Wednesday 12 December 2012

ಅಂತೂ ಇಂತು ಪ್ರಾದೇಶಿಕ ಪಕ್ಷ ಬಂತು: ಭಾಗ-೧


 
ಕನ್ನಡಿಗರ ಬಹು ವರ್ಷದ ಬಯಕೆಯಂತೆ ಅಂತೂ ಇಂತೂ ಒಂದು ಪ್ರಾದೇಶಿಕ ಪಕ್ಷ ಉದಯವಾಯಿತು. ಈ ವರ್ಷದ ಮೊದಲು ಶ್ರೀ ರಾಮುಲು ಅವರ ಬಿ.ಎಸ್.ಆರ್ ಪಕ್ಷವೂ ಸೇರಿದರೆ ಕರ್ನಾಟಕಕ್ಕೆ ಎರಡು ಪ್ರಾದೇಶಿಕ ಪಕ್ಷ ಬಂದಂತಾಯಿತು. ಕರ್ನಾಟಕಕ್ಕೆ ಪ್ರಾದೇಶಿಕ ಪಕ್ಷವು ಈ ಮೊದಲು ಇರಲೇ ಇಲ್ಲ ಅಂತಲ್ಲ. ಬಹಳ ಹಿಂದೆಯೇ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷದ ಕಲ್ಪನೆ ಕನ್ನಡಿಗರಲ್ಲಿ ಗರಿಕೆದರಿತ್ತು. ಘಟಾನುಘಟಿಗಳಾದ ದೇವರಾಜ್ ಅರಸ್, ಬಂಗಾರಪ್ಪ ಮೊದಲಾದವರು ಪ್ರಾದೇಶಿಕ ಪಕ್ಷವನ್ನು ಕರ್ನಾಟಕದಲ್ಲಿ ಕಟ್ಟಿ ಸ್ವಲ್ಪ ಮಟ್ಟಿಗೆ ಯಶಸ್ವಿಯೂ ಆಗಿದ್ದರು. ಆದರೆ ಈ ಪಕ್ಷಗಳು ಕಾಲಾನಂತರ ಕಾಂಗ್ರೆಸ್, ಜನತಾ ದಳದಲ್ಲಿ ವಿಲೀನವಾಯಿತು. ವಿಜಯ ಸಂಕೇಶ್ವರ್ ಅವರು ಕನ್ನಡ ನಾಡು ಎಂಬು ಪಕ್ಷವನ್ನು ಸ್ಥಾಪಿಸಿ ನಂತರ ಅದು ಭಾ.ಜ.ಪ.ದಲ್ಲಿ ಸೇರಿಕೊಂಡಿತು. ಇದು ಎಲ್ಲಾ ಕನ್ನಡಿಗರಿಗೆ ತಿಳಿಯದ ವಿಷಯವೇನಲ್ಲ. ಇದೆಲ್ಲಾ ಹಳೆಯ ಕಥೆಯಾಯಿತು. ಅದರ ಬಗ್ಗೆ ಈಗ ಚಿಂತಿಸಿ ಫಲವಿಲ್ಲ. ಈಗ ನಾವು ಯೋಚಿಸಬೇಕಾದ ವಿಷಯವೇನೆಂದರೆ ಕರ್ನಾಟಕದಲ್ಲಿ ಒಂದು ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರುವ ಬಗ್ಗೆ ಯೋಚಿಸುವುದು. ಇದರಲ್ಲಿರುವ ಅಡೆತಡೆಗಳನ್ನು ಹೇಗೆ ನಿವಾರಿಸಿಕೊಳ್ಳುವುದೆಂಬ ಬಗ್ಗೆ ಯೋಚಿಸುವುದು ಮಾತ್ರ.

ನಾಡು, ನುಡಿ, ಜಲದ ಬಗ್ಗೆ ತಮ್ಮಲ್ಲಿರುವ ಸ್ಪಷ್ಟ ಕಲ್ಪನೆಯನ್ನು ಮೊದಲು ಯಡಿಯೂರಪ್ಪನವರು ಬಹಿರಂಗಪಡಿಸಬೇಕು. ಆ ಕೆಲಸ ಯಡಿಯೂರಪ್ಪನವರು ಮಾಡುತ್ತಿಲ್ಲ. ಅವರು ಕೇವಲ ಭಾರತೀಯ ಜನತಾ ಪಕ್ಷದಿಂದ ನನಗೆ ಅನ್ಯಾಯವಾಯಿತು. ನಾನು ೪೦ ವರ್ಷದಿಂದ ಕಟ್ಟಿ ಬೆಳೆಸಿದ ಪಕ್ಷ ನನ್ನನ್ನು ಹೊರಹಾಕಿತು ಎಂದು ಕಣ್ಣೀರು ಹಾಕುವುದೇ ಆಯಿತೇ ಹೊರತು, ಕರ್ನಾಟಕಕ್ಕೆ ಪ್ರಾದೇಶಿಕ ಪಕ್ಷ ಯಾಕೆ ಬೇಕು ಎಂಬ ಸ್ಪಷ್ಟ ಚಿಂತನೆ ಅವರಲ್ಲಿ ಎದ್ದು ಕಾಣುತ್ತಿಲ್ಲ. ತಮಗಾದ ಅವಮಾನಕ್ಕೆ ಸೇಡನ್ನು ತೀರಿಸಿಕೊಳ್ಳುವುದಕ್ಕಾಗಿ ಮಾತ್ರವೇ ಹೊಸ ಪ್ರಾದೇಶಿಕ ಪಕ್ಷವನ್ನು ಕಟ್ಟುತ್ತಿದ್ದಾರೆಯೇ ಹೊರತು ರಾಜ್ಯದ ಜನರ, ನುಡಿಯ, ಜಲದ ಬಗ್ಗೆ ಅವರಿಗೆ ಎಳ್ಳಷ್ಟೂ ಕಾಳಜಿ ಇಲ್ಲವೆಂಬುದು ಅವರ ನಡುವಳಿಕೆಯನ್ನು ಈಗ ನೋಡಿದವರಿಗೆ ಸ್ಪಷ್ಟವಾಗಿ ಕಾಣುತ್ತಿದೆ. ಮೊದಲು ಅವರು ಇದರಿಂದ ಹೊರ ಬರಬೇಕು. ಆದದ್ದು ಆಯಿತು, ಮೊದಲು ಅವರು ತಮ್ಮ ತಪ್ಪನ್ನು ಅರಿತುಕೊಂಡು ರಾಜ್ಯದ ನೆಲ, ಜಲ, ನಾಡು, ನುಡಿಯ ಬಗ್ಗೆ ಮಾತ್ರ ಚಿಂತಿಸಿ ಅದರ ಬಗ್ಗೆ ಸರಿಯಾದ ಯೋಜನೆ ಮತ್ತು ಯೋಚನೆಯಿಂದ ಕಾರ್ಯವನ್ನು ಮಾಡಬೇಕು.

ರಾಷ್ಟೀಯ ಪಕ್ಷದಿಂದ ಕರ್ನಾಟಕಕ್ಕೆ ಎಷ್ಟು ಅನ್ಯಾಯವಾಗುತ್ತಿದೆ ಎಂಬುದನ್ನು ಶ್ರೀಸಾಮಾನ್ಯರಿಗೆ ತಿಳಿಯಪಡಿಸಬೇಕು. ಆ ಕೆಲಸವನ್ನೂ ಸಹ ಯಡಿಯೂರಪ್ಪನವರು ಮಾಡುತ್ತಿಲ್ಲ. ನಮ್ಮದೇ ಪ್ರಾದೇಶಿಕ ಪಕ್ಷವಿದ್ದರೆ ನಮ್ಮ ರಾಜ್ಯಕ್ಕೆ ಎಷ್ಟು ಲಾಭವಾಗುತ್ತದೆ ಎಂಬ ವಿಷಯದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ಈ ವಿಷಯಗಳಾವುದೂ ಜನರಿಗೆ ಗೊತ್ತಿಲ್ಲವೆಂದಲ್ಲ. ಈ ಎಲ್ಲಾ ವಿಷಯಗಳು ಕನ್ನಡಿಗರಿಗೆ ಗೊತ್ತು. ಆದರೂ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವು ಅಧಿಕಾರಕ್ಕೆ ಬರಬೇಕೆಂದರೆ ಈ ವಿಷಯವನ್ನು ಜನರ ನರ ನಾಡಿಗಳಲ್ಲಿ ತುಂಬಲು ಬಹಳ ಸಮಯ ಹಿಡಿಯುತ್ತದೆ. ಈ ಮೊದಲು ಸ್ಥಾಪಿಸಿದ ಪ್ರಾದೇಶಿಕ ಪಕ್ಷಗಳ ಸ್ಥಾಪಕರು ಕೇವಲ ನಮ್ಮ ಸ್ವಾರ್ಥಕ್ಕಾಗಿ ಮಾತ್ರ ಹೊಸ ಪಕ್ಷ ಸ್ಥಾಪಿಸಿದರೇ ಹೊರತು ರಾಜ್ಯದ ಅಭಿವೃದ್ದಿಗಾಗಿ ಮಾಡಿದ್ದಲ್ಲ. ಆ ಕಾರಣಕ್ಕಾಗಿಯೇ ಆ ಪಕ್ಷಗಳು ಕನ್ನಡಿಗರ ಮನಸೂರೆಗೊಳ್ಳಲಿಲ್ಲ. ಇಂತಹ ತಪ್ಪನ್ನು ಈಗಲೂ ಯಡಿಯೂರಪ್ಪನವರು ಮಾಡಿದರೆ ಅವರಿಗಾದ ಗತಿಯೇ ಇವರಿಗೂ ಆಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಯಡಿಯೂರಪ್ಪನವರು ಸಮಾಜದ ಎಲ್ಲಾ ವರ್ಗದ ಜಾತಿ, ಧರ್ಮದ ಜನರನ್ನೂ ತಮ್ಮ ಜೊತೆ ಕರೆದುಕೊಂಡು ಹೋಗುವ ಬಗ್ಗೆ ಜನರಲ್ಲಿ ನಂಬಿಕೆಯುಂಟುಮಾಡಬೇಕು. ಮುಂದುವರೆದ ಜನಾಂಗದ ಜೊತೆಯಲ್ಲಿ ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಸಮೀಕರಣವನ್ನು ಮಾಡುವುದರಲ್ಲಿ ತಮ್ಮ ೪೦ ವರ್ಷದ ಅನುಭವದ ಜಾಣ್ಮೆಯನ್ನು ತೋರಬೇಕು. (ಮಿಕ್ಕಿದ್ದು ನಾಳೆಗೆ)

No comments:

Post a Comment