Saturday 8 March 2014

ಭಾನುವಾರದ ಕಿಚಡಿ


ಅಂಕಲ್, ಈ ಆಮ್ ಆದ್ಮಿ, ತೃತೀಯರಂಗದವರ ಕಾಟ ಹೆಚ್ಚಾಗ್ತಾ ಇದೆ. ಎಲ್ಲಾ ಕಡೆ ನಾವೇ ಸರ್ಕಾರ ಮಾಡೋದು. ಈ ಸರಿ ನೋಡಿ ಹಸ್ತ ಮತ್ತೆ ಕಮಲಕ್ಕೆ ಹೇಗೆ ಹೊಡೀತೀವಿ ಗೂಟ ಅಂತ ಹೇಳಿಕೊಂಡು ತಿರುಗುತ್ತಿದ್ದಾರೆ. ನಿಮ್ಮ ಕಿವಿಗೂ ಬಿದ್ದಿರಬೇಕಲ್ವಾ ಅಂಕಲ್, ಅವರಿಗೆ ಸರಿಯಾಗಿ ಬುದ್ದಿ ಕಲಿಸಬೇಕು. ಆ ಮಮತಾ, ಲಲಿತಾ, ನಿತೇಶು ಎಲ್ಲಾ ಲೆಫ್ಟು, ರೈಟು ಮಾಡ್ತಾ ಇದ್ದಾರೆ. ನಾನು ಈಗಲೇ ಅಮ್ಮನ ಹತ್ರ ಮಾತಾಡ್ತೀನಿ. ನಿಮಗೂ ಮೆಜಾರಿಟಿ ಸಿಗೋದು ಕಷ್ಟ. ನೀವು ಎಷ್ಟೇ ಕೂಗಾಡಿದ್ರೂ ನಿಮಗೆ ಅಬ್ಬಬ್ಬಾ ಅಂದ್ರೆ ಇನ್ನೂರು ಬರಹುದು. ನಮಗೆ ಈ ಸರಿ ಎಂಭಾತ್ತೋ, ನೂರೋ ಅಷ್ಟೇ ಅಂತ ಅನ್ಸತ್ತೆ. ನಮಗೆ ಯಾರ ಸಹವಾಸನೂ ಬೇಡ. ಈಗೀಗ ಯಾರನ್ನು ನಂಬಕ್ಕೆ ಆಗಲ್ಲ. ನೋಡಿ ಆ ಪಾಸ್ವಾನ್ ಮೊದಲು ನಿಮ್ಮ ಜೊತೆ ಇದ್ರು. ಆಮೇಲೆ ನಮ್ಮ ಜೊತೆ ಬಂದ್ರು. ಈಗ ನಿಮ್ಮ ಹಿಂದೆ. ಆ ಲಾಲೂನ್ನು ನಂಬಕ್ಕೆ ಆಗಲ್ಲ. ಒಂದ್ಸಲ ನಮ್ಮ ಜೊತೆ ಅಂತಾರೆ, ಮತ್ತೊಂದ್ಸಲ ತೃತೀಯ ರಂಗ ಅಂತಾರೆ. ಅದಕ್ಕೆ ನಾನೇ ನಿಮಗೆ ಮೊದಲು ಫೋನ್ ಮಾಡಿದ್ದು. ನೀವೂ ಸಹ ಕಂಡ ಕಂಡವರ ಜೊತೆ ಸೇರೋದು ಬಿಡಿ. ಅವರು ಹನ್ನೊಂದು ಪಾರ್ಟಿ ನಮ್ಮನ್ನ ಚುನಾವಣೆಯಲ್ಲಿ ಸೋಲಿಸ್ತೀವಿ ಅಂದ್ರೆ,  ನಾವಿಬ್ಬರು ಜೊತೆಯಾಗಿ ಅವರನ್ನು ಸೋಲಿಸಕ್ಕೆ ಆಗಲ್ವಾ ಅಂಕಲ್, ಒಂದ್ಸಾರಿ ಯೋಚ್ನೆ ಮಾಡಿ. ಮೊದಲು ಮೂವತ್ತು ತಿಂಗಳು ಒಬ್ರು ಪ್ರಾಧಾನಿ, ಆಮೇಲೆ ಇನ್ನೊಬ್ರು ಅಯ್ತಾ ಅಂಕಲ್. ನೀವು ಮಾತಾಡಿ ನಿಮ್ಮ ಕಡೆಯವರ ಹತ್ರಅಂತ ರಾಹುಲ್ ಮೋದಿಗೆ ಫೋನ್ ಮಾಡಿದ್ರು.

ನೀವು ಬೇಕಾದ್ರೆ ಯಾರ ಜೊತೆಗಾದ್ರೂ ಮಾತಾಡಿ ಆಯ್ತಾ.  ನಾನು ಯಾರ ಜೊತೆಗೂ ಮಾತಾಡಲ್ಲ. ನಮ್ಮಲ್ಲಿ ನಾನು ಹೇಳಿದ್ರೆ ಆಯ್ತು ಅಷ್ಟೆ. ಎಲ್ಲರೂ ಹೂ ಅನ್ನಬೇಕು. ಎಲ್ಲರೂ ನಮೋ ನಮೋ ಅಂತ ನನ್ನ ಹಿಂದೆ ಸುತ್ತುತ್ತಿದ್ದಾರೆ, ನೋಡ್ತಾ ಇಲ್ವ ನೀವು. ಆದ್ರೆ ಒಂದು ಕಂಡೀಷನ್ನು. ಮೊದಲ ಮೂವತ್ತು ತಿಂಗಳು ನಾನು ಪ್ರಧಾನಿ, ಆಮೇಲೆ ನೀವು ಬೇಕಾದರೆ ಅಗಿ. ನಮ್ಮದೇನೂ ತಕರಾರಿಲ್ಲ. ಕರ್ನಾಟಕದಲ್ಲಿ ಒಂದ್ಸಾರಿ ಒಬ್ರು ಬತ್ತಿ ಇಟ್ಟಿದ್ದು ಇನ್ನೂ ನಾವು ಮರೆತಿಲ್ಲ”.
ಒಂಥರಾ ನೀವು ಹೇಳ್ತಾ ಇರೋದು ಸರಿಯಾಗೇ ಇದೆ. ಈ ಸಲ ಮಿಸ್ಸಾದ್ರೆ ಭಾಳ ಕಷ್ಟ ಆಗಿಬಿಡತ್ತೆ. ನಾನೀಗಲೇ ಐದು ಡಜನ್ ಕುರ್ತಾ ಹೊಳಿಸಿಕೊಂಡು ರೆಡಿಯಾಗಿದ್ದೇನೆ ಪ್ರಧಾನಿ ಆಗಕ್ಕೆ. ಆ ನಿತೀಶ್ ನ ನೆನಸಿಕೊಂಡ್ರೀ ನಂಗೆ ಮೈ ಉರಿಯತ್ತೆ. ನಾನೇ ಪ್ರಧಾನಿ ಅಂತ ಎಲ್ಲಾ ಕಡೆ ಹೇಳ್ಕೊಂಡು ತಿರುಗ್ತಾ ಇದಾನೆ. ಮೊದಲು ಅವನಿಗೆ ಬುದ್ದಿ ಕಲಿಸಬೇಕು. ಆಮೇಲೆ ಆ ಆಮ್ ಆದ್ಮಿ ಅಂತೆ, ಆ ಡೆಲ್ಲಿ ಜನಕ್ಕೆ ಬುದ್ದಿ ಇಲ್ಲ. ಮಾವಿನ ಹಣ್ಣು ಫ್ರೀಯಾಗಿ ಸಿಗತ್ತೆ ಆವಯ್ಯನ ಕರೆದುಕೊಂಡು ಬಂದು ಕೂರಿಸಿದ್ರು. ಕೊನೆಗೆ ಏನು ಮಾಡ್ದ. ಓಟೆ ಕೊಟ್ಟು ಕೈ ತೊಳಕೊಂಡ. ಭಲೇ ಕಿಲಾಡಿ ಇದಾನೆ ಅವನು ರಾಹುಲ್. ನಾವೆಲ್ಲ ಇಷ್ಟು ವರ್ಷ ಬೇರೆಯವರಿಗೆ ಟೋಪಿ ಹಾಕ್ತಾ ಏನೋ ರಾಜಕೀಯ ಮಾಡ್ಕೊಂಡು ಬಂದ್ರೆ, ಅವನು ಬೇರೆಯವರ ಟೋಪಿನ ಎಗರಿಸಿ ಅವನು ಹಾಕಿಕೊಂಡು ಭಾಳ ಮಿಂಚ್ತಾ ಇದಾನೆಅಂತ ಒಂದೇ ಉಸುರಿಗೆ ಹೇಳಿದ್ರು.

ಅವನು ಯಾರ ಟೋಪಿ ಎಗರಿಸಿ ಹಾಕ್ಕೊಂಡ ಅಂಕಲ್ನಂಗೇನು ಗೊತ್ತಾಗ್ತಾ ಇಲ್ಲಅಂದ್ರು ರಾಹುಲ್. “ಅದಕ್ಕೇ ನಾನು ಹೇಳೋದು ನೀನಿನ್ನು ಬಚ್ಚಾ ಅಂತ, ನಿಂಗೆ ಏನೋ ಗೊತ್ತಾಗೋದಿಲ್ಲ. ಮಾತಿಗೆ ಮುಂಚೆ ಅಮ್ಮಾ ಅಮ್ಮಾ ಅಂತ ಅಮ್ಮನ ಸೆರಗು ಹಿಂಡ್ಕೊಂಡು ಸುತ್ತಾ ಇರ್ತೀಯ. ಗ್ರೋ ಅಪ್ ಮೈ ಬಾಯ್ಅಂದ್ರು. “ ಏನು ಅಂಕಲ್ ನೀವು, ಹೀಗೆಲ್ಲಾ ಬೈದ್ರೆ ಅಮ್ಮನಿಗೆ ಹೇಳ್ತೀನಿ ಅಷ್ಟೇ”. ನೋಡು ತಿರುಗಾ, ಸುಮ್ಮನೆ ತಮಾಷೆಗೆ ಹೇಳ್ದೆ ಅಷ್ಟೇ. ಕೋಪ ಮಾಡಿಕೋ ಬೇಡ ಮರಿ. ಜೀವನದಲ್ಲಿ ಮೊದಲ ಬಾರಿಗೆ ಒಳ್ಳೆ ಕೆಲ್ಸ ಮಾಡಿ ನಂಗೆ  ಪೋನ್ ಮಾಡಿದ್ಯಾ, ನೀನು ಹೇಳ್ತಾ ಇರೋದು ಸರಿಯಾಗಿದೆ. ಈ ಸಲ ಕೊಡೋಣ ಎಲ್ಲರಿಗೂ ಒಂದು ಜಟ್ಕಾ. ಅವರು ಯಾರೂ ಜೀವನದಲ್ಲಿ ಮರೆಯ ಬಾರದು ಅಂದ್ರು ಅಂಕಲ್ಲು

ಅದ್ಸರಿ ಅಂಕಲ್, ಅವರು ಟೋಪಿ ಹಾಕಿ ಕೋಳ್ತಾ ಇರೋದು ಯಾರದು?”
ಅದು ಅಣ್ಣಂದು ಅಲ್ವಾ? ಮರಿ
, ಹೌದು ಅಂಕಲ್, ನಾನು ಅದನ್ನು ಒಂದ್ಸಲ ನೋಡಿದ್ದೆ ಅವರ ತಲೆ ಮೇಲೆ. ಅದನ್ನ ಎಗರಿಸಿ ಇವ್ರು ಹಾಕಿಕೊಂಡ್ರು ಬಿಟ್ರಾ?, ಈಗ ಅವ್ರು ಏನು ಅಂಕಲ್ ಮಾಡ್ತಾರೆ ಅಂಕಲ್, ಪಾಪ ಅವರಿಗೆಗೆ ಟೋಪಿನೇ ಇಲ್ವಲ್ಲಾ. ನೀವು ಎಲ್ಲಾ ಅಬ್ಸರ್ವ್ ಮಾಡ್ತೀರಾ. ನೀವು ತುಂಬಾ ಗ್ರೇಟು” ಅಂದ್ರು ರಾಹುಲ್. ಮೀಸೆಯ ಅಡಿಯಲ್ಲೇ ನಕ್ಕ ಅಂಕಲ್, “ಮರಿ ನೀನು ಇನ್ನಾ ತುಂಬಾ ಕಲೀಬೇಕು. ನಿಂಗೆ ಎಲ್ಲಾ ಹೇಳ್ಕೊಡ್ತೀನಿ ಇನ್ಮೇಲೆ. ನನ್ನ ನೋಡಿ ನೀನು ಕಲಿಯೋದು ತುಂಬಾನೇ ಇದೆಅಂದ್ರು.

“ಏ ಕುಮಾರಾ, ಬಾರೋ ಇಲ್ಲಿ, ಮೊದಲು ಆ ಎ.ಸಿ. ಆಫ್ ಮಾಡಪ್ಪ. ನನಗೆ ಇದೆಲ್ಲಾ ಸರಿ ಹೋಗಲ್ಲ. ಅದನ್ನು ಇಲ್ಲಿಂದ ತೆಗೆಸಿ ಬಿಡು. ರಾತ್ರಿ ಸರಿಯಾಗಿ ನಿದ್ದೇನೇ ಬಂದಿಲ್ಲ,  ಥೂ ಇದ್ರ ಜೊತೆಗೆ ದರಿದ್ರ ಕನಸು ಬೇರೆ” ಅಂತ ದೊಡ್ಡ ಗೌಡ್ರ
ಕೂಗಿಗೆ ಎದ್ದು ಬಿದ್ದು ಬಂದ ರೇವಣ್ಣ “ಎನಪ್ಪಾಜಿ, ಕೂಗಿದ್ದು, ಕುಮಾರಣ್ಣ ರಾತ್ರಿ ಮನೆಗೆ ಬಂದಿಲ್ಲ, ಹೇಳಿ ಅಪ್ಪಾಜಿ, ಏನಾಗಬೇಕು”  “ಏನಿಲ್ಲ ಕಣೋ ರಾತ್ರಿ ಸರಿಯಾಗಿ ನಿದ್ದೆ ಬಂದಿಲ್ಲ ಕೆಟ್ಟ ಕನಸು ಬೇರೆ, ಅದೆಲ್ಲಾ ನಿಜ ಹಾಗಿಬಿಟ್ಟರೆ ಏನು ಮಾಡೋದು? ಅಂತ ಚಿಂತೆ ಬೇರೆ ಅಗ್ಬಿಟ್ಟಿದೆ” ಅಂತ ರಾತ್ರಿ ಬಿದ್ದ ಕನಸನ್ನು ಪೂರ್ತಿಯಾಗಿ ಹೇಳಿದರು. “ಏನಪ್ಪಾಜಿ ಬೆಳಗಿನ ಜಾವದ ಕನಸು. ನಿಜ ಆಗಿ ಬಿಟ್ರೆ ಏನು ಮಾಡೋದು, ಯಾವುದಕ್ಕೂ ಒಂದ್ಸಲ ಸೋಮಯಾಜಿಗೆ ಫೋನ್ ಮಾಡ್ತೀನಿ” ಅಂತ ಎದ್ದ ರೇವಣ್ಣ. ದೊಡ್ಡಗೌಡ್ರು ಹೆಗಲಿನ ಮೇಲಿನ ಟವಲ್ ಸರಿಪಡಿಸಿಕೊಳ್ಳುತ್ತಾ ಹೊಸ ದಾಳ ಯಾವುದು ಹಾಕ್ಲಿ ಅಂತ ಯೋಚನೆ ಮಾಡುತ್ತಾ ಬಚ್ಚಲಿಗೆ ಹೊರಟ್ರು.

No comments:

Post a Comment