Saturday 2 June 2012

" ವೈದ್ಯೋ ನಾರಾಯಣ ಹರಿ "

ಪ್ರತಿಯೊಂದು ವೃತ್ತಿಗೊ ಅದರದೇ ಆದ ಘನತೆ, ಗೌರವ, ಜವಾಬ್ದಾರಿ ಎಲ್ಲವೂ ಇರುತ್ತದೆ. ವೈದ್ಯರು, ಇಂಜಿನಿಯರ್ ಗಳು, ಐ,ಎ.ಎಸ್, ಐ,ಪಿ.ಎಸ್, ಚಾರ್ಟೆಡ್ ಅಕೌಂಟೆಂಟ್, ವಕೀಲರು, ನ್ಯಾಯಾಧೀಶರು ಹೀಗೆ ಸಮಾಜದಲ್ಲಿ ಅನೇಕ ಜನಪ್ರಿಯ ವೃತ್ತಿನಿರುತರಿರುತ್ತಾರೆ. ಪ್ರತಿಯೊಂದು ಹುದ್ದೆಯೂ ಅಪ್ರತಿಮ ವಿದ್ಯೆ, ಬುದ್ದಿ, ಕೌಶಲ್ಯ, ತಾಳ್ಮೆ, ಸಹನೆ, ಜವಾಬ್ದಾರಿ ಎಲ್ಲವನ್ನೂ ಬೇಡುತ್ತದೆ. ಅದರಲ್ಲೂ ವೈದ್ಯ ವೃತ್ತಿ ಒಂದು ತೂಕ ಹೆಚ್ಚೇ ಎಂದು ಹೇಳಿದರೆ ಯಾರೂ ತಪ್ಪು ತಿಳಿಯುವುದಿಲ್ಲ ಎಂದು ನನ್ನ ಭಾವನೆ. ಯಾಕೆಂದರೆ ಅದು ಜೀವದ ಪ್ರಶ್ನೆ, ಹುಟ್ಟು ಸಾವಿನ ಪ್ರಶ್ನೆ. ಒಂದು ಚೂರು ಹೆಚ್ಚು ಕಡಿಮೆಯಾದರೆ ಜೀವವೇ ಹೋಗುವುದು. ಬೇರೆಯ ವೃತ್ತಿಯಲ್ಲಿ ಒಂದು ವೇಳೆ ಹೆಚ್ಚು ಕಡಿಮೆಯಾದರೆ ಅದನ್ನು ಸರಿ ಮಾಡುವ ಅವಕಾಶವಿರುತ್ತದೆ. ಆದರೆ ವೈದ್ಯಕೀಯ ವೃತ್ತಿಯಲ್ಲಿ ಅಂಥಹ ಅವಕಾಶಗಳು ಇರುವುದೇ ಇಲ್ಲವೇನೋ? ಅಂಥಹದರಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಕೆಲಸ ಮಾಡುವ ವೈದ್ಯರು ಯಾವ ದೇವರಿಗೂ ಕಡಿಮೆ ಇಲ್ಲ. ಅದಕ್ಕಾಗಿಯೇ " ವೈದ್ಯೋ ನಾರಾಯಣ ಹರಿ " ಎಂದು ನಮ್ಮ ಧರ್ಮ, ಸಂಸ್ಕೃತಿ ವೈದ್ಯರಿಗೆ ಅತ್ಯಂತ ಮಹತ್ವದ ಸ್ಥಾನವನ್ನು ಕೊಟ್ಟಿದೆ. ಅವರನ್ನು ಕಣ್ಣಿಗೆ ಕಾಣುವ ದೇವರು ಎಂದು ಜನಸಾಮಾನ್ಯರು ನಂಬುತ್ತಾರೆ. ಅವರು ಯಾವ ಮಾತ್ರೆ, ಟಾನಿಕ್ ಹೀಗೆ ಏನು ಬರೆದು ಕೊಟ್ಟರೂ ಅದನ್ನು ಜನರು ತೆಗೆದುಕೊಳ್ಳುತ್ತಾರೆ.  ಅವರು ಏನು ಹೇಳಿದರೂ ಹಾಗೆ ಕೇಳುತ್ತಾರೆ.  ಅವರ ಮೇಲೆ ಜನರಿಗೆ ಅಷ್ಟು ವಿಶ್ವಾಸ, ನಂಬಿಕೆ. ಕೇವಲ ೧೦ನೇ ತರಗತಿ ಓದಿದವನೊಬ್ಬ ಕೈಯಲ್ಲಿ ಸ್ಕೆತಾಸ್ಕೋಪ್ ಹಿಡಿದು ಪ್ಯಾಂಟ್ ಮೇಲೆ ಬಿಳಿ ಕೋಟ್ ಹಾಕಿಕೊಂದು ಬಂದರೂ ಯಾವ ರೋಗಿಯಾಗಲೀ ಅಥವಾ ಅವರ ಸಂಬಂಧಿಕರಾಗಲೀ ಅವರನ್ನು ನೀವು ಎಷ್ಟು ಓದಿದ್ದೀರಾ ಎಂದು ಪ್ರಶ್ನೆ ಸಹ ಮಾಡುವುದಿಲ್ಲ ಅಷ್ಟು ನಂಬಿಕೆ ನಮ್ಮ ಜನರಿಗೆ ವೈದ್ಯರ ಮೇಲೆ.  ನಮ್ಮ ದೇಶದಲ್ಲಿ ಅನೇಕ ವೈದ್ಯರು ನಿಜವಾಗಲೂ ದೇವರ ಸ್ಥಾನದಲ್ಲೇ ಇದ್ದಾರೆ.

ಇತ್ತೀಚೆಗೆ ಕ್ಷಯ ರೋಗ ಗ್ರಂಥಿಗಳ ಸಂಬಂಧಿ ರೋಗ ಹೊಂದಿದ್ದ ರೋಹಿತ್ ಎಂಬ ಬಾಲಕನಿಗೆ ಮೂತ್ರ ವಿಸರ್ಜನಾ ಚರ್ಮ ಸಂಬಂಧಿ ಶಸ್ತ್ರ ಚಿಕಿತ್ಸೆಯನ್ನು ಮಾಡಿರುವ ಸುದ್ದಿ ಬಂದಿದೆ. ಎದೆ ನೋವು ಮತ್ತು ತಲೆ ಸುತ್ತಿನ ಕಾರಣಕ್ಕಾಗಿ ಮುಂಬೈನ ಲೀಲಾವತಿ ಆಸ್ಪತ್ರೆ ಸೇರಿದ ರೋಗಿಗೆ ಕಾಲಿನ ಶಸ್ತ್ರಚಿಕಿತ್ಸೆ ಮಾಡಿರುವ ಸುದ್ದಿಯೂ ಬಂದಿದೆ. ಹೈದರಾಬಾದಿನಲ್ಲಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗಾಗಿ ಸೇರಿದ ೯ ಜನ ಶಾಶ್ವತ ಅಂಧರಾದ ಸುದ್ದಿ ಬಂದಿದೆ. ಮಧುಮಗನೊಬ್ಬ ತನ್ನ ಬಳತೋಳಿನಲ್ಲಿ ನೋವು ಕಾಣಿಸಿಕೊಂಡ ಕಾರಣ ವೈದ್ಯರಿಗೆ ತೋರಿಸಿದಾಗ ಅವರ ನಿರ್ಲಕ್ಷದಿಂದ ಸಾವನಪ್ಪಿರುವ ಘಟನೆ ನಗರದ ರವಿ ಕಿರ್ಲೋಸ್ಕರ್ ಆಸ್ಪತೆಯಲ್ಲಿ ನಡೆದಿದೆ.  ಈ ತರಹದ ಸುದ್ದಿಗಳು ಆಗಾಗ ಕಿವಿಗೆ ಅಪ್ಪಳಿಸುತ್ತಲೇ ಇದೆ. ಇಂತಹ ವಿಷಯ ಪತ್ರಿಕೆಯಲ್ಲಿ ಓದಿದಾಗ, ಟಿ.ವಿಯಲ್ಲಿ ನೋಡಿದಾಗ ಮನಸ್ಸು ಕಸಿವಿಸಿಗೊಳ್ಳುತ್ತದೆ. ದೂರದಲ್ಲಿ ಕುಳಿತಿರುವ ನಮಗೇ ಹೀಗಾದರೆ, ತೊಂದರೆಗೆ ಒಳಗಾಗಿರುವವರು ಮತ್ತು ಅವರ ಮನೆಯವರ ಪರಿಸ್ತಿತಿ ಏನಾಗಬೇಕು?

 ಈ ತರಹ ಕೆಲಸವು ನುರಿತ ವೈದ್ಯರಿಂದ ಆಗುವುದಿಲ್ಲ.  ಯಾವ ವೈದ್ಯರಾಗಲೀ ಬೇಕಂತಲೇ ಇಂತಹ ಕೆಲಸವನ್ನು ಮಾಡುವುದಿಲ್ಲ. ಯಾರೊ ಒಬ್ಬಿಬ್ಬರು ಮಾಡಿದ ತಪ್ಪು ಎಲ್ಲಾ ವೈದ್ಯ ಸಮೂಹಕ್ಕೆ ಕಪ್ಪು ಚುಕ್ಕೆಯಾಗಬಾರದು. ಇದು ವೈದ್ಯರ ತಪ್ಪೋ ಅಥವಾ ಶಸ್ತ್ರ ಚಿಕಿತ್ಸೆಗೆ ಕರೆದುಕೊಂಡು ಹೋಗುವ ಸಹಾಯಕರು ಮತ್ತಿತರ ತಪ್ಪೋ? ಇದೆಲ್ಲಾ ಯಾಕಾಗುತ್ತಿದೆ? ಅವರಿಗೆ ಸರಿಯಾದ ವಿದ್ಯೆಯ ಕೊರತೆಯೇ? ಬುದ್ದಿಯ ಕೊರತೆಯೇ? ಅನುಭವದ ಕೊರತೆಯೇ? ಶ್ರದ್ದೆಯ ಕೊರತೆಯೇ? ಭಾಷೆಯ ಸಮಸ್ಯೆಯೇ? ಕೆಲಸದ ಒತ್ತಡವೇ? ಅಥವಾ ಕೆಲಸದ ಬಗ್ಗೆ ನಿರ್ಲಕ್ಷವೇ? ಎಂಬುದರ ಬಗ್ಗೆ ವಿವರವಾಗಿ ವಿಚಾರಣೆ ನಡೆಸಿ ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಮೆಡಿಕಲ್ ಕೌನ್ಸಿಲ್ ಮತ್ತು ಸಂಭಂಧ ಪಟ್ಟ ಅಧಿಕಾರಿಗಳು, ಹಿರಿಯ ವೈದ್ಯರು, ನುರಿತ ಆಡಳಿತಕಾರರು ಇವರ ಮೇಲಿದೆ.

ಇದರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ಕ್ರಮ ಕೈಗೊಂಡರೆ ಮುಂದೆ ಇಂತಹ ತಪ್ಪುಗಳು ಆಗುವುದಿಲ್ಲ.  ಸಾಮಾನ್ಯವಾಗಿ ಶಸ್ತ್ರ ಚಿಕಿತ್ಸೆ ಮಾಡುವ ವೈದ್ಯರೇ ಬೇರೆಯಾಗಿರುತ್ತಾರೆ ಮತ್ತು ದಿನವೂ ರೋಗಿಗೆ ಚಿಕಿತ್ಸೆ ಕೊಡುವ ವೈದ್ಯರೇ ಬೇರೆಯಾಗಿರುತ್ತಾರೆ. ಅವರಲ್ಲಿ ಹೆಚ್ಚಿನ ರೀತಿಯ ಹೊಂದಾಣಿಕೆ ಇರಬೇಕಾಗುತ್ತದೆ. ಅದು ಇಲ್ಲದಿದ್ದರೆ ಇಂತಹ ತಪ್ಪುಗಳು ಸಂಭವಿಸುತ್ತದೆ. ಇದರ ಬಗ್ಗೆ ಸಂಭಂದಪಟ್ಟವರು ಯೋಚಿಸಬೇಕಾಗಿದೆ.

No comments:

Post a Comment