Thursday 13 December 2012

ಅಂತೂ ಇಂತು ಪ್ರಾದೇಶಿಕ ಪಕ್ಷ ಬಂತು: ಭಾಗ-೨


ಕಳೆದ ಸಂಚಿಕೆಯಿಂದ

ಯಡಿಯೂರಪ್ಪನವರು ತಮ್ಮ ಕೋಪವನ್ನು ಕಡಿಮೆ ಮಾಡಿಕೊಂಡು ತಾಳ್ಮೆಯಿಂದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದನ್ನು ಕರಗತ ಮಾಡಿಕೊಳ್ಳಬೇಕಾಗುತ್ತದೆ. ತಮ್ಮ ಜಾತಿ ಪ್ರೇಮವನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾಗುತ್ತದೆ. ಜನ ನಾಯಕನಾದವನು ಯಾವುದೇ ಒಂದು ಜಾತಿಗೆ, ಧರ್ಮಕ್ಕೆ ಯಾವತ್ತೂ ಸೀಮಿತವಾಗಬಾರದು. ಸ್ವಚಾರಿತ್ರವನ್ನು ಹೊಂದಬೇಕಾಗುತ್ತದೆ. ತಮ್ಮ ಮೇಲಿರುವ ಕಳಂಕಗಳನ್ನು ಸಂಪೂರ್ಣವಾಗಿ ನಿವಾರಿಸಿಕೊಂಡು ಜನಮನವನ್ನು ಗೆಲ್ಲುವುದು ಸುಲಭವಾದ ಮಾತಲ್ಲ. ಜನನಾಯಕನಾದವನು ಕೇವಲ ಒಂದೋ ಎರಡೋ ಪ್ರಾಂತ್ಯಕ್ಕೆ ಸ್ಥೀಮಿತವಾಗದೆ ಸಂಪೂರ್ಣ ರಾಜ್ಯಕ್ಕೆ ಸೀಮಿತವಾಗಬೇಕು.

ಯಡಿಯೂರಪ್ಪನವರ ಈ ಹೊಸಪಕ್ಷ ನಾಳೆಯೇ ಅಧಿಕಾರಕ್ಕೆ ಬರುವುದು ಬಹಳ ಕಷ್ಟ, ಆದ್ದರಿಂದ ತಾಳ್ಮೆಯ ಅವಶ್ಯಕತೆ ಬಹಳ ಇದೆ. ಹೊಸ ಪಕ್ಷ ಉದಯವಾಗಿ ೪-೫ ತಿಂಗಳಲ್ಲೇ ಅಧಿಕಾರಕ್ಕೆ ಬರುವುದೆಂದರೆ ಅದು ಸಾಮಾನ್ಯವಾದ ಮಾತಲ್ಲ. ಈ ಸಲ ಚುನಾವಣೆ ನಡೆದು ಯಡಿಯೂರಪ್ಪ ನವರು ೩೦-೪೦ ಸ್ಥಾನಗಳನ್ನು ರಾಜ್ಯದಲ್ಲಿ ಗೆದ್ದರೂ ಅದು ಯಶಸ್ವಿಯೇ. ಅವರು ಹೇಳುವಂತೆ ೧೨೦ ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರುವುದು ಅವರ ಕನಸೇನೋ ಸರಿ. ಆದರೆ ರಾಜ್ಯದಲ್ಲಿ ಆ ಪರಿಸ್ಥಿತಿ ಸಧ್ಯಕ್ಕಂತೂ ಇಲ್ಲ. 

ಹೋರಾಟ ಮನೋಭಾವ ಹೊಂದಿರುವ ಯಡಿಯೂರಪ್ಪನವರು ತಾಳ್ಮೆಯಿಂದ ಪಕ್ಷವನ್ನು ಕಟ್ಟಿ, ತಮ್ಮ ಮೇಲಿರುವ ಆಪಾದನೆಯಿಂದ ಮುಕ್ತಿಹೊಂದಿ ಸುಮಾರು ೧೦ ವರ್ಷಗಳ ಕಾಲ ಪಕ್ಷಕ್ಕಾಗಿ ಹಗಲಿರುಳೂ ದುಡಿದು ರಾಜ್ಯದ ಜನರ ಮನಗೆದ್ದರೆ ಸುಮಾರು ೨೦೨೦-೨೦೨೨ರ ಅವಧಿಗೆ ಕರ್ನಾಟಕದಲ್ಲಿ ಸದೃಡ ಪ್ರಾದೇಶಿಕ ಪಕ್ಷದ ರಾಜ್ಯಭಾರವನ್ನು ಕನ್ನಡಿಗರು ನೋಡಬಹುದು. ಈಗಿರುವ ಮುಖ್ಯ ಪ್ರಶ್ನೆ ಏನೆಂದರೆ ಯಡಿಯೂರಪ್ಪನವರಿಗೆ ನಿಜಕ್ಕೂ ಆ ತಾಳ್ಮೆ ಇದೆಯೇ? ಅವರ ಹಾವ ಭಾವ, ಅವರ ನಡೆ ನುಡಿಗಳನ್ನು ಗಮನಿಸಿದಿದವರಿಗೆ ಅವರು ಹಾಗೆ ಕಾಣುವುದಿಲ್ಲ. ಅವರಿಗೆ ಎಲ್ಲವೂ ಈ ಕ್ಷಣದಲ್ಲೇ ನಡೆದುಬಿಡಬೇಕೆಂಬ ಅಭಿಲಾಷೆ. ಅವರಿಗೆ ತಮ್ಮ ಪಕ್ಷ ನಾಳೆಯೇ ಚುನಾವಣೆ ಎದುರಿಸಿ ಅಧಿಕಾರಕ್ಕೆ ಬಂದು ಮುಂದಿನ ಮುಖ್ಯಮಂತ್ರಿ ತಾವೇ ಆಗಬೇಕೆಂಬ ಕನಸು ಮತ್ತು ಭಾರತೀಯ ಜನತಾ ಪಕ್ಷಕ್ಕೆ ತಾವು ಕರ್ನಾಟಕದಲ್ಲಿ ಎಷ್ಟು ಬಲಿಷ್ಟರು ಎಂದು ತೋರಿಸಿಕೊಳ್ಳಬೇಕೆಂಬ ಹಂಬಲ. ಮೊದಲು ಅವರು ಇಂತಹ ಭ್ರಮೆಯಿಂದ ಹೊರಬಂದು, ವಾಸ್ತವವಾಗಿ ಯೋಚಿಸಿ ಹೆಜ್ಜೆ ಇಡಬೇಕು.

ಮುಂದಿನ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಕೇವಲ ೨೦ ರಿಂದ ೩೦ ಸ್ಥಾನ ಬಂದರೆ, ಅವರು ಭಾರತೀಯ ಜನತಾ ಪಕ್ಷದಲ್ಲೋ ಅಥವಾ ಇನ್ಯಾವುದೋ ಪಕ್ಷದಲ್ಲೋ ತಮ್ಮ ಕರ್ನಾಟಕ ಜನತಾ ಪಕ್ಷವನ್ನು ವೀಲೀನ ಗೊಳಿಸುವುದಿಲ್ಲ ಎಂಬುದನ್ನು ಹೇಗೆ ನಂಬುವುದು? ರಾಜಕಾರಣಿಗಳನ್ನು ಎಷ್ಟರ ಮಟ್ಟಿಗೆ ನಂಬುವುದು ಅವರವರಿಗೆ ಬಿಟ್ಟ ವಿಚಾರ.  ಹಾಗಾಗುವುದು ಖಂಡಿತಾ ಬೇಡ, ನಮ್ಮೆಲ್ಲರ ಕನಸು ಈ ಬಾರಿಯಾದರೂ ನನಸಾಗಲಿ.

ಯಡಿಯೂರಪ್ಪನವರು ಈ ಎಲ್ಲಾ ಕಠಿಣ ಪರಿಸ್ಥಿತಿಗಳನ್ನು ಎದುರಿಸಿ ಹೊರಹೊಮ್ಮಲಿ. ಯಡಿಯೂರಪ್ಪನವರು ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಸ್ಥಾಪಿಸಿ ಅಧಿಕಾರಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಅನ್ನುವ ಏಕೈಕ ಕಾರಣಕ್ಕೆ ಮಾತ್ರ ಅವರನ್ನು ಬೆಂಬಲಿಸ ಬೇಕು ಎಂಬ ಕಾರಣ ಬಿಟ್ಟರೆ ಬೇರೆ ಯಾವ ಕಾರಣವೂ ಸಧ್ಯಕ್ಕೆ ಕನ್ನಡಿಗರಿಗೆ ಹೊಳೆಯುತ್ತಿಲ್ಲ. ಅವರಿಂದಾದರೂ ಕರ್ನಾಟಕಕ್ಕೆ ಕೇಂದ್ರದಿಂದ ಸೂಕ್ತ ಸ್ಥಾನ ಮಾನ ಸಿಗಲಿ, ನಮಗೆ ಆಗುವ ಅನ್ಯಾಯ ಕೊನೆಗೊಳ್ಳಲಿ, ನಾಡು, ನುಡಿ, ಜಲ, ಸಂಸ್ಕೃತಿ ರಕ್ಷಣೆಯಾಗಲಿ ಎಂಬ ನಂಬಿಕೆ ಕನ್ನಡಿಗರದ್ದು. ಈ ಎಲ್ಲಾ ಪ್ರಶ್ನೆಗಳಿಗೆ ಇನ್ನು ೫-೬ ತಿಂಗಳಲ್ಲಿ ಉತ್ತರ ಸಿಗಬಹುದು. ಎಲ್ಲಾ ಸುಖಮಯವಾಗಲಿ ಕರ್ನಾಟಕಕ್ಕೆ ನಮ್ಮದೇ ಆದ ಒಂದೆರಡು ಪ್ರಾದೇಶಿಕ ಪಕ್ಷ ಸದೃಢವಾಗಿ ನೆಲೆಗೊಳ್ಳಲಿ, ನಮ್ಮದೇ ಪ್ರಾದೇಶಿಕ ಪಕ್ಷ ರಾಜ್ಯದಲ್ಲೂ ಮತ್ತು ದೇಶದಲ್ಲೂ ಹೆಸರು ಮಾಡಲಿ ಎಂಬ ಶುಭ ಹಾರೈಕೆಯೊಂದಿಗೆ……… (ಮುಗಿಯಿತು) (ಬಹಳ ಹಿಂದೆ ಬರೆದ “ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು” ಎಂಬ ಸರಣಿ ಲೇಖನವನ್ನು ಆಸಕ್ತರು www.24x7kannada.blogspot.com ನಲ್ಲಿ ಗಮನಿಸಬಹುದು)

No comments:

Post a Comment