Sunday 30 September 2012

ಆರ್.ಕೆ ನಾರಾಯಣ್:ಭಾಗ-೩


ಕಳೆದ ಸಂಚಿಕೆಯಿಂದ:

ಕನ್ನಡಿಗರು ಯಾರನ್ನೂ ನೀವು ತೆಲುಗರು, ತಮಿಳರು, ಹಿಂದಿಯವರು ಎಂದೂ ಯಾವತ್ತೂ ಯಾರನ್ನೂ ಬೇಧಭಾವ ಮಾಡಿಲ್ಲ, ಮಾಡುವುದೂ ಇಲ್ಲ. ಇಡೀ ಭಾರತದಲ್ಲಿ ಎಲ್ಲಾ ಭಾಷೆಗಳನ್ನಾಡುವ ಮಂದಿ ಕರ್ನಾಟಕದಲ್ಲಿ ಇರುವುದೇ ಅದಕ್ಕೆ ಸಾಕ್ಷಿ. ಆರ್.ಕೆ ಯವರ ಮನೆ ಭಾಷೆ ತಮಿಳು. ಮಾಸ್ತಿಯವರ ಮನೆ ಭಾಷೆಯೂ ಸಹ ತಮಿಳು, ಮಾಸ್ತಿಯವರನ್ನು ನಾವು ಕನ್ನಡದ ಆಸ್ತಿ ಎಂದು ಕರೆಯುತ್ತೇವೆ. ನಾವು ಅವರನ್ನು ತಮಿಳರೆಂದು ನಾವು ವಿರೋಧಿಸುತ್ತೇವಾ? ಖಂಡಿತಾ ಇಲ್ಲ. ಎಂದೆಂದಿಗೂ ಸಹ ಇಲ್ಲ.

ಆರ್.ಕೆ ಯವರನ್ನು ಯಾರೂ ಕನ್ನಡದಲ್ಲಿ ಬರೆಯಲು ಒತ್ತಾಯಿಸಲಿಲ್ಲ. ಅವರು ಆಂಗ್ಲ ಅಥವಾ ತಮಿಳು/ತೆಲುಗು ಹೀಗೆ ಯಾವ ಭಾಷೆಯಲ್ಲಾದರೂ ಬರೆಯಲಿ, ಅದು ಅವರ ಆಜನ್ಮ ಸಿದ್ದ ಹಕ್ಕು. ಅದನ್ನು ಯಾರೂ ಪ್ರಶ್ನಿಸುವುದಿಲ್ಲ. ನಿಮ್ಮನ್ನು ನಾವು ಕನ್ನಡಿಗರೆಂದು ಒಪ್ಪಿಕೊಂಡು, ಕನ್ನಡದಲ್ಲಿ ನಾಲ್ಕು ಮಾತನಾಡಿ ಎಂದು ತುಂಬಿದ ಸಭೆಯಲ್ಲಿ ಕೇಳಿಕೊಂಡಾಗ, ನಾನು ಕನ್ನಡದಲ್ಲಿ ಮಾತನಾಡುವುದಿಲ್ಲ ತಮಿಳಿನಲ್ಲಿ ಮಾತನಾಡುತ್ತೇನೆ ಎಂದಾಗ ಯಾರಿಗೆ ತಾನೆ ಅವರ ಬಗ್ಗೆ ಒಳ್ಳೆ ಅಭಿಪ್ರಾಯ ಮೂಡಲು ಸಾಧ್ಯ? ಒಬ್ಬ ವ್ಯಕ್ತಿ ೬೦-೭೦ ವರ್ಷ ಒಂದು ರಾಜ್ಯದಲ್ಲಿ ವಾಸ ಮಾಡಿಕೊಂಡಿದ್ದರೂ ಕನ್ನಡದಲ್ಲಿ ಮಾತನಾಡಲು ಇಚ್ಚಿಸುವುದಿಲ್ಲ ಎಂದರೆ ಹೇಗೆ? ಈ ರಾಜ್ಯದಲ್ಲಿ ಎಲ್ಲಾ ಸಕಲ ಸೌಲಭ್ಯಗಳನ್ನು ಅನುಭವಿಸಿ ಈ ರಾಜ್ಯದ ಭಾಷೆ ಮಾತ್ರ ಬೇಡ ಎಂದರೆ ಹೇಗೆ? ಇದೇ ಏನು ನೀವು ಈ ರಾಜ್ಯಕ್ಕೆ/ಭಾಷೆಗೆ/ಸಂಸ್ಕೃತಿಗೆ ತೋರಿಸುವ ಗೌರವ, ಮರ್ಯಾದೆ? ಇದನ್ನು ಕೇಳುವುದು ತಪ್ಪಾ?

ಒಬ್ಬ ವ್ಯಕ್ತಿ ತಾನು ಹುಟ್ಟಿರುವ, ಬೆಳೆದಿರುವ ರಾಜ್ಯ/ದೇಶವನ್ನು ಬಿಟ್ಟು ಬೇರೆ ರಾಜ್ಯ/ದೇಶಕ್ಕೆ ಯಾಕಾಗಿ ಹೋಗುತ್ತಾನೆ? ವಿದ್ಯಾಭ್ಯಾಸ/ಕೆಲಸ/ಆರೋಗ್ಯ/ಉದ್ದಿಮೆ/ಕ್ರೀಡೆ/ಭವಿಷ್ಯ ಹೀಗೆ ಅನೇಕ ಕಾರಣಗಳಿರುತ್ತದೆ. ಹೆಚ್ಚಿನ ಜನ ತಮ್ಮ ಬಂಧು, ಬಾಂಧವರನ್ನು ಬಿಟ್ಟು ಬೇರೆ ಕಡೆ ನೆಲಸಿದಾಗ ಅವರನ್ನು ಯಾವ ರಾಜ್ಯದ ಜನರೂ ಸಾಮಾನ್ಯವಾಗಿ ಹೊರಗಟ್ಟುವುದಿಲ್ಲ. ಅವರಿಗೆ ಬೇಕಾದ ಸಕಲ ಸವಲತ್ತುಗಳೂ ಸಹ ಆ ರಾಜ್ಯದ ಜನ ಒದಗಿಸುತ್ತಾರೆ. ಇದನ್ನೇ ಮಾನವೀಯತೆ ಎನ್ನುವುದು. ಮೊದಮೊದಲು ಹೊರಗಿನಿಂದ ಬಂದವರಿಗೆ ಅಲ್ಪ ಸ್ವಲ್ಪ ಕಷ್ಟವಾದರೂ ಸಹ ಕ್ರಮೇಣ ಅವರಿಗೆ ಎಲ್ಲವೂ ಸುಲಭವಾಗುತ್ತದೆ. ಹೊಸ ಭಾಷೆ, ಹೊಸ ಪರಿಸರ, ಹೊಸ ಆಚಾರ/ವಿಚಾರ, ಸಂಸ್ಕೃತಿ ಹೀಗೆ ಎಲ್ಲದಕ್ಕೂ ಹೊಂದಿಕೊಳ್ಳಬೇಕಾಗುತ್ತದೆ. ಹಾಲಿಗೆ ಸಕ್ಕರೆಯನ್ನು ಹಾಕಿದಾಗ ಹೇಗೆ ಅದು ಹೊಂದಿಕೊಳ್ಳೂತ್ತದೆಯೋ ಹಾಗೆ ಬೇರೆ ರಾಜ್ಯದ ಜನರು ತಮಗೆ ಆಶ್ರಯ ಕೊಟ್ಟ ಹೊಸ ನಾಡಿಗೆ ಹೊಂದಿಕೊಂಡಾಗ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ. ಆದರೆ ಇದನ್ನು ಅರ್ಥಮಾಡಿಕೊಳ್ಳದ ಕೆಲ ಮಂದಿ ತಮ್ಮ ರಾಜ್ಯ/ಭಾಷೆ/ಸಂಸ್ಕೃತಿ/ಆಚಾರ/ವಿಚಾರಗಳೇ ಎಲ್ಲಕ್ಕಿಂತ ಮಿಗಿಲು ಎಂಬ ಭಾವನೆಯಿಂದ ನಡೆದುಕೊಂಡರೆ ಆಗ ಸಮಸ್ಯೆಗಳು ಶುರುವಾಗುತ್ತವೆ. (ಮಿಕ್ಕಿದ್ದು ನಾಳೆಗೆ)

Saturday 29 September 2012

ಆರ್.ಕೆ ನಾರಾಯಣ್: ಭಾಗ-೨


ಕಳೆದ ಸಂಚಿಕೆಯಿಂದ

ಹಂ.ಪ.ನಾಗರಾಜ್ಯ ನವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಾಗ ಅವರನ್ನು ಸನ್ಮಾನಿಸಿ, ಅವರಿಗೆ ಮೈಸೂರಿನ ಪೇಟ ಹಾಕಿ ಸಂಭ್ರಮಿಸಿದ್ದನ್ನು ಅಂದು ಹೇಳಿ ಒಂದು ವಿಷಯವನ್ನು ಪ್ರಸ್ತಾಪಿಸಿದರು. ಆರ್.ಕೆ ಯವರಿಗೆ ನೀವು ಸಮಾರಂಭವನ್ನು ಉದ್ದೇಶಿಸಿ ಕನ್ನಡದಲ್ಲಿ ಮಾತನಾಡಬೇಕೆಂದು ಭಿನ್ನವಿಸಿಕೊಂಡಾಗ ಅವರು ಹೇಳಿದರಂತೆ “ನಾ ತಮಿಳ್ಲೆ ಪೇಸರೆ” ಅಂತ.  ಆಗ ಅಲ್ಲೇ ಇದ್ದ ಮಾಸ್ತಿಯವರು “ತಮಿಳು ಬೇಡ, ನೀವು ಆಂಗ್ಲ ಭಾಷೆಯಲ್ಲೇ ಮಾತಾಡಿ” ಅಂತ. ಒಬ್ಬ ವ್ಯಕ್ತಿ ಮೈಸೂರಿನಲ್ಲಿ ಸುಮಾರು ೬೦-೭೦ ವರ್ಷ ಇದ್ದು ಕನ್ನಡದಲ್ಲಿ ಮಾತನಾಡಲೂ ಸಹ ಇಚ್ಚೆ ಪಡದಿದ್ದಾಗ ಅವರನ್ನು ನಾವು ಕನ್ನಡಿಗರೆಂದು ಪರಿಗಣಿಸುವುದು ಎಷ್ಟು ಸರಿ? ಅವರಿಗಾಗಿ ಸ್ಮಾರಕ ನಿರ್ಮಿಸುವುದು ಎಷ್ಟು ಸರಿ? ಎಂಬ ಒಂದು ಸಣ್ಣ ಪ್ರಶ್ನೆ ಕೆಲವು ಸಾಹಿತಿಗಳದ್ದು. ಅದು ತಪ್ಪಾ?

ಆರ್.ಕೆ ಯವರಿಗೆ ಕನ್ನಡ ಬರುತ್ತಿರಲಿಲ್ಲವೇ? ಬಂದರೂ ಮಾತನಾಡುತ್ತಿರಲಿಲ್ಲವೇ? ಅಥವಾ ೬೦-೭೦ ವರ್ಷ ಮೈಸೂರಿನಲ್ಲಿ ನೆಲಸಿ, ಮಹಾರಾಜಾ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡಿಯೂ ಸಹ ಕನ್ನಡ ಬರುತ್ತಿರಲಿಲ್ಲ ಎಂದರೆ ಆಶ್ಚರ್ಯವಾಗುತ್ತದೆ.

ಮಾಸ್ತಿ, ಗೊರೂರು, ನಿಸಾರ್ ಅಹಮದ್, ಡಿ.ವಿ.ಜಿ, ಟಿ.ಪಿ.ಕೈಲಾಸಂ, ಗಿರೀಶ್ ಕಾರ್ನಾಡ್ ಹೀಗೆ ಅನೇಕ ಕವಿಗಳು ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಈ ಎಲ್ಲಾ ಕವಿಗಳ ಮಾತೃಭಾಷೆ ಬೇರೆಬೇರೆಯಾಗಿದ್ದರೂ, ಕನ್ನಡಕ್ಕೆ ಅವರ ಕೊಡುಗೆ ಅಸಮಾನ್ಯವಾದದ್ದು. ಇವರೆಲ್ಲರನ್ನೂ ನಾವು ಅಭಿನಂದಿಸುವುದಿಲ್ಲವೇ? ಇವರೆಲ್ಲರನ್ನೂ ನಾವು ಕನ್ನಡಿಗರೆಂದು ಪರಿಗಣಿಸಿಲ್ಲವೇ? ಕರ್ನಾಟಕದಲ್ಲಿ ಹುಟ್ಟಿದವರೂ ಮತ್ತು ಇಲ್ಲಿ ಸುಮಾರು ೧೦ ವರ್ಷ ಬೇರೆ ರಾಜ್ಯದಿಂದ ಬಂದು ನೆಲೆಸಿದವರು ಕನ್ನಡಿಗರು ನಿಜ. ಆದರೆ ಯಾವ ಭಾಷೆಯವರಾದರೂ ಮತ್ತು ಅವರು ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಸರಿಯೆ, ಇಲ್ಲಿ ನೆಲೆಸಿದ ಮೇಲೆ ಇಲ್ಲಿಯ ಭಾಷೆ/ಸಂಸ್ಕೃತಿಯ ಬಗ್ಗೆ ಕೇವಲವಾಗಿ ನಡೆದುಕೊಂಡರೆ ಅವರನ್ನು ಕನ್ನಡಿಗರೆಂದು ಒಪ್ಪಿಕೊಳ್ಳಲು ಮನಸ್ಸಿಗೆ ಬಹಳ ಹಿಂಸೆ ಎಂದೆನಿಸುತ್ತದೆ. (ಮಿಕ್ಕಿದ್ದು ನಾಳೆಗೆ)

Friday 28 September 2012

ಆರ್.ಕೆ ನಾರಾಯಣ್: ಭಾಗ-೧


ಆರ್.ಕೆ.ನಾರಾಯಣ್ ಅವರ ಮನೆಯನ್ನು ಸ್ಮಾರಕವನ್ನಾಗಿ ನಿರ್ಮಿಸಲು ಸರ್ಕಾರ ಹೊರಟಿದೆ. ಇದರ ಬಗ್ಗೆ ಸಾರಸ್ವತ ಲೋಕದಲ್ಲಿ, ಸಾರ್ವಜನಿಕರಿಂದ ಅನೇಕ ರೀತಿಯ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಆರ್.ಕೆ ನಾರಾಯಣ್ ಅವರು ಸುಮಾರು ೬೦-೭೦ ವರ್ಷಗಳು ಮೈಸೂರಿನಲ್ಲಿ ನೆಲೆಸಿದ್ದವರು. ಸಾಹಿತಿಗಳು ಯಾವ ಭಾಷೆಯಲ್ಲಾದರೂ ಬರೆಯಬಹುದು, ಅದು ಅವರ ಹಕ್ಕು, ಅದನ್ನು ಯಾರೂ ಕೇಳುವುದಕ್ಕಾಗುವುದಿಲ್ಲ. ನಮ್ಮ ಸಂವಿಧಾನ ಯಾರು ೧೦ ವರ್ಷಗಳು ಒಂದು ರಾಜ್ಯ ಅಥವಾ ದೇಶದಲ್ಲಿ ವಾಸವಾಗಿದ್ದರೆ ಅವರನ್ನು ಆ ರಾಜ್ಯದ/ದೇಶದ ಪ್ರಜೆಗಳೆಂದು ಮಾನ್ಯ ಮಾಡುತ್ತದೆ. ಹಾಗಾಗಿ ಅವರು ಕನ್ನಡಿಗರು, ಅವರ ಸ್ಮಾರಕವನ್ನು ನಿರ್ಮಿಸುವುದು ತಪ್ಪೇನಿಲ್ಲ. ಸಾಹಿತಿಗಳನ್ನು, ಕಲಾವಿದರನ್ನು ಒಂದು ಭಾಷೆಗೆ ಸೀಮಿತಗೊಳಿಸುವುದು ಏಷ್ಟು ಸರಿ? ಎಂಬ ಅಭಿಪ್ರಾಯವನ್ನು ಕೆಲವು ಸಾಹಿತಿಗಳು/ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ. ಖಂಡಿತಾ ಅದರಲ್ಲಿ ಯಾವುದೇ ತಪ್ಪಿಲ್ಲ. ಅವರು ಹೇಳುತ್ತಿರುವುದು ೧೦೦% ಸತ್ಯ. ಇದರ ಬಗ್ಗೆ ದಿನಪತ್ರಿಕೆ/ಟಿ.ವಿಯಲ್ಲಿ ಚರ್ಚೆಗಳಾಗುತ್ತಿದೆ.

ಇತ್ತೀಚೆಗೆ ಟಿ.ವಿ.೯ ನಲ್ಲಿ ಸಾಹಿತಿಗಳಾದ ಹಂ.ಪ.ನಾಗರಾಜಯ್ಯ, ಸಾ.ಶಿ.ಮರುಳಯ್ಯ, ಚಂದ್ರಶೇಕರ ಪಾಟೀಲ್ ಮತ್ತು ಔಟ್ ಲುಕ್ ಸಂಪಾದಕರು ಭಾವಹಿಸಿದ್ದ ಒಂದು ಕಾರ್ಯಕ್ರಮ ಬಹಳ ಚೆನ್ನಾಗಿತ್ತು. ಹೆಚ್ಚಿನ ಸಾಹಿತಿಗಳು ಸ್ಮಾರಕಕ್ಕೆ ವಿರೋಧಿಸುತ್ತಿಲ್ಲ. ಆದರೆ ಅವರ ಪ್ರಶ್ನೆ ಬಹಳ ಗಂಭೀರವಾದುದು. ಆರ್.ಕೆ ನಾರಾಯಣ್ ಅವರು ತಮ್ಮ ಎಲ್ಲಾ ಬರಹಗಳನ್ನು ಆಂಗ್ಲಭಾಷೆಯಲ್ಲಿ ಬರೆದು ಜಗತ್ಪ್ರಸಿದ್ದರಾದವರು. ಅವರು ಕನ್ನಡಿಗರು, ನಮ್ಮಲ್ಲಿ ನೆಲೆಸಿದ್ದರು ಎಂಬುದು ನಮಗೆ ಅತ್ಯಂತ ಹೆಮ್ಮೆ ಮತ್ತು ಗೌರವದ ವಿಷಯ. ಶಂಕರ್ ನಾಗ್ ಅವರು ಮಾಲ್ಗುಡಿ ಡೇಸ್ ಕಾದಂಬರಿಯನ್ನು ಟಿ.ವಿಯಲ್ಲಿ ಧಾರಾವಾಹಿಯಾಗಿ ತಂದಮೇಲೆ ಅವರು ಕನ್ನಡನಾಡಿನ ಸರ್ವರಿಗೂ ಪರಿಚಿತರಾದರೆಂದರೆ ಅದು ಅತಿಶಯೋಕ್ತಿ ಏನಲ್ಲ. ಅವರು ದೊಡ್ಡ ಸಾಹಿತಿಗಳಾಗಿದ್ದರೂ ಸಹ ಅವರು ಸಾರಸ್ವತ ಲೋಕದಲ್ಲಿ ಪ್ರಸಿದ್ದರಾಗಿದ್ದರೂ ಸಹ ಸಾಮಾನ್ಯ ಕನ್ನಡಿಗರಿಗೆ ಅವರು ಅಷ್ಟಾಗಿ ಪರಿಚಿತರಾದವರಲ್ಲ. ಅದಕ್ಕೆ ಅನೇಕ ಕಾರಣಗಳಿರಬಹುದು. ಅವರು ಕನ್ನಡ ಸಾಹಿತಿಗಳೊಂದಿಗೆ ಅಷ್ಟಾಗಿ ಬೆರೆಯುತ್ತಿರಲಿಲ್ಲ, ಸಭೆ, ಸಮಾರಂಭಗಳಲ್ಲಿ ಭಾಗವಹಿಸುವುದು ಅಪರೂಪ, ಅವರದು ಬಹಳ ಸಂಕೋಚ ಸ್ವಭಾವ ಹೀಗೆ ಅನೇಕರು ಹೇಳುತ್ತಾರೆ. (ಮಿಕ್ಕಿದ್ದು ನಾಳೆಗೆ)

Tuesday 25 September 2012

ಹಿಂದಿಯ ಬಲವಂತದ ಮಾಘಸ್ನಾನ: ಭಾಗ-೨


ಕಳೆದ ಸಂಚಿಕೆಯಿಂದ

ಎಲ್ಲರಿಗೂ ತಿಳಿದಿರುವಂತೆ ಎಲ್ಲಾ ಕೇಂದ್ರ ಸರ್ಕಾರದ ಕಛೇರಿಗಳಲ್ಲಿ, ಅಂಚೆ ಕಛೇರಿ, ಬ್ಯಾಂಕ್, ಜೀವ ವಿಮಾ ಕಛೇರಿಗಳು, ಪಾಸ್ ಪೋರ್ಟ್ ಮುಂತಾದ ಕಛೇರಿಗಳಲ್ಲಿ ಹಿಂದಿ ಮತ್ತು ಆಂಗ್ಲ ಭಾಷೆಗೆ ಮಹತ್ವವನ್ನು ಕೊಟ್ಟು ಕನ್ನಡ ಕಾಣಸಿಗುವುದೇ ಇಲ್ಲ. ಇನ್ನು ಅಲ್ಲಿಗೆ ಕಾರ್ಯನಿಮಿತ್ತ ಭೇಟಿ ಮಾಡುವ ಸಾರ್ವಜನಿಕರು ಇದನ್ನು ಯಾರಲ್ಲೂ ಪ್ರಶ್ನಿಸದೆ ಸಾಮಾನ್ಯವಾಗಿ ಆಂಗ್ಲ ಭಾಷೆಯಲ್ಲಿ ಕೊಟ್ಟಿರುವ ಅರ್ಜಿಯನ್ನು ತುಂಬಿಸಿ, ಆಂಗ್ಲಭಾಷೆಯಲ್ಲಿ ಅಲ್ಲಿರುವ ಸಿಬ್ಬಂದಿಯೊಂದಿಗೆ ವ್ಯವಹಿರಿಸಿ ತಮ್ಮ ಕಾರ್ಯವನ್ನು ಮುಗಿಸಿಕೊಂಡು ಹೊರಟುಬಂದುಬಿಡುತ್ತಾರೆ.

ಇದರಲ್ಲಿ ನಮ್ಮ ತಪ್ಪೂ ಬಹಳ ಇದೆ. ರೈಲ್ವೇ ಇಲಾಖೆ ಆಂಗ್ಲ, ಹಿಂದಿಯ ಜೊತೆಗೆ ಕನ್ನಡದಲ್ಲಿ ಅರ್ಜಿಯನ್ನು ಮುದ್ರಿಸುತ್ತದೆ. ಆದರೆ ಅದನ್ನು ಬಳಸುವವರು ಆಂಗ್ಲ ಭಾಷೆಯನ್ನೇ ಹೆಚ್ಚಾಗಿ ಉಪಯೋಗಿಸುತ್ತಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್, ಕರ್ನಾಟಕ ಬ್ಯಾಂಕ್, ಕೆನರಾ ಬ್ಯಾಂಕ್ ಮುಂತಾದವುಗಳಲ್ಲಿ ಕನ್ನಡದಲ್ಲಿ ಚಲನ್ ಸಹ ಇದೆ. ಆದರೆ ಅದನ್ನು ತುಂಬಿಸುವವರು ಹೆಚ್ಚಾಗಿ ಆಂಗ್ಲ ಭಾಷೆಯನ್ನು ಬಳಸುತ್ತಾರೆ. ಚಲನ್, ಚಕ್, ಅರ್ಜಿ ನಮೂನೆ ಮುಂತಾದುವಗಳನ್ನು ಕನ್ನಡದಲ್ಲಿ ಮುದ್ರಿಸುವುದು ಸುಲಭ, ಆದರೆ ಅದನ್ನು ಬಳಸುವವರು ಕನ್ನಡದಲ್ಲಿ ಬರೆದರೆ ಮಾತ್ರ ಅದಕ್ಕೆ ನಿಜವಾದ ಅರ್ಥ ಬರುವುದು. ಅದೇ ರೀತಿ ಎಲ್ಲಾ ಬ್ಯಾಂಕ್ ಎ.ಟಿ.ಎಂ ಗಳಲ್ಲಿ ಕನ್ನಡವೂ ಇದೆ. ಆದರೆ ಅದನ್ನು ಬಳಸುವವರು ಹೆಚ್ಚಾಗಿ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತಾರೆ. ಕನ್ನಡ ಎಲ್ಲಾ ಕಡೆ ಕೇವಲ ನೆಪ ಮಾತ್ರಕ್ಕೆ ಮಾತ್ರ ಇರುತ್ತದೆ. ಹೀಗಾದಾಗ ಮುಂದಿನ ಭಾರಿ ಚಲನ್, ಚಕ್ ಅರ್ಜಿ ಮುಂತಾದುವುಗಳನ್ನು ಮುದ್ರಿಸುವಾಗ ಆಡಳಿತ ನಡೆಸುವ ಮಂದಿ ಆಂಗ್ಲ ಭಾಷೆಯಲ್ಲೇ ಮುದ್ರಿಸಲು ಅಪೇಕ್ಷಿಸುತ್ತಾರೆ.  ಹೀಗಾಗಿ, ಕ್ರಮೇಣ ಕನ್ನಡ ಎಲ್ಲಾಕಡೆ ಕಾಣದಂತಾಗುತ್ತದೆ.


ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕನ್ನಡವನ್ನು ಬಳಸಲೇಬೇಕೆಂಬ ನಿಯಮ ಮೊದಲಿನಿಂದಲೂ ಇದೆ. ಆದರೆ ಅದನ್ನು ಯಾರು ಪಾಲಿಸುತ್ತಿಲ್ಲ ಅಷ್ಟೇ. ಅಲ್ಲಿ ಕೆಲಸ ಮಾಡುವ ಕನ್ನಡಿಗರೂ ಸಹ ಅಲ್ಲಿ ಕನ್ನಡವನ್ನು ಆಡಳಿತದ ಒಂದು ಭಾಷೆಯನ್ನಾಗಿ ಮಾಡಲು ಪ್ರಯತ್ನಿಸಿಲ್ಲದಿರುವುದು ಬಹಳ ಬೇಸರದ ಸಂಗತಿ. ಇಂತಹ ವಿಷಯಗಳಲ್ಲಿ ರಾಜ್ಯ ಸರ್ಕಾರದ ಪಾತ್ರ ಬಹಳಷ್ಟಿರುತ್ತದೆ. ಆದರೆ ನಮ್ಮ ದುದೈವ ನಮ್ಮ ರಾಜಕೀಯ ಪಕ್ಷಗಳಿಗೆ ಜಾಣ ಕುರುಡು ಮತ್ತು ಕಿವುಡು.


ಭಾರತವು ಅನೇಕ ಭಾಷೆ, ಸಂಸ್ಕೃತಿ, ಅಚಾರ ವಿಚಾರಗಳ ಜನ್ಮ ಸ್ಥಾನವಾಗಿದ್ದರೂ ಹಿಂದಿಯೊಂದೇ ನಮ್ಮ ರಾಷ್ಟ್ರ ಭಾಷೆಯಂಬಂತೆ ವಿಜೃಂಭಿಸಲು ಕೆಂದ್ರ ಸರ್ಕಾರವು ಹೊರಟಿರುವುದು ಅಕ್ಷಮ್ಯ ಅಪರಾಧ. ಕೇವಲ ಅಭಿಯಾನದಲ್ಲಿ ಸಹಿ ಮಾಡಿದರೆ ಮಾತ್ರ ನಮ್ಮ ಕರ್ತವ್ಯ ಕೊನೆಯಾಗುವುದಿಲ್ಲ. ಕೇಂದ್ರ ಸರ್ಕಾರದ ಕಛೇರಿಗಳಲ್ಲಿ ಕನ್ನಡದ ಅರ್ಜಿ ಮುಂತಾದವು ಕನ್ನಡದಲ್ಲಿ ಬಂದರೆ ಮಾತ್ರ ಪ್ರಯೋಜನವಾಗುವುದಿಲ್ಲ. ಕನ್ನಡ ಓದಲು ಬರೆಯಲು ಬರುವವರು ಕೇಂದ್ರ ಸರ್ಕಾರದ ಕಛೇರಿಗಳಲ್ಲಿ /ಬ್ಯಾಂಕ್ ಗಳಲ್ಲಿ ಅರ್ಜಿಯನ್ನು ತುಂಬುವಾಗ ಮತ್ತು ಇನ್ನಿತರ ಕಾರ್ಯಗಳಿಗೆ ಭೇಟಿ ಕೊಟ್ಟಾಗ ತಪ್ಪಿಲ್ಲದೇ ಕನ್ನಡದಲ್ಲಿ ಅರ್ಜಿಯನ್ನು ತುಂಬುವುದು ಮತ್ತು ಅಲ್ಲಿ ಆಂಗ್ಲ ಮತ್ತು ಹಿಂದಿ ಭಾಷೆಯನ್ನು ಬಂದರೂ ಅದನ್ನು ಬಳಸದೆ ಕೇವಲ ಕನ್ನಡವನ್ನೇ ಬಳಸಿದರೆ ಮಾತ್ರ, ಖಂಡಿತವಾಗಿಯೂ ಕನ್ನಡ ಎಲ್ಲಾ ಕೇಂದ್ರ ಸರ್ಕಾರದ ಕಛೇರಿಗಳಲ್ಲಿ ವಿಜೃಂಭಿಸಬಹುದು. (ಮುಗಿಯಿತು)