Thursday 12 July 2012

ಜಾತ್ಯಾತೀತ:

ನಾವ್ಯಾರೂ ಹುಟ್ಟುವಾಗ ಇಂತಹದ್ದೇ ಜಾತಿ/ಧರ್ಮ/ರಾಜ್ಯ/ದೇಶ ದಲ್ಲೇ ಹುಟ್ಟಬೇಕೆಂದು ಬಯಸಿ ಈ ಭೂಮಿಗೆ ಬರಲಿಲ್ಲ.  ಆದರೆ ನಾವು ದೊಡ್ಡವರಾಗಿ ಕೆಲಸ/ಮದುವೆ ವಯಸ್ಸಿಗೆ ಬಂದಾಗ ದಿಡೀರ್ ಆಗಿ ಈ ಜಾತಿ/ಧರ್ಮ ಮುಂದೆ ಬಂದುಬಿಡುವುದು ಎಲ್ಲರಿಗೂ ತಿಳಿದ ವಿಷಯ. ಅದು ಅಷ್ಟಕ್ಕೇ ನಿಲ್ಲದೆ ನಮ್ಮ ಜೀವನ ಪೂರ್ತಿ ನಮ್ಮ ಜೊತೆಜೊತೆಗೇ ಬರುತ್ತದೆ. ಕೆಲವರಿಗೆ ಇದು ವರವಾಗಿಯೂ, ಮತ್ತೆ ಕೆಲವರಿಗೆ ಶಾಪವಾಗಿಯೂ ಕಾಡುವುದುಂಟು. ನಮಗೆ ಇಷ್ಟವಿರಲಿ, ಬಿಡಲಿ ಇದರಿಂದ ಮಾತ್ರ ತಪ್ಪಿಸಿಕೊಳ್ಳುವುದು ಸಾದ್ಯವಾಗುವುದಿಲ್ಲ. ಕೆಲವರು ಅಂತರಜಾತೀಯ ವಿವಾಹವಾಗಿ ನಾವು ಜಾತ್ಯಾತೀತರೆಂದುಕೊಂಡರೂ ಅವರನ್ನು ಈ ಸಮಾಜ ಅವರ ಪಾಡಿಗೆ ಅವರನ್ನು ಸುಮ್ಮನೆ ಬಿಡುವುದಿಲ್ಲ. ಅವರನ್ನು ಮತ್ತು ಅವರ ಮಕ್ಕಳನ್ನು ಮುಂದೆ ಬಹಳ ಕಾಡುತ್ತಾರೆ. ಸಮಾಜದ ಶ್ರೀಮಂತ/ಜನಪ್ರಿಯ/ಗಣ್ಯ ವ್ಯಕ್ತಿಗಳಿಗೆ ಇದು ಅಷ್ಟಾಗಿ ಕಾಡದಿದ್ದರೂ ಮಧ್ಯಮ ವರ್ಗದ ಜನರನ್ನು ಹಣ್ಣುಗಾಯಿ ನೀರುಗಾಯಿ ಮಾಡುವುದುಂಟು. ಅಂತರ ಜಾತೀಯ/ಧರ್ಮ ವಿವಾಹವಾದ ಯುವ ಜೋಡಿಗಳು ಈ ಸಮಸ್ಯೆಯಿಂದ ಬಳಲಿ ಬೆಂಡಾಗಿದ್ದಾರೆ. ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಕೆಲವರು ಇದರಿಂದ ಹೊರಬರಲಾರದೆ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ತರಹದ ಅನೇಕ ಕುಟುಂಬಗಳನ್ನು ನಾವೆಲ್ಲರೂ ನೋಡಿ, ಕೇಳಿದ್ದೇವೆ. ಇದರಿಂದ ಬಿಡುಗಡೆಯೇ ಇಲ್ಲವೆನೋ? ನಮ್ಮ ರಾಷ್ಟ್ರಕವಿ ಕುವೆಂಪು "ಓ ನನ್ನ ಚೇತನ, ಆಗು ನೀ ಅನಿಕೇತನ" ಎಂದು ವಿಶ್ವ ಮಾನವನ ಕಲ್ಪನೆಯನ್ನು ನಮಗೆ ಕಟ್ಟಿಕೊಟ್ಟಿದ್ದಾರೆ. ಅದು ಕೇವಲ ಕಲ್ಪನೆಯಾಗೇ ಉಳಿದುಕೊಂಡಿದೆ. ಮಾನವೀಯತೆಯಿಂದ ಈ ಸಮಸ್ಯೆಗೆ ಪರಿಹಾರವನ್ನು ಅವರ ತಂದೆ, ತಾಯಿ, ಬಂಧು ಬಳಗದವರು/ಸ್ನೇಹಿತವರ್ಗದವರು ಕಂಡುಕೊಂಡರೆ ಮಾತ್ರ ಇದಕ್ಕೆ ಪರಿಹಾರದೊರಕಬಹುದು.

No comments:

Post a Comment