Saturday 12 January 2013

ತ್ಯಾಜ್ಯವೇ ಇಲ್ಲದ ಪರಿಸರ


ಹೋಟೆಲ್ ಉದ್ಯಮದವರ ಪತ್ರಿಕೆಯಲ್ಲಿರುವ ಒಂದು ಲೇಖನ ಮೊನ್ನೆ ನನ್ನ ಗಮನ ಸೆಳೆಯಿತು. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ “ನ್ಯೂ ಕೃಷ್ಣ ಭವನ”ದ ಮಾಲೀಕರಾದ ಶ್ರೀ.ಆರ್.ಗೋಪಿನಾಥ್ ಪ್ರಭು ಅವರು ತಮ್ಮ ಹೋಟೆಲ್ ನಲ್ಲಿ ದಿನವೂ ಸುಮಾರು ೩೦೦ ಕೆ.ಜಿ.ಯಷ್ಟು ತ್ಯಾಜ್ಯ ಸಂಗ್ರಹವಾಗುತ್ತದೆ. ಅದರಲ್ಲಿ ಸುಮಾರು ೨೦೦ ಕೆ.ಜಿಯಷ್ಟು ಹಸಿ ತ್ಯಾಜ್ಯ, ೫೦ ಕೆ.ಜಿಯಷ್ಟು ಬೂದಿ, ೨೫ ಕೆ.ಜಿ.ಯಷ್ಟು ಕಾಫಿ, ಚಹಾಪುಡಿ ಮತ್ತು ೨೫ ಕೆ.ಜಿಯಷ್ಟು ತರಕಾರಿ, ಹಣ್ಣುಗಳ ಸಿಪ್ಪೆ, ಸೊಪ್ಪಿನ ತ್ಯಾಜ್ಯ, ಪೇಪರ್ ಕಪ್ ಮುಂತಾದವು ಇರುತ್ತದೆ.

ನಾವು ಈ ಎಲ್ಲಾ ತ್ಯಾಜ್ಯಗಳನ್ನು ಕ್ರಮಬದ್ದವಾಗಿ ವಿಂಗಡಿಸುತ್ತೇವೆ. ಉಳಿಯುವ ಆಹಾರ ತ್ಯಾಜ್ಯವನ್ನು ಹಂದಿ ಸಾಕುವವರು, ಪೇಪರ್ ಕಪ್ ಮತ್ತು ಇನ್ನಿತರ ವಸ್ತುಗಳನ್ನು ಹಳೆ ವಸ್ತು ಸಂಗ್ರಹಕಾರರು, ಹಣ್ಣಿನ ಸಿಪ್ಪೆ, ಬೂದಿ ಇವುಗಳನ್ನು ಸಾವಯುವ ಗೊಬ್ಬರಕ್ಕಾಗಿ ತೆಗೆದುಕೊಂಡು ಹೋಗುತ್ತಾರೆ. ಕಾಫಿ, ಚಹ ಪುಡಿ ತ್ಯಾಜ್ಯಗಳನ್ನು ಪಕ್ಕದಲ್ಲಿರುವ ಉದ್ಯಾನಗಳಿಗೆ ಕ್ರಿಮಿನಾಶಕ ಹಾಗೂ ಗೊಬ್ಬರವಾಗಿ ಬಳಸಲು ಒದಗಿಸುತ್ತೇವೆ ಎಂದು ಆ ಲೇಖನದಲ್ಲಿ ವಿವರಿಸಿದ್ದಾರೆ. ಮುಂದುವರೆದು ಈ ತ್ಯಾಜ್ಯಗಳನ್ನು ಸಂಗ್ರಹಿಸುವುದಕ್ಕೆ ನೀಡುವ ಶುಲ್ಕ ನಮಗೆ ಉಳಿಯುತ್ತದೆ, ಅಲ್ಲದೇ ನಮಗೆ ಸ್ವಲ್ಪ ಮಟ್ಟದ ಹಣವೂ ಸಹ ಬರುತ್ತದೆ ಈ ಕಾರ್ಯಕ್ರಮ ಬಹಳ ಯಶಸ್ವಿಯೂ ಆಗಿದೆ ಎಂದು ಎಂದು ತಿಳಿಸುತ್ತಾರೆ.

ಮೇಲ್ಕಂಡ ರೀತಿಯಲ್ಲೇ ಎಲ್ಲಾ ಹೋಟೆಲ್ ಗಳವರು ಚಿಂತಿಸಿ ಕಾರ್ಯರೂಪಕ್ಕ ತಂದರೆ ಬೆಂಗಳೂರಿನ ತ್ಯಾಜ್ಯದಲ್ಲಿ ಬಹು ಪಾಲು ಕಡಿಮೆಯಾಗಬಹುದು. ಮನೆ, ಅಪಾರ್ಟ್ ಮೆಂಟ್, ಕಲ್ಯಾಣ ಮಂಟಪಗಳವರು ಇದನ್ನೇ ಅನುಸರಿಸಬಹುದು. ಇದರಲ್ಲಿ ಎಲ್ಲರೂ ಕೈ ಜೋಡಿಸಿದರೆ ಬೆಂಗಳೂರಿನಲ್ಲಿ ಕಸದ ಸಮಸ್ಯೆಯೇ ಇರುವುದಿಲ್ಲ. ನಮ್ಮ ಕಸವನ್ನು ಬೇರೆ ಊರಿಗೆ ಸಾಗಿಸುವುದು ಅಪರಾಧವಲ್ಲವೇ ಎಂಬ ಪ್ರಶ್ನೆಯನ್ನು ಶ್ರೀಯುತರು ಕೇಳಿದ್ದಾರೆ. ನಾವೆಲ್ಲರೂ ಯಾಕೆ ಈ ರೀತಿಯಲ್ಲಿ ಯೋಚಿಸಬಾರದು, ಕ್ರಿಯಾಶೀಲರಾಬಾರದು ಎಂಬ ಅವರ ಕಳಕಳಿ ನನಗೆ ಹಿಡಿಸಿತು. ಇಂತಹ ಒಳ್ಳೆಯ ಸಲಹೆಯನ್ನು ಯಾಕೆ ಫೇಸ್ ಬುಕ್/ಬ್ಲಾಗ್ ಮುಖಾಂತರ ಪ್ರಚಾರ ಮಾಡಬಾರದೆನ್ನಿಸಿತು. ಹಾಗಾಗಿ ಈ ಒಂದು ಪುಟ್ಟ ಸಾಮಾಜಿಕ ಕಳಕಳಿಯ ಲೇಖನ. ನಿಮಗೆ ಹಿಡಿಸಿದರೆ ಶ್ರೀ.ಆರ್.ಗೋಪಿನಾಥ್ ಅವರಿಗೆ ಮತ್ತು ಅವರಿಗೆ ಮಾರ್ಗದರ್ಶನ ಮಾಡಿದ ಘನ ತ್ಯಾಜ್ಯ ನಿರ್ವಹಣೆ ಸಮಿತಿಯ ಸದಸ್ಯರಾದ ಶ್ರೀ. ಎನ್.ಎಸ್.ರಮಾಕಾಂತ್ ಅವರಿಗೆ ಒಂದು ಧನ್ಯವಾದಗಳನ್ನು ತಿಳಿಸಿಬಿಡಿ. ಇದಕ್ಕೆ ಪೂರಕವಾಗಿ ನನ್ನದೊಂದು ಪುಟ್ಟ ಹನಿ.

ಬೆಂಗಳೂರಿನ
ಕೃಷ್ಣ ಭವನ
ಹೋಟೇಲ್ ನಲ್ಲಿ
ತ್ಯಾಜ್ಯವೇ
ಇಲ್ಲ!

ಬಳಕೆಯಾಗುವುದು
ಎಲ್ಲಾ!!

No comments:

Post a Comment