Thursday 5 April 2012

ಗ್ರಾಹಕ ಸೇವೆ: ಕನ್ನಡಕ್ಕೆ ಅಗ್ರಸ್ಥಾನವಿರಲಿ: ( ಭಾಗ-೨)

ಕಳೆದ ಸಂಚಿಕೆಯಿಂದ:

ನಮ್ಮೆಲ್ಲರ ಬಯಕೆ ಕನ್ನಡವನ್ನು ಕರ್ನಾಟಕದಲ್ಲಿ ಸಾರ್ವಭೌಮ ಭಾಷೆಯನ್ನಾಗಿ ಮಾಡುವುದು ತಾನೆ? ನಾವು  ಬ್ಲಾಗ್ ಮತ್ತು ಫೇಸ್ ಬುಕ್ ನಲ್ಲಿ ಕನ್ನಡದ ಬಗ್ಗೆ ನಮ್ಮ ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತೇವೆ. ಅದರ ಜೊತೆಜೊತೆಗೆ ಸಾರ್ವಜನಿಕವಾಗಿ ಕನ್ನಡವನ್ನು ಬಳಸುವುದನ್ನು ಕಾರ್ಯಗತಗೊಳಿಸೋಣ.  ನಾವೆಲ್ಲರೂ ಬ್ಯಾಂಕ್/ಅಂಚೆ ಕಛೇರಿ, ವಿಮಾ ಕಛೇರಿ/ಸರ್ಕಾರಿ/ಅರೆ ಸರ್ಕಾರಿ ಹೀಗೆ ಎಲ್ಲಾ ಕಡೆ ವ್ಯವಹಾರ ಮಾಡುವಾಗ ಆದಷ್ಟೂ ಕನ್ನದವನ್ನೇ ಬಳಸೋಣ. ನಾವುಗಳು ಉಪಯೋಗಿಸುವ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳ ನೊಂದಣಿ ಸಂಖ್ಯೆಯನ್ನು ಕನ್ನಡದಲ್ಲಿ ಬರೆಸೋಣ. ಎ.ಟಿ.ಎಂ ಗಳಲ್ಲಿ ಹಣವನ್ನು ಪಡೆಯುವಾಗ ಕನ್ನಡದ ಗುಂಡಿಯನ್ನೇ ಒತ್ತಿ. ಬ್ಯಾಂಕ್ ಗಳಲ್ಲಿ ಹಣವನ್ನು ತುಂಬುವಾಗ/ವಾಪಸ್ಸು ಪಡೆಯುವಾಗ ಚಲನ್/ಚಕ್ ಗಳನ್ನು ಕನ್ನಡದಲ್ಲಿ ಬರೆಯಿರಿ. ಉಪಹಾರ ಗೃಹಗಳಲ್ಲಿ ಕನ್ನಡದಲ್ಲಿ ತಿಂಡಿಗಳ ವಿವರ ಇರದಿದ್ದರೆ ಅಲ್ಲಿಂದ ಹೊರಬನ್ನಿ.  ಹೊರಬರುವ ಮೊದಲು ತಿಂಡಿಯ ವಿವರ ಕನ್ನಡದಲ್ಲಿ ಇಲ್ಲ, ಆದ್ದರಿಂದ ನಮಗೆ ಇಲ್ಲಿ ತಿನ್ನಲು ಇಷ್ಟವಿಲ್ಲ, ನಾವು ಹೊರಡುತ್ತಿದ್ದೇವೆ ಎಂದು ಹೇಳಿ ಬನ್ನಿ.  ಮುಂದಿನ ಸಾರಿ ನೀವು ಅಲ್ಲಿಗೆ ಹೋಗುವಷ್ಟರಲ್ಲಿ ಅಲ್ಲಿ ತಿಂಡಿಗಳ ವಿವರ ಕನ್ನಡದಲ್ಲಿ ಇರುತ್ತದೆ. ಯಾರಿಗಾದರೂ ಉಡುಗೊರೆ ಕೊಡುವ ಸಂಧರ್ಭ ಬಂದಾಗ ಅವರಿಗೆ ಕನ್ನಡದ ಪುಸ್ತಕಗಳನ್ನು ಕೊಡಿ. ಮನೆಗೆ ಕನ್ನಡದ ದಿನಪತ್ರಿಕೆ/ವರ್ಷದ ವಿಶೇಷಾಂಕಗಳನ್ನು ತರಿಸಿ. ಕನ್ನಡ ಚಿತ್ರಗಳನ್ನು ಚಿತ್ರಮಂದಿರದಲ್ಲಿ ನೋಡಿ. ಕನ್ನಡದ ನಾಟಕಗಳನ್ನು ಸಮಯವಿದ್ದಾಗ ನೋಡಿ. ಮಕ್ಕಳಿಗೆ ಕನ್ನಡ ಬರೆಯುವುದು ಮತ್ತು ಓದುವುದನ್ನು ಕಲಿಸಿಕೊಡಿ. ಕನ್ನಡದ ಭಾವಗೀತೆ/ಜನಪದ/ಸಿನಿಮಾ ಸಂಗೀತದ ಸಿ.ಡಿ (ಅಡಕತಟ್ಟೆ) ಇರಲಿ. ಮನೆಯಲ್ಲಿ ಕನ್ನಡ ಸಾಹಿತಿಗಳ ೩/೪ ಪುಸ್ತಕಗಳಾದರೂ ಇರಲಿ. ಇದೆಲ್ಲವೂ ಕನ್ನಡಿಗರಿಗೆ ಗೊತ್ತು. ಇದರಲ್ಲಿ ಹೊಸದೇನೂ ಇಲ್ಲ. ಆದರೆ ಇಂಥ ಚಿಕ್ಕ ಚಿಕ್ಕ ಕೆಲಸಗಳನ್ನು ಕನ್ನಡಿಗರು ಮಾಡುವುದಿಲ್ಲ. ಅವರಿಗೆ ಏನೋ ಸಂಕೋಚ. ಯಾರಾದರೂ ಏನಾದರೂ ಅಂದುಕೊಂಡರೆ ನಮ್ಮ ಬಗ್ಗೆ  ಅಂತ. ಅಂದುಕೊಳ್ಳುವವರು ಅಂದುಕೊಳ್ಳಲಿ ಬಿಡಿ. ಅದರಿಂದ ನಮಗೇನು ನಷ್ಟ?

ಮೊದಲು ಅವರು ಮಾಡಲಿ, ಇವರು ಮಾಡಲಿ ಎಂದು ಸಬೂಬು ಹೇಳುವುದು ಬಿಟ್ಟು, ನಾವೇ (ಸಾವಿರಾರು ಮಂದಿ ಇರುವ ಫೇಸ್ ಬುಕ್ ಸ್ನೇಹಿತರು) ಕನ್ನಡವನ್ನು ಸಾರ್ವಜನಿಕವಾಗಿ ಬಳಸಲು ಶುರು ಮಾಡೋಣ. ಹೀಗೆ ಮಾಡಿದರೆ ಕನ್ನಡ ಉದ್ದಾರ ಆಗುತ್ತದೇಯೇ ಎಂದು ಕೆಲವು ಸಿನಿಕರು ಪ್ರಶ್ನೆ ಮಾಡುತ್ತಾರೆ. ಅವರಿಗೆ ನನ್ನ ವಿನಮ್ರ  ಮನವಿ, ನಾವ್ಯಾರೂ ಕನ್ನಡವನ್ನು ಉದ್ದಾರ ಮಾಡುವುದು ಬೇಡ. ಈಗಾಗಲೇ ನಮ್ಮ ಕವಿವರ್ಯರು, ಸಾಹಿತಿಗಳು, ಆ ಕೆಲಸವನ್ನು ಮಾಡಿ ಕನ್ನಡಕ್ಕೆ ೮ ಜ್ನಾನಪೀಠ ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಾರೆ. ರಾಜ್ಯ/ರಾಷ್ಟ/ಜಾಗತಿಕ ಮಟ್ಟದಲ್ಲಿ ನಾವು ಕನ್ನಡ/ಕರ್ನಾಟಕ ವನ್ನು ಪ್ರಚಾರಮಾಡಿದರೆ ಸಾಕು. ನಾವು, ನೀವು, ಅವರು, ಇವರು  ಎಲ್ಲಾರೂ ಸೇರಿಕೊಂಡು ನಮ್ಮ ನಿತ್ಯ ಜೀವನದಲ್ಲಿ ಕನ್ನಡವನ್ನು ಬಳಸಿ ಅದನ್ನು  ಮುಂದಿನ ಜನಾಂಗಕ್ಕೆ ಬಿಟ್ಟರೆ, ಅದೇ ನಾವು ಕನ್ನಡಕ್ಕೆ ಮಾಡುವ ಬಹುದೊಡ್ಡ ಉಪಕಾರ. ತಮಿಳರು/ತೆಲುಗರು/ಗುಜರಾತಿಗಳು/ಬೆಂಗಾಲಿಗಳು ದಶಕಗಳ ಕಾಲದಿಂದ ಇದನ್ನೇ ಮಾಡುತ್ತಿರುವುದು. ನಾವುಗಳು ಅದನ್ನು ಮಾಡುತ್ತಿಲ್ಲ ಅಷ್ಟೇ. ಮನೆ ಒಳಗೆ ಕನ್ನಡವನ್ನು ಬಳಸುವುದಕ್ಕಿಂತ ಹೆಚ್ಚು ಅದನ್ನು ಹೊರಗಡೆ ಬಳಸಿದರೆ ಸಾಕು. ಈ ಕೆಲಸ ನೋಡುವುದಕ್ಕೆ ಚಿಕ್ಕ ಕೆಲಸವಾಗಿ ಕಂಡರೂ ಅದು ಮಾಡುವ ಪರಿಣಾಮ ಬಹಳ ದೊಡ್ಡದು. ಎಲ್ಲಾ ಕೆಲಸವೂ ಚಿಕ್ಕದಾಗಿ ಮೊದಲುಗೊಂಡು ದೊಡ್ಡದಾಗಿ ಬೆಳೆಯುತ್ತದೆ. ಸ್ವಾತಂತ್ರ ಸಂಗ್ರಾಮವೂ ಮೊದಲ ಚಿಕ್ಕದಾಗಿ ಮೊದಲುಗೊಂಡು ಬೃಹುದಾಕಾರವಾಗಿ ಬೆಳೆದಿದ್ದು ಮತ್ತು ಕೊನೆಗೆ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು. ಇದು ಎಲ್ಲಾರಿಗೂ ಗೊತ್ತಿರುವಂತಹ ಸಂಗತಿಯೇ ಆಗಿದೆ. ನಾವು ಇನ್ನೇನೂ ಮಾಡುವುದು ಬೇಡ. ಕನ್ನಡ ಅದರ ಪಾಡಿಗೆ ಅದು ಉಳಿಯುತ್ತದೆ ಮತ್ತು ಬೆಳೆಯುತ್ತದೆ. (ಮುಗಿಯಿತು)             (ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.)

No comments:

Post a Comment