Tuesday 14 May 2013

ಆಧಾರ್


ವಯಸ್ಸು ೮೫-೯೦ ಆಗಿರಬೇಕು
ಸರಿಯಾಗಿ ಜ್ನಾಪಕವಿಲ್ಲ
ಕಣ್ಣು, ಕಿವಿ ಸರಿಯಾಗಿ ಕೆಲಸಮಾಡಲ್ಲ
ಹೆಂಡ್ತಿ ಸತ್ತು ೩೦ ವರ್ಷ ಆಯ್ತು
ಇದ್ದ ಇಬ್ಬರು ಮಕ್ಕಳು ಚೆನ್ನಾಗೇ ಓದಿದ್ರು

ಒಬ್ಬ ಡಾಕ್ಟರ್, ಒಬ್ಬ ಇಂಜಿನಿಯರ್
ನನ್ನ ಇಲ್ಲಿ ಬಿಟ್ಟು ಆಗಾಗ
ಬರುತ್ತೀವಿ ಅಂತ ಹೇಳೀ ಹೋಗಿ
೨೫ ವರ್ಷ ಆಗಿರಬೇಕು!

ಈಗ ಎಲ್ಲಿದಾರೋ ಗೊತ್ತಿಲ್ಲ
ಅವರ ಮೊಬೈಲ್ ನಾಟ್ ರೀಚಬಲ್
ಬಂಧು, ಬಳಗ ಮೊದಲು ಇದ್ರು
ಈಗ ವೃದ್ದಾಶ್ರಮದಲ್ಲಿದ್ದೀನಿ!

ಅವರದೇ ಊಟ, ತಿಂಡಿ, ಬಟ್ಟೆ ಎಲ್ಲಾ
ನನ್ನ ಥರಾನೇ ಇಲ್ಲಿ ಇನ್ನೂ ೩೦ ಜನ ಇದಾರೆ
ಯಾವಾಗಾದ್ರೂ ಬೇಜಾರಾದಾಗ ನಗ್ತೀನಿ,
ಆದರೆ ಹಾಳಾದ್ದು ಜೊತೆಗೆ ಕಣ್ಣೀರು ಬಂದುಬಿಡತ್ತೆ
ಏನೇನೋ ಜ್ಞಾಪಕ ಬಂದು ಮನಸ್ಸು ಕೆಡಿಸಿಬಿಡತ್ತೆ!

ನನಗ್ಯಾರೂ ಇಲ್ಲ ಆಧಾರ
ಆದರೆ, ಮೊನ್ನೆ ಯಾರೋ ಬಂದು ಫೋಟೋ,
ಕೈ ಬೆರಳು ಗುರುತು ಎಲ್ಲಾ ತಗೊಂಡು
ತಾತಾ, ನಿನಗೂ ಆಧಾರ್ ಕಾರ್ಡ್ ಬರತ್ತೆ ಅಂದ್ರು!

ಆಧಾರ ಅಂದ್ರೆ, ಮುಪ್ಪಿನಲ್ಲಿ ಮಕ್ಕಳು ಅಂತ
ತಿಳ್ಕೊಂಡಿದ್ದೆ, ಕಾರ್ಡ್ ಅಂತ ಗೊತ್ತಿರಲಿಲ್ಲ!!

No comments:

Post a Comment