Monday 28 May 2012

ರೆಬೆಲ್ ಸ್ಟಾರ್ " ಅಂಬರೀಷ್ "

" ಏ ಬುಲ್ ಬುಲ್ ಮಾತಾಡಕ್ಕಿಲ್ವಾ? " ಅಂತ ಕನ್ನಡ ಚಿತ್ರರಂಗಕ್ಕೆ ಪಡ್ಡೆ ಹುಡುಗನಾಗಿ ಕಾಲಿಟ್ಟ ಅಂಬಿ ನೋಡ ನೋಡುತ್ತಲೇ " ಇಲ್ಲೇ ಸ್ವರ್ಗ, ಇಲ್ಲೇ ನರಕ ಮೇಲೇನಿಲ್ಲಾ ಸುಳ್ಳು " ಎಂಬ ಅಧ್ಯಾತ್ಮದ ಪಾಠವನ್ನು ಮಾಡಿಬಿಟ್ಟರು. ಆಮೇಲೆ ಸ್ವಾಭಿಮಾನ ಅಡ್ಡ ಬಂದಾಗ "ಕುತ್ತೇ, ಕನ್ವರ್ ನಹೀ ಕನ್ವರ್ ಲಾಲ್ ಬೊಲೊ " ಎಂದು ಘರ್ಜಿಸಿದಾಗ ಎದುರಾಳಿ ಒಂದೇ ಏಟಿಗೆ ಸುಸ್ತು.  ಈ ೪೦ ವರ್ಷಗಳಲ್ಲಿ ಅನೇಕ ಏಳು ಬೇಳುಗಳನ್ನು ಕಂಡ ಅಂಬಿ ಯಾವುದಕ್ಕೂ/ಯಾರಿಗೂ ಕೇರ್ ಮಾಡದ ವ್ಯಕ್ತಿತ್ವ ಅವರದು. ಅನೇಕ ನಿರ್ಮಾಪಕರು ಅವರು ಒಪ್ಪಿಕೊಂಡ ದುಡ್ಡು ಕೊಡದೇ ಹೊದರೂ ಅವರು ಯಾರನ್ನೂ ದೂಷಿಸಲಿಲ್ಲ. ಅವರ ಯಾವ ಚಿತ್ರಗಳು  ನಿರ್ಮಾಪಕನಿಗೆ ಕೈ ಕಚ್ಚಲಿಲ್ಲ.

ಕನ್ನಡ ಚಿತ್ರರಂಗದಲ್ಲಿ ಅಂಬರೀಷ್ ಅವರಿಗೆ ಒಂದು ವಿಶಿಷ್ಟ ಸ್ಠಾನವಿದೆ. ಅಂಬಿ ಎಂದರೆ ಕಣ್ಣ ಮುಂದೆ ಬರುವುದು ಅವರ ಸ್ನೇಹ, ಹಾಸ್ಯ, ಕೀಟಲೆ, ಕೊಡುಗೈ ದಾನಿ. ಯಾವುದೇ ಸಮಸ್ಯೆ ಚಿತ್ರರಂಗದಲ್ಲಿ ಕಂಡುಬಂದರೆ ಅಲ್ಲಿ ಅಂಬಿಯ ಮಾತೇ ಅಂತಿಮ. ಚಿತ್ರರಂಗದಲ್ಲಿ ಅವರ ಮಾತನ್ನು ತಳ್ಳಿಹಾಕುವ ಧೈರ್ಯ ಯಾರಿಗೂ ಇಲ್ಲ. ಚಿತ್ರ ರಂಗದ ಒಳಹೊರಗನ್ನು ಚೆನ್ನಾಗಿ ಬಲ್ಲ ಅಂಬಿಯ ವ್ಯಕ್ತಿತ್ವದ ಮುಂದೆ ಬೇರೆಯವರ ಮಾತು ಗೌಣ.  ಅಂಬರೀಷ್ ಅವರು ತಮ್ಮ ಕಲಾ ಜೀವನದಲ್ಲಾಗಲೀ, ನಿತ್ಯ ಜೀವನದಲ್ಲಾಗಲೀ ಹೆಚ್ಚು ತಲೆ ಕೆಡಿಸಿಕೊಳ್ಳದ ವ್ಯಕ್ತಿತ್ವ ಅವರದು. ಅವರು ಇನ್ನೂ ಹೆಚ್ಚಿನ ಗಮನ ನಟನೆಗೆ ಕೊಡಬಹುದಾಗಿತ್ತೇನೋ? ಅವರ ಸ್ನೇಹಿತರ ಬಳಗ ಬಹಳ ದೊಡ್ಡದು. ಅವರಿಗೆ ಇಡೀ ಭಾರತದಲ್ಲಿ ಮತ್ತು ಹೊರ ದೇಶದಲ್ಲಿ ಸಾವಿರಾರು ಸ್ನೇಹಿತರಿದ್ದಾರೆ. ಸ್ನೇಹ ಎಂದರೆ ಇನ್ನೊಂದು ಹೆಸರೇ ಅಂಬರೀಷ್.

ಪುಟ್ಟಣ್ಣನವರ ಹೆಚ್ಚಿನ ಚಿತ್ರಗಳಲ್ಲಿ ನಟಿಸಿರುವ ಅಂಬರೀಷ್ ತಮ್ಮ ರೆಬೆಲ್ ಪಾತ್ರದಿಂದ ನಮ್ಮ ಮನ ಸೊರೆಗೊಂಡವರು ನಾಗರಹೊಳೆ ಚಿತ್ರದ ಅಂಥೋಣಿ, ನಾಗರಹಾವು ಚಿತ್ರದ ಜಲೀಲ, ಕಿಲಾಡಿ ಜೊಡಿ ಚಿತ್ರದ ಕರಾಟೆ ಗುರು, ಶುಭ ಮಂಗಳ ಚಿತ್ರದ ಮೂಗ, ರಂಗನಾಯಕಿಯ ಪಾತ್ರ,  ಹೀಗೆ ಬಂದು ಹಾಗೆ ಹೋಗುವ ಪಾತ್ರದಲ್ಲೂ ಅಂಬಿ ಸೂಪರ್.  ಅವರ  ಚಿತ್ರ ಜೀವನದಲ್ಲಿ " ಅಂತ " ಮತ್ತು  " ಚಕ್ರವ್ಯೂಹ " ಸರ್ವಕಾಲೀನ ಯಶಸ್ವಿ ಚಿತ್ರಗಳು. ಅವರು ಸೌಮ್ಯ ಚಿತ್ರಗಳಲ್ಲಿ ನಟಿಸಿದ್ದು ಬಹಳ ಕಡಿಮೆ. ಅದರಲ್ಲಿ  ಅತ್ಯಂತ ಗರ್ಮನಾರ್ಹವಾದದ್ದು " ಒಲವಿನ ಉಡುಗೊರೆ " ಮತ್ತು " ಹೃದಯ ಹಾಡಿತು ". ಅದನ್ನು ನೋಡಿದ ಪ್ರೇಕ್ಷಕರು ಅಂಬಿಯ ಇನ್ನೊಂದು ನಟನಾ ಮುಖವನ್ನು ನೋಡಿದರು.

ಮನೆಯಲ್ಲಿ ಹಿರಿಯರಿಗೆ ೬೦ ವರ್ಷತುಂಬಿದಾಗ  ಅವರ ಬಂಧು, ಬಳಗ, ಸ್ನೇಹಿತರು ಎಲ್ಲರೂ ಒಟ್ಟಾಗಿ ಸೇರುವುದು ವಾಡಿಕೆ. ಇಂದು ಕನ್ನಡ ಚಿತ್ರರಂಗದ ಹಿರಿಯಣ್ಣ ಅಂಬರೀಷ್ ಅವರಿಗೆ ೬೦ ವರ್ಷದ ಸಂಭ್ರಮ. ಇದರ ಜೊತೆಗೆ ಅವರು ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿ ೪೦ ವರ್ಷಗಳಾಗುತ್ತವೆ. ಕನ್ನಡ ಚಿತ್ರರಂಗವು ಮೂರು ದಿನ ಸ್ವಯಂಘೋಷಿತ ಬಂದ್ ಮಾಡಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪಾಲ್ಗೊಳ್ಳಲ್ಲಿದೆ.  ಅಂಬಿಯನ್ನು ಹರಸಲು ಅಕ್ಕ ಪಕ್ಕದ ರಾಜ್ಯಗಳಿಂದ ಹೆಸರಾಂತ ನಟರು, ನಿರ್ದೇಶಕರು, ಸ್ನೇಹಿತರು ಬರಲಿದ್ದಾರೆ . ಅಂಬಿ ಅಭಿಮಾನಿಗಳಿಗೆ  ಇದು ಮನೆ ಹಬ್ಬ ಇದ್ದಂತೆ. ಹುಡುಗಾಟದ ಹುಡುಗ ಅಂಬಿಗೆ " ಹುಟ್ಟು ಹಬ್ಬದ ಶುಭಾಶಯ " ಹೇಳಲು ಮರೆಯದಿರಿ.

ಸರ್, ನೀವು ಇನ್ನಾದರೂ ಸಿಗರೇಟ್ ಕಮ್ಮಿ ಮಾಡಿ. ನಿಮ್ಮನ್ನು ಪ್ರೀತಿಸುವ ಅಭಿಮಾನಿಗಳಿಗಾದರೂ ನೀವು ಸಿಗರೇಟ್ ಬಿಡಲೇಬೇಕು. ಇದು ನಮ್ಮ ಒತ್ತಾಯ ಕೂಡ ಹೌದು. ಇಲ್ಲ  ಅಂತ ದಯವಿಟ್ಟು ಹೇಳಬೇಡಿ. ನೀವು ಒಮ್ಮೆ ಮಾತು ಕೊಟ್ಟರೆ ಮುಗೀತು. ಅದನ್ನು ಯಾವ ಕಾರಣಕ್ಕೂ ತೆಗೆಯುವುದಿಲ್ಲ. ನಮಗೆ ನೀವು ಬೇಕು. ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ. ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ದೇವರು ಸುಖ, ಸಂತೋಷ, ಆರೋಗ್ಯ, ನೆಮ್ಮದಿ ಎಲ್ಲವನ್ನೂ ಕೊಟ್ಟು ಕಾಪಾಡಲಿ. ನಿಮಗೆ ಮತ್ತೊಮ್ಮೆ ಜನ್ಮ ದಿನದ ಶುಭಾಷಯಗಳು.

No comments:

Post a Comment