Sunday 22 April 2012

ಪ್ರಚಾರ ಕಾರ್ಯದಲ್ಲಿ ನಾವೇಕೆ ಹಿಂದೆ? (ಭಾಗ-೨)

ಕಳೆದ ಸಂಚಿಕೆಯಿಂದ:

ಕೇವಲ ಸರ್ಕಾರ ಮಾತ್ರವೇ ಅಲ್ಲ, ನಮ್ಮ ಚಿತ್ರರಂಗಕ್ಕೂ ಸಹ ತಮ್ಮ ತಮ್ಮ ಚಿತ್ರಗಳಿಗೆ ಸರಿಯಾದ ಪ್ರಚಾರ ಮಾಡುವುದು ಗೊತ್ತಿಲ್ಲ. ಅದನ್ನು ನಮ್ಮವರು ಹಿಂದಿ ಚಿತ್ರರಂಗವನ್ನು ನೋಡಿ ಕಲಿಯುವುದು ಬಹಳಷ್ಟಿದೆ. ನಮ್ಮ ಕೆಲವು ಚಿತ್ರಗಳು ಸರಿಯಾದ ಪ್ರಚಾರವಿಲ್ಲದೆ ಸೋತು ಸೊರಗಿರುವುದುಂಟು. ಉದಾ: ಮಾತಾಡ್ ಮಾತಾಡ್ ಮಲ್ಲಿಗೆ, ಮತ್ತೆ ಮುಂಗಾರು  ಮುಂತಾದ ಚಿತ್ರಗಳನ್ನು ನಾವು ಸರಿಯಾಗಿ ಪ್ರಚಾರ ಮಾಡಿದ್ದರೆ, ಆ ಚಿತ್ರಗಳನ್ನು ಇಡೀ ಭಾರತದಲ್ಲಿ ಬಿಡುಗಡೆ ಮಾಡಬಹುದಾಗಿತ್ತು.  ಅದರ ಕಥೆ, ಚಿತ್ರ ಕಥೆಯು ಇಡೀ ಭಾರತಕ್ಕೆ ಹೊಂದುವಂತಿತ್ತು.  ಡಾ.ರಾಜ್, ವಿಷ್ಣು, ನರಸಿಂಹರಾಜು, ಬಾಲಕೃಷ್ಣ, ಕಲ್ಪನ, ಜಯಂತಿ, ಭಾರತಿ, ವಜ್ರಮುನಿ ಮುಂತಾದ  ಕಲಾವಿದರನ್ನು ನಾವು ಕೇವಲ ಕರ್ನಾಟಕಕ್ಕೆ ಸೀಮಿತಗೊಳಿಸಿಕೊಂಡೆವು. ಅವರಿಗೆ ಇನ್ನೂ ದೊಡ್ಡ ಮಟ್ಟದ ಗೌರವ, ಮರ್ಯಾದೆ ಭಾರತದ ಮಟ್ಟದಲ್ಲಿ ಸಿಗಬೇಕಿತ್ತೆಂಬುದು ನನ್ನ ಸ್ವಂತ ಅಭಿಪ್ರಾಯ. ಒಂದು ಚಿತ್ರವನ್ನು  ಪ್ರಚಾರದಿಂದ ಗೆಲ್ಲಿಸಬಹುದೆಂದು ಮೈಲಾರಿ, ಸಾರಥಿ ಮುಂತಾದ ಚಿತ್ರಗಳು ತೋರಿಸಿಕೊಟ್ಟಿದೆ. ಶಿವಣ್ಣ, ದರ್ಶನ್ ಅವರು ಇಡೀ ಕರ್ನಾಟಕದಾದ್ಯಾಂತ ಪ್ರವಾಸ ಮಾಡಿ ಗೆಲುವನ್ನು ತಂದುಕೊಟ್ಟರು. (ಯಾವ ಚಿತ್ರವೂ ಕೇವಲ ಪ್ರಚಾರ ಮಾತ್ರ ದಿಂದಲೆ ಗೆಲ್ಲುವುದಿಲ್ಲ. ಅದು ಅದಕ್ಕೆ ಪೂರಕವಾಗಿರಬೇಕು) ಹೀಗೆ ಆಗಾಗ ಒಂದೆರೆಡು ಪ್ರಯತ್ನಗಳಾಗುತ್ತಿವೆ ಅಷ್ಟೇ. ನಾವು ಅದನ್ನು ಸಹ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತಗೊಳಿಸಿಬಿಟ್ಟಿದ್ದೇವೆ. ನಮ್ಮ ಚಿತ್ರಗಳು ರಾಷ್ಟ್ರಮಟ್ಟದಲ್ಲಿ ಯಶಸ್ಸು ಕಾಣುವುದು ಯಾವಾಗ?

ತಮಿಳು/ಹಿಂದಿ ಚಿತ್ರಗಳ ಬಗ್ಗೆ ಆಂಗ್ಲ ಭಾಷಾ ಟಿ.ವಿ.ವಾಹಿನಿಗಳು ಮಾತನಾಡುತ್ತಿವೆ. ನಮ್ಮ ಚಿತ್ರಗಳ ಬಗ್ಗೆ ಇಡೀ ರಾಷ್ಟ್ರ ಮಾತನಾಡುವುದು ಯಾವಾಗ? ಅವರಿಗೆ ಸಾಧ್ಯವಾಗುವುದು ನಮಗೇಕೆ ಸಾಧ್ಯವಾಗುವುದಿಲ್ಲ? ತೆಲುಗು/ತಮಿಳು/ಹಿಂದಿ ಭಾಷಾ ಚಿತ್ರಗಳು ಅವರ ರಾಜ್ಯಗಳಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿ ಪಕ್ಕದ ಕರ್ನಾಟಕಕ್ಕೆ ಬಂದು ಇಲ್ಲಿ ಕೂಡ ಯಶಸ್ವಿಯಾಗುತ್ತವೆ. ಅವರ ಚಿತ್ರಗಳು ೨೦೦೦/೩೦೦೦ ಚಿತ್ರಮಂದಿರಗಳಲ್ಲಿ ಎಲ್ಲಾ ರಾಜ್ಯ/ದೇಶಗಳಲ್ಲಿ ಬಿಡುಗಡೆ ಯಾದರೆ, ನಾವು ನಮ್ಮ ಕನ್ನಡ ಚಿತ್ರವನ್ನು ೧೦೦/೧೫೦ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಒದ್ದಾಡುತ್ತೇವೆ. ನಾವು ನಮ್ಮ ನೆರೆಹೊರೆಯ ಚಿತ್ರರಂಗದವರಿಂದ ಕಲಿಯುವುದು ಸಾಕಷ್ಟಿದೆ.  ನಮ್ಮಲ್ಲಿ ಪ್ರಚಾರದ ಕೊರತೆ ಬಹಳಷ್ಟು ಕಾಡುತ್ತಿದೆ.

ಬೆಂಗಳೂರಿನಲ್ಲಿ ಅನೇಕ ಐ,ಪಿ.ಎಲ್. ಸಿ.ಸಿ.ಎಲ್,  ಕ್ರಿಕೆಟ್ ಪಂದ್ಯಗಳು, ಹಾಕಿ ಪಂದ್ಯಗಳು ನಡೆಯುತ್ತಿರುತ್ತವೆ. ಅದನ್ನು ಖಾಸಿಗಿ ಟಿ.ವಿ. ವಾಹಿನಿಗಳು ಇಡೀ ವಿಶ್ವದಲ್ಲಿ ಪ್ರಸಾರಮಾಡುತ್ತಾರೆ. ಈ ಸಮಯ, ಸಂದರ್ಭವನ್ನು ಉಪಯೋಗಿಸಿಕೊಂಡು ನಾವು ನಮ್ಮ ಕನ್ನಡ ಚಿತ್ರಗಳು, ನಾಟಕ, ರಂಗಭೂಮಿ, ಜನಪದ, ಯಕ್ಷಗಾನ ಮುಂತಾದ ಕಲೆ ಮತ್ತು ಸಾಹಿತ್ಯದ ಬಗ್ಗೆ ಪ್ರಚಾರ ಮಾಡಿ, ಅದನ್ನು ಇಡೀ ವಿಶ್ವವೇ ಗಮನಿಸುವಂತೆ ಮಾಡಬಹುದು. ನಮ್ಮ ರಾಜ್ಯದಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಒಳ್ಳೆಯ ರಾಯಭಾರಿಯನ್ನು ನೇಮಿಸುವ ಮೂಲಕ ನಾವು ಅದನ್ನು ಇಡೀ ವಿಶ್ವಕ್ಕೆ ಮನವರಿಕೆ ಮಾಡಿಕೊಡಬಹುದು. ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಮೊದಲು ನಾವು ಮನಸ್ಸು ಮಾಡಬೇಕಷ್ಟೇ.

ಇನ್ನು ದಿನಪತ್ರಿಕೆಗಳ ವಿಚಾರಕ್ಕೆ ಬಂದರೆ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳಾದ ಕನ್ನಡ ಪ್ರಭ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಜಯ ವಾಣಿ ಪತ್ರಿಕೆಗಳು ಕೇವಲ ೫-೬ ನಗರಗಳಲ್ಲಿ ಪ್ರಕಟಣೆಯನ್ನು ಹೊಂದಿವೆ. ವಿಜಯ ಕರ್ನಾಟಕ ೧೦ ನಗರಗಳಲ್ಲಿ ಪ್ರಕಟಣೆಯನ್ನು ಹೊಂದಿದೆ. ಉದಯವಾಣಿ ಮಾತ್ರ ನಮ್ಮ ರಾಜ್ಯದ ಹೊರಗಡೆ ಮುಂಬೈನಲ್ಲಿ ಪ್ರಕಟಣೆಯನ್ನು ಹೊಂದಿವೆ. ತೆಲುಗು/ತಮಿಳು/ಮಲೆಯಾಳಂ/ಹಿಂದಿ ಪತ್ರಿಕೆಗಳು ೨೦ಕ್ಕಿಂತಲೂ ಹೆಚ್ಚು ನಗರಗಳಲ್ಲಿ ದೇಶದ ಎಲ್ಲಾ ಮಹಾನಗರಗಳಲ್ಲೂ ಪ್ರಕಟಸುತ್ತದೆ. ಮೊದಲು ನಾವು ನಮ್ಮ ರಾಜ್ಯ, ಭಾಷೆಯ ಬಗ್ಗೆ ಕೇವಲ ಬಾಯಿಮಾತಿನ ಅಭಿಮಾನ ಬಿಟ್ಟು ಹೃದಯದಲ್ಲಿ ಅಭಿಮಾನ ಬೆಳೆಸಿಕೊಂಡರೆ ಏನನ್ನಾದರೂ ಸಾದಿಸಬಹುದು. ನಮ್ಮನ್ನು ನಾವು ಜಾಗತಿಕ ಮಟ್ಟದಲ್ಲಿ ತೆರೆದುಕೊಳ್ಳಬೇಕು.  ಇದನ್ನು ಪ್ರಚಾರದ ಮೂಲಕ ಸಾಧಿಸಬೇಕು.  (ಮಿಕ್ಕಿದ್ದು ನಾಳೆಗೆ)

No comments:

Post a Comment