Saturday 6 July 2013

ದೃಷ್ಠಿ ಬೊಟ್ಟು


ಗೋಡೆ ಮೇಲಿದ್ದ ನಮ್ಮ ತಾತನ ಕಾಲದ
ಗಡಿಯಾರ ಹಳೆದೂ ಅಂತ ಯಾರಿಗೋ
ಕೊಟ್ಟು ಬಿಟ್ಟರು. ನಮ್ಮ ತಾತ, ಅಜ್ಜಿ, ತಂದೆ
ತಾಯಿ ಫೋಟೋ ಕೂಡ ಅಲ್ಲಿಂದ ತೆಗೆದದ್ದಾಯಿತು
ಗೋಡೆಯ ಕಲರ್ ಗೆ ಅದು ಸರಿ ಹೊಂದಲ್ಲಾ ಅಂತ
ಡೈನಿಂಗ್ ಟೇಬಲ್ಲು, ಸೋಫಾ ಮಾರಿಬಿಟ್ಟರು.
ಹೀಗೆ ಹಳೆಯ ಸಾಮಾನುಗಳೆಲ್ಲಾ ಹೋಗಿ ಹೊಸದಾಗ್ತಿದೆ!

ಅಡುಗೆ ಮನೆಯಲ್ಲಿದ್ದ ಫ್ರಿಡ್ಜು, ಮಿಕ್ಸರ್ರು, ಗ್ರೈಂಡರ್ರು ಹಳೆ
ಮಾಡಲ್ ಅಂತ ಕೆಲಸದವರಿಗೆ ಕೊಟ್ಟಿದ್ದಾಯಿತು
ವಾಶಿಂಗ್ ಮೆಷೀನ್ ಆಟೊಮೆಟಿಕ್ ಆಯ್ತು. ಫ್ಯಾನ್ ಹಳೆದು ಹೋಗಿ
ಹೊಸದು ಬಂತು. ಟಿ.ವಿ ಸ್ಲಿಮ್ ಆಗಿ ಮನೆಯೇ ಥಿಯೇಟರ್ ಆಗಿ ಬಿಡ್ತು
ನಾನು ಓಡಿಸುತ್ತಿದ್ದ ಹಳೆ ವೆಸ್ಪಾ ಸ್ಕೂಟರ್ ನನಗೆ ಗೊತ್ತಾಗದ ಹಾಗೆ
ಗುಜರಿಗೆ ಹಾಕಿ ಬಿಟ್ರು. ಮುಂದಿನ ತಿಂಗಳು ನಮ್ಮ ಮನೆಗೆ ಕಾರ್
ಬರತ್ತೆ ಅಂತ ಮಾತನಾಡಿಕೊಳ್ತಿದ್ರು ಗಂಡ ಹೆಂಡ್ತಿ!

ಮಗನಿಗೆ ಮದುವೆ ಆಗಿ ಸೊಸೆ ಮನೆಗೆ ಬಂದ ಮೇಲೆ
ಮನೆಯೇನೋ ಉತ್ಸಾಹ, ಉಲ್ಲಾಸ, ನಗುವಿನಿಂದ
ತುಂಬಿದೆ, ಆದರೆ ನನ್ನ ಮನಸ್ಸಿನದೇ ತಕರಾರು
ಅದು ಯಾಕೋ ಸರಿ ಹೋಗಿಲ್ಲ.  ವಿಷಾದ, ಕೋಪ,
ಅಸಹಾಯಕತೆ, ಬೇಜಾರು, ಬೇಸರ ಹೀಗೆ ಏನೇನೋ
ತುಂಬಿಕೊಂಡು ಬಿಟ್ಟಿದೆ. ಯಾರಲ್ಲೂ ಹೇಳಿಕೊಳ್ಳಕ್ಕೆ ಆಗ್ತಾ ಇಲ್ಲ!

ಈಗ ಮನೆಯಲ್ಲಿ ಹಳೇದು ಅಂತ ಉಳಿದಿರೋದು
ನಾನು ಮತ್ತೆ ನನ್ನ ಹೆಂಡ್ತಿ ಮಾತ್ರ
ಎಲ್ಲಾ ಹೊಸದರ ಮಧ್ಯೆ ದೃಷ್ಠಿ ಬೊಟ್ಟಿನಂತೆ!!

No comments:

Post a Comment