Monday, 24 September 2012

ಹಿಂದಿಯ ಬಲವಂತದ ಮಾಘಸ್ನಾನ: ಭಾಗ-೧


ಈಗ ಫೇಸ್ ಬುಕ್ ಮತ್ತು ದಿನಪತ್ರಿಕೆಗಳಲ್ಲಿ ಹಿಂದಿ ದಿವಸ್, ಹಿಂದಿ ಸಪ್ತಾಹ, ಹಿಂದಿ ಮಾಸವನ್ನು ಪ್ರತಿ ವರ್ಷವೂ ಕೆಂದ್ರ ಸರ್ಕಾರ ಆಚರಿಸುವ ಬಗ್ಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿ, ಕೂಡಲೇ ಇಂತಹ ಹಿಂದಿ ಪ್ರಚಾರವನ್ನು ನಿಲ್ಲಿಸಲು ಆಗ್ರಹಿಸಿದ್ದಾರೆ. ಒಂದು ಅಭಿಯಾನವನ್ನು ರಚಿಸಿ ಅದರಲ್ಲಿ ಸಾರ್ವಜನಿಕರ ಸಹಿಯನ್ನು ಆಹ್ವಾನಿಸಿ ಅದನ್ನು ರಾಜ್ಯಪಾಲರಿಗೆ ಮತ್ತು ರಾಷ್ಟಪತಿಯವರಿಗೆ ಕಳುಹಿಸಿಕೊಡಲು ಕೋರಿದ್ದಾರೆ. ಬಲವಂತದ ಹಿಂದಿ ಹೇರಿಕೆ ಇಲ್ಲಿ ಬೇಡ ಎಂದು ಕೆಂದ್ರಕ್ಕೆ ಮನವರಿಕೆ ಮಾಡಿಕೊಡಲು ಕನ್ನಡಿಗರನ್ನು ಅಹ್ವಾನಿಸಿದ್ದಾರೆ.  ಈ ತರಹದ ಅಹವಾಲನ್ನು ರಾಷ್ಟಪತಿಯವರಿಗೆ, ರಾಜ್ಯಪಾಲರಿಗೆ ಅನೇಕ ಬಾರಿ ಈಗಾಗಲೇ ಕೊಡಲಾಗಿದೆ. ಆದರೆ ಅದರಿಂದ ಏನೂ ಪ್ರಯೋಜನವಾಗಿಲ್ಲ ಅಷ್ಟೇ.

ಇದು ಹೊಸದೇನಲ್ಲ, ದಶಕಗಳಿಂದಲೂ ಹಿಂದಿ ಪ್ರಚಾರ ಸಮಿತಿ ಸೆಪ್ಟಂಬರ್ ತಿಂಗಳಿನಲ್ಲಿ ಇಂತಹದೊಂದು ಹಿಂದಿ ಮಾಸ, ಹಿಂದಿ ದಿವಸ್ ಹಿಂದಿ ಸಪ್ತಾಹವನ್ನು ಆಚರಿಕೊಂಡು ಬರುತ್ತಾಲೇ ಇದ್ದಾರೆ. ಇದಕ್ಕಾಗಿ ಕೇಂದ್ರದ ಸಹಾಯ ಮತ್ತು ಹಣಕಾಸಿನ ವ್ಯವಸ್ಥೆ ಸಹ ಇದೆ. ಕೆಂದ್ರ ಸರ್ಕಾರದ ಕಛೇರಿಗಳಲ್ಲಿ ಹಿಂದಿಯನ್ನು ಕಲಿಸಲು ಮತ್ತು ಅದನ್ನು ಎಲ್ಲಾ ಕಡೆ ಬೆಳೆಸಲು ಕೆಂದ್ರ ಸರ್ಕಾರದ ಒಂದು ಸಚಿವಾಲಯವೇ ಇದೆ. ಇದು ಎಲ್ಲಾ ರಾಜ್ಯಗಳಲ್ಲಿ ಹಿಂದಿಯನ್ನು ಪ್ರಚಾರ ಮಾಡಲು ಮತ್ತು ಅದನ್ನು ಎಲ್ಲಾ ಕಡೆ ಬೆಳೆಸಲು ಸರ್ವ ಪ್ರಯತ್ನವನ್ನು ಮಾಡುತ್ತಲೇ ಇರುತ್ತದೆ.

ಸಾರ್ವಜನಿಕರಿಗೆ ಹಿಂದಿ ಭಾರತದ ರಾಷ್ಟ ಭಾಷೆ ಎಂದು ಸಾರಲು ಮತ್ತು ಅದನ್ನು ಅವರುಗಳು ನಂಬಲು ಎಲ್ಲಾ ಪ್ರಯತ್ನಗಳು ಜರುಗತ್ತಲೇ ಇದೆ. ಇದು ನಮಗೆ ಸ್ವಾತಂತ್ರ್ಯ ಬಂದ ದಿನದಿಂದಲೂ ಕಾಣಬಹುದು. ನಮ್ಮ ಸಂವಿಧಾನ ಭಾರತದ ಎಲ್ಲಾ ೨೨ ಪ್ರಮುಖ ಭಾಷೆಗಳನ್ನು ಮಾನ್ಯ ಮಾಡಿ, ದಕ್ಷಿಣ ಭಾರತದ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಮೊದಲುಗೊಂಡು ಎಲ್ಲಾ ಭಾಷೆಗಳು ರಾಷ್ಟ ಭಾಷೆಗಳೇ. ಆದರೆ ನಮ್ಮ ಜನರಿಗೆ ಇದು ಸರಿಯಾಗಿ ಮನವರಿಕೆಯಾಗದ ಕಾರಣ ಅನೇಕ ವಿದ್ಯಾವಂತರೂ ಸಹ ನಮ್ಮ ರಾಷ್ಟ ಬಾಷೆ ಹಿಂದಿಯೊಂದೆ ಎಂದು ತಿಳಿದಿದ್ದಾರೆ. (ಮಿಕ್ಕಿದ್ದು ನಾಳೆಗೆ)

Saturday, 22 September 2012

ಪರಭಾಷಿಕರ ಮೇಲೆ ಪ್ರೀತಿ,ವಿಶ್ವಾಸವಿರಲಿ


ಈ ನಡುವೆ ಕೆಲವು ದಿನಗಳಿಂದ ಫೇಸ್ ಬುಕ್ ನಲ್ಲಿ ನಾನು ಕಂಡಂತೆ ಕೆಲವರು ನಮ್ಮ ಕನ್ನಡವನ್ನು ಪ್ರೀತಿಸುವ ಭರದಲ್ಲಿ ಪರಭಾಷೆಯನ್ನು/ಪರಭಾಷಿಕರನ್ನು/ಅವರ ಚಿತ್ರಗಳನ್ನು/ ಅವರ ನಟ/ನಟಿಯರನ್ನು ತೆಗಳುವುದು ಮಾಡುತ್ತಿರುತ್ತಾರೆ. ನಮಗೆ ನಮ್ಮ ಭಾಷೆಯ ಮೇಲೆ ಮತ್ತು ನಮ್ಮ ನಟರ ಬಗ್ಗೆ ಎಷ್ಟು ಪ್ರೀತಿ, ಅಭಿಮಾನವಿದೆಯೋ, ಅವರಿಗೆ ಅವರ ಭಾಷೆಯ/ನಟರ ಮೇಲೆ ಪ್ರೀತಿ, ಅಭಿಮಾನ ಇರುವುದು ಸಹಜ, ಇರಲಿ ಬಿಡಿ. ಅದರಿಂದ ನಮಗೇನು ತೊಂದರೆ. ನಾವು ಅವರನ್ನು ಪ್ರೀತಿಯಿಂದ ಗೆಲ್ಲಬೇಕೆ ಹೊರತು ದ್ವೇಷದಿಂದ ಅಲ್ಲ. ನಾವು ಅವರಿಗೆ ಕನ್ನಡವನ್ನು ಕಲಿಸೋಣ. ನಮ್ಮ ಒಳ್ಳೆಯ ಕನ್ನಡ ಚಿತ್ರಗಳನ್ನು ಅವರಿಗೆ ತೋರಿಸೋಣ. ನಮ್ಮ ಸಾಹಿತ್ಯವನ್ನು ಅವರಿಗೆ ಪರಿಚಯಿಸೋಣ. ನಮ್ಮ ಸಂಸ್ಕೃತಿಯನ್ನು ಅವರಿಗೆ ಹೇಳಿಕೊಡೋಣ. ನಮ್ಮ ಮಾಸ್ತಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಟಿ.ಪಿ.ಕೈಲಾಸಂ ಅವರ ಮನೆಯ ಭಾಷೆ ತಮಿಳು, ನಮ್ಮ ನಿಸಾರ್ ಅಹಮದ್ ಅವರ ಮನೆಯ ಬಾಷೆ ಉರ್ದು, ಕಾರ್ನಾಡ್ ಅವರ ಮನೆ ಮಾತು ಕೊಂಕಿಣಿ.  ಅನೇಕ ಪರಭಾಷಿಕರು ಕನ್ನಡಿಗರಿಗಿಂತ ಅಮೋಘ ಸೇವೆಯನ್ನು ಕನ್ನಡಕ್ಕೆ ಮಾಡಿದ್ದಾರೆ. ಇವರು ಕವಿ, ಸಾಹೈತಿಗಳು. ಸಾಮಾನ್ಯ ಜನ ಕೂಡ ಕನ್ನಡಿಗರಿಗಿಂತ ಹೆಚ್ಚಿನ ಪ್ರೀತಿಯನ್ನು ಕನ್ನಡಕ್ಕೆ ತೋರಿದ್ದಾರೆ. ಮಕ್ಕಳಿಗೆ ಕನ್ನಡವನ್ನು ಕಲಿಸಿದ್ದಾರೆ. ಮನೆಗೆ ಕನ್ನಡ ದಿನಪತ್ರಿಕಯನ್ನು ತರಿಸುವವರಿದ್ದಾರೆ. ಅನೇಕ ಮುಸ್ಲಿಂ ಭಾಂಧವರು ಮನೆಯಲ್ಲಿ ಉರ್ದು ಭಾಷೆಯನ್ನು ಮಾತನಾಡಿದರೂ ಕನ್ನಡ ಪತ್ರಿಕಯನ್ನು ಓದುತ್ತಾರೆ. ಅಂತಹ ಅನೇಕರು ನನ್ನ ಸ್ನೇಹಿತರಾಗಿದ್ದಾರೆ. ನನ್ನ ಸ್ನೇಹಿತರಲ್ಲಿ ಅನೇಕರು ತೆಲುಗು/ತಮಿಳು/ಉರ್ದು/ಮಲೆಯಾಳಂ ಮಾತೃಭಾಷೆಯವರಾಗಿದ್ದಾರೆ. ಅವರಲ್ಲಿ ಅನೇಕರು ಮನೆಯಲ್ಲಿ ಕೂಡ ಕನ್ನಡ ಮಾತನಾಡುತ್ತಾರೆ. ಇವರಿಗೆ ಏನು ಹೇಳುವಿರಿ? ನಾವು ಪರಭಾಷಿಕರಿಗೆ ಕನ್ನಡದ ವಾತಾವರಣವನ್ನು ಉಂಟುಮಾಡಿಕೊಟ್ಟರೆ ಎಲ್ಲವೂ ಸರಿಹೋದೀತು. ತಪ್ಪು ನಮ್ಮಲ್ಲಿ ಇಟ್ಟುಕೊಂಡು ಎಲ್ಲರನ್ನೂ ಬಾಯಿಗೆ ಬಂದಂತೆ ಬೈದರೆ ಹೇಗೆ ಸ್ನೇಹಿತರೆ.

Tuesday, 18 September 2012

ಕನ್ನಡದ ಮಾಸ ಪತ್ರಿಕೆಗಳು:


೬೦-೭೦-೮೦ರ ದಶಕದಲ್ಲಿ "ಸುಧಾ, ಪ್ರಜಾಮತ, ಕಸ್ತೂರಿ, ಮಯೂರ, ಕರ್ಮವೀರ, ತುಷಾರ, ತರಂಗ" ಮುಂತಾದ ವಾರ/ಮಾಸ ಪತ್ರಿಕೆಗಳಿಲ್ಲದ ಕನ್ನಡಿಗರ ಮನೆಯೇ ಇರಲಿಲ್ಲವೇನೋ. ಅನೇಕ ಮನೆಗಳಲ್ಲಿ ಈ ವಾರ/ಮಾಸ ಪತ್ರಿಕೆಗಳಿಗಾಗಿ ಮೊದಲು ತಾವೇ ಓದಬೇಕೆಂದು ಜಗಳಗಳೂ ನಡೆದದ್ದು ಉಂಟು ಎಂದರೆ ಈಗಿನವರು ನಗುತ್ತಾರೇನೋ? ಅದರಲ್ಲಿ ಬರುತ್ತಿದ್ದ ಕಥೆ, ಧಾರಾವಾಹಿಗಳು ಬಹಳ ಚೆನ್ನಾಗಿರುತ್ತಿತ್ತು. ಅನೇಕ ಕಥೆಗಳು ಮತ್ತು ಧಾರಾವಾಹಿಗಳು ನಮ್ಮ ಕನ್ನಡ ಚಿತ್ರರಂಗದ ನಿರ್ದೇಶಕರನ್ನು ಆಕರ್ಷಿಸಿ, ಅವರುಗಳು ಅದನ್ನು ಆಧರಿಸಿ  ಚಿತ್ರಗಳೂ ಸಹ ತೆರೆಗೆ ಬಂದವು. ಅಂತ, ನಾ ನಿನ್ನ ಮರೆಯಲಾರೆ. ಸಿಪಾಯಿ ರಾಮು, ಹೊಂಬಿಸಿಲು ಮುಂತಾದವು ಪ್ರಮುಖ ಚಿತ್ರಗಳು. ಆಗಿನ ನಿರ್ದೇಶಕರಿಗೆ ಈ ಕಥೆ, ಧಾರವಾಹಿಗಳ ಬಗ್ಗೆ ಆಸಕ್ತಿಯೂ ಇತ್ತು. ಮುಂದೆ ಅನೇಕ ಖಾಸಿಗಿ ಟಿ.ವಿ.ಗಳು ಲಗ್ಗೆ ಇಟ್ಟಾಗ ಬಹಳಷ್ಟು  ಓದುಗರು ತೆರೆಗೆ ಸರಿದರು.  ಈ ವಾರ/ಮಾಸ ಪತ್ರಿಕೆಗಳ ಪ್ರಸಾರ ಸಂಖ್ಯೆಯೂ ಕಡಿಮೆಯಾಯಿತು. ಆದರೆ ಈ ಪತ್ರಿಕೆಗಳು ಈಗಲೂ ಬರುತ್ತಿರುವುದು ಬಹಳ ಸಂತೋಷವಾದ ವಿಷಯವಾಗಿದೆ. ಮಧ್ಯಮ ವರ್ಗದ ಕನ್ನಡಿಗರ ಮಹಿಳೆಯರು ಹೊರಗಡೆ ಕೆಲಸ ಮಾಡಲು ಹೊರಟಾಗ ಬಸ್ಸಿನಲ್ಲಿ ಈ ವಾರ/ಮಾಸ ಪತ್ರಿಕೆಗಳನ್ನು ಓದುವವರನ್ನು ಕಾಣಬಹುದಿತ್ತು. ಮನೆಯಲ್ಲಿ ಈಗ ಓದುಗರ ಸಂಖ್ಯೆ ಕಡಿಮೆಯಾಗಿ ಟಿ.ವಿಯಲ್ಲಿ ಧಾರವಾಹಿಗಳ ನೋಡುಗರ ಸಂಖ್ಯೆ ಜಾಸ್ತಿ, ಈಗ ಅದೇ ಮಹಿಳೆಯರು, ಪುರುಷರು, ಹುಡುಗ, ಹುಡುಗಿಯರು ಮೊಬೈಲ್ ನಲ್ಲಿ ಎಫ್.ಎಂ ರೆಡಿಯೋಗಳಲ್ಲಿ ಹಾಡು ಕೇಳುವುದು ಜಾಸ್ತಿ ಯಾಗಿ ಇದೆಲ್ಲಾ ಮರೆಯಾಗಿದೆ

Friday, 14 September 2012

ದೇವರೆಲ್ಲಿದ್ದಾನೆ? ಭಾಗ-೭


ಕಳೆದ ಸಂಚಿಕೆಯಿಂದ

ಮನುಷ್ಯರು ಈ ಭೂಮಂಡಲದಲ್ಲಿ ಸುಖದಿಂದ ಸಂತೋಷದಿಂದ ಬದುಕಿ ಬಾಳಲು ನಮಗಾಗಿ ಶುದ್ದ ಗಾಳಿ, ನೀರು, ಕಾಡು, ಮೇಡು, ಪ್ರಾಣಿ ಸಂಕುಲಗಳು, ಖನಿಜ, ಆಹಾರ ಹೀಗೆ ಸಕಲವನ್ನೂ ಪ್ರಕೃತಿ ದಯಪಾಲಿಸಿದೆ. ಈ ಭೂಮಂಡಲದಲ್ಲಿ ನಮಗೆ ಯಾವುದಕ್ಕೂ ಕೊರತೆಯಾಗಿಲ್ಲ. ಆದರೆ ನಾವುಗಳು ಅದನ್ನು ನಮ್ಮ ನಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಸ್ವರ್ಗ ಸುಖವನ್ನು ಅನುಭವಿಸಿ ಮುಂದಿನ ಪೀಳಿಗೆಯನ್ನು ನರಕಕ್ಕೆ ದೂಡುತ್ತಿದ್ದೇವೆ. ನಾವು ನಮ್ಮಲ್ಲಿರುವ ಸಣ್ಣತನ, ಅಹಂ, ಸ್ವಾರ್ಥದಿಂದ ನಮ್ಮ ಮನ, ಮನೆ, ಹಾದಿ, ಬೀದಿ, ಊರು, ಕೇರಿ, ರಾಜ್ಯ, ದೇಶ ಅಷ್ಟೇ ಏಕೆ ಇಡೀ ಪ್ರಪಂಚವನ್ನೇ ನರಕಮಾಡಿಕೊಂಡುಬಿಟ್ಟಿದ್ದೇವೆ. ನಾವೆಷ್ಟು ಮೂರ್ಖರಿರಬೇಕು ಅಲ್ವಾ? ಸ್ವರ್ಗದಂತ ನಾಡನ್ನು ನರಕ ಮಾಡಿ ಇನ್ನೆಲ್ಲೋ ಸ್ವರ್ಗವಿದೆ ಎಂದು ನಂಬಿದ್ದೇವಲ್ಲಾ, ನಾವು ಎಷ್ಟು ಮೂರ್ಖರಿರಬೇಕು.

ಡಾರ್ವಿನ್ ಅವರ ವಿಕಾಸವಾದದ ತಿರುಳಿನಂತೆ ಮಂಗನಿಂದ ಮಾನವನಾದುದು ನಮಗೆಲ್ಲರಿಗೂ ತಿಳಿದೇ ಇದೆ. ನಾವು ನಮ್ಮ ದೈಹಿಕ ನೋಟದಲ್ಲಿ ಮನುಷ್ಯರಂತೆ ಕಂಡರೂ ನಮ್ಮಲ್ಲಿರುವ ಮಂಗನ ಬುದ್ದಿ ಕಡಿಮೆಯಾಗಿಲ್ಲ ಅಂತಲೇ ಹೇಳಬೇಕು. ಮಂಗನಂತೆ ನಾವು ಒಮ್ಮೊಮ್ಮೆ ಒಳ್ಳೆಯವರಾಗಿ ನಟಿಸುತ್ತಾ, ಅನೇಕ ಬಾರಿ ಮೃಗಗಳಂತೆ ವರ್ತಿಸುತ್ತಾ, ಕೆಲವೊಮ್ಮೆ ಹುಚ್ಚರಂತಾಡುವ ನಮ್ಮ ಸ್ಥಿತಿಯೇ ಅಯೋಮಯವಾಗಿದೆ.

ದೇವರು ಬೇರೆ ಎಲ್ಲಿಯೂ ಇಲ್ಲ ಅವನು ನಮ್ಮಲ್ಲಿಯೇ ಇದ್ದಾನೆ. ನೂರಾರು ಊರುಗಳನ್ನು ಸುತ್ತಿ, ಸಾವಿರಾರು ದೇವಸ್ಥಾನಗಳಲ್ಲಿ ಕಾಣದ ದೇವರನ್ನು ಹುಡುಕುವ ನಾವು ನಮ್ಮ ಮನದಲ್ಲಿರುವ ಸ್ನೇಹ, ಪ್ರೀತಿ, ವಿಶ್ವಾಸ, ಮಾನವೀಯತೆಯೆಂಬ ದೇವರನ್ನು ಮರತೇ ಬಿಟ್ಟಿರುವುದು ನಮ್ಮ ಬದುಕಿನ ಬಹು ದೊಡ್ಡ ವ್ಯಂಗ. ಮನೆಯೇ ಮಂತ್ರಾಲಯ, ಮನಸೇ ದೇವಾಲಯ ಎಂಬುದನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದರೆ ನಮ್ಮ ಜೀವನವು ಸಾರ್ಥಕವಾಗುವದಷ್ಟೇ ಅಲ್ಲದೆ, ನಮ್ಮ ಭೂಮಂಡಲವೇ ನೆಮ್ಮದಿಯಿಂದಿರುತ್ತದೆ ಎಂಬ ಸದಾಶಯದೊಂದಿಗೆ……….(ಮುಗಿಯಿತು)

Thursday, 13 September 2012

ದೇವರೆಲ್ಲಿದ್ದಾನೆ? ಭಾಗ-೬


ಕಳೆದ ಸಂಚಿಕೆಯಿಂದ

ದೇವರು ಇದ್ದಾನೆಯೋ? ಇಲ್ಲವೊ? ಅದನ್ನು ನಾವು ಸ್ವಲ್ಪ ಪಕ್ಕಕ್ಕಿಟ್ಟು ನೋಡಿದರೆ, ನಮ್ಮ ಪೂರ್ವಜರು ನಿಜವಾಗಿಯೂ ಅತ್ಯಂತ ಬುದ್ದಿವಂತರು. ನಮಗೆ ದೇವರು, ಸ್ವರ್ಗ, ನರಕದ ಕಲ್ಪನೆಯನ್ನು ಕೊಟ್ಟು ಒಳ್ಳೆಯದನ್ನೇ ಮಾಡಿದ್ದಾರೆ ಎಂದು ಅನಿಸುವುದುಂಟು. “ಒಳ್ಳೆಯ ಕೆಲಸವನ್ನು ಮಾಡಿದರೆ, ದೇವರ ಅನುಗ್ರಹ ಪಡೆಯಬಹುದು, ಪುಣ್ಯ ಸಂಪಾದಿಸಬಹುದು. ಅದರ ಮುಖಾಂತರ ಸ್ವರ್ಗದ ಸುಖವನ್ನು ಅನುಭವಿಸಬಹುದು.  ಕೆಟ್ಟ ಕೆಲಸ ಮಾಡಿದರೆ, ದೇವರಿಂದ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಪಾಪದ ಕೆಲಸದಿಂದ ನರಕ ಕಟ್ಟಿಟ್ಟ ಬುತ್ತಿ” ಎನ್ನುವುದರ ಮುಖಾಂತರ ಜನರು ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಲು ಪ್ರೇರೇಪಿಸುವ ರೀತಿ ನಿಜಕ್ಕೂ ಅಭಿನಂದನೀಯ ಮತ್ತು ಅನುಕರಣೀಯ ಕೂಡ.

ಸ್ವರ್ಗ, ನರಕಗಳು ಮೇಲೆ ಎಲ್ಲಿದೆಯೋ ಯಾರಿಗೂ ಗೊತ್ತಿಲ್ಲ, ಆದರೆ ಅದು ಇದೆ ಎಂದು ಎಲ್ಲಾ ಧರ್ಮದವರೂ ನಂಬುತ್ತಾರೆ. ನಾವು ಒಳ್ಳೆಯ ಕೆಲಸ ಮಾಡಿದರೆ ಸ್ವರ್ಗ ಪ್ರಾಪ್ತಿ, ಇಲ್ಲದಿದ್ದರೆ ನರಕ ಕಟ್ಟಿಟ್ಟ ಬುತ್ತಿ ಎಂದು ನಂಬುವ ನಾವು ಯಾಕೆ ಎಲ್ಲಾ ಗೊತ್ತಿದ್ದೂ ಕೆಟ್ಟ ಕೆಲಸಗಳನ್ನು ಮಾಡುತ್ತೇವೆ. ನಾವು ಮಾಡುತ್ತಿರುವ ತಪ್ಪು ನಮ್ಮ ಅರಿವಿಗೆ ಬರುತ್ತದೆ, ಆದರೂ ನಾವು ತಪ್ಪು ಮಾಡುತ್ತೇವೆ. ನಮ್ಮ ತಪ್ಪನ್ನು ಕ್ಷಮಿಸಲು ದೇವರಿಗೆ ಕಾಣಿಕೆ ಮುಖಾಂತರ ದೇವರನ್ನು ಒಲಿಸಿಕೊಳ್ಳಲು ನೋಡುತ್ತೇವೆ.

ಎಲ್ಲಾ ಧರ್ಮಗ್ರಂಥಗಳಲ್ಲಿ ಮಾನವ ಕುಲದ ಉದ್ದಾರಕ್ಕಾಗಿ, ಏಳಿಗೆಗಾಗಿ ಅನೇಕ ಉತ್ತಮ ವಿಷಯಗಳನ್ನು ತಿಳಿಸಿದ್ದಾರೆ. ನಾವು ಅದನ್ನು ಸರಿಯಾಗಿ ಓದದೆ ಅಥವಾ ಓದಿಯೂ ಸರಿಯಾಗಿ ಅರ್ಥಮಾಡಿಕೊಳ್ಳದೆ, ಅದರಲ್ಲಿರುವ ಉತ್ತಮವಾದ ವಿಚಾರಗಳನ್ನು ನಮ್ಮಿಷ್ಟಕ್ಕೆ ತಕ್ಕಂತೆ ತಿರುಚಿ ಅವುಗಳನ್ನು ನಮಗೆ ಸಾಧ್ಯವಾದಷ್ಟೂ ಅಧ್ವಾನಗೊಳಿಸಿಬಿಟ್ಟಿದ್ದೇವೆ. ಧರ್ಮ, ಸಂಸ್ಕೃತಿಯ ಹೆಸರಿನಲ್ಲಿ ಮೂಡನಂಬಿಕೆಗಳನ್ನು ಅನುಕರುಣೆ ಮಾಡುತ್ತಿದ್ದೇವೆ ಮತ್ತು ಅದನ್ನು ಮುಂದಿನ ಪೀಳಿಗೆಗೂ ವಿಸ್ತರಿಸುತ್ತಿದ್ದೇವೆ. (ಮಿಕ್ಕಿದ್ದು ನಾಳೆಗೆ)