Monday 22 October 2012

ರಾಜಕಾರಣಿಗಳಿಗೆ ನಿವೃತ್ತಿ ಯಾಕಿಲ್ಲ?


ರಾಜಕಾರಣಿಗಳಿಗೆ ನಿವೃತ್ತಿ ಎಂಬುದು ನಮ್ಮ ದೇಶದಲ್ಲಿ ಯಾಕಿಲ್ಲ? ಈ ಕೂಗು ಇಂದು ನಿನ್ನೆಯದಲ್ಲ, ಅನೇಕ ವರ್ಷಗಳಿಂದಲೂ ಜನ ಸಾಮಾನ್ಯ ಕೇಳುತ್ತಲೇ ಇದ್ದಾನೆ, ಇದರ ಬಗ್ಗೆ ಅನೇಕ ಬಾರಿ ಪತ್ರಿಕೆಗಳಲ್ಲಿ, ಟಿ.ವಿ ವಾಹಿನಿಗಳಲ್ಲಿ ಚರ್ಚೆ ಕೂಡ ಆಗಿದೆ. ಆದರೆ ಉತ್ತರ ಮಾತ್ರ ಸಿಕ್ಕಿಲ್ಲ.  ರಾಜಕಾರಣಿಗಳಿಗೆ ೭೦-೮೦-೯೦ ವರ್ಷವಾದರೂ ಅಧಿಕಾರದ ವ್ಯಾಮೋಹ ಹೋಗುವುದಿಲ್ಲ ಯಾಕೆ? ಸರ್ಕಾರಿ ನೌಕರರಿಗೆ ೬೦ ವರ್ಷ ತುಂಬಿದ ಮೇಲೆ ಅವರಿಗೆ ಕಡ್ಡಾಯವಾಗಿ ನಿವೃತ್ತಿ ಮಾಡಲಾಗುತ್ತದೆ. ಯಾವುದೇ ವ್ಯಕ್ತಿಗೆ ೬೦ ವರ್ಷವಾದ ಮೇಲೆ ಅವರಿಗೆ ಕೆಲಸ ಮಾಡಲು ದೈಹಿಕವಾಗಿ ಸಾಧ್ಯವಾಗುವುದಿಲ್ಲ. ಅವರು ವಿದ್ಯಾವಂತರೂ/ಬುದ್ದಿವಂತರಾಗಿದ್ದರೂ ಕೂಡ ಅವರ ದೇಹ ಮತ್ತು ಮನಸ್ಸು ಅವರಿಗೆ ಸ್ಪಂದಿಸುವುದಿಲ್ಲ ಎಂಬ ಕಾರಣ ಕೊಡುತ್ತಾರೆ. ಅದೇ ರೀತಿ ಕ್ರಿಕೆಟ್ ಆಡುವ ಮಂದಿ ಸುಮಾರು ೩೫-೩೮ ವರ್ಷಗಳ ಹೊತ್ತಿಗೆ ಸಾಮಾನ್ಯವಾಗಿ ನಿವೃತ್ತರಾಗುತ್ತಾರೆ. ಅದೇ ರೀತಿ ಹಾಕಿ, ಕಾಲ್ಚೆಂಡು, ಟೆನಿಸ್, ಅಥ್ಲೆಟಿಕ್ಸ್ ಮುಂತಾದ ಕ್ರೀಡೆಗಳಲ್ಲಿ ತೊಡಗಿರಿಸಿಕೊಂಡಿರುವ ಅನೇಕ ಕ್ರೀಡಾಪಟುಗಳು ದೇಹ ಸ್ಪಂದಿಸುವುದಿಲ್ಲ ವೆಂಬ ಕಾರಣ ಒಡ್ಡಿ ನಿವೃತ್ತರಾಗುತ್ತಾರೆ.

ಇನ್ನು ಚೆಸ್, ಗಾಲ್ಫ್, ಸ್ನೂಕರ್ ಮುಂತಾದ ಕ್ರೀಡೆಗಳಿಗೆ ದೈಹಿಕ ಬಲ ಬೇಡವಾಗಿದ್ದರೂ ಮುಂದಿನ ಪೀಳಿಗೆಗೆ ಅವಕಾಶ ಮಾಡಿಕೊಡುವ ಮೂಲಕ ಅವರು ಕ್ರೀಡೆಯಲ್ಲಿ ಉನ್ನತ ಸ್ಥಾನದಲ್ಲಿದ್ದರೂ ನಿವೃತ್ತರಾಗುತ್ತಾರೆ. ಇನ್ನು ಕಂಪನಿಗಳ ಸಿ.ಇ.ಒ ಗಳಾದ ನಾರಾಯಣ ಮೂರ್ತಿ, ರತನ್ ಟಾಟ ಅವರುಗಳು ತಮ್ಮ ವಯಸ್ಸಿನ ಕಾರಣ ನೀಡಿ ನಿವೃತ್ತರಾಗಿದ್ದಾರೆ. ಆದರೆ ನಮ್ಮ ರಾಜಕಾರಣಿಗಳು ಉಹುಂ, ಅವರಿಗೆ ೭೦-೮೦-೯೦ ಆದರೂ ರಾಜಕೀಯದಿಂದ ನಿವೃತ್ತರಾಗುವುದು ಬಹಳ ಕಡಿಮೆ. ದೇಶವನ್ನು ಆಳುವವರಿಗೆ ವಯಸ್ಸು ಜಾಸ್ತಿಯಾಗಿದ್ದರೆ ಅನುಭವದಿಂದ ಇನ್ನೂ ಚೆನ್ನಾಗಿ ಆಡಳಿತ ನಡೆಸಬಹುದೆಂದೇ? ಅಥವಾ ಯುವಕರಿಗೆ ರಾಜ್ಯದ/ದೇಶದ ಚುಕ್ಕಾಣಿ ಹಿಡಿಯಲು ಬಾರದೆಂದೇ? ಅವರಿಗೆ ಆಡಳಿತ ನಡೆಸಲು ಅನುಭವದ ಕೊರತೆಯುಂಟಾಗುವುದೆಂದೇ? ನಾವು ಮಾಡಿರುವ ಕರ್ಮಕಾಂಡಗಳನ್ನು ನಾವು ಸಾಯುವವರಿಗೂ ಮುಚ್ಚಿಡಲು ಸಹಾಯವಾಗುವುದೆಂದೇ?  ಕಾರಣ ಏನೇ ಇರಲಿ. ನಮ್ಮ ದೇಶದ ಎಲ್ಲಾ ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ವಯಸ್ಸಾದವರೇ ಅಧಿಕ.

ಪ್ರಾಧಾನಿ, ರಾಷ್ಟ್ರಪತಿ, ಮುಖ್ಯಮಂತ್ರಿ, ರಾಜ್ಯಪಾಲರು, ವಿದೇಶಾಂಗ ಸಚಿವರು, ಹೀಗೆ ಎಲ್ಲಾ ಉನ್ನತ ಹುದ್ದೆಯಲ್ಲಿರುವವರ ವಯಸ್ಸು ಅಂದಾಜು ೭೦-೮೦ ವರ್ಷಗಳ ಹತ್ತಿರ ಇದೆ. ವಿದೇಶಗಳಲ್ಲಿ ಈ ಪರಿಸ್ಥಿತಿ ಇಲ್ಲ. ಅಲ್ಲಿ ಹೆಚ್ಚಿನ ಸಂಖ್ಯೆಯ ಮಂತ್ರಿವರ್ಯರು ೪೦-೫೦ ವರ್ಷಗಳ ಹತ್ತಿರ ಇರುವವರು. ನಮ್ಮ ದೇಶದಲ್ಲಿ ಇದು ಯಾಕೆ ಸಾಧ್ಯವಾಗುವುದಿಲ್ಲ?

೩೫ ರಿಂದ ೩೦ ವರ್ಷದ ಒಳಗಿರುವವರನ್ನು ಪಕ್ಷದ ಸದಸ್ಯರನ್ನಾಗಿಯೂ, ೩೦ ರಿಂದ ೩೫ ವರ್ಷದ ಒಳಗಿರುವವರನ್ನು ನಗರ ಸಭೆಯ ಸದಸ್ಯರನ್ನಾಗಿಯೂ, ೩೫ ರಿಂದ ೪೦ ವರ್ಷದ ಒಳಗಿರುವವರನ್ನು ಶಾಸಕ ಮತ್ತು ಮಂತ್ರಿಗಳನ್ನಾಗಿಯೂ, ೪೦ ರಿಂದ ೪೫ ವರ್ಷದ ಒಳಗಿರುವವರನ್ನು ಮುಖ್ಯಮಂತ್ರಿಯಾಗಿಯೂ, ೪೫ ರಿಂದ ೫೦ ವರ್ಷದ ಒಳಗಿರುವವರನ್ನು ಲೋಕಸಭಾ ಸದಸ್ಯ ಮತ್ತು ಮಂತ್ರಿಗಳನ್ನಾಗಿಯೂ, ೫೦ ರಿಂದ ೬೦ ವರ್ಷದ ಒಳಗಿರುವವರನ್ನು ಪ್ರಧಾನ ಮಂತ್ರಿ, ರಾಷ್ಟ್ರಪತಿಗಳನ್ನಾಗಿಯೂ ಮತ್ತು ೬೦ ರಿಂದ ೬೫ ವರ್ಷದ ಒಳಗಿರುವವರನ್ನು ಪಕ್ಷದ ಕೆಲಸ ಕಾರ್ಯಗಳಿಗೆ ವಹಿಸಬಹುದಲ್ಲವೇ.  ೬೫ ವರ್ಷಕ್ಕೆ ಕಡ್ಡಾಯವಾಗಿ ನಿವೃತ್ತಿ ಎಂಬ ವಯಸ್ಸಿನ ಮಿತಿಯನ್ನು ರಾಜಕಾರಣಿಗಳಿಗೆ ಮಾಡಬಾರದೇಕೆ? ಯುವಕ/ಯುವತಿಯರಿಗೆ ಹಿರಿಯರ ಮಾರ್ಗದರ್ಶನದಲ್ಲಿ ಕಲಿಯಲು ಅವಕಾಶವಿರುತ್ತದೆ. ಹೊಸ ಹೊಸ ಕಲ್ಪನೆಗಳಿರುವ ಯುವ ಶಕ್ತಿ ಮತ್ತು ಅನುಭವವಿರುವ ಹಿರಿಯರು ಒಂದುಗೂಡಿ ರಾಜ್ಯ/ದೇಶವನ್ನು ಮುನ್ನೆಡೆಸಿದಂತಾಗುತ್ತಲ್ಲವೇ?

1 comment:

  1. Super sir,
    You are reminding a good concept which can avoid maximum corruption in our country.

    ReplyDelete