Thursday 11 October 2012

ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ : ಭಾಗ -೧


“ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ” ಎಂದು ಕವಿ ಕುವೆಂಪುರವರು ನಮಗೆ ಒಂದು ಒಳ್ಳೆಯ ಆದರ್ಶದ ಕಲ್ಪನೆಯನ್ನು ಕಟ್ಟಿಕೊಟ್ಟಿದ್ದಾರೆ. ಭಾರತವನ್ನು ನಮ್ಮ ಹೆತ್ತ ತಾಯಿಯೆಂದು ಮತ್ತು ಕರ್ನಾಟಕವನ್ನು ಅದರ ಮಗಳೆಂಬ ಕಲ್ಪನೆ ನಿಜಕ್ಕೂ ಮನಮೋಹಕ. ಎಂತಹ ಅದ್ಭುತ ಕಲ್ಪನೆ. ನಾವು ಕನ್ನಡಿಗರು ಅದನ್ನು ಚಾಚೂತಪ್ಪದೆ ನಂಬಿಕೊಂಡು ಮತ್ತು ಪಾಲಿಸಿಕೊಂಡು ಬರುತ್ತಿದ್ದೇವೆ. ಆದರೆ ನಮ್ಮನ್ನು ಆಳುವ ಕೆಂದ್ರ ಸರ್ಕಾರ ಮಾತ್ರ ನಮ್ಮನ್ನು ಮಲತಾಯಿಯ ಮಕ್ಕಳಂತೆ ನೋಡುತ್ತಿರುವುದನ್ನು ಮತ್ತು ನಡೆಸಿಕೊಂಡು ಬರುತ್ತಿರುವುದನ್ನು ಕಂಡಾಗ ಮನಸ್ಸಿಗೆ ಬಹಳ ಹಿಂಸೆ ಎನ್ನಿಸುತ್ತದೆ.

ನಮ್ಮ ಕನ್ನಡಿಗರು ಭಾರತೀಯರಲ್ಲವೇನೋ ಮತ್ತು ಕರ್ನಾಟಕವು ಭಾರತದಲ್ಲಿಲ್ಲವೇನೋ ಎಂಬಂತೆ ಕೇಂದ್ರವು ವ್ಯವಹರಿಸುವುದನ್ನು ಕಂಡಾಗ ನಾವು ಮಲತಾಯಿಯ ಮಕ್ಕಳೇ ಇರಬಹುದೆಂಬ ಭಾವನೆ ಉಂಟಾಗುತ್ತದೆ. ನಮಗೆ ಎಲ್ಲದರಲ್ಲೂ ಕೇಂದ್ರವು ಅನ್ಯಾಯ ಮಾಡುತ್ತಲೇ ಬರುತ್ತಿದೆ. ನೀರು, ವಿದ್ಯುತ್, ಕಲ್ಲಿದ್ದಲು, ಗೊಬ್ಬರ, ಬೀಜ, ಕೇಂದ್ರದ ಕಛೇರಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ, ಗಡಿ ವಿವಾದ, ರೈಲು ಹಂಚಿಕೆ, ಹಣ ಕಾಸಿನ ಅನುದಾನ, ಬರ, ನೆರೆ ಪರಿಹಾರ, ಕೇಂದ್ರ ಸರ್ಕಾರ ಕೊಡುವ ಪದ್ಮ ಪ್ರಶಸ್ತಿಗಳು, ಕೊನೆಗೆ ಅಂಚೆ ಚೀಟಿಗಳಲ್ಲೂ ಸಹ ಕನ್ನಡಿಗರಿಗೆ ಸಿಗಲೇಬೇಕಾದ ಸ್ಥಾನಮಾನ ವಿಲ್ಲ. ಅತ್ತೂ ಕರೆದು ಕೊನೆಗೂ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ೩೭೧ನೇ ವಿಧಿಯ ಸವಲತ್ತುಗಳು ಇತ್ತೀಚೆಗೆ ಉತ್ತರ ಕರ್ನಾಟಕಕ್ಕೆ ಸಿಕ್ಕಿದೆ. ಇನ್ನೂ ಅದು ಅನುಮೋದನೆಗೆ ಒಳಪಡಬೇಕಾಗಿದೆ.

ನ್ಯಾಯವಾದ ರೀತಿಯಲ್ಲಿ ಸಿಗಲೇ ಬೇಕಾದ ಸವಲತ್ತುಗಳು ನಮಗೆ ಯಾಕೆ ಸಿಗುತ್ತಿಲ್ಲ? ಕೇಂದ್ರದಲ್ಲಿ ಅಧಿಕಾರವಿರುವ ಪಕ್ಷವೇ ರಾಜ್ಯದಲ್ಲೂ ಅಧಿಕಾರದಲ್ಲಿದ್ದರೆ ಕರ್ನಾಟಕಕ್ಕೆ ನ್ಯಾಯ ಸಿಗುತ್ತದೆ, ಸಾಮಾನ್ಯವಾಗಿ ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಪಕ್ಷ ಕೇಂದ್ರದಲ್ಲಿ ವಿರೋಧ ಪಕ್ಷವಾಗಿರುವ ಸಂದರ್ಭವೇ ಹೆಚ್ಚು ಆದ್ದರಿಂದ ನಮಗೆ ಸಿಗಬೇಕಾದ ಸವಲತ್ತುಗಳು ನಮಗೆ ಸರಿಯಾಗಿ ಸಿಗುವುದಿಲ್ಲ ಎಂಬುದು ಅನೇಕರ ವಾದ. ಈ ವಾದದಲ್ಲಿ ಹುರುಳಿಲ್ಲ ಎಂದು ಅನಿಸುವುದುಂಟು. ಅನೇಕ ರಾಜ್ಯಗಳಲ್ಲಿ ಸಾಮಾನ್ಯವಾಗಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವೇ ಬೇರೆ, ರಾಜ್ಯದಲ್ಲಿ ಅಧಿಕಾರ ನಡೆಸುವ ಪಕ್ಷವೇ ಬೇರೆ ಎಂಬುದನ್ನು ನಾವು ಕಾಣಬಹುದು. ಅವರುಗಳೆಲ್ಲಾ ಯಾವುದೇ ತೊಂದರೆಗೆ ಒಳಗಾಗದೆ ಚೆನ್ನಾಗೇ ಇದ್ದಾರಲ್ಲಾ.  (ಮಿಕ್ಕಿದ್ದು ನಾಳೆಗೆ)

No comments:

Post a Comment