Monday 30 April 2012

ನಮ್ಮ ಕನ್ನಡ ಸಾಫ್ಟ್ ವೇರ್ ಯುವ ಜನತೆ: ಭಾಗ-೧

ಸಾಮಾನ್ಯವಾಗಿ ದೊಡ್ಡವರಾದ ಮೇಲೆ ಬಹಳ ಜನ ಕೆಲಸ/ವ್ಯಾಪಾರ/ಮದುವೆ/ಮಕ್ಕಳು/ಮನೆ ಹೀಗೆ ಅಂತ ಕಳೆದುಹೋಗುತ್ತಾರೆ. ಆದರೆ ಕೆಲವು ಕನ್ನಡದ ಹುಡುಗರು ತಾವು ಮಾಡುವ ಕೆಲಸ, ಕಾರ್ಯಗಳ ಜೊತೆ ಕನ್ನಡವನ್ನು ಮರೆಯದೆ ಕನ್ನಡವನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದು ಬಹಳ ಹೆಮ್ಮೆಯ ವಿಷಯ. ಇತ್ತೀಚೆಗೆ ನಮ್ಮ  ಕನ್ನಡ ಕುವರರಾದ ಶ್ರೀ. ಓಂ ಶಿವಪ್ರಕಾಶ್ ಅವರು ಕನ್ನಡದಲ್ಲಿ ಮಾಹಿತಿ ತಂತ್ರಜ್ನಾನದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಇ-ಪುಸ್ತಕವನ್ನು ಹೊರತಂದಿದ್ದಾರೆ. ಶ್ರೀ. ವಿ.ಕೆ.ಅರವಿಂದ್ ಅವರು ಯೂನಿಕೋಡ್ ತಂತ್ರಾಂಶದಲ್ಲಿ ಇರುವ ಕೆಲವು ತಪ್ಪುಗಳನ್ನು ಸರಿಪಡಿಸಿ ಕನ್ನಡಿಗರಿಗೆ ಹೊಸ ಫಾಂಟ್ "ಗುಬ್ಬಿ" ಮತ್ತು "ನವಿಲು" ಕಾಣಿಕೆ ಕೊಟ್ಟಿರುವುದು ಬಹಳ ಸಂತೋಷ. ಗಣಕಯಂತ್ರಕ್ಕೆ ಕನ್ನಡದ ಮಾತನ್ನು ಕಳಿಸಿದ ಟಿ.ಸಿ.ಶ್ರೀಧರ್ ಅವರ ಕೊಡುಗೆ ಅತ್ಯಂತ ಮಹತ್ವದ್ದ್ದು. ಅವರು ದೃಷ್ಟಿ ವಿಕಲಚೇತನರಾಗಿದ್ದು ಅವರು ಕಣ್ಣಿಲ್ಲದವರಿಗೆ ಮತ್ತು ಕಣ್ಣಿದ್ದೂ ಕನ್ನಡ ಓದಲು ಬರೆಯಲು ಬಾರದವರಿಗಾಗಿ ಕನ್ನಡದಲ್ಲಿ ಒಂದು ತಂತ್ರಾಂಶವನ್ನು ಅಭಿವೃದ್ದಿಪಡಿಸಿದ್ದಾರೆ. ಇವರ ಕನ್ನಡ ಪ್ರೀತಿ ಬಹಳ ದೊಡ್ಡದು. ಇವರ ಬಗ್ಗೆ ಇನ್ನೂ ಹೆಚ್ಚು ವಿಚಾರ ತಿಳಿದುಕೊಳ್ಳಲು http://shreeworld.blogspot.com  ನೋಡಬಹುದು.

ಅಮೇರಿಕದಲ್ಲಿ ಕೆಲಸವನ್ನು ಮಾಡಿ ಕೈತುಂಬಾ ಹಣವನ್ನು ಎಣಿಸುತ್ತಿದ್ದ ಶ್ರೀ.ವಿ.ಲಕ್ಷ್ಮಿಕಾಂತ್ ಅವರು ಕೇವಲ ಕನ್ನಡದ ಅಭಿಮಾನದಿಂದ ಅಲ್ಲಿನ ಕೆಲಸವನ್ನು ಬಿಟ್ಟು ಬಂದು www.totalkannada.com ಅನ್ನು ಪ್ರಾರಂಭಿಸಿ ಕನ್ನಡ ಚಿತ್ರಗಳ/ಭಾವಗೀತೆ/ಜನಪದ ಗೀತೆ/ನಾಟಕಗಳ ಸಿ.ಡಿ, ಡಿ.ವಿ.ಡಿ., ಕಥೆ, ಕಾದಂಬರಿ, ಸಾಹಿತ್ಯದ ಪುಸ್ತಕಗಳು, ಕನ್ನಡದ ಬರಹಗಳುಳ್ಳ ಅಂಗಿ, ಕನ್ನಡದ ಬಾವುಟ,ಕನ್ನಡದ ಅಂಕಿಗಳುಳ್ಳ ಗೋಡೆ ಗಡಿಯಾರ ಹೀಗೆ ಕನ್ನಡಕ್ಕೆ ಸಂಭಂದಪಟ್ಟ ಸಕಲ ವಸ್ತುಗಳು ದೊರೆಯುವ ತಾಣವನ್ನಾಗಿ ಮಾಡಿರುವ ಶ್ರೀಯುತರ ಕನ್ನಡದ ಪ್ರೀತಿಯನ್ನು ಏನೆಂದು ಬಣ್ಣಿಸುವುದು. ಪದಗಳೇ ಅರ್ಥವನ್ನು ಕಳೆದುಕೊಳ್ಳುತ್ತವೆ. ಬರಹ ತಂತ್ರಾಂಶವನ್ನು ರೂಪಿಸಿದ ಶ್ರೀ.ಶೇಷಾದ್ರಿ ವಾಸು ಅವರನ್ನು ಹೇಗೆ ತಾನೆ ಮರೆಯುವುದು?

 ಈ ಯುವ ಪಡೆ ಕೇವಲ ಕನ್ನಡದ ಮೇಲಿನ ಪ್ರೀತಿಗಾಗಿ ಈ ಕೆಲಸಗಳನ್ನು ಮಾಡುತ್ತಿದ್ದಾರೆ.  ಈ ಹುಡುಗರಿಗೆ ಹಣ, ಕೀರ್ತಿ ಯಾವುದೂ ಮುಖ್ಯವಲ್ಲ. ಇವರಿಗೆ ಯಾರೂ ಅವರನ್ನು ಗಮನಿಸುವುದೂ ಸಹ ಬೇಕಿಲ್ಲ. ತಮ್ಮ ಪಾಡಿಗೆ ತಾವು ಕನ್ನಡವನ್ನು ಕಟ್ಟುವ  ಕೆಲಸವನ್ನು ಮಾಡುತ್ತಿರುತ್ತಾರೆ.  ಇಂತಹವರ ಯುವ ಸಂತತಿ ನೂರು, ಸಾವಿರ, ಲಕ್ಷವಾಗಲಿ, ಇವರ ಕನ್ನಡ ಸೇವೆ ನಿರಂತರವಾಗಲಿ.

ಮೊಬೈಲ್ ನಲ್ಲಿ/ ಅಂತರ್ಜಾಲದಲ್ಲಿ/ಗಣಕಯಂತ್ರದಲ್ಲಿ ಕನ್ನಡವನ್ನು ಹೇಗೆ ಬಳಸಬೇಕು, ಹೇಗಿದ್ದರೆ ಚೆನ್ನ ಎಂಬುದರ ಬಗ್ಗೆಯೇ ಇವರ ಚಿಂತೆ. ಇಂತಹವರಿಂದಲೇ ನಮಗೆ ಇಂದು ಯೂ ಟ್ಯೂಬ್, ಗೂಗಲ್, ವಿಕಿ ಪೀಡಿಯಾ ಮುಂತಾದ ಮಿಂಬಲೆ ತಾಣಗಳು ಕನ್ನಡದಲ್ಲಿ ಸಿಗುತ್ತಿರುವುದು. ಇವರುಗಳ ಕನ್ನಡದ ಅಭಿಮಾನ, ಪ್ರೀತಿ, ಶ್ರಮ ಯಾವುದೇ ಕಲಾವಿದ, ಕವಿ, ಸಾಹಿತಿಗಳಿಗಿಂತ ಕಡೆಮೆಯೇನಲ್ಲ. ಇವರುಗಳು ಯಾರೂ ಜನಪ್ರಿಯ ವ್ಯಕ್ತಿಗಳಲ್ಲ. ಇವರ ಹೆಸರು ಕೂಡಾ ತಕ್ಷಣಕ್ಕೆ ಜ್ನಾಪಕಕ್ಕೆ ಬರುವುದಿಲ್ಲ, ಆದರೆ ಇವರುಗಳು ಮಾಡುವ ಕೆಲಸಗಳು ಅತ್ಯದ್ಭುತ. ಫೇಸ್ ಬುಕ್ ನಲ್ಲಿ ಕನ್ನಡವನ್ನು ತರಲು ಹೊರಟಿರುವುದು ಇಂತಹದೇ ನಮ್ಮ ಕನ್ನಡದ ಯುವ ಪಡೆ.  ಅವರ ಪ್ರಯತ್ನಕ್ಕೆ ಯಶಸ್ಸು ಸಿಗಲಿ. (ಮಿಕ್ಕಿದ್ದು ನಾಳೆಗೆ)

No comments:

Post a Comment