Sunday 25 March 2012

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು: ( ಭಾಗ-೩)

ಕಳೆದ ಸಂಚಿಕೆಯಿಂದ:

ಕನ್ನಡದ ಸಂಘ, ಸಂಸ್ಥೆಗಳು, ರಾಜ್ಯ ರೈತ ಸಂಘ, ಕಾರ್ಮಿಕ ಸಂಘಗಳು, ಸಿನಿಮಾ ನಟರ ಅಭಿಮಾನಿ ಸಂಘಗಳು ಹೀಗೆ ಮುಂತಾದ ಸಂಘಟನೆಗಳಲ್ಲಿ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಈಗ ಅವರೆಲ್ಲಾ ಬೇರೆ ಬೇರೆ ಪಕ್ಷಗಳಲ್ಲಿ ಹರಿದು ಹಂಚಿ ಹೋಗಿದ್ದಾರೆ. ಮೊದಲು ಅವರೆಲ್ಲಾ ಒಗ್ಗೂಡಿ ಒಂದೇ ನಾಯಕತ್ವದ ಅಡಿಯಲ್ಲಿ ಒಂದಾದರೆ ಅದು ಒಂದು ದೊಡ್ಡ ಶಕ್ತಿಯಾಗುತ್ತದೆ. ಆದರೆ ಅವರಲ್ಲಿ ಆಗಾಗ ಜರಗುವ ಒಳಜಗಳಗಳಿಂದಾಗಿ ಅವರು ಏನೂ ಮಾಡಲಾಗದಂತಹ ಸ್ಥಿತಿಗೆ ತಲುಪಿದ್ದಾರೆ. ಅವರು ಇದರಿಂದ ಆದಷ್ಟೂ ಮೊದಲು ಹೊರಗೆ ಬಂದರೆ ರಾಜಕೀಯವಾಗಿ ಬೆಳೆಯಬಹುದು. ಮೊದಲು ಇವರು ಎಲ್ಲರೊಂದಿಗೂ ಹೊಂದಿಕೊಂಡು ಒಗ್ಗಾಟ್ಟಾಗಿ ಹೋಗಬೇಕು.  ರಾಜಕೀಯ ಪ್ರಜ್ನೆ, ದೂರದೃಷ್ಟಿಯ ಕೊರತೆ ಅವರನ್ನು ಎದ್ದು ಕಾಡುತ್ತಿದೆ. ಕೆಲವರಿಗೆ ಇವರ ಬಗ್ಗೆ ಒಳ್ಳೆಯ ಆಶಾಭಾವನೆ ಇದೆ. ಕಾಲವೇ ಇದಕ್ಕೆ ಉತ್ತರಿಸಬೇಕು. 
                                                                                     
ಡಾ.ರಾಜ್ ಕುಮಾರ್ ಅವರಿಗೆ "ಗೊಕಾಕ್ ಚಳುವಳಿ" ಸಂಧರ್ಭದಲ್ಲಿ ಸಿಕ್ಕ ಅಭೂತಪೂರ್ವ ಜನಬೆಂಬಲ ಒಂದು ಹೊಸ ಪ್ರಾದೇಶಿಕ ಪಕ್ಷಕ್ಕೆ ಉದಯವಾಗಬಹುದೆಂಬ ಕನಸನ್ನು ಬಹಳಷ್ಟು ಮಂದಿ ಕಂಡಿದ್ದರು. ಅವರನ್ನು ಎಲ್ಲಾ ಜಾತಿ,ಮತ, ವರ್ಗದವರೂ ಪ್ರೀತಿಸುತ್ತಿದ್ದರು. ವಿದ್ಯಾವಂತರು, ಅವಿದ್ಯಾವಂತರು, ಬಡವರು, ಶ್ರೀಮಂತರು ಹೀಗೆ ಎಲ್ಲರಿಗೂ ಅವರ  ಮೇಲೊಂದು ಒಳ್ಳೆಯ ಅಭಿಪ್ರಾಯವಿತ್ತು ಮತ್ತು ವಿಶ್ವಾಸವಿತ್ತು.  ಆದರೆ ರಾಜ್ ಕುಮಾರ್ ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ. ಅಕಸ್ಮಾತ್ ರಾಜ್ ಕುಮಾರ್ ಅವರು ಅದರ ಬಗ್ಗೆ ಆಸಕ್ತಿ ವಹಿಸಿದ್ದಿದ್ದರೆ ಕರ್ನಾಟಕದ ರಾಜಕೀಯ ಒಂದು ಹೊಸ ದಿಕ್ಕೆಗೆ ಹೊರಳುತ್ತಿತ್ತೇನೋ? ರಾಜಕೀಯದಲ್ಲಿ ಆಸಕ್ತಿ ಇರುವವರು ಇಲ್ಲಿ ಜನಪ್ರಿಯರಾಗಲಿಲ್ಲ. ಜನಪ್ರಿಯರಾಗಿರುವವರಿಗೆ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ. ಹೀಗಾಗಿ ನಮ್ಮ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಏನೋ ಒಂದು ತೊಡಕು.
                                                         
ನಮ್ಮ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವು ಇರಬೇಕೆಂಬ ಕನಸು ಕಂಡವರು ಹಲವು ಮಂದಿ. ಇದರ ಬಗ್ಗೆ ಕೆಲವು ಪ್ರಯತ್ನಗಳಾದವು. ಕೆಲವು ಸ್ವಲ್ಪ ಮಟ್ಟಿನ ಯಶಸ್ಸು ಕಂಡವು. ಆದರೆ ಈ ಪಕ್ಷಗಳಾವುವೂ ಕನ್ನಡದ, ಪ್ರಾದೇಶಿಕ ಮನಸ್ಸನ್ನು ಹೊಂದಿರಲಿಲ್ಲ. ಕೇವಲ ಸ್ವಾರ್ಥಕ್ಕೆ ಹುಟ್ತಿಕೊಂಡಂತಾಗಿತ್ತು. ಆದ್ದರಿಂದ ಅವುಗಳಿಗೆ ಸಿಗಬೇಕಾಗಿದ್ದ ಯಶಸ್ಸು ಸಿಗಲಿಲ್ಲ. ದೇವರಾಜ ಅರಸು ಅವರು ಇಂದಿರಾ ಗಾಂಧಿಯವರ ಮೇಲಿನ ಕೋಪದಿಂದ ಒಂದು ಪ್ರಾದೇಶಿಕ ಪಕ್ಷವನ್ನು ಕಟ್ಟಿ ಆಮೇಲೆ ಅದನ್ನು ಕಾಂಗ್ರೆಸ್ ನಲ್ಲಿ ವಿಲೀನಗೊಳಿಸಿದರು. ಇವರಿಗೆ ರಾಜ್ಯದಲ್ಲಿ ಒಂದು ಪ್ರಾದೇಶಿಕ ಪಕ್ಷವನ್ನು ಕಟ್ಟಬೇಕೆಂಬ ಬಯಕೆ ನಿಜವಾಗಲೂ ಇರಲಿಲ್ಲ. ಕೇವಲ  ಪ್ರತಿಷ್ಟೆಗೆ ಕಟ್ಟಿದರು. ನಂತರ ಬಂಗಾರಪ್ಪನವರು "ಕರ್ನಾಟಕ ಕ್ರಾಂತಿರಂಗ" ಎಂಬ ಪಕ್ಷವನ್ನು ಕಟ್ಟಿದರು. ಇವರಿಗೆ ಸ್ವಲ್ಪ ಮಟ್ಟಿನ ಯಶಸ್ಸೊ ಸಿಕ್ಕಿತ್ತು. ಆಮೇಲೆ ಅದನ್ನು ಕಾಂಗ್ರೆಸ್ ನಲ್ಲಿ ವಿಲೀನ ಗೊಳಿಸಿದರು. ಇವರೂ ಕಾಂಗ್ರೆಸ್ ಮೇಲಿನ ಕೋಪದಿಂದ ಪಕ್ಷವನ್ನು ಕಟ್ಟಿದರೇ ಹೊರತು ಅದನ್ನು ಮುಂದುವರೆಸಿಕೊಂಡು ಹೋಗುವ ಬಗ್ಗೆ ಅವರಿಗೇ ವಿಶ್ವಾಸವಿರಲಿಲ್ಲ. ಅವರಿಗೆ ಮೊದಲು ನಾನು ಏನು ಎಂದು ಕಾಂಗ್ರೆಸ್ ನವರಿಗೆ ತೋರಿಸಬೇಕಾಗಿತ್ತು ಅಷ್ಟೇ. ರಾಮಕೃಷ್ಣ ಹೆಗ್ಗಡೆಯವರು "ನವ ನಿರ್ಮಾಣ ವೇದಿಕೆ" ಎಂಬ ರಾಜಕೀಯ ಸಂಘಟನೆಯನ್ನು ಹುಟ್ಟುಹಾಕಿದರು. ಇಲ್ಲೂ ಸ್ವಯಂ ಪ್ರತಿಷ್ಟೆ. ಇವರಿಗೆ ಜನತಾ ಪಕ್ಷಕ್ಕೆ ತಾವೇನು ಎಂಬುದನ್ನು ತೋರಿಸಬೇಕೆಂಬ ಅನಿವಾರ್ಯತೆ. ಹೀಗಾಗಿ ಇದೂ ಉದ್ದಾರವಾಗಲಿಲ್ಲ. ಎ.ಕೆ.ಸುಬ್ಬಯ್ಯನವರು "ಕನ್ನಡ ನಾಡು" ಎಂಬ ಪಕ್ಷವನ್ನು ಕಟ್ಟಲು ಹೊರಟು ನಗೆಪಾಟಲಾದರು. ವಿಜಯ ಸಂಕೇಶ್ವರರ "ಕನ್ನಡನಾಡು" ಚುನಾವಣೆಯಲ್ಲಿ ಸ್ಪರ್ಧಿಸಿ ಒಂದು ಸ್ಥಾನ ಗಳಿಸಿ ಕೊನೆಗೆ ಭಾ.ಜ.ಪದಲ್ಲಿ ಸೇರಿಕೊಂಡಿತು. ಇತ್ತೀಚೆಗೆ ಬಳ್ಳಾರಿಯ ಬಿ.ಶ್ರೀರಾಮುಲು "ಬಿ.ಎಸ್.ಆರ್.ಪಕ್ಷ"ವೆಂದು ಹೊಸ ಪಕ್ಷವನ್ನು ಕಟ್ಟಿದ್ದಾರೆ. ಇದೂ ಕೇವಲ ಪ್ರತಿಷ್ಟೆಗೆ. ಇವರಿಗೆ ನಾನು ಯಾರು? ಏನು? ಎಂಬುದನ್ನು ಬಿ.ಜೆ.ಪಿ.ಗೆ ತೋರಿಸಬೇಕೆಂಬ ರಣ ಉತ್ಸಾಹ.                                                                  (ಮಿಕ್ಕಿದ್ದು ನಾಳೆಗೆ)  


No comments:

Post a Comment