೆ ಕ್ಷಯ ರೋಗ ಗ್ರಂಥಿಗಳ ಸಂಬಂಧಿ ರೋಗ ಹೊಂದಿದ್ದ ರೋಹಿತ್ ಎಂಬ ಬಾಲಕನಿಗೆ ಮೂತ್ರ ವಿಸರ್ಜನಾ ಚರ್ಮ ಸಂಬಂಧಿ ಶಸ್ತ್ರ ಚಿಕಿತ್ಸೆಯನ್ನು ಮಾಡಿರುವ ಸುದ್ದಿ ಬಂದಿದೆ. ಎದೆ ನೋವು ಮತ್ತು ತಲೆ ಸುತ್ತಿನ ಕಾರಣಕ್ಕಾಗಿ ಮುಂಬೈನ ಲೀಲಾವತಿ ಆಸ್ಪತ್ರೆ ಸೇರಿದ ರೋಗಿಗೆ ಕಾಲಿನ ಶಸ್ತ್ರಚಿಕಿತ್ಸೆ ಮಾಡಿರುವ ಸುದ್ದಿಯೂ ಬಂದಿದೆ. ಹೈದರಾಬಾದಿನಲ್ಲಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗಾಗಿ ಸೇರಿದ ೯ ಜನ ಶಾಶ್ವತ ಅಂಧರಾದ ಸುದ್ದಿ ಬಂದಿದೆ. ಮಧುಮಗನೊಬ್ಬ ತನ್ನ ಬಳತೋಳಿನಲ್ಲಿ ನೋವು ಕಾಣಿಸಿಕೊಂಡ ಕಾರಣ ವೈದ್ಯರಿಗೆ ತೋರಿಸಿದಾಗ ಅವರ ನಿರ್ಲಕ್ಷದಿಂದ ಸಾವನಪ್ಪಿರುವ ಘಟನೆ ನಗರದ ರವಿ ಕಿರ್ಲೋಸ್ಕರ್ ಆಸ್ಪತೆಯಲ್ಲಿ ನಡೆದಿದೆ.  ಈ ತರಹದ ಸುದ್ದಿಗಳು ಆಗಾಗ ಕಿವಿಗೆ ಅಪ್ಪಳಿಸುತ್ತಲೇ ಇದೆ. ಇಂತಹ ವಿಷಯ ಪತ್ರಿಕೆಯಲ್ಲಿ ಓದಿದಾಗ, ಟಿ.ವಿಯಲ್ಲಿ ನೋಡಿದಾಗ ಮನಸ್ಸು ಕಸಿವಿಸಿಗೊಳ್ಳುತ್ತದೆ. ದೂರದಲ್ಲಿ ಕುಳಿತಿರುವ ನಮಗೇ ಹೀಗಾದರೆ, ತೊಂದರೆಗೆ ಒಳಗಾಗಿರುವವರು ಮತ್ತು ಅವರ ಮನೆಯವರ ಪರಿಸ್ತಿತಿ ಏನಾಗಬೇಕು?

 ಈ ತರಹ ಕೆಲಸವು ನುರಿತ ವೈದ್ಯರಿಂದ ಆಗುವುದಿಲ್ಲ.  ಯಾವ ವೈದ್ಯರಾಗಲೀ ಬೇಕಂತಲೇ ಇಂತಹ ಕೆಲಸವನ್ನು ಮಾಡುವುದಿಲ್ಲ. ಯಾರೊ ಒಬ್ಬಿಬ್ಬರು ಮಾಡಿದ ತಪ್ಪು ಎಲ್ಲಾ ವೈದ್ಯ ಸಮೂಹಕ್ಕೆ ಕಪ್ಪು ಚುಕ್ಕೆಯಾಗಬಾರದು. ಇದು ವೈದ್ಯರ ತಪ್ಪೋ ಅಥವಾ ಶಸ್ತ್ರ ಚಿಕಿತ್ಸೆಗೆ ಕರೆದುಕೊಂಡು ಹೋಗುವ ಸಹಾಯಕರು ಮತ್ತಿತರ ತಪ್ಪೋ? ಇದೆಲ್ಲಾ ಯಾಕಾಗುತ್ತಿದೆ? ಅವರಿಗೆ ಸರಿಯಾದ ವಿದ್ಯೆಯ ಕೊರತೆಯೇ? ಬುದ್ದಿಯ ಕೊರತೆಯೇ? ಅನುಭವದ ಕೊರತೆಯೇ? ಶ್ರದ್ದೆಯ ಕೊರತೆಯೇ? ಭಾಷೆಯ ಸಮಸ್ಯೆಯೇ? ಕೆಲಸದ ಒತ್ತಡವೇ? ಅಥವಾ ಕೆಲಸದ ಬಗ್ಗೆ ನಿರ್ಲಕ್ಷವೇ? ಎಂಬುದರ ಬಗ್ಗೆ ವಿವರವಾಗಿ ವಿಚಾರಣೆ ನಡೆಸಿ ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಮೆಡಿಕಲ್ ಕೌನ್ಸಿಲ್ ಮತ್ತು ಸಂಭಂಧ ಪಟ್ಟ ಅಧಿಕಾರಿಗಳು, ಹಿರಿಯ ವೈದ್ಯರು, ನುರಿತ ಆಡಳಿತಕಾರರು ಇವರ ಮೇಲಿದೆ.

ಇದರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ಕ್ರಮ ಕೈಗೊಂಡರೆ ಮುಂದೆ ಇಂತಹ ತಪ್ಪುಗಳು ಆಗುವುದಿಲ್ಲ.  ಸಾಮಾನ್ಯವಾಗಿ ಶಸ್ತ್ರ ಚಿಕಿತ್ಸೆ ಮಾಡುವ ವೈದ್ಯರೇ ಬೇರೆಯಾಗಿರುತ್ತಾರೆ ಮತ್ತು ದಿನವೂ ರೋಗಿಗೆ ಚಿಕಿತ್ಸೆ ಕೊಡುವ ವೈದ್ಯರೇ ಬೇರೆಯಾಗಿರುತ್ತಾರೆ. ಅವರಲ್ಲಿ ಹೆಚ್ಚಿನ ರೀತಿಯ ಹೊಂದಾಣಿಕೆ ಇರಬೇಕಾಗುತ್ತದೆ. ಅದು ಇಲ್ಲದಿದ್ದರೆ ಇಂತಹ ತಪ್ಪುಗಳು ಸಂಭವಿಸುತ್ತದೆ. ಇದರ ಬಗ್ಗೆ ಸಂಭಂದಪಟ್ಟವರು ಯೋಚಿಸಬೇಕಾಗಿದೆ.