Sunday 29 July 2012

ಕ್ಯಾನ್ಸರ್ ಎಕ್ಸ್ ಪ್ರೆಸ್: ಭಾಗ-೨


ಕಳೆದ ಸಂಚಿಕೆಯಿಂದ
ಸಾವಯುವ ಗೊಬ್ಬರವನ್ನು ಬಳಸುವುದನ್ನು ನಮ್ಮ ರೈತರು ಕಲಿತುಕೊಳ್ಳಬೇಕು. ಕ್ರಿಮಿ ಕೀಟಗಳನ್ನು ನಾಶಪಡಿಸಲು ಕ್ರಿಮಿನಾಶಕವನ್ನು ಬಳಸುವುದನ್ನು ಬಿಟ್ಟು ನಮ್ಮದೇ ಆದ ಶೈಲಿಯನ್ನು ಅಳವಡಿಸಿಕೊಳ್ಳಬೇಕು. ಆಂದ್ರಪ್ರದೇಶ ತನ್ನದೇ ಆದ ಹೊಸ ರೀತಿಯಿಂದ (ಬಲೆಯ ಮುಖಾಂತರ) ಕ್ರಿಮಿ ಕೀಟಗಳನ್ನು ನಾಶಪಡಿಸಲು ಮುಂದಾಗಿದೆ. ಖರ್ಚೂ ಕಡಿಮೆ ಮತ್ತು ಯಾವುದೇ ಹಾನಿಯಿಲ್ಲ. ಆಂದ್ರಪ್ರದೇಶದ ರೈತರು ಸುಮಾರು ಲಕ್ಷ ಎಕರ ಪ್ರದೇಶದಲ್ಲಿ ಕ್ರಿಮಿನಾಶಕವನ್ನು ಸಂಪೂರ್ಣವಾಗಿ ಬಳಸುವುದನ್ನು ನಿಲ್ಲಿಸಿ, ತಮ್ಮದೇ ಆದ ಶೈಲಿಯಿಂದ ಕ್ರಿಮಿ ಕೀಟಗಳ ಹಾವಳಿಯಿಂದ ತಪ್ಪಿಸಿಕೊಂಡಿದ್ದಾರೆ. ಇದನ್ನು ಎಲ್ಲಾ ರಾಜ್ಯದ ರೈತರು ಅನುಸರಿಸಬಹುದು.

ಇದು ಕೇವಲ ಪಂಜಾಬ್ ರಾಜ್ಯದ ಸಮಸ್ಯೆಯಲ್ಲ. ನಮ್ಮ ಎಲ್ಲಾ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ಇದೆ ನಮ್ಮ ರಾಜ್ಯದಲ್ಲಿಯೂ ಸಹ "ಎಂಡೋ ಸಲ್ಫಾನ್ಎಂಬ ಕ್ರೆಮಿನಾಶಕದಿಂದ ಜನರು ಮತ್ತು ಪ್ರಾಣಿ ಪಕ್ಷಿಗಳು ಬಹಳ ತೊಂದರೆ ಆನುಭವಿಸುತ್ತಿದ್ದಾರೆ, ಅಂಗವಿಕಲರಾಗುತ್ತಿದ್ದಾರೆ.  ಹೆಂಗಸರು ಮತ್ತು ಮಕ್ಕಳು ಖಾಯಿಲೆ ಬೀಳುತ್ತಿದ್ದಾರೆ.  ಅನೇಕ ದೇಶಗಳಲ್ಲಿ ಈ ಎಂಡೊಸಲ್ಫಾನ್ ಎಂಬ ಕ್ರಿಮಿನಾಶಕವನ್ನು ನಿಷೇದಿಸಿದ್ದಾರೆ. ಆದರೆ ಇದು ನಮ್ಮ ದೇಶದಲ್ಲಿ ಎಲ್ಲಾ ಕಡೆಯಲ್ಲೂ ದೊರೆಯುತ್ತದೆ. ಎಂಡೊಸಲ್ಫಾನ್ ಕ್ರಿಮಿನಾಶಕವನ್ನು ನಿಷೇದಿಸಿ ಎಂದು ಕರಾವಳಿ ಜನತೆ ಹೋರಾಟ ಮಾಡಿದರೂ ನಮ್ಮ ಸರ್ಕಾರಕ್ಕೆ ಜಾಣ ಕಿವುಡು ಮತ್ತು ಕುರುಡು.  ಕೇರಳದ ಕಾಸರಗೋಡು ಮತ್ತು ನಮ್ಮ ಕರ್ನಾಟಕದ ಭಟ್ಕಳ ಮುಂತಾದ ಕಡೆಗಳಲ್ಲಿ ಇದರ ಹಾವಳಿ ಹೆಚ್ಚಿದೆ.  ಮುಂದೆ ಇದು ಬೇರೆ ಜಿಲ್ಲೆಗಳಿಗೂ ಹಬ್ಬಬಹುದೆಂಬ ಭೀತಿ ಆವರಿಸಿದೆ. ಇದು ಈಗ ನ್ಯಾಯಾಲಯದ ಮೆಟ್ಟಲೇರಿದೆ.

ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ರಾಸಾಯನಿಕ ಕ್ರಿಮಿನಾಶಕವನ್ನು ಸಂಪೂರ್ಣವಾಗಿ ನಮ್ಮ ದೇಶದಲ್ಲಿ ನಿಷೇದಿಸಿದರೆ ಒಳ್ಳೆಯದು. ಇಲ್ಲದಿದ್ದರೆ ನಾವು ಬಹಳ ದೊಡ್ಡ ಬೆಲೆಯನ್ನು ತೆರೆಯಬೇಕಾದೀತು. ಇದರ ಬಗ್ಗೆ ಸತ್ಯಮೇವ ಜಯತೆ ಕಾರ್ಯಕ್ರಮವೂ ಸಹ ಬೆಳಕು ಚೆಲ್ಲಿತ್ತು. (ಮುಗಿಯಿತು)


Saturday 28 July 2012

ಕ್ಯಾನ್ಸರ್ ಎಕ್ಸ್ ಪ್ರೆಸ್:


ಪಂಜಾಬಿನ ಭಟಿಂದಾದಿಂದ ರಾಜಾಸ್ಥಾನದ ಬಿಕನೇರಿಗೆ ತೆರಳುವ ರೈಲಿಗೆ ಇರುವ ಹೆಸರೇಕ್ಯಾನ್ಸರ್ ಎಕ್ಸ್ ಪ್ರೆಸ್ “. ಕೇಳುವುದಕ್ಕೆ ವಿಚಿತ್ರವಾಗಿದೆ ಅಲ್ವಾ. ಹೌದು ಇದು ವಿಚಿತ್ರವಾದರೂ ಸತ್ಯ. ರೈಲಿನಲ್ಲಿ ಸಾಮಾನ್ಯವಾಗಿ ಪ್ರಯಾಣಿಸುವವರೆಲ್ಲರೂ ಕ್ಯಾನ್ಸರ್ ಪೀಡಿತರು ಮತ್ತು ಅವರ ಬಂಧುಭಾಂದವರು, ಹಾಗಾಗಿ ರೈಲಿಗೆ ಕ್ಯಾನ್ಸರ್ ಎಕ್ಸ್ ಪ್ರೆಸ್ ಎಂಬ ಹೆಸರು. ಆಹಾರ ಉತ್ಪಾದನೆಯಲ್ಲಿ ಪಂಜಾಬ್ ಯಾವಗಲೂ ಪ್ರಥಮ ಸ್ಥಾನದಲ್ಲೇ ಇರುವಂತಹ ರಾಜ್ಯ. ದೇಶದಲ್ಲಿ ಹಸಿರು ಕ್ರಾಂತಿಯ ಮುಂದಾಳತ್ವವನ್ನು ವಹಿಸಿದ್ದೂ ಕೂಡ ಇದೇ ರಾಜ್ಯವೇ. ರಾಜ್ಯವು ಅಪಾರ ಪ್ರಮಾಣದ ರಾಸಾಯನಿಕ ಕ್ರಿಮಿನಾಶಕಗಳನ್ನು ಬಳಸುವಲ್ಲಿಯೂ ಸಹ ಪ್ರಥಮ ಸ್ಥಾನದಲ್ಲೇ ಇದೆ. ಅತಿ ಹೆಚ್ಚು ರಾಸಾಯನಿಕ ಕ್ರಿಮಿನಾಶಕಗಳನ್ನು ಬಳಸಿ ತನ್ನ ಸತ್ವಭರಿತ ಭೂಮಿಯನ್ನು ಮಾಲಿನ್ಯಗೊಳಿಸಿದೆ. ಇವುಗಳು ಅಂತರ್ಜಲದಲ್ಲಿ ಕರಗಿ ಅಲ್ಲಿರುವ ಜನರು ಕ್ಯಾನ್ಸರ್ ನಂತಹ ಮರಣಾಂತಿಕ ಖಾಯಿಲೆಗೆ ಒಳಗಾಗುತ್ತಿದ್ದಾರೆ.

ಇತ್ತೀಚೆಗೆ ಪಂಜಾಬ್ ರಾಜ್ಯದ ಮಾಲ್ವಾ ಪ್ರಾಂತ್ಯದಲ್ಲಿರುವ ಅಂತರ್ಜಲವನ್ನು ಪರೀಕ್ಷೆಗೆ ಒಳಪಡಿಸಿದಾಗ ಯುರೇನಿಯಂ ಮತ್ತು ಆರ್ಸೆನಿಕ್, ಪಾದರಸ ಮುಂತಾದ ಲೋಹದ ಅಂಶಗಳು ಪತ್ತೆಯಾಗಿ ಅಲ್ಲಿರುವ ಜನರು ಕ್ಯಾನ್ಸರ್ ಖಾಯಿಲೆಗೆ ತುತ್ತಾಗುತ್ತಿರುವುದು ಕಂಡುಬಂದಿದೆ. ಮಕ್ಕಳು ಹುಟ್ಟುವಾಗಲೇ ರೋಗಗಳಿಂದ ಬಳಲುತ್ತಿದ್ದಾರೆ. ನೀರಿನಿಂದ ಯುರೇನಿಯಂ ಅನ್ನು ಬೇರ್ಪಡಿಸಲು ಕೆಂದ್ರ ಸರ್ಕಾರ ಪಂಜಾಬಿಗೆ ಹಣಕಾಸು ಸಹಾಯವನ್ನು ಮಾಡುತ್ತಿದೆ. ಸಮಸ್ಯೆಯ ಅರಿವು ನಿಧಾನವಾಗಿ ಅಲ್ಲಿನ ರಾಜ್ಯಕ್ಕೆ ಮತ್ತು ಕೆಂದ್ರಕ್ಕೆ ತಗುಲಿದೆ. ಇದು ಎಲ್ಲಾ ರಾಜ್ಯಕ್ಕೂ ಮತ್ತು ಕೆಂದ್ರಕ್ಕೂ ಎಚ್ಚರಿಕೆ ಗಂಟೆಯೂ ಸಹ. (ಮಿಕ್ಕಿದ್ದು ನಾಳೆಗೆ)