Thursday 7 June 2012

"ನೇತ್ರದಾನ, ದೇಹದಾನ ಮತ್ತು ಅಂಗಾಂಗ ದಾನ:- " ಸರಣಿ ಲೇಖನ ಭಾಗ - ೨.

ಕಳೆದ ಸಂಚಿಕೆಯಿಂದ:

ವೈದ್ಯರಿಗೆ ದೇಹದಾನ, ಅಂಗಾಗಗಳ ದಾನ ಮಾಡಲು ಯಾವುದೇ ಗೊಂದಲವಿರುವುದಿಲ್ಲ. ಅವರಿಗೆ ತಾವು ಸತ್ತ ನಂತರ ದೇಹವು ಏನಾಗುತ್ತದೆ ಎಂಬ ಬಗ್ಗೆ ಸರಿಯಾದ ತಿಳುವಳಿಕೆ ಇರುತ್ತದೆ, ಜ್ಞಾನ ಇರುತ್ತದೆ. ಹಾಗಾಗಿ ಈಗಿರುವ ಎಲ್ಲಾ ವೈದ್ಯರು, ದಾದಿಗಳು, ವೈದ್ಯಾಧಿಕಾರಿಗಳು, ವೈದ್ಯ ಶಾಸ್ತ್ರವನ್ನು ಭೋಧಿಸುವ ಶಿಕ್ಷಕರು, ಮುಂದೆ ಓದಲು ಬರುವ ವೈದ್ಯ ವಿದ್ಯಾರ್ಥಿಗಳು, ಅವರ ತಂದೆ ತಾಯಿಯರು ಮುಂದೆ ಬಂದು ತಮ್ಮ ದೇಹವನ್ನು, ತಾವು ಸತ್ತನಂತರ ದಾನವಾಗಿ ಕೊಡಲು  ಘೋಷಿಸಿಕೊಂಡು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಡಬಹುದು. ಈ ರೀತಿಯಾಗಿ ಅವರು ತಮ್ಮ ದೇಹದಾನವನ್ನು ಮಾಡಿಬೇರೆಯವರಿಗೆ ಮೇಲ್ಪಂಕ್ತಿಯಾಗಬಹುದು. ಮಠಾಧಿಪತಿಗಳು ತಾವು ಮರಣ ಹೊಂದಿದ ನಂತರ ನೇತ್ರ ದಾನ, ಅಂಗಾಗ ದಾನ ಮತ್ತು ದೇಹದಾನವನ್ನು ಮಾಡುವುದರ ಮೂಲಕ ಸಾಮಾನ್ಯ ಜನರಿಗೆ ತಿಳುವಳಿಕೆ ನೀಡಬಹುದು. ಭಕ್ತರಿಗೆ ಅದೊಂದು ಪುಣ್ಯಕಾರ್ಯವೆಂದು ಅನ್ನಿಸಿ ತಾವೂ ಅದರ ಬಗ್ಗೆ ಯೋಚಿಸಬಹುದು. ಇದೇ ರೀತಿ ಶಾಸಕರು, ಮಂತ್ರಿಗಳು, ಮುಖ್ಯ ಮಂತ್ರಿಗಳು, ನಟರು, ಐ.ಎ.ಎಸ್, ಐ.ಪಿ.ಎಸ್ ಮುಂತಾದ ಅಧಿಕಾರಿಗಳು, ಸಮಾಜ ಹಿರಿಯ ಗಣ್ಯರು ಮುಂತಾದವರು ಸಹ ಇದರ ಬಗ್ಗೆ ಯೋಚಿಸಿ ಇತರರಿಗಿಎ ಮಾದರಿಯಾಗಬಹುದು.

ದಾನಗಳನ್ನು ಯಾರಿಗೂ ಹೇಳದೆ ಮಾಡಬೇಕು, ಆದರೆ ಕೆಲವು ದಾನಗಳನ್ನು ಮಾತ್ರ ಎಲ್ಲರಿಗೂ ತಿಳಿಸಿ ಮಾಡಬೇಕು. ರಕ್ತದಾನ, ನೇತ್ರದಾನ, ಅಂಗಾಂಗ ದಾನ ಮತ್ತು ದೇಹದಾನ ಇವುಗಳನ್ನು ಎಲ್ಲರಿಗೂ ತಿಳಿಸಿ ಮಾಡಿದಾಗ ಅದು ಬೇರೆಯವರ ಮೇಲೂ ಪರಿಣಾಮ ಬೀರಿ ಅವರೂ  ಸಹ ಇಂತಹ ದಾನಗಳನ್ನು ಮಾಡಲು ಮುಂದಾಗಬಹುದು.

ನಮ್ಮ ಬೆಂಗಳೂರಿನಲ್ಲಿ ಸಧ್ಯ " ಬೆಂಗಳೂರು ವೈದ್ಯಕೀಯ ವಿದ್ಯಾಲಯ " ಮತ್ತು  " ಎಮ್.ಎಸ್.ರಾಮಯ್ಯ ವೈದ್ಯಕೀಯ ವಿದ್ಯಾಲಯ " ದಲ್ಲಿ ದೇಹವನ್ನು ದಾನ ಮಾಡುವುದಕ್ಕಾಗಿ ನೊಂದಾಯಿಸಿಕೊಳ್ಳಬಹುದು. ಅಂಗಾಗವನ್ನು ದಾನ ಮಾಡುವುದಕ್ಕಾಗಿ ಬೆಂಗಳೂರಿನ ನಿಮಾನ್ಸ್ನ್ ನಲ್ಲಿರುವ  "ಜೋನಲ್ ಕೋ ಆರ್ಡಿನೇಶನ್ ಕಮಿಟಿ ಆಫ್ ಕರ್ನಾಟಕ ಫಾರ್ ಟ್ರಾನ್ಸ್ ಪ್ಲಾಂಟೇಷನ್" ಸಂಸ್ಥೆಗೆ  ರಾಜ್ಯ ಸರ್ಕಾರ ಅಧಿಕಾರವನ್ನು ನೀಡಿದೆ. ಅಂಗದಾನ, ಅಂಗ ಕಸಿ ಎಲ್ಲವೂ ಈ ಸಂಸ್ಥೆಯ ಅಡಿಯಲ್ಲೇ ನಡೆಯಬೇಕು. ಇದಕ್ಕೆ ಕಾನೂನು ರೀತಿ ಅನುಮತಿ ಪಡೆಯಬೇಕು. ಮೂತ್ರಪಿಂಡ ದಾನವೂ ಸಹ ಎಲ್ಲರೂ ಮಾಡುವಹಾಗಿಲ್ಲ ಮತ್ತು ಮೂತ್ರ ಪಿಂಡ ಕಸಿಯೂ ಕಾನೂನಾತ್ಮಕವಾಗಿಯೇ ನಡೆಯಬೇಕು. ಮೊದಲು ವ್ಯಕ್ತಿಯ ಉಸಿರಾಟ ನಿಂತಾಗ ವ್ಯಕ್ತಿಯು ಮೃತಪಟ್ಟನೆಂದು ವೈದ್ಯಲೋಕ ಹೇಳುತ್ತಿತ್ತು. ಆದರೆ ಈಗ ವ್ಯಕ್ತಿಯ ಮೆದುಳು ಸತ್ತರೆ ಮಾತ್ರ ಸಾವು ಸಂಭವಿಸುತ್ತದೆ ಎಂದು ಇಂದಿನ ವೈದ್ಯಲೋಕ ಹೇಳುತ್ತದೆ. ಉಸಿರಾಟ ನಿಂತಿದ್ದು ಇನ್ನೇನು ವ್ಯಕ್ತಿಯ  ಮೆದುಳೂ ಸಹ ತನ್ನ ಕಾರ್ಯ ನಿಲ್ಲಿಸುತ್ತದೆ ಎಂದಾಗ ವೈದ್ಯರು ದಾನದ ಅಂಗ ತೆಗೆಯುತ್ತಾರೆ. ನೇತ್ರಗಳನ್ನು ವ್ಯಕ್ತಿಯು ಸತ್ತ ನಂತರ ಅರ್ಧ ಗಂಟೆಯ ಒಳಗಾಗಿ ವೈದ್ಯರಿಗೆ ತಿಳಿಸಿದರೆ ಅವರೇ ಬಂದು ಮೃತಶರೀರದಿಂದ ಕಣ್ಣುಗಳನ್ನು ತೆಗೆದುಕೊಂಡು ಹೋಗುವರು. ಅದರಿಂದ ಮೃತ ಶರೀರಕ್ಕೆ ಯಾವುದೇ ಹಾನಿಯಾಗಲೀ ಅಥವಾ ಮುಖದ ಅಂದವಾಗಲೀ ಕೆಡುವುದಿಲ್ಲ. (ಮಿಕ್ಕಿದ್ದು ನಾಳೆಗೆ)

No comments:

Post a Comment