Monday 27 August 2012

ಭಾರತದಲ್ಲಿ ಮಠ, ಮಂದಿರಗಳು: ಭಾಗ ೩


ಕಳೆದ ಸಂಚಿಕೆಯಿಂದ


ಭಕ್ತರ ಕಾಣಿಕೆ ಭಗವಂತನ ಮೂಲಕ ಪುನ: ಜನರ ಕಲ್ಯಾಣಕ್ಕೆ ಉಪಯೋಗವಾಗಲಿ. ಭಗಂತನಿಗೆ ಹಣ ಯಾಕೆ? ಅವನು ಬಯಸುವುದು ಭಕ್ತಿ ಮತ್ತು ಭಾವ ಮಾತ್ರ ತಾನೆ. ನಮ್ಮ ದೇಶದಲ್ಲಿ ಅತಿ ಹೆಚ್ಚಿನ ಬಡತನವಿದೆ. ಆಹಾರ ಸಮಸ್ಯೆ, ಆರೋಗ್ಯ, ಕುಡಿಯಲು ನೀರಿನ ಸಮಸ್ಯೆ, ನಿರುದ್ಯೋಗ, ಸರಿಯಾದ ರಸ್ತೆಗಳಿಲ್ಲ, ವಿದ್ಯುತ್ ಸಮಸ್ಯೆ ಇದೆ. ಬಡವರಿಗೆ ನಿಲ್ಲಲು ಸರಿಯಾದ ನೆಲೆಯಿಲ್ಲ, ಮಕ್ಕಳಿಗೆ ಕಲಿಯಲು ಸರಿಯಾದ ಶಾಲೆಗಳಿಲ್ಲ, ಎಷ್ಟೋ ಹಳ್ಳಿಗಳಲ್ಲಿ ಶೌಚಾಲಯವೇ ಇಲ್ಲ. ಹಣದಿಂದ ದೇಶದ ಎಲ್ಲಾ ನದಿಗಳನ್ನು ಒಂದುಗೂಡಿಸಲು ಬಳಸಬಹುದು. ಕುಡಿಯಲು ಮತ್ತು ವ್ಯವಸಾಯಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ನೀರಿನ ಸಮಸ್ಯೆ ಒಂದೇ ಏಟಿಗೆ ಬಗೆಹರಿಸಬಹುದು. ಎಲ್ಲಾ ಸಮಸ್ಯೆಯಿಂದ ಶಾಶ್ವತ ಮುಕ್ತಿ ಪಡೆಯಬಹುದು, ಈ ಹಣವನ್ನು ಧಾರ್ಮಿಕ ಪ್ರವಾಸೋದ್ಯಮಕ್ಕಾಗಿ ಬಸಬಹುದು ಎಂಬ ವಾದವನ್ನು ಶರದ್ ಪವಾರ್ ಮುಂದಿಡುತ್ತಾರೆ.

ಅವರ ವಾದವೇನೋ ಕೇಳಲು ಚೆನ್ನಾಗಿಯೇ ಇದೆ.  ಆದರೆ ಇದು ಕಾರ್ಯಸಾಧುವೇ ಎಂಬುದು ಬಹು ದೊಡ್ಡ ಪ್ರಶ್ನೆ. ಮುಂದೆ ಇದು ಯಾವ ದಿಕ್ಕಿಗೆ ಹೊರಳುತ್ತದೇಯೋ ಈಗಲೇ ಹೇಳಲಿಕ್ಕಾಗುವುದಿಲ್ಲ. ಬೇರೆಬೇರೆ ಪಕ್ಷಗಳ ಮುಖಂಡರ ಹೇಳಿಕೆಗಳು ಇನ್ನೂ ಪ್ರಕಟವಾಗಿಲ್ಲ. ಮುಖ್ಯವಾಗಿ ಮಿತ್ರಪಕ್ಷವಾದ ಬಿ.ಜೆ.ಪಿ ಇನ್ನೂ ಇದರ ಬಗ್ಗೆ ಬಾಯಿ ಬಿಟ್ಟಿಲ್ಲ. ಇದರ ಬಗ್ಗೆ ಕಾಂಗ್ರೆಸ್ ಸಹ ಮೌನತಾಳಿದೆ. ನಮ್ಮ ದೇಶದ ಇತರೆ ಪ್ರಾದೇಶಿಕ ಪಕ್ಷಗಳ ಹೇಳಿಕೆ ಇನ್ನೂ ಬಂದಿಲ್ಲ.  ಎಲ್ಲ ಕೆಲಸವನ್ನು ಮಾಡಲು ಮೊದಲು ಇಚ್ಚಾಶಕ್ತಿ, ಎಲ್ಲರ ಸಹಮತ ಮತ್ತು ಇದಕ್ಕೆ ಬೇರೆಯದೇ ಆದ ಮನಸ್ತಿತಿ ಬೇಕಾಗುತ್ತದೆ. ಇದು ಅಷ್ಟು ಸುಲಭದ ಕೆಲಸವಲ್ಲ. ನಮ್ಮದು ಅನೇಕ ಭಾಷೆ/ಜಾತಿ/ಧರ್ಮಗಳಿರುವ ಬೀಡು. ಅದಲ್ಲದೇ ನಮ್ಮದು ಪ್ರಜಾಪಭುತ್ವದ ನಾಡು. ಇದು ಎಲ್ಲರ ಸಲಹೆ ಸೂಚನೆ, ಅಭಿಪ್ರಾಯವನ್ನು ಅಪೇಕ್ಷಿಸುತ್ತದೆ.  (ಮುಗಿಯಿತು)

Sunday 26 August 2012

ಭಾರತದಲ್ಲಿ ಮಠ, ಮಂದಿರಗಳು: ಭಾಗ ೨


ಕಳೆದ ಸಂಚಿಕೆಯಿಂದ

ಭಾರತದಲ್ಲಿ ಮಠ, ಮಂದಿರಗಳ ಪರಿಸ್ಥಿತಿ ಹೀಗಿರಬೇಕಾದರೆ, ಜನತಾದಳ (ಸಂಯುಕ್ತ) ಪಕ್ಷದ ನಾಯಕ ಶರದ್ ಯಾದವ್ ಇತ್ತೀಚೆಗೆ ಸರ್ಕಾರಕ್ಕೆ ಒಂದು ಮನವಿಯನ್ನು ಮಾಡಿದ್ದಾರೆ. ನಮ್ಮ ದೇಶದ ಮಠ ಮಂದಿರಗಳಲ್ಲಿ ಕೋಟ್ಯಾಂತರ ಹಣವಿದೆ. ಅದನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡು ಅಭಿವೃದ್ದಿ ಕಾರ್ಯಗಳಿಗೆ ಬಳಸಲಿ. ಇದರ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಲಿ. ಇದರ ಬಗ್ಗೆ ಒಂದು ಕಾನೂನು ಹೊರತರಲಿ ಎಂಬುದು ಅವರ ಇಚ್ಚೆ. ಇದನ್ನು ಕೆಲವು ಬಡ ಮಠಗಳ ಮಠಧೀಶರು ಸ್ವಾಗತಿಸಿದ್ದರೆ, ಕೆಲವು ಶ್ರೀಮಂತ ಮಠಗಳು ವಿರೋಧಿಸಿವೆ. ಇದು ಜನರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿ. ಸರ್ಕಾರ ಇದನ್ನು ಮಾಡಲು ಬಿಡುವುದಿಲ್ಲ ಎಂದು ಗುಟುರು ಹಾಕಿವೆ. 

ಶರದ್ ಪವಾರ್ ಕೇವಲ ಹಿಂದೂ ಮಠ ಮಂದಿರಗಳ ಬಗ್ಗೆ ಮಾತ್ರ ಮಾತನಾಡಿಲ್ಲ. ಅವರು ಇಸ್ಲಾಂ, ಕ್ರಿಶ್ಶಿಯನ್ ಮುಂತಾದ ಧಾರ್ಮಿಕ ಅಲ್ಪಸಂಖ್ಯಾತ ಧಾರ್ಮಿಕ ಸಂಘಟನೆಯ ಹಣ ಕಾಸು ವಿಚಾರಗಳ ಬಗ್ಗೆಯೂ ಇದೇ ದೋರಣೆ ತಾಳಿದ್ದಾರೆ. ಮುಸ್ಲಿಂ ವಕ್ಫ್ ಬೋರ್ಡ್ ನಲ್ಲಿಯೂ ಸಹ ಲಕ್ಷಾಂತರ ಹಣವಿದೆ. ಅದನ್ನು ಬಡ ಜನರ ಏಳಿಗೆಗಾಗಿ ಉಪಯೋಗಿಸಬಹುದು. ಶಿಕ್ಷಣ, ಆಹಾರ, ವಸತಿ ಹೀಗೆ ಜನಾಂಗದ ಉನ್ನತ ಅಭಿವೃದ್ದಿಗೆ ಬಳಸಬಹುದು ಎಂದಿದ್ದಾರೆ. ಒಂದು ರೀತಿಯಲ್ಲಿ ಅವರು ಹೇಳಿರುವುದು ಸರಿಯಾಗಿದೆ ಎಂದು ಸಮಾಜದ ಉನ್ನತ ವರ್ಗದ ಹಿರಿಯರು, ಬುದ್ದಿಜೀವಿಗಳು ಮತ್ತು ಪ್ರಗತಿಪರರು ಇದನ್ನು ಅನುಮೋದಿಸಿದ್ದಾರೆ, ಮಿಕ್ಕವರಿಗೆ ಅದು ಸಹನೆಯಾಗಿಲ್ಲ. (ಮಿಕ್ಕಿದ್ದು ನಾಳೆಗೆ)


Saturday 25 August 2012

ಭಾರತದಲ್ಲಿ ಮಠ, ಮಂದಿರಗಳು: ಭಾಗ ೧


ಭಾರತದಲ್ಲಿ ಮಠ, ಮಂದಿರಗಳಿಗೆ ಕೊರತೆಯಿಲ್ಲ. ಅದರ ಆಸ್ತಿ ಪಾಸ್ತಿಯೂ ಸಹ. ಭಾರತದಲ್ಲಿ ಬಡವರಿರಬಹುದು, ಆದರೆ ನಮ್ಮ ದೇವರುಗಳಲ್ಲಿ ಯೂರೂ ಬಡವರಿಲ್ಲ. ಕೆಲವು ಶ್ರೀಮಂತ ದೇವರುಗಳಿದ್ದರೆ ಮತ್ತೆ ಕೆಲವರು ಭಾರೀ ಭಾರೀ ಶ್ರೀಮಂತರು. ಅನಂತ ಪದ್ಮನಾಭ, ಶ್ರೀನಿವಾಸ, ಗಣೇಶ, ಲಕ್ಷಿ, ಮಂಜುನಾಥ, ಶಿರಡಿ ಸಾಯಿಬಾಬ ಹೀಗೆ ಸಾಮಾನ್ಯವಾಗಿ ಹೆಚ್ಚಿನ ದೇವರುಗಳು ಕೋಟ್ಯಾಧಿಪತಿಗಳೇ. ಸಾವಿರಾರು ಕೋಟಿ ನಗ, ನಾಣ್ಯ, ಬಂಗಾರ, ಮುತ್ತು, ರತ್ನ, ವಜ್ರ, ವೈಡೂರ್ಯಗಳನ್ನು ಹೊಂದಿರುವವರೇ. ತಿರುಪತಿಯ ಒಡೆಯ ಶ್ರೀನಿವಾಸನ ವಾರ್ಷಿಕ ಅದಾಯ ಸುಮಾರು ೯೦೦ ಕೋಟಿಗಳಷ್ಟು, ಶಿರಡಿ ಸಾಯಿಬಾಬನ ವಾರ್ಷಿಕ ಆದಾಯ ಸುಮಾರು ೪೦೦ ಕೋಟಿಗಳಷ್ಟು, ಇನ್ನು ಜಗತ್ತಿನ ಅತ್ಯಂತ ಶ್ರೀಮಂತ ದೇವರೆಂದು ಪ್ರಸಿದ್ದಿಪಡೆದ ಪದ್ಮನಾಭಾನ ಆಸ್ತಿ ಸುಮಾರು ೧೦ ಲಕ್ಷ ಕೋಟಿಗಳಷ್ಟು. (ಇನ್ನೂ ಎಣಿಕೆ ಕಾರ್ಯ ನಡೆಯುತ್ತಿದೆ)

ಇನ್ನು ಮಠಗಳ ಆಸ್ತಿಯ ಬಗ್ಗೆ ಹೇಳುವುದೇ ಬೇಡ. ನಮ್ಮಲ್ಲಿರುವ ಯಾವುದೇ ಮಠಗಳನ್ನು ತೆಗೆದುಕೊಳ್ಳಿ, ಉತ್ತರ ಭಾರತದ ಜೈ ಗುರುದೇವನ ಆಸ್ತಿ ಸುಮಾರು ೧೨,೦೦೦ ಕೋಟಿಗಳಷ್ಟು, ಪುಟ್ಟಪರ್ತಿ ಸಾಯಿಬಾಬನ ಆಸ್ತಿ ಸುಮಾರು ೪೦,೦೦೦ ಕೋಟಿಗಳಷ್ಟು, ಇನ್ನು ಬಿಡದಿಯ ನಿತ್ಯಾನಂದನ ಆಸ್ತಿ ಸುಮಾರು ,೦೦೦ ಕೋಟಿಗಳಷ್ಜು. ಉತ್ತರಾದಿ ಮಠ, ವ್ಯಾಸರಾಜ ಮಠ, ಶಂಕರ ಮಠ, ಉಡುಪಿ ಮಠ, ಸಿದ್ದಗಂಗಾ ಮಠ, ಆದಿ ಚುಂಚನಗಿರಿ ಮಠ ಹೀಗೆ ಯಾವುದೇ ಮಠ ತೆಗೆದುಕೊಳ್ಳಿ ಎಲ್ಲ ಮಠಗಳೂ ಕೋಟಿ ಲೆಕ್ಕದಲ್ಲಿ ಬಾಳುತ್ತವೆ. ಈ ಮಠಗಳು ಸಾವಿರಾರು ಎಕರೆ ಭೂಮಿಯನ್ನೂ ಸಹ ಹೊಂದಿರುವಂತಹದ್ದನ್ನೂ ನಾವು ಕಂಡಿದ್ದೇವೆ. ಕೆಲವು ಮಠಗಳಲ್ಲಿ ನಿತ್ಯವೂ ಅನ್ನದಾನ, ಉಚಿತ ವಿದ್ಯಾದಾನ ಮುಂತಾದ ಕೆಲವು ಸಮಾಜ ಸೇವಾ ಕಾರ್ಯಗಳು ನಡೆಯುತ್ತಿವೆ. ಕೈಗೊಂಡಿವೆ. ಕೆಲವು ಮಠಗಳು ವೈದ್ಯಕೀಯ ಮತ್ತು ಇಂಜಿನಿಯರ್ ಕಾಲೇಜುಗಳನ್ನು ಸಹ ನಡೆಸುತ್ತಿವೆ. ಅದರಿಂದಲೂ ಒಳ್ಳೆಯ ಆದಾಯಗಳಿಸುತ್ತಿವೆ.

ಮಠಗಳನ್ನು ಮತ್ತು ಮಠಾಧೀಶರನ್ನು ಯಾವುದೇ ಸರ್ಕಾರವಾಗಲೀ ಮತ್ತು ರಾಜಕಾರಣಿಯಾಗಲೀ ಎದುರುಹಾಕಿಕೊಳ್ಳುವ ಧೈರ್ಯಮಾಡುವುದಿಲ್ಲ. ಮಠಗಳ ಮಾತನ್ನು ಯಾವುದೇ ಸರ್ಕಾರ ಅಷ್ಟು ಸುಲಭವಾಗಿ ತೆಗೆದುಹಾಕಿಕೊಳ್ಳುವುದಿಲ್ಲ. ಅದು ಯಾವುದೇ ರಾಜ್ಯ ಅಥವಾ ಕೇಂದ್ರ ಸರ್ಕಾರವಾಗಲೀ ಮಠಗಳನ್ನು ಕಂಡರೆ ಭಕ್ತಿ ಭಾವಗಳಿಂದ ಕೈ ಮುಗಿಯುವವರೇ ಮತ್ತು ಎಲ್ಲರೂ ಮಠಾಧೀಶರಿಗೆ ಅಡ್ಡಬೀಳುವವರೇ. (ಮಿಕ್ಕಿದ್ದು ನಾಳೆಗೆ)