Wednesday 11 April 2012

ಹೀಗೊಂದು ಅಕ್ಷರ ನಮನ:

ಡಾ.ರಾಜ್ ಅವರಿಗೆ ಸಿಕ್ಕಿದಷ್ಟು ವೈವಿದ್ಯಮಯವಾದ ಪಾತ್ರಗಳು ಬೇರೆ ಯಾರಿಗೂ ಚಿತ್ರರಂಗದಲ್ಲಿ ಸಿಗಲಿಲ್ಲ ಎಂದರೆ ತಪ್ಪಾಗಲಾರದು. ಅವರು ತಮ್ಮ, ಆಣ್ಣ, ತಂದೆ, ತಾತ, ಪ್ರೇಮಿ, ವಿರಹಿ, ಗಂಡ, ಭಕ್ತ, ರಾಕ್ಷಸ, ಭಗವಂತ, ಕಳ್ಳ, ರೌಡಿ, ಪೋಲೀಸ್, ಬಾಂಡ್, ಹುಚ್ಚ, ವಿದ್ಯಾವಂತ, ಅವಿದ್ಯಾವಂತ, ಕೆಲಸಗಾರ, ಉದ್ಯಮಿ, ಮೇಯರ್, ದಾಸರಲ್ಲಿ ಕನಕ ದಾಸರು, ಪುರಂದರ ದಾಸರು, ಸ್ವಾಮಿಗಳಲ್ಲಿ ರಾಘ್ಹವೇಂದ್ರ ಸ್ವಾಮಿ ಹೀಗೆ ಅನೇಕ ಪಾತ್ರಗಳು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಅವರು ಮಾಡದೆ ಪಾತ್ರಗಳೇ ಇಲ್ಲವೇನೋ ಎಂಬಂತೆ ನಟಿಸಿ ಕನ್ನಡಿಗರ ಮನ್ನಸ್ಸನ್ನು ಸೂರೆಗೊಂಡರು. ಇಂದು ರಾಜ್ ಅವರು ನಮ್ಮನ್ನು ಅಗಲಿ ೬ ವರ್ಷವಾಗುತ್ತದೆ. ಹುಟ್ಟು ಆಕಸ್ಮಿಕ, ಸಾವು ಖಚಿತ. ಇದು ಎಲ್ಲರಿಗೂ ಗೊತ್ತು. ಆದರೆ ರಾಜ್, ವಿಷ್ಣು, ಶಂಕರ್ ನಾಗ್, ಕಲ್ಪನಾ, ಮಂಜುಳಾ, ನರಸಿಂಹರಾಜು, ವಜ್ರಮುನಿ, ಪ್ರಭಾಕರ್, ತೂಗುದೀಪ ಶ್ರೀನಿವಾಸ್, ಬಾಲಕೃಷ್ಣ, ಅಶ್ವಥ್, ದಿನೇಶ್ ಮುಂತಾದ  ಚಿತ್ರ ಕಲಾವಿದರು ನಮ್ಮನ್ನು ಅಗಲಿ ಅನೇಕ ವರ್ಷಗಳಾದರೂ ಅವರ ನೆನಪು ನಮ್ಮಿಂದ ಮಾಸಿಲ್ಲ. ಇದು ಕಲಾವಿದರು ನಮ್ಮ ಮೇಲೆ ಮಾಡಿದಂತಹ ಮೋಡಿ. ರಾಜ್ ಅವರ ಭಕ್ತ ಕುಂಬಾರ, ಮಯೂರ, ಸಂಪತ್ತಿಗೆ ಸವಾಲ್ ಮುಂತಾದ ಚಿತ್ರಗಳನ್ನು ಮರೆಯಲು ಆಗುವುದೇ?  ವಿಷ್ಣು ಅವರ ನಾಗರ ಹಾವು, ಬಂಧನ, ಮುತ್ತಿನ ಹಾರ, ಮುಂತಾದವುಗಳನ್ನು ಮರೆಯಲು ಸಾಧ್ಯವೇ? ಶಂಕರ್ ನಾಗ್ ಅವರ ಒಂದಾನೊಂದು ಕಾಲದಲ್ಲಿ, ಅವರು ನಿರ್ದೇಶನ ಮಾಡಿದ್ದ ಆಕ್ಸಿಡೆಂಟ್, ಮಿಂಚಿನ ಓಟ, ಟಿ.ವಿ.ಗಾಗಿ ಮಾಡಿದ "ಮಾಲ್ಗುಡಿ  ಡೇಸ್" ಮುಂತಾದವುಗಳನ್ನು ಮರೆತರೆ ಹೇಗೆ? ಇನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಚಿತ್ರಗಳಾದ ಬೆಳ್ಳಿ ಮೋಡ, ಶರ ಪಂಜರ, ಗೆಜ್ಜೆ ಪೂಜೆ, ರಂಗನಾಯಕಿ ಯಾವುದನ್ನು ಮರೆಯುವುದು. ಹೀಗೆ ಮೇಲ್ಕಂಡ ನಟರ/ನಿರ್ದೇಶಕರ ಚಿತ್ರಗಳು/ಹಾಡುಗಳು ಟಿ.ವಿಯಲ್ಲಿ ಬಂದಾಗ ನೋಡುತ್ತಿರುವವರ ಕಣ್ಣು ಅವರಿಗೆ ಅರಿವು ಬಾರದಂತೆ ಒದ್ದೆಯಾಗುತ್ತದೆ. "ಹುಟ್ಟೋದ್ಯಾಕೆ, ಸಾಯೋದ್ಯಾಕೆ, ಏನಾದರೂ ಸಾಧಿಸಿ ಹೋಗೋಕೆ," ಅಂತ ಈ ಮೇಲ್ಕಂಡ ಸಾಧಕರು ನಮಗೆ ತೋರಿಸಿ ಹೋಗಿದ್ದಾರೆ. ಇನ್ನು ನಮ್ಮೆಲ್ಲರ ಸರದಿ. ಏನಾದರೂ ಸಾಧಿಸಿ ಹೋಗೋಕೆ.

ಟಿ.ವಿಯಲ್ಲಿ ಇವರು ನಟಿಸಿರುವ ಚಿತ್ರಗಳನ್ನು ನೋಡಲು ಕುಳಿತಾಗ, ನಮ್ಮ ಪಕ್ಕದಲ್ಲಿ ಕುಳಿತಿರುವ ಮಕ್ಕಳಿಗೆ ಅವರ ಬಗ್ಗೆ ಹೇಳೋಣವೆಂದರೆ ನಮ್ಮ ಗಂಟಲಿನಿಂದ ಸ್ವರ ಬರುವುದೇ ಇಲ್ಲ, ಗಂಟಲು ಕಟ್ಟುತ್ತದೆ. ಚಿಕ್ಕ ಮಕ್ಕಳಿಗೆ ಪೋಗೋ, ಕಾರ್ಟೂನ್ ಹಾಕಿಲ್ಲವೆಂಬ ಕೋಪ, ಕಾಲೇಜ್ ಓದುವ ಈಗಿನ ಮಕ್ಕಳಿಗೆ ಹೆಚ್.ಬಿ.ಒ. ಸ್ಟಾರ್ ಮೂವೀಸ್ ನೋಡಕ್ಕೆ ಬಿಡದೆ ಇನ್ನೇನೋ ಹಾಕಿದ್ದರೆ ಎಂಬ ಅಸಮಧಾನ. ಹಳೆ ನೀರು ಕೊಚ್ಚಿಕೊಂಡು ಹೊಸ ನೀರು ಬರುವುದು ಜಗದ ನಿಯಮ. ಈಗಿನ ಪೀಳಿಗೆಗೆ ನಿಜವಾದ ಅಭಿನಯವೆಂದರೆ ಹೇಗಿರುತ್ತದೆ ಎಂಬ ಕಲ್ಪನೆಯೇ ಇಲ್ಲದ ಹಾಗಿದೆ. ಹಾಗಾಗಿ ನಮ್ಮ ಮಕ್ಕಳಿಗೆ ಇವರ ಚಿತ್ರಗಳನ್ನು ತೋರಿಸುವ ನಮ್ಮ ಆಸೆ ನಮ್ಮಲ್ಲೇ ಉಳಿದುಕೊಂಡು ಬಿಡುತ್ತದೆ.

ಸಂಗೀತಗಾರರಾದ  ಗಂಗೂಬಾಯಿ ಹಾನಗಲ್, ಭೀಮಸೇನ ಜೋಷಿ, ಭಾವಗೀತೆಯ ಸರದಾರ ಅಶ್ವಥ್, ಸಾಹಿತಿಗಳಾದ ಕುವೆಂಪು, ಮಾಸ್ತಿ, ಕಾರಂತರು ಮುಂತಾದವರು ಜ್ನಾಪಕಕ್ಕೆ ಬಂದಾಗ ಹೀಗೇ ಆಗುತ್ತದೆ. ಇನ್ನು ಚಿತ್ರ ಸಾಹಿತಿಗಳಾದ ಉದಯಶಂಕರ್, ಆರ್.ಎನ್.ಜಯಗೋಪಾಲ್, ಕಣಗಾಲ್ ಪ್ರಭಾಕರ ಶಾಸ್ತ್ರಿ ಮುಂತಾದವರು ರಚಿಸಿದ ಹಾಡು ರೇಡಿಯೋದಲ್ಲಿ ಕೇಳಿದಾಗ ಮನಸ್ಸಿಗೆ ಏನೋ ಆನಂದ. ಸಂಗೀತ ನಿರ್ದೇಶಕರಾದ ನಾಗೇಂದ್ರ, ಉಪೇಂದ್ರ ಕುಮಾರ್, ಜಿ.ಕೆ.ವೆಂಕಟೇಶ್, ಎಂ.ರಂಗರಾವ್ ಇವರನ್ನು ಮರೆತರೆ ನಮ್ಮನ್ನು ನಾವೆ ಮರೆತಂತೆ. ಇನ್ನು ನಮ್ಮ ವಾಸ್ತುಶಿಲ್ಪಿ ತಜ್ನ್ಯ ಡಾ.ಸರ್.ಎಂ.ವಿಶೇಶ್ವರಯ್ಯನವರನ್ನು ಯಾರಾದರೂ ಮರೆಯಲು ಸಾಧ್ಯವೇ? ಅದಕ್ಕೆ ಹೇಳುವುದು ಸಾಧಕರಿಗೆ ಸಾವಿಲ್ಲ, ಅವರು ಚಿರಂಜೀವಿ ಅಂತ. ಅವರ ಸಾಧನೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮ ಕರ್ತವ್ಯ. ಇಂದಿನ ಪೀಳಿಗೆಯ ಯುವಜನರು ಈ ಮೆಲ್ಕಂಡ ಸಾಧಕರನ್ನು ಅನುಸರಿಸಿ ಮುಂದುವರೆದರೆ ಅವರ ಕಲಾ ಜೀವನ ಚೆನ್ನಾಗಿರುವುದು. . ನಮ್ಮನ್ನು ಅಗಲಿದ ಎಲ್ಲರಿಗೂ ಒಂದು ಶ್ರದ್ದಾಂಜಲಿಯನ್ನು ಅರ್ಪಿಸಿಬಿಡಿ. ಇದು ನಾವು ಅವರಿಗೆ ಮಾಡುವ ಕರ್ತವ್ಯ ಕೂಡ ಹೌದು.
 


No comments:

Post a Comment