Tuesday 2 October 2012

ಆರ್.ಕೆ ನಾರಾಯಣ್:ಭಾಗ-೫


ಕಳೆದ ಸಂಚಿಕೆಯಿಂದ:

ಕನ್ನಡಿಗರು ಅಲ್ಪ ತೃಪ್ತರು. ಅವರು ಕೇಳುವುದಿಷ್ಟೆ. ನಮ್ಮಲ್ಲಿ ರಾಹುಲ್ ದ್ರಾವಿಡ್, ಮಹೇಶ್ ಭೂಪತಿ, ದೀಪಿಕಾ ಪಡುಕೋಣೆ, ವಿಜಯ್ ಮಲ್ಯ, ಅನುಷ್ಕಾ ಶರ್ಮ ಹೀಗೆ ಅನೇಕ ಜನಪ್ರಿಯ ವ್ಯಕ್ತಿಗಳು ಇಲ್ಲಿಯೇ ನೆಲೆಸಿದ್ದಾರೆ. ಇನ್ನು ಕೆಲವರು ಇಲ್ಲೇ ಹುಟ್ಟಿ ಹೊರ ರಾಜ್ಯದಲ್ಲಿ ನೆಲೆಸಿ ಪ್ರಖ್ಯಾತರಾದಂತಹ ರಜನಿ ಕಾಂತ್, ಐಶ್ವರ್ಯ, ಶಿಲ್ಪಾ ಶೆಟ್ಟಿ, ಸುನೀಲ್ ಶೆಟ್ಟಿ, ರವಿಶಾಸ್ತ್ರಿ ಮುಂತಾದವರನ್ನು ನಾವು ಕನ್ನಡದಲ್ಲಿ ಮಾತನಾಡಲು ಅಪೇಕ್ಷಿಸಿದರೆ ತಪ್ಪಾ? ಅವರನ್ನು ನಾವು ನಮ್ಮವರೆಂದು ತಿಳಿದುಕೊಂಡಿದ್ದೇವೆ ಮತ್ತು ಅವರನ್ನು ನಾವು ಕನ್ನಡಿಗರೆಂದು ಒಪ್ಪಿಕೊಂಡಿದ್ದೇವೆ. ಅದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ಅವರು ಕೇವಲ ಇಲ್ಲಿ ನೆಲೆಸಿದ್ದಾರೆ ಎಂದ ಮಾತ್ರಕ್ಕೆ ಮಾತ್ರ ಕನ್ನಡಿಗರಾಗಿರದೆ, ಅವರ ಮನೆ/ಮನದಲ್ಲೂ ನಿಜವಾದ ಕನ್ನಡಿಗರಾಗಿರಲಿ ಎಂದು ಆಶಿಸುತ್ತೇವಷ್ಟೇ. ಅದೂ ತಪ್ಪಾ…..? ನಾವೇನು ಸಚಿನ್, ಬಾಳಾ ಠಾಕ್ರೆ, ಶಾರುಕ್ ಖಾನ್, ಅಮೀರ್ ಖಾನ್, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಕರುಣಾನಿಧಿಯನ್ನು ಕನ್ನಡದಲ್ಲಿ ಮಾತಾಡಿ ಎಂದು ಕೇಳುತ್ತೇವೆಯೇ?

ನಾವು ಇದನ್ನು ಕೇಳಿದರೆ ಕನ್ನಡಿಗರು ಪೂರ್ವಗ್ರಹ ಪೀಡಿತರು, ಸಂಕುಚಿತ ಮನೋಭಾವದವರೆಂದು ಹೀಯಾಳಿಸುತ್ತಾರೆ. ನಾವೇನು ತಪ್ಪು ಮಾಡಿದ್ದೇವೆ? ಪರ ರಾಜ್ಯದವರು ಬಂದಾಗ ಅವರಿಗೆ ಕನ್ನಡ ಮಾತನಾಡುವುದಕ್ಕೆ ಬರುವುದಿಲ್ಲವೆಂದು, ನಾವು ಅವರ ಭಾಷೆಯನ್ನು ಕಲಿತು ಅವರ ಬಳಿ ಅವರದೇ ಭಾಷೆಯಲ್ಲಿ ಮಾತನಾಡುತ್ತೇವೆ. ತೆಲುಗು/ತಮಿಳು/ಮಲೆಯಾಳಂ/ಹಿಂದಿ/ಇಂಗ್ಲೀಷ್ ಹೀಗೆ ಎಲ್ಲಾ ಭಾಷೆಗಳ ಚಿತ್ರಗಳನ್ನು ನೋಡಲು ಅವಕಾಶ ಕಲ್ಪಿಸಿಕೊಟ್ಟಿದ್ದೇವೆ. ಅವರಿಗಾಗಿ ಅವರ ಭಾಷೆಯ ದಿನಪತ್ರಿಕೆಗಳು/ಟಿ.ವಿ.ವಾಹಿನಿಗಳು ಎಲ್ಲಾ ಸಿಗುತ್ತದೆ.   ಅವರ ಭಾಷೆಯ ಶಾಲೆಗಳೂ ಸಹ ಇದೆ. ತಿನ್ನಲು ಆಹಾರ, ಕುಡಿಯಲು ನೀರು, ಇರಲು ನೆರಳು, ರೇಷನ್ ಕಾರ್ಡ್ ಮೊದಲುಗೊಂಡು ಸಕಲ ಸವಲತ್ತುಗಳನ್ನು ಒದಗಿಸಿದ್ದರೂ ಕೂಡ ನಮಗೆ ಸಂಕುಚಿತ ಮನೋಭಾವದವರೆಂಬ ಬಿರುದು. ಕೋಲು ಕೊಟ್ಟು ಹೊಡೆಸಿಕೊಳ್ಳುವುದು ಎಂದರೆ ಇದೇನಾ? (ಮುಗಿಯಿತು)

No comments:

Post a Comment