Sunday, 9 September 2012

ದೇವರೆಲ್ಲಿದ್ದಾನೆ? ಭಾಗ-೨


ಕಳೆದ ಸಂಚಿಕೆಯಿಂದ

ಮಕ್ಕಳು ಬೆಳೆಯುತ್ತಾ ಬೆಳೆಯುತ್ತಾ ತನ್ನ ತಾಯಿ, ತಂದೆ, ತಾತ, ಅಜ್ಜಿ, ಶಾಲೆಯ ಗುರುಗಳಿಂದ ಪುರಾಣ ಪುಣ್ಯ ಕಥೆಗಳನ್ನು ಕೇಳುತ್ತಾ, ಅವುಗಳನ್ನು ಓದುತ್ತಾ ದೇವರ ಬಗ್ಗೆ ಭಯ ಮಿಶ್ರಿತ ಭಕ್ತಿ ಭಾವದಿಂದ ದೇವರನ್ನು ನಂಬುತ್ತಾ, ಆರಾಧಿಸುತ್ತಾ ಹೋಗುತ್ತದೆ. ಅದರ ಜೊತೆಜೊತೆಗೆ ತನ್ನ ಧರ್ಮ, ಜಾತಿ, ಕುಲ, ಸಂಪ್ರದಾಯ, ಸ್ವರ್ಗ, ನರಕದ ಅರಿವನ್ನೂ ಹಿರಿಯರು ಅದರ ತಲೆಗೆ ತುಂಬುತ್ತಾರೆ. ಕೆಲವು ಮಕ್ಕಳು ಯೌವನದ ಹೊಸ್ತಿಲಿಗೆ ಬಂದಾಗ ತನ್ನ ಧರ್ಮ, ಜಾತಿಯ ಬಗ್ಗೆ ಹೆಚ್ಚಿನ ಒಲವನ್ನು ತೋರಿ, ಹೆಚ್ಚಿನ ಜ್ಞಾನವನ್ನು ಸಂಪಾದಿಸಿ ಲೋಕ ಕಲ್ಯಾಣಕ್ಕಾಗಿ ಸನ್ಯಾಸಿಗಳಾಗಿ, ಧರ್ಮ ಗುರುಗಳಾಗಿ ಸಮಾಜಮುಖಿಗಳಾಗಿರುವುದೂ ಉಂಟು.

ಇನ್ನು ಕೆಲವರು ತಮ್ಮ ಜಾತಿ, ಧರ್ಮದ ಬಗ್ಗೆ ಅಂದಾಭಿಮಾನವನ್ನು ಬೆಳೆಸಿಕೊಂಡು, ಅಲ್ಪ ಸ್ವಲ್ಪ ತಿಳಿದುಕೊಂಡು ಹಾಗೂ ತಿಳಿದುಕೊಂಡಿರುವುದನ್ನೂ ಸಹ ತಪ್ಪುತಪ್ಪಾಗಿ ಅರ್ಥೈಸಿಕೊಂಡು ತಮ್ಮ ಜಾತಿ, ಧರ್ಮ, ಸಂಪ್ರದಾಯವೇ ಮೇಲು, ಉಳಿದವೆಲ್ಲವೂ ಕೀಳು ಎಂಬ ಭಾವನೆಯಿಂದ ಸಮಾಜಕ್ಕೆ ಕಂಟಕ ಪ್ರಾಯವಾಗಿ ತಮ್ಮ ಬದುಕನ್ನೂ ಜೊತೆಗೆ ಸಮಾಜವನ್ನು ನಾಶಮಾಡಲು ಹೊರಟ ಸಮಾಜಘಾತಕರನ್ನೂ ಸಹ ನಾವು ಕಾಣಬಹುದು.

ಇನ್ನು ಕೆಲವು ಮಕ್ಕಳಿಗೆ ತಮ್ಮ ಕಾಲೇಜು ವಿಧ್ಯಾಭ್ಯಾಸದ ಹೊತ್ತಿಗೆ, ತಾವು ಇಷ್ಟರವರೆಗೆ ನಂಬಿದ್ದೆಲ್ಲಾ ಸುಳ್ಳು ಅಂತ ಆನಿಸುವುದಕ್ಕೆ ಶುರುವಾಗುತ್ತದೆ. ಅವರ ಕೆಲವು ಪ್ರಶ್ನೆಗಳಿಗೆ ಅವರಿಗೆ ಸಮಾಧಾನಕರವಾದ ಉತ್ತರಗಳು ಸಿಗದೆ ಹತಾಶೆಗೊಂಡು ನಾಸ್ತಿಕವಾದವನ್ನು ಅಪ್ಪಿಕೊಂಡವರನ್ನೂ ಸಹ ನಾವು ಸಮಾಜದಲ್ಲಿ ಅಲ್ಲಲ್ಲಿ ಕಾಣಬಹುದು. ಅಂತಹವರ ಸಂಖ್ಯೆ ಹೆಚ್ಚಿನದಲ್ಲಿಲ್ಲದಿದ್ದರೂ ಗಣನೀಯವಾಗಿರುವುದಂತೂ ಸತ್ಯ. (ಮಿಕ್ಕಿದ್ದು ನಾಳೆಗೆ)

Saturday, 8 September 2012

ದೇವರೆಲ್ಲಿದ್ದಾನೆ? ಭಾಗ-೧


ಗಂಡು ಹೆಣ್ಣಿನ ಮಿಲನದಿಂದ ಬ್ರೂಣದ ರೂಪದಲ್ಲಿ ಹೆಣ್ಣಿನ ಗರ್ಭದಲ್ಲಿ ಸೃಷ್ಟಿಯಾಗುವ ಮಗು ಅದು ಅಲ್ಲಿ ಜೀವ ತಾಳಿ ಒಂಭತ್ತು ತಿಂಗಳು ಹಾಯಾಗಿರುವಾಗ ನಾನು ಒಬ್ಬನೇ ಇರುವುದು ಎಂದು ಮಗು ತಿಳಿದುಕೊಂಡಿರುತ್ತದೆ. ಒಂಭತ್ತು ತಿಂಗಳ ನಂತರ ಗರ್ಭದಿಂದ ಹೊರ ಬಂದ ಮಗುವಿಗೆ ನನಗೆ ಇಷ್ಟು ದಿನವೂ ಪಾಲಿಸಿ ಪೋಷಿಸಿಕೊಂಡು ಬರುತ್ತಿರುವ ತಾಯಿಯ ಮುಖ ದರ್ಶನವಾಗುತ್ತದೆ. ಅದುವರೆವಿಗೂ ಅದಕ್ಕೆ ತನ್ನನ್ನು ಯಾರೋ ಪಾಲಿಸಿ ಪೋಷಿಸಿಕೊಂಡು ಬರುತ್ತಿರುವ ಅನುಭವವಾದರೂ ಅದಕ್ಕೆ ಯಾರೊ ಅಂತ ಗೊತ್ತಾಗದೇ ಅದು ಬಹುಶ: ದೇವರೇ ಇರಬೇಕು ಎಂದು ನಂಬುತ್ತದೆ. ಆದರೆ ಒಮ್ಮೆ ತಾಯಿಯ ಗರ್ಭದಿಂದ ಹೊರಬಂದ ಮಗುವಿಗೆ ತನ್ನನ್ನು ಇಷ್ಟುದಿನ ಪಾಲಿಸಿ ಪೋಷಿಸಿಕೊಂಡು ಬರುತ್ತಿರುವ ಇವಳೇ ದೇವರಿರಬೇಕು ಎಂಬು ಭಾವಿಸುತ್ತದೆ. 

ನಂತರ ತಾಯಿಯ ಮುಖಾಂತರ ತನ್ನ ಜನ್ಮಕ್ಕೆ ಕಾರಣನಾದ ಅಪ್ಪನ ಪರಿಚಯವಾಗುತ್ತದೆ. ಮುಂದೆ ತಾತ, ಅಜ್ಜಿ, ಅಣ್ಣ, ಅಕ್ಕ, ದೊಡ್ಡಪ್ಪ, ದೊಡ್ಡಮ್ಮ ಹೀಗೆ ಸಂಬಂಧಗಳು ಪರಿಚಿತವಾಗುತ್ತದೆ. ಮಗು ಸ್ವಲ್ಪ ದೊಡ್ಡದಾದ ಮೇಲೆ ತನ್ನ ಸುತ್ತ ಮುತ್ತ ತನ್ನಂತೇಯೇ ಇರುವ ಸ್ವಲ್ಪ ದೊಡ್ಡದಾದ ಮಕ್ಕಳನ್ನು ನೋಡಿ ಇಲ್ಲಿ ತುಂಬಾ ಜನ ಇದ್ದಾರೆ ನಾನೊಬ್ಬನೇ ಅಲ್ಲ ಎಂಬುದು ಅದರ ಅರಿವಿಗೆ ಬರುತ್ತದೆ. ತಂದೆ, ತಾಯಿ, ತಾತ, ಆಜ್ಜಿ ಮಗುವನ್ನು ಮೊದಲ ಬಾರಿಗೆ ದೇವರ ಮೂರ್ತಿಯ ಮುಂದೆ ನಿಲ್ಲಿಸಿ, ಇದು ದೇವರು, ನಮ್ಮನ್ನೆಲ್ಲಾ ಪಾಲಿಸಿ, ಪೋಷಿಸಿಕೊಂಡು ಬರುತ್ತಿರುವವನು ಇವನೇ, ಇವನು ಎಲ್ಲೆಲ್ಲಿಯೂ ಇದ್ದಾನೆ ನಾವು ಇವನನ್ನು ಪೂಜಿಸಬೇಕು, ಆರಾಧಿಸಬೇಕು ಎಂದು ಹೇಳಿದಾಗ ಮಗುವು ಮೊದಲ ಬಾರಿಗೆ ಬೆಚ್ಚಿಬೀಳುವ ಪರಿಸ್ಥಿತಿ ಉಂಟಾಗುತ್ತದೆ. ನಾನು ಇಷ್ಟು ದಿನವೂ ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವ ನನ್ನ ತಾಯಿ, ತಂದೆಯನ್ನೇ ದೇವರೆಂದುಕೊಂಡಿರುವಾಗ, ಇವರು ಮತ್ಯಾರನ್ನೋ ತೋರಿಸಿ ದೇವರೆನ್ನುವವರಲ್ಲಾ ಎಂದು ಆಶ್ಚರ್ಯಪಡುತ್ತದೆ. ಆಮೇಲೆ ಅದಕ್ಕೆ ನಿಧಾನವಾಗಿ ಅರಿವಾಗುತ್ತದೆ ನನ್ನನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಎಲ್ಲರನ್ನೂ ನೋಡಿಕೊಳ್ಳುತ್ತಿರುವವನು ಇವನೇ ಇರಬೇಕು. ಅದಕ್ಕೇ ಇವನಿಗೆ ಎಲ್ಲರೂ ಕೈ ಮುಗಿಯತ್ತಿದ್ದಾರೆ, ಪೂಜಿಸುತ್ತಿದ್ದಾರೆ. ಹಾಗಾದರೆ ಇವನೇ ದೇವರಿರಬೇಕು ಎಂಬ ನಂಬಿಕೆಯಿಂದ ಅವನಿಗೆ ಕೈ ಮುಗಿಯಲು ಪ್ರಾರಂಭಿಸುತ್ತದೆ. (ಮಿಕ್ಕಿದ್ದು ನಾಳೆಗೆ)

Monday, 3 September 2012

ಆನ್ ಲೈನ್ ನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ


ಲೈಫು ಇಷ್ಟೇನೆ ಚಿತ್ರದ ನಿರ್ದೇಶಕರಾದ ಪವನ್ ಕುಮಾರ್ ಒಂದು ದೊಡ್ಡ ಕನಸನ್ನು ಕಾಣುತ್ತಿದ್ದಾರೆ. ನಮ್ಮ ಎಲ್ಲಾ ಕನ್ನಡ ಚಿತ್ರಗಳನ್ನು ಆನ್ ಲೈನ್ ಮುಖಾಂತರ ಪ್ರಪಂಚದ ಮೂಲೆ ಮೂಲೆಗೂ ತಲುಪಿಸುವ ಒಂದು ದೊಡ್ಡ ಯೋಜನೆಯನ್ನು ಹಾಕಿ ಕೊಂಡಿದ್ದಾರೆ. ಇದಕ್ಕೆ ಕರ್ನಾಟಕ ಫಿಲ್ಮ್ ಚೇಂಬರ್ ಅಂಡ್ ಪ್ರೊಡ್ಯೂಸರ್ ಅಸೋಸಿಯೇಷನ್ ಅವರಿಗೆ ಎಲ್ಲಾ ಕನ್ನಡ ಚಿತ್ರಗಳು ಆನ್ ಲೈನ್ ನಲ್ಲಿ ಸಿಗುವ ಹಾಗೆ ಮಾಡಲು ಒಂದು ಅಹವಾಲನ್ನು ಕಳಿಸಲು ಒಂದು ಕಾರ್ಯಕ್ರಮವನ್ನು ಹಾಕಿಕೊಂಡಿದ್ದಾರೆ. ಅದನ್ನು ಎಲ್ಲಾ ಕನ್ನಡಿಗರು ಬೆಂಬಲಿಸಬೇಕೆಂದು ಪ್ರಾರ್ಥಿಸುತ್ತಿದ್ದಾರೆ. ಈಗಾಗಲೇ ಸುಮಾರು ೨೫೦೦ ಮಂದಿ ಆ ಅಹವಾಲಿಗೆ ತಮ್ಮ ಒಪ್ಪಿಗೆಯನ್ನು ಸೂಚಿಸಿದ್ದಾರೆ. ಅವರಿಗೆ ಸುಮಾರು ಇನ್ನೂ ೭೫೦೦ ಜನರ ಒಪ್ಪಿಗೆಯ ಅವಶ್ಯಕತೆ ಇದೆ. ಈಗ ನಿಮ್ಮ ಸರದಿ, ಇದರಲ್ಲಿ ಅವರ ಸ್ವಾರ್ಥವು ಏನೇನೋ ಇಲ್ಲ. ಕನ್ನಡ ಚಿತ್ರಗಳಿಗೆ ಒಳ್ಳೆಯ ಮಾರುಕಟ್ಟೆಯನ್ನು ಒದಗಿಸುವ ಒಂದು ಪ್ರಾಮಾಣಿಕ ಕಳಕಳಿ ಅವರಲ್ಲಿ ಇದೆ. ಇದು ಸಾಧ್ಯವಾಗಲು ಎಲ್ಲಾ ಕನ್ನಡಿಗರ ಬೆಂಬಲ ಅಗತ್ಯ ಮತ್ತು ಅನಿವಾರ್ಯ ಕೂಡ. ಕೆಲವು ಕನ್ನಡ ಚಿತ್ರಗಳು ಈಗಾಗಲೇ ಆನ್ ಲೈನ ನಲ್ಲಿ ಲಭ್ಯವಾಗಿವೆ. ಹೊರ ದೇಶದಲ್ಲಿ ನೆಲಸಿರುವ ಕನ್ನಡಿಗರು ಮತ್ತು ಇತರೆ ರಾಜ್ಯಗಳಲ್ಲಿ ನೆಲಸಿರುವ ಕನ್ನಡಿಗರಿಗೆ ತಮ್ಮ ಮನೆಯಲ್ಲೇ ಕುಳಿತು ಕನ್ನಡ ಚಿತ್ರಗಳನ್ನು ನೋಡುವ ಸೌಭಾಗ್ಯವನ್ನು ತರಲು ಹೊರಟಿರುವ ಪವನ್ ಕುಮಾರ್ ಅವರಿಗೆ ದಯವಿಟ್ಟು ಬೆಂಬಲಿಸಿ. ನಾವು ಕನ್ನಡ ಚಿತ್ರಗಳು ಕೇವಲ ಕರ್ನಾಟಕದಲ್ಲಿ ಮಾತ್ರ ಪ್ರದರ್ಶಿತವಾಗುತ್ತಿವೆ, ಬೇರೆ ಭಾಷಾ ಚಿತ್ರಗಳು ಎಲ್ಲಾ ರಾಜ್ಯಗಳಲ್ಲಿ/ದೇಶಗಳಲ್ಲಿ ಪ್ರದರ್ಶಿತವಾಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಈಗ ನಮ್ಮೆಲ್ಲರ ಸರದಿ ನಮ್ಮ ಕನ್ನಡ ಚಿತ್ರಗಳ ಮಾರುಕಟ್ಟೆಯನ್ನು ಹೊರ ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲಿ ಪಸರಿಸುವ ಒಂದು ಅವಕಾಶವು ಒದಗಿ ಬಂದಿದೆ. ನಾವು ಬರೀ ಮಾತನಾಡದೆ ಒಂದು ಒಳ್ಳೆಯ ಕೆಲಸಕ್ಕಾಗಿ ಅವರ ಕೈಯನ್ನು ಬಲಪಡಿಸೋಣ ಎಂದು ಆಶಿಸುತ್ತಾ….ಕನ್ನಡ ಚಿತ್ರಗಳು ಬೇರೆ ರಾಜ್ಯ/ವಿದೇಶಗಳಲ್ಲಿ ಬಿಡುಗಡೆಯಾದರೆ ನಮ್ಮ ಚಿತ್ರರಂಗಕ್ಕೆ ಹಣ ಹೆಚ್ಚು ಹರಿದು ಬರತ್ತೆ, ನಮ್ಮ ಚಿತ್ರಗಳನ್ನು ಬೇರೆ ಭಾಷಾ ಜನರೂ ನೋಡಬಹುದು ಮುಖ್ಯವಾಗಿ ಬೇರೆ ಕಡೆ ನೆಲಸಿರುವ ಕನ್ನಡಿಗರು ಕನ್ನಡ ಚಿತ್ರವನ್ನು ನೋಡಬಹುದು. ನಮ್ಮ ಚಿತ್ರರಂಗವನ್ನು ದೊಡ್ಡದಾಗಿ ಬೆಳೆಸಬಹುದು.
Venkatesh just signed this petition on Change.org.
7360 signatures are still needed!

Saturday, 1 September 2012

ಉತ್ಪಾದಿತ ಮರಳು :


ಮನೆ/ಕಟ್ಟಡ ಕಟ್ಟಿಸುತ್ತಿರುವವರಿಗೆ ಮತ್ತು ಮುಂದೆ ಕಟ್ಟಿಸುವವರಿಗೆ ಒಂದು ಸಂತೋಷದ ಸುದ್ದಿಯೊಂದು ಬಂದಿದೆ. ಈಗ ನೈಸರ್ಗಿಕ ಮರಳು ಒಂದು ಲಾರಿ ಲೋಡಿಗೆ ಸುಮಾರು ೨೮ ರಿಂದ ೩೦ ಸಾವಿರ ರೂಪಾಯಿಗಳಾಗುತ್ತದೆ. ಫಿಲ್ಟರ್ ಮರಳು ಸುಮಾರು ೧೮-೨೦ ಸಾವಿರ ರೊಪಾಯಿಗಳಿಗೆ ಸಿಗುತ್ತದೆ. ಮಧ್ಯಮ ಮರಳು ಸುಮಾರು ೨೫ ರಿಂದ ೨೮ ಸಾವಿರ, ಸಾಮಾನ್ಯ ಮರಳು ೨೨ ಸಾವಿರ ದಿಂದ ೨೫ ಸಾವಿರವಾಗುತ್ತದೆ.  ನೈಸರ್ಗಿಕ ಮರಳು ಸದೃಡ,  ನೀರು ಮತ್ತು ಸೀಮೆಂಟ್ ಇದರಲ್ಲಿ ನೈಜವಾಗಿ ಹೊಂದಿಕೆಯಾಗಿ ಕಟ್ಟಡಗಳಲ್ಲಿ ಬಿರುಕು ಉಂಟಾಗುವುದಿಲ್ಲ. ಮನೆ ಮತ್ತು ಕಟ್ಟಡಗಳ ಆಯಸ್ಸು ಜಾಸ್ತಿ.  ಆದರೆ ಫಿಲ್ಟರ್ ಮರಳು ಹಾಗಲ್ಲ. ಅದು ಸ್ವಲ್ಪ ಕಡಿಮೆ ಬೆಲೆಯಲ್ಲಿ ಸಿಕ್ಕರೂ ಮುಂದೆ ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಮನೆ ಮತ್ತು ಕಟ್ಟಡ ಆಯಸ್ಸೂ ಸಹ ಬಹಳ ಕಡಿಮೆ. ನೀರು ಮತ್ತು ಸೀಮೆಂಟ್ ಹೊಂದಿಕೆಯಾಗುವುದಿಲ್ಲ. ನಿಜವಾಗಿ ಹೇಳಬೇಕೆಂದರೆ ಫಿಲ್ಟರ್ ಮರಳು ನಿಜವಾದ ಮರಳೇ ಅಲ್ಲ. ಮಣ್ಣನ್ನು ಸೋಸಿ ಅದರಿಂದ ಬರುವ ಮರಳಿನಂತ ಕಾಣುವ ಮಣ್ಣನ್ನೇ ಮರಳೆಂದು ಕಟ್ಟಡಗಳನ್ನು ಕಟ್ಟಲು ಬಳಸುತ್ತಾರೆ. ಹೆಚ್ಚಿನ ಜನರಿಗೆ ನೈಸರ್ಗಿಕ ಮರಳು ಮತ್ತು ಫಿಲ್ಟರ್ ಮರಳಿನ ವ್ಯತ್ಯಾಸ ಗೊತ್ತಾಗುವುದಿಲ್ಲ, ಹಾಗಾಗಿ ಫಿಲ್ಟರ್ ಮರಳನ್ನು ನೈಸರ್ಗಿಕ ಮರಳೆಂದು ಮೋಸ ಮಾಡಿದವರೂ ಉಂಟು.

ಈಗ ನೈಸರ್ಗಿಕ ಮರಳು ಸಿಗುವುದು ಬಹಳ ಕಮ್ಮಿ. ನದಿ, ಜಲಾಶಯದಿಂದ ತರುವ ಮರಳು ಈಗ ಯಾವುದಕ್ಕೂ ಸಾಕಾಗುವುದಿಲ್ಲ. ನೈಸರ್ಗಿಕ ಮರಳಿನ ಲೂಟಿ ಎಲ್ಲಾ ಕಡೆ  ಜಾಸ್ತಿಯಾಗಿ ಅದು ಒಂದು ದೊಡ್ಡ ಅವ್ಯವಹಾರವಾಗಿ ಬೆಳೆದಿದೆ. ಈಗ ಹೊಸದಾಗಿ ಮರಳನ್ನೂ ಸಹ ಉತ್ಪಾದಿಸಬಹುದು. ಇದನ್ನು ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಇದರ ಗುಣಮಟ್ಟ ಪರೀಕ್ಷಿಸಿ ಇದನ್ನು ಉಪಯೋಗಿಸಬಹುದೆಂಬ ಖಾತ್ರಿಯನ್ನು ನೀಡಿದೆ. ಗ್ರಾನೈಟ್, ಸ್ಯಾಂಡ್ ಸ್ಟೋನ್ ಮತ್ತಿತ್ತರ ಗುಣಮಟ್ಟದ ಕಲ್ಲುಗಳನ್ನು ವಿ.ಎಸ್.ಐ ಯಂತ್ರದಿಂದ ಪುಡಿಮಾಡಿ ಮರಳಾಗಿಸುತ್ತದೆ. ಇದು ವಿಭಿನ್ನ ಶ್ರೇಣಿಗಳಲ್ಲಿ ದೊರಕುತ್ತದೆ. ಇದು ನೈಸರ್ಗಿಕ ಮರಳಿನಷ್ಟೇ ಪರಿಣಾಮಕಾರಿ.  ಇದು ನೀರು ಮತ್ತು ಸೀಮೆಂಟ್ ನಲ್ಲಿ ಹೆಚ್ಚು ಹೊಂದಿಕೆಯಾಗುತ್ತದೆ. ಇದು ಸುಮಾರು ೧೦ ಸಾವಿರ ರೂಪಾಯಿಗಳಿಗೆ ಸಿಗುತ್ತದೆ. ಕಲ್ಲುಗಣಿಗಳಿಂದ ಬರುವ ಧೂಳನ್ನು ಉತ್ಪಾದಿತ ಮರಳೆಂದು ಮೋಸ ಮಾಡುತ್ತಾರೆ,  ಆದರೆ ಅದು ಉತ್ಪಾದಿತ ಮರಳಲ್ಲ. ಆದ್ದರಿಂದ ಸಾರ್ವಜನಿಕರು ಸ್ವಲ್ಪ ಎಚ್ಚರದಿಂದ ಇದ್ದರೆ ಒಳ್ಳೆಯದು.

ಉತ್ಪಾದಿತ ಮರಳನ್ನು ಈಗಾಗಲೇ ವಿಶ್ವದ ಅನೇಕ ಕಡೆಗಳಲ್ಲಿ ಬಳಸುತ್ತಿದ್ದಾರೆ. ನಮ್ಮೆ ದೇಶದ ದಿಲ್ಲಿ, ಮುಂಬಯಿಗಳಲ್ಲಿ ಈ ಉತ್ಪಾದಿತ ಮರಳನ್ನು ಈಗಾಗಲೇ ಬಳಸುತ್ತಿದ್ದಾರೆ. ಇದು ಅಲ್ಲಿ ಕಡ್ಡಯವೂ ಹೌದು. ಇದರಲ್ಲಿ ಮಣ್ಣಿನ ಅಂಶವು ಇರುವುದಿಲ್ಲ, ಹಾಗಾಗಿ ಇದರಲ್ಲಿ ನೀರು ಮತ್ತು ಸೀಮೆಂಟ್ ಯಶಸ್ವಿಯಾಗಿ ಹೊಂದಿಕೆಯಾಗುತ್ತದೆ. ನೈಸರ್ಗಿಕ ಮರಳನ್ನು ಬಳಸುವ ಬದಲು ಈ ಉತ್ಪಾದಿತ ಮರಳನ್ನು ಉಪಯೋಗಿಸುವುದರಿಂದ ಕಟ್ಟಡಕ್ಕೆ ತಗುಲುವ ಖರ್ಚು ಬಹಳ ಕಡಿಮೆಯಾಗುತ್ತದೆ. ಮನೆ/ಕಟ್ಟಡ ಸದೃಡವಾಗಿರುವುದಲ್ಲಿ ಯಾವ ಅನುಮಾನವೂ ಬೇಡ. ನಮ್ಮ ಅಂತರ್ಜಲ ಸುರಕ್ಷಿತವಾಗಿರುತ್ತದೆ. ನೈಸರ್ಗಿಕ ಮರಳು ಕೆರೆ, ನದಿ ಮತ್ತು ಜಲಾಶಯಗಳಲ್ಲೇ ಉಳಿದು ನಮ್ಮೆ ಕೆರೆ ಕಟ್ಟೆಗಳು ತುಂಬಿ ಹರಿಯುತ್ತದೆ.  ಪ್ರಾಣಿ ಪಕ್ಷಿ ಸಂಕುಲಗಳು ಮತ್ತು ನಮ್ಮ ಪರಿಸರ ಉಳಿಯುತ್ತವೆ.