Thursday 19 April 2012

ಹೊರ ರಾಜ್ಯಗಳಲ್ಲಿ ಕನ್ನಡ ಚಿತ್ರಗಳು:

ಕನ್ನಡದ ಅಭಿಮಾನಿಗಳಿಗೆ ನಮ್ಮ ಕನ್ನಡ ಚಿತ್ರಗಳು ಬೇರೆ ರಾಜ್ಯಗಳಲ್ಲಿ ಪ್ರದರ್ಶಿತವಾಗುವುದು ಬಹಳ ಖುಷಿಯ ಸಂಗತಿ. ಆದರೆ ಆ ಭಾಗ್ಯವು ಇನ್ನೂ ಸಿಕ್ಕಿಲ್ಲ. ನಮಗೆ ಮಾರುಕಟ್ಟೆಯನ್ನು ವಿಸ್ತರಿಸುವ ಬಗ್ಗೆ ಸರಿಯಾದ ತಿಳುವಳಿಕೆಯೇ ಇಲ್ಲ. ಒಂದೆರೆಡು ಬೆರೆಳೆಣಿಕೆಯ ಪ್ರಯತ್ನಗಳು ಆಗಿರುವುದು ಬಿಟ್ಟರೆ ಅದರಲ್ಲಿ ಸಾಕಷ್ಟು ಪ್ರಯೋಜನವಾಗಿಲ್ಲ ಎಂದೇ ಹೇಳಬೇಕು. ಚಿತ್ರರಂಗವೂ ಇದರ ಬಗ್ಗೆ ಸರಿಯಾದ ಯೋಚನೆ ಮತ್ತು ಯೋಜನೆಯನ್ನು ಹಾಕಿಕೊಂಡಿಲ್ಲ. ಇತ್ತೀಚೆಗೆ ನಮ್ಮ ನಟಿ ತಾರಾ ಅವರು ಕರ್ನಾಟಕದ ಚಿತ್ರ ಅಕೆಡೆಮಿಗೆ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿರುವುದು ನಮಗೆಲ್ಲಾ ತಿಳಿದ ವಿಷಯ. ತಾರಾ ಅವರು ನಮ್ಮ ಕನ್ನಡ ಚಿತ್ರಗಳನ್ನು ಹೊರರಾಜ್ಯಗಳಲ್ಲಿ ಪ್ರದರ್ಶಿಸುವ ಚಿಂತನೆಯನ್ನು ಮಾಡಲಾಗುವುದು ಎಂದು ತಿಳಿಸಿರುತ್ತಾರೆ. ಈ ರೀತಿ ಚಿಂತನೆ ಮಾಡುವುದಕ್ಕಾಗಿ ನಮಗೆ ೭೮ ವರ್ಷಗಳು ಬೇಕಾಯಿತು. ಅದು ಕಾರ್ಯ ರೂಪಕ್ಕೆ ಬರಲು ಇನ್ನು ಎಷ್ಟು ವರ್ಷಗಳು ಬೇಕಾಗಬಹುದೋ?

 ಇಷ್ಟುವರ್ಷ ನಮ್ಮಚಿತ್ರರಂಗದ ಹಿರಿತಲೆಗಳು ಏನು ಮಾಡಿದರು? ಅವರಾರಿಗೂ ನಮ್ಮ ಕನ್ನಡ  ಚಿತ್ರಗಳನ್ನು ಹೊರ ರಾಜ್ಯಗಳಲ್ಲಿ ತೆರೆ ಕಾಣಿಸುವ ಮನಸ್ಸಾಗಲಿಲ್ಲವೇ? ಅಥವಾ ಧೈರ್ಯ ಸಾಲಲಿಲ್ಲವೇ? ತಾವಾಯಿತು ತಮ್ಮ ಕೆಲಸವಾಯಿತು ಅಂತ ಅವರೆಲ್ಲಾ ಸುಮ್ಮನಿದ್ದುಬಿಟ್ಟರಾ? ತಾರಾ ಅವರು ಚಿತ್ರರಂಗವನ್ನು ಎಚ್ಚರಿಸಿದಕ್ಕಾಗಿ ಅವರಿಗೆ ಅಭಿನಂದನೆಗಳು. ಸಧ್ಯ ಚಿತ್ರರಂಗದವರಿಗೆ  ಈಗಲಾದರೂ ಎಚ್ಚರಿಕೆ ಆಯಿತಲ್ಲಾ, ಚಿತ್ರರಂಗದವರಿಗೆ ಎಂಥಾ ಗಾಡ ನಿದ್ರೆ? ಕುಂಭಕರ್ಣನೂ ಅವರನ್ನು ನೋಡಿ ನಾಚಿಕೊಳ್ಳಬೇಕು.

ಪರಭಾಷಾ ಚಿತ್ರಗಳು ನಮ್ಮ ರಾಜ್ಯದಲ್ಲಿ ಹೇಗೆ ಬೇರು ಬಿಟ್ಟಿದೆ ನೋಡಿ. ನಮ್ಮ ಚಿತ್ರಳಿಗೆ ನಮ್ಮ ರಾಜ್ಯದಲ್ಲಿ ಚಿತ್ರ ಮಂದಿರಗಳ ಕೊರತೆ.  ನಮಗೆ ನಮ್ಮ ರಾಜ್ಯದಲ್ಲೇ, ನಮ್ಮಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳನ್ನು ಉಳಿಸಿಕೊಳ್ಳುವುದು ಗೊತ್ತಿಲ್ಲ. ಹೀಗಾಗಿ ನಮ್ಮ ರಾಜ್ಯದಲ್ಲಿ ಪರಭಾಷಾ ಚಿತ್ರಗಳದ್ದೇ ಕಾರುಭಾರು. ನಮ್ಮ ರಾಜ್ಯದಲ್ಲಿ ಈಗ ತೆಲುಗು/ತಮಿಳು/ಮಲೆಯಾಳಂ/ಹಿಂದಿ/ಬೆಂಗಾಲಿ/ಮರಾಠಿ/ಆಂಗ್ಲ ಭಾಷಾ ಚಿತ್ರಗಳ ಜೊತೆ ಇತ್ತೀಚೆಗೆ ಭೋಜಪುರಿ ಭಾಷೆಯ ಚಿತ್ರಗಳೂ ತೆರೆಕಾಣಲು ಪ್ರಯತ್ನಿಸುತ್ತಿವೆ. ಪ್ರಪಂಚದ ಯಾವ ರಾಜ್ಯ/ದೇಶದಲ್ಲೂ ಇಷ್ಟು ಭಾಷೆಯ ಚಿತ್ರಗಳು ತೆರೆಕಾಣುವುದಿಲ್ಲವೆನೋ? ನಮ್ಮ ಚಿತ್ರರಂಗವು ಈಗಲಾದಾರೂ ಎಚ್ಚೆತ್ತುಕೊಂಡು ಕನ್ನಡ ಚಿತ್ರಗಳಿಗೆ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳದಿದ್ದರೆ ನಮ್ಮ ಚಿತ್ರಗಳು ಇನ್ನು ಕೇವಲ ೨೫-೩೦ ವರ್ಷಗಳಲ್ಲಿ ಪರಭಾಷಾ ಚಿತ್ರಗಳ ಮಧ್ಯೆ ಕಳೆದುಹೋಗುವಂತಾಗುತ್ತದೆನೋ ಎಂದು ಭಯವಾಗುತ್ತದೆ.

No comments:

Post a Comment