Wednesday 6 June 2012

"ನೇತ್ರದಾನ, ದೇಹದಾನ ಮತ್ತು ಅಂಗಾಂಗ ದಾನ:- " ಸರಣಿ ಲೇಖನ ಭಾಗ - ೧.

ಹಿಂದು, ಇಸ್ಲಾಂ, ಕ್ರೈಸ್ತ, ಜೈನ, ಬುದ್ದ, ಸಿಖ್ ಹೀಗೆ ಎಲ್ಲಾ ಧರ್ಮಗಳೂ ದಾನಕ್ಕೆ ಅತ್ಯಂತ ಮಹತ್ವ ಕೊಟ್ಟಿದೆ. ಎಲ್ಲಾ ಧರ್ಮ ಗ್ರಂಥಗಳಲ್ಲೂ ಇದರ ಬಗ್ಗೆ ಉಲ್ಲೇಖವಿದೆ. ಮನುಷ್ಯ  ಹುಟ್ಟಿದಾಗಿನಿಂದ ಸಾಯುವತನಕ ಅನೇಕ ದಾನ ಧರ್ಮಗಳನ್ನು ಮಾಡುತ್ತಲೇ ಬಂದಿದ್ದಾನೆ. ವಿದ್ಯಾ ದಾನ, ಅನ್ನ ದಾನ, ಭೊ ದಾನ, ಗೊ ದಾನ, ವಸ್ತ್ರ ದಾನ, ರಕ್ತ ದಾನ, ಮೂತ್ರ ಪಿಂಡ ದಾನ, ಅಂಗಾಗ ದಾನ, ಹೊಸದಾಗಿ ಬಂದಿರುವ ವೀರ್ಯ ದಾನ, ಮತ್ತು ಕೊನೆಯದಾಗಿ ದೇಹ ದಾನ ಹೀಗೆ ದಾನಗಳಲ್ಲಿ ಅನೇಕ ದಾನಗಳಿವೆ. ಪ್ರತಿಯೊಂದು ದಾನಕ್ಕೂ ಅದರದೇ ಆದ ಮಹತ್ವ, ಪವಿತ್ರತೆ ಇದೆ. ಅವಶ್ಯಕತೆ ಇರುವವರಿಗೆ ಇರುವವರು ಮಾಡುವ ದಾನ ಅತ್ಯಂತ ಪವಿತ್ರ ಮತ್ತು ಶ್ರೇಷ್ಠ.

ಮನುಷ್ಯ ತಾನು ಸತ್ತಮೇಲೂ ಮಾಡುವ ನೇತ್ರದಾನ, ಅಂಗಾಂಗ ದಾನ ಮತ್ತು ದೇಹ ದಾನಕ್ಕೆ ಬೆಲೆ ಕಟ್ಟಲಾಗುವುದಿಲ್ಲ.  ಈ ಮೂರು ದಾನಗಳನ್ನು ಮಾಡಲು ಆ ವ್ಯಕ್ತಿಗೆ ಬೇರೆಯದೇ ಆದ ಮನಸ್ಟಿತಿ ಬೇಕಾಗುತ್ತದೆ. ಅದು ಎಲ್ಲರಿಂದಲೂ ಸಾಧ್ಯವಿಲ್ಲ. ಮನುಷ್ಯ ಸತ್ತಮೇಲೆ ಮಾಡುವ ಈ ಮೂರು ದಾನಗಳನ್ನು ನೆರವೇರಿಸುವವರು ಅವರ ಮನೆಯವರು ಮಾತ್ರ. ಹಾಗಾಗಿ ದಾನ ಮಾಡಿದ ಮನುಷ್ಯ ಮತ್ತು ಅವರ ಮನೆಯವರು ಇಬ್ಬರೂ ಅಭಿನಂದನಾರ್ಹರು.

ಎಲ್ಲಾ ದಾನಗಳನ್ನೂ ಮಾಡುವ ಮನುಷ್ಯ ರಕ್ತದಾನ, ನೇತ್ರದಾನ, ಅಂಗಾಂಗ ದಾನ ಮತ್ತು ದೇಹ ದಾನವನ್ನು ಮಾಡಲು ಹಿಂಜರಿಯುವುದು ಜಾಸ್ತಿ. ರಕ್ತವನ್ನು ಕೊಟ್ಟರೆ ತನಗೆ ರಕ್ತ ಕಡಿಮೆಯಾಗುವುದು, ನಾನು ಶಕ್ತಿ ಹೀನನಾಗುವೆ ಎಂಬ ಭಯ ಈಗಲೂ ಅನೇಕರಿಗೆ ಇದೆ. ಹಾಗೆಯೇ ತಾನು ಸತ್ತ ನಂತರೆ ಕಣ್ಣುಗಳನ್ನು ದಾನ ಮಾಡಿದರೆ ಮುಂದಿನ ಜನ್ಮದಲ್ಲಿ ತಾನು ಕುರುಡನಾಗಿ ಹುಟ್ಟುವೆನೆಂದು, ಅಂಗಾಗ ದಾನ ಮಾಡಿದರೆ ತಾನು ಅಂಗವಿಕಲನಾಗಿ ಹುಟ್ಟುವೆನೆಂದು, ದೇಹ ದಾನ ಮಾಡಿದರೆ ತನಗೆ ಮುಕ್ತಿ ದೊರೆಯದೆಂದು ಅನೇಕರಿಗೆ ಭಯ ಮತ್ತು ಸಂಶಯ. ಸರಿಯಾದ ಮಾಹಿತಿಯ ಕೊರತೆ, ವಿದ್ಯೆ/ಬುದ್ದಿಯ ಕೊರತೆ, ಕೆಲವು ಮೂಡನಂಬಿಕೆಗಳು, ಧಾರ್ಮಿಕ ಕಾರಣಗಳಿಂದಾಗಿ ನಮ್ಮ ದೇಶದಲ್ಲಿ ರಕ್ತ ದಾನ, ನೇತ್ರದಾನ, ಅಂಗಾಂಗ ದಾನ, ದೇಹ ದಾನ ಮಾಡುವವರು ಬಹಳ ಕಡಿಮೆ. ಇದರ ಬಗ್ಗೆ ಅನೇಕ ವೈದ್ಯರು, ಬುದ್ದಿ ಜೀವಿಗಳು, ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಿಳುವಳಿಕೆ ಕೊಟ್ಟರೂ ಅದು ಎಲ್ಲಾ ಜನರನ್ನೂ, ಸಮುದಾಯವನ್ನೂ ಸರಿಯಾಗಿ ತಲುಪಿಲ್ಲವೆಂದೇ ಹೇಳಬೇಕು ನಮ್ಮ ದೇಶದಲ್ಲಿ ಮೃತ ಶರೀರಗಳು ವೈದ್ಯ ಶಾಸ್ತ್ರ ಕಲಿಯುವ ವಿದ್ಯಾರ್ಥಿಗಳಿಗಾಗಿ ಅತ್ಯಂತ ಅವಶ್ಯಕವಾಗಿ ಬೇಕಾಗಿವೆ. ಮೃತ ಶರೀರಗಳು ಸರಿಯಾದ ಪ್ರಮಾಣದಲ್ಲಿ ದೊರೆಯದೆ ವೈದ್ಯ ವಿದ್ಯಾರ್ಥಿಗಳು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಅವರ ಶಿಕ್ಷಣಕ್ಕೆ ಅಡಚಣೆಯುಂಟಾಗುತ್ತಿದೆ. (ಮಿಕ್ಕಿದ್ದು ನಾಳೆಗೆ)

No comments:

Post a Comment