Friday 13 January 2012

ಠಾಕ್ರೆ ಅಜ್ಜನಿಗೊಂದು ಪತ್ರ:

ಅಜ್ಜಾ ಹೇಗಿದ್ದೀರಾ? ಚೆನ್ನಾಗಿದ್ದೀರಾ? ನಿಮ್ಮ ಆರೋಗ್ಯ ಹೇಗಿದೆ? ಮೊದಲು ನಿಮಗೆ ನಮ್ಮ ಪ್ರೀತಿಯ ನಮಸ್ಕಾರಗಳು. ತುಂಬಾ ದಿನಗಳಿಂದ ನಿಮಗೊಂದು ಪತ್ರವನ್ನು ಬರೆಯಬೇಕೆಂಬ ಆಸೆ ಇತ್ತು. ಕಾಲ ಕೂಡಿ ಬಂದಿರಲಿಲ್ಲ.  ಈಗ ಬಂದಿದೆ. ಎನಜ್ಜ, ನೀವು ಆ ಎಮ್.ಎಮ್.ಎಸ್ ನವರಿಗಂತೂ ಬುದ್ದಿ ಇಲ್ಲ ಅದು ಎಲ್ಲರಿಗೂ ಗೊತ್ತಿರುವ ವಿಷಯ. ನೀವು ಅವ್ರಿಗೆ ಸ್ವಲ್ಪ ಬುದ್ದಿ ಹೇಳಬಾರದ. ನೀವು ಹಿರಿಯರು. ಎಲ್ಲಾನೂ ತಿಳಿದುಕೊಂಡಿರುವವರು. ಲೋಕಜ್ನಾನ ಹೊಂದಿರುವವರು. ಅವರಿಗೆ ನೀವು ಒಂದು ಸಾರಿ ಗದರಿ. ಮರಾಠಿಗರು ಬೆಳಗಾವಿಯಲ್ಲಿ ಗಲಾಟೆಮಾಡದೆ ಕನ್ನಡಿಗರ ಹತ್ತಿರ ಹೊಂದಿಕೊಂಡು ಸಖವಾಗಿಬಾಳಿ ಎಂದು ಬುದ್ದಿ ಹೇಳಿ.  ರಾಜ್ ಠಾಕ್ರೆ ಅವರು ಸರಿಯಾಗಿ ಅವರಿಗೆ ಬುದ್ದಿ ಹೇಳಿದ್ದಾರೆ. ನೀವು ಸ್ವಲ್ಪ ಹೇಳಬಾರದೆ. ನಿಮ್ಮ ಮಾತಿಗೆ ಅವರು ಎದುರು ಉಸಿರಾಡಲ್ಲ ಅಂತ ನಮ್ಮ ಭಾವನೆ. ಬೆಳಗಾವಿಯನ್ನು ಕೆಂದ್ರಾಡಳಿತ ಪ್ರದೇಶ ಮಾಡಿ, ಬೆಳಗಾವಿಯನ್ನು ಬೆಳಗಾಂ ಮಾಡಿ, ಬೆಳಗಾವಿ ಯನ್ನು ಮಹರಾಷ್ಟ್ರಕ್ಕೆ ಸೇರಿಸಿ ಅಂತ ಸುಮ್ಮನೆ ಕೂಗು ಎಬ್ಬಿಸುವುದು ಎಷ್ಟು ಸರಿ ನೀವೇ ಹೇಳಿ. ಅವರು ಹೆಳ್ತಾರೆ ಅಂತ ಮಾಡುವುದಕ್ಕಾಗತ್ತಾ. ನಿಮ್ಮ ಮುಂಬೈನಲ್ಲೇ ಮರಾಠಿಯ ಜೊತೆ ಕನ್ನಡ, ತೆಲುಗು, ತಮಿಳು, ಹಿಂದಿ, ಗುಜರಾತಿ, ರಾಜಾಸ್ತಾನಿ ಹೀಗೆ ಅನೇಕ ಭಾಷೆಗಳನ್ನು ಆಡುವ ಜನರಿದ್ದಾರೆ.  ಹಾಗಂತ ಮುಂಬೈಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವುದಕ್ಕೆ ಆಗತ್ತಾ? ಮುಂಬೈ ಹೆಸರನ್ನು ಬದಲಾವಣೆ ಮಾಡಕ್ಕೆ ಆಗತ್ತಾ? ಅದು ಅಗಲೂ ಬಾರದು. ಅದು ನಿಮ್ಮ ಜನರಿರುವ ತಾಣ. ನಿಮ್ಮ ಸಂಸ್ಕ್ರುತಿ, ನಿಮ್ಮ ಭಾಷೆಗೆ ಎಲ್ಲರೂ ಗೌರವವನ್ನು ಕೊಡಲೇಬೇಕು.  ಬೆಂಗಳೊರು, ಹೈದರಾಬಾದು. ಚೆನ್ನೈ,  ಡೆಲ್ಲಿ, ಕೊಲ್ಕತ್ತ ಹೀಗೆ ದೊಡ್ಡ ಊರುಗಳಲ್ಲಿ ಎಲ್ಲಾ ಭಾಷೆಗಳನ್ನು ಆಡುವ ಜನರಿರುತ್ತಾರೆ. ಇದು ಸಹಜ ಕೂಡ ಹೌದು. ಹೀಗೆ ಎಲ್ಲರೂ ಗಲಾಟೆಯನ್ನು ಮಾಡುತ್ತಾರ? ಬುದ್ದಿಇರುವವರು ಯಾರು  ಹೀಗೆ ಮಾಡುವುದಿಲ್ಲ. ನಿಮಗೆ ಗೊತ್ತಿರುವಂತೆ ಇತಿಹಾಸವನ್ನು ಕೆದಕಿ ನೋಡಿದರೆ ಇಡೀ ಮಹರಾಷ್ಟ್ರದಲ್ಲಿ ಮೊದಲು ಕನ್ನಡಭಾಷೆಯನ್ನು ಮಾತನಾಡುವವರೇ ಇದ್ದರು. ಇಡೀ ಮಹರಾಷ್ಟ್ರವು ಕನ್ನಡನಾಡಿನ ಭಾಗವಾಗಿತ್ತು.  ಇದು ಬಾಲ ಗಂಗಾಧರರ ಆಭಿಪ್ರಾಯವಾಗಿತ್ತು ನೆನಪಿರಲಿ. ಮರಾಠಿಯಲ್ಲಿ ಅನೇಕ ಕನ್ನಡ ಪದಗಳೊ ಸಹ ಇವೆ. ಈಗಲೂ ನಿಮ್ಮ ಊರಿನಲ್ಲಿ ೧ ಕೋಟಿ ಕನ್ನಡ ಮಾತನಾಡುವವರು ಸಿಗುತ್ತಾರೆ. ನಮ್ಮ ಕನ್ನಡಿಗರು ನಿಮ್ಮ ಭಾಷೆಯನ್ನು ಕಲಿತು, ನಿಮ್ಮ ಸಂಸ್ಕ್ರುತಿಯನ್ನು ನಿಮ್ಮ ಊರಿನಲ್ಲಿ ಆಚರಿಸುತ್ತಿದ್ದಾರೆ. ಅನೇಕ ವ್ಯಾಪಾರ, ವಹಿವಾಟು ಮತ್ತು ರಾಜಕೀಯದಲ್ಲೂ ಇರುವ ಸಂಗತಿ ನಿಮಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಪ್ರತಿ ಸಾರಿ ಚುನಾವಣೆಯಾದಗಲೂ ೭-೮ ಜನ ಕನ್ನಡಿಗರು ನಿಮ್ಮ ಊರಿನಲ್ಲಿ ಆರಿಸಿಬರುತ್ತಾರೆ. ಇದೂ ಸಹ ನಿಮಗೆ ಗೊತ್ತು.  ಅದ್ರೂ ಸಹ ನೀವು ಸುಮ್ಮನಿರುವಿರಿ. ನಿಮ್ಮ ಪಕ್ಷದಲ್ಲು ನಮ್ಮ ಕನ್ನಡಿಗರಿದ್ದಾರೆ. ಅವರು ಹೀಗೆ ನಿಮ್ಮ ಊರಿನಲ್ಲಿ ಗಲಾಟೆಯನ್ನು ಮಾಡುತ್ತಿದ್ದಾರಾ ನೀವೇ ಹೇಳಿ.
ಸಮಸ್ಯೆಯ ಮೂಲ ಇರುವುದು ಇಲ್ಲಿ:
ನೀವು ಮಹಾರಾಷ್ಟ್ರದಲ್ಲಿ ಮರಾಠಿಗೆ ಏನು ತೊಂದರೆ ಅನುಭವಿಸುತ್ತಿದ್ದೀರೋ, ನಾವು ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಅದೇ ತೊಂದರೆ ಅನುಭವಿಸುತ್ತಿದ್ದೇವೆ. ನಿಮ್ಮ ಭಾಷೆಗೆ ಕನ್ನಡಯಾವತ್ತೊ ತೊಂದರೆ ಆಗಲ್ಲ. ನಮಗೆ ಮಾರಾಠಿಯಿಂದ ತೊಂದರೆ ಆಗಲ್ಲ. ಮೊದಲು ನಾವು ಇದನ್ನು ಅರ್ಥ ಮಾಡಿಕೊಳ್ಳಬೇಕು. ನಮಗೆ ಈಗ ತೊಂದರೆ ಅಗುತ್ತಿರುವುದು ಅಂಗ್ಲ ಭಾಷೆಯಿಂದ. ಮಕ್ಕಳು ನಮ್ಮ ಭಾಷೆಯನ್ನು ಕಲಿಯುತ್ತಿಲ್ಲ. ನಾವು ನಮ್ಮ ಮಕ್ಕಳನ್ನು ಆಂಗ್ಲ ಭಾಷೆಯ ಶಾಲೆಗೆ ಸೇರುಸುತ್ತಿದ್ದೇವೆ. ಅವರಿಗೆ ನಮ್ಮ ಸಂಸ್ಕ್ರುತಿಯನ್ನು ಹೇಳಿಕೊಡುತ್ತಿಲ್ಲ. ಅವರು ಬೇರೆ ಸಂಸ್ಕ್ರುತಿಯನ್ನು ಅವರ ಜೀವನದಲ್ಲಿ ಅಳವಡಿಸಿಕೊಳ್ಳಲು ಹೊರಟಿದ್ದಾರೆ. ಇದು ಕೇವಲ ನಮ್ಮ ಎರಡು ರಾಜ್ಯಗಳ ಸಮಸ್ಯೆ ಅಲ್ಲ.  ಇದು ಈಗ ಇಡೀ ಭಾರತವನ್ನು ಹಬ್ಬುತ್ತಿದೆ. ಹಳ್ಳಿ ಹಳ್ಳಿಗಳಲ್ಲಿ ಆಂಗ್ಲ ಭಾಷೆಯ ಶಾಲೆಗಳು ಹುಟ್ಟಿಕೊಳ್ಳೂತ್ತಿವೆ. ಆ ರಾಜ್ಯಗಳ ಭಾಷೆಯ ಶಾಲೆಗಳು ಮುಚ್ಚಿಕೊಳ್ಳೂತ್ತಿವೆ. ನಿಜವಾದ ಸಮಸ್ಯೆ ಇರುವುದು ಇಲ್ಲಿ. ಈಗ ನಾವು ನೀವು ಎಲ್ಲಾರು ಸೇರಿಮಾಡಬೇಕಾದ ಕೆಲಸವೇನೆಂದರೆ ಪ್ರತಿ ರಾಜ್ಯದಲ್ಲೂ ಆ ರಾಜ್ಯಭಾಷೆಯಲ್ಲಿ ಮಕ್ಕಳಿಗೆ ಕನಿಷ್ಟ ೧೦ನೆ ತರಗತಿಯವರೆಗೂ ಶಿಕ್ಸಣ ದೊರಕುವಂತಾಗಬೇಕೆಂದು ಕಾನೂನು ರಚಿಸಿ ಅದರಂತೆ ಪ್ರತಿಯೊಬ್ಬರೂ ನಡೆದುಕೊಳ್ಳಬೇಕು. ಇಲ್ಲವಾದಲ್ಲಿ ಕನ್ನಡವೂ ಉಳಿಯುವುದಿಲ್ಲ., ಮರಾಠಿಯೂ ಊಳಿಯುವುದಿಲ್ಲ. ತೆಲುಗು, ತಮಿಳು, ಗುಜರಾತಿ, ಮಲೆಯಾಳಂ, ಹಿಂದಿಯೂ ಉಳಿಯುವುದಿಲ್ಲ ಯಾವ  ಭಾಷೆಯೂ ಉಳಿಯುವುದಿಲ್ಲ ಕಾಲಾಂತರದಲ್ಲಿ ಆಂಗ್ಲ ಭಾಷೆಯನ್ನು ಹೊರೆತುಪಡಿಸಿ.
ನಾವುಗಳು ನಮ್ಮ ನಮ್ಮ ಭಾಷೆಯನ್ನು ಈಗ ಉಳಿಸಿ ಮತ್ತು ಬೆಳಿಸಿಕೊಳ್ಳೂವ ಕಾಲ ಬಂದಿದೆ. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಸಾಹಿತಿಗಳು, ವಿದ್ವಾಂಸರು, ಗುರು ಹಿರಿಯರು, ನಾಡಿನ ಬುದ್ದಿಜೀವಿಗಳು, ತಂದೆ ತಾಯಂದಿರು, ವಿದ್ಯಾರ್ಥಿ ವಿದ್ಯಾರ್ಥಿನಿಯರು, ಕಲಾವಿದರು, ಕಾರ್ಮಿಕರು ಮತ್ತು ಸಮಾಜದ ಎಲ್ಲಾ ನಾಗರೀಕರು ಕುಳಿತು ಯೋಚಿಸುವ ವಿಷಯವಾಗಿದೆ.
ಇಂದು ಆಂಗ್ಲಭಾಷೆ ಕಲಿಸುವ ಕಾನ್ವೆಂಟ್ ಶಾಲೆಗಳಲ್ಲಿ, ಪ್ರಾದೇಶಿಕ ಭಾಷೆಯನ್ನು ಆಡುವ ಮಕ್ಕಳು ಶಿಕ್ಷೆಗೆ ಗುರಿಯಾಗುತ್ತಿದ್ದಾರೆ. ಶಾಲೆಯಲ್ಲಿ ಹೆಣ್ಣು ಮಕ್ಕಳು ಹೂ ಮುಡಿಯುವ ಹಾಗಿಲ್ಲ, ಕುಂಕುಮ ಇಡುವ ಹಾಗಿಲ್ಲ, ಹೀಗೆ ನಮ್ಮದಲ್ಲದ ಸಂಸ್ಕ್ರುತಿಯನ್ನು ಅವರ ಪುಟ್ಟ ತಲೆಯಲ್ಲಿ ತುಂಬಲಾಗುತ್ತಿದೆ. ಇದರಲ್ಲಿ ಧಾರ್ಮಿಕ ವಿಚಾರವೂ ಕೊಡ ಕಲೆಹಾಕಿಕೊಂಡಿದೆ.  ಆ ವಿಚಾರ ಪಕ್ಕಕ್ಕಿಟ್ಟು ನೋಡಿದರೂ ಸಹ ಮಕ್ಕಳಿಗೆ ಆಂಗ್ಲಭಾಷೆ ಬಿಟ್ಟು ಬೇರೆ ಭಾಷೆ ಮಾತನಾಡಿದರೆ ಹೊಡೆಯುವುದು ಎಷ್ಟು ಸರಿ? ಈ ಮಟ್ಟಕ್ಕೆ ಆ ಶಾಲೆಗಳು ಬೆಳೆದಿವೆ ಎಂದರೆ ಅದಕ್ಕೆ ಯಾರು ಕಾರಣ? ನೀವೆ ಯೋಚಿಸಿ.  ಇದನ್ನು ಬಿಟ್ಟು ನಮ್ಮನಮ್ಮಲ್ಲೇ ಜಗಳ ತರುವಿರಲ್ಲ. ಇದು ತಮ್ಮಂತಹ ಹಿರಿಯರಿಗೆ ಶೋಭೆ ತರುವ ವಿಷಯವಲ್ಲ.
ಅಭಿಮಾನವಿರಲಿ ದುರಭಿಮಾನ ಬೇಡ:
ನಿಮಗೆ ನಮ್ಮ ಗಂಗೂಬಾಯಿ ಹಾನಗಲ್, ಭೀಮಸೇನ ಜೋಷಿ, ಅನಂತಮೂರ್ತಿ, ಕಾರ್ನಾಡ್ ಮುಂತಾದವರ ಬಗ್ಗೆ ಅಭಿಮಾನವಿರುವ ಹಾಗೆ ನಮಗೂ ಸಹ ಸಚಿನ್, ನಾನಾ ಪಾಟೇಕರ್ ಅವರ ಬಗ್ಗೆ ಖಂಡಿತಾ ಆಭಿಮಾನವಿದೆ.  ನಾವು ಇವರನ್ನು ಕನ್ನಡಿಗರು, ಮರಾಠಿಗರು ಅಂತ ಬಂಧಿಸಿಡುವುದು ತಪ್ಪು ಅಲ್ವಾ ತಾತ. ಇವರೆಲ್ಲಾ ನಮ್ಮ ಹೆಮ್ಮಯ ಭಾರತಾಂಬೆಯ ಮಕ್ಕಳು. ಇವರೆಲ್ಲಾ ಈ ದೇಶಕ್ಕೆ ಹೆಮ್ಮೆ. ಗಾಂಧೀಜಿಯವರನ್ನು ನಾವು ಗುಜರಾತಿ ಅಂತ ಒಂದು ಭಾಷೆಗೆ ಒಂದು ರಾಜ್ಯಕ್ಕೆ ಮುಡುಪಿಡುವುದಕ್ಕೆ ಆಗುತ್ತದೆಯೇ.  ನಮ್ಮ ಚಂದ್ರಶೇಖರ ಕಂಬಾರರಿಗೆ ೮ನೆಯ ಜ್ನಾನಪೀಠ ಪ್ರಶಸ್ತಿ ಬಂದಾಗೆ ನೀವುಗಳು ಅವರಿಗೆ ಸನ್ಮಾನಿಸಿ ದೊಡ್ಡವರಾಗಬಹುದ್ದಿತ್ತು.  ಆದರೆ ನೀವು ಅವರಿಗೆ ಒದ್ದು ಸೊಂಟ ಮುರಿಯಿರಿ ಅಂತ ಹೇಳುವಿರಲ್ಲ. ಇದೇನಾ ನಿಮ್ಮ ಮರಾಠಿ ಸಂಸ್ಕ್ರುತಿ.  ಇದೇನಾ ನಿಮ್ಮ ಸಭ್ಯತೆ. ಇದೇನಾ ನಿಮ್ಮ ಭಾರತೀಯತೆ. ನಮ್ಮ ಕಂಬಾರರು ಭಾರತೀಯರಲ್ಲವೇ? ಅವರೇನು ಶತ್ರು ದೇಶದಿಂದ ಬಂದು ಇಲ್ಲಿ ವಿದ್ವಂಸಕ ಕೃತ್ಯ ಮಾಡಿರುವರೇ?
ಬೆಳಗಾವಿ ನಮ್ಮದೇ, ಎಲ್ಲೂ ಹೋಗಲ್ಲ:
ಇನ್ನು ಬೆಳಗಾವಿ ಕರ್ನಾಟಕೆದಲ್ಲಿದ್ದರೆ ನಿಮಗೇನು ನಷ್ಠ. ಅದು ಭಾರತದಲ್ಲಿದೆ ತಾನೇ ಇದೆ. ಹೀಗಿ ಒಂದು ಭಾಷೆಯನ್ನು ಆಡುವ ಜನ ಜಾಸ್ತಿ ಇದ್ದ ಕಾರಣಕ್ಕೆ ಆ ಪ್ರಾಂತ್ಯವನ್ನು ಬೇರೆ ರಾಜ್ಯಕ್ಕೆ, ಬೇರೆ ದೇಶಕ್ಕೆ ಕೊಟ್ಟುಬಿಡುವುದಕ್ಕೆ ಆಗುತ್ತದೆಯೇ? ಹೀಗೆ ಆದರೆ ಮೊದಲು ನೀವು ನಿಮ್ಮ ಮಹರಾಷ್ಟ್ರವನ್ನು ಕಳೆದುಕೊಳ್ಳಬೇಕಾಗುತ್ತದೆ. ಎಚ್ಚರೆ. ಪತ್ರ ಸ್ವಲ್ಪ ದೊಡ್ಡದಾಯಿತು. ಕ್ಷಮೆ ಇರಲಿ ತಾತ. ವಂದನೆಗಳು.

No comments:

Post a Comment