Saturday 24 March 2012

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು: ( ಭಾಗ-೨)

ಕಳೆದ ಸಂಚಿಕೆಯಿಂದ:

ಆದರೆ ನಮ್ಮ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವು ಯಾಕಿಲ್ಲ? ನಮ್ಮ ರಾಜ್ಯದಲ್ಲೂ ಒಂದು ಪ್ರಾದೇಶಿಕ ಪಕ್ಷ ಬರಬೇಕು. ಅದು ಅಧಿಕಾರ ಹಿಡಿಯಬೇಕೆಂಬ ಬಯಕೆ ಅನೇಕ ಕನ್ನಡಿಗರಿಗೆ ಇದೆ. ಆದರೆ ಅದು ಸಾಧ್ಯವಾಗುವುದು ಯಾವಾಗ? ಒಬ್ಬ ಹೊಸ ನಾಯಕನ ಅನ್ವೇಷಣೆಯಲ್ಲಿ ಕನ್ನಡಿಗರಿದ್ದಾರೆ. ಆ ಹೊಸ ನಾಯಕನಿಗೆ ಕನ್ನಡದ  ಮತ್ತು ಕರ್ನಾಟಕದ ಬಗ್ಗೆ ಪ್ರೀತಿ, ಅಭಿಮಾನವಿರಬೇಕು, ಅವನಿಗೆ ಎಲ್ಲಾ ಜಾತಿ/ವರ್ಗದ ಬೆಂಬಲವಿರಬೇಕು, ಹಣ ಬೆಂಬಲವಿರಬೇಕು. ಸತ್ಚಾರಿತ್ರ ಹೊಂದಿರಬೇಕು. ಇವೆಲ್ಲಾ ಇರುವ ಹೊಸ ನಾಯಕನಿಗಾಗಿ ಕರ್ನಾಟಕ ಮತ್ತು ಕನ್ನಡಿಗರು ಕಾಯುತ್ತಿದ್ದಾರೆ.

ಯಾಕೆ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವು ಜನಪ್ರಿಯವಾಗುವುದಿಲ್ಲ? ಕನ್ನಡಿಗರು ಯಾಕೆ ಈ ಪ್ರಾದೇಶಿಕ ಪಕ್ಷಗಳನ್ನು ನಂಬುವುದಿಲ್ಲ? ಯಾಕೆಂದರೆ, ನಮ್ಮ ನಾಯಕರುಗಳಿಗೆ ಕನ್ನಡಕ್ಕೆ, ಕರ್ನಾಟಕಕ್ಕೆ ಏನಾದರೂ ಮಾಡಬೇಕೆಂಬ ಬಯಕೆ ಇಲ್ಲ. ಇವರದು ಕೇವಲ ಸ್ವಾರ್ಥ. ಇವರಿಗೆ ಪ್ರಾದೇಶಿಕ ಪಕ್ಷವನ್ನು ಕಟ್ಟುವ ಬಗ್ಗೆಯಾಗಲೀ, ಅದರ ರೂಪರೇಖೆಗಳಾಗಲೀ ಗೊತ್ತಿಲ್ಲ. ಅದನ್ನು ಸರಿಯಾಗಿ ಬೆಳೆಸಿ ಅಧಿಕಾರಕ್ಕೆ ತರವ ಬಗ್ಗೆ ಯಾವುದೇ ಕನಸಾಗಲೀ, ದೂರದೃಷ್ಟಿಯಾಗಲೀ ಇಲ್ಲ. ಇವರಿಗೆ ಈಗಲೇ ಅಧಿಕಾರ ಸಿಗಬೇಕು. ಅಷ್ಟೇ. ಇವರಿಗೆ ಕೇವಲ ಅಧಿಕಾರ ಮೋಹ. ಅಧಿಕಾರಕ್ಕೆ ಏನು ಬೇಕಾದರೂ ಮಾಡುತ್ತಾರೆ. ಇವರಿಗೆ ಮೊದಲು ನಾನು, ನನ್ನದು ಎಂಬದರ ಚಿಂತೆ. ರಾಜ್ಯದ ಬಗ್ಗೆ ಇವರಿಗೆ ಯಾವುದೇ ಪ್ರೀತಿಯಾಗಲೀ ಇಲ್ಲ. ಅಧಿಕಾರಕ್ಕೆ ಬರುವ ತನಕ ಕನ್ನಡ/ಕರ್ನಾಟಕದ ಬಗ್ಗೆ ಮಾತನಾಡುತ್ತಾರೆ. ಒಮ್ಮೆ ಅಧಿಕಾರ ಸಿಕ್ಕ ಕೂಡಲೇ ಕನ್ನಡ/ಕರ್ನಾಟಕ ಎರಡನ್ನೂ ಮರೆತು ತಮ್ಮ ಸ್ವಂತ ಅಭಿವೃದ್ದಿಯ ಬಗ್ಗೆ ಗಮನ ಕೊಡುತ್ತಾರೆ. ಇದು ಈ ರಾಜ್ಯದ ಸಾಮಾನ್ಯ ಪ್ರಜೆಯ ಅನುಮಾನ.

ಇಂದು ಒಂದು ಹೊಸ ಪಕ್ಷವನ್ನು ಕಟ್ಟಿ ಅಧಿಕಾರಕ್ಕೆ ತರುವುದು ಸುಲಭವಾದ ಮಾತೇನೂ ಅಲ್ಲ. ನಮ್ಮ ರಾಜ್ಯದಲ್ಲಿ ಅದು ಬಹಳ ಕಷ್ಟ. ಕರ್ನಾಟಕದಲ್ಲಿ ಮೊದಲಿಂದಲೂ ಜಾತಿ ರಾಜಕಾರಣವೇ ಹೆಚ್ಚು. ಯಾರಿಗೆ ಜಾತಿಯ ಬಲವಿದೆಯೋ ಅವರೇ ಗೆಲ್ಲುವುದು. ಇಲ್ಲಿ ಜಾತಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಂತರದ ಸ್ಥಾನ ಹಣ. ಮೂರನೆಯದು ಮಠಾಧೀಶರದು. ಇದು ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಮತ್ತೊಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಮ್ಮ ರಾಜ್ಯದಲ್ಲಿ ವೀರಶೈವರು ಜಾತಿಯ ಲೆಕ್ಕಾಚಾರದಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಒಕ್ಕಲಿಗರಿಗೆ ಎರಡನೆಯ ಸ್ಥಾನ,  ಹೀಗೆ ಮುಂದುವರೆಯುತ್ತದೆ.

ಯಾರೇ ಪಕ್ಷವನ್ನು ಹೊಸದಾಗಿ ಹುಟ್ಟು ಹಾಕಿದರೂ ಒಂದು ಸಿದ್ದಾಂತ, ಗುರಿ ಮತ್ತು ತಾಳ್ಮೆ ಅತ್ಯವಶ್ಯಕ. ಈ ಗುಣಗಳಿಲ್ಲದ್ದಿದ್ದರೆ ಆ ಪಕ್ಷಕ್ಕೆ ಆಯಸ್ಸು ಬಹಳ ಕಡಿಮೆ. ಈಗ ಹೆಚ್ಚಿನ ರಾಜಕಾರಣಿಗಳ ಗುರಿ ನಮ್ಮ ಪಕ್ಷವನ್ನು ಇಂದೇ ಸ್ಥಾಪಿಸಿ ನಾಳೆಯೇ ಅಧಿಕಾರಕ್ಕೆ ತರಬೇಕೆನ್ನುವುದು. ಅತಿ ಹೆಚ್ಚು ದುಡ್ಡು ಮಾಡುವುದೇ ಸಿದ್ದಾಂತ. ಅದಿಕಾರಕ್ಕೆ ಏನು ಬೇಕಾದರೂ ಮಾಡಲು ತಯಾರು. ಹೀಗಿದ್ದರೆ ಯಾವ ಪಕ್ಷವೂ ಉದ್ದಾರವಾಗುವುದಿಲ್ಲ.  ಆದಕಾರಣದಿಂದ ಪಕ್ಷವನ್ನು ಮೊದಲು ಸರಿಯಾದ ಗುರಿ, ಸಿದ್ದಾಂತಗಳಿಗೆ ಅನುಗುಣವಾಗಿ ಪಕ್ಷವನ್ನು ಬೆಳೆಸಬೇಕಾದ ನಾಯಕ ನಿರಬೇಕಾಗಿರುವುದು ಇಂದು ಅತ್ಯಂತ ಅವಶ್ಯಕ. ಕನ್ನಡಿಗರಿಗೆ ಯಾವುದೊ ಪ್ರಾದೇಶಿಕ ಪಕ್ಷವೆಂಬ ಹೆಸರಿಟ್ಟುಕೊಂಡು ಬಂದರೆ ಅದು ಬೇಕಿಲ್ಲ. ಅದನ್ನು ಸ್ವೀಕರಿಸಲು ಅವರ ಮನ ಒಪ್ಪುವುದಿಲ್ಲ. ಆ ಪ್ರಾದೇಶಿಕ ಪಕ್ಷವು ಕನ್ನಡದ ಮನಸ್ಸುಳ್ಳ ಮತ್ತು ಕರ್ನಾಟಕದ ಏಳಿಗೆಗೆ ಕಂಕಣ ಬದ್ದವಾಗಿರಬೇಕಾಗುತ್ತದೆ. ಇಲ್ಲದಿದ್ದರೆ ಅದೂ ಮತ್ತೊಂದು ರಾಜಕೀಯ ಪಕ್ಷವಂತಾಗುತ್ತದೆ ಅಷ್ಟೇ.                         (ಮಿಕ್ಕಿದ್ದು ನಾಳೆಗೆ)         


No comments:

Post a Comment