Tuesday, 27 March 2012

ಹೇಳದೆ ಉಳಿದ ಮಾತು:

ನಮ್ಮ ನೆಲದಲ್ಲಿ ನಮ್ಮದೇ ಆದ ಒಂದು ಪ್ರಾದೇಶಿಕ ಪಕ್ಷ ಇಲ್ಲವೆಂಬ ಭಾವನೆ ಬಹಳಷ್ಟು  ಕನ್ನಡಿಗರಲ್ಲಿದೆ.  ಆದರೆ ನಮ್ಮ ಕನ್ನಡ ನಾಡಿನಲ್ಲಿ ಅನ್ಯ ನಾಡಿನ ಬಹಳಷ್ಟು ಪ್ರಾದೇಶಿಕ ಪಕ್ಷಗಳಿವೆ. "ಎ.ಐ.ಡಿ.ಎಂ.ಕೆ" ಕಳೆದ ನಾಲ್ಕು ದಶಕಗಳಿಂದ ಇಲ್ಲಿ ಮನೆ ಮಾಡಿದೆ. ಹಿಂದೆ ಕೆ.ಜಿ.ಎಫ಼್ ನಲ್ಲಿ ಅವರ ಶಾಸಕರು ಸಹ ಆಯ್ಕೆಯಾಗಿದ್ದರು. ಬೆಂಗಳೂರಿನ ಗಾಂಧಿನಗರದಿಂದ ಆ ಪಕ್ಷದ ಶಾಸಕರು ಆಯ್ಕೆ ಯಾಗಿದ್ದೂ ಸಹ ಇದೆ. ಬಂಗಾರಪ್ಪನವರು ಉತ್ತರ ಪ್ರದೇಶದ "ಎಸ್.ಪಿ"ಯನ್ನು ಕನ್ನಡಿಗರಿಗೆ ಕಾಣಿಕೆಯಾಗಿ ಕೊಟ್ಟಿದ್ದೂ ಇದೆ. ಇನ್ನು ಮಾಯಾವತಿಯವರ "ಬಿ.ಎಸ್.ಪಿ" ಸಹ ಇದೆ. ಮಹಾರಾಷ್ಟ್ರದ "ಶಿವಸೇನೆ" ಯನ್ನು ಪ್ರಮೋದ್ ಮುತಾಲಿಕ್ ಅವರು ಕರೆದುಕೊಂಡು ಬಂದಿದ್ದರು. ಕಾರಣಾಂತರದಿಂದ ಅದನ್ನು "ಶ್ರೀರಾಮಸೇನೆ" ಎಂದು ಬದಲಿಸಿದರು. ಎನ್.ಟಿ.ರಾಮರಾವ್ ಅವರು "ತೆಲುಗು ದೇಶಂ" ಅನ್ನು ಕನ್ನಡಕ್ಕೆ ಡಬ್ ಮಾಡಿ "ಕನ್ನಡ ದೇಶಂ" ಎಂದು ಇಲ್ಲಿ ಬೆಳೆಸಲು ನೋಡಿದರು. ಅದು ಕೆಲವು ಕಾರಣಗಳಿಂದ ಸಾಧ್ಯವಾಗಲಿಲ್ಲ. ಬಿಹಾರದ ಲಾಲು ಪ್ರಸಾದ್ ಅವರು ಆರ್.ಜೆ.ಡಿ ಯನ್ನು ಇಲ್ಲಿ ತರಲು ಸೂಕ್ತ ಸಮಯ, ಸಂಧರ್ಬಕ್ಕಾಗಿ ಕಾಯುತ್ತಿದ್ದಾರೆ. ಇತ್ತೀಚೆಗೆ ನಮ್ಮ ಕೆಲವು ಶಾಸಕರು ಮಹರಾಷ್ಟ್ರದ ಶರತ್ ಪವಾರ್ ಅವರ "ಎನ್.ಸಿ.ಪಿ"ಯನ್ನು  ರತ್ನಕಂಬಳಿ ಹಾಸಿ ಕರೆತರಲು ಹೊರಟಿದ್ದಾರೆ. ಬೆಳಗಾವಿಯಲ್ಲಿ "ಎಂ.ಇ.ಎಸ್" ಸದಸ್ಯರು ಶಾಸಕರಾಗಿ, ನಗರ ಸಭೆ ಸದಸ್ಯರಾಗಿ, ಪುರ ಪಿತೃವಾಗಿ ಎಲ್ಲಾ ಬಗೆಯ ಅಧಿಕಾರವನ್ನು ಅನುಭವಿಸಿದ್ದಾರೆ. ಮುಂದಿನ ವರ್ಷಗಳಲ್ಲಿ ಕರ್ನಾಟಕದ ಆಡಳಿತ  ಜಯಲಲಿತಾ, ಲಾಲು, ಶರತ್ ಪವಾರ್, ಮುಂತಾದವರ ಕೈಗೆ ಬಂದರೆ ಕನ್ನಡಿಗರು ಆಶ್ಚರ್ಯಪಡುವಂತಹದ್ದೇನೂ ಇಲ್ಲ.

Monday, 26 March 2012

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು: ( ಭಾಗ-೪)

ಕಳೆದ ಸಂಚಿಕೆಯಿಂದ:
                
ಸಧ್ಯದ ಪರಿಸ್ತಿತಿಯನ್ನು ಅವಲೋಕಿಸಿದಾಗ, ನಮ್ಮಲ್ಲಿ ಯಾರೂ ಪ್ರಾದೇಶಿಕ ಪಕ್ಷವನ್ನು ಸ್ಥಾಪನೆ ಮಾಡುವ ನಾಯಕರೇ ಇಲ್ಲವೇ ಎಂದು ಕೂಲಂಕುಶಿತವಾಗಿ ಪರಿಶೀಲಿಸಿದಾಗ ಕಂಡುಬರುವ ಹೆಸರುಗಳು ಕುಮಾರ ಸ್ವಾಮಿ, ಯಡೆಯೂರಪ್ಪ ಮತ್ತು ಸಿದ್ದರಾಮಯ್ಯ. ಇವರೆಲ್ಲರೂ ಬೇರೆ ಬೇರೆ ಪಕ್ಷಗಳಲ್ಲಿ ಇದ್ದಾರೆ. ಇವರೆಲ್ಲರೂ ಅವರ ಜಾತಿಯ/ವರ್ಗದ ನಾಯಕನೆಂದೇ ಪ್ರಸಿದ್ದರು. ಇವರುಗಳು ಸಹ ಎಲ್ಲಾ ವರ್ಗದ ಜನರನ್ನು ಹೊಂದಿಸಿಕೊಂಡು/ತೂಗಿಸಿಕೊಂಡು ಹೋಗುವ ಸಂಭವಗಳು ಕಾಣುತ್ತಿಲ್ಲ. ಇವರಿಗೆ ಅವರದೇ ಆದ ತೊಡಕುಗಳಿವೆ. ಅದನ್ನು ಬಿಟ್ಟು ಹೊರಬರುವುದು ಕಷ್ಟ. ಕುಮಾರ ಸ್ವಾಮಿ ಯವರು ೪/೫ ಜಿಲ್ಲೆಗಳನ್ನು ಹೊರತುಪಡಿಸಿ ಮಿಕ್ಕೆ ಕಡೆ ಅಷ್ಟಕಷ್ಟೇ. ಇನ್ನು ಯಡೆಯೂರಪ್ಪ ಮತ್ತು ಸಿದ್ದರಾಮಯ್ಯ ಅವರ ಕಥೆಯೂ ಅಷ್ಟೇ. ಇವರೂ ಮೂರೂ ಜನ ಒಂದು ಕಡೆ ಸೇರಿ, ತಮ್ಮ ತಮ್ಮ ಅಹಂ ಬಿಟ್ಟು ಉಳಿದ ಎಲ್ಲಾ ಜಾತಿ/ಪಂಗಡ/ವರ್ಗದ ಜನರ ಜೊತೆ ಸೇರಿ ಕನ್ನಡ ಮತ್ತು ಕರ್ನಾಟಕದ ಅಭಿವೃದ್ದಿಯ ಬಗ್ಗೆ ಚಿಂತಿಸಿದರೆ ಒಂದು ಹೊಸ ಶಕೆ ಉದಯವಾಗಬಹುದೇನೋ? ಆದರೆ ಇದು ಸಾಧ್ಯವೇ? ಇವರ ಮನಸ್ಥಿತಿ ಇದಕ್ಕೆ ಒಪ್ಪಿಗೆ ಕೊಡುತ್ತದೆಯೇ? ಇವರುಗಳು ಒಬ್ಬರಿಗೊಬ್ಬರನ್ನು ನಂಬುವ ಸ್ತಿತಿಯಲ್ಲಿದ್ದಾರೆಯೆ? ಅಕಸ್ಮಾತ್ ಇವರುಗಳು ಒಬ್ಬರನೊಬ್ಬರು ಅಧಿಕಾರದ ಆಸೆಗೆ ಕೂಡಿಕೊಂಡರೂ ಮತದಾರ ಈ ಮೂವರನ್ನೊ ನಂಬುವ ಸ್ಥಿತಿಯಲ್ಲಿದ್ದಾನೆಯೇ? ಹೀಗೆ ನೂರೆಂಟು ಉತ್ತರವಿಲ್ಲದ ಪ್ರಶ್ನೆಗಳು.

ಜಾತ್ಯಾತೀಯ ಜನತಾದಳ ಪಕ್ಷವು ರಾಷ್ಟೀಯ ಪಕ್ಷವೋ? ಪ್ರಾದೇಶಿಕ ಪಕ್ಷವೊ? ಎಂಬುದು ಅವರ ಪಕ್ಷದವರಿಗೇ ಗೊಂದಲವಿರುವಂತಿದೆ. ಈಗಲೇ ಒಂದು ಪ್ರಾದೇಶಿಕ ಪಕ್ಷವು ಬೇಕೆಂದರೆ (ದಿಡೀರ್ ತಿಂಡಿಯ ಹಾಗೆ) ನಾನಿದ್ದೇನೆ ಎನ್ನುತ್ತಾರೆ ಕುಮಾರ ಸ್ವಾಮಿ. ಇದರ ಜೊತೆ ಸಂಯುಕ್ತ ಜನತಾದಳ, (ಇದು ನಿಜವಾಗಲೂ ರಾಜ್ಯದಲ್ಲಿ ಇದೆಯಾ?) ಶ್ರೀರಾಮುಲು ಅವರ ಬಿ.ಎಸ್.ಆರ್ ಪಕ್ಷವು ಸೇರಬಹುದೇನೋ?                                           (ಮುಗಿಯಿತು) (ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ)

Sunday, 25 March 2012

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು: ( ಭಾಗ-೩)

ಕಳೆದ ಸಂಚಿಕೆಯಿಂದ:

ಕನ್ನಡದ ಸಂಘ, ಸಂಸ್ಥೆಗಳು, ರಾಜ್ಯ ರೈತ ಸಂಘ, ಕಾರ್ಮಿಕ ಸಂಘಗಳು, ಸಿನಿಮಾ ನಟರ ಅಭಿಮಾನಿ ಸಂಘಗಳು ಹೀಗೆ ಮುಂತಾದ ಸಂಘಟನೆಗಳಲ್ಲಿ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಈಗ ಅವರೆಲ್ಲಾ ಬೇರೆ ಬೇರೆ ಪಕ್ಷಗಳಲ್ಲಿ ಹರಿದು ಹಂಚಿ ಹೋಗಿದ್ದಾರೆ. ಮೊದಲು ಅವರೆಲ್ಲಾ ಒಗ್ಗೂಡಿ ಒಂದೇ ನಾಯಕತ್ವದ ಅಡಿಯಲ್ಲಿ ಒಂದಾದರೆ ಅದು ಒಂದು ದೊಡ್ಡ ಶಕ್ತಿಯಾಗುತ್ತದೆ. ಆದರೆ ಅವರಲ್ಲಿ ಆಗಾಗ ಜರಗುವ ಒಳಜಗಳಗಳಿಂದಾಗಿ ಅವರು ಏನೂ ಮಾಡಲಾಗದಂತಹ ಸ್ಥಿತಿಗೆ ತಲುಪಿದ್ದಾರೆ. ಅವರು ಇದರಿಂದ ಆದಷ್ಟೂ ಮೊದಲು ಹೊರಗೆ ಬಂದರೆ ರಾಜಕೀಯವಾಗಿ ಬೆಳೆಯಬಹುದು. ಮೊದಲು ಇವರು ಎಲ್ಲರೊಂದಿಗೂ ಹೊಂದಿಕೊಂಡು ಒಗ್ಗಾಟ್ಟಾಗಿ ಹೋಗಬೇಕು.  ರಾಜಕೀಯ ಪ್ರಜ್ನೆ, ದೂರದೃಷ್ಟಿಯ ಕೊರತೆ ಅವರನ್ನು ಎದ್ದು ಕಾಡುತ್ತಿದೆ. ಕೆಲವರಿಗೆ ಇವರ ಬಗ್ಗೆ ಒಳ್ಳೆಯ ಆಶಾಭಾವನೆ ಇದೆ. ಕಾಲವೇ ಇದಕ್ಕೆ ಉತ್ತರಿಸಬೇಕು. 
                                                                                     
ಡಾ.ರಾಜ್ ಕುಮಾರ್ ಅವರಿಗೆ "ಗೊಕಾಕ್ ಚಳುವಳಿ" ಸಂಧರ್ಭದಲ್ಲಿ ಸಿಕ್ಕ ಅಭೂತಪೂರ್ವ ಜನಬೆಂಬಲ ಒಂದು ಹೊಸ ಪ್ರಾದೇಶಿಕ ಪಕ್ಷಕ್ಕೆ ಉದಯವಾಗಬಹುದೆಂಬ ಕನಸನ್ನು ಬಹಳಷ್ಟು ಮಂದಿ ಕಂಡಿದ್ದರು. ಅವರನ್ನು ಎಲ್ಲಾ ಜಾತಿ,ಮತ, ವರ್ಗದವರೂ ಪ್ರೀತಿಸುತ್ತಿದ್ದರು. ವಿದ್ಯಾವಂತರು, ಅವಿದ್ಯಾವಂತರು, ಬಡವರು, ಶ್ರೀಮಂತರು ಹೀಗೆ ಎಲ್ಲರಿಗೂ ಅವರ  ಮೇಲೊಂದು ಒಳ್ಳೆಯ ಅಭಿಪ್ರಾಯವಿತ್ತು ಮತ್ತು ವಿಶ್ವಾಸವಿತ್ತು.  ಆದರೆ ರಾಜ್ ಕುಮಾರ್ ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ. ಅಕಸ್ಮಾತ್ ರಾಜ್ ಕುಮಾರ್ ಅವರು ಅದರ ಬಗ್ಗೆ ಆಸಕ್ತಿ ವಹಿಸಿದ್ದಿದ್ದರೆ ಕರ್ನಾಟಕದ ರಾಜಕೀಯ ಒಂದು ಹೊಸ ದಿಕ್ಕೆಗೆ ಹೊರಳುತ್ತಿತ್ತೇನೋ? ರಾಜಕೀಯದಲ್ಲಿ ಆಸಕ್ತಿ ಇರುವವರು ಇಲ್ಲಿ ಜನಪ್ರಿಯರಾಗಲಿಲ್ಲ. ಜನಪ್ರಿಯರಾಗಿರುವವರಿಗೆ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ. ಹೀಗಾಗಿ ನಮ್ಮ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಏನೋ ಒಂದು ತೊಡಕು.
                                                         
ನಮ್ಮ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವು ಇರಬೇಕೆಂಬ ಕನಸು ಕಂಡವರು ಹಲವು ಮಂದಿ. ಇದರ ಬಗ್ಗೆ ಕೆಲವು ಪ್ರಯತ್ನಗಳಾದವು. ಕೆಲವು ಸ್ವಲ್ಪ ಮಟ್ಟಿನ ಯಶಸ್ಸು ಕಂಡವು. ಆದರೆ ಈ ಪಕ್ಷಗಳಾವುವೂ ಕನ್ನಡದ, ಪ್ರಾದೇಶಿಕ ಮನಸ್ಸನ್ನು ಹೊಂದಿರಲಿಲ್ಲ. ಕೇವಲ ಸ್ವಾರ್ಥಕ್ಕೆ ಹುಟ್ತಿಕೊಂಡಂತಾಗಿತ್ತು. ಆದ್ದರಿಂದ ಅವುಗಳಿಗೆ ಸಿಗಬೇಕಾಗಿದ್ದ ಯಶಸ್ಸು ಸಿಗಲಿಲ್ಲ. ದೇವರಾಜ ಅರಸು ಅವರು ಇಂದಿರಾ ಗಾಂಧಿಯವರ ಮೇಲಿನ ಕೋಪದಿಂದ ಒಂದು ಪ್ರಾದೇಶಿಕ ಪಕ್ಷವನ್ನು ಕಟ್ಟಿ ಆಮೇಲೆ ಅದನ್ನು ಕಾಂಗ್ರೆಸ್ ನಲ್ಲಿ ವಿಲೀನಗೊಳಿಸಿದರು. ಇವರಿಗೆ ರಾಜ್ಯದಲ್ಲಿ ಒಂದು ಪ್ರಾದೇಶಿಕ ಪಕ್ಷವನ್ನು ಕಟ್ಟಬೇಕೆಂಬ ಬಯಕೆ ನಿಜವಾಗಲೂ ಇರಲಿಲ್ಲ. ಕೇವಲ  ಪ್ರತಿಷ್ಟೆಗೆ ಕಟ್ಟಿದರು. ನಂತರ ಬಂಗಾರಪ್ಪನವರು "ಕರ್ನಾಟಕ ಕ್ರಾಂತಿರಂಗ" ಎಂಬ ಪಕ್ಷವನ್ನು ಕಟ್ಟಿದರು. ಇವರಿಗೆ ಸ್ವಲ್ಪ ಮಟ್ಟಿನ ಯಶಸ್ಸೊ ಸಿಕ್ಕಿತ್ತು. ಆಮೇಲೆ ಅದನ್ನು ಕಾಂಗ್ರೆಸ್ ನಲ್ಲಿ ವಿಲೀನ ಗೊಳಿಸಿದರು. ಇವರೂ ಕಾಂಗ್ರೆಸ್ ಮೇಲಿನ ಕೋಪದಿಂದ ಪಕ್ಷವನ್ನು ಕಟ್ಟಿದರೇ ಹೊರತು ಅದನ್ನು ಮುಂದುವರೆಸಿಕೊಂಡು ಹೋಗುವ ಬಗ್ಗೆ ಅವರಿಗೇ ವಿಶ್ವಾಸವಿರಲಿಲ್ಲ. ಅವರಿಗೆ ಮೊದಲು ನಾನು ಏನು ಎಂದು ಕಾಂಗ್ರೆಸ್ ನವರಿಗೆ ತೋರಿಸಬೇಕಾಗಿತ್ತು ಅಷ್ಟೇ. ರಾಮಕೃಷ್ಣ ಹೆಗ್ಗಡೆಯವರು "ನವ ನಿರ್ಮಾಣ ವೇದಿಕೆ" ಎಂಬ ರಾಜಕೀಯ ಸಂಘಟನೆಯನ್ನು ಹುಟ್ಟುಹಾಕಿದರು. ಇಲ್ಲೂ ಸ್ವಯಂ ಪ್ರತಿಷ್ಟೆ. ಇವರಿಗೆ ಜನತಾ ಪಕ್ಷಕ್ಕೆ ತಾವೇನು ಎಂಬುದನ್ನು ತೋರಿಸಬೇಕೆಂಬ ಅನಿವಾರ್ಯತೆ. ಹೀಗಾಗಿ ಇದೂ ಉದ್ದಾರವಾಗಲಿಲ್ಲ. ಎ.ಕೆ.ಸುಬ್ಬಯ್ಯನವರು "ಕನ್ನಡ ನಾಡು" ಎಂಬ ಪಕ್ಷವನ್ನು ಕಟ್ಟಲು ಹೊರಟು ನಗೆಪಾಟಲಾದರು. ವಿಜಯ ಸಂಕೇಶ್ವರರ "ಕನ್ನಡನಾಡು" ಚುನಾವಣೆಯಲ್ಲಿ ಸ್ಪರ್ಧಿಸಿ ಒಂದು ಸ್ಥಾನ ಗಳಿಸಿ ಕೊನೆಗೆ ಭಾ.ಜ.ಪದಲ್ಲಿ ಸೇರಿಕೊಂಡಿತು. ಇತ್ತೀಚೆಗೆ ಬಳ್ಳಾರಿಯ ಬಿ.ಶ್ರೀರಾಮುಲು "ಬಿ.ಎಸ್.ಆರ್.ಪಕ್ಷ"ವೆಂದು ಹೊಸ ಪಕ್ಷವನ್ನು ಕಟ್ಟಿದ್ದಾರೆ. ಇದೂ ಕೇವಲ ಪ್ರತಿಷ್ಟೆಗೆ. ಇವರಿಗೆ ನಾನು ಯಾರು? ಏನು? ಎಂಬುದನ್ನು ಬಿ.ಜೆ.ಪಿ.ಗೆ ತೋರಿಸಬೇಕೆಂಬ ರಣ ಉತ್ಸಾಹ.                                                                  (ಮಿಕ್ಕಿದ್ದು ನಾಳೆಗೆ)  


Saturday, 24 March 2012

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು: ( ಭಾಗ-೨)

ಕಳೆದ ಸಂಚಿಕೆಯಿಂದ:

ಆದರೆ ನಮ್ಮ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವು ಯಾಕಿಲ್ಲ? ನಮ್ಮ ರಾಜ್ಯದಲ್ಲೂ ಒಂದು ಪ್ರಾದೇಶಿಕ ಪಕ್ಷ ಬರಬೇಕು. ಅದು ಅಧಿಕಾರ ಹಿಡಿಯಬೇಕೆಂಬ ಬಯಕೆ ಅನೇಕ ಕನ್ನಡಿಗರಿಗೆ ಇದೆ. ಆದರೆ ಅದು ಸಾಧ್ಯವಾಗುವುದು ಯಾವಾಗ? ಒಬ್ಬ ಹೊಸ ನಾಯಕನ ಅನ್ವೇಷಣೆಯಲ್ಲಿ ಕನ್ನಡಿಗರಿದ್ದಾರೆ. ಆ ಹೊಸ ನಾಯಕನಿಗೆ ಕನ್ನಡದ  ಮತ್ತು ಕರ್ನಾಟಕದ ಬಗ್ಗೆ ಪ್ರೀತಿ, ಅಭಿಮಾನವಿರಬೇಕು, ಅವನಿಗೆ ಎಲ್ಲಾ ಜಾತಿ/ವರ್ಗದ ಬೆಂಬಲವಿರಬೇಕು, ಹಣ ಬೆಂಬಲವಿರಬೇಕು. ಸತ್ಚಾರಿತ್ರ ಹೊಂದಿರಬೇಕು. ಇವೆಲ್ಲಾ ಇರುವ ಹೊಸ ನಾಯಕನಿಗಾಗಿ ಕರ್ನಾಟಕ ಮತ್ತು ಕನ್ನಡಿಗರು ಕಾಯುತ್ತಿದ್ದಾರೆ.

ಯಾಕೆ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವು ಜನಪ್ರಿಯವಾಗುವುದಿಲ್ಲ? ಕನ್ನಡಿಗರು ಯಾಕೆ ಈ ಪ್ರಾದೇಶಿಕ ಪಕ್ಷಗಳನ್ನು ನಂಬುವುದಿಲ್ಲ? ಯಾಕೆಂದರೆ, ನಮ್ಮ ನಾಯಕರುಗಳಿಗೆ ಕನ್ನಡಕ್ಕೆ, ಕರ್ನಾಟಕಕ್ಕೆ ಏನಾದರೂ ಮಾಡಬೇಕೆಂಬ ಬಯಕೆ ಇಲ್ಲ. ಇವರದು ಕೇವಲ ಸ್ವಾರ್ಥ. ಇವರಿಗೆ ಪ್ರಾದೇಶಿಕ ಪಕ್ಷವನ್ನು ಕಟ್ಟುವ ಬಗ್ಗೆಯಾಗಲೀ, ಅದರ ರೂಪರೇಖೆಗಳಾಗಲೀ ಗೊತ್ತಿಲ್ಲ. ಅದನ್ನು ಸರಿಯಾಗಿ ಬೆಳೆಸಿ ಅಧಿಕಾರಕ್ಕೆ ತರವ ಬಗ್ಗೆ ಯಾವುದೇ ಕನಸಾಗಲೀ, ದೂರದೃಷ್ಟಿಯಾಗಲೀ ಇಲ್ಲ. ಇವರಿಗೆ ಈಗಲೇ ಅಧಿಕಾರ ಸಿಗಬೇಕು. ಅಷ್ಟೇ. ಇವರಿಗೆ ಕೇವಲ ಅಧಿಕಾರ ಮೋಹ. ಅಧಿಕಾರಕ್ಕೆ ಏನು ಬೇಕಾದರೂ ಮಾಡುತ್ತಾರೆ. ಇವರಿಗೆ ಮೊದಲು ನಾನು, ನನ್ನದು ಎಂಬದರ ಚಿಂತೆ. ರಾಜ್ಯದ ಬಗ್ಗೆ ಇವರಿಗೆ ಯಾವುದೇ ಪ್ರೀತಿಯಾಗಲೀ ಇಲ್ಲ. ಅಧಿಕಾರಕ್ಕೆ ಬರುವ ತನಕ ಕನ್ನಡ/ಕರ್ನಾಟಕದ ಬಗ್ಗೆ ಮಾತನಾಡುತ್ತಾರೆ. ಒಮ್ಮೆ ಅಧಿಕಾರ ಸಿಕ್ಕ ಕೂಡಲೇ ಕನ್ನಡ/ಕರ್ನಾಟಕ ಎರಡನ್ನೂ ಮರೆತು ತಮ್ಮ ಸ್ವಂತ ಅಭಿವೃದ್ದಿಯ ಬಗ್ಗೆ ಗಮನ ಕೊಡುತ್ತಾರೆ. ಇದು ಈ ರಾಜ್ಯದ ಸಾಮಾನ್ಯ ಪ್ರಜೆಯ ಅನುಮಾನ.

ಇಂದು ಒಂದು ಹೊಸ ಪಕ್ಷವನ್ನು ಕಟ್ಟಿ ಅಧಿಕಾರಕ್ಕೆ ತರುವುದು ಸುಲಭವಾದ ಮಾತೇನೂ ಅಲ್ಲ. ನಮ್ಮ ರಾಜ್ಯದಲ್ಲಿ ಅದು ಬಹಳ ಕಷ್ಟ. ಕರ್ನಾಟಕದಲ್ಲಿ ಮೊದಲಿಂದಲೂ ಜಾತಿ ರಾಜಕಾರಣವೇ ಹೆಚ್ಚು. ಯಾರಿಗೆ ಜಾತಿಯ ಬಲವಿದೆಯೋ ಅವರೇ ಗೆಲ್ಲುವುದು. ಇಲ್ಲಿ ಜಾತಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಂತರದ ಸ್ಥಾನ ಹಣ. ಮೂರನೆಯದು ಮಠಾಧೀಶರದು. ಇದು ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಮತ್ತೊಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಮ್ಮ ರಾಜ್ಯದಲ್ಲಿ ವೀರಶೈವರು ಜಾತಿಯ ಲೆಕ್ಕಾಚಾರದಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಒಕ್ಕಲಿಗರಿಗೆ ಎರಡನೆಯ ಸ್ಥಾನ,  ಹೀಗೆ ಮುಂದುವರೆಯುತ್ತದೆ.

ಯಾರೇ ಪಕ್ಷವನ್ನು ಹೊಸದಾಗಿ ಹುಟ್ಟು ಹಾಕಿದರೂ ಒಂದು ಸಿದ್ದಾಂತ, ಗುರಿ ಮತ್ತು ತಾಳ್ಮೆ ಅತ್ಯವಶ್ಯಕ. ಈ ಗುಣಗಳಿಲ್ಲದ್ದಿದ್ದರೆ ಆ ಪಕ್ಷಕ್ಕೆ ಆಯಸ್ಸು ಬಹಳ ಕಡಿಮೆ. ಈಗ ಹೆಚ್ಚಿನ ರಾಜಕಾರಣಿಗಳ ಗುರಿ ನಮ್ಮ ಪಕ್ಷವನ್ನು ಇಂದೇ ಸ್ಥಾಪಿಸಿ ನಾಳೆಯೇ ಅಧಿಕಾರಕ್ಕೆ ತರಬೇಕೆನ್ನುವುದು. ಅತಿ ಹೆಚ್ಚು ದುಡ್ಡು ಮಾಡುವುದೇ ಸಿದ್ದಾಂತ. ಅದಿಕಾರಕ್ಕೆ ಏನು ಬೇಕಾದರೂ ಮಾಡಲು ತಯಾರು. ಹೀಗಿದ್ದರೆ ಯಾವ ಪಕ್ಷವೂ ಉದ್ದಾರವಾಗುವುದಿಲ್ಲ.  ಆದಕಾರಣದಿಂದ ಪಕ್ಷವನ್ನು ಮೊದಲು ಸರಿಯಾದ ಗುರಿ, ಸಿದ್ದಾಂತಗಳಿಗೆ ಅನುಗುಣವಾಗಿ ಪಕ್ಷವನ್ನು ಬೆಳೆಸಬೇಕಾದ ನಾಯಕ ನಿರಬೇಕಾಗಿರುವುದು ಇಂದು ಅತ್ಯಂತ ಅವಶ್ಯಕ. ಕನ್ನಡಿಗರಿಗೆ ಯಾವುದೊ ಪ್ರಾದೇಶಿಕ ಪಕ್ಷವೆಂಬ ಹೆಸರಿಟ್ಟುಕೊಂಡು ಬಂದರೆ ಅದು ಬೇಕಿಲ್ಲ. ಅದನ್ನು ಸ್ವೀಕರಿಸಲು ಅವರ ಮನ ಒಪ್ಪುವುದಿಲ್ಲ. ಆ ಪ್ರಾದೇಶಿಕ ಪಕ್ಷವು ಕನ್ನಡದ ಮನಸ್ಸುಳ್ಳ ಮತ್ತು ಕರ್ನಾಟಕದ ಏಳಿಗೆಗೆ ಕಂಕಣ ಬದ್ದವಾಗಿರಬೇಕಾಗುತ್ತದೆ. ಇಲ್ಲದಿದ್ದರೆ ಅದೂ ಮತ್ತೊಂದು ರಾಜಕೀಯ ಪಕ್ಷವಂತಾಗುತ್ತದೆ ಅಷ್ಟೇ.                         (ಮಿಕ್ಕಿದ್ದು ನಾಳೆಗೆ)         


Friday, 23 March 2012

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು: ( ಭಾಗ-೧)


ಪ್ರತಿ ರಾಜ್ಯವೂ ರಸಗೊಬ್ಬರ, ಕಲ್ಲಿದ್ದಲು, ವಿದ್ಯುತ್, ಅಡುಗೆ ಅನಿಲ, ರೈಲು ಸಂಪರ್ಕ ಹೀಗೆ ಹತ್ತು ಹಲವು ಕಾರಣಗಳಿಗಾಗಿ ಕೇಂದ್ರ ಸರ್ಕಾರದೆ ಮುಂದೆ ಕೈ ಚಾಚಬೇಕಾಗುತ್ತದೆ. ಕೆಂದ್ರದಲ್ಲಿ ಯಾವ ಪಕ್ಷ ಅಧಿಕಾರದಲ್ಲಿರುತ್ತದೆಯೋ, ಅದೇ ಪಕ್ಷ ರಾಜ್ಯದಲ್ಲಿದ್ದರೆ ಹೆಚ್ಚಿನ ಸೌಲಭ್ಯ ಸಿಗುತ್ತದೆ. ಇಲ್ಲದಿದ್ದರೆ ಎಲ್ಲದಕ್ಕೂ ಕೈ ಚಾಚಿ ಅವರ ಮುಂದೆ ನಡು ಬಾಗಿಸಿ ಕೂಡಬೇಕು. ಇಂತಹ ಪರಿಸ್ಥಿತಿ ಬರಬಾರದೆಂದರೆ ಪ್ರಾದೇಶಿಕ ಪಕ್ಷವೇ ಮದ್ದು. ಇದನ್ನು ನಮ್ಮ ದೇಶದ ಕೆಲವು ರಾಜ್ಯಗಳು ಚೆನ್ನಾಗಿ ಅರ್ಥ ಮಾಡಿಕೊಂಡಿವೆ. ನಾವು ಇದನ್ನು ಅರ್ಥ ಮಾಡಿಕೊಂಡಿಲ್ಲ ಅಷ್ಟೇ.

ನಮ್ಮ ದೇಶದಲ್ಲಿ ಸಮ್ಮಿಶ್ರ ಸರ್ಕಾರದ ಆಡಳಿತ ಶುರುವಾಗಿ ದಶಕಗಳೇ ಉರುಳಿವೆ. ಕೇಂದ್ರದಲ್ಲಿ ಕಾಂಗ್ರೆಸ್, ಬಿ.ಜೆ.ಪಿ ಮತ್ತು ತೃತೀಯ ರಂಗದ ನೇತೃತ್ವದ ಆಡಳಿತವನ್ನು ಪ್ರಜೆಗಳು ಕಂಡಿದ್ದಾರೆ. ಇನ್ನು ಮುಂದೆಯೂ ಒಂದೇ ಪಕ್ಷದ ಆಡಳಿತ ಕೇಂದ್ರದಲ್ಲಿ ಬರುವುದೆ ಕಷ್ಟವೇನೋ? ಪರಿಸ್ಥಿತಿ ಹೀಗಿರಬೇಕಾದರೆ ಪ್ರಾದೇಶಿಕ ಪಕ್ಷಗಳಿಗೆ ಕೇಂದ್ರದಲ್ಲಿ ಹೆಚ್ಚಿನ ಮರ್ಯಾದೆ, ಪ್ರಾಶಸ್ತ್ಯ. ಯಾವ ಪ್ರಾದೇಶಿಕ ಪಕ್ಷ ಹೆಚ್ಚಿನ ಲೋಕಸಭಾ ಸ್ಥಾನಗಳನ್ನು ರಾಜ್ಯದಲ್ಲಿ ಗೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಪಕ್ಷಕ್ಕೆ/ಗುಂಪಿಗೆ ಬೆಂಬಲ ಸೂಚಿಸುತ್ತದೆಯೋ ಆ ಪ್ರಾದೇಶಿಕ ಪಕ್ಷಕ್ಕೆ ರಾಜ ಮರ್ಯಾದೆ. ಕನ್ನಡಿಗರ ಕನಸು ಶುರುವಾಗುವುದು ಇಲ್ಲೆಂದಲೇ.  ಕರ್ನಾಟಕದಲ್ಲಿ ಒಂದು ಪ್ರಾದೇಶಿಕ ಪಕ್ಷವೊಂದು ಹುಟ್ಟಿ ರಾಜ್ಯದಲ್ಲಿ ಅಧಿಕಾರಾಕ್ಕೆ ಬಂದು, ಹೆಚ್ಚಿನ ಲೋಕಸಭಾ ಸ್ಥಾನಗಳನ್ನು(೨೦-೨೮) ಗೆದ್ದು ಕೆಂದ್ರದಲ್ಲಿ ನಮ್ಮನ್ನು ಗಮನಿಸುವಂತೆ ಮಾಡುವುದು.

ನಮ್ಮ ರಾಜ್ಯದ ಪ್ರಜೆಗಳು ಕಾಂಗ್ರೆಸ್, ಜನತಾ ಪಕ್ಷ, ಜನತಾ ದಳ ಮತ್ತು ಬಾ.ಜ.ಪ ಆಡಳಿತವನ್ನು ಕಂಡಿದ್ದಾರೆ. ಇವೆಲ್ಲವೂ ರಾಷ್ಟೀಯ ಪಕ್ಷಗಳು. ರಾಜ್ಯದ ಕನ್ನಡಿಗರಿಗೆ ಒಂದು ಆಸೆ ನಮ್ಮದೇ ಪ್ರಾದೇಶಿಕ ಪಕ್ಷದ ಆಡಳಿತವನ್ನೂ ನೋಡೋಣ. ಪ್ರಾದೇಶಿಕ ಪಕ್ಷದ ಆಡಳಿತದಲ್ಲಿ  ಕೆಲವು ರಾಜ್ಯಗಳುಅಭಿವೃದ್ದಿ ಹೊಂದಿವೆ.  ಆ ರಾಜ್ಯಗಳ ಅಭಿವೃದ್ದಿ ಅವನಿಗೆ ಹೀಗೊಂದು ಆಸೆ ಹುಟ್ಟಿಸಿದೆ. ಪ್ರಾದೇಶಿಕ ಪಕ್ಷವೊಂದಿದದ್ದರೆ ನಮಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ಪಡೆದುಕೊಳ್ಳಬಹುದು. ನಮ್ಮ ಮಾತು ಕೇಂದ್ರದಲ್ಲಿ ನಡೆಯುತ್ತದೆ. ಅನಿಲ, ರೈಲು ಸಂಪರ್ಕ, ರಸಗೊಬ್ಬರ, ವಿದ್ಯುತ್ ಹೀಗೆ ಸಕಲ ಸೌಲಭ್ಯಗಳಿಗೆ ಹೆಚ್ಚು ಪರದಾಡಬೇಕಿಲ್ಲ ಎಂಬ ಆಸೆ.                                                 

ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಪ್ರಾದೇಶಿಕ ಪಕ್ಷವೇ ಅಧಿಕಾರಕ್ಕೆ ಬಂದಿದೆ.  ಹಾಗೆ ನೋಡಿದರೆ ಇಡೀ ಭಾರತಧಲ್ಲಿ ಸುಮಾರು ೨೦೦೦ ದಿಂದೀಚೆಗೆ ಪ್ರಾದೇಶಿಕ ಪಕ್ಷದ ಮಹತ್ವ ಹೆಚ್ಚುಹೆಚ್ಚಾಗಿ ಕಾಣಿಸುತ್ತಿದೆ. ನಮ್ಮೆ ನೆರೆಯ ತಮಿಳುನಾಡಿನಲ್ಲಿ ದಶಕಗಳಿಂದಲೂ ಪ್ರಾದೇಶಿಕ ಪಕ್ಷವೇ ಅಧಿಕಾರಕ್ಕೆ ಬರುತ್ತಿದೆ. ಆಂದ್ರಪ್ರದೇಶದಲ್ಲಿ ತೆಲುಗು ದೇಶಂ ಪಕ್ಷವು ಅಧಿಕಾರದ ರುಚಿ ನೋಡಿದೆ. ಬಿಹಾರ, ಅಸ್ಸಾಂ, ಕಾಶ್ಮೀರ, ಒಡಿಶಾ, ಪಕ್ಷಿಮ ಬಂಗಾಲ ಹೀಗೆ ಹಲವು ರಾಜ್ಯಗಳು ಪ್ರಾದೇಶಿಕ ಪಕ್ಷದ ಆಳ್ವಿಕೆಗೆ ಬರುತ್ತಿವೆ. ಕೆಲವು ರಾಜ್ಯಗಳು ಅಭಿವೃದ್ದಿ ಪಥದಲ್ಲಿ ನಿಜವಾಗಲೂ ಮುಂದುವರೆಯುತ್ತಿವೆ.     (ಮಿಕ್ಕಿದ್ದು ನಾಳೆಗೆ)  

 

Saturday, 17 March 2012

ಮಲ್ಟಿಪ್ಲೆಕ್ಸ್/ಪಿ.ವಿ.ಆರ್.ಮಾಲ್ ನಲ್ಲಿ ಕನ್ನಡ ಚಿತ್ರಗಳು:

ಇತ್ತೀಚೆಗೆ ನಟಿ ತಾರ ಅವರನ್ನು  ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆಯನ್ನಾಗಿ ಸರ್ಕಾರ ನೇಮಿಸಿದೆ. ಅವರಿಗೆ ಮೊದಲು ಅಭಿನಂದನೆಗಳು. ಅವರು ಕನ್ನಡ ಚಿತ್ರರಂಗದ ಒಳಹೊರಗನ್ನು ಚೆನ್ನಾಗಿ ಬಲ್ಲವರು ಮತ್ತು ಕನ್ನಡ ಚಿತ್ರರಂಗದ ಬಗ್ಗೆ ಕಾಳಜಿ ಮತ್ತು ಅಭಿಮಾನ ಹೊಂದಿರುವವರು. ಕನ್ನಡ ಚಿತ್ರರಂಗದ ಸಮಸ್ಯೆಗಳನ್ನು ಚೆನ್ನಾಗಿ ಅರಿತಿರುವಂತಹವರು. ಅವರು ಅಧಿಕಾರ ಸ್ವೀಕಾರ ಮಾಡಿದ ನಂತರ ಅವರು ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರಪ್ರದರ್ಶನದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ಅವುಗಳಲ್ಲಿ ಶೇ.೫೦ ರಷ್ಟನ್ನು ಕನ್ನಡ ಚಿತ್ರಗಳಿಗಾಗಿ ಮೀಸಲಿಡುವಂತೆ ಮಾಡಲಾಗುವುದು ಎಂದು ಹೇಳಿರುವರು. ಇದು ನಿಜವಾಗಲೂ ಒಂದು ಒಳ್ಳೆಯ ನಿರ್ದಾರ. (ಅವರು ಇದರಲ್ಲಿ ಎಷ್ಟು ಯಶಸ್ವಿಯಾಗುತ್ತಾರೋ ಕಾಲವೇ ನಿರ್ಣಯಿಸಬೇಕು.)  ಈಗಿನ ಮಾಲ್/ಮಲ್ಟಿಪ್ಲೆಕ್ಸ್/ಪಿ.ವಿ.ಆರ್ ಗಳಲ್ಲಿ ಕನ್ನಡ ಚಿತ್ರವು ಕೇವಲ ೩-೪ ಪರದೆಯಲ್ಲಿ, ಕೇವಲ ೨-೩ ಪ್ರದರ್ಶನ ಮಾತ್ರ ಕಾಣುತ್ತಿದೆ. (ಮಲ್ಟಿಪ್ಲೆಕ್ಸ್/ಪಿ.ವಿ.ಆರ್ ಮೊದಮೊದಲು ನಮ್ಮ ನಗರದಲ್ಲಿ ಶುರುವಾದಾಗ ಅದರಲ್ಲಿ ಕನ್ನಡ ಚಿತ್ರಗಳಿಗೆ ಮೊದಲ ಅದ್ಯತೆಯನ್ನು ಕೊಡದಿದ್ದರೆ ಅದರ ಪರವಾನಗಿಯನ್ನು ರದ್ದು ಪಡಿಸುವೆವು ಎಂದು ಸರ್ಕಾರ ತಿಳಿಸಿತ್ತು. ಪಾಪ, ಅದಕ್ಕೆ ಈಗ ಜಾಣ ಕುರುಡು )  ಉಳಿದ ೮-೧೦ ಪರದೆಗಳಲ್ಲಿ ಪರಭಾಷಾಚಿತ್ರಗಳದ್ದೇ ಹಾವಳಿ. ಕರ್ನಾಟಕದ ಬಿಡಿ ಚಿತ್ರಮಂದಿರಗಳದ್ದೂ ಇದೇ ಸಮಸ್ಯೆ. ಕರ್ನಾಟಕದಲ್ಲಿರುವ ಸುಮಾರು ೬೫೦ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವ ಚಿತ್ರಮಂದಿರಗಳು ಸುಮಾರು ೩೫೦-೪೦೦ ಇರಬಹುದು, ಉಳಿದವುಗಳಲ್ಲಿ ಮತ್ತದೇ ಪರಭಾಷಾ ಚಿತ್ರಗಳು. ಇದರ ಬಗ್ಗೆಯೂ ಸರಿಯಾದ ನಿರ್ಣಯಗಳನ್ನು ತಾರ ಅವರು ತೆಗೆದುಕೊಳ್ಳಲಿ. ಇಡೀ ಭಾರತದಲ್ಲಿ ಒಂದು ವರ್ಷ ಪ್ರದರ್ಶನ ಕಂಡಿರುವ ಚಿತ್ರಗಳು ಕೇವಲ ಕನ್ನಡ ಚಿತ್ರಗಳು ಎಂಬ ದಾಖಲೆ ಈಗಲೂ ಇದೆ. ಆದರೊ ಮಲ್ಟಿಪ್ಲೆಕ್ಸ್/ಪಿ.ವಿ.ಆರ್/ಮಾಲ್ ಗಳವರಿಗೆ ಏನೋ ಪೊಗರು.

ಸರ್ಕಾರ/ನಿರ್ಮಾಪಕರು ಚಿತ್ರಮಂದಿರದ ಸಮಸ್ಯೆಗಳಿಗೆ ಏನು ಮಾಡಬಹುದು?

ವರ್ಷ ಪೂರ್ತಿ ನಾಲ್ಕು ಪ್ರದರ್ಶನವೂ ಕೇವಲ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವ ಚಿತ್ರಮಂದಿರಗಳಿಗೆ :-
* ಉಚಿತ ವಿದ್ಯುತ್ ಮತ್ತು ನೀರು ಸರಬರಾಜು ಮಾಡಬಹುದು.
* ಆಸ್ತಿ ತೆರಿಗೆಯನ್ನು ರದ್ದುಗೊಳಿಸಬಹುದು.

ಮಿಕ್ಕಂತೆ:-

* ಬೆಂಗಳೂರು ನಗರ ಅಭಿವೃದ್ದಿ ಪ್ರಾಧಿಕಾರ ನಿರ್ಮಿಸುವ ಪ್ರತಿ ಬಡಾವಣೆಯಲ್ಲಿ ಕನಿಷ್ಟ ಎರಡು ಚಿತ್ರಮಂದಿರಗಳನ್ನು ನಿರ್ಮಿಸಿ ಅವುಗಳನ್ನು ಕನ್ನಡ ಚಿತ್ರಗಳಿಗೆ ಮಾತ್ರ ಮೀಸಲಿಡಬಹುದು. 
* ಸರ್ಕಾರದ ಶಂಕರ್ ನಾಗ್ ಮತ್ತು ಪುಟ್ಟಣ್ಣ ಚಿತ್ರಮಂದಿರಗಳಲ್ಲಿ ಕೇವಲ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವುದು.
 ಸರ್ಕಾರವೇ ಪ್ರತಿ ಜಿಲ್ಲೆ/ತಾಲ್ಲೂಕು ಗಳಲ್ಲಿ ೫೦೦ ಜನ ಕುಳಿತುಕೊಳ್ಳಬಹುದಾದ ಕನಿಷ್ಟ ಎರಡು ಚಿತ್ರಮಂದಿರಗಳನ್ನು ನಿರ್ಮಿಸಿ, ಅದನ್ನು ಕನ್ನಡ ಚಿತ್ರಗಳಿಗೆ ಮಾತ್ರ ಮೀಸಲಿಡಬಹುದು.
* ಪಿವಿಆರ್/ಮಲ್ಟಿಪ್ಲೆಕ್ಸ್ ಮುಂತಾದ ಮಾಲ್ ಗಳಲ್ಲಿನ ಚಿತ್ರಮಂದಿರಗಳಲ್ಲಿ ಶೇ.೫೦% ರಷ್ಟನ್ನು ಕನ್ನಡ ಚಿತ್ರಗಳಿಗೆ ಮೀಸಲಿಡಬೇಕೆಂಬ ಕಾನೂನು ಜಾರಿಗೊಳಿಸಬಹುದು.  ಇಲ್ಲದಿದ್ದರೆ ಅವುಗಳ ಪರವಾನಗಿಯನ್ನು ರದ್ದುಗೊಳಿಸಬಹುದು.
* ಸರ್ಕಾರ ಖಾಸಗಿಯವರಿಂದ ಚಿತ್ರಮಂದಿರವನ್ನು ೧೦/೨೦ ವರ್ಷಕ್ಕೆ ಲೀಸ್ ತೆಗೆದುಕೊಂಡು ಅದನ್ನು ಕನ್ನಡ ಚಿತ್ರಗಳಿಗೆ ಮೀಸಲಿಡಬಹುದು.
* ಎಲ್ಲಾ ಚಿತ್ರಮಂದಿರಗಳಲ್ಲಿ ೨ ಪ್ರದರ್ಶನವನ್ನು ಕೇವಲ ಕನ್ನಡ ಚಿತ್ರಗಳಿಗೆ ಮೀಸಲಿಡಬಹುದು.
* ಸರ್ಕಾರ ಸಾರ್ವಜಿನಿಕರ ಸಹಭಾಗಿತ್ವದಲ್ಲಿ ಚಿತ್ರಮಂದಿರಗಳನ್ನು ನಿರ್ಮಿಸಿ ಅದನ್ನು ಕನ್ನಡ ಚಿತ್ರಗಳಿಗಾಗಿ ಮೀಸಿಲಿಡಬಹುದು.
* ಸರ್ಕಾರ ಮತ್ತು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಲಿಯ ಸಹಭಾಗಿತ್ವದಲ್ಲಿ ಚಿತ್ರಮಂದಿರವನ್ನು ನಿರ್ಮಾಣ ಮಾಡಿ ಅದನ್ನು ಕೇವಲ ಕನ್ನಡ ಚಿತ್ರಗಳಿಗಾಗಿ ಮೀಸಲಿಡಬಹುದು.

ನಿರ್ಮಾಪಕರು:

* ಕನ್ನಡ ಚಿತ್ರ ನಿರ್ಮಾಪಕರೇ ನಗರ/ತಾಲೂಕು/ಜಿಲ್ಲಾ ಮಟ್ಟದಲ್ಲಿ ಚಿತ್ರಮಂದಿರಗಳನ್ನು ನಿರ್ಮಿಸಿ ಅದರಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವುದು. (ರಾಕ್ ಲೈನ್, ಕುಮಾರ ಸ್ವಾಮಿ, ಶಿವಣ್ಣ ಮುಂತಾದವರು ಈಗಾಗಲೇ ಇಂತಹ ಪ್ರಯತ್ನದಲ್ಲಿದ್ದಾರೆ), ದ್ವಾರಕೀಶ್, ಕೊಬ್ರಿ ಮಂಜು, ಉಪೇಂದ್ರ, ರವಿಚಂದ್ರನ್, ರಾಮು, ಮುನಿರತ್ನ ಮುಂತಾದವರು ಈ ಪ್ರಯತ್ನ ಮಾಡಬಹುದು. ಅವರಿಗೆ ಅದು ಒಂದು ಆಸ್ತಿಯಂತಾಗುತ್ತದೆ.
* ನಿರ್ಮಾಪಕರು ನಗರದ/ತಾಲ್ಲೂಕು/ಜಿಲ್ಲಾ ಮಟ್ಟದಲ್ಲಿ ಕೆಲವು ಚಿತ್ರಮಂದಿರಗಳನ್ನು ಲೀಸ್ ಮುಖಾಂತರ ತೆಗೆದುಕೊಳ್ಳಬಹುದು.

Tuesday, 13 March 2012

ಕನ್ನಡದ ವಾರ್ತಾವಾಹಿನಿಗಳು:


ಕನ್ನಡದಲ್ಲಿ  ವಾರ್ತೆಗಳು ಅಂದಾಕ್ಷಣ ಸರ್ಕಾರದ ದೂರದರ್ಶನವನ್ನೇ ಕನ್ನಡಿಗರು ಮೊದಲು ಅವಂಲಬಿಂಸಬೇಕಾಗಿತ್ತು.  ಅದೂ ೨೦ ನಿಮಿಷ ಮಾತ್ರ. ನಂತರ ವಾಹಿನಿಗಳ ಭರಾಟೆ ಶುರುವಾದಾಗ ಕನ್ನಡದಲ್ಲಿ ಮೊದಲು ವಾರ್ತೆಗಳನ್ನು ೨೪ ಗಂಟೆ ತಂದವರು ಉದಯಾ ಟಿ.ವಿಯವರು, "ಉದಯಾ ವಾರ್ತೆಗಳು" ಮುಖಾಂತರ. ವಾರ್ತೆಗಳಿಗಾಗಿಯೇ ಒಂದು ವಾಹಿನಿ ಕನ್ನಡಿಗರಿಗೆ ಹೊಸದು, ಅದೂ ೨೪ ಗಂಟೆಗಳು. ಮೊದಲಿಗೆ ಇದರ ಬಗ್ಗೆ ಕನ್ನಡಿಗರಿಗೆ ಕುತೂಹಲ ಇತ್ತು.  ಉದಯಾ ವಾರ್ತೆಗಳು ಕನ್ನಡದಲ್ಲಿ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡಲಿಲ್ಲ ಮತ್ತು ಜನಪ್ರಿಯತೆಯನ್ನೂ ಗಳಿಸಲಾಗಲಿಲ್ಲ.  ನಂತರ ಬಂದವರು ಟಿ.ವಿ.೯. ಇದು ಕನ್ನಡಿಗರಿಗೆ ಪರಿಚಯವಾಗಿ ೫ ವರ್ಷಗಳು ಕಳೆದಿವೆ. ಈ ವಾಹಿನಿ ೨೪ ಗಂಟೆಗಳೂ ಸುದ್ದಿ ಕೊಡುವೆವು ಎಂದು ಬಂದಾಗ ಕನ್ನಡಿಗರು ಇದರ ಬಗ್ಗೆ ಮೊದಮೊದಲು ಉತ್ಸಾಹ ತೋರಲಿಲ್ಲ. ಆದರೆ ಟಿ.ವಿ.೯ ಅವರು ವಾರ್ತೆಗಳ ಜೊತೆಗೆ ಮನೋರಂಜನೆಯನ್ನೂ ಸ್ವಲ್ಪ ಬಡಿಸಿ ಹೊಸ ಪ್ರಯತ್ನವನ್ನು ಜಾರಿಗೆ ತಂದರು. ಅದರ ಜೊತೆಜೊತೆಗೆ ಸಮಾಜದಲ್ಲಿ ನಡೆಯುವ ಬ್ರಷ್ಟಾಚಾರ, ಮೂಢನಂಬಿಕೆ, ಭವಿಷ್ಯ, ಲೇಡೀಸ್ ಕ್ಲಬ್,  ಆಹಾರದಲ್ಲಿ ಕಲಬೆರೆಕೆ ಮುಂತಾದ ವಿಷಯದ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮನೆಮಾತಾದರು. ಇಡೀ ಭಾರತದಲ್ಲಿ ವಾರ್ತಾವಾಹಿನಿಯೊಂದು ೫೨.೬೯ (ಇತೀಚಿನ ಹೊಸ ರೇಟಿಂಗ್) ಟಿ.ಆರ್.ಪಿ ಗಳಿಸಿ ಸುದ್ದಿಯಾಯಿತು. ಇದರ ನಡುವೆ ಸುವರ್ಣ ೨೪ x ೭ ಎಂಬ ಮತ್ತೊಂದು ವಾರ್ತಾ ವಾಹಿನಿಯೊಂದು ಶುರುವಾಯಿತು. ಇದೂ ಸಹ ಟಿ.ವಿ.೯ ರವರಂತೆಯೇ ವಾರ್ತೆಗಳ ಜೊತೆ ಮನೋರಂಜನೆ, ಬ್ರಷ್ಟಾಚಾರ, ಮೂಢನಂಬಿಕೆ, ಭವಿಷ್ಯ, ಸುಹಾಸಿನಿ, ಆಹಾರದಲ್ಲಿ ಕಲಬೆರೆಕೆ ಮುಂತಾದ ವಿಷಯದ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮನೆಮಾತಾಯಿತು.  ಟಿ.ವಿ. ೯ ಅವರು ಮಾಧ್ಯಮ ಕ್ಷೇತ್ರಕ್ಕೆ ಕೊಡುವ ರಾಮನಾಥ ಗೋಯಂಕಾ ಪ್ರಶಸ್ತಿಯನ್ನು ಕಳೆದ ೨ ವರ್ಷರ್ಗಳಿಂದ ಪಡೆದುಕೊಳ್ಳುತ್ತಿದ್ದಾರೆ. ಜನ ತಮ್ಮತಮ್ಮಲ್ಲಿ ಮಾತನಾಡಿಕೊಳ್ಳುವ ವಿಷಯ ಬಂದಾಗ ಟಿ.ವಿ. ೯ ಮತ್ತು ಸುವರ್ಣ ನ್ಯೂಸ್ ವಿಷಯ ಬಂದುಹೋಗುತಿತ್ತು. ಹಾಗಿತ್ತು ಅವರ ಜನಪ್ರಿಯತೆ. ಈಗ ಜನರಿಗೆ ಸ್ವಲ್ಪ ಬೇಜಾರಾಗಿದೆ. ತೋರಿಸುವುದನ್ನೇ ತೋರಿಸುತ್ತಾರೆ  ಮತ್ತು ಪರಭಾಷಾ ಚಿತ್ರಗಳ ಬಗ್ಗೆ ಅನಗತ್ಯ ಪ್ರಚಾರ ಮತ್ತು ವಿಪರೀತ ವ್ಯಾಮೋಹ. ಈಗ ಹೇಗಾಗಿದೆ ಪರಿಸ್ಠಿತಿ ಎಂದರೆ ಅದರಲ್ಲಿ ಬರುವ ಸುದ್ದಿ ಇದರಲ್ಲಿ, ಇದರಲ್ಲಿ ಬರುವ ಸುದ್ದಿ ಅದರಲ್ಲಿ ಎಂಬಂತಾಗಿದೆ. ಎರಡಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಈಗಲಾದರೂ ಅವರು ಎಚ್ಚೆತ್ತುಕೊಳ್ಳಬೇಕು. ಈಗ ಹೊಸದಾಗಿ "ಸಮಯ", "ಜನಶ್ರೀ" "ಕಸ್ತೂರಿ ನ್ಯೂಸ್", ಪಬ್ಲಿಕ್ ಟಿ.ವಿ ಎಂಬ ನಾಲ್ಕು ವಾರ್ತಾವಾಹಿನಿಗಳು ಪ್ರಾರಂಭವಾಗಿವೆ. ಕಳೆದ ತಿಂಗಳಲ್ಲಿ ಬಂದ ಪತ್ರಕರ್ತನೊಬ್ಬನ ಮೇಲ್ವಿಚಾರಣೆಯಲ್ಲಿ ನಡೆಯುತ್ತಿರುವ ಪಬ್ಳಿಕ್ ಟಿ.ವಿ.ಯ ಬಗ್ಗೆ ಜನರಲ್ಲಿ ಕುತೂಹಲ ಇದೆ.
ಕನ್ನಡ ವಾಹಿನಿಗಳ ಪರಭಾಷಾ ಮೋಹ:
ಇತ್ತೀಚೆಗೆ ಟಿ.ವಿ.೯ ಮತ್ತು ಸುವರ್ಣ ನ್ಯೂಸ್ ನಲ್ಲಿ  ಇತ್ತೀಚೆಗೆ ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್ ಚಿತ್ರಗಳ ಬಗ್ಗೆ ಮತ್ತು ಅದರಲ್ಲಿ ನಟಿಸುವ ನಟ, ನಟಿಯರ ಬಗ್ಗೆ ಬಹಳಷ್ಟು ವಿಚಾರಗಳು ಬರುತ್ತಿವೆ. ಉದಾ: ಮಗಧೀರನ ನಿಶ್ಚಿತಾರ್ಥ, ಜೂ.ಎನ್.ಟಿ.ಆರ್.ಕಲ್ಯಾಣ, ಬಿಸಿನೆಸ್ ಚಿತ್ರದ ಮೇಕಿಂಗ್  ಮತ್ತು ಕಲೆಕ್ಷನ್, ಚಿರಂಜೀವಿ ಮತ್ತು ಬಾಲಕೃಷ್ಣ ಗಲಾಟೆ, ಕೊಲವರಿ ಸಮಾಚಾರ, ಅಗ್ನಿಪಥ್ ಮೇಕಿಂಗ್, ರಚ್ಚನ ಆರ್ಭಟ ಹೀಗೆ ಅನೇಕ ವಿಚಾರಗಳು. ಸುವರ್ಣ ನ್ಯೂಸ್ ಅವರೇನು ಕಮ್ಮಿಯಿಲ್ಲ. ಇದರಲ್ಲೂ ಸಹ ಪರಭಾಷಾ ಚಿತ್ರಗಳ ಪ್ರಚಾರದಲ್ಲಿ ಎತ್ತಿದ ಕೈ. ಅವರ "ಸಿನಿಮಾ ಹಂಗಾಮ" ಕಾರ್ಯಕ್ರಮದಲ್ಲಿ ಕನ್ನಡದ ಚಿತ್ರಗಳಿಗಿಂತಾ ಪರಭಾಷಾ ಚಿತ್ರಗಳ ಬಗ್ಗೆ ಸುದ್ದಿ ಬಹಳ ಬರುತ್ತಿದೆ. ಇದೆಲ್ಲಾ ನಮಗೇಕೆ. ಅದೂ ಕನ್ನಡದ ವಾಹಿನಿಗಳಲ್ಲಿ.  ಬೇರೆ ಭಾಷಾ ಚಿತ್ರಗಳ ಬಗ್ಗೆ ಯಾರಿಗೆ ತಿಳಿದುಕೊಳ್ಳೂವ ಅಸಕ್ತಿ ಇದೆಯೋ ಅವರು ಆ ವಾಹಿನಿಗಳನ್ನು ನೊಡುತ್ತಾರೆ. ನಮ್ಮ ಭಾಷೆಯ ಚಿತ್ರಗಳ ಬಗ್ಗೆ ಬೇರೆ ಭಾಷಾ ವಾಹಿನಿಯವರು ಎನೂ ತೋರಿಸುವುದಿಲ್ಲ ಅಲ್ಲವೇ? ನೀವು ಯಾಕೆ ಆ ಚಿತ್ರಗಳ ಬಗ್ಗೆ ಇಲ್ಲಿ ಪ್ರಸಾರ ಮಾಡಬೇಕು? ಕನ್ನಡದ ವಾಹಿನಿಗಳು ಎಂದೆಂದೂ ಕನ್ನಡವಾಗಿರಲಿ.  ಕನ್ನಡದಲ್ಲಿ ಪರಭಾಷಾ ಚಿತ್ರಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಾ ಅವರನ್ನು ಯಾಕೆ ಕೊಂಡಾಡುತ್ತೀರಾ? ಆಂಧ್ರ/ತಮಿಳುನಾಡು/ಮಹರಾಷ್ಟ್ರಗಳಲ್ಲಿ ಅವರದೇ ಆದ ಪ್ರತ್ಯೇಕ ವಾಹಿನಿಗಳಿವೆ. ಆ ವಾಹಿನಿಗಳಲ್ಲಿ ಅವರು ಅವರ ಭಾಷೆಯ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಾರೆ. ಅವರ ಚಿತ್ರಗಳಿಗೆ ಪ್ರಚಾರ ಕೊಡುತ್ತಾರೆ. ಅವರು ಬಳಸಿ ಬಿಸಾಕಿದ್ದನ್ನು ಕನ್ನಡಿಗರಿಗೆ ಪಂಚಭಕ್ಷ ಪರಮಾನವೆಂದು ಯಾಕೆ ಉಣಬಡಿಸುತ್ತೀರ? ಈ ತಂಗಳನ್ನು ತಿನ್ನಲು ಕನ್ನಡಿಗರಿಗೇನು ಕರ್ಮ? ನಿಮ್ಮ ಕಾರ್ಯಕ್ರಮಗಳನ್ನು ನೋಡುವವರು ಕರ್ನಾಟಕದಲ್ಲಿರುವ ಕನ್ನಡಿಗರು ಎಂಬುದು ನಿಮಗೆ ನೆನಪಿರಲಿ. ಹೊರ ರಾಜ್ಯ/ದೇಶದಲ್ಲಿ ನಿಮ್ಮ ವಾಹಿನಿಯು ಬರುತ್ತಿದ್ದರೆ ಅದನ್ನು ನೋಡುವುದು ಸಹಾ ನಮ್ಮ ಕನ್ನಡಿಗರೇ ತಿಳಿಯಿರಿ. ಈ ಎರಡು ವಾಹಿನಿಗಳು ಕನ್ನಡಿಗರ ಗಂಟಲೊಳಗೆ ಬಿಸಿ ಕಡುಬನ್ನು ಬಲವಂತವಾಗಿ ತಳ್ಳುತ್ತಿದೆ. ಇದನ್ನು ನುಂಗುವುದೋ ಬಿಡುವುದೋ ಗೊತ್ತಾಗದೆ ಕನ್ನಡಿಗರು ಕಣ್ಣು ಬಾಯಿ ಬಿಡುವಂತಾಗಿದೆ.
ನನ್ನ ಫೇಸ್ ಬುಕ್ ಬರಹ:
ಸುವರ್ಣ  ನ್ಯೂಸ್ ೨೪ X ೭ ನವರಿಗೆ ತಾವು ಪ್ರಾಯೋಜಿಸಿದ "ಕೊಲವರಿ ಮೇನಿಯಾ (?) ಇನ್ ಬೆಂಗಳೂರು" ಕಾರ್ಯಕ್ರಮದ ಬಗ್ಗೆ ಅದೇನೋ ಮೋಹ, ಯಾಕೆ ಅಂತ ಗೊತ್ತಿಲ್ಲ. ಅದನ್ನು ವಾರಕ್ಕೊಮ್ಮೆ ಅದನ್ನು ಪುನಃ ಪುನಃ ಪ್ರಸಾರ ಮಾಡಿ ನಮಗೆ ಬಲವಂತದ ಮಾಘಸ್ನಾನವನ್ನು ಮಾಡಿಸುತ್ತಿದ್ದಾರೆ. ಅವರಿಗೆ ಯಾರು ಹೇಳಿದ್ದಾರೋ ಗೊತ್ತಿಲ್ಲ ಕನ್ನಡಿಗರಿಗೆ ಅದನ್ನು ವಾರಕ್ಕೊಮ್ಮೆ ನೋಡದಿದ್ದರೆ ಊಟ, ನಿದ್ದೆ ಬರುವುದಿಲ್ಲ ಎಂದು. ವಿಶ್ವೇಶ್ವರ ಭಟ್ ಅವರೇ ನಿಮಗೆ ನಿಮ್ಮ ಕಾರ್ಯಕ್ರಮ ಅಷ್ಟು ಇಷ್ಟವಾಗಿದ್ದರೆ ನೀವು ಅದನ್ನು ಸಿ.ಡಿ ಮಾಡಿಸಿಕೊಂಡು ನಿಮ್ಮ ಮನೆಯಲ್ಲಿ/ಕಛೇರಿಯಲ್ಲಿ ಅಷ್ಟೇ ಯಾಕೆ ನಿಮ್ಮ ಸ್ನಾನದ ಮನೆಯಲ್ಲೂ ದಿನದ ೨೪ ಗಂಟೆಯೂ ೩೬೫ ದಿನವೂ ವೀಕ್ಷಿಸಿ. ಯಾರೂ ಬೇಡವೆನ್ನುವುದಿಲ್ಲ. ನೀವು ಕನ್ನಡದ ವಾಹಿನಿಯವರಾಗಿ ಆ ಕಾರ್ಯಕ್ರಮವನ್ನು ಪ್ರಾಯೋಜಿಸಿರುವುದೇ ಮಹಾಪರಾಧ ಮತ್ತು ನೀವು ಕನ್ನಡಿಗರಿಗೆ ಮಾಡಿರುವ ದ್ರೋಹ. ನೀವು ಇನ್ನೂ ಒಂದು ಕೆಲಸ ಮಾಡಬಹುದು. ಅದರ ೬ ಕೋಟಿ ಸಿ.ಡಿ ಮಾಡಿ ಕನ್ನಡಿಗರ ಮನೆಮನೆಗೆ ರಮ್ಯಾ, ರಾಗಿಣಿ, ಯೋಗಿ ಮುಖಾಂತರ ತಲುಪಿಸಿದರೆ ನಾವು ಅದನ್ನು ಮಹಾ ಪ್ರಸಾದ ಅಂತ ಸ್ವೀಕರಿಸಿ ದೇವರಮನೆಯಲ್ಲಿಟ್ಟು ದಿನವೂ ಪೂಜೆ ಮಾಡಿ ಬೆಳಗ್ಗೆ ಎದ್ದ ತಕ್ಷಣ ಮೊದಲು ಅದನ್ನು ನೋಡಿ, ಕೇಳಿ ದಿನವನ್ನು ಪ್ರಾರಂಭಿಸುತ್ತೇವೆ. ಇಂಥ ಹುಚ್ಚು ಅಭಿಮಾನವನ್ನು ಕಂಡು ಧನುಷ್ ಅವರಿಗೆ ಮಾತೇ ಬತುತಿಲ್ಲವಂತೆ. ಜೈ,ಕನ್ನಡಾಂಬೆ.

Saturday, 10 March 2012

ಐ.ಎ.ಎಸ್ ಮತ್ತು ಐ,ಪಿ.ಎಸ್:

ಸಚಿವೆ ಶೋಭಾ ಅವರು "ಕರ್ನಾಟಕದಲ್ಲಿ ಐ.ಪಿ.ಎಸ್ ಮತ್ತು ಐ.ಎ.ಎಸ್ ಅದಿಕಾರಿಗಳಲ್ಲಿ ಕನ್ನಡಿಗರು ಬೆರೆಳೆಣಿಕೆಯಷ್ಟಿದ್ದರೆ ಅನ್ಯಭಾಷಿಕರು ೮೦% ರಷ್ಟು ಹೊರ ರಾಜ್ಯದವರಾಗಿದ್ದಾರೆ. ಅನ್ಯ ರಾಜ್ಯದವರಿಗೆ ಭಾಷಾ ಸಮಸ್ಯೆ ಇದೆ. ಹೀಗಿರುವಾಗ ಅವರು ಜನಸಾಮಾನ್ಯರಿಗೆ ಹೇಗೆ ಸ್ಪಂದಿಸುತ್ತಾರೆ  ಇದನ್ನು ಅರಿತು ವಿದ್ಯಾರ್ಥಿ ದೆಸೆಯಲ್ಲಿ ಗುರಿ ಇಟ್ಟು ಕೊಂಡು ಐ..ಎ.ಎಸ್ ಮತ್ತು ಐ.ಪಿ.ಎಸ್ ಸ್ಥಾನಗಳನ್ನು ಕರ್ನಾಟಕದವರು ತುಂಬಬೇಕು" ಎಂದು ಇತ್ತೀಚಿನ ಒಂದು ಸಮಾರಂಭದಲ್ಲಿ ಹೇಳಿರುತ್ತಾರೆ. ಇದು ಖಂಡಿತಾ ಒಂದು ಒಳ್ಳೆಯ ಸಲಹೆ, ನಮ್ಮ ಕನ್ನಡದ ಮಕ್ಕಳಿಗೆ. ಕನ್ನಡಿಗರು ಕೇವಲ ಬೆರೆಳೆಣಿಕೆಯಷ್ಟು ಮಂದಿ ಮಾತ್ರ ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುತ್ತಾರೆ. ಪರಭಾಷಿಕರು ಇದರಲ್ಲಿ ಯಾವಾಗಲೂ ಮುಂದಿರುತ್ತಾರೆ. ನಮ್ಮ ಕನ್ನಡಿಗರು ಇದರಲ್ಲಿ ಉತೀರ್ಣರಾಗಿ ನಮ್ಮ ರಾಜ್ಯಕ್ಕೆ ಸೇವೆ ಸಲ್ಲಿಸಲು ಉತ್ತಮ ಅವಕಾಶ. ಹೀಗಾದಾಗ ಆಡಳಿತದಲ್ಲಿ ಕನ್ನಡವನ್ನು ಸರಿಯಾಗಿ ಜಾರಿಗೆ ತರಲು ಸಹಕಾರಿಯಾಗುತ್ತದೆ ಮತ್ತು ಜನರ ಕಷ್ಟಗಳನ್ನು ಸರಿಯಾಗಿ ಅದಿಕಾರಿಗಳು ಅರ್ಥ ಮಾಡಿಕೊಳ್ಲಲು ಅವರಿಗೆ ಸಹಕಾರಿಯಾಗುತ್ತದೆ. ನಮ್ಮ ಕರ್ನಾಟಕದಲ್ಲಿ ದೊಡ್ಡ ದೊಡ್ಡ ಸರಕಾರಿ ಅಧಿಕಾರಿಗಳು ಪರಭಾಷಿಕರೇ ಆಗಿದ್ದಾರೆ. ಅವರಲ್ಲಿ ಕೇವಲ ಒಂದಿಬ್ಬರು ಮಾತ್ರ ಕನ್ನಡ ಕಲಿತು ಕನ್ನಡದಲ್ಲಿ ಜನರ ಹತ್ತಿರ ಉತ್ತಮವಾಗಿ ವ್ಯವಹರಿಸುತ್ತಾರೆ. (ಉದಾ.ಪಂಜಾಬ್ ರಾಜ್ಯದವರಾದ ಚಿರಂಜೀವಿ ಸಿಂಗ್ ಇಲ್ಲಿ ಬಂದು ಕನ್ನಡವನ್ನು ಕಲಿತು ಜನಸಾಮಾನ್ಯರ ಜೊತೆ ಕನ್ನಡದಲ್ಲಿ ವ್ಯವಹರಿಸಿ ಅವರ ಕಷ್ಟಗಳಿಗೆ ಸ್ಪಂದಿಸಿರುತ್ತಾರೆ.)
ಅನ್ಯ ರಾಜ್ಯದ ಅಧಿಕಾರಿಗಳ ಜೊತೆ ಜನರಿಗೆ ಅವರ ಸಮಸ್ಯೆಯನ್ನು ಹೇಳಿಕೊಳ್ಳುವುದು ಬಹಳ ಕಷ್ಟವಾಗುತ್ತದೆ. ಪೋಷಕರು ತಮ್ಮ ತಮ್ಮ ಮಕ್ಕಳನ್ನು ಈ ಪರೀಕ್ಷೆಗಳಿಗೆ ಸಜ್ಜುಗೊಳಿಸಬಹುದು. ನಮ್ಮ  ಮಕ್ಕಳು ಕೇವಲ ಡಾಕ್ಟರ್ ಮತ್ತು ಇಂಜಿನಿಯರ್ ಆದರೆ ಸಾಕೆಂದು ಹೆಚ್ಚಿನ ಜನ ಯೋಚಿಸುತ್ತಾರೆ. ಇದರ ಬಗ್ಗೆ ಯೋಚಿಸುವವರು ಬಹಳ ಕಮ್ಮಿ. ನಮ್ಮ ಭಾರತದ ಬಿಹಾರ್, ಪಂಜಾಬ್ ಮತ್ತು ತಮಿಳುನಾಡಿನ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಐ.ಎ.ಎಸ್,ಐ.ಪಿ.ಎಸ್ ಅಧಿಕಾರಿಗಳಾಗಿ ಇಡೀ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಕನ್ನಡದ ಮಕ್ಕಳೂ ಇದರಲ್ಲಿ ಮುಂದುವರೆಯಲು ಯೋಚಿಸಬಹುದು.

Wednesday, 7 March 2012

ವಿಶ್ವ ಮಹಿಳಾ ದಿನ

ಮಾರ್ಚ್ ೮ ವಿಶ್ವ ಮಹಿಳಾ ದಿನ. ಸಮಸ್ತ ಮಹಿಳಾ ಕುಲಕೋಟಿಗೆ ನಮ್ಮ ಅಭಿನಂದನೆಗಳು. ನಿಮ್ಮ ಪ್ರೀತಿ, ವಾತ್ಸಲ್ಯ, ತ್ಯಾಗ, ದೈರ್ಯ, ಸ್ವಾಭಿಮಾನಗಳಿಗೆ ನಿಮಗೆ ನೀವೇ ಸಾಟಿ. ಅದಕ್ಕೆ ತಾನೆ ನಿಮ್ಮನ್ನು ಕುರಿತು ಹೇಳಿರುವುದು "ಎಲ್ಲರ ಮನೆಯಲ್ಲೂ ದೇವರು ಇರದ ಕಾರಣ ಪ್ರತಿಯೊಬ್ಬರ ಮನೆಯಲ್ಲೂ ತಾಯಂದಿರು ಇರುವುದು" ಎಂದು. ನಿಮ್ಮನ್ನು ಕೇವಲ ಒಂದು ದಿನಕ್ಕೆ ಸ್ತೀಮಿತಗೊಳಿಸದೆ ವರ್ಷದ ೩೬೫ ದಿನವೂ ನಿಮ್ಮದೇ. ಈ ದಿನೆ ಕೇವಲ ಒಂದು ಆಚರಣೆಗಾಗಿ ಮಾತ್ರ. ನೀವಿಲ್ಲದೆ ಯಾವ ಮನೆಯೂ ಬೆಳಗುವುದಿಲ್ಲ. ತಾಯಿಯಾಗಿ, ಅಕ್ಕನಾಗಿ, ತಂಗಿಗಾಗಿ, ಸ್ನೇಹಿತೆಯಾಗಿ, ಹೆಂಡತಿಯಾಗಿ, ಅತ್ತೆಯಾಗಿ, ಅಜ್ಜಿಯಾಗಿ ನಿಮ್ಮ ಪ್ರೀತಿ, ವಿಶ್ವಾಸಗಳನ್ನು ಗಳಿಸಿದವರು ನಾವೆಂಬುದು ನಮಗೆ ಹೆಮ್ಮೆ.
ಕೇವಲ ನಮ್ಮ ಮನೆಯ ಹೆಣ್ಣು ಮಕ್ಕಳು ಮಾತ್ರ ಸುಖ, ಸಂತೋಷ, ನೆಮ್ಮದಿಯಿಂದ ಇರಬೇಕು ಎಂಬ ಭಾವನೆ ಬಿಟ್ಟು, ಈ ಜಗತ್ತಿನ ಪ್ರೆತಿಯೊಂದು ಹೆಣ್ಣುಮಗುವೂ ಸುಖ, ಸಂತೋಷ ಮತ್ತು ನೆಮ್ಮದಿಯಿಂದ ಇರುವೆಂತೆ ಈ ಸಮಾಜ, ಪರಿಸರ ನಡೆದುಕೊಂಡರೆ ಸಾಕು. ಇದು ನಾವು ನಿಮಗೆ ನೀಡುವ ಗೌರವ ಅಂತ ನನ್ನ ಭಾವನೆ. ಬಾಳಿನ ಪ್ರತಿಯೊಂದು ಹಂತದಲ್ಲಿ ನಿಮ್ಮ ಕಾಣಿಕೆ ಇಲ್ಲದಿದ್ದರೆ ನಾವು ಎನಾಗುತ್ತಿದ್ದೆವೋ ಎಂದು ಊಹಿಸಿಕೊಳ್ಳುವುದೂ ಕಷ್ಟ. ಪ್ರತಿಯೊಂದು ಹೆಣ್ಣು ಕಲಿತರೆ ಶಾಲೆ ತೆರೆದಂತೆ ಎಂದು ದೊಡ್ಡವರು ಹೇಳಿರುವುದು ಎಷ್ಟು ಸತ್ಯ. ಹಾಗೆಯೆ ಒಲಿದರೆ ನಾರಿ, ಮುನಿದರೆ ಮಾರಿ, ಕೆರಳಿದರೆ ಹೆಮ್ಮಾರಿ  ಎಂಬುದೂ ಸರಿ. ಈ ಸಮಾಜದಲ್ಲಿ ಸ್ವಲ್ಪ ಮಾರಿ, ಹೆಮ್ಮಾರಿಯಾಗೂ ಕೆಲವು ಸಲ ನಡೆದುಕೊಳ್ಳಬೇಕಾಗುತ್ತದೆ. ತಾಯಿಯೇ ಮಗುವಿಗೆ ಮೊದಲ ಗುರು. ಪ್ರತಿಯೊಬ್ಬ ಮನುಷ್ಯನೊ ತನ್ನ ತಾಯಿಗೆ ಕೊಡುವ ಗೌರವ, ಪ್ರೀತಿಯನ್ನು ಬೇರಾರಿಗೂ ಕೊಡಲಾರ.
ಈ ಸಮಾಜವು ನಿಮ್ಮನ್ನು ಅನೇಕಬಾರಿ ಕೆಟ್ಟದಾಗೂ ನಡೆಸಿಕೊಂಡಿದೆ. ನಿಮ್ಮ ಮೇಲೆ ಅತ್ಯಾಚಾರ ಅನಾಚಾರಗಳಿಗೂ ಕೊನೆಯಿಲ್ಲ. ಇದು ಯಾಕೆ ಹೀಗಾಗುತ್ತಿದೆ. ಪ್ರತಿಯೊಬ್ಬ ಗಂಡಸೂ ಅವರ ಮನೆಯ ಹೆಣ್ಣು ಮಕ್ಕಳ ಮೇಲೆ ತೋರುವ ಕಾಳಜಿ ಬೇರೆ ಹೆಣ್ಣು ಮಕ್ಕಳ ಮೇಲೆ ಯಾಕೆ ತೋರುವುದಿಲ್ಲ?  ಇದಕ್ಕೆ ಸರಿಯಾದ ಶಿಕ್ಷಣದ ಕೊರತೆಯೆ? ಇಲ್ಲಾ ಸಿನಿಮಾ/ಟಿ.ವಿಗಳ ಹಾವಳಿಯೆ? ಇದನ್ನು ಪ್ರಜ್ನಾವಂತರು ತಿಳಿಹೇಳಬೇಕು. ನಿಮಗೆ ಮತ್ತೊಮ್ಮೆ ಶುಭಾಷಯಗಳು ಮತ್ತು ನಿಮಗೆ ನಮ್ಮ ಅನಂತ ನಮಸ್ಕಾರಗಳು.

 

Tuesday, 6 March 2012

ಕನ್ನಡದ ಮೊದಲ 3D ಪತ್ರಿಕೆ

ಕನ್ನಡದ ಮುದ್ರಣ ಪ್ರಪಂಚದಲ್ಲಿ ೩ನೇ ಮಾರ್ಚ್ ೨೦೧೨ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನವೆಂದರೆ ಯಾರು ತಪ್ಪಾಗಿ ಭಾವಿಸಲಾರರೆಂದು ನನ್ನ ಅನಿಸಿಕೆ.  ಆ ದಿನ ಕನ್ನಡದ ರೊಪತಾರ ಸಿನಿ ಪತ್ರಿಕೆ ಕನ್ನಡದಲ್ಲಿ ಇದುವರೆವಿಗೂ ಯಾರೂ ಮಾಡಲಾರದಂತ ಸಾಹಸವನ್ನು ಬಹಳ ಯಶಸ್ವಿಯಾಗಿ ಸದ್ದಿಲ್ಲದೆ ಮಾಡಿ ಮುಗಿಸಿದೆ. ಅದು ಸುಲಭದ ಕೆಲಸವಲ್ಲ. ಅದಕ್ಕೆ ತುಂಬಾ ಶ್ರಮ ಅಗತ್ಯ ಮತ್ತು ಅದು ಬಹಳ ಹಣ ಬೇಡುವ ಕೆಲಸವೂ ಹೌದು. ಕನ್ನಡದ ಓದುಗರನ್ನು ನಂಬಿ ಇಂತಹ ಸಾಹಸ ಮಾಡುವುದು ಸುಲಭದ ಮಾತಲ್ಲ.  ಕನ್ನಡಿಗರು ಸ್ವಂತದ ಹಣ ಖರ್ಚು ಮಾಡಿ ಕನ್ನಡದ ಪತ್ರಿಕೆಗಳನ್ನು ಓದುವುದು ಕಡಿಮೆ ಎಂಬುದು ಎಲ್ಲರಿಗೂ ತಿಳಿದ ಸತ್ಯ. ಅಂತಹದರಲ್ಲಿ ಇವರ ಪ್ರಯತ್ನ ಸ್ವಾಗತಾರ್ಹ. ಅದನ್ನು ಅವರು ಕೇವಲ ೨೦ ರೂಪಾಯಿಗಳಲ್ಲಿ ಕನ್ನಡಿಗರಿಗೆ ಒದಗಿಸಿರುವುದು ಅವರ ಹೆಗ್ಗುರುತು. ನಾನು  ನನ್ನ ಫೇಸ್ ಬುಕ್ ನಲ್ಲಿ "ನಾನು ಈಗ ತಾನೆ 3D ರೂಪತಾರ ತೆಗೆದುಕೊಂಡೆ. ನಿಜವಾಗಲೂ ಸೂಪರ್. ಕನ್ನಡಿಗರ ಪ್ರತಿಯೊಬ್ಬರ ಮನೆಯಲ್ಲೂ ಇದು ಇರಬೇಕು. ಇಲ್ಲದಿದ್ದರೆ ಅವರು ನಿಜವಾಗಲೂ ಕನ್ನಡಿಗರಾಗಲು ಅರ್ಹರಲ್ಲ ಎಂದು ನನ್ನ ಭಾವನೆ. ನಾನು ಎಷ್ಟು ರೋಮಾಂಚನ ಆಗಿದ್ದೇನೆಂದರೆ ನನಗೆ ಬರೆಯಲು ಪದಗಳೇ ಸಿಗುತ್ತಿಲ್ಲ. ಕ್ಷಮಿಸಿ." ಎಂದು ಬರೆದು ಅಂಟಿಸಿದ್ದೆ. ಅದನ್ನು ಮೆಚ್ಚಿದವರು ಕೆಲವರಾದರೆ, ಕೆಲವರಿಗೆ ನಾನು ಬರೆದಿದ್ದು ಇಷ್ಟವಾಗಲಿಲ್ಲ.  ನಾನು ಬಳಸಿದ ಶಬ್ದ ಅತಿರೇಕವಾಯಿತು ಎಂದು ಅವರ ಅನಿಸಿಕೆ. ನಾನು ಬರೆದು ಅದನ್ನು ಫ಼ೇಸ್ ಬುಕ್ ಮೇಲೆ ಅಂಟಿಸಿದ ಮೇಲೆ ನನಗೂ ಹಾಗೆ ಆನ್ನಿಸಿತು. ನಾನು ಅದನ್ನು ಉದ್ದೇಶಪೂರ್ವಕವಾಗಿ ಬಳಸಿಲ್ಲ. ಅದರಿಂದ ಕೆಲವರ ಮನಸ್ಸಿಗೆ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ. ಕನ್ನಡದಲ್ಲಿ ಯಾರಾದರೂ ಇಂತಹ ಹೊಸ ಪ್ರಯತ್ನ ಮಾಡಿದರೆ ನಾವು ಕನ್ನಡಿಗರು ಅವರನ್ನು ಪ್ರೋತ್ಸಾಹಿಸಕಾದದ್ದು ನಮ್ಮ ಆದ್ಯ ಕರ್ತವ್ಯ ಎಂದು ನನ್ನ ಭಾವನೆ. ಇಲ್ಲದಿದ್ದರೆ ಅದರಿಂದ ಮೊದಲು ನಷ್ಟವಾಗುವುದು ಕನ್ನಡಿಗರಿಗೇ ಎಂದು ನಾನು ಬಲವಾಗಿ ನಂಬಿದ್ದೇನೆ. ಇಂತಹ ಪ್ರಯತ್ನ ಭಾರತ ದೇಶದಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ನಡೆದಿದೆ. ಅದರಲ್ಲಿ ಕನ್ನಡವೂ ಒಂದು ಎಂಬುದು ನಮ್ಮ ಕನ್ನಡಿಗರಿಗೆ ಹೆಮ್ಮೆ ತರುವ ವಿಷಯ. ಇದನ್ನು ಹೊರತಂದ ರೂಪತಾರ ಬಳಗಕ್ಕೆ ವಂದನೆಗಳು. ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ.

Saturday, 3 March 2012

ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳ ಸಮಸ್ಯೆಗಳು:

ಕನ್ನಡ ಚಿತ್ರರಂಗದ ಮುಖ್ಯ ಸಮಸ್ಯೆ ಎಂದರೆ  ಕನ್ನಡ ಚಿತ್ರಗಳನ್ನು ಪ್ರದರ್ಶಿಸುವುದಕ್ಕೆ ಚಿತ್ರಮಂದಿರಗಳಿಲ್ಲ ಎಂಬ ಕೂಗು. ಇದು ಈಗ ಮಾತ್ರವೇ ಅಲ್ಲ. ಡಾ.ರಾಜ್ ಕುಮಾರ್ ಅವರ ಕಾಲದಿಂದಲೂ ಇದೇ ಸಮಸ್ಯೆ. ಈಗಲೂ ಇದೇ ಸಮಸ್ಯೆ. ಇಂದು ಕನ್ನಡ ಚಿತ್ರಕ್ಕೆ ನಮ್ಮ ರಾಜ್ಯದಲ್ಲಿ ನಾವೇ ಹೊಡೆದಾಡಬೇಕಾದ ಪರಿಸ್ಥಿತಿ ಬಂದಿರುವುದಕ್ಕೆ ಎನು ಕಾರಣ?  ಚಿತ್ರರಂಗದ ಒಳಹೊರಗು ಬಲ್ಲ ಚಿತ್ರರಂಗದ ಉದ್ಯಮದವರೇ ಇದಕ್ಕೆ ಕಾರಣ.  ಚಿತ್ರದ ನಿರ್ಮಾಕರಿಗೆ/ಹಂಚಿಕೆದಾರರಿಗೆ ಮತ್ತು ನಟರಿಗೆ ಕೆಂಪೇಗೌಡ ರಸ್ತೆಯಲ್ಲಿ ಚಿತ್ರಮಂದಿರ ಸಿಕ್ಕಿದರೆ ಸಾಕು, ಬೇರೆಲ್ಲಿಯೂ ಬೇಡ. ಬೆಂಗಳೂರು ಎಂದರೆ ಕೇವಲ ಕೆಂಪೇಗೌಡ ರಸ್ತೆ ಮಾತ್ರವೇ? ಇಲ್ಲಿ ಮಾತ್ರ ಕನ್ನಡ ಚಿತ್ರ ನಡೆಯತ್ತದೆಯೇ? ಬೇರೆಲ್ಲಿಯೂ ನಡೆಯವುದಿಲ್ಲವೇ? ಹಾಗಾಗಲು ಯಾರು ಕಾರಣ, ನೀವೆ ಅಲ್ಲವೇ. ಕರ್ನಾಟಕದಲ್ಲಿ ಇರುವುದು ಕೇವಲ ೬೫೦ ಚಿತ್ರಮಂದಿರಗಳು. ಇದರಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವ ಚಿತ್ರಮಂದಿರಗಳ ಸಂಖ್ಹೆ ಸುಮಾರು ೪೦೦ ಇರಬಹುದು.  ಉಳಿದ ೨೫೦  ಚಿತ್ರಮಂದಿರಗಳು ಪರಭಾಷಾ ಚಿತ್ರಗಳಿಗೆ ಮೀಸಲು. ಹೀಗಿರುವಾಗ ನಮ್ಮ ಕನ್ನಡ ಚಿತ್ರಗಳನ್ನು ೧೦೦೦ ಚಿತ್ರಮಂದಿರಗಳಲ್ಲಿ ಪ್ರದರ್ಶಿಸುವುದು ಯಾವಾಗ? ಮೊದಲು ಈಗಿರುವ ಕನ್ನಡ ಚಿತ್ರ ಪ್ರದರ್ಶಿಸುವ ಚಿತ್ರಮಂದಿರಗಳ ಸಂಖ್ಯೆಯನ್ನು ಕನಿಷ್ಟ ೬೦೦ಕ್ಕೆ ಹೆಚ್ಚು ಮಾಡಿಕೊಳ್ಳುವುದು. ಕರ್ನಾಟಕಾದ್ಯಂತ ಚಿಕ್ಕ ಚಿಕ್ಕ ಚಿತ್ರಮಂದಿರಗಳನ್ನು ಸ್ಥಾಪಿಸುವುದು. ಇದು ನಮ್ಮ ಕನ್ನಡ ಚಿತ್ರನಿರ್ಮಾಪಕರು ಮನಸ್ಸು ಮಾಡಿದರೆ ಕಷ್ಟವೇನಾಗಲಾರದು.
೮೦-೯೦ರ ಇಸವಿಯಲ್ಲಿ ಕನ್ನಡ ೫೦-೬೦, ತೆಲುಗು/ತಮಿಳು ಚಿತ್ರಗಳು ೨೦೦ ರಿಂದ ೩೦೦ ಮತ್ತು ಹಿಂದಿ ಚಿತ್ರಗಳು ೫೦೦ ಚಿತ್ರಮಂದಿರಗಳಲ್ಲಿ ಪ್ರದರ್ಶಿತವಾಗುತ್ತಿದ್ದವು.  ಈಗ ಕನ್ನಡ ೧೦೦-೧೫೦,ತೆಲುಗು ೨೦೦೦, ತಮಿಳು ೩೦೦೦್ ಮತ್ತು ಹಿಂದಿ ಚಿತ್ರಗಳು  ೫೦೦೦ ಚಿತ್ರಗಳು ವಿಶ್ವಾದಾದ್ಯಂತ ಪ್ರದರ್ಶಿತವಾಗುತ್ತಿವೆ. ಕೇವಲ ೨೦ವರ್ಷಗಳಲ್ಲಿ ಎಂತಹ ಬದಲಾವಣೆ. ಅವರಿಗೆ ಇದು ಹೇಗೆ ಸಾಧ್ಯವಾಯಿತು. ನಮಗೇಕೆ ಇದು ಸಾಧ್ಯವಾಗುತ್ತಿಲ್ಲ? ಮಾರುಕಟ್ಟೆಯನ್ನು ವಿಸ್ತರಿಸುವುದನ್ನು ನೀವುಗಳು ಕಲಿಯುವುದು ಯಾವಾಗ? ಇಂದು ಪ್ರಪಂಚವೇ ಒಂದು ಹಳ್ಳಿಯಂತೆ ಕಾಣುತ್ತಿದೆ. ಆದರೆ ನೀವುಗಳು ಮಾತ್ರ ಮಾರುಕಟ್ಟೆಯನ್ನು ವಿಸ್ತರಿಸುವುದನ್ನು ಬಿಟ್ಟು ಕನ್ನಡ ಚಿತ್ರಗಳನ್ನು ನೋಡುವವರೇ ಇಲ್ಲ ಎಂದು ಹಳೇ ಪುರಾಣವನ್ನೇ ಊದುವಿರಲ್ಲ. ಮಾರುಕಟ್ಟೆ ತಾನಾಗೆ ಹುಡುಕಿಕೊಂಡು ಬರುವುದಿಲ್ಲ. ಅದನ್ನು ನೀವು ಹುಡುಕಿಕೊಂಡು ಹೋಗಬೇಕು. ಬರೀ ಒಳ್ಳೆಯ ಚಿತ್ರಗಳನ್ನು ತೆಗೆಯುವುದು ಮಾತ್ರ ಸಾಕಾಗುವುದಿಲ್ಲ. ಅದನ್ನು ಸರಿಯಾಗಿ, ಸರಿಯಾದ ಸಮಯದಲ್ಲಿ ಎಲ್ಲಾ ಕಡೆ ಎಲ್ಲಾ ಜನರಿಗೆ ತಲುಪಿಸುವುದು ಬಹಳ ಮುಖ್ಯ   ಇಲ್ಲದಿದ್ದರೆ ನಮ್ಮ ಮಾರುಕಟ್ಟೆ ಯನ್ನು ಬೇರೆಯವರಿಗೆ ಬಿಟ್ಟು ಕೊಡಬೇಕಾಗಬಹುದು. ಹೇಗೆ ಪ್ರಚಾರ ಮಾಡಬೇಕೆಂಬುದನ್ನು ಯಾವುದಾದರೊ ಪ್ರಚಾರ ಮಾಡುವ ಸಂಸ್ಥೆಗೆ ವಹಿಸಿ. ಚಿತ್ರದ ವಿವರಗಳನ್ನು ಫ಼ೇಸ್ ಬುಕ್/ಟ್ವಿಟ್ಟರ್/ಯುಟ್ಯೂಬ್/ಮೊಬೈಲ್ ಮುಖಾಂತರ ಪ್ರಚಾರಪಡಿಸಿ. ಬಸ್ ಟಿಕೀಟುಗಳು/ರೈಲ್ವೆ ಟಿಕೀಟುಗಳು ಎಲ್ಲಾಕಡೆ ಆನ್ ಲೈನ್ ನಲ್ಲಿ ಸಿಗುವ ಹಾಗೆ ನಿಮ್ಮ ಚಿತ್ರದ ಟಿಕೀಟುಗಳು ಎಲ್ಲಾಕಡೆ ಸಿಗುವ ಹಾಗೆ ನೋಡಿಕೊಳ್ಳಿ. ಹೀಗೆ ಮಾಡುವ ಮುಖಾಂತರ ಚಿತ್ರಮಂದಿರಕ್ಕೆ ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸಬಹುದು.
ಬೆಂಗಳೂರಿನ ಎಲ್ಲಾ ಬಡಾವಣೆಯಲ್ಲೂ ಕನ್ನಡಿಗರಿದ್ದಾರೆ. ಈಗ ಬೆಂಗಳೂರು ಎಲ್ಲಾ ಕಡೆ ಬೆಳೆದಿದೆ. ಎಷ್ಟೊ ಕಡೆ ಚಿತ್ರಮಂದಿರಗಳೇ ಇಲ್ಲ. ಇದ್ದರೆ ಅಲ್ಲಿ  ಬೇರೆ ಭಾಷಾ ಚಿತ್ರಗಳು ನಡೆಯತ್ತವೆ. ಕನ್ನಡ ಚಿತ್ರ ಅಲ್ಲಿ ಪ್ರದರ್ಶಿತ ವಾಗುವುದಿಲ್ಲ. ಅಲ್ಲಿರುವ ಜನಗಳು ವಿಧಿ ಇಲ್ಲದೆ ಬೇರೆ ಚಿತ್ರಗಳನ್ನು ನೋಡುತ್ತಾರೆ. ನೀವು ಅಲ್ಲೆಲ್ಲಾ ಯಾಕೆ ಪ್ರದರ್ಶಿಸುವುದಿಲ್ಲ. ಅದೇ ರೀತಿ ಕನ್ನಡ ಚಿತ್ರಗಳನ್ನು ರಾಜ್ಯದ ಉದ್ದಗಲಕ್ಕೂ ಪ್ರದರ್ಶಿಸಿ. ಕರ್ನಾಟಕದ ಯಾವುದೇ ಹಳ್ಳಿ, ತಾಲ್ಲೂಕು, ಜಿಲ್ಲೆ ಬಿಡಬೇಡಿ. ಬೆಂಗಳೂರಿನಲ್ಲಿ ಬಿಡುಗಡೆಯಾದ ದಿನವೇ ಇಲ್ಲಿಯೂ ಬಿಡುಗಡೆಯಾಗಬೇಕು. ಕನ್ನಡ ಚಿತ್ರಗಳನ್ನು ತೆಲುಗು/ತಮಿಳು/ಮಲೆಯಾಳಂ/ಗುಜರಾತಿ/ಒರಿಯಾ/ಭೋಜಪುರಿ/ಬಂಗಾಲಿ/ಹಿಂದಿ ಹೀಗೆ ಬೇರೆ ಬೇರ ಭಾಷೆಗಳಿಗೆ ಡಬ್ ಮಾಡಿ ಆ ರಾಜ್ಯಗಳಲ್ಲಿ ಪ್ರಚರ್ಶಿಸಿ ಮಾರುಕಟ್ಟೆಯನ್ನು  ವಿಸ್ತರಿಸಬಹುದು. ಅಲ್ಲದೇ ಕನ್ನಡ ಚಿತ್ರಗಳನ್ನು ಹೊಸೂರು, ಕೃಷ್ಣಗಿರಿ, ಸೇಲಂ, ಮಧುರೈ,  ಚೆನ್ನೈ, ಅನಂತಪುರ, ಹಿಂದುಪುರ, ಹೈದರಾಬಾದ್, ವಿಜಯವಾಡ, ತಿರುಪತಿ, ಮುಂಬೈ, ಪುಣೆ, ಸೊಲ್ಲಾಪುರ, ಗೋವಾ, ಕಾಸರಗೋಡು, ಕೊಚ್ಚಿನ್ ಅಲ್ಲದೇ ವಿದೇಶಗಳಾದ ಅಮೇರಿಕ, ಬ್ರಿಟನ್, ಸಿಂಗಪುರ, ಮಲೇಶಿಯಾ, ಆಸ್ಟ್ರೆಲಿಯಾ, ನ್ಯೂಜಿಲೆಂಡ್, ದುಬೈ ,ಜಪಾನ್, ಜರ್ಮನಿ ಇಲ್ಲೆಲ್ಲಾ ಬಿಡುಗಡೆ ಮಾಡಬಹುದು. ಇಲ್ಲೆಲ್ಲಾ ಲಕ್ಷಗಟ್ಟಲೆ ಕನ್ನಡಿಗರಿದ್ದಾರೆ ನೆನಪಿಡಿ. ಪುನೀತ್ ಅವರ ಎಲ್ಲಾ ಚಿತ್ರಗಳು ಇಲ್ಲೆಲ್ಲಾ ಬಿಡುಗಡೆಯಾಗಿ ಯಶಸ್ವಿಯಾಗಿರುತ್ತದೆ. ಉಳಿದವರದು ಯಾಕಿಲ್ಲ? ಕೇವಲ ಕೆಲವೇ ಕೆಲವು ಕನ್ನಡ ಚಿತ್ರಗಳು ಹೊರ ರಾಜ್ಯ/ದೇಶಗಳಲ್ಲಿ ಬಿಡುಗಡೆ ಯಾದರೆ ಸಾಲದು. ಎಲ್ಲಾ ಕನ್ನಡ ಚಿತ್ರಗಳೂ ಬಿಡುಗಡೆಯಾಗಬೇಕು. ಅಗ ನಮ್ಮ ಮಾರುಕಟ್ಟೆ ವಿಸ್ತಾರವಾಗಿ ನಾವೂ ಸಹ ೧೦೦ ಕೋಟಿ ಬಂಡವಾಳ ಹೂಡಬಹುದು. ಚಿತ್ರಗಳನ್ನು ೨೦-೩೦ ಕೋಟಿ ಖರ್ಚು ಮಾಡಿ ತೆಗೆಯುತ್ತೀರ, ಆದರೆ ಅದರ ಪ್ರತಿಗಳು ಕೇವಲ ೨೦ ರಿಂದ ೩೦ರ ಮೇಲೆ ಹೋಗುವುದಿಲ್ಲ. ಚಿತ್ರಗಳ ಪ್ರತಿಗಳು ೨೦೦ ರಿಂದ ೩೦೦ರಷ್ಟಾದರೂ ಇರಬೇಕು ಮತ್ತು ಚಿತ್ರಗಳನ್ನು ಸ್ಯಾಟಲೈಟ್ ಮುಖಾಂತರ ಒಟ್ಟಿಗೇ ಎಲ್ಲಾ ಕೆಂದ್ರಗಳಲ್ಲೂ ಪ್ರದರ್ಶಿಸಬಹುದು.  ನಮ್ಮ ಚಿತ್ರಗಳು ಕನಿಷ್ಠ ೧೦೦೦ ಚಿತ್ರಮಃದಿರಗಳಲ್ಲಿ ಬಿಡುಗಡೆ ಕಾಣಬೇಕು. ಆಗ ನಾವು ಸಹ  ಯಶಸ್ವಿಯಾಗಬಹುದು. ಮುಂಗಾರು ಮಳೆ, ದುನಿಯಾ, ಜಾಕಿ, ಆಪ್ತಮಿತ್ರ, ಆಪ್ತರಕ್ಷಕ, ಈ ಚಿತ್ರಗಳು ಬೇರೆ ರಾಜ್ಯ/ದೇಶ ಗಳಲ್ಲಿ ಯಶಸ್ವಿಯಾದ ಕೆಲವು ಚಿತ್ರಗಳು. ಇವರಿಗೆ ಸಾಧ್ಯವಾಗಿದ್ದು ಬೇರೆಯವರಿಗೂ ಸಾಧ್ಯವಲ್ಲವೇ

Sunday, 26 February 2012

ಕನ್ನಡದಲ್ಲಿ ಟಿ.ವಿ. ವಾಹಿನಿಗಳ ಭರಾಟೆ:

ಮನರಂಜನೆ ವಿಭಾಗ - ಚಂದನ, ಉದಯ ಟಿ.ವಿ., ಈ ಟಿ.ವಿ, ಜೀ ಕನ್ನಡ, ಕಸ್ತೂ ರಿ,  ಸುವರ್ಣ,  ( ೬ ವಾಹಿನಿಗಳು-) ವಾರ್ತಾ ವಿಭಾಗ - ಟಿ.ವಿ.-೯,  ಸುವರ್ಣ ೨೪ X ೭, ಜನಶ್ರೀ, ಕಸ್ತೂರಿ ನ್ಯೂಸ್, ಉದಯ ವಾರ್ತೆಗಳು, ಸಮಯ, ಪಬ್ಲಿಕ್ ಟಿ.ವಿ. (೭ ವಾಹಿನಿಗಳು-) ಸಂಗೀತ ವಿಭಾಗ - ಉದಯ ಮ್ಯೂಸಿಕ್, ರಾಜ್ ಮ್ಯೂಸಿಕ್ ಕನ್ನಡ (೨) , ಕಾಮಿಡಿ ವಿಭಾಗ - ಉದಯ ಕಾಮಿಡಿ (೧) ಮಕ್ಕಳ ವಿಭಾಗ - ಚಿಂಟು ಟಿ.ವಿ. (೧) ಚಲನಚಿತ್ರಗಳ ವಿಭಾಗ - ಉದಯ ಮೂವೀಸ್, ಐ.ಪಿ.ಟಿ.ವಿ ಕನ್ನಡ ಬೇಡಿಕೆಯಲ್ಲಿ ಮಾತ್ರ (೨) ಭಕ್ತಿ ವಿಭಾಗ - ಶ್ರೀ ಶಂಕರ (೧) ಹೀಗೆ ಸುಮಾರು ೨೦ ವಾಹಿನಿಗಳಿರುವ ಕನ್ನಡದಲ್ಲಿ ಜಾಹೀರಾತು ಮಾರುಕಟ್ಟೆ ಸುಮಾರು ೫೦೦ ಕೋಟಿ ರೂಪಾಯಿಗಳು. (ದಕ್ಷಿಣ ಭಾರತ ೨೭೦೦ ಕೋಟಿ, ಆಧಾರ FICCI-KPMG 2011 PINC Research)  ಈ ಎಲ್ಲಾ ವಾಹಿನಿಗಳು ಹೆಚ್ಚಿನ ಮಟ್ಟಿಗೆ ಮನರಂಜನೆ ಪ್ರಧಾನವಾದ ಕಾರ್ಯಕ್ರಮಗಳನ್ನು ಬಿತ್ತರಿಸುವುದು ಹೆಚ್ಚು. ಅದರಲ್ಲಿ ಚಲನಚಿತ್ರ, ಧಾರವಾಹಿಗಳು ಹೆಚ್ಚು ಸ್ಥಾನವನ್ನು ಆಕ್ರಮಿಸಿಕೊತ್ತವೆ. ಇನ್ನುಳಿದ ವಾರ್ತೆವಿಭಾಗದಲ್ಲಿ ರಾಜಕೀಯ, ಚಲನಚಿತ್ರಗಳ ಸಮಾಚಾರವಿರುವುದು ಹೆಚ್ಚು. ಇದರಲ್ಲಿ ನಾವು ಗಮನವಿರಿಸಬೇಕಾದ ಅಂಶವೆಂದರೆ ಈ ವಾಹಿನಿಗಳೆಲ್ಲರೂ ಕೇವಲ ಹಣ ಮಾಡುವ ಅಂಶಕ್ಕೇ ಹೆಚ್ಚು ಒತ್ತು ಕೊಡುತ್ತಾರೆಯೆ ಹೊರತು ನಮ್ಮ ಭಾಷೆ, ಸಂಸ್ಕೃತಿಯ ಬೆಗ್ಗೆ ಇವರಾರು ತಲೆ ಕೆಡಿಸಿಕೊಳ್ಳುವ ಹಾಗೆ ಕಾಣುವುದಿಲ್ಲ. ಈ ಟಿ.ವಿ ನಮ್ಮ ಕರ್ನಾಟಕದ ಸಂಸ್ಕುತಿ, ಭಾಷೆಯ ಬಗ್ಗೆ ಒಲವು ವ್ಯಕ್ತಪಡಿಸುತ್ತವೆ. ಇತ್ತೀಚಿನ ಟಿ.ಆರ್.ಪಿ ರೇಟಿಂಗ್ ನಲ್ಲಿ ಮನರಂಜನೆಯಲ್ಲಿ ಉದಯ (೫೧.೭೭) ಮೊದಲನೆಯ ಸ್ಥಾನದಲ್ಲಿದ್ದರೆ, ಸುವರ್ಣ ಎರಡನೆಯ ಸ್ಥಾನದೆಲ್ಲಿದೆ. ವಾರ್ತಾವಿಭಾಗದಲ್ಲಿ ಟಿ.ವಿ-೯ (೫೩.೬೨) ಮೊದಲನೆಯ ಸ್ಥಾನ, ಸುವರ್ಣ ೨೪ x 7 ಸುದ್ದಿವಾಹಿನಿ ಎರಡನೆಯ ಸ್ಥಾನದಲ್ಲಿದೆ. ನಮ್ಮ ದೇಶದ ಯಾವುದೇ ಭಾಷೆಯಲ್ಲಿಯೂ ವಾರ್ತಾವಾಹಿನಿಯೊಂದು ೫೩.೬೨ರ ಟಿ.ಆರ್.ಪಿ ರೇಟಿಂಗ್ ಇಲ್ಲ ಅದು ಟಿ.ವಿ.೯ಗೆ ಮಾತ್ರ ಇರುವಂತಹದ್ದು.
ಮುಂಬರುವ ಕನ್ನಡ ವಾಹಿನಿಗಳು - ರಾಜ್ ನ್ಯೂಸ್ ೧೪/೧/೦೯, ಜೀ ಕನ್ನಡ ವಾರ್ತೆಗಳು ೬/೬/೧೧, ಕಸ್ತೂರಿ ನ್ಯೂಸ್ ೨೧/೧೦/೧೦, ಈ ಟಿ.ವಿ ನ್ಯೂಸ್ ಕನ್ನಡ ೨೦/೧೧/೦೧, ಪರ್ಲ್ಸ್ ಕನ್ನಡ ೮/೧೧/೧೧ ಹೀಗೆ ಇನೂ ೫ ಹೊಸ ವಾಹಿನಿಗಳು ನೊಂದಾಯಿಸಲಾಗಿದೆ.
ಅಂತರ್ಜಾಲದಲ್ಲಿ ಉದಯ, ಸುವರ್ಣ, ಸ್ವಯಂಕೃಷಿ, ಸುವರ್ಣ ನ್ಯೂಸ್, ರಾಜ್ ಮ್ಯೂಸಿಕ್, ಜನಶ್ರೀ, ಟಿ.ವಿ.೯, ಸಮಯ, ಶ್ರೀ ಶಂಕರ, ಪುಬ್ಲಿಕ್ ಟಿ.ವಿ.ಗಳು ದೊರೆಯುತ್ತವೆ.
ಈ ವಾಹಿನಿಗಳಲ್ಲಿ ನಮ್ಮ ಕನ್ನಡಿಗರದ್ದು ಎಂದು ನಾವು ಹೆಮ್ಮೆಯಿಂದ ಹೇಳಬಹುದಾದದ್ದು ಕಸ್ತೂರಿ-ಕುಮಾರಸ್ವಾಮಿ, ಜನಶ್ರೀ-ಜನಾರ್ಧನರೆಡ್ಡಿ ಮತ್ತು ಶ್ರೀರಾಮುಲು, ಸಮಯ-ಮುರುಗೇಶ್ ನಿರಾಣಿ, ಸುವರ್ಣ ೨೪ x 7 ಸುದ್ದಿವಾಹಿನಿ-ರಾಜೀವ್ ಚಂದ್ರಶೇಕರ್ ಮಾತ್ರ. ಇನ್ನುಳಿದವು ಹೊರ ರಾಜ್ಯದವರದು.ಚಂದನ ವಾಹಿನಿ ಸರ್ಕಾರದ್ದು. ನಮ್ಮ ಕನ್ನಡಿಗರದ್ದು ಇಲ್ಲಿ ಅಲ್ಪಸಂಖ್ಯಾತ ಸ್ಥಾನಮಾನ ಮಾತ್ರ.
ಟಿ.ವಿ. ೯ ಮತ್ತು ಸುವರ್ಣ ೨೪ X 7 ವಾರ್ತಾವಾಹಿನಿಯಲ್ಲಿ ಟಾಲಿವುಡ್, ಕಾಲಿವುಡ್, ಬಾಲಿವುಡ್ ಸಮಾಚಾರಗಳನ್ನು ಬಿತ್ತರಿಸುವುದರಲ್ಲಿ ಅವರಿಗೆ ವಿಶೇಷ ಅಸಕ್ತಿ. ನಮ್ಮ ಕನ್ನಡಚಿತ್ರಗಳ ಸುದ್ದಿಯನ್ನು ಬೇರೆ ಭಾಷಾವಾಹಿನಿಗಳು ಪ್ರಸಾರಮಾಡುವುದಿಲ್ಲ. ಅಂತಹದರಲ್ಲಿ ನಮ್ಮ ಕನ್ನಡ ವಾಹಿನಿಗಳಿಗೆ ಈ ಹುಚ್ಚು ಯಾಕೋ ಗೊತ್ತಾಗುತ್ತಿಲ್ಲ. ನಮ್ಮಲ್ಲಿರುವ   ಈ ಅನೇಕ ವಾಹಿನಿಗಳಲ್ಲಿ  ಪರಭಾಷಿಕರಿಗೆ ಮೂರು ತಿಂಗಳಲ್ಲಿ  ಒಂದು ಸಲದಂತೆ  ವರ್ಷಪೂರ್ತಿ ತಮಿಳು/ತೆಲುಗು/ಮಲೆಯಾಳಂ/ಮರಾಠಿ/ಬೆಂಗಾಲಿ/ಹಿಂದಿ/ಇಂಗ್ಲೀಷ್ ಮುಖಾಂತರ ಕನ್ನಡವನ್ನು ಕಲಿಸುವ ಪ್ರಯತ್ನವನ್ನು ಮಾಡಬಹುದಲ್ಲವೇ? ಇದರಿಂದ ಪರಭಾಷಿಕರು ಮನೆಯಲ್ಲೇ ಕುಳಿತು ಕನ್ನಡವನ್ನು ಅವರ ಭಾಷೆಯಿಂದ ಕಲಿಯಬಹುದಲ್ಲವೇ?

Tuesday, 21 February 2012

ವೈವಿದ್ಯಮಯ ಕನ್ನಡ:

ಅತ್ಯಂತ ಪ್ರಾಚೀನಭಾಷೆಗಳಲ್ಲಿ ಕನ್ನಡವೂ ಒಂದು. ಕವಿರಾಜಮಾರ್ಗದಲ್ಲಿ ಕನ್ನಡವನ್ನು ಉತ್ತರ ಮತ್ತು ದಕ್ಷಿಣವೆಂದು ವಿಂಗಡಿಸಬಹುದು. ಅದೇ ಕವಿರಾಜಮಾರ್ಗ ಕನ್ನಡದ ಬಗೆಗಳನ್ನು ಹುಡುಕುತ್ತಾ ಹೋದರೆ ಸಾವಿರ ತಲೆಯ ಆದಿಶೇಷನೇ  ಸೋತುಹೋಗುತ್ತಾನೆ ಅಷ್ಟು ಶ್ರೀಮಂತಭಾಷೆ ಎಂದೂ ಹೇಳುತ್ತದೆ. ಕನ್ನಡವನ್ನು ಮಾತೃಭಾಷೆಯಾಗಿ ಬಳಸುವವರಲ್ಲದೆ , ತುಳು, ಕೊಂಕಿಣಿ, ಮರಾಠಿ ಭಾಷೆಯವರು  ಕನ್ನಡವನ್ನು ಎರಡನೆಯ ಭಾಷೆಯಾಗಿ ಬಳಸುತ್ತಾರೆ. ಭಾಷಾ ವಿಜ್ನಾನಿಗಳು ಕನ್ನಡವನ್ನು ಮೈಸೂರು ಕನ್ನಡ, ಧಾರವಾಡ ಕನ್ನಡ, ಮಂಗಳೂರು ಕನ್ನಡ, ಗುಲ್ಬರ್ಗ ಕನ್ನಡ ಎಂದು ವಿಂಗಡಿಸಿದ್ದಾರೆ.
ಕನ್ನಡದಲ್ಲಿ ಕನ್ನಡ:
ಹವ್ಯಕ ಕನ್ನಡ, ಸಂಕೇತಿ ಕನ್ನಡ, ಕುಂದಾಪುರ ಕನ್ನಡ, ಗೌಡ ಕನ್ನಡ, ಬಡಗು ಕನ್ನಡ, ಕುರುಂಬ ಕನ್ನಡ, ಕೋಮಾರಪಂತ್ ಕನ್ನಡ, ಹಳೇಪೈಕಿ ಕನ್ನಡ, ನಾಡವರ ಕನ್ನಡ, ಸೋಲಿಗರ ಕನ್ನಡ, ಬೆಂಗಳೂರು ಕನ್ನಡ, ಉರಲಿ ಕನ್ನಡ, ಹೊಲಿಯ ಕನ್ನಡ, ಬಾರ್ಕೂರು ಕನ್ನಡ, ತಿಪಟೂರು ಕನ್ನಡ, ಉತ್ತರ ಕರ್ನಾಟಕ ಕನ್ನಡ, ನಂಜನಗೂಡು ಕನ್ನಡ, ಮೈಸೂರು ಕನ್ನಡ, ಮಂಡ್ಯ ಕನ್ನದ, ಬಳ್ಳಾರಿ ಕನ್ನಡ. ಮಹರಾಷ್ಟ ಮತ್ತು ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಗೋಳಾರಿ ಕನ್ನಡವನ್ನು ಮಾತನಾಡುತ್ತಾರೆ. ತಮಿಳುನಾಡಿನ ನೀಲಗಿರಿ ಪ್ರಾಂತ್ಯದಲ್ಲಿ ಬಡಗು ಕನ್ನದವನ್ನು ಮಾತನಾಡುತ್ತಾರೆ. ತಮಿಳುನಾಡಿನ ಸೇಲಂನಲ್ಲಿ ಕನ್ನಡವನ್ನು ಮಾತನಾಡುವ ಕನ್ನಡಿಗರಿದ್ದಾರೆ. ಅದಕ್ಕೆ ಸೇಲಂ ಕನ್ನಡವೆಂದೂ ಕರೆಯುತ್ತಾರೆ. ತಮಿಳಿನ ಹೆಬ್ಬಾರ್ ಸಮುದಾಯದ ಜನಗಳು ಮಾತನಾಡುವ ಭಾಷೆಯಲ್ಲಿ ಕನ್ನಡ ಕಾಣುತ್ತದೆ. ಮರಾಠಿ, ಕೊಂಕಿಣಿ, ಬೆಟ್ಟಕುರುಬ ಭಾಷೆ, ಇರುಳ, ದಖ್ಖನಿ, ಸೌರಾಷ್ಟ್ರ ಭಾಶೆಗಳಲ್ಲಿ ಅನೇಕ ಕನ್ನಡ ಪದಗಳನ್ನು ಕಾಣಬಹುದು. (ಸಂಗ್ರಹ  ವಿ.ಕ.೨೮/೧೧/೧೧)


Wednesday, 15 February 2012

ಸಿ.ಸಿ.ಎಲ್ ಕ್ರಿಕೆಟ್ ಲೀಗ್

ತಮಿಳು ನಟ ಶ್ರೀಮಾನ್ ಜೀವ ಅವರೇ, ನೀವು ಕನ್ನಡಿಗರಿಗೆ ಮುಖ್ಯವಾಗಿ ಸುದೀಪ್ ಅವರಿಗೆ ಕ್ರೀಡಾ ಮನೋಭಾವ ಇಲ್ಲ ಅಂತ ಹೇಳಿದ್ರಂತೆ ಕ್ಷಮಿಸಿ.  ನಿಮಗೆ ಇರುವ ಕ್ರೀಡಾ ಮನೋಭಾವ ನಮಗೆ ಬರುವುದು ಖಂಡಿತಾ ಬೇಡ. ನೀವು ಪಂದ್ಯದ ಕೊನೆಯ ಎರೆಡು ಎಸತದಲ್ಲಿ ಚೆಂಡನ್ನು ಎಸಯದೆ ನಮ್ಮ ಕ್ರೀಡಾ ಪಟುವನ್ನು ಔಟ್ ಮಾಡಿದ ರೀತಿ ಮತ್ತು ಮೋಸದಿಂದ ಪಂದ್ಯವನ್ನು ಗೆದ್ದ ರೀತಿ ಸುಮಾರು ೫೯ ದೇಶಗಳಲ್ಲಿ ಪ್ರಸಾರವಾದ ಪಂದ್ಯದಲ್ಲಿ ಎಲ್ಲಾರು ನೋಡಿ ಹೀಗೂ ಕ್ರಿಕೆಟ್ ಆಡಬಹುದು ಎಂದು ತೋರಿಸಿಕೊಟ್ಟಿದ್ದೀರಲ್ಲಾ ನಿಮಗೆ ಧನ್ಯವಾದಗಳು. ಪಾಕಿಸ್ತಾನದವರು ಕೂಡ ನಮ್ಮ ಭಾರತದ ಮೇಲೆ ಹೀಗೆ ಪಂದ್ಯವನ್ನು ಆಡಿ ಗೆಲ್ಲಲಿಲ್ಲ. ಅಕಸ್ಮಾತ್ ನೀವು ನಮ್ಮ ಜೊತೆ ಪಂದ್ಯವನ್ನು ಆಡದೆ ಅಂದು ನಿಮ್ಮ ಪಂದ್ಯ ಮುಂಬೈ ಮೇಲೆ ಮುಂಬೈನಲ್ಲಿ ನಡೆದು ನೀವು ನಮ್ಮ ಮೇಲೆ ಮೋಸದ ಆಟ ಆಡಿ ಗೆದ್ದರಲ್ಲ ಹಾಗೆ ಆಡಿದ್ದರೆ, ನಿಮ್ಮ ಗತಿ ಎನಾಗುತಿತ್ತು ಯೋಚಿಸಿ ಶ್ರೀಮಾನ್ ಜೀವಾ ಅವರೇ. ಮತ್ತೊಂದು ವಿಷಯ ನಮಗೆ ಕ್ರೀಡೆಯಲ್ಲಿ ಅಷ್ಟೇ ಅಲ್ಲ ಎಲ್ಲದರಲ್ಲೂ ಕ್ರೀಡಾ ಮನೋಭಾವ ಜಾಸ್ತಿನೇ ಇದೆ. ಅದು ಇಲ್ಲದಿದ್ದರೆ ನಮ್ಮ ಕನ್ನಡ ನಿರ್ಮಾಪಕರು ನೀವು ಬೆಂಗಳೂರಿನಲ್ಲಿ ನಮ್ಮ ಮೇಲೆ ಆಟ ಆಡಲು ಬಂದಾಗ ನಿಮ್ಮ ಬಾವುಟವನ್ನು ಹಿಡಿದು ಕುಣಿದು ಕುಪ್ಪಳಿಸಲ್ಲಿವೇ. ಅಲ್ಲದೇ ನಮ್ಮ ರಾಜ್ಯದಲ್ಲಿ ತೆಲುಗು/ತಮಿಳು/ಮಲೆಯಾಳಂ/ಹಿಂದಿ/ಆಂಗ್ಲ ಭಾಷಾ ಚಿತ್ರಗಳು ಬಂದಾಗ ನಮಗೆ ಚಿತ್ರಮಂದಿರಗಳು ಇಲ್ಲದೇ ಇದ್ದರೂ ನಿಮಗೆ ನಮ್ಮ ಚಿತ್ರಮಂದಿರಗಳನ್ನು ಬಿಟ್ಟುಕೊಟ್ಟು ನಾವು ಸುಮ್ಮನೆ ಕುಳಿತುಕೊಳ್ಳವುದನ್ನು ನೋಡಿ ಇಡೀ ಭಾರತ ದೇಶವೇ "ಹೀಗೂ ಉಂಟೇ" ಎಂದು ಮೂಗಿನಮೇಲೆ ಬೆಟ್ಟು ಇಟ್ಟುಕೊಳ್ಳೂವುದನ್ನು ನೀವು ನೋಡಿಲ್ಲವೇ?. ನಿಮ್ಮ ರಾಜ್ಯದಲ್ಲಿ ತಮಿಳು ಭಾಷೆ ಬಿಟ್ಟು ಬೇರೆ ಭಾಷೆ ಮಾತನಾಡಿದರೆ ಅವರನ್ನು ನೀವು ಶತ್ರುಗಳನ್ನು ನೋಡುವುದು ಇಡೀ ಭಾರತ ದೇಶಕ್ಕೇ ಗೊತ್ತಿದೆ. ನಿಮ್ಮಿಂದ ಕಲಿಯುವುದು ನಮಗೆ ಬೇಕಾಗಿಲ್ಲ. ಅದು ನಿಮ್ಮಲ್ಲಿಯೇ ಇರಲಿ.  ಕನ್ನಡಭಾಷೆಗೆ ಕೇಂದ್ರ ಸರ್ಕಾರದವರು ಶಾಸ್ತ್ರೀಯ ಸ್ಥಾನಮಾನ ಕೊಟ್ಟಾಗೆ ನೀವು ಅದಕ್ಕೆ ಕೂಡ ಕಲ್ಲು ಹಾಕಿದವರಲ್ಲವೇ. ನಮಗೆ ಒಂದು ಬೇಜಾರಿನ ವಿಷಯವೇನೆಂದರೆ ನೀವು ನಮ್ಮ ಕಾವೇರಿ ನೀರು ಕುಡಿದೂ ನಿಮಗೆ ನಮ್ಮಲ್ಲಿ ಇರುವ ವಿಶಾಲ ಬುದ್ದಿಬರಲಿಲ್ಲವೇ ಎಂಬುದು. ಅದು ನಿಮಗೆ ಬರುವುದೂ ಇಲ್ಲ ಬಿಡಿ. ಧನ್ಯವಾದಗಳು ಹಾಗೂ ಹೀಗೂ ಪಂಧ್ಯವನ್ನು ಗೆದ್ದಿದ್ದಕ್ಕೆ.

Saturday, 11 February 2012

ಕನ್ನಡ ಕಲಿಸಿ:

ಮಕ್ಕಳಿಗೆ ಕನ್ನಡ ಕಲಿಸಿ.  ಇಂದಿನ ಮಕ್ಕಳೇ ನಾಡಿನ ಕಣ್ಮಣಿಗಳು.  ನಮಗಷ್ಟೇ ಕನ್ನಡ ಬಂದರೆ ಸಾಕೇ?  ಇದು ಮುಂದುವರೆಯವುದು ಬೇಡವೇ?  ಮಕ್ಕಳಿಗೆ ಕನ್ನಡ ಮಾತನಾಡುವುದು ಬಂದರೆ ಸಾಲದು.  ಅವರಿಗೆ ಓದಲು ಮತ್ತು ಬರೆಯಲು ಕನ್ನಡ ಬರುವುದು ಅವಶ್ಯಕ.  ಇಲ್ಲದಿದ್ದರೆ ಮುಂದೆ ಕನ್ನಡ ಮಾತನಾಡಲು ಮಾತ್ರ ಬರುತ್ತದೆ, ಅದರೆ ಕನ್ನಡ ಓದಲು ಬರೆಯಲು ಬರದ ಜನಾಂಗವೇ ಜಾಸ್ತಿಯಾಗಿ ಕನ್ನಡ ಲಿಪಿ ಕಣ್ಮರೆಯಾಗುತ್ತದೆ.  ಚಿಕ್ಕ ಮಕ್ಕಳಿಗೆ ಕನ್ನಡದ ಶಿಶು ಗೀತೆಗಳನ್ನು ಹೇಳಿಕೊಡಿ.  (ಉದಾ:ಉಂಡಾಡಿ ಗುಂಡ, ನಾಯಿಮರಿ ನಾಯಿಮರಿ, ಬಣ್ಣದ ತಗಡಿನ ತುತ್ತೂರಿ,  ಒಂದು ಎರಡು...... ಇತ್ತ್ಯಾದಿ)  ಮಕ್ಕಳಿಗೆ ಇವನ್ನು ಕಲಿಸಿ www.youtube.com/results?search_query=kannada+makkala+geethegalu&oq=kannada+makkala+geethegalu&aq=f&aqi=&aql=&gs_sm=3&gs_upl=29476l32545l0l34570l13l13l0l0l0l7l260l2636l0.7.6l13l0 ಈ ತಾಣಕ್ಕೆ ಭೇಟಿ ಕೊಡಿ.  ಕನ್ನಡದಲ್ಲಿ ಮಗು ಕತೆ ಹೇಳುವಂತ ಪ್ರೊತ್ಸಾಹಿಸಿ.  ಸ್ವಲ್ಪ ದೊಡ್ಡ ಮಕ್ಕಳಿಗೆ ಕನ್ನಡದ ಕತೆ, ಕಾದಂಬರಿ ಮತ್ತು ಸಾಹಿತ್ಯವನ್ನು ಪರಿಚಯಿಸಿ.  ಕುವೆಂಪು, ಮಾಸ್ತಿ, ಕಾರಂತರು, ಬೇಂದ್ರೆ, ತೇಜಸ್ವಿ, ಆಡಿಗರು, ಗಿರೀಶ್ ಕಾರ್ನಾಡ್, ಅನಂತ ಮೂರ್ತಿ, ಕಂಬಾರರು, ಬೈರಪ್ಪ ಹೀಗೆ ಕನ್ನಡದ ದಿಗ್ಗಜರ ಪುಸ್ತಕಗಳನ್ನು ಒದಿಕೊಳ್ಳೂವಂತಾಗಲಿ. (ನಾನು ಇಲ್ಲಿ ಕೇವಲ ಕೆಲವರನ್ನು ಮಾತ್ರ ಉದಾಹರಣೆಯಾಗಿ ಕೊಟ್ಟಿದ್ದೇನೆ)  ಅನ್ಯಥಾ ಭಾವಿಸಿಬೇಕಾಗಿಲ್ಲ.  ಮಕ್ಕಳಿಗೆ ಕನ್ನಡದ ಭಾವಗೀತೆ, ಜನಪದ ಗೀತೆಗಳನ್ನು ಕೇಳಿಸಿ, ಹೇಳಿ ಕೊಡಿ.

ಕನ್ನಡ ಕಲಿತರೆ ಅದರಿಂದ ನಷ್ಟವೇನಾಗಲಾರದು.  ಅದರಿಂದ ಮುಂದೆ ನಿಮಗೂ ಮತ್ತು ನಿಮ್ಮ ಮಕ್ಕಳಿಗೂ ಪ್ರಯೋಜನವೇ ಜಾಸ್ತಿ.  ಇದರಿಂದ ನಮ್ಮ ಮಕ್ಕಳು ನಮ್ಮ ಸಂಸೃತಿಯನ್ನು ಕಲಿಯುತ್ತಾರೆ.  ಒಮ್ಮೆ ನಮ್ಮ ಸಂಸೃತಿಯನ್ನು ಕಲಿತ ಮಗು ಮುಂದೆ ದೊಡ್ಡದಾದ ಮೇಲೆ ತಂದೆ, ತಾಯಿ, ಗುರುಹಿರಿಯರನ್ನು ಗೌರವಿಸುವುನ್ನು ಕಲಿಯುತ್ತದೆ.  ಕನ್ನಡದಲ್ಲಿ ಕಲಿತರೆ ಮುಂದೆ ಉದ್ಯೋಗ ಕಷ್ಟ ಎಂಬ ಭಾವನೆ ಬಿಡಿ.  ಕನ್ನಡಕ್ಕೊ ಉದ್ಯೋಗಕ್ಕೂ ಸಂಭಂಧವಿಲ್ಲ.  ನಮ್ಮ ಕಛೇರಿಯ ದ್ವಾರಪಾಲಕ ಕೂಡ ಎಲ್ಲರಂತೆ  ಆಂಗ್ಲ ಭಾಷೆಯಲ್ಲಿ ಮಾತನಾಡಬಲ್ಲ.  ಆಂಗ್ಲ ಭಾಷೆಯಲ್ಲಿ ಕಲಿತರೆ ಮಾತ್ರ ಉದ್ಯೋಗ ಎಂಬುದಿಲ್ಲ.  ಕೆಲಸಕ್ಕೆ ಜ್ನಾನ ಮುಖ್ಯ.  ಈಗ ಸುಮಾರು ೮೦-೯೦% ಐಟಿ, ಬಿಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವವರು ಚಿಕ್ಕಂದಿನಲ್ಲಿ ಕನ್ನಡ ಶಾಲೆಯಲ್ಲಿ ಓದಿದವರೆ.  ಡಾ.ಸಿ.ಎನ್.ಆರ್.ರಾವ್ ನಮ್ಮ ದೇಶದ, ನಾಡಿನ ಹೆಸರಾಂತ ವಿಜ್ನಾನಿಗಳು.  ಇವರಿಗೆ ಇತ್ತೀಚೆಗೆ ೫೩ ಡಾಕ್ಟರೇಟ್ ಪ್ರಶಸ್ತಿಗಳು ದೊರಕಿವೆ.  ಪ್ರಪಂಚದ ಅನೇಕ ವಿಶ್ವವಿದ್ಯಾನಿಲಯಗಳು ತಾಮುಂದು ತಾಮುಂದು ಎಂದು ಇವರಿಗೆ ಡಾಕ್ಟರೇಟ್ ಪ್ರಶಸ್ತಿಗಳನ್ನು ಹುದುಕಿಕೊಂಡು ಬಂದು ಕೊಡುತ್ತಾರೆ.  ಇನ್ನು ನಾಡಿನ ಹೆಸರಾಂತ ಇಂಜಿನಿಯರ್ ಆಗಿದ್ದಂತಹ ಡಾ.ಸರ್.ಎಂ.ವಿಶ್ವೇಶ್ವರಯ್ಯನವರು ಇವರ ಬಗ್ಗೆ ತಿಳಿಯದ ಜನರೇ ಇಲ್ಲ ಈ ನಾಡಿನಲ್ಲಿ.  ಇವರುಗಳು ಕನ್ನಡದ ಶಾಲೆಗಳಲ್ಲಿ ಕಲಿತವರೆ. ಇತ್ತೀಚೆಗೆ ನಾರಾಯಣ ಮೂರ್ತಿ, ಕ್ಯಾಪ್ಟನ್.ಗೋಪಿನಾಥ್ ಹೀಗೆ ನಾಡಿನಲ್ಲಿ ಹೆಸರು ಕೀರ್ತಿ ಗೌರವವನ್ನು ಪಡೆದಿರುವವರು ಚಿಕ್ಕಂದಿನಲ್ಲಿ ಇವರು ಸಹ ಕನ್ನಡದಲ್ಲಿ ಕಲಿತವರೇ.  ಆಂಗ್ಲ ಭಾಷೆಯಲ್ಲಿ ಕಲಿತವರು ಮಾತ್ರ ಬುದ್ದಿವಂತರು ಮಿಕ್ಕವರು ಇಲ್ಲ ಎಂಬ ಭಾವನೆಯನ್ನು ಬಿಟ್ಟುಬಿಡಿ.  ಓದುವುದು ಜ್ನಾನ ಸಂಪಾದನೆಗಾಗಿ ಮಾತ್ರ.  ಮಕ್ಕಳಿಗೆ ಕನ್ನಡದಲ್ಲಿ ಮೊದಲು ಸರಿಯಾದ ಜ್ನಾನವನ್ನು ಕೊಡಿ.  ಮುಂದೆ  ಮಕ್ಕಳು ಆಂಗ್ಲಭಾಷೆಯನ್ನಷ್ಟೇ ಅಲ್ಲದೆ ಅನೇಕ ಭಾಷೆಗಳನ್ನು ತಮ್ಮಷ್ಟಕ್ಕೆತಾವೆ ಕಲಿಯುತ್ತಾರೆ.  ಕನ್ನಡಕ್ಕೆ ಆಂಗ್ಲ ಭಾಷೆ ಮತ್ತು ಇತರೆ ಭಾಷೆಗಳು ಊರುಗೊಲಾಗಿರಲಿ, ಅದೇ ಕಾಲುಗಳಾಗುವುದು ಬೇಡ.  ಇಂದಿನ ಅನೇಕ ಮಕ್ಕಳು ಪಾಠವನ್ನು ಉರುಹೊಡೆಯುತ್ತರೆ.  ಅದರಲ್ಲಿ ಇರುವ ವಿಷಯಗಳಬಗ್ಗೆ ಅರಿವಿಲ್ಲ.  ಇದರಿಂದ ಮುಂದೆ ಅವರಿಗೇ ನಷ್ಟ. ಇತ್ತೀಚೆಗೆ ನಾರಾಯಣಮೂರ್ತಿಯವರು ಒಂದುಕಡೆ ನಮ್ಮಲ್ಲಿ ಐ.ಐ.ಟಿಯಲ್ಲಿ ಉತೀರ್ಣರಾಗಿ ಬಂದು ನಮ್ಮಲ್ಲಿ ಕೆಲಸ ಮಾಡುವವರೂ ಸಹ ಸೃಜನಶೀಲರಾಗಿಲ್ಲ ಎಂದು ಹೇಳಿದ್ದಾರೆ.   ಇದು ಆಂಗ್ಲ ಬಾಷೆಯಲ್ಲಿ ಓದಿ ಉರುಹೊಡೆದವರ ಲಕ್ಷಣ. ಮಕ್ಕಳಿಗೆ ಮಾತೃಭಾಷೆಯಲ್ಲಿ ಎನು ಓದುತ್ತಿದ್ದೇವೆ ಎಂಬ ಅರಿವಿರಬೇಕು.  ಆಗ ಉರುಹೊಡೆಯುವುದು ತಪ್ಪುತ್ತದೆ.  ಜ್ನಾನ ಹೆಚ್ಚುತ್ತದೆ.  ಆ ಕಾರಣಕ್ಕಾಗೇ ಹಿರಿಯ ಭಾಷಾ ವಿದ್ವಾಂಸರು, ಶಿಕ್ಷಣ ತಜ್ನರು, ಕವಿಗಳು, ಸಾಹಿತಿಗಳು ಮಕ್ಕಳಿಗೆ ಕನ್ನಡದಲ್ಲೇ ಬಾಲ್ಯ ಶಿಕ್ಷಣ ದೊರಕಬೇಕೆಂದು ಹೇಳುತ್ತಿರುವುದು.  ಉಚ್ಚನ್ಯಾಯಾಲಯವು ಸಹ ಈ ವಾದವನ್ನು ಒಪ್ಪುತ್ತಿವೆ.  ಇನ್ನು ಗುಣಮಟ್ಟದ ಕನ್ನಡ ಶಾಲೆಗಳು, ಅದರ ಕಾರ್ಯ ವೈಖರಿ ಮತ್ತು ಅದರಲ್ಲಿ ಇರುವ ಸೌಲಭ್ಹ್ಯಗಳ ಬಗ್ಗೆ ತಿಳಿಯಲು ನಮ್ಮ ಸ್ನೇಹಿತರ kalikeyu.blogspot.com ತಾಣಕ್ಕೆ ಭೇಟಿ ಕೊಡಿ.


Monday, 23 January 2012

ಮಕ್ಕಳ ಮೇಲೆ ಇಂಗ್ಲೀಷ್ ಕಲಿಕೆ ಹೇರುವುದು ಬೇಡ:




www.vijaykarnatakaepaper.com/svww_zoomart.php?Artname=20120123a_012101005&ileft=256&itop=860&zoomRatio=130&AN=20120123a_012101005

 ಸ್ವಾಮಿನಾಥನ್ ಅಯ್ಯರ್ ಎಂಬ ಲೇಖಕರು ವಿ.ಕ (೨೩/೧/೧೨) "ಮಕ್ಕಳ ಮೇಲೆ ಇಂಗ್ಲೀಷ್ ಕಲಿಕೆ ಹೇರುವುದು ಬೇಡ" ಎಂಬ ಲೇಖನದಲ್ಲಿ ಅಂತರಾಷ್ತ್ರೀಯ ಸಂಸ್ಥೆಯೊಂದು ವಿದ್ಯಾರ್ಥಿಗಳ ಕಲಿಕಾಶಕ್ತಿಯ ಕುರಿತು ೭೩ ದೇಶಗಳಲ್ಲಿ ಒಂದು ಅಧ್ಯಯನ ಮಾಡಿದೆ, ಅದರಲ್ಲಿ ನಮ್ಮ ಭಾರತ ೭೨ನೆಯ ಸ್ಥಾನವನ್ನು ಪಡೆದಿದೆ ಎಂಬ ವರದಿಯ ಬಗ್ಗೆ ತಿಳಿಸಿರುತ್ತಾರೆ. ಮುಂದುವರೆಯುತ್ತಾ ೫ನೆಯ ತರಗತಿಯ ವಿದ್ಯಾರ್ಥಿ ಕನಿಷ್ಟ ೨ನೆಯ ತರಗತಿಯ ಪಠ್ಯವನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಪಡೆದಿಲ್ಲ ಎಂಬುದನ್ನು ತಿಳಿಸಿದೆ ಎಂದೂ ಹೇಳಿರುತ್ತಾರೆ. ಮೂರನೆಯ ತರಗತಿಯ ವಿದ್ಯಾರ್ಥಿಗಳು ಸುಲಭವಾದ ಕೂಡು/ಕಳೆಯುವ ಲೆಕ್ಕವನ್ನು ಮಾಡಲೂ ಸಮರ್ಥರಲ್ಲ ಎಂದೂ ವರದಿಯಲ್ಲಿ ಹೇಳಿದೆ ಎಂಬುದನ್ನೂ ತಿಳಿಸಿರುತ್ತಾರೆ. ೨೦೧೦ರಲ್ಲಿ ೩೬.೩ರಷ್ಟು ವಿದ್ಯಾರ್ಥಿಗಳು ಸಮರ್ಥರಾಗಿದ್ದರೆ ೨೦೧೧ರಲ್ಲಿ ೨೯.೯ಕ್ಕೆ ಕುಸಿದಿದ್ದಾರೆ.  ಇದರ ಅರ್ಥ ಭಾರತದಲ್ಲಿ ವಿದ್ಯಾರ್ಥಿಗಳ ಗುಣಮಟ್ಟ ಹೇಗೆ ಕುಸಿಯುತ್ತಿದೆ ಎಂದು ಅರ್ಥ ವಾಗುತ್ತದೆ. ಖಾಸಗಿ ಶಾಲೆಗಳಲ್ಲಿರುವ ವಿದ್ಯಾರ್ಥಿಗಳ ಪ್ರಮಾಣ ೧೮.೭ ರಿಂದ ೨೫.೬ ಎರಿದೆ ಮತ್ತು ೨೬ ರಷ್ಟು ವಿದ್ಯಾರ್ಥಿಗಳು ಮನೆ ಪಾಠಗಳಿಗೆ ಹೊಗುತ್ತಾರೆ.  ಅದರೊ ಸಹ ಶೈಕ್ಶಣಿಕ ಗುಣಮಟ್ಟದಲ್ಲಿ ಬೆಳವಣಿಗೆಯಾಗುತ್ತಿಲ್ಲ ಎಂಬ ಅವರ  ಮಾತುಗಳೂ ಸತ್ಯ.
ಹೀಗಾಗಲು ಎನು ಕಾರಣವಿರಬಹುದೆಂಬುದನ್ನೂ ಅವರು ಊಹಿಸಿ ಹೀಗೆ ಹೇಳುತ್ತರೆ "ತಮ್ಮ ಮಾತೃಭಾಷೆಯಲ್ಲಿ ಸುಲಭವಾಗಿ ಓದಬಲ್ಲ ಮಕ್ಕಳು, ನಂತರದ ದಿನಗಳಲ್ಲಿ ಸುಲಭವಾಗಿ ಇಂಗ್ಲೀಷ್ ಕಲಿಯಬಲ್ಲರು.  ಇಂತಹ ಪ್ರಯೋಗವು ಜಾಂಬಿಯಾ ದೇಶದಲ್ಲಿ ಯಶಸ್ವಿಯಾಗಿದೆ. ಮಾತೃಭಾಷೆಯಿಂದ ಶಿಕ್ಷಣವನ್ನು ಮೊದಲು ಆರಂಬಿಸಿ, ಆನಂತರ ಇಂಗ್ಲೀಷ್ ಕಲಿಕೆಯನ್ನು ಜಾರಿಗೊಳಿಸಬೇಕು. ಅಕಾಲಿಕವಾಗಿ ಇಂಗ್ಲೀಷನ್ನು ಕಲಿಸುತ್ತಿರುವುದು ಮಕ್ಕಳ ಶೈಕ್ಷಣಿಕ ಮಟ್ಟ ಕುಸಿಯಲು ಕಾರಣವಾಗುತ್ತಿದೆ" ಎಂಬ ಸಂದೇಹವನ್ನು ಅವರು ವ್ಯಕ್ತಪಡಿಸುತ್ತಾರೆ. ಪೋಷಕರೇ ನಿಮಗೆ ಕೇಳಿಸುತ್ತಿದೆಯೇ? ಸರ್ಕಾರಕ್ಕಂತೂ ಬುದ್ದಿ ಬರುವುದಿಲ್ಲ ಯಾರು ಹೇಳಿದರೂ.  ನೀವಾದರೂ ಅರ್ಥಮಾಡಿಕೊಳ್ಳಿ.

ಕ್ಯಾಂಪಸ್ ನಲ್ಲಿ ಕನ್ನಡ:



www.vijaykarnatakaepaper.com/svww_zoomart.php?Artname=20120123l_003101001&ileft=46&itop=97&zoomRatio=130&AN=20120123l_003101001

ವಿ.ಕ (೨೩/೧/೧೨) ರ ಲವಲವಿಕೆ ಪತ್ರಿಕೆಯಲ್ಲಿ ಶೀಲಾ ಸಿ.ಶೆಟ್ಟಿ ಅವರ "ಕ್ಯಾಂಪಸ್ ನಲ್ಲಿ ಕನ್ನಡ" ಲೇಖನದಲ್ಲಿ ಶ್ರೀ.ಶ್ರೀನಿವಾಸ ಪ್ರಸಾದ್ ಅವರ ಕನ್ನಡ ಪ್ರೇಮವನ್ನು ತಿಳಿಸಿಕೊಟ್ಟಿರುತ್ತಾರೆ. ಅವರಿಗೆ ನಮ್ಮ ಧನ್ಯವಾದಗಳು. ಇದೇ ಅಲ್ಲವೇ ನಿಜವಾದ ಕನ್ನಡದ ಕಳಕಳಿ. ಇದೇ ಅಲ್ಲವೇ ನಮ್ಮ ಕನ್ನಡಿಗರು ಮಾಡಬೇಕಿರುವುದು. ಶ್ರೀಯುತರು ಸುಮಾರು ೨೫,೦೦೦ ಕ್ಕೂ ಹೆಚ್ಚು ಪರಭಾಷಿಕರಿಗೆ ಕನ್ನಡವನ್ನು ಸುಮಾರು ೨೫ ವರ್ಷಗಳಿಂದ ಕಲಿಸುತ್ತಿರುವುದನ್ನು ಕೇಳಿ ನನಗೆ ತುಂಬಾ ಸಂತೋಷವಾಯಿತು. ಅವರಿಗೆ ನನ್ನ ಧನ್ಯವಾದಗಳು. ವಿಜ್ನಾನಿಗಳಿಗೆ, ಬ್ಯಾಂಕ್ ಅಧಿಕಾರಿಗಳಿಗೆ, ಸೇನಾಧಿಕಾರಿಗಳಿಗೆ, ಹೀಗೆ ಸಾವಿರಾರು ಪರಭಾಷಿಕರಿಗೆ ಕನ್ನಡವನ್ನು ಕೇವಲ ೩ ತಿಂಗಳ ಅವಧಿಯಲ್ಲಿ ಕಲಿಸಿರುವುದು ಬಹಳ ಹೆಮ್ಮೆಯ ಸಂಗತಿ.  ಶ್ರೀಯುತರು "ಕನ್ನಡದ ಸೇವೆ ಎಂದರೆ ಕೇವಲ ಕನ್ನಡಕ್ಕಾಗಿ ಧ್ವನಿ ಎತ್ತಿ ಹೋರಾಡುವುದಲ್ಲ. ನಮ್ಮ ಸುತ್ತಮುತ್ತಲಲ್ಲಿ ಕನ್ನಡ ವಾತಾವರಣವನ್ನು ನಿರ್ಮಿಸುವುದು, ಭಾಷೆ ಕೆಲಿಸಿ, ಬೆಳೆಸುವುವುದು ಮುಖ್ಯ" ಎಂಬ ಮಾತುಗಳನ್ನು ಹೇಳಿರುತ್ತಾರೆ. ನಿಜವಾಗಲೂ ಇದು ಸತ್ಯವಾದ ಮಾತು.  ಇಲ್ಲಿ ಬರುವ ಸಾವಿರಾರು ಪರಭಾಷಿಕರಿಗೆ ಕನ್ನಡವನ್ನು ಕಲಿಸಿ, ಕನ್ನಡದ ಕಥೆ, ಕಾದಂಬರಿ, ನಾಟಕ, ಚಲನಚಿತ್ರ, ಜಾನಪದ, ಸಾಹಿತ್ಯ, ಸಂಗೀತ,  ಹೀಗೆ ನಮ್ಮ ಸಂಸ್ಕ್ರುತಿಯನ್ನು ಪರಿಚಯಿಸಿ ನಮ್ಮವರನ್ನಾಗಿ ಮಾಡಿಕೊಳ್ಳಬಹುದಲ್ಲವೇ.  ಈ ಲೇಖನವನ್ನು ಓದುತ್ತಿರುವಾಗ ನನಗೆ ಒಂದು ಯೋಚನೆ ಬಂತು. ಅದೇನೆಂದರೆ ನಾವು ಪರಭಾಷಿಕರಿಗೆ  ಗಣಕ ಯಂತ್ರ, ಸಿ.ಡಿ/ಡಿ.ವಿ.ಡಿ ಮೂಲಕವೂ ಕನ್ನಡವನ್ನು ಕಲಿಸಬಹುದಲ್ಲವೇ. www.flipkart.com/books/8122300367?_l=OroMg1KV5h7GydKPRNIZ+w--&_r=fTwBL7a+AEToNw+d5eCuYA--&ref=b1395370-b924-4b02-9135-c795b6b760ea ಅವರು ತಮ್ಮ ತಮ್ಮ ಮನೆ/ಕಛೇರಿಯಲ್ಲಿ ಕುಳಿತೇ ಕನ್ನಡ ಭಾಷೆಯನ್ನು ಕಲಿಯಬಹುದಲ್ಲವೇ. ಇದನ್ನು ಟಿ.ವಿ ಯಲ್ಲೂ ಸಹ ಪ್ರಸಾರ ಮಾಡಿ ಒಮ್ಮೆಗೇ ಸಾವಿರಾರು ಪರಭಾಷಿಕರಿಗೆ ಉಚಿತವಾಗಿ ಕನ್ನಡವನ್ನು ಕಲಿಸಬಹುದಲ್ಲವೇ? 

Thursday, 19 January 2012

ಗಾಂಚಲಿ ಬಿಡಿ ಕನ್ನಡ ಮಾತಾಡಿ:

ಮ್ಮುಖ್ಯವಾಗಿ ಈ ವಿಷಯ ಇಲ್ಲಿ ಪ್ರಸ್ತಾಪ ಮಾಡುವ ಕಾರಣ ಎನೆಂದರೆ ನಮ್ಮ ಕನ್ನಡಿಗರಲ್ಲಿ ಕೆಲವರು ಇಲ್ಲಿ ಹುಟ್ಟಿ ಬೆಳೆದು ದೊಡ್ಡವರಾಗಿ ಬೇರೆ ರಾಜ್ಯಗಳಲ್ಲಿ/ವಿದೇಶಗಳಲ್ಲಿ ನೆಲೆಸಿ ಹಣ, ಕೀರ್ತಿ, ಗೌರವ ಸಂಪಾದಿಸಿದವಾರಿದ್ದರೆ. ಅದರಲ್ಲಿ ಅನೇಕರು ಎಲ್ಲೇ ಹೋದರೂ ಕನ್ನಡವನ್ನು ಮರೆಯದೆ ನಾವು ಮೊದಲು ಕನ್ನಡಿಗರೇ.  ಎಲ್ಲಾದರೂ ಇರು, ಎಂತಾದರೂ ಇರು ಮೊದಲು ಕನ್ನಡಿಗನಾಗಿರು ಎಂಬ ಕವಿವಾಣಿಯಯನ್ನು ಮರೆಯದೆ ನಿಜ ಜೀವನದಲ್ಲೂ ಹಾಗೆ ನಡೆದುಕೊಂಡವರಾಗಿದ್ದಾರೆ. ಉದಾಹಾರಣೆಗೆ ರಜನಿಕಾಂತ್, ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ, ಸುನೀಲ್ ಶೆಟ್ಟಿ, ದೀಪಿಕಾ ಪಡುಕೊಣೆ, ಅನುಷ್ಕಾ ಶರ್ಮ, ಅನುಷ್ಕಾ ಶೆಟ್ಟಿ,  ಪ್ರಭುದೇವ, ಸುಮನ್ ರಂಗನಾಥ್, ಸುಮನ್, ಅರ್ಜುನ್ ಸರ್ಜ,  ರವಿಶಾಸ್ತ್ರಿ, ಡಾ.ನೀರಜ್ ಪಾಟೀಲ್ (ಮಹಾ ಪೌರರು-ಲಂಡನ್ ನಗರ) ಪ್ರಕಾಶ್  ರೈ, ಚರಣ್ ರಾಜ್ ಮುಂತಾದವರು ನಮ್ಮ ಕನ್ನಡಿಗರು.  ಅವರಲ್ಲಿ ಕೆಲವರು ಇಲ್ಲಿಗೆ ಬಂದಾಗ ಕನ್ನಡದಲ್ಲಿ ಮಾತನಾಡಿದರೆ ನಮಗೆ ಎಲ್ಲಿ ಲಕ್ವ ಹೊಡೆಯುವುದೊ ಎಂದು ಭಾವಿಸುತ್ತಾರೆ.  ಕನ್ನಡ ಬಂದರೂ ಮಾತನಾಡದೆ ಅಗೌರವ ತೊರಿಸುತ್ತಾರೆ. ಆದರೆ ನಮ್ಮ ರಜನಿಕಾಂತ್, ಅರ್ಜುನ್ ಸರ್ಜ, ಪ್ರಕಾಶ್ ರೈ, ಸುಮನ್ ರಂಗನಾಥ್, ಸುಮನ್, ಪ್ರಭುದೇವ, ಚರಣ್ ರಾಜ್ ಅವರುಗಳು ಇಲ್ಲಿಗೆ ಬಂದಾಗ ನಮ್ಮ ಕನ್ನಡದಲ್ಲಿ ಮಾತಾಡಿ ಅವರ ಅಭಿಮಾನವನ್ನು ತೊರಿಸುತ್ತಾರೆ.  ಇಲ್ಲಿಯೂ ಸಹ ನಮ್ಮ ಕನ್ನಡ ಚಿತ್ರಗಳಲ್ಲಿ ನಟಿಸುತ್ತಾರೆ ಕೂಡ.  ಅರ್ಜುನ್ ಸರ್ಜ, ಪ್ರಕಾಶ್ ರೈ ಅಂತಹವರು ನಮ್ಮ ಕನ್ನಡ ಚಿತ್ರಗಳಲ್ಲಿ ನಟಿಸುವುದಷ್ಟೇ ಅಲ್ಲದೇ ನಿರ್ಮಿಸಿ ನಿರ್ದೇಶನವನ್ನೂ ಮಾಡಿರುತ್ತಾರೆ.   ಐಶ್ವರ್ಯ ರೈ ಇಲ್ಲಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಬಂದಾಗ ಕೆಟ್ಟ ಕನ್ನಡದಲ್ಲಿ ಮಾತನಾಡಿರುವುದನ್ನು ನೀವೆಲ್ಲಾ ನೋಡಿದ್ದೀರ. www.youtube.com/watch?v=F0kqNwNQYYY) ದೀಪಿಕಾ ಪಡುಕೊಣೆಯಂತೂ ತಮ್ಮ ಮೊದಲ ಚಿತ್ರ ಕನ್ನಡದ ಐಶ್ವರ್ಯ ಎಂಬುದನ್ನು ಎಲ್ಲಾದರೂ ಹೇಳಿರುವುದನ್ನು ಕೇಳಿದ್ದೀರಾ ಸ್ನೇಹಿತರೆ.  ಇವರಿಗೆಲ್ಲಾ ನಮ್ಮ ಧಿಕ್ಕಾರ.  ಇಂತಹದವರಿಗೆ ಹೇಳುವುದು ಗಾಂಚಲಿ ಬಿಡಿ   ಕನ್ನಡದಲ್ಲಿ ಮಾತಾಡಿ ಎಂದು. (ಈ ಹೆಸರಿನಲ್ಲಿ ನಮ್ಮ ಸ್ನೇಹಿತರ  gaanchalibidi kannadadallli maataadi ಎಂಬ ಫ಼ೇಸ್ ಬುಕ್ ಇದೆ).  ನಮ್ಮ ಡಾ.ನೀರಜ್ ಪಾಟೀಲ್ ಅವರಂತೂ ನಮ್ಮ ಹೆಮ್ಮೆಯ ಕನ್ನಡಿಗರೇ ಸರಿ.  ಅವರು ಬಂದು ಕನ್ನಡದಲ್ಲಿ ಮಾತನಾಡುವುದೇನು, ಹಾಡು ಹೇಳುವುದೇನು ಅದನ್ನು ನೊಡುವುದೆ ನಮ್ಮ ಸೌಭಾಗ್ಯ.  ಇನ್ನು  ರಜಿನಿಕಾಂತ್ ಇಲ್ಲಿಗೆ ಬಂದಾಗ ಕನ್ನಡದ ಚಿತ್ರಗಳನ್ನು ಚಲನಚಿತ್ರ ಮಂದಿರಗಳಲ್ಲಿ ನೊಡುತ್ತಾರೆ.  ಅವರ ಸ್ನೇಹಿತರೊಂದಿಗೆ ಕನ್ನಡದಲ್ಲಿ ಮಾತನಾಡುತ್ತಾರೆ. ಕನ್ನಡದಲ್ಲಿ ಪತ್ರ ಬರೆಯುತ್ತಾರೆ, ಕನ್ನಡದ ಕಾದಂಬರಿಯನ್ನು ಓದುತ್ತಾರೆ.  ಕನ್ನಡದ ಬಗ್ಗೆ ಇನ್ನೂ ಪ್ರೀತಿ, ವಿಶ್ವಾಸ, ಅಭಿಮಾನ ಹೊಂದಿರುವ ರಜನಿಯನ್ನು ಬೇರೆ ಕಲಾವಿದರು ನೋಡಿ ಕಲಿಯುವುದು ಬಹಳಷ್ಟು ಇದೆ. ರಜನಿಯವರು ಈಗ ಮನೆಯಲ್ಲಿ ಹೆಂಡತಿ ಮಕ್ಕಳ ಹತ್ತಿರ ಯಾವ ಭಾಷೆಯಲ್ಲಿ ಮಾತನಾಡುತ್ತರೆ ಎಂಬ ಕುತೂಹಲ ಎಲ್ಲರಂತೆ ನನಗೊ ಇದೆ.   ನಾನು ಕನ್ನಡದಲ್ಲಿ ನಟಿಸುವೆ.  ಒಳ್ಳೆ ಕಥೆ ತನ್ನಿ ಎಂದು ಅನೇಕ ಬಾರಿ ಹೇಳಿರುತ್ತಾರೆ.  "ದಳವಾಯಿ ಮುದ್ದಣ್ಣ" ಎಂಬ ಚಿತ್ರದಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸುತ್ತಾರೆ.  .  ನಮ್ಮ ನಿಮಾ೯ಪಕರಾದ ದ್ವಾರಕೀಶ್, ಮುನಿರತ್ನಂ, ಕೊಬ್ರಿ ಮಂಜ, ರಾಕ್ಲೈನ್ ವಂಕಟೇಶ್ ಮನಸ್ಸು ಮಾಡಿದರೆ ಕನ್ನಡದಲ್ಲಿ ರಜನಿಕಾಂತ್ ಚಿತ್ರ ಬರುವುದು ಅಸಾಧ್ಯವೇನಲ್ಲ ಎಂದು ನನ್ನ ಭಾವನೆ. ಅವರೇ ಆದನ್ನು ನಿರ್ಮಾಣ ಮಾಡಿದರೆ ನಮಗೆ ಇನ್ನೂ ಸಂತೋಷವಾಗುತ್ತದೆ  www.youtube.com/watch?v=R6a7GlFNO48
ಇನ್ನು ಬೇರೆ ಭಾಷೆಯವರಾದಾರೂ ಕಮಲ್ ಹಾಸನ್, ಇಳೆಯರಾಜ, ಎಸ್.ಪಿ.ಬಾಲಸುಬ್ರಮಣ್ಯಂ, ಶರತ್ ಕುಮಾರ್ ಮುಂತಾದವರು ಇಲ್ಲಿಗೆ ಬಂದಾಗ ಕನ್ನಡದಲ್ಲಿ ಮಾತನಾಡಿ ನಮ್ಮ ಮನಸ್ಸನ್ನು ಗೆದ್ದಿದ್ದಾರೆ.   ಇದೆಲ್ಲಾ ಸರಿ, ಆದರೆ ಇಲ್ಲೇ ಹುಟ್ಟಿ, ಬೆಳೆದು ದೊಡ್ಡವರಾದ  ಕೆಲ ಕನ್ನಡ ಮಾತಾಡುವ ಕನ್ನಡಿಗರು ಒಳ್ಳೆ ಹೆಸರು, ಹಣ, ಕೀರ್ತಿ ಗಳಿಸಿದ ತಕ್ಷಣ ಕನ್ನಡವನ್ನು ಮರೆತು ಕನ್ನಡಕ್ಕೆ ದ್ರೊಹ ಮಾಡುವವರಿದ್ದಾರಲ್ಲಾ? ಇವರಿಗೆ ನಾವು ಹೇಳುವುದು ಗಾಂಚಲಿ ಬಿಡಿ, ಕನ್ನಡದಲ್ಲಿ ಮಾತಾಡಿ ಎಂದು. ನಾವು ಕನ್ನಡಿಗರೇ ಅಲ್ಲ ಅಂತ ಹೇಳಿಕೊಳ್ಳುದ ಒಂದು ವರ್ಗ ಇದೆ. ಅವರಿಗೆ ಕನ್ನಡದ ನೆಲ, ನೀರು, ಗಾಳಿ ಎಲ್ಲಾ ಬೇಕು. ಕನ್ನಡ ಮಾತ್ರ ಬೇಡ.  ನಮ್ಮ ಹೆಮ್ಮೆಯ ಗೋಡೆ ಎಂದು ಕರೆಸಿಕೊಳ್ಳುವ ರಾಹುಲ್ ದ್ರಾವಿಡ್ ಕನ್ನಡದಲ್ಲಿ ಮಾತನಾಡಿರುವುದನ್ನು ಕೇಳಿರುವಿರಾ? www.youtube.com/watch?v=964MqQqeMAk  ಇದು ಒಬ್ಬರು ಹೇಳಿಕೊಡುವ ವಿಷಯವಲ್ಲ.  ಅದು ಹೃದಯದಲ್ಲಿ ಇರಬೇಕು.  ಇದು ನಾವು ನಮ್ಮ ಭಾಷೆಗೆ ಕೊಡುವ ಗೌರವ, ಸಮ್ಮಾನ.  ಇದು ಕೇವಲ ಕಲಾವಿದರಿಗೆ ಮಾತ್ರ ಅನ್ವಯಿಸುವುದಿಲ್ಲ.  ಎಲ್ಲಾ ಕ್ಷೇತ್ರದ ಜನರಿಗೂ ಅನ್ವಯಿಸುವ ಮಾತು. ಇದೆಲ್ಲಾ ನೋಡಿದರೆ ನನಗೆ ಒಂದೊಂದು ಸಲ ಅನ್ನಿಸುತ್ತದೆ. ಇದು ನಮಗೆ ಆ ದೇವರು ಕೊಟ್ಟ ಶಾಪವೊ ಅಂತ. ಯಾಕೆಂದರೆ ನೋಡಿ ಕನ್ನಡದಲ್ಲಿ ಮಾತಾಡಿ, ಕಲಿಯಿರಿ ಅಂತ ನಾವು ನಮ್ಮವರಿಗೆ ಹೇಳಬೇಕಾಗಿದೆಯಲ್ಲ.



Friday, 13 January 2012

ಠಾಕ್ರೆ ಅಜ್ಜನಿಗೊಂದು ಪತ್ರ:

ಅಜ್ಜಾ ಹೇಗಿದ್ದೀರಾ? ಚೆನ್ನಾಗಿದ್ದೀರಾ? ನಿಮ್ಮ ಆರೋಗ್ಯ ಹೇಗಿದೆ? ಮೊದಲು ನಿಮಗೆ ನಮ್ಮ ಪ್ರೀತಿಯ ನಮಸ್ಕಾರಗಳು. ತುಂಬಾ ದಿನಗಳಿಂದ ನಿಮಗೊಂದು ಪತ್ರವನ್ನು ಬರೆಯಬೇಕೆಂಬ ಆಸೆ ಇತ್ತು. ಕಾಲ ಕೂಡಿ ಬಂದಿರಲಿಲ್ಲ.  ಈಗ ಬಂದಿದೆ. ಎನಜ್ಜ, ನೀವು ಆ ಎಮ್.ಎಮ್.ಎಸ್ ನವರಿಗಂತೂ ಬುದ್ದಿ ಇಲ್ಲ ಅದು ಎಲ್ಲರಿಗೂ ಗೊತ್ತಿರುವ ವಿಷಯ. ನೀವು ಅವ್ರಿಗೆ ಸ್ವಲ್ಪ ಬುದ್ದಿ ಹೇಳಬಾರದ. ನೀವು ಹಿರಿಯರು. ಎಲ್ಲಾನೂ ತಿಳಿದುಕೊಂಡಿರುವವರು. ಲೋಕಜ್ನಾನ ಹೊಂದಿರುವವರು. ಅವರಿಗೆ ನೀವು ಒಂದು ಸಾರಿ ಗದರಿ. ಮರಾಠಿಗರು ಬೆಳಗಾವಿಯಲ್ಲಿ ಗಲಾಟೆಮಾಡದೆ ಕನ್ನಡಿಗರ ಹತ್ತಿರ ಹೊಂದಿಕೊಂಡು ಸಖವಾಗಿಬಾಳಿ ಎಂದು ಬುದ್ದಿ ಹೇಳಿ.  ರಾಜ್ ಠಾಕ್ರೆ ಅವರು ಸರಿಯಾಗಿ ಅವರಿಗೆ ಬುದ್ದಿ ಹೇಳಿದ್ದಾರೆ. ನೀವು ಸ್ವಲ್ಪ ಹೇಳಬಾರದೆ. ನಿಮ್ಮ ಮಾತಿಗೆ ಅವರು ಎದುರು ಉಸಿರಾಡಲ್ಲ ಅಂತ ನಮ್ಮ ಭಾವನೆ. ಬೆಳಗಾವಿಯನ್ನು ಕೆಂದ್ರಾಡಳಿತ ಪ್ರದೇಶ ಮಾಡಿ, ಬೆಳಗಾವಿಯನ್ನು ಬೆಳಗಾಂ ಮಾಡಿ, ಬೆಳಗಾವಿ ಯನ್ನು ಮಹರಾಷ್ಟ್ರಕ್ಕೆ ಸೇರಿಸಿ ಅಂತ ಸುಮ್ಮನೆ ಕೂಗು ಎಬ್ಬಿಸುವುದು ಎಷ್ಟು ಸರಿ ನೀವೇ ಹೇಳಿ. ಅವರು ಹೆಳ್ತಾರೆ ಅಂತ ಮಾಡುವುದಕ್ಕಾಗತ್ತಾ. ನಿಮ್ಮ ಮುಂಬೈನಲ್ಲೇ ಮರಾಠಿಯ ಜೊತೆ ಕನ್ನಡ, ತೆಲುಗು, ತಮಿಳು, ಹಿಂದಿ, ಗುಜರಾತಿ, ರಾಜಾಸ್ತಾನಿ ಹೀಗೆ ಅನೇಕ ಭಾಷೆಗಳನ್ನು ಆಡುವ ಜನರಿದ್ದಾರೆ.  ಹಾಗಂತ ಮುಂಬೈಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವುದಕ್ಕೆ ಆಗತ್ತಾ? ಮುಂಬೈ ಹೆಸರನ್ನು ಬದಲಾವಣೆ ಮಾಡಕ್ಕೆ ಆಗತ್ತಾ? ಅದು ಅಗಲೂ ಬಾರದು. ಅದು ನಿಮ್ಮ ಜನರಿರುವ ತಾಣ. ನಿಮ್ಮ ಸಂಸ್ಕ್ರುತಿ, ನಿಮ್ಮ ಭಾಷೆಗೆ ಎಲ್ಲರೂ ಗೌರವವನ್ನು ಕೊಡಲೇಬೇಕು.  ಬೆಂಗಳೊರು, ಹೈದರಾಬಾದು. ಚೆನ್ನೈ,  ಡೆಲ್ಲಿ, ಕೊಲ್ಕತ್ತ ಹೀಗೆ ದೊಡ್ಡ ಊರುಗಳಲ್ಲಿ ಎಲ್ಲಾ ಭಾಷೆಗಳನ್ನು ಆಡುವ ಜನರಿರುತ್ತಾರೆ. ಇದು ಸಹಜ ಕೂಡ ಹೌದು. ಹೀಗೆ ಎಲ್ಲರೂ ಗಲಾಟೆಯನ್ನು ಮಾಡುತ್ತಾರ? ಬುದ್ದಿಇರುವವರು ಯಾರು  ಹೀಗೆ ಮಾಡುವುದಿಲ್ಲ. ನಿಮಗೆ ಗೊತ್ತಿರುವಂತೆ ಇತಿಹಾಸವನ್ನು ಕೆದಕಿ ನೋಡಿದರೆ ಇಡೀ ಮಹರಾಷ್ಟ್ರದಲ್ಲಿ ಮೊದಲು ಕನ್ನಡಭಾಷೆಯನ್ನು ಮಾತನಾಡುವವರೇ ಇದ್ದರು. ಇಡೀ ಮಹರಾಷ್ಟ್ರವು ಕನ್ನಡನಾಡಿನ ಭಾಗವಾಗಿತ್ತು.  ಇದು ಬಾಲ ಗಂಗಾಧರರ ಆಭಿಪ್ರಾಯವಾಗಿತ್ತು ನೆನಪಿರಲಿ. ಮರಾಠಿಯಲ್ಲಿ ಅನೇಕ ಕನ್ನಡ ಪದಗಳೊ ಸಹ ಇವೆ. ಈಗಲೂ ನಿಮ್ಮ ಊರಿನಲ್ಲಿ ೧ ಕೋಟಿ ಕನ್ನಡ ಮಾತನಾಡುವವರು ಸಿಗುತ್ತಾರೆ. ನಮ್ಮ ಕನ್ನಡಿಗರು ನಿಮ್ಮ ಭಾಷೆಯನ್ನು ಕಲಿತು, ನಿಮ್ಮ ಸಂಸ್ಕ್ರುತಿಯನ್ನು ನಿಮ್ಮ ಊರಿನಲ್ಲಿ ಆಚರಿಸುತ್ತಿದ್ದಾರೆ. ಅನೇಕ ವ್ಯಾಪಾರ, ವಹಿವಾಟು ಮತ್ತು ರಾಜಕೀಯದಲ್ಲೂ ಇರುವ ಸಂಗತಿ ನಿಮಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಪ್ರತಿ ಸಾರಿ ಚುನಾವಣೆಯಾದಗಲೂ ೭-೮ ಜನ ಕನ್ನಡಿಗರು ನಿಮ್ಮ ಊರಿನಲ್ಲಿ ಆರಿಸಿಬರುತ್ತಾರೆ. ಇದೂ ಸಹ ನಿಮಗೆ ಗೊತ್ತು.  ಅದ್ರೂ ಸಹ ನೀವು ಸುಮ್ಮನಿರುವಿರಿ. ನಿಮ್ಮ ಪಕ್ಷದಲ್ಲು ನಮ್ಮ ಕನ್ನಡಿಗರಿದ್ದಾರೆ. ಅವರು ಹೀಗೆ ನಿಮ್ಮ ಊರಿನಲ್ಲಿ ಗಲಾಟೆಯನ್ನು ಮಾಡುತ್ತಿದ್ದಾರಾ ನೀವೇ ಹೇಳಿ.
ಸಮಸ್ಯೆಯ ಮೂಲ ಇರುವುದು ಇಲ್ಲಿ:
ನೀವು ಮಹಾರಾಷ್ಟ್ರದಲ್ಲಿ ಮರಾಠಿಗೆ ಏನು ತೊಂದರೆ ಅನುಭವಿಸುತ್ತಿದ್ದೀರೋ, ನಾವು ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಅದೇ ತೊಂದರೆ ಅನುಭವಿಸುತ್ತಿದ್ದೇವೆ. ನಿಮ್ಮ ಭಾಷೆಗೆ ಕನ್ನಡಯಾವತ್ತೊ ತೊಂದರೆ ಆಗಲ್ಲ. ನಮಗೆ ಮಾರಾಠಿಯಿಂದ ತೊಂದರೆ ಆಗಲ್ಲ. ಮೊದಲು ನಾವು ಇದನ್ನು ಅರ್ಥ ಮಾಡಿಕೊಳ್ಳಬೇಕು. ನಮಗೆ ಈಗ ತೊಂದರೆ ಅಗುತ್ತಿರುವುದು ಅಂಗ್ಲ ಭಾಷೆಯಿಂದ. ಮಕ್ಕಳು ನಮ್ಮ ಭಾಷೆಯನ್ನು ಕಲಿಯುತ್ತಿಲ್ಲ. ನಾವು ನಮ್ಮ ಮಕ್ಕಳನ್ನು ಆಂಗ್ಲ ಭಾಷೆಯ ಶಾಲೆಗೆ ಸೇರುಸುತ್ತಿದ್ದೇವೆ. ಅವರಿಗೆ ನಮ್ಮ ಸಂಸ್ಕ್ರುತಿಯನ್ನು ಹೇಳಿಕೊಡುತ್ತಿಲ್ಲ. ಅವರು ಬೇರೆ ಸಂಸ್ಕ್ರುತಿಯನ್ನು ಅವರ ಜೀವನದಲ್ಲಿ ಅಳವಡಿಸಿಕೊಳ್ಳಲು ಹೊರಟಿದ್ದಾರೆ. ಇದು ಕೇವಲ ನಮ್ಮ ಎರಡು ರಾಜ್ಯಗಳ ಸಮಸ್ಯೆ ಅಲ್ಲ.  ಇದು ಈಗ ಇಡೀ ಭಾರತವನ್ನು ಹಬ್ಬುತ್ತಿದೆ. ಹಳ್ಳಿ ಹಳ್ಳಿಗಳಲ್ಲಿ ಆಂಗ್ಲ ಭಾಷೆಯ ಶಾಲೆಗಳು ಹುಟ್ಟಿಕೊಳ್ಳೂತ್ತಿವೆ. ಆ ರಾಜ್ಯಗಳ ಭಾಷೆಯ ಶಾಲೆಗಳು ಮುಚ್ಚಿಕೊಳ್ಳೂತ್ತಿವೆ. ನಿಜವಾದ ಸಮಸ್ಯೆ ಇರುವುದು ಇಲ್ಲಿ. ಈಗ ನಾವು ನೀವು ಎಲ್ಲಾರು ಸೇರಿಮಾಡಬೇಕಾದ ಕೆಲಸವೇನೆಂದರೆ ಪ್ರತಿ ರಾಜ್ಯದಲ್ಲೂ ಆ ರಾಜ್ಯಭಾಷೆಯಲ್ಲಿ ಮಕ್ಕಳಿಗೆ ಕನಿಷ್ಟ ೧೦ನೆ ತರಗತಿಯವರೆಗೂ ಶಿಕ್ಸಣ ದೊರಕುವಂತಾಗಬೇಕೆಂದು ಕಾನೂನು ರಚಿಸಿ ಅದರಂತೆ ಪ್ರತಿಯೊಬ್ಬರೂ ನಡೆದುಕೊಳ್ಳಬೇಕು. ಇಲ್ಲವಾದಲ್ಲಿ ಕನ್ನಡವೂ ಉಳಿಯುವುದಿಲ್ಲ., ಮರಾಠಿಯೂ ಊಳಿಯುವುದಿಲ್ಲ. ತೆಲುಗು, ತಮಿಳು, ಗುಜರಾತಿ, ಮಲೆಯಾಳಂ, ಹಿಂದಿಯೂ ಉಳಿಯುವುದಿಲ್ಲ ಯಾವ  ಭಾಷೆಯೂ ಉಳಿಯುವುದಿಲ್ಲ ಕಾಲಾಂತರದಲ್ಲಿ ಆಂಗ್ಲ ಭಾಷೆಯನ್ನು ಹೊರೆತುಪಡಿಸಿ.
ನಾವುಗಳು ನಮ್ಮ ನಮ್ಮ ಭಾಷೆಯನ್ನು ಈಗ ಉಳಿಸಿ ಮತ್ತು ಬೆಳಿಸಿಕೊಳ್ಳೂವ ಕಾಲ ಬಂದಿದೆ. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಸಾಹಿತಿಗಳು, ವಿದ್ವಾಂಸರು, ಗುರು ಹಿರಿಯರು, ನಾಡಿನ ಬುದ್ದಿಜೀವಿಗಳು, ತಂದೆ ತಾಯಂದಿರು, ವಿದ್ಯಾರ್ಥಿ ವಿದ್ಯಾರ್ಥಿನಿಯರು, ಕಲಾವಿದರು, ಕಾರ್ಮಿಕರು ಮತ್ತು ಸಮಾಜದ ಎಲ್ಲಾ ನಾಗರೀಕರು ಕುಳಿತು ಯೋಚಿಸುವ ವಿಷಯವಾಗಿದೆ.
ಇಂದು ಆಂಗ್ಲಭಾಷೆ ಕಲಿಸುವ ಕಾನ್ವೆಂಟ್ ಶಾಲೆಗಳಲ್ಲಿ, ಪ್ರಾದೇಶಿಕ ಭಾಷೆಯನ್ನು ಆಡುವ ಮಕ್ಕಳು ಶಿಕ್ಷೆಗೆ ಗುರಿಯಾಗುತ್ತಿದ್ದಾರೆ. ಶಾಲೆಯಲ್ಲಿ ಹೆಣ್ಣು ಮಕ್ಕಳು ಹೂ ಮುಡಿಯುವ ಹಾಗಿಲ್ಲ, ಕುಂಕುಮ ಇಡುವ ಹಾಗಿಲ್ಲ, ಹೀಗೆ ನಮ್ಮದಲ್ಲದ ಸಂಸ್ಕ್ರುತಿಯನ್ನು ಅವರ ಪುಟ್ಟ ತಲೆಯಲ್ಲಿ ತುಂಬಲಾಗುತ್ತಿದೆ. ಇದರಲ್ಲಿ ಧಾರ್ಮಿಕ ವಿಚಾರವೂ ಕೊಡ ಕಲೆಹಾಕಿಕೊಂಡಿದೆ.  ಆ ವಿಚಾರ ಪಕ್ಕಕ್ಕಿಟ್ಟು ನೋಡಿದರೂ ಸಹ ಮಕ್ಕಳಿಗೆ ಆಂಗ್ಲಭಾಷೆ ಬಿಟ್ಟು ಬೇರೆ ಭಾಷೆ ಮಾತನಾಡಿದರೆ ಹೊಡೆಯುವುದು ಎಷ್ಟು ಸರಿ? ಈ ಮಟ್ಟಕ್ಕೆ ಆ ಶಾಲೆಗಳು ಬೆಳೆದಿವೆ ಎಂದರೆ ಅದಕ್ಕೆ ಯಾರು ಕಾರಣ? ನೀವೆ ಯೋಚಿಸಿ.  ಇದನ್ನು ಬಿಟ್ಟು ನಮ್ಮನಮ್ಮಲ್ಲೇ ಜಗಳ ತರುವಿರಲ್ಲ. ಇದು ತಮ್ಮಂತಹ ಹಿರಿಯರಿಗೆ ಶೋಭೆ ತರುವ ವಿಷಯವಲ್ಲ.
ಅಭಿಮಾನವಿರಲಿ ದುರಭಿಮಾನ ಬೇಡ:
ನಿಮಗೆ ನಮ್ಮ ಗಂಗೂಬಾಯಿ ಹಾನಗಲ್, ಭೀಮಸೇನ ಜೋಷಿ, ಅನಂತಮೂರ್ತಿ, ಕಾರ್ನಾಡ್ ಮುಂತಾದವರ ಬಗ್ಗೆ ಅಭಿಮಾನವಿರುವ ಹಾಗೆ ನಮಗೂ ಸಹ ಸಚಿನ್, ನಾನಾ ಪಾಟೇಕರ್ ಅವರ ಬಗ್ಗೆ ಖಂಡಿತಾ ಆಭಿಮಾನವಿದೆ.  ನಾವು ಇವರನ್ನು ಕನ್ನಡಿಗರು, ಮರಾಠಿಗರು ಅಂತ ಬಂಧಿಸಿಡುವುದು ತಪ್ಪು ಅಲ್ವಾ ತಾತ. ಇವರೆಲ್ಲಾ ನಮ್ಮ ಹೆಮ್ಮಯ ಭಾರತಾಂಬೆಯ ಮಕ್ಕಳು. ಇವರೆಲ್ಲಾ ಈ ದೇಶಕ್ಕೆ ಹೆಮ್ಮೆ. ಗಾಂಧೀಜಿಯವರನ್ನು ನಾವು ಗುಜರಾತಿ ಅಂತ ಒಂದು ಭಾಷೆಗೆ ಒಂದು ರಾಜ್ಯಕ್ಕೆ ಮುಡುಪಿಡುವುದಕ್ಕೆ ಆಗುತ್ತದೆಯೇ.  ನಮ್ಮ ಚಂದ್ರಶೇಖರ ಕಂಬಾರರಿಗೆ ೮ನೆಯ ಜ್ನಾನಪೀಠ ಪ್ರಶಸ್ತಿ ಬಂದಾಗೆ ನೀವುಗಳು ಅವರಿಗೆ ಸನ್ಮಾನಿಸಿ ದೊಡ್ಡವರಾಗಬಹುದ್ದಿತ್ತು.  ಆದರೆ ನೀವು ಅವರಿಗೆ ಒದ್ದು ಸೊಂಟ ಮುರಿಯಿರಿ ಅಂತ ಹೇಳುವಿರಲ್ಲ. ಇದೇನಾ ನಿಮ್ಮ ಮರಾಠಿ ಸಂಸ್ಕ್ರುತಿ.  ಇದೇನಾ ನಿಮ್ಮ ಸಭ್ಯತೆ. ಇದೇನಾ ನಿಮ್ಮ ಭಾರತೀಯತೆ. ನಮ್ಮ ಕಂಬಾರರು ಭಾರತೀಯರಲ್ಲವೇ? ಅವರೇನು ಶತ್ರು ದೇಶದಿಂದ ಬಂದು ಇಲ್ಲಿ ವಿದ್ವಂಸಕ ಕೃತ್ಯ ಮಾಡಿರುವರೇ?
ಬೆಳಗಾವಿ ನಮ್ಮದೇ, ಎಲ್ಲೂ ಹೋಗಲ್ಲ:
ಇನ್ನು ಬೆಳಗಾವಿ ಕರ್ನಾಟಕೆದಲ್ಲಿದ್ದರೆ ನಿಮಗೇನು ನಷ್ಠ. ಅದು ಭಾರತದಲ್ಲಿದೆ ತಾನೇ ಇದೆ. ಹೀಗಿ ಒಂದು ಭಾಷೆಯನ್ನು ಆಡುವ ಜನ ಜಾಸ್ತಿ ಇದ್ದ ಕಾರಣಕ್ಕೆ ಆ ಪ್ರಾಂತ್ಯವನ್ನು ಬೇರೆ ರಾಜ್ಯಕ್ಕೆ, ಬೇರೆ ದೇಶಕ್ಕೆ ಕೊಟ್ಟುಬಿಡುವುದಕ್ಕೆ ಆಗುತ್ತದೆಯೇ? ಹೀಗೆ ಆದರೆ ಮೊದಲು ನೀವು ನಿಮ್ಮ ಮಹರಾಷ್ಟ್ರವನ್ನು ಕಳೆದುಕೊಳ್ಳಬೇಕಾಗುತ್ತದೆ. ಎಚ್ಚರೆ. ಪತ್ರ ಸ್ವಲ್ಪ ದೊಡ್ಡದಾಯಿತು. ಕ್ಷಮೆ ಇರಲಿ ತಾತ. ವಂದನೆಗಳು.

Wednesday, 11 January 2012

ಕೀಳರಿಮೆ ಬಿಡೋಣ:

ಮೊದಲು ನಮ್ಮ ಕನ್ನಡಿಗರು ನಮ್ಮಲ್ಲಿರುವ ಕೀಳರಿಮೆಯನ್ನು ಬಿಡಬೇಕು.  ನಾವು ಯಾವುದರಲ್ಲಿಯೂ ಕಡಿಮೆಯಿಲ್ಲ ಎಂಬುದನ್ನು ಮೊದಲು ಅರಿಯಬೇಕು.  ನಮ್ಮಲ್ಲಿ ೮ ಜ್ಣಾನಪೀಠಿಗಳಿದ್ದಾರೆ.  ಇದು ಭಾರತದಲ್ಲೇ ಹಿಂದಿಯನ್ನು ಬಿಟ್ಟರೆ ಅತ್ಯಧಿಕ.  (ಹಿಂದಿ-೯, ಬೆಂಗಾಳಿ-೫, ಮಲೆಯಾಳಂ, ಉರ್ದು-೪, ಗುಜರಾತಿ, ಮರಾಠಿ, ಒರಿಯ-೩, ಅಸ್ಸಾಮಿ, ಪಂಜಾಬಿ, ತಮಿಳು-೨, ತೆಲುಗು, ಕಾಶ್ಮೀರಿ, ಕೊಂಕಿಣಿ, ಸಂಸ್ಕ್ರುತ-೧) (http://en.wikipedia.org/wiki/Kannada) ನಮಗೆ ಇನ್ನೂ ೩-೪ ಜ್ನಾನಪೀಠ ಪ್ರಶಸ್ತಿಗಳು ಬರಬೇಕಿತ್ತೆಂದು ಹಿರಿಯರು, ಕವಿಗಳು, ಜ್ನಾನಿಗಳು ಹೇಳುತ್ತಾರೆ.  (ಅಡಿಗರು,  ತೇಜಸ್ವಿಯವರು, ಡಿ.ವಿ.ಗುಂದಪ್ಪನವರು, ಪು.ತಿ.ನರಸಿಂಹಸ್ವಾಮಿಯವರು ಮತ್ತು ಬೈರಪ್ಪನವರಿಗೆ ಈಗಾಗಲೆ ಒಲಿದು ಬರಬೇಕಾಗಿತ್ತು.)  ನಮಗೆ ಮೂರಾದರೂ ಸಾಹಿತ್ಯ ನೊಬೆಲ್ ಪ್ರಶಸ್ತಿಗಳು ಬರಬೇಕಾಗಿತ್ತೆಂದು ಹೇಳುವವರಿದ್ದಾರೆ.  (ಕುವೆಂಪು ಅವರಿಗೆ, ಮಾಸ್ತಿ ಯವರಿಗೆ ಮತ್ತು ಬೇಂದ್ರೆ ಯವರಿಗೆ)  ಒಬ್ಬರು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸೃತರು.  ೫೫ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಿದ್ದಾರೆ. (೧೯೫೫ ರಲ್ಲಿ ಮೊದಲ ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೇತರಾದ ಕುವೆಂಪು ಅವರಿಂದ ಹಿಡಿದು ಇತ್ತೀಚಿನ ೨೦೧೧ರ ಗೋಪಾಲಕೃಷ್ಣ ಪೈ ಅವರು) ೧೯೫೭ ಮತ್ತು ೧೯೬೩ ಈ ಎರಡು ವರ್ಷ ಬಿಟ್ಟರೆ ಪ್ರತಿ ವರ್ಷವೂ ಕೇಂದ್ರ ಸಾಹಿತ್ಯ ಪ್ರಶಸ್ತಿ ನಮಗೆ ಬಂದಿದೆ.  ೩ ರಾಷ್ಟ್ರಕವಿಗಳಿದ್ದಾರೆ. (ಗೋವಿಂದ ಪೈ ಅವರು, ಕುವೆಂಪು ಅವರು, ಜಿ.ಎಸ್.ಶಿವರುದ್ರಪ್ಪನವರು)  ಇನ್ನೇನು ಬೇಕು ಸ್ನೇಹಿತರೆ.  ನಾವು ಸಾಹಿತ್ಯ ಲೋಕದಲ್ಲಿ ಭಾರತದಲ್ಲೇ ಪ್ರಥಮ ಸ್ಥಾನದಲ್ಲಿದ್ದೇವೆ.   ಇನ್ನು ಕಲೆ, ಚಲನಚಿತ್ರ, ನಾಟಕ, ರಂಗಭೂಮಿ, ವಚನ ನಾಹಿತ್ಯ, ಗಮಕ, ಜಾನಪದ ಸಾಹಿತ್ಯ, ಭಾವಗಿತೆ, ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ಕ್ರೀಡೆ ಯಾವುದು ಬೇಕು ಸ್ನೇಹಿತರೆ, ಎಲ್ಲಾದರಲ್ಲೂ ಇರುವ ನಾವು ಯಾವುದರಲ್ಲಿ ಕಡಿಮೆ ಇದ್ದೇವೆ ಹೇಳಿ ಆಭಿಮಾನವೊಂದನ್ನು ಬಿಟ್ಟು.  ಇಲ್ಲಿ ನಾನು ಕೆಲವೊಂದು ಮತ್ತು ಕೆಲವರ ಉದಾಹರಣೆಯನ್ನು ಮಾತ್ರ ಕೊಟ್ಟಿದ್ದೇನೆ.  ಅನ್ಯಥಾ ಭಾವಿಸಿಬೇಡಿ.  ಇವೆಲ್ಲಾ ನಮಗೆ ಗೊತ್ತಿರುವ ಸಂಗತಿ.  ಆದರೂ ನಮ್ಮಲ್ಲಿ ಕೆಲವರಿಗೆ ನಮ್ಮನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳೂವುದರಲ್ಲಿಯೆ ಆನಂದ.  ಮೊದಲು ನಾವು ನಮ್ಮ ಈ ಕೀಳರಿಮೆಯನ್ನು ಬಿಟ್ಟು ಮುಂದಿನ ಯೋಚನೆಯನ್ನು ಮಾಡೋಣ. ಇಷ್ಟೆಲ್ಲಾ ಇದ್ದೂ ನಾವು ಯಾಕೆ ಹಿಂದುಳಿದ್ದೇವೆ ಎಂದರೆ ನಮ್ಮಲ್ಲಿರುವ ಅಭಿಮಾನ ಶೂನ್ಯವೇ ಎಂದು ನನ್ನ ಭಾವನೆ.  ನೀವು ಎನನ್ನುವಿರಿ ಸ್ನೇಹಿತರೆ.