Thursday 31 May 2012

" ಅಣ್ಣಾ ಬಾಂಡ್ "

ಮೊನ್ನೆ " ಅಣ್ಣಾ ಬಾಂಡ್ " ಚಿತ್ರ ನೋಡಲು ಹೋಗಿದ್ದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ  ಚಿತ್ರ ನೋಡಿದ ಮೇಲೆ ಭ್ರಮನಿರಸನವಾಯಿತು. ರಾಘಣ್ಣ, ಶಿವಣ್ಣ, ಪುನೀತ್, ಪಾರ್ವತಮ್ಮ ಅವರುಗಳು ತಮ್ಮ ಸ್ವಂತ ಬ್ಯಾನರ್ ನಲ್ಲಿ ಚಿತ್ರವನ್ನು ತೆಗೆದಾಗ ಬಹಳಷ್ಟು ಸಮಯ ಕಥೆ, ಸಂಭಾಷಣೆ, ಹಾಡುಗಳು, ಸಂಗೀತ, ನಿರ್ದೇಶಕ ಹೀಗೆ ಎಲ್ಲದರ ಬಗ್ಗೆಯೂ ಸಾಕಷ್ಟು ಚರ್ಚೆ ಮಾಡಿ ನಂತರ ಶ್ರದ್ದೆ, ಪ್ರೀತಿಯಿಂದ ಚಿತ್ರವನ್ನು ಮಾಡಿರುವುದನ್ನು ನಾವೆಲ್ಲರೂ ಈ ಹಿಂದೆ  ನೋಡಿದ್ದೇವೆ. ಅವರಿಗೆ ಕಥೆ ಒಪ್ಪಿಸುವುದು ಸುಲಭದ ಮಾತಲ್ಲ. ಇದು ಗಾಂಧಿನಗರದ ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯ. ಹಾಗಾಗಿ ಅವರ ಸ್ವಂತ ಬ್ಯ್ನಾನರ್ ಚಿತ್ರಗಳು ಅತ್ಯಂತ ಯಶಸ್ವಿಯಾಗಿರುತ್ತದೆ. ಇದು ರಾಜ್, ವರದಣ್ಣ ಅವರ ಕಾಲದಿಂದಲೂ ಬಂದಿರುವ ರೂಢಿ. ಆದರೆ ಅಣ್ಣಾ ಬಾಂಡ್ ವಿಷಯದಲ್ಲಿ ಇವರುಗಳು ಯಾಕೆ ಯಾಮಾರಿದರು? ನಿರ್ದೇಶಕ ಸೂರಿಯ ಬಗ್ಗೆ ವಿಪರೀತ ನಂಬಿಕೆಯೇ ಚಿತ್ರವನ್ನು ಹಾಳುಮಾಡಿದೆ. ಪುನೀತ್ ಅವರನ್ನು ಚಿತ್ರದಲ್ಲಿ ಸರಿಯಾಗಿ ದುಡಿಸಿಕೊಂಡಿಲ್ಲ. ಅವರನ್ನು ಕೇವಲ ಫೈಟ್ ಮತ್ತು ಡ್ಯಾನ್ಸ್ ಗೆ ಮಾತ್ರ ಸೀಮಿತಗೊಳಿಸಿದ್ದಾರೆ. ಪುನೀತ್ ರಂತಹ ಸಹಜ ನಟನನ್ನು ಎಷ್ಟು ಚೆನ್ನಾಗಿ ಉಪಯೋಗಿಸಿಕೊಳ್ಳಬಹುದಾಗಿತ್ತು. ಇನ್ನು ಪ್ರಿಯಾಮಣಿ, ನಿಧಿ ಸುಬ್ಬಯ್ಯ, ಅವಿನಾಶ್, ಜಾಕಿ ಶರಾಫ್ ಪಾತ್ರ ಪೋಷಣೆಯೇ ಚೆನ್ನಾಗಿಲ್ಲ. ನಿಧಿ ಸುಬ್ಬಯ್ಯ ಅವರಿಗೆ ಪುನೀತ್ ಚಿತ್ರದಲ್ಲಿ ನಟಿಸುವ ಆಸೆ ಬಹಳ ಇತ್ತು. ಆದರೆ ಇದು ಕೇವಲ ಅವರ ಆಸೆ ಪೂರೈಸಿತು ಅಷ್ಟೆ.  ಇದರಿಂದ ಅವರಿಗೆ  ಏನೂ ಪ್ರಯೋಜನವಾದಂತಿಲ್ಲ. ರಂಗಾಯಣ ರಘು ಪಾತ್ರ ಕೂಡ ಅಷ್ಟೇ ಕೇವಲ ಮಾತು, ಅದೂ ಅರ್ಥವಿಲ್ಲದ ಬಡಬಡಿಕೆ. ಹಾಗಾಗಿ ಅವರ ಪಾತ್ರವೂ ಮನಸ್ಸಿಗೆ ನಿಲ್ಲುವುದಿಲ್ಲ. ಒಳ್ಳೆಯ ನಟರು, ದೊಡ್ಡ ಬ್ಯಾನರ್ ಮತ್ತು ಕನ್ನಡದ ಅತ್ಯಂತ ಜನಪ್ರಿಯ ನಟ ಇವೆಲ್ಲವನ್ನೂ ಇಟ್ಟುಕೊಂಡು ಒಂದು ಅತ್ಯದ್ಭುತ ಚಿತ್ರವನ್ನು ಕೊಡಬಹುದಾಗಿತ್ತು. ಆದರೆ ಸೂರಿ ಎಲ್ಲವನ್ನೂ ಹಾಳುಮಾಡಿಬಿಟ್ಟರು. ಸೂರಿ ನಾವು ನಿಮ್ಮನ್ನು ಕ್ಷಮಿಸುವುದಿಲ್ಲ. ಪುನೀತ್ ಅವರೇ ನಿಮ್ಮ ಮೇಲೆ ಬಹಳ ಜವಾಬ್ದಾರಿ ಇದೆ ಮತ್ತು ನಿಮ್ಮ ಮೇಲೆ ನಾವು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ನೀವು ನಮ್ಮನ್ನು ನಿರಾಸೆಗೊಳಿಸದಿರಿ.

ಪ್ರೇಮ್, ಸೂರಿ, ಯೋಗರಾಜ್ ಭಟ್, ಅವರುಗಳು ಹೀಗೇಕಾಗುತ್ತಿದ್ದಾರೆ ಎಂಬುದು ದೊಡ್ಡ ಪ್ರಶ್ನೆ. ನೀವುಗಳು ಯಶಸ್ವಿ ಚಿತ್ರಗಳನ್ನು ಕೊಟ್ಟವರು. ಆದರೆ ಈಗ ಎಲ್ಲಿ ಹೊಯಿತು ನಿಮ್ಮ  ಸೃಜನಶೀಲತೆ, ಕ್ರಿಯಾಶೀಲತೆ? ಏನೂ ಕೊಟ್ಟರೂ ಕನ್ನಡ ಜನ ನೋಡುತ್ತಾರೆ ಎಂಬ ಭ್ರಮೆಯೇ?  ಬರೀ ಗಿಮಿಕ್ ನಿಂದ ಚಿತ್ರವನ್ನು ಗೆಲ್ಲಿಸಲಾಗುವುದಿಲ್ಲ. ಕಥೆ, ಚಿತ್ರಕಥೆ , ಸಾಹಿತ್ಯ, ಸಂಗೀತ, ಛಾಯಾಗ್ರಹಣ, ನಟನೆ ಇವುಗಳು ಯಾವುದೇ ಚಿತ್ರಕ್ಕೂ ಬಹಳ ಮುಖ್ಯ. ಇದರ ಮೇಲೆ ನಿರ್ದೇಶಕನ ಸೃಜನಶೀಲತೆ ಮತ್ತು ಅವನು ಅದನ್ನು ಹೇಗೆ ಕಟ್ಟಿಕೊಡುವವನು ಎಂಬುದರ ಮೇಲೆ ಚಿತ್ರದ ಯಶಸ್ಸು ಅಡಗಿರುವುದು. ಇದರಲ್ಲಿ ಯಾವುದೊಂದು ಸರಿಯಾಗಿಲ್ಲದಿದ್ದರೂ ಚಿತ್ರ ಮಲಗಿಕೊಂಡು ಬಿಡುತ್ತದೆ. ಇದು ನಿಮಗೆ ಗೊತ್ತಿಲ್ಲದ ವಿಷಯವೇನಲ್ಲ, ಅದರಲ್ಲೂ ಜನಪ್ರಿಯ ನಟ ಆ ಚಿತ್ರದಲ್ಲಿದ್ದರೆ ಚಿತ್ರದ ತೂಕ ಹೆಚ್ಚುತ್ತದೆ ಮತ್ತು ಆ ಚಿತ್ರದ ಬಗ್ಗೆ ಜನರ ಕುತೂಹಲ ಸಹ ಅತ್ಯಂತ ಮೇಲ್ಮಟ್ಟದಲ್ಲಿರುತ್ತದೆ. ಆದರೂ ಯಾಕೆ ನೀವು ಹೀಗೆ ಮಾಡುವಿರಿ?  ಪ್ರೇಮ್ " ರಾಜ್ " ಚಿತ್ರವನ್ನು, ಭಟ್ಟರು " ಪರಮಾತ್ಮ " ಮತ್ತು ಸೂರಿ " ಅಣ್ಣಾ ಬಾಂಡ್ " ಚಿತ್ರವನ್ನು ಹಾಳು ಮಾಡಿಬಿಟ್ಟರು. ಈ ಮೂವರಿಗೂ ಪುನೀತ್ ಅವರ ಜನಪ್ರಿಯತೆ ಮತ್ತು ಅವರ ಸಹಜ ನಟನಾ ಕೌಶಲ್ಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದು ಬರಲಿಲ್ಲ. ಈ ಮೂವರಿಗೂ ಒಂದು ಭ್ರಮೆ ಆವರಿಸಿಕೊಂಡಂತಿದೆ. ನಾವು ಹೇಗೆ ಮಾಡಿದರೂ ಚಿತ್ರವನ್ನು ಕನ್ನಡ ಪ್ರೇಕ್ಷಕರು ನೋಡುತ್ತಾರೆ ಎಂದು. ಕ್ಷಮಿಸಿ, ಅಭಿಮಾನಿ ದೇವರುಗಳಿಗೆ ವರ ಕೊಡುವುದೊ ಗೊತ್ತು ಮತ್ತು ಶಾಪ ಕೊಡುವುದೂ ಗೊತ್ತು.

No comments:

Post a Comment