Wednesday 4 April 2012

ಗ್ರಾಹಕ ಸೇವೆ: ಕನ್ನಡಕ್ಕೆ ಅಗ್ರಸ್ಥಾನವಿರಲಿ: ( ಭಾಗ-೧)

"ಎಲ್ಲಿಯವರೆಗೆ ನಾವು ಸೇವೆಯನ್ನು ಕನ್ನಡದಲ್ಲಿ ಕೇಳುವುದಿಲ್ಲವೋ ಅಲ್ಲಿಯವರೆಗೆ ಉತ್ಪಾದಕ ನಮ್ಮ ಹಕ್ಕನ್ನು ಕಡೆಗಣಿಸುತ್ತಾನೆ" ಎಂಬ ಲೇಖನವನ್ನು  ಬರೆದ ಶ್ರೀ.ಕಲ್ಯಾಣರಾಮನ್ ಚಂದ್ರಶೇಖರನ್ ಅವರಿಗೆ ಅಭಿನಂದನೆಗಳು. (ವಿ.ಕ.೧೭/೩/೧೨) ಶ್ರೀಯುತರು ಇದರ ಬಗ್ಗೆ ಬಹಳ ಚೆನ್ನಾಗಿ ಬರೆದು ಗ್ರಾಹಕರ ಹಕ್ಕುಗಳನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಇದರ ಬಗ್ಗೆ ಇರುವ ಕಾನೂನುಗಳು ಹೇಗೆ ಗ್ರಾಹಕರ ಸಹಕಾರಿ ಎಂಬುದನ್ನೂ ವಿವರಿಸಿದ್ದಾರೆ. ಉತ್ಪಾದಕ ತಾನು ತಯಾರಿಸಿದ ವಸ್ತುವನ್ನು ಯಾವ ರಾಜ್ಯದಲ್ಲಿ ವಿತರಿಸುವಾಗ/ಮಾರಾಟ ಮಾಡುತ್ತಾನೋ, ಆ ರಾಜ್ಯದ ಭಾಷೆಯಲ್ಲಿ ಅದರ ಬಗ್ಗೆ ಮಾಹಿತಿಯನ್ನು ನೀಡಬೇಕಾಗಿರುವುದು ಅವನ ಕರ್ತವ್ಯ. ಆಂದರೆ ಕರ್ನಾಟಕದಲ್ಲಿ ಕನ್ನಡ, ಆಂಧ್ರ ದಲ್ಲಿ ತೆಲುಗು ಇತ್ಯಾದಿ. ಇದು ಜನ ಸಾಮಾನ್ಯರು ಬಳಸುವ ಎಲ್ಲಾ ವಸ್ತುಗಳಿಗೆ ಅನ್ವಯಿಸುತ್ತದೆ. ಗ್ರಾಹಕನೇ ದೇವರು, ಸಾರ್ವಭೌಮ ಎಂಬುದನ್ನು ಹೆಚ್ಚಿನ ಗ್ರಾಹಕರು ಅರಿತಿಲ್ಲ. ಸರ್ಕಾರ ಕಾನೂನನ್ನು ರಚಿಸಬಹುದು. ಅದರ ಬಗ್ಗೆ ಜನರಿಗೆ ಕಾಲಕಾಲಕ್ಕೆ ತಿಳುವಳಿಕೆಯನ್ನು ಟಿ.ವಿ ಮತ್ತು ದಿನಪತ್ರಿಕೆಗಳ ಮುಖಾಂತರ ಕೊಡಬಹುದು. ಆದರೆ  ಹೆಚ್ಚಿನ ಗ್ರಾಹಕರಿಗೆ ಇದರ ಬಗ್ಗೆ ತಿಳುವಳಿಕೆ ಇಲ್ಲ. ಹೆಚ್ಚಿನ ಜನರು  ರಾಜಕೀಯ, ಕ್ರೀಡೆ, ಸಿನಿಮಾ ಇತ್ಯಾದಿ ವಿಷಯಗಳನ್ನು ಓದುತ್ತಾರೆಯೇ ಹೊರತು ಅವರಿಗೆ ಬೇರೆ ವಿಷಯಗಳ ಬಗ್ಗೆ ಏನೋ ಒಂದು ಅಸಡ್ಡೆ. ಓದಿದ ವಿದ್ಯಾವಂತ ಜನರೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಲುವುದಿಲ್ಲ. ಇನ್ನು ಅವಿದ್ಯಾವಂತರ ಪಾಡೇನು.

ಜನರು ಮಾರುಕಟ್ಟೆಯಲ್ಲಿ ಯಾವುದೇ ಪದಾರ್ಥಗಳನ್ನು ಖರೀದಿಸಿದಾಗ, ಅದರಲ್ಲಿ  ಯಾವ ಭಾಷೆಯಲ್ಲಿ ಮಾಹಿತಿ ಇದೆ ಎಂಬುದನ್ನು ತಿಳಿದುಕೊಂಡು ಕನ್ನಡದಲ್ಲಿ ಮಾಹಿತಿ ಇಲ್ಲದಿದ್ದರೆ ಆ ಪದಾರ್ಥವನ್ನು ತಯಾರಿಸಿದಾತನನ್ನು ಸಂಪರ್ಕಿಸಿ ಅವನಿಗೆ ಎಚ್ಚರಿಕೆಯನ್ನು ಕೊಡಬೇಕು. ಎಲ್ಲರೂ ಕನ್ನಡದಲ್ಲಿ ಮಾಹಿತಿಯನ್ನು ಕೊಡಿ ಎಂದು ಆಗ್ರಹಿಸಬೇಕು. ನಮ್ಮ ಫೇಸ್ ಬುಕ್ ಸ್ನೇಹಿತರಿಗೆ ಈ ಅನುಭವವಾದಾಗ ಮತ್ತು ಅದನ್ನು ಅವರು ಎಲ್ಲರಲ್ಲೂ ಹಂಚಿಕೊಂಡಾಗ ನಾವೆಲ್ಲರೂ ಆ ಉತ್ಪಾದಕನಿಗೆ ಮಿಂಚಂಚೆ ಕಳುಹಿಸೋಣ. ಆಗ ಅವನು ಕನ್ನಡದಲ್ಲಿ ಮಾಹಿತಿಯನ್ನು ಕೊಡಲೇಬೇಕಾಗುತ್ತದೆ. ಹೀಗೆ ಮಾಡುವುದರಿಂದ ನಮಗೆ ಎರಡು ಪ್ರಯೋಜನವಾಗುತ್ತದೆ. ಮೊದಲು ಆ ಪದಾರ್ಥದ ಸರಿಯಾದ ಮಾಹಿತಿ ಮತ್ತು ಉಪಯೋಗ ಮತ್ತೊಂದು ಕನ್ನಡದ ಬೆಳವಣಿಗೆ. ಯಾವುದೇ ಉತ್ಪಾದಕ ತನ್ನ ಉತ್ಪನ್ನವನ್ನು ಕರ್ನಾಟಕದಲ್ಲಿ ಮಾರಾಟ ಮಾಡುವಾಗ ಕನ್ನಡವನ್ನು ಬಳಸಲು ತೊಡಗುತ್ತಾನೆ.                          
(ಮಿಕ್ಕಿದ್ದು ನಾಳೆಗೆ)

No comments:

Post a Comment