Wednesday 17 October 2012

ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ : ಭಾಗ -೪


ಕಳೆದ ಸಂಚಿಕೆಯಿಂದ

ನಮಗೆಲ್ಲರಿಗೂ ಕರ್ನಾಟಕದಲ್ಲಿ ನಮ್ಮದೇ ಆದ ಒಂದು ಪ್ರಾದೇಶಿಕ ಪಕ್ಷವಿದ್ದರೆ ನಮಗೆ ಹೆಚ್ಚು ಅನುಕೂಲವಾಗಬಹುದೆಂಬ ನಂಬಿಕೆ ಇದೆ. ಈ ಮಾತಿನಲ್ಲಿ ಹೆಚ್ಚಿನ ಹುರುಳಿದೆ. ನಮ್ಮ ದೇಶದಲ್ಲಿ ಈಗಿರುವ ಸಂಧರ್ಭದಲ್ಲಿ ಒಂದೇ ಪಕ್ಷವು ಅಧಿಕಾರ ನಡೆಸುವ ಪರಿಸ್ಥಿತಿ ಇಲ್ಲ. ಅನೇಕ ಪಕ್ಷಗಳು ಕೂಡಿ ಅಧಿಕಾರಕ್ಕೆ ಬರುವ ಪರಿಸ್ಥಿತಿಯೇ ಹೆಚ್ಚಾಗಿದೆ. ಪರಿಸ್ಥಿತಿ ಹೀಗಿರುವಾಗ ನಮ್ಮದೇ ಒಂದು ಪ್ರಾದೇಶಿಕ ಪಕ್ಷವು ಕೇಂದ್ರದಲ್ಲಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆದ್ದು, ನಮ್ಮ ರಾಜ್ಯದಲ್ಲೂ ಅದೇ ಪಕ್ಷವು ಅಧಿಕಾರದಲ್ಲಿದ್ದರೆ ನಮಗೆ ಬಹಳ ಅನುಕೂಲವಾಗುವುದು ಎಂಬ ಭಾವನೆ ಹೆಚ್ಚಿನ ಕನ್ನಡಿಗರಲ್ಲಿ ಇದೆ.  ಇದಕ್ಕೆ ಕಾಲವೇ ಉತ್ತರ ಕೊಡಬಹುದೇನೋ?
ಇವತ್ತು ಒಂದು ಪ್ರಾದೇಶಿಕ ಪಕ್ಷವೊಂದು ಉದಯವಾಗಿ ನಾಳೆಯೇ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ. ಅಕಸ್ಮಾತ್ ಹಾಗೇನಾದರೂ ಆದರೆ ಅದು ಹೆಚ್ಚು ಕಾಲ ಬದುಕುವುದೂ ಇಲ್ಲ. ಪಕ್ಷವೊಂದು ಅಧಿಕಾರಕ್ಕೆ ಬರಬೇಕಾದರೆ ದೂರದೃಷ್ಟಿ, ತಾಳ್ಮೆ, ಚತುರತೆ, ಸಿದ್ದಾಂತ, ಜನಬಲ ಹೀಗೆ ಎಲ್ಲವೂ ಮುಖ್ಯವಾಗುತ್ತದೆ. ಪ್ರಾದೇಶಿಕ ಪಕ್ಷವೊಂದು ಚೆನ್ನಾಗಿ ಮೊದಲು ಜನರ ಜೊತೆ ಚೆನ್ನಾಗಿ ಬೆರೆತು ಸಾಮಾಜಿಕ ಕಳಕಳಿಯೊಂದಿಗೆ ೨೦೨೦-೨೫ರ ಅಧಿಕಾರಕ್ಕೆ ಬರುವ ಗುರಿಯೊಂದಿಗೆ ಸ್ಥಾಪಿಸಿದರೆ ನಮ್ಮ ಕರ್ನಾಟಕವೂ ಕಲ್ಯಾಣವಾಗಬಹುದು.

ನಾವುಗಳು ತಮಿಳರಿಂದ ಬಹಳ ಕಲಿಯುವುದು ಇದೆ. ಸ್ವಾತಂತ್ರ್ಯ ಬಂದು ೬೫ ವರ್ಷಗಳಾದರೂ ನಮ್ಮಲ್ಲಿ ನೆಟ್ಟಗೆ ಒಂದು ಪ್ರಾದೇಶಿಕ ಪಕ್ಷವಿಲ್ಲ. ಸಧ್ಯದ ಮಟ್ಟಿಗೆ ಪ್ರಾದೇಶಿಕ ಪಕ್ಷವೊಂದು ಸ್ಥಾಪನೆಯಾಗಿ ಅದು ಅಧಿಕಾರಕ್ಕೆ ಬರುವುದೂ ಸಹ ಕನಸೇನೋ? ತಮಿಳು ನಾಡಿನಲ್ಲಿ ಒಂದಲ್ಲಾ ಎರಡೆರೆಡು ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರುತ್ತದೆ. ಒಂದು ಪಕ್ಷ ಸರಿಯಾಗಿ ಆಡಳಿತ ನಡೆಸದಿದ್ದರೆ ಅವರನ್ನು ಮನೆಗೆ ಕಳುಹಿಸಿ ಮತ್ತೊಂದು ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆಯೇ ಹೊರತು ಬೇರೆ ರಾಷ್ಟೀಯ ಪಕ್ಷಕ್ಕೆ ಅಲ್ಲಿ ಮಣೆ ಹಾಕುವುದಿಲ್ಲ, ಅಲ್ಲದೆ ಇನ್ನೂ ಸುಮಾರು ೫-೬ ಪ್ರಾದೇಶಿಕ ಪಕ್ಷಗಳನ್ನು ಇವರನ್ನು ಎಚ್ಚರಿಸಲು ಇಟ್ಟುಕೊಂಡಿದ್ದಾರೆ. ನಾವು ಇನ್ನಾದರೂ ನಿದ್ದೆಯಿಂದ ಮೇಲೆ ಏಳದೇ ಇದ್ದರೆ ಕನ್ನಡಿಗರು ವೀರರು, ಧೀರರು, ಶೂರರು, ಸ್ವಾಭಿಮಾನಿಗಳು ಅಂತ ಕೇವಲ ಪುಸ್ತಕದಲ್ಲಿ ಮಾತ್ರ ಓದಬೇಕಾಗಬಹುದು ಅಥವಾ “ಎಲ್ಲಿಯವರೆಗೂ ಹೋರಾಟ, ಸಾಯುವವರಿಗೂ ಹೋರಾಟ” ಅಂತ ನಾವು ಸಾಯುವವರಿಗೂ ಹೋರಾಟ ಮಾಡುತ್ತಲೇ ಇರಬೇಕೇನೋ? ಉಳಿದವರು ನಮ್ಮ ಹೋರಾಟದ ಬೆಂಕಿಯಲ್ಲಿ ಆಡುಗೆಯನ್ನು ಮಾಡಿಕೊಂಡು ಸುಖವಾಗಿ ಊಟ ಮಾಡಿ ತಿಂದು ಮುಗಿಸುತ್ತಾರೆ. ನಾವು ನೋಡುತ್ತಲೇ ಇರುತ್ತೇವೆ. (ಮುಗಿಯಿತು)

No comments:

Post a Comment