Tuesday 13 March 2012

ಕನ್ನಡದ ವಾರ್ತಾವಾಹಿನಿಗಳು:


ಕನ್ನಡದಲ್ಲಿ  ವಾರ್ತೆಗಳು ಅಂದಾಕ್ಷಣ ಸರ್ಕಾರದ ದೂರದರ್ಶನವನ್ನೇ ಕನ್ನಡಿಗರು ಮೊದಲು ಅವಂಲಬಿಂಸಬೇಕಾಗಿತ್ತು.  ಅದೂ ೨೦ ನಿಮಿಷ ಮಾತ್ರ. ನಂತರ ವಾಹಿನಿಗಳ ಭರಾಟೆ ಶುರುವಾದಾಗ ಕನ್ನಡದಲ್ಲಿ ಮೊದಲು ವಾರ್ತೆಗಳನ್ನು ೨೪ ಗಂಟೆ ತಂದವರು ಉದಯಾ ಟಿ.ವಿಯವರು, "ಉದಯಾ ವಾರ್ತೆಗಳು" ಮುಖಾಂತರ. ವಾರ್ತೆಗಳಿಗಾಗಿಯೇ ಒಂದು ವಾಹಿನಿ ಕನ್ನಡಿಗರಿಗೆ ಹೊಸದು, ಅದೂ ೨೪ ಗಂಟೆಗಳು. ಮೊದಲಿಗೆ ಇದರ ಬಗ್ಗೆ ಕನ್ನಡಿಗರಿಗೆ ಕುತೂಹಲ ಇತ್ತು.  ಉದಯಾ ವಾರ್ತೆಗಳು ಕನ್ನಡದಲ್ಲಿ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡಲಿಲ್ಲ ಮತ್ತು ಜನಪ್ರಿಯತೆಯನ್ನೂ ಗಳಿಸಲಾಗಲಿಲ್ಲ.  ನಂತರ ಬಂದವರು ಟಿ.ವಿ.೯. ಇದು ಕನ್ನಡಿಗರಿಗೆ ಪರಿಚಯವಾಗಿ ೫ ವರ್ಷಗಳು ಕಳೆದಿವೆ. ಈ ವಾಹಿನಿ ೨೪ ಗಂಟೆಗಳೂ ಸುದ್ದಿ ಕೊಡುವೆವು ಎಂದು ಬಂದಾಗ ಕನ್ನಡಿಗರು ಇದರ ಬಗ್ಗೆ ಮೊದಮೊದಲು ಉತ್ಸಾಹ ತೋರಲಿಲ್ಲ. ಆದರೆ ಟಿ.ವಿ.೯ ಅವರು ವಾರ್ತೆಗಳ ಜೊತೆಗೆ ಮನೋರಂಜನೆಯನ್ನೂ ಸ್ವಲ್ಪ ಬಡಿಸಿ ಹೊಸ ಪ್ರಯತ್ನವನ್ನು ಜಾರಿಗೆ ತಂದರು. ಅದರ ಜೊತೆಜೊತೆಗೆ ಸಮಾಜದಲ್ಲಿ ನಡೆಯುವ ಬ್ರಷ್ಟಾಚಾರ, ಮೂಢನಂಬಿಕೆ, ಭವಿಷ್ಯ, ಲೇಡೀಸ್ ಕ್ಲಬ್,  ಆಹಾರದಲ್ಲಿ ಕಲಬೆರೆಕೆ ಮುಂತಾದ ವಿಷಯದ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮನೆಮಾತಾದರು. ಇಡೀ ಭಾರತದಲ್ಲಿ ವಾರ್ತಾವಾಹಿನಿಯೊಂದು ೫೨.೬೯ (ಇತೀಚಿನ ಹೊಸ ರೇಟಿಂಗ್) ಟಿ.ಆರ್.ಪಿ ಗಳಿಸಿ ಸುದ್ದಿಯಾಯಿತು. ಇದರ ನಡುವೆ ಸುವರ್ಣ ೨೪ x ೭ ಎಂಬ ಮತ್ತೊಂದು ವಾರ್ತಾ ವಾಹಿನಿಯೊಂದು ಶುರುವಾಯಿತು. ಇದೂ ಸಹ ಟಿ.ವಿ.೯ ರವರಂತೆಯೇ ವಾರ್ತೆಗಳ ಜೊತೆ ಮನೋರಂಜನೆ, ಬ್ರಷ್ಟಾಚಾರ, ಮೂಢನಂಬಿಕೆ, ಭವಿಷ್ಯ, ಸುಹಾಸಿನಿ, ಆಹಾರದಲ್ಲಿ ಕಲಬೆರೆಕೆ ಮುಂತಾದ ವಿಷಯದ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮನೆಮಾತಾಯಿತು.  ಟಿ.ವಿ. ೯ ಅವರು ಮಾಧ್ಯಮ ಕ್ಷೇತ್ರಕ್ಕೆ ಕೊಡುವ ರಾಮನಾಥ ಗೋಯಂಕಾ ಪ್ರಶಸ್ತಿಯನ್ನು ಕಳೆದ ೨ ವರ್ಷರ್ಗಳಿಂದ ಪಡೆದುಕೊಳ್ಳುತ್ತಿದ್ದಾರೆ. ಜನ ತಮ್ಮತಮ್ಮಲ್ಲಿ ಮಾತನಾಡಿಕೊಳ್ಳುವ ವಿಷಯ ಬಂದಾಗ ಟಿ.ವಿ. ೯ ಮತ್ತು ಸುವರ್ಣ ನ್ಯೂಸ್ ವಿಷಯ ಬಂದುಹೋಗುತಿತ್ತು. ಹಾಗಿತ್ತು ಅವರ ಜನಪ್ರಿಯತೆ. ಈಗ ಜನರಿಗೆ ಸ್ವಲ್ಪ ಬೇಜಾರಾಗಿದೆ. ತೋರಿಸುವುದನ್ನೇ ತೋರಿಸುತ್ತಾರೆ  ಮತ್ತು ಪರಭಾಷಾ ಚಿತ್ರಗಳ ಬಗ್ಗೆ ಅನಗತ್ಯ ಪ್ರಚಾರ ಮತ್ತು ವಿಪರೀತ ವ್ಯಾಮೋಹ. ಈಗ ಹೇಗಾಗಿದೆ ಪರಿಸ್ಠಿತಿ ಎಂದರೆ ಅದರಲ್ಲಿ ಬರುವ ಸುದ್ದಿ ಇದರಲ್ಲಿ, ಇದರಲ್ಲಿ ಬರುವ ಸುದ್ದಿ ಅದರಲ್ಲಿ ಎಂಬಂತಾಗಿದೆ. ಎರಡಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಈಗಲಾದರೂ ಅವರು ಎಚ್ಚೆತ್ತುಕೊಳ್ಳಬೇಕು. ಈಗ ಹೊಸದಾಗಿ "ಸಮಯ", "ಜನಶ್ರೀ" "ಕಸ್ತೂರಿ ನ್ಯೂಸ್", ಪಬ್ಲಿಕ್ ಟಿ.ವಿ ಎಂಬ ನಾಲ್ಕು ವಾರ್ತಾವಾಹಿನಿಗಳು ಪ್ರಾರಂಭವಾಗಿವೆ. ಕಳೆದ ತಿಂಗಳಲ್ಲಿ ಬಂದ ಪತ್ರಕರ್ತನೊಬ್ಬನ ಮೇಲ್ವಿಚಾರಣೆಯಲ್ಲಿ ನಡೆಯುತ್ತಿರುವ ಪಬ್ಳಿಕ್ ಟಿ.ವಿ.ಯ ಬಗ್ಗೆ ಜನರಲ್ಲಿ ಕುತೂಹಲ ಇದೆ.
ಕನ್ನಡ ವಾಹಿನಿಗಳ ಪರಭಾಷಾ ಮೋಹ:
ಇತ್ತೀಚೆಗೆ ಟಿ.ವಿ.೯ ಮತ್ತು ಸುವರ್ಣ ನ್ಯೂಸ್ ನಲ್ಲಿ  ಇತ್ತೀಚೆಗೆ ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್ ಚಿತ್ರಗಳ ಬಗ್ಗೆ ಮತ್ತು ಅದರಲ್ಲಿ ನಟಿಸುವ ನಟ, ನಟಿಯರ ಬಗ್ಗೆ ಬಹಳಷ್ಟು ವಿಚಾರಗಳು ಬರುತ್ತಿವೆ. ಉದಾ: ಮಗಧೀರನ ನಿಶ್ಚಿತಾರ್ಥ, ಜೂ.ಎನ್.ಟಿ.ಆರ್.ಕಲ್ಯಾಣ, ಬಿಸಿನೆಸ್ ಚಿತ್ರದ ಮೇಕಿಂಗ್  ಮತ್ತು ಕಲೆಕ್ಷನ್, ಚಿರಂಜೀವಿ ಮತ್ತು ಬಾಲಕೃಷ್ಣ ಗಲಾಟೆ, ಕೊಲವರಿ ಸಮಾಚಾರ, ಅಗ್ನಿಪಥ್ ಮೇಕಿಂಗ್, ರಚ್ಚನ ಆರ್ಭಟ ಹೀಗೆ ಅನೇಕ ವಿಚಾರಗಳು. ಸುವರ್ಣ ನ್ಯೂಸ್ ಅವರೇನು ಕಮ್ಮಿಯಿಲ್ಲ. ಇದರಲ್ಲೂ ಸಹ ಪರಭಾಷಾ ಚಿತ್ರಗಳ ಪ್ರಚಾರದಲ್ಲಿ ಎತ್ತಿದ ಕೈ. ಅವರ "ಸಿನಿಮಾ ಹಂಗಾಮ" ಕಾರ್ಯಕ್ರಮದಲ್ಲಿ ಕನ್ನಡದ ಚಿತ್ರಗಳಿಗಿಂತಾ ಪರಭಾಷಾ ಚಿತ್ರಗಳ ಬಗ್ಗೆ ಸುದ್ದಿ ಬಹಳ ಬರುತ್ತಿದೆ. ಇದೆಲ್ಲಾ ನಮಗೇಕೆ. ಅದೂ ಕನ್ನಡದ ವಾಹಿನಿಗಳಲ್ಲಿ.  ಬೇರೆ ಭಾಷಾ ಚಿತ್ರಗಳ ಬಗ್ಗೆ ಯಾರಿಗೆ ತಿಳಿದುಕೊಳ್ಳೂವ ಅಸಕ್ತಿ ಇದೆಯೋ ಅವರು ಆ ವಾಹಿನಿಗಳನ್ನು ನೊಡುತ್ತಾರೆ. ನಮ್ಮ ಭಾಷೆಯ ಚಿತ್ರಗಳ ಬಗ್ಗೆ ಬೇರೆ ಭಾಷಾ ವಾಹಿನಿಯವರು ಎನೂ ತೋರಿಸುವುದಿಲ್ಲ ಅಲ್ಲವೇ? ನೀವು ಯಾಕೆ ಆ ಚಿತ್ರಗಳ ಬಗ್ಗೆ ಇಲ್ಲಿ ಪ್ರಸಾರ ಮಾಡಬೇಕು? ಕನ್ನಡದ ವಾಹಿನಿಗಳು ಎಂದೆಂದೂ ಕನ್ನಡವಾಗಿರಲಿ.  ಕನ್ನಡದಲ್ಲಿ ಪರಭಾಷಾ ಚಿತ್ರಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಾ ಅವರನ್ನು ಯಾಕೆ ಕೊಂಡಾಡುತ್ತೀರಾ? ಆಂಧ್ರ/ತಮಿಳುನಾಡು/ಮಹರಾಷ್ಟ್ರಗಳಲ್ಲಿ ಅವರದೇ ಆದ ಪ್ರತ್ಯೇಕ ವಾಹಿನಿಗಳಿವೆ. ಆ ವಾಹಿನಿಗಳಲ್ಲಿ ಅವರು ಅವರ ಭಾಷೆಯ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಾರೆ. ಅವರ ಚಿತ್ರಗಳಿಗೆ ಪ್ರಚಾರ ಕೊಡುತ್ತಾರೆ. ಅವರು ಬಳಸಿ ಬಿಸಾಕಿದ್ದನ್ನು ಕನ್ನಡಿಗರಿಗೆ ಪಂಚಭಕ್ಷ ಪರಮಾನವೆಂದು ಯಾಕೆ ಉಣಬಡಿಸುತ್ತೀರ? ಈ ತಂಗಳನ್ನು ತಿನ್ನಲು ಕನ್ನಡಿಗರಿಗೇನು ಕರ್ಮ? ನಿಮ್ಮ ಕಾರ್ಯಕ್ರಮಗಳನ್ನು ನೋಡುವವರು ಕರ್ನಾಟಕದಲ್ಲಿರುವ ಕನ್ನಡಿಗರು ಎಂಬುದು ನಿಮಗೆ ನೆನಪಿರಲಿ. ಹೊರ ರಾಜ್ಯ/ದೇಶದಲ್ಲಿ ನಿಮ್ಮ ವಾಹಿನಿಯು ಬರುತ್ತಿದ್ದರೆ ಅದನ್ನು ನೋಡುವುದು ಸಹಾ ನಮ್ಮ ಕನ್ನಡಿಗರೇ ತಿಳಿಯಿರಿ. ಈ ಎರಡು ವಾಹಿನಿಗಳು ಕನ್ನಡಿಗರ ಗಂಟಲೊಳಗೆ ಬಿಸಿ ಕಡುಬನ್ನು ಬಲವಂತವಾಗಿ ತಳ್ಳುತ್ತಿದೆ. ಇದನ್ನು ನುಂಗುವುದೋ ಬಿಡುವುದೋ ಗೊತ್ತಾಗದೆ ಕನ್ನಡಿಗರು ಕಣ್ಣು ಬಾಯಿ ಬಿಡುವಂತಾಗಿದೆ.
ನನ್ನ ಫೇಸ್ ಬುಕ್ ಬರಹ:
ಸುವರ್ಣ  ನ್ಯೂಸ್ ೨೪ X ೭ ನವರಿಗೆ ತಾವು ಪ್ರಾಯೋಜಿಸಿದ "ಕೊಲವರಿ ಮೇನಿಯಾ (?) ಇನ್ ಬೆಂಗಳೂರು" ಕಾರ್ಯಕ್ರಮದ ಬಗ್ಗೆ ಅದೇನೋ ಮೋಹ, ಯಾಕೆ ಅಂತ ಗೊತ್ತಿಲ್ಲ. ಅದನ್ನು ವಾರಕ್ಕೊಮ್ಮೆ ಅದನ್ನು ಪುನಃ ಪುನಃ ಪ್ರಸಾರ ಮಾಡಿ ನಮಗೆ ಬಲವಂತದ ಮಾಘಸ್ನಾನವನ್ನು ಮಾಡಿಸುತ್ತಿದ್ದಾರೆ. ಅವರಿಗೆ ಯಾರು ಹೇಳಿದ್ದಾರೋ ಗೊತ್ತಿಲ್ಲ ಕನ್ನಡಿಗರಿಗೆ ಅದನ್ನು ವಾರಕ್ಕೊಮ್ಮೆ ನೋಡದಿದ್ದರೆ ಊಟ, ನಿದ್ದೆ ಬರುವುದಿಲ್ಲ ಎಂದು. ವಿಶ್ವೇಶ್ವರ ಭಟ್ ಅವರೇ ನಿಮಗೆ ನಿಮ್ಮ ಕಾರ್ಯಕ್ರಮ ಅಷ್ಟು ಇಷ್ಟವಾಗಿದ್ದರೆ ನೀವು ಅದನ್ನು ಸಿ.ಡಿ ಮಾಡಿಸಿಕೊಂಡು ನಿಮ್ಮ ಮನೆಯಲ್ಲಿ/ಕಛೇರಿಯಲ್ಲಿ ಅಷ್ಟೇ ಯಾಕೆ ನಿಮ್ಮ ಸ್ನಾನದ ಮನೆಯಲ್ಲೂ ದಿನದ ೨೪ ಗಂಟೆಯೂ ೩೬೫ ದಿನವೂ ವೀಕ್ಷಿಸಿ. ಯಾರೂ ಬೇಡವೆನ್ನುವುದಿಲ್ಲ. ನೀವು ಕನ್ನಡದ ವಾಹಿನಿಯವರಾಗಿ ಆ ಕಾರ್ಯಕ್ರಮವನ್ನು ಪ್ರಾಯೋಜಿಸಿರುವುದೇ ಮಹಾಪರಾಧ ಮತ್ತು ನೀವು ಕನ್ನಡಿಗರಿಗೆ ಮಾಡಿರುವ ದ್ರೋಹ. ನೀವು ಇನ್ನೂ ಒಂದು ಕೆಲಸ ಮಾಡಬಹುದು. ಅದರ ೬ ಕೋಟಿ ಸಿ.ಡಿ ಮಾಡಿ ಕನ್ನಡಿಗರ ಮನೆಮನೆಗೆ ರಮ್ಯಾ, ರಾಗಿಣಿ, ಯೋಗಿ ಮುಖಾಂತರ ತಲುಪಿಸಿದರೆ ನಾವು ಅದನ್ನು ಮಹಾ ಪ್ರಸಾದ ಅಂತ ಸ್ವೀಕರಿಸಿ ದೇವರಮನೆಯಲ್ಲಿಟ್ಟು ದಿನವೂ ಪೂಜೆ ಮಾಡಿ ಬೆಳಗ್ಗೆ ಎದ್ದ ತಕ್ಷಣ ಮೊದಲು ಅದನ್ನು ನೋಡಿ, ಕೇಳಿ ದಿನವನ್ನು ಪ್ರಾರಂಭಿಸುತ್ತೇವೆ. ಇಂಥ ಹುಚ್ಚು ಅಭಿಮಾನವನ್ನು ಕಂಡು ಧನುಷ್ ಅವರಿಗೆ ಮಾತೇ ಬತುತಿಲ್ಲವಂತೆ. ಜೈ,ಕನ್ನಡಾಂಬೆ.

No comments:

Post a Comment