Thursday 14 June 2012

ಶೇರು ಮಾರುಕಟ್ಟೆ : ಸರಣಿ ಲೇಖನ ಭಾಗ -೩

ಕಳೆದ ಸಂಚಿಕೆಯಿಂದ

೧೯೭೭ರಲ್ಲಿ ನೀವು ೧,೦೦೦ ರೂಪಾಯಿಗಳಲ್ಲಿ ಇಂದಿರಾ ವಿಕಾಸ್ ಪತ್ರವನ್ನು ತೆಗೆದುಕೊಂಡು ಇಲ್ಲಿಯವರೆಗೆ ಅಂದರೆ ೨೦೧೨ರವರೆಗೆ ಇಟ್ಟುಕೊಂಡಿದ್ದರೆ ನಿಮ್ಮ ಹಣ ೧೯೮೨ರಲ್ಲಿ ದ್ವಿಗುಣವಾಗಿ ೨,೦೦೦, ೧೯೮೭ರಲ್ಲಿ ೪,೦೦೦, ೧೯೯೨ರಲ್ಲಿ ೮,೦೦೦, ೧೯೯೭ರಲ್ಲಿ ೧೬,೦೦೦, ೨೦೦೨ರಲ್ಲಿ ೩೨,೦೦೦, ೨೦೦೭ರಲ್ಲಿ ೬೪,೦೦೦, ೨೦೧೨ರಲ್ಲಿ ೧,೨೮,೦೦೦ ಸಾವಿರವಾಗುತ್ತಿತ್ತು. (ಸುಮಾರು ೧೪.೨೫% ಬಡ್ಡಿಯಂತೆ.) ೫ ವರ್ಷಗಳಲ್ಲಿ ನಿಮ್ಮ ಹಣ ದ್ವಿಗುಣವಾಗುತ್ತಿತ್ತು. ಮುಂದೆ ಅದನ್ನು ೫  ೧/೨ ವರ್ಷಕ್ಕೆ ಮಾರ್ಪಾಡು ಮಾಡಲಾಯಿತು. (ಇಂದಿರಾ ವಿಕಾಸ್ ಪತ್ರವನ್ನು ೧೯೯೬ನೆ ಇಸವಿಯಲ್ಲಿ ನಿಲ್ಲಿಸಿಬಿಟ್ಟತು ಕೇಂದ್ರ ಸರ್ಕಾರ.) ನೀವು ಅದೇ ಹಣವನ್ನು ಬ್ಯಾಂಕ್ ನಲ್ಲಿ ಇಟ್ಟಿದ್ದರೆ ನಿಮ್ಮ ಹಣ ದ್ವಿಗುಣವಾಗಿ ೧೯೮೪ ಮತ್ತು ೨ ತಿಂಗಳಲ್ಲಿ ೨,೦೦೦, ೧೯೯೧ ಮತ್ತು ೪ ತಿಂಗಳಲ್ಲಿ ೪,೦೦೦, ೧೯೯೮ ಮತ್ತು ೬ ತಿಂಗಳಲ್ಲಿ ೮,೦೦೦, ೨೦೦೫ ಮತ್ತು ೮ ತಿಂಗಳಲ್ಲಿ ೧೬,೦೦೦, ೨೦೧೨ ಮತ್ತು ೧೦ ತಿಂಗಳಲ್ಲಿ ಕೇವಲ ೩೨,೦೦೦ ರೂಪಾಯಿಗಳಾಗುತ್ತಿತ್ತು (ಅದು ಸುಮಾರು ೧೦% ಬಡ್ಡಿಯನ್ನು ನಿಮಗೆ ತಂದುಕೊಡುವಂತಿದ್ದರೆ.) ೭ ವರ್ಷ ೨ ತಿಂಗಳಲ್ಲಿ ನಿಮ್ಮ ಹಣ ದ್ವಿಗುಣವಾಗುತ್ತಿತ್ತು.

ಆದರೆ, ಅದೇ ೧,೦೦೦ ರೂಪಾಯಿಗಳನ್ನು ನೀವು  ೧೯೭೭ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯಲ್ಲಿ ಹೂಡಿದ್ದರೆ ಈಗ ನಿಮ್ಮ ಬಳಿ ೭.೭೮ ಲಕ್ಷ ರೂಪಾಯಿ ಇರುತ್ತಿತ್ತು. ೧೯೭೭ರಲ್ಲಿ ರಿಲಯನ್ಸ್ ಕಂಪನಿಗಳ ೧೦೦ ಶೇರುಗಳ ಬೆಲೆ ೧,೦೦೦ ಇತ್ತು. ಪ್ರತಿ ಶೇರಿನ ಬೆಲೆ ೧೦ ರೂಪಾಯಿಗಳು. ಆ ನಿಮ್ಮ ೧೦೦ ಶೇರುಗಳು ನಿಮಗೆ ವರ್ಷಗಳು ಕಳೆದಂತೆ ಹೆಚ್ಚು ಬೋನಸ್ ಶೇರುಗಳಾಗಿ ಪರಿವರ್ತನೆ ಯಾಗಿ  ಮತ್ತು ಆ ಶೇರುಗಳು ಮುಖಬೆಲೆ ಸೀಳಿಕೆ ಯಾಗಿ  (ಸ್ಪ್ಲಿಟ್) ನಿಮ್ಮ ಹತ್ತಿರ ಈಗ ೧,೧೦೦ ಶೇರುಗಳಾಗುತ್ತಿತ್ತು. ಇಂದಿನ ರಿಲಯನ್ಸ್ ಶೇರುಗಳ ಬೆಲೆ ಸುಮಾರು ೭೦೦ ರೂಪಾಯಿಗಳು. ಅಂದರೆ ೧,೧೦೦ x ೭೦೦ = ೭,೭೦,೦೦೦ ರೂಗಳು. ನೀವು ಲಕ್ಷಾಧಿಪತಿಯಾಗುತ್ತಿದ್ದಿರಿ. ನಿಮ್ಮನ್ನು ನೀವು ನಂಬಲ್ಲಿಕ್ಕೇ ಆಗುತ್ತಿಲ್ಲ ಅಲ್ವಾ? ಇನ್ನು ನೀವು ಅಂದು ೧೦,೦೦೦ ರೂಪಾಯಿಗಳನ್ನು ಹೂಡಿದ್ದರೆ???. ಹೌದು, ನಿಜ. ಇದು ಶೇರುಮಾರುಕಟ್ಟೆಯ ರೀತಿ, ರಿವಾಜು, ಬೆಳವಣಿಗೆಯ ಪರಿ. ಇದೇ ರೀತಿ ಎ.ಬಿ.ಬಿ, ಬಿ.ಹೆಚ್.ಇ.ಎಲ್, ಇನ್ಫೋಸಿಸ್, ವಿಪ್ರೋ, ಎಲ್ ಅಂಡ್ ಟಿ, ಆಕ್ಸಿಸ್ ಬ್ಯಾಂಕ್, ಟೈಟಾನ್, ಐ.ಟಿ.ಸಿ, ಎಸ್.ಬಿ.ಐ, ಒ.ಎನ್.ಜಿ.ಸಿ, ಬಜಾಜ್, ಮುಂತಾದ ಕಂಪನಿಗಳಲ್ಲಿ ನೀವು ದೀರ್ಘಾವದಿಯಲ್ಲಿ ಹಣ ಹೂಡಿದ್ದರೆ ನೀವು ಇಂದು ಕೋಟ್ಯಾಧಿಪತಿಯಾಗುತ್ತಿದ್ದಿರಿ. ನಿಮಗೆ ಇದು ಗೊತ್ತಿದ್ದರೆ ನೀವೂ ಒಂದು ಕೈ ನೋಡುತ್ತಿದ್ದಿರಿ, ಅಲ್ವಾ? ಸಮಾಧಾನ...... ನೀವು ಈಗಲೂ ಇದರ ಬಗ್ಗೆ  ಯೋಚಿಸಬಹುದು.

ಮಾರುಕಟ್ಟೆ ನಿಮಗೆ ಅನೇಕ ಅವಕಾಶಗಳನ್ನು ಈ ಹಿಂದೆಯೂ ಕೊಡುತ್ತಲೇ ಬಂದಿದೆ, ಮುಂದೆಯೂ ಕೊಡುತ್ತದೆ. ಆ ಅವಕಾಶಗಳನ್ನು ಸರಿಯಾಗಿ ಗುರುತಿಸಿ ನಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುವುದು ಅವರವರ ಸ್ವಂತ ನಿರ್ಧಾರ. ಒಂದು ಟೆಂಟಿನ ಮನೆಯನ್ನು ಕಟ್ಟುವುದಕ್ಕೆ ಒಂದು ಗಂಟೆ ಸಮಯ ಸಾಕು. ಗುಡಿಸಿಲಿನ ಮನೆ ಕಟ್ಟುವುದಕ್ಕೆ ಒಂದು ದಿನ ಸಾಕು. ಶೀಟಿನ ಮನೆ ಕಟ್ಟುವುದಕ್ಕೆ ಮೂರು ದಿನ ಸಾಕು. ಒಂದು ಸಧೃಡ ಮನೆಯನ್ನು ಕಟ್ಟುವುದಕ್ಕೆ ಸುಮಾರು ೮-೯ ತಿಂಗಳು ಬೇಕಾಗಬಹುದು. ಒಂದು ದೊಡ್ಡ ಬಂಗಲೆ ಕಟ್ಟಲು ೩-೪ ವರ್ಷವೇ ಬೇಕಾಗಬಹುದು. ಕೊಟೆಯನ್ನು ಕಟ್ಟಲು ೨೫-೩೦ ವರ್ಷವೇ ಬೇಕಾಗಬಹುದು. ಹಾಗೆಯೇ ಒಂದು ಸುಂದರ ಸಧೃಡ ಬದುಕನ್ನು ಕಟ್ಟಿಕೊಟ್ಟಲು ತುಂಬಾ ಸಮಯ ಹಿಡಿಯುತ್ತದೆ. ಶೇರು ಮಾರುಕಟ್ಟೆಯಲ್ಲಿ ಹಣ ಹೂಡುವವರಿಗೆ ತಾಳ್ಮೆ ಮತ್ತು ಸಹನೆ ಅತ್ಯಂತ ಅವಶ್ಯಕ. (ಮಿಕ್ಕಿದ್ದು ನಾಳೆಗೆ)

No comments:

Post a Comment