Saturday 14 July 2012

ಕೊಳವೆಬಾವಿಯಲ್ಲಿ ಮಕ್ಕಳು:

ನಮ್ಮ ರಾಜ್ಯದ ರಾಯಚೂರು ಜಿಲ್ಲೆಯ ನೀರಮಾನ್ವಿಯ ಸಂದೀಪ, ಆಂಧ್ರ ಪ್ರದೇಶದ ವಾರಂಗಲ್ ನ ದರಾವತ್ ಮಹೇಶ್, ಗುಜರಾತ್ ನ ಬಕುಲ್ ಇವರುಗಳೆಲ್ಲಾ ಯಾರು ಗೊತ್ತಾ ನಿಮಗೆ? ಇವರು ನಮ್ಮ ದೇಶದ ಅತಿ ದೊಡ್ಡ ಕೋಟ್ಯಾಧಿಪತಿಗಳು ಅಥವಾ ದೊಡ್ಡ ಬಂಡವಾಳ ಹೂಡಿಕೆದಾರರು, ವ್ಯಾಪಾರಸ್ಥರು, ಹೊಸ ಸೂಪರ್ ಸ್ಟಾರ್ ಗಳು ಅಂತ ಹೀಗೆ ಏನೇನೋ ಕಲ್ಪಿಸಿಕೊಳ್ಳಬೇಡಿ.  ಇವರುಗಳೆಲ್ಲಾ ನಮ್ಮ ಲಿಟಲ್ ಸ್ಟಾರ್ ಗಳು. ಆದರೆ ಇವರ ದೌರ್ಭಾಗ್ಯ. ಬಾಲ್ಯ ಅಂದರೆ ಏನು? ಎಂದು ತಿಳಿಯುವ ಮೊದಲೇ ನಮ್ಮನ್ನು ಅಗಲಿದ ಚಿಣ್ಣರು. ಇವರು ನಮ್ಮ ದೇಶದ ಅತಿ ನತದೃಷ್ಟ ೨/೩/೪/೬ ವರ್ಷದ ಮಕ್ಕಳು. ಈಗ ಇವರು ಯಾರು ನಮಗೆ ನೆನಪಿಲ್ಲ. ಹೊಸದಾಗಿ ಹರಿಯಾಣ ರಾಜ್ಯದ ಗುರುಗಾಂವ್ ನ ಬಾಲಕ ಮಾಹಿ ಮಾತ್ರ ಗೊತ್ತು. ಇನ್ನು ಬೇರೆ ಮಕ್ಕಳು ಇಂತಹ ಕೊಳವೆ ಬಾವಿಯಲ್ಲಿ ಬಿದ್ದು ಸಾಯುವವರೆಗೂ ನಮಗೆ ಈ ಬಾಲಕನ  ಹೆಸರು ಜ್ಞಾಪಕಕ್ಕೆ ಇರುತ್ತದೆ. ಆಮೇಲೆ ಇವನ ಹೆಸರು ನಮಗೆ ಜ್ಞಾಪಕಕ್ಕೆ ಬರುವುದೇ ಇಲ್ಲ. ಇದು ನಮ್ಮ ಒಬ್ಬರ ತಪ್ಪಲ್ಲ. ನಮ್ಮ ದೇಶ ಇರುವುದೇ ಹೀಗೆ ಅಂತ ಒಮ್ಮೊಮ್ಮೆ ಅನ್ನಿಸುತ್ತದೆ. ಎಲ್ಲರೂ ಇದರ ಬಗ್ಗೆ ಮಾತನಾಡುತ್ತಾರೆ, ಸರ್ಕಾರವೂ ಇದರ ಬಗ್ಗೆ ಕಾನೂನು ಹೊರಡಿಸಿದೆ. ಕೊಳವೆ ಬಾವಿಯಲ್ಲಿ ನೀರು ಸಿಗದಿದ್ದರೆ ಅದನ್ನು ತಕ್ಷಣವೇ ಮುಚ್ಚಬೇಕೆಂದು ಕಾನೂನು ಇದು. ಹಾಗೆ ಮಾಡದಿದ್ದರೆ ನ್ಯಾಯಲಯ ನಿಂದನೆಯಾಗುತ್ತದೆ. ಆದರೆ ಏನೂ ಆಗಿಲ್ಲ. ಇದೇ ನಮ್ಮ ದುರದೃಷ್ಟ. ಇದಕ್ಕೆ ಯಾರು ಕಾರಣರು ಎಂದರೆ, ಒಂದು ರೀತಿಯಲ್ಲಿ ನಾವೆಲ್ಲರೂ ಕೂಡ.

ಹೀಗೆ ಕೊಳವೆ ಬಾವಿಯಲ್ಲಿ ಬಿದ್ದವರನ್ನು ಎತ್ತುವಾಗ ಸಾವಿರಾರು ಜನ ಅದನ್ನು ನೋಡಲು ೩-೪ ದಿನ ನೆರೆದಿರುತ್ತಾರೆ. ಆಮೇಲೆ ಕಾರ್ಯಾಚರಣೆ ಮುಗಿದ ಮೇಲೆ ಮನಗೆ ಹೋಗಿ ಊಟ ಮಾಡಿ ಬೆಚ್ಚಗೆ ಮಲಗಿ ಬಿಡುತ್ತಾರೆ. ದೇಶದ ಅಷ್ಟೂ ಭಾಷೆಯ ಸುದ್ದಿವಾಹಿನಿಗಳು ಅದನ್ನು ಎಡೆಬಿಡದೆ ೨೪ ಗಂಟೆಗಳೂ ಪ್ರಸಾರ ಮಾಡುತ್ತವೆ ಮತ್ತು ಕಾರ್ಯಾಚರಣೆಯು ಮುಗಿದ ಮೇಲೆ ಅವರೂ ಸುಮ್ಮನಾಗಿಬಿಡುತ್ತಾರೆ. ಅವರಿಗೆ ಟಿ.ಆರ್.ಪಿ. ಬಂದರೆ ಸಾಕು. ಈ ತರಹದ ಮುಚ್ಚಿಲ್ಲದ ಕೊಳವೆ ಬಾವಿಗಳು ನಮ್ಮ ದೇಶದಲ್ಲಿ ಇನ್ನೂ ಬಹಳ ಕಡೆ ಇದೆ. ಮುಂಜಾಗ್ರತೆ ವಹಿಸಿ ಅದನ್ನು ಮುಚ್ಚಲು ಯಾವ ಸಾವರ್ಜನಿಕರಾಗಲೀ, ಸುದ್ದಿವಾಹಿನಿಗಳಾಗಲೀ, ಆ ಊರಿನ ಜನರಾಗಲೀ, ಜನ ಪ್ರತಿನಿದಿಗಳಾಗಲೀ, ಯಾರೆಂದರೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅದೇ ಸಾವಿರಾರು ಜನ ಈ ಮೊದಲೇ ಒಬ್ಬೊಬ್ಬರು ಮೂರು ಹಿಡಿ ಮಣ್ಣನ್ನು ಆ ಕೊಳವೆ ಬಾವಿಯಲ್ಲಿ ಹಾಕಿ ಅದನ್ನು ಮುಚ್ಚಿಬಿಡಬಹುದಿತ್ತು. ಆದರೆ ಅದರ ಬಗ್ಗೆ ಯಾರೂ ಯೋಚನೆ ಸಹ ಮಾಡುವುದಿಲ್ಲ.  ಇದು ನಮ್ಮ ದೇಶದ ಅತಿ ದೊಡ್ಡ ದುರಂತ.

ಸುಮಾರು ೬ ವರ್ಷದ ಹಿಂದೆ ಕುರುಕ್ಷೇತ್ರದ ಪ್ರಿನ್ಸ್ ಎಂಬ ಬಾಲಕ ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಏಕೈಕ ಬಾಲಕ ನಮ್ಮ ದೇಶದಲ್ಲಿ. ಅವನ ಅದೃಷ್ಟ ಅವನನ್ನು ಕಾಪಾಡಿರಬೇಕು. ಆದರೆ ಮೇಲ್ಕಂಡ ಮಕ್ಕಳನ್ನು ನೆನಸಿಕೊಂಡರೆ ಕರುಳು ಚುರುಕ್ ಎನ್ನುತ್ತದೆ.

No comments:

Post a Comment