Tuesday 28 May 2013

ಹೆಸರಲ್ಲೇನಿದೆ?


ಓ, ನೀವು ನನ್ನ ಹೆಸರು ಕೇಳಿದ್ರಾ?
ಅಯ್ಯೋ, ಹೆಸರಲ್ಲೇನಿದೆ ಬಿಡಿ
ಯಾವುದೋ ಒಂದು
ರೀಟಾ, ಗೀತಾ, ಸಂಗೀತಾ, ಶಬನಂ, ಮಮತಾಜ಼್
ನಿಮಗ್ಯಾವುದು ಇಷ್ಟವೋ ಅದೇ ಕರೀರಿ!

ನಿಮಗೊಂದು ವಿಷ್ಯ ಗೊತ್ತಾ?
ಕೆಲವರು ಮೊದಲೇ ಹೆಸರು ಕೇಳ್ತಾರೆ
ಮತ್ತೆ ಕೆಲವರು ಎಲ್ಲಾ ಮುಗಿದ ಮೇಲೆ

ಯಾರದ್ರೂ ಗುಳ್ಡು ನನ್ಮಗ ಸಿಕ್ರೆ
ನಾನೇ ಕರೀನಾ, ಕತ್ರೀನಾ, ದೀಪಿಕಾ, ಐಶ್ವರ್ಯಾ
ಅಂತ ಏನೋ ಒಂದು ಹೇಳ್ಬಿಡ್ತೀನಿ
ಮುಂಡೇ ಮಕ್ಲು ಕಳ್ದೇ ಹೋಗ್ತಾರೆ
ಹೋಗ್ಲಿ, ಒಂದು ನೂರು ರೂಪಾಯಿ ಅದ್ರೂ ಜಾಸ್ತಿ ಕೊಡ್ತಾರಾ
ಅಯ್ಯೋ, ಬಡ್ಕೋಬೇಕು ಜನ್ಮಕ್ಕೆ!

ಯಾರಿಗ್ರೀ ಬೇಕು ನನ್ನ ಹೆಸರು, ಜಾತಿ, ಧರ್ಮ ಕಟ್ಕೊಂಡು
ಅವರೇನು ನನ್ನ ಮದುವೆ ಮಾಡ್ಕೊಂಡು ಸಂಸಾರಾನಾ ಮಾಡ್ತಾರೆ
ಅವರಿಗೆ ಬೇಕಿರೋದೇ ಬೇರೆ
ಅದಕ್ಯಾಕೆ ಬೇಕು ಇವೆಲ್ಲಾ ಅಲ್ವಾ?
ನಿಜವಾದ ಜಾತ್ಯಾತೀತ ವ್ಯಕ್ತಿಗಳು ಅಂದ್ರೆ ನಾವೇರಿ!

ಗೀತೆ, ರಾಮಾಯಣ, ಬೈಬಲ್ಲು, ಖುರಾನು ಗೊತ್ತಿಲ್ಲ
ನನಗೂ ಅದು ಬೇಕಿಲ್ಲ ಬಿಡಿ
ಬೇಕಿರೋದು ಒಂದು ಹಿಡಿ ಅನ್ನ, ಬಟ್ಟೆ, ತಲೆ ಮೇಲೊಂದು ಸೂರು
ಅದಕ್ಕೇ ಇಷ್ಟೊಂದು ನಾಟಕ ಎಲ್ಲಾ!

ಇದೆಲ್ಲಾ ಬೇಕಾದರೆ ಅದನ್ನೇ ಮಾಡ್ಬೇಕಾ?
ನೀವು ಕೇಳ್ಬಹುದು
ಬೇಡ ಅಂತ ನನಗೂ ಗೊತ್ತು
ನಾನಾಗೇ ಬಂದ್ನ ಈ ಕಸುಬಿಗೆ
ಯಾರು ಬರತಾರೆ ಹೇಳಿ ಖುಷಿಯಿಂದ?

ಯಾರೋ ದಬ್ಬಿದರು, ಸೀದಾ ಇಲ್ಲಿಗೆ ಬಂದು ಬಿದ್ದೆ
ಬಿದ್ದಿದ ದಿನದಿಂದ ಇದುವರೆಗೂ ಇಲ್ಲ ನಿದ್ದೆ
ಬಂದ್ರೂ ಬಿಡ್ತಾರಾ? ದುಡ್ಡು ಕೊಟ್ಟೋರು
ಸರಿ, ಬರಲಾ ಯಾರೋ ಕರೀತಿದಾರೆ
ಮತ್ತೆ ಯಾವಾಗಲಾದರೂ ಸಿಗ್ತೀನಿ!!

No comments:

Post a Comment