Thursday, 26 July 2012

ಅಚ್ಚ ಕನ್ನಡದ ಗ್ರಾಮೀಣ ಪ್ರತಿಭೆ:


ಕರ್ನಾಟಕ ಅನೇಕ ಕ್ರೀಡಾಪಟುಗಳನ್ನು ದೇಶಕ್ಕೆ ನೀಡಿದೆ, ಕ್ರಿಕೆಟ್, ಕಬ್ಬಡ್ಡಿ, ಹಾಕಿ, ಈಜು, ಅಥ್ಲೆಟಿಕ್ಸ್, ಸ್ನೂಕರ್, ಬಿಲಿಯರ್ಡ್ಸ್, ಫುಟ್ಬಾಲ್ ಹೀಗೆ ಹತ್ತು ಹಲವು ಕ್ರೀಡೆಗಳಲ್ಲಿ ನಮ್ಮ ರಾಜ್ಯದ ಕ್ರೀಡಾಪಟುಗಳು ದೇಶವನ್ನು ಪ್ರತಿನಿಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಗಾಲ್ಫ್ ಎಂಬ ಅತಿ ಶ್ರೀಮಂತರ ಕ್ರೀಡೆಡೆಯಲ್ಲಿ ನಮ್ಮ ಕನ್ನಡದ ಪ್ರತಿಭೆಯೊಂದು ಸದ್ದಿಲ್ಲದೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಹೊರಟಿದೆ. ಇವರನ್ನು ಈಗಾಗಲೇ ಭಾರತದ ಟೈಗರ್ ವುಡ್ಸ್ ಎಂದು ಕರೆಯುತ್ತಿದ್ದಾರೆ. ಆದರೆ ನಾವು ಅವರನ್ನು ಕನ್ನಡದ ಟೈಗರ್ ಎಂದು ಕರೆಯೋಣ. ಬಡತನದಲ್ಲಿ ಹುಟ್ಟಿ ಗಾಲ್ಫ್ ಅಂಗಳದಲ್ಲಿ ಯಾರೋ ಶ್ರೀಮಂತ ಹೊಡದ ಚೆಂಡನ್ನು ಹೆಕ್ಕಿ ತಂದು ಕೊಡುವು ಕೆಲಸವನ್ನು ಮಾಡುತ್ತಿದ್ದ "ಚಿಕ್ಕ ರಂಗಪ್ಪ"ನೇ ಇಂದಿನ ಭಾರತದ ಟೈಗರ್ ವುಡ್ಸ್. ಇವರು ತಾವು ಮಾಡುತ್ತಿದ್ದ ಕೇಲಸದ ಜೊತೆಜೊತೆಯಾಗಿ ಬೇರೆಯವರು ಆಡುತ್ತಿದ್ದ ಆಟವನ್ನು ನೋಡಿ ಬೇರೆಯವರು ಬಳಸುತ್ತಿದ್ದ ಚೆಂಡು/ಸ್ಟಿಕ್  ಅನ್ನೇ ಬಳಸಿ ಅವರು ಈ ಮಟ್ಟಕ್ಕೆ ಏರಿದ್ದಾರೆ ಎಂದರೆ ಅವರ ಶ್ರದ್ದೆ, ಗುರಿ, ತನ್ಮಯತೆಗೆ ಬೆಲೆ ಕಟ್ಟುವುದಕ್ಕೆ ಆಗುವುದಿಲ್ಲ. ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿ, ಈಗ ಆಂಗ್ಲಭಾಷೆಯನ್ನು ಕಲಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶಕ್ಕೆ ಕೀರ್ತಿ, ಗೌರವವನ್ನು ತರಲು ಹೊರಟಿರುವ ನಮ್ಮ ಟೈಗರ್ ಗೆ ಅಭಿನಂದನೆಗಳನ್ನು ತಿಳಿಸಿ ಅವರನ್ನು ಆಶೀರ್ವದಿಸಿ. ಅವರ ಗುರುಗಳಾದ "ವಿಜಯ್ ದಿವೇಜಾ" ಅವರು ಈ ಬಾಲಕನಲ್ಲಿದ್ದ ಪ್ರತಿಭೆಯನ್ನು ಗುರುತಿಸಿ ಅವರಿಗೆ ಆಟವನ್ನು ಸರಿಯಾಗಿ ಕಲಿಸಿ ಬೆಳೆಸಿದ್ದಾರೆ.

Saturday, 21 July 2012

" ವಾಟ್ ಎನ್ ಐಡಿಯಾ ಸರ್ಜಿ "!!!!!


ಸರ್ಕಾರಿ ಕಚೇರಿಗಳಲ್ಲಿ ಯಾವ ಕೆಲಸವಾಗಬೇಕಾದರೂ ಲಂಚವಿಲ್ಲದೆ ಆಗುವುದಿಲ್ಲ. ಇದು ಎಲ್ಲರ ಅನುಭವವೂ ಹೌದು.  ಪಾಟ್ನಾದಲ್ಲಿ ಒಬ್ಬ ಬಡ ರೈತನಿಗೆ ಆ ಊರಿನೆ ಭೂ ಮಾಲೀಕರಿಂದ ಜೀವ ಬೆದರಿಕೆ ಇತ್ತು.  ತನ್ನ ಜೀವಕ್ಕೆ ರಕ್ಷಣೆ ಕೊಡಿ ಎಂದು ಪೋಲೀಸರನ್ನು ಕೇಳಿದಾಗ,  ಪೋಲೀಸರು ಅದಕ್ಕಾಗಿ ೧,೦೦೦ ರೊಪಾಯಿಗಳನ್ನು ಲಂಚವಾಗಿ ಅವನಿಂದ ಕೇಳಿದರು.  ಮೊದಲೇ ಬಡ ರೈತ. ಅವನ ಹತ್ತಿರ ಬಿಡುಕಾಸೂ ಇಲ್ಲ. ಆದರೆ ಅವನು ಸುಮ್ಮನಾಗಲಿಲ್ಲ. ಇದರ ಬಗ್ಗೆ ಯೋಚಿಸಿದಾಗ ಅವನಿಗೊಂದು ಆಲೋಚನೆ ಹೊಳೆಯಿತು.  ಅವನು ಬಿಕ್ಷೆ ಎತ್ತಿ ೧,೦೦೦ ರೊಪಾಯಿಗಳನ್ನು ಜಮಾ ಮಾಡಿ ೧೦೦ ರೊಪಾಯಿಯ ೧೦ ಪೋಸ್ಟಲ್ ಆರ್ಡರ್ ಗಳನ್ನು ಕೊಂಡು ಕಾನೂನಿನಲ್ಲಿ ಅವಕಾಶವಿದ್ದರೆ ನಾನು ಬಿಕ್ಷೆ ಎತ್ತಿದ ಈ ಹಣವನ್ನು ಆ ಪೋಲೀಸ್ ಅಧಿಕಾರಿಗೆ ಕಳುಹಿಸಿ" ಎಂದು ಆ ರಾಜ್ಯದ ಮುಖ್ಯಮಂತ್ರಿಗೆ ಕಳುಹಿಸಿದ್ದಾನೆ. ಆಮೇಲೇನಾಯಿತೋ ಗೊತ್ತಿಲ್ಲ. ನಾನು ಈ ಸುದ್ದಿಯನ್ನು ಮೊನ್ನೆ ಒಂದು ಪತ್ರಿಕೆಯಲ್ಲಿ ಓದಿದೆ. ಇದಾದ ಮೇಲೆ ಮತ್ತೊಬ್ಬ ತಮಿಳುನಾಡಿನ ವ್ಯಕ್ತಿ ತನ್ನ ಮಗನ ಜನ್ಮ ದಿನದ ಪ್ರಮಾಣ ಪತ್ರವನ್ನು ಪಡೆದುಕೊಳ್ಳಲು ಹೊಡಾಗ ಅವನಿಗೆ ೧೦೦ ರೊಪಾಯಿ ಲಂಚವನ್ನು ಕೇಳಲಾಯಿತು. ಅವನು ಲಂಚದ ಹಣವನ್ನು ಡಿ.ಡಿ.ಮಾಡಿ  "ಇದು ಲಂಚದ ಹಣ" ಎಂದು ಕಳುಹಿಸಿದನಂತೆ. ಆಮೇಲೆ ಪಾಲಿಕೆ ಅಧಿಕಾರಿಗಳು ಅವನಿಗೆ ಜನನ ಪ್ರಮಾಣ ಪತ್ರವನ್ನು ಅವನ ಮನೆಬಾಗಿಲಿಗೆ ಕಳುಹಿಸಿಕೊಟ್ಟರಂತೆ. ಇದೂಂದು ಹೊಸ ರೀತಿಯ ಚಳುವಳಿ ಎಂದೆನಿಸಿತು. ಇದನ್ನು ಎಲ್ಲಾರೂ ಅನುಸರಿಸಬಹುದೇನೋ?  ಅವರ ಕಲ್ಪನೆ ಚೆನ್ನಾಗಿದೆ.  " ವಾಟ್ ಎನ್ ಐಡಿಯಾ ಸರ್ಜಿ "!!!!!

Wednesday, 18 July 2012

"ಸೈನಿಕರ ಪಾಡು-ಅಯ್ಯೋ ಪಾಪ"


ದೇಶ ಸೇವೆ ಮಾಡಬೇಕಾದ  ಸುಮಾರು ೩೦,೦೦೦ ಸಾವಿರ ಸೈನಿಕರು, ದೇಶ ಸೇವೆಯನ್ನು ಮಾಡದೆ ಸೇನಾಧಿಕಾರಿಗಳ ಮನೆಯಲ್ಲಿ ಅವರ ಮನೆಕೆಲಸದಲ್ಲಿ ತೊಡಗಿಕೊಂಡಿರುವುದನ್ನು ಪತ್ರಿಕೆಯಲ್ಲಿ ಓದಿ ಬಹಳ ಬೇಸರವಾಯಿತು. ನಮ್ಮ ಸೈನಿಕರಿಂದ, ರೀತಿ ಮನೆ ಕೆಲಸ ಮಾಡಿಸುವುದು ಎಷ್ಟು ಸರಿ? ಯೋಧರ ಆತ್ಮ ಘನತೆಗೆ ಬೆಲೆ ಇಲ್ಲವೇ? ವ್ಯವಸ್ಥೆಗೆ "ಮನೆ ಮಗ" ಎಂಬ ಹೆಸರಿರುವುದು ನಮ್ಮ ಪರಿಸ್ಥಿತಿಗೆ ಹಿಡಿದ ವ್ಯಂಗವೂ ಸಹ. ಈಗ ಇಂಥಹ ಪದ್ದತಿಗೆ ರಕ್ಷಣಾ ಸಚಿವ .ಕೆ.ಆಂಟನಿ, ರಕ್ಷಣಾ ಸಚಿವಾಲಯ ಮತ್ತು ಸಂಸತ್ ಸ್ಥಾಯಿ ಸಮಿತಿ ಅಂತ್ಯವಾಡಲು ಹೊರಟಿರುವುದು ಒಳ್ಳೆಯ ಬೆಳವಣಿಗೆ. ಸಧ್ಯ, ಈಗಲಾದರೂ ಬುದ್ದಿಬಂತಲ್ಲಾ ಸಂಬಂದಪಟ್ಟವರಿಗೆ. ಇದು ಪೋಲೀಸ್ ವ್ಯವಸ್ಥೆಯಲ್ಲೂ ಸಹ ಇದೆ.  ಇದಕ್ಕೆ ಕೂಡ ಮಂಗಳ ಹಾಡಬೇಕು. ನೋಡಿ ಇಂತಹ ಕೆಲಸಗಳನ್ನು ಮಾಡುವ ಸೈನಿಕರಾಗಲೀ, ಪೋಲೀಸ್ ನವರಾಗಲೀ ಯಾರ ಹತ್ತಿರವೂ ದೂರು ಕೊಡುವ ಹಾಗೂ ಇಲ್ಲ. ಕೊಟ್ಟರೆ ಕೆಲಸ ಹೋಗುವ ಭಯ. ಕೊಡದೆ ಇದ್ದರೆ ಅಧಿಕಾರಿಗಳ ಮನೆ ಕೆಲಸವನ್ನು ಮಾಡುವ ಅನಿವಾರ್ಯತೆ.

Saturday, 14 July 2012

ಕೊಳವೆಬಾವಿಯಲ್ಲಿ ಮಕ್ಕಳು:

ನಮ್ಮ ರಾಜ್ಯದ ರಾಯಚೂರು ಜಿಲ್ಲೆಯ ನೀರಮಾನ್ವಿಯ ಸಂದೀಪ, ಆಂಧ್ರ ಪ್ರದೇಶದ ವಾರಂಗಲ್ ನ ದರಾವತ್ ಮಹೇಶ್, ಗುಜರಾತ್ ನ ಬಕುಲ್ ಇವರುಗಳೆಲ್ಲಾ ಯಾರು ಗೊತ್ತಾ ನಿಮಗೆ? ಇವರು ನಮ್ಮ ದೇಶದ ಅತಿ ದೊಡ್ಡ ಕೋಟ್ಯಾಧಿಪತಿಗಳು ಅಥವಾ ದೊಡ್ಡ ಬಂಡವಾಳ ಹೂಡಿಕೆದಾರರು, ವ್ಯಾಪಾರಸ್ಥರು, ಹೊಸ ಸೂಪರ್ ಸ್ಟಾರ್ ಗಳು ಅಂತ ಹೀಗೆ ಏನೇನೋ ಕಲ್ಪಿಸಿಕೊಳ್ಳಬೇಡಿ.  ಇವರುಗಳೆಲ್ಲಾ ನಮ್ಮ ಲಿಟಲ್ ಸ್ಟಾರ್ ಗಳು. ಆದರೆ ಇವರ ದೌರ್ಭಾಗ್ಯ. ಬಾಲ್ಯ ಅಂದರೆ ಏನು? ಎಂದು ತಿಳಿಯುವ ಮೊದಲೇ ನಮ್ಮನ್ನು ಅಗಲಿದ ಚಿಣ್ಣರು. ಇವರು ನಮ್ಮ ದೇಶದ ಅತಿ ನತದೃಷ್ಟ ೨/೩/೪/೬ ವರ್ಷದ ಮಕ್ಕಳು. ಈಗ ಇವರು ಯಾರು ನಮಗೆ ನೆನಪಿಲ್ಲ. ಹೊಸದಾಗಿ ಹರಿಯಾಣ ರಾಜ್ಯದ ಗುರುಗಾಂವ್ ನ ಬಾಲಕ ಮಾಹಿ ಮಾತ್ರ ಗೊತ್ತು. ಇನ್ನು ಬೇರೆ ಮಕ್ಕಳು ಇಂತಹ ಕೊಳವೆ ಬಾವಿಯಲ್ಲಿ ಬಿದ್ದು ಸಾಯುವವರೆಗೂ ನಮಗೆ ಈ ಬಾಲಕನ  ಹೆಸರು ಜ್ಞಾಪಕಕ್ಕೆ ಇರುತ್ತದೆ. ಆಮೇಲೆ ಇವನ ಹೆಸರು ನಮಗೆ ಜ್ಞಾಪಕಕ್ಕೆ ಬರುವುದೇ ಇಲ್ಲ. ಇದು ನಮ್ಮ ಒಬ್ಬರ ತಪ್ಪಲ್ಲ. ನಮ್ಮ ದೇಶ ಇರುವುದೇ ಹೀಗೆ ಅಂತ ಒಮ್ಮೊಮ್ಮೆ ಅನ್ನಿಸುತ್ತದೆ. ಎಲ್ಲರೂ ಇದರ ಬಗ್ಗೆ ಮಾತನಾಡುತ್ತಾರೆ, ಸರ್ಕಾರವೂ ಇದರ ಬಗ್ಗೆ ಕಾನೂನು ಹೊರಡಿಸಿದೆ. ಕೊಳವೆ ಬಾವಿಯಲ್ಲಿ ನೀರು ಸಿಗದಿದ್ದರೆ ಅದನ್ನು ತಕ್ಷಣವೇ ಮುಚ್ಚಬೇಕೆಂದು ಕಾನೂನು ಇದು. ಹಾಗೆ ಮಾಡದಿದ್ದರೆ ನ್ಯಾಯಲಯ ನಿಂದನೆಯಾಗುತ್ತದೆ. ಆದರೆ ಏನೂ ಆಗಿಲ್ಲ. ಇದೇ ನಮ್ಮ ದುರದೃಷ್ಟ. ಇದಕ್ಕೆ ಯಾರು ಕಾರಣರು ಎಂದರೆ, ಒಂದು ರೀತಿಯಲ್ಲಿ ನಾವೆಲ್ಲರೂ ಕೂಡ.

ಹೀಗೆ ಕೊಳವೆ ಬಾವಿಯಲ್ಲಿ ಬಿದ್ದವರನ್ನು ಎತ್ತುವಾಗ ಸಾವಿರಾರು ಜನ ಅದನ್ನು ನೋಡಲು ೩-೪ ದಿನ ನೆರೆದಿರುತ್ತಾರೆ. ಆಮೇಲೆ ಕಾರ್ಯಾಚರಣೆ ಮುಗಿದ ಮೇಲೆ ಮನಗೆ ಹೋಗಿ ಊಟ ಮಾಡಿ ಬೆಚ್ಚಗೆ ಮಲಗಿ ಬಿಡುತ್ತಾರೆ. ದೇಶದ ಅಷ್ಟೂ ಭಾಷೆಯ ಸುದ್ದಿವಾಹಿನಿಗಳು ಅದನ್ನು ಎಡೆಬಿಡದೆ ೨೪ ಗಂಟೆಗಳೂ ಪ್ರಸಾರ ಮಾಡುತ್ತವೆ ಮತ್ತು ಕಾರ್ಯಾಚರಣೆಯು ಮುಗಿದ ಮೇಲೆ ಅವರೂ ಸುಮ್ಮನಾಗಿಬಿಡುತ್ತಾರೆ. ಅವರಿಗೆ ಟಿ.ಆರ್.ಪಿ. ಬಂದರೆ ಸಾಕು. ಈ ತರಹದ ಮುಚ್ಚಿಲ್ಲದ ಕೊಳವೆ ಬಾವಿಗಳು ನಮ್ಮ ದೇಶದಲ್ಲಿ ಇನ್ನೂ ಬಹಳ ಕಡೆ ಇದೆ. ಮುಂಜಾಗ್ರತೆ ವಹಿಸಿ ಅದನ್ನು ಮುಚ್ಚಲು ಯಾವ ಸಾವರ್ಜನಿಕರಾಗಲೀ, ಸುದ್ದಿವಾಹಿನಿಗಳಾಗಲೀ, ಆ ಊರಿನ ಜನರಾಗಲೀ, ಜನ ಪ್ರತಿನಿದಿಗಳಾಗಲೀ, ಯಾರೆಂದರೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅದೇ ಸಾವಿರಾರು ಜನ ಈ ಮೊದಲೇ ಒಬ್ಬೊಬ್ಬರು ಮೂರು ಹಿಡಿ ಮಣ್ಣನ್ನು ಆ ಕೊಳವೆ ಬಾವಿಯಲ್ಲಿ ಹಾಕಿ ಅದನ್ನು ಮುಚ್ಚಿಬಿಡಬಹುದಿತ್ತು. ಆದರೆ ಅದರ ಬಗ್ಗೆ ಯಾರೂ ಯೋಚನೆ ಸಹ ಮಾಡುವುದಿಲ್ಲ.  ಇದು ನಮ್ಮ ದೇಶದ ಅತಿ ದೊಡ್ಡ ದುರಂತ.

ಸುಮಾರು ೬ ವರ್ಷದ ಹಿಂದೆ ಕುರುಕ್ಷೇತ್ರದ ಪ್ರಿನ್ಸ್ ಎಂಬ ಬಾಲಕ ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಏಕೈಕ ಬಾಲಕ ನಮ್ಮ ದೇಶದಲ್ಲಿ. ಅವನ ಅದೃಷ್ಟ ಅವನನ್ನು ಕಾಪಾಡಿರಬೇಕು. ಆದರೆ ಮೇಲ್ಕಂಡ ಮಕ್ಕಳನ್ನು ನೆನಸಿಕೊಂಡರೆ ಕರುಳು ಚುರುಕ್ ಎನ್ನುತ್ತದೆ.

Thursday, 12 July 2012

ಜಾತ್ಯಾತೀತ:

ನಾವ್ಯಾರೂ ಹುಟ್ಟುವಾಗ ಇಂತಹದ್ದೇ ಜಾತಿ/ಧರ್ಮ/ರಾಜ್ಯ/ದೇಶ ದಲ್ಲೇ ಹುಟ್ಟಬೇಕೆಂದು ಬಯಸಿ ಈ ಭೂಮಿಗೆ ಬರಲಿಲ್ಲ.  ಆದರೆ ನಾವು ದೊಡ್ಡವರಾಗಿ ಕೆಲಸ/ಮದುವೆ ವಯಸ್ಸಿಗೆ ಬಂದಾಗ ದಿಡೀರ್ ಆಗಿ ಈ ಜಾತಿ/ಧರ್ಮ ಮುಂದೆ ಬಂದುಬಿಡುವುದು ಎಲ್ಲರಿಗೂ ತಿಳಿದ ವಿಷಯ. ಅದು ಅಷ್ಟಕ್ಕೇ ನಿಲ್ಲದೆ ನಮ್ಮ ಜೀವನ ಪೂರ್ತಿ ನಮ್ಮ ಜೊತೆಜೊತೆಗೇ ಬರುತ್ತದೆ. ಕೆಲವರಿಗೆ ಇದು ವರವಾಗಿಯೂ, ಮತ್ತೆ ಕೆಲವರಿಗೆ ಶಾಪವಾಗಿಯೂ ಕಾಡುವುದುಂಟು. ನಮಗೆ ಇಷ್ಟವಿರಲಿ, ಬಿಡಲಿ ಇದರಿಂದ ಮಾತ್ರ ತಪ್ಪಿಸಿಕೊಳ್ಳುವುದು ಸಾದ್ಯವಾಗುವುದಿಲ್ಲ. ಕೆಲವರು ಅಂತರಜಾತೀಯ ವಿವಾಹವಾಗಿ ನಾವು ಜಾತ್ಯಾತೀತರೆಂದುಕೊಂಡರೂ ಅವರನ್ನು ಈ ಸಮಾಜ ಅವರ ಪಾಡಿಗೆ ಅವರನ್ನು ಸುಮ್ಮನೆ ಬಿಡುವುದಿಲ್ಲ. ಅವರನ್ನು ಮತ್ತು ಅವರ ಮಕ್ಕಳನ್ನು ಮುಂದೆ ಬಹಳ ಕಾಡುತ್ತಾರೆ. ಸಮಾಜದ ಶ್ರೀಮಂತ/ಜನಪ್ರಿಯ/ಗಣ್ಯ ವ್ಯಕ್ತಿಗಳಿಗೆ ಇದು ಅಷ್ಟಾಗಿ ಕಾಡದಿದ್ದರೂ ಮಧ್ಯಮ ವರ್ಗದ ಜನರನ್ನು ಹಣ್ಣುಗಾಯಿ ನೀರುಗಾಯಿ ಮಾಡುವುದುಂಟು. ಅಂತರ ಜಾತೀಯ/ಧರ್ಮ ವಿವಾಹವಾದ ಯುವ ಜೋಡಿಗಳು ಈ ಸಮಸ್ಯೆಯಿಂದ ಬಳಲಿ ಬೆಂಡಾಗಿದ್ದಾರೆ. ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಕೆಲವರು ಇದರಿಂದ ಹೊರಬರಲಾರದೆ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ತರಹದ ಅನೇಕ ಕುಟುಂಬಗಳನ್ನು ನಾವೆಲ್ಲರೂ ನೋಡಿ, ಕೇಳಿದ್ದೇವೆ. ಇದರಿಂದ ಬಿಡುಗಡೆಯೇ ಇಲ್ಲವೆನೋ? ನಮ್ಮ ರಾಷ್ಟ್ರಕವಿ ಕುವೆಂಪು "ಓ ನನ್ನ ಚೇತನ, ಆಗು ನೀ ಅನಿಕೇತನ" ಎಂದು ವಿಶ್ವ ಮಾನವನ ಕಲ್ಪನೆಯನ್ನು ನಮಗೆ ಕಟ್ಟಿಕೊಟ್ಟಿದ್ದಾರೆ. ಅದು ಕೇವಲ ಕಲ್ಪನೆಯಾಗೇ ಉಳಿದುಕೊಂಡಿದೆ. ಮಾನವೀಯತೆಯಿಂದ ಈ ಸಮಸ್ಯೆಗೆ ಪರಿಹಾರವನ್ನು ಅವರ ತಂದೆ, ತಾಯಿ, ಬಂಧು ಬಳಗದವರು/ಸ್ನೇಹಿತವರ್ಗದವರು ಕಂಡುಕೊಂಡರೆ ಮಾತ್ರ ಇದಕ್ಕೆ ಪರಿಹಾರದೊರಕಬಹುದು.

Saturday, 7 July 2012

ಕನ್ನಡ ಚಿತ್ರಗಳು ಮತ್ತು ಇನ್ ಬ್ರಾಂಡಿಗ್ ಹಣ :

ಕನ್ನಡ ಚಿತ್ರಗಳಿಗೆ ಇನ್ ಬ್ರಾಂಡಿಗ್ ಹಣ ಬರುತ್ತಿಲ್ಲ. ತೆಲುಗು/ತಮಿಳು/ಹಿಂದಿ ಚಿತ್ರಗಳು ಇನ್ ಬ್ರಾಂಡಿಗ್ ಹಣದಿಂದಲೇ ಚಿತ್ರ ತೆಗೆಯುತ್ತಾರೆ. ಆದರೆ ಕನ್ನಡ ಚಿತ್ರಗಳಿಗೆ ಎಲ್ಲಾ ಹಣವನ್ನು ನಿರ್ಮಾಪಕನೇ ತೆರಬೇಕು. ಕನ್ನಡದಲ್ಲಿ ಪುನೀತ್, ದರ್ಶನ್, ಸುದೀಪ್, ಗಣೇಶ್ ಮುಂತಾದ ನಟರಿದ್ದರೂ ಕಂಪನಿಗಳಿಂದ ಹಣ ಹುಟುವುದಿಲ್ಲ ಎಂದು ಹೇಳುತ್ತಾರೆ.  ಅದಕ್ಕೆ ಮುಖ್ಯ ಕಾರಣ ಕನ್ನಡ ಚಿತ್ರಗಳಲ್ಲಿ ರೌಡಿಸಂ ಆಧಾರಿತ ಚಿತ್ರಗಳು ಜಾಸ್ತಿ. ನಾಯಕ ನಟರು ಕೈಯಲ್ಲಿ ಮಚ್ಚು ಹಿಡಿದರೆ ಕಾರ್ಪೊರೇಟ್ ಕಂಪನಿಗಳು ಹಣ ಹೂಡುವುದಿಲ್ಲ. ಕನ್ನಡದಲ್ಲಿ ಹೊಸ ನಟರಿಗೆ ಇನ್ ಬ್ರಾಂಡ್ ಹಣ ಹುಟ್ಟತ್ತೆ. ಆದರೆ ಪುನೀತ್, ದರ್ಶನ್, ಸುದೀಪ್  ಅಂತಹವರಿಗೆ ಹುಟ್ಟಲ್ಲ, ಕಾರಣ ಮತ್ತದೇ ಮಚ್ಚು. ಆದರೊ ನಮ್ಮ ನಿರ್ಮಾಪಕರು, ನಿರ್ದೇಶಕರಿಗೆ ಬುದ್ದಿ ಬರಲ್ಲ. ಕನ್ನಡ ಚಿತ್ರರಂಗಕ್ಕೆ ಇಂತಹ ಮೂಲಗಳಿಂದ ಹಣ ತರುವುದು ಗೊತ್ತಿಲ್ಲ. ಕಾರ್ಪೊರೇಟ್ ಕಂಪನಿಗಳು ಹಣ ಕೊಡಲು ತಯಾರಾದರೂ ಅವರನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದು ನಮಗೆ ಬರಲ್ಲ. ನಮ್ಮ ನಿರ್ಮಾಪಕರು, ನಿರ್ದೇಶಕರು ಹೇಳುವುದು ಒಂದು ಮಾಡುವುದು ಮತ್ತೊಂದು ಹಾಗಾಗಿ ನಮ್ಮ ನಿರ್ಮಾಪಕರನ್ನು, ನಿರ್ದೇಶಕರನ್ನು ಕಾರ್ಪೊರೇಟ್ ಮಂದಿ ನಂಬುವುದಿಲ್ಲ. ಉಪೇಂದ್ರರ ಐಶ್ವರ್ಯ ಚಿತ್ರ, ದೇವ್ ಸನ್ ಆಫ್ ಮುದ್ದೇಗೌಡ  ೫೦ ಲಕ್ಷ ಹಣ, ಅಲೆಮಾರಿ ಚಿತ್ರಗಳಿಗೆ ಸುಮಾರು ೧೦ ಲಕ್ಷ ಹಣ ಇನ್ ಬ್ರಾಂಡ್ ರೂಪದಲ್ಲಿ ಬಂದಿತ್ತು.  ಇಂದ್ರಜಿತ್ ಲಂಕೇಶ್ ನನಗೆ ಪುನೀತ್,ಕಾಲ್ ಶೀಟ್ ಸಿಕ್ಕಿದರೆ ನನಗೆ ನಿರ್ಮಾಪಕರೇ ಬೇಡ. ನಾನು ಇನ್ ಬ್ರಾಂಡಿಗ್ ಹಣದಿಂದಲೇ ಚಿತ್ರ ತೆಗೆಯುತ್ತೇನೆ ಎನ್ನುತ್ತಾರೆ. ಇದು ಅವರ ಆತ್ಮವಿಶ್ವಾಸ ಮತ್ತು ತಾಕತ್ತು. ಇದು ಮೊನ್ನೆ ನಾನು ಒಂದು ಲೇಖನದಲ್ಲಿ ಓದಿದ್ದು.

ಇತರ ಚಿತ್ರರಂಗದವರು ನಮಗಿಂತ ಎಷ್ಟು ಮುಂದಿದ್ದಾರೆ ನೋಡಿ. ನಾವು ಅವರಿಂದ ಬಹಳ ಕಲಿಯಬೇಕಿದೆ. ಪರ ಭಾಷಾ ಚಿತ್ರಗಳು  ಅದ್ದೊರಿಯಾಗಿರಲು ಕಾರಣ ಅವರ ಚಿತ್ರಗಳಿಗೆ  ಕಾರ್ಪೊರೇಟ್ ಕಂಪನಿಗಳು ಹಣ ಹೂಡುತ್ತಾರೆ. ಚಿತ್ರದ ನಿರ್ಮಾಪಕರಿಗೆ ಅಷ್ಟಾಗಿ ನಷ್ಟವಾಗುವುದಿಲ್ಲ. ಚಿತ್ರದ ವೆಚ್ಚ ಸುಮಾರು ೫೦ ಕೋಟಿಯಷ್ಟಿದ್ದರೆ, ಇನ್ ಬ್ರಾಂಡಿಗ್ ಮೊತ್ತವೇ ಸುಮಾರು ಅದರ ಅರ್ಧದಷ್ಟಿರುತ್ತದೆ. ಇನ್ನು ಟಿ.ವಿ. ರೈಟ್ಸ್, ಆಡಿಯೊ ರೈಟ್ಸ್ ಮುಂತಾದವು ನಿರ್ಮಾಪಕನನ್ನು ಹೆಚ್ಚಿನ ನಷ್ಟದಿಂದ ಉಳಿಸುತ್ತವೆ ಮತ್ತು ಲಾಭಗಳಿಕೆಯಲ್ಲಿಯೂ ಕೂಡ ಚಿತ್ರ ಯಶಸ್ವಿಯಾಗುತ್ತದೆ.   ನಿರ್ಮಾಪಕ ಆದಷ್ಟೂ ಸುರಕ್ಷಿತವಾಗಿರುತ್ತಾನೆ.   ನಮ್ಮಲ್ಲಿ ಕೂಡ ಇಂತಹ ಪ್ರಯತ್ನಗಳಾಗಬೇಕು. ಹೀಗಾದಾಗ ನಮ್ಮ ಚಿತ್ರಗಳೂ ಕೂಡ ಅದ್ದೂರಿತನದಿಂದ ಕೂಡಿರುತ್ತದೆ. ನಾವುಗಳೂ ಬೇರೆಯವರಿಗೆ ಸ್ಪರ್ಧೆ ಒಡ್ಡಬಹುದು. ನಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಬಹುದು. ನಮ್ಮಲ್ಲಿ ಒಳ್ಳೆಯ ನಟ/ನಟಿ/ನಿರ್ಮಾಪಕ/ನಿರ್ದೇಶಕರು/ತಂತ್ರಜ್ಞರು ಎಲ್ಲರೂ ಇದ್ದಾರೆ. ಆದರೆ ಕಾರ್ಪೊರೇಟ್ ಮಂದಿಯ ಜೊತೆ ವ್ಯವಹರಿಸುವ ಚತುರತೆಯುಳ್ಳವರು ಕಡಿಮೆ. ನಮ್ಮಲ್ಲಿ ಚಿತ್ರವನ್ನು ಸರಿಯಾದ ರೀತಿಯಲ್ಲಿ  ಪ್ರಚಾರ  ಮಾಡುವವರೂ ಸಹ ಕಡಿಮೆ. ಪ್ರಚಾರ ಅಂದರೆ ಕೆಲಸಕ್ಕೆ ಬಾರದ ತಂತ್ರಗಳನ್ನು ಹೆಣೆಯುತ್ತಾರೆ. ಅದು ಈ ಕಾಲದಲ್ಲಿ ಪ್ರಯೋಜನವಾಗುವುದೇ? ಇಂತಹ ಸೂಕ್ಷವೂ ಗೊತ್ತಿಲ್ಲದಿರುವ ಕಾರಣವೇ ನಮ್ಮ ಚಿತ್ರಗಳು ಪರಭಾಷಾ ಚಿತ್ರದೊಂದಿಗೆ ಹೋಲಿಸಿದಾಗ ಸಪ್ಪೆಯೆನಿಸುತ್ತದೆ.  ಮೊದಲು ಇದನ್ನು ನಾವು ಸರಿ ಮಾಡಿಕೊಳ್ಳಬೇಕು. ಯಾರೋ ಒಬ್ಬಿಬ್ಬರು ಇಂತಹ ಪ್ರಯತ್ನದಲ್ಲಿದ್ದಾರೆ, ಅದು ಏನೇನೂ ಸಾಲದು. ಸಂಬಂಧಪಟ್ಟವರು ಇದರ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಇದೆಲ್ಲಾ ಒಬ್ಬಿಬ್ಬರಿಂದ ಆಗುವ ಕೆಲಸವಲ್ಲ. ಚಿತ್ರ ರಂಗದ ಸಮಸ್ತರೂ ಇದರ ಬಗ್ಗೆ ಸಹಕಾರ ಕೊಡಬೇಕು. ತಾವು ನಟಿಸಿದ ಚಿತ್ರಕ್ಕೇ  ಪ್ರಚಾರಕ್ಕೆ ಬರದೆ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳವ ನಮ್ಮ ನಟ/ನಟಿಯರಿಂದ ನಾವು ಇದನ್ನೆಲ್ಲಾ ನಿರೀಕ್ಷಿಸಬಹುದೇ???