Saturday 21 April 2012

ಪ್ರಚಾರ ಕಾರ್ಯದಲ್ಲಿ ನಾವೇಕೆ ಹಿಂದೆ? (ಭಾಗ-೧)

ಕನ್ನಡ ಭಾಷೆಗೆ ರಾಷ್ಟ್ರೀಯ ಹಾಗೂ ಜಾಗತಿಕ ಮನ್ನಣೆ" ಎಂಬ ಲೇಖನ (ವಿ.ಕ ೧೮/೩/೧೨) ಬರೆದ ಶ್ರೀ ಪುರುಷೋತ್ತಮ ಬಿಳಿಮಲೆ ಅವರಿಗೆ ಧನ್ಯವಾದಗಳು. ಶ್ರೀಯುತರು ಈ ಲೇಖನದಲ್ಲಿ ನಾವುಗಳು ಕನ್ನಡ ಭಾಷೆಗೆ ರಾಷ್ಟ್ರೀಯ ಹಾಗೂ ಜಾಗತಿಕ ಮನ್ನಣೆ ಕೊಡಿಸುವುದರಲ್ಲಿ ನಾವು ಎಷ್ಟು ಹಿಂದೆ ಬಿದ್ದೀದ್ದೇವೆಂದು ಮತ್ತು ಇತರ ರಾಜ್ಯಗಳವರು ಎಷ್ಟು ಮುಂದುವರೆದಿರುವರೆಂದು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಪ್ರತಿಯೊಬ್ಬ ಕನ್ನಡಿಗನೂ ಈ ಲೇಖನವನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ನಮಗೆ ಜ್ನಾನಪೀಠ ತಂದುಕೊಟ್ಟ ಕವಿ/ಸಾಹಿತಿಗಳಿಗೆ ಕರ್ನಾಟಕ ಬಿಟ್ಟು ಬೇರೆ ಕಡೆ ಪ್ರಚಾರವೇ ಸಿಗಲಿಲ್ಲ. ನಾವು ಅವರುಗಳನ್ನು ಆನೆ ಮೇಲೆ ಕೂಡಿಸಿ ರಾಜ ಬೀದಿಗಳಲ್ಲಿ ಮೆರವಣಿಗೆ ಮಾಡಿ ಸಾವಿರಾರು ಜನರ ಮುಂದೆ ಸನ್ಮಾನ ಮಾಡಬೇಕಿತ್ತು, ಈ ತರಹದ ಒಂದು ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಳ್ಳಬೇಕಾಗಿತ್ತು. ಅದನ್ನು ದೇಶದ ಎಲ್ಲಾ ಭಾಷೆಯ ಜನಪ್ರಿಯ ದಿನಪತ್ರಿಕೆಗಳು ಮತ್ತು ಟಿ.ವಿ.ವಾಹಿನಿಗಳಲ್ಲಿ ಪ್ರಚಾರಮಾಡಿದ್ದರೆ ಕರ್ನಾಟಕದಲ್ಲಿ ಕವಿ/ಸಾಹಿತಿಗಳಿಗೆ ಎಷ್ಟು ರಾಜಮರ್ಯಾದೆ ಇದೆ ಎಂದು ಸಮಸ್ತ ಭಾರತೀಯರು ಮೂಗಿನ ಮೇಲೆ ಬೆರಳಿಟ್ಟುಕೊಂಡು  ಮಾತನಾಡಿಕೊಳ್ಳುತ್ತಿದ್ದರು. ಅವರು ಮತ್ತು ಅವರ ಪತ್ನಿ ಜೀವಂತವಿರುವವರಿಗೂ ಗೌರವ ಧನವೆಂದು ಸುಮಾರು ೨೫,೦೦೦ ರೂಪಾಯಿಗಳನ್ನು ಪ್ರತಿ ತಿಂಗಳೂ ಕೊಟ್ಟರೆ, ನಮ್ಮ ಸರ್ಕಾರಕ್ಕೆ ಏನೂ ನಷ್ಟವಾಗುವುದಿಲ್ಲ. ನಮ್ಮ ಕವಿ/ಸಾಹಿತಿಗಳ ಕೃತಿಗಳನ್ನು ಎಲ್ಲಾ ಭಾರತೀಯ ಭಾಷೆಗಳ ಜೊತೆಜೊತೆಗೆ ಆಂಗ್ಲ ಭಾಷೆಯಲ್ಲಿ ತರ್ಜುಮೆ ಮಾಡಿದ್ದರೆ ನಮಗೆ ಇನ್ನೂ ೪-೫ ಜ್ನಾನಪೀಠ ಪ್ರಶಸ್ತಿಗಳು ಬರುತ್ತಿತ್ತೇನೋ? (ಅಡಿಗರು,  ತೇಜಸ್ವಿಯವರು, ಡಿ.ವಿ.ಗುಂಡಪ್ಪನವರು, ಪು.ತಿ.ನರಸಿಂಹಸ್ವಾಮಿಯವರು ಮತ್ತು ಬೈರಪ್ಪನವರಿಗೆ ಈಗಾಗಲೆ ಒಲಿದು ಬರಬೇಕಾಗಿತ್ತು.)  ನಮಗೆ ಮೂರಾದರೂ ಸಾಹಿತ್ಯ ನೊಬೆಲ್ ಪ್ರಶಸ್ತಿಗಳು ಬರಬೇಕಾಗಿತ್ತೆಂದು ಹೇಳುವವರಿದ್ದಾರೆ (ಕುವೆಂಪು ಅವರಿಗೆ, ಮಾಸ್ತಿ ಯವರಿಗೆ ಮತ್ತು ಬೇಂದ್ರೆ ಯವರಿಗೆ.) ಇದು ನಾವು ಸರಿಯಾಗಿ ಪ್ರಚಾರ ಮಾಡದೇ ನಾವೇ ಮಾಡಿಕೊಂಡ ತಪ್ಪು.

ನಮ್ಮ ಕವಿ/ಸಾಹಿತಿಗಳ ಪುಸ್ತಕಗಳು ಎಲ್ಲಾ ಕಡೆಯೂ ಸಿಗುವುದಿಲ್ಲ. ಬೆಂಗಳೂರು, ಮೈಸೂರು, ಮಂಗಳೂರು ಮುಂತಾದ ಕೆಲವು ದೊಡ್ಡ ನಗರಗಳನ್ನು ಹೊರತುಪಡಿಸಿದರೆ ಬೇರೆ ಕಡೆ ನಮ್ಮ ಕವಿ/ಸಾಹಿತಿಗಳ ಪುಸ್ತಕಗಳು ಸರಿಯಾಗಿ ದೊರೆಯುವುದೇ ಇಲ್ಲ.  ಪುಸ್ತಕಗಳು ಎಲ್ಲಾ ದಿನಪತ್ರಿಕೆಗಳನ್ನು ಮಾರುವ ಅಂಗಡಿ, ಕ್ಯಾಸೆಟ್, ಸಿಡಿ. ಮಾರುವ ಅಂಗಡಿಗಳಲ್ಲಿ, ಪೆಟ್ರೋಲ್ ಬಂಕ್ ಗಳಲ್ಲಿ ದೊರಕುವಂತಾಗಬೇಕು. ಆ ಪುಸ್ತಕಗಳ ಮಾರಾಟದ ಹಕ್ಕನ್ನು ತೆಗೆದುಕೊಂಡವರು, ಪ್ರಕಾಶಕರು ಇದರ ಬಗ್ಗೆ ಯೋಚಿಸಬೇಕು. ಹೀಗೆ ಪ್ರತಿಯೊಂದರಲ್ಲೂ ಪ್ರಚಾರದೆ ಕೊರತೆ. ನಾವುಗಳು ಪ್ರಚಾರದಲ್ಲಿ ಬಹಳ ಹಿಂದುಳಿದಿದ್ದೇವೆ.

ನಮ್ಮ ರಾಜ್ಯ, ಭಾಷೆ ಮತ್ತು ಸಂಸ್ಕೃತಿಯಯನ್ನು ನಮಗೆ ಸರಿಯಾಗಿ ಪ್ರಚಾರ ಮಾಡುವುದಕ್ಕೇ ಬರುವುದಿಲ್ಲ ಮತ್ತು ಇದರ ಮಹತ್ವವೂ ನಮಗೆ ಸರಿಯಾಗಿ ತಿಳಿದಿಲ್ಲ. ನಮಗೇನು ಕೊರತೆ ಇದೆ. ಅದನ್ನು ಹೇಗೆ ಸರಿಪಡಿಸಿಕೊಳ್ಳುವುದು ಎಂಬ ಚಿಂತನೆಯೇ ಇಲ್ಲ. ನಾವು ಇದನ್ನು ನಮ್ಮ ಅಕ್ಕಪಕ್ಕದ ರಾಜ್ಯದವರನ್ನು ನೋಡಿಕೊಂಡು ಕಲಿಯಬೇಕಾಗಿದೆ. ತಮಿಳು ನಾಡು, ಕೇರಳ, ಪಕ್ಷಿಮ ಬಂಗಾಲ, ಬಿಹಾರ ಮುಂತಾದ ರಾಜ್ಯಗಳು ಕೇಂದ್ರದ ಮೇಲೆ ಒತ್ತಡ ಹೇರಿ ಗೊಬ್ಬರ, ರೈಲ್ವೆ, ವಿದ್ಯುತ್ ಮುಂತಾದ ಸಕಲ ಸೌಲಭ್ಯಗಳನ್ನು ತಮ್ಮ ರಾಜ್ಯಗಳಿಗೆ ತಂದುಕೊಂಡರೆ, ನಾವು ನಮಗೆ ಅನ್ಯಾಯವಾಯಿತು ಎಂದು ಬೊಬ್ಬೆ ಹೊಡೆದರೆ ಅದನ್ನು ಕೇಳುವವರು ಯಾರು? ಬೇರೆ ರಾಜ್ಯದವರಿಗೆ ಕೇಂದ್ರದಿಂದ ಅನ್ಯಾಯವಾದಗಲೆಲ್ಲಾ, ಆ ರಾಜ್ಯದ ಲೋಕಸಭಾ ಸದಸ್ಯರೆಲ್ಲರೂ (ಯಾವುದೇ ಪಕ್ಷವಿರಲಿ) ಒಗ್ಗಾಟ್ಟಾಗಿ ಅದರ ವಿರುದ್ದ ಹೋರಾಡುತ್ತಾರೆ. ಆದರೆ ನಮ್ಮವರು ಬರೀ ರಾಜಕೀಯ ಮಾಡಿ ಆಗುವ ಕೆಲಸವನ್ನೂ ತಪ್ಪಿಸುವುದರಲ್ಲಿ ನಿಸ್ಸೀಮರು. ಬಿ.ಎಸ್. ಎಡೆಯೂರಪ್ಪನವರು ಕೇಂದ್ರದಲ್ಲಿ ನಮ್ಮ ರಾಜ್ಯದ ಒಬ್ಬ ಪ್ರತಿನಿಧಿಯನ್ನು ಕೇವಲ ಈ ಕೆಲಸಕ್ಕಾಗಿ ನೇಮಿಸಿದ್ದರು. ಆದರೆ ಆ ಮಹಾನುಭಾವರು ಈ ಕೆಲಸ ಮಾಡುವುದನ್ನು ಬಿಟ್ಟು ಬರೀ ರಾಜಕೀಯದಲ್ಲೆ ಸಮಯವನ್ನು ವ್ಯರ್ಥ ಮಾಡಿಬಿಟ್ಟರು.  (ಮಿಕ್ಕಿದ್ದು ನಾಳೆಗೆ)

No comments:

Post a Comment