Tuesday 22 May 2012

ವಿಚ್ಚೇದನ ಸಮಸ್ಯೆ:

ನನ್ನ ಗಂಡ ಮದುವೆಯಾಗಿ ಎರಡು ತಿಂಗಳಾದರೂ ಫೇಸ್ ಬುಕ್ ನಲ್ಲಿ ತಾನು ಮದುವೆಯಾದ ಸುದ್ದಿಯನ್ನು ಅಪ್ ಲೋಡ್ ಮಾಡದ ಕಾರಣ ನನಗೆ ಅವನಿಂದ ವಿಚ್ಚೇದನ ಬೇಕು" ಎಂದು ಯುವತಿಯೊಬ್ಬಳು ನ್ಯಾಯಾಲಯದಲ್ಲಿ ಅರ್ಜಿಯನ್ನು ಹಾಕಿಕೊಂಡಿರುವ ಸುದ್ದಿ ಟಿ.ವಿಯಲ್ಲಿ ನೋಡಿ ವಿಚಿತ್ರವೆನಿಸಿತು. ಇಂದು ವಿಚ್ಚೇದನ ಸಮಸ್ಯೆ ಮಹಾನಗರಗಳಷ್ಟೆ ಅಲ್ಲ ಸಣ್ಣ ಪುಟ್ಟ ನಗರಗಳನ್ನೂ ಕಾಡುತ್ತಿದೆ. ಇಂದಿನ ಜನಾಂಗದ ತರುಣ/ತರುಣಿಯರು ವಿದ್ಯಾವಂತರು, ಬುದ್ದಿವಂತರು, ಆರ್ಥಿಕವಾಗಿಯೂ ಸಹ ತಮ್ಮ ಕಾಲಮೇಲೆ ನಿಲ್ಲಬಲ್ಲಂತವರು. ಸ್ವಲ್ಪ ತಾಳ್ಮೆ, ವಿಶ್ವಾಸ, ಪ್ರೀತಿಯಿಂದ ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಜೀವನ ಸಾಗಿಸಿದರೆ ಅವರವರ ತಂದೆ ತಾಯಿಯರು ಕೊನೆಕಾಲದಲ್ಲಿ ನೆಮ್ಮದಿಯಿಂದ ಇರುವರೆನೋ? ಮದುವೆಯಾಗಿ ಮಗಳು ಒಂದೆರೆಡು ತಿಂಗಳಿಗೇ ತನ್ನ ತವರು ಮನೆಗೆ ಜಗಳವಾಡಿ ಕೊಂಡು ಬಂದರೆ ಅವರ ತಂದೆ ತಾಯಿ ಸಹ ಏನು ಮಾಡಿಯಾರು? ಮಗನಿಗೆ ಮದುವೆ ಮಾಡಿ ಸೊಸೆ ಬಂದ ಖುಷಿ ಕೆಲವೇ ತಿಂಗಳಲ್ಲಿ ಮರೆಯಾದರೆ, ಆ ಹಿರಿಯರನ್ನು ಸಂತೈಸುವವರು ಯಾರು? ಮನೆಯಲ್ಲಿ ಇನ್ನೂ ಮದುವೆಯಾಗದವರು ಇದ್ದರೆ ಅವರ ಮುಂದಿನ ಭವಿಷ್ಯದ ಬಗ್ಗೆ ಹಿರಿಯರಿಗೆ ಏನೂ ಮಾಡಲೂ ತೋಚುವುದಿಲ್ಲ. ಈಗ ಯಾವುದೋ ಕ್ಷುಲ್ಲಕ ಕಾರಣದಿಂದ ವಿಚ್ಚೇದವಾದರೆ ಮುಂದೆ ಅವರ ಜೀವನ ಹೇಗೆ? ಅಕಸ್ಮಾತ್ ಮಕ್ಕಳಿದ್ದರೆ ಅವರ ಗತಿ ಏನು? ಇವರ ಜಗಳದಲ್ಲಿ ಮಕ್ಕಳು ಪಾಪ ಏನು ಮಾಡಬೇಕು? ಹೀಗೆ ಪ್ರಶ್ನೆ ಮೇಲೆ ಪ್ರಶ್ನೆಗಳು. ಇಂದು ಮಾಡಿದ ತಪ್ಪು ಮುಂದೆ ಅವರಿಗೆ ಅರಿವಾದರೂ ಸಹ ಏನು ಪ್ರಯೋಜನ? ನೀವು ಬೇರೆ ಮದುವೆ ಆಗಬಹುದು, ಇಲ್ಲಾ ಒಂಟಿ ಜೀವನ ನಡೆಸಬಹುದು. ಅದು ನಿಮ್ಮ ಇಷ್ಟ, ನಿಮ್ಮ ಬದುಕು. ಆದರೆ ಅದು ನಿಮ್ಮ ಮಕ್ಕಳನ್ನು ಕಾಡಬಾರದು. ಅವರಿಗೆ ಅದು ಹೊರೆಯಾಗಬಾರದು. ಎಲ್ಲವನ್ನೂ ಗಮನಿಸಿ ಯಾರಿಗೂ ತೊಂದರೆ ಆಗದ ಹಾಗೆ ಒಂದು ಒಳ್ಳೆಯ ನಿರ್ಧಾರ ತೆಗೆದುಕೊಳ್ಳ್ಬಲ್ಲ ಪ್ರಯತಿನಿಸಬಹುದು.

ದೈಹಿಕವಾಗಿ, ಮಾನಸಿಕವಾಗಿ ನಿಮಗೆ ಕಿರುಕುಳವಾಗುತ್ತಿದ್ದರೆ, ವರದಕ್ಷಿಣೆ ಮುಂತಾದ ಸಮಸ್ಯೆಗಳಿದ್ದರೆ ಅಥವಾ ನಿಮಗೆ ನಿಜವಾಗಿಯೂ ಅವನ/ಅವಳ ಜೊತೆ ಬಾಳುವುದು ಸಾದ್ಯವೇ ಆಗುವುದಿಲ್ಲ ಎಂದರೆ ಮಾತ್ರ ವಿಚ್ಚೇದನದ ಬಗ್ಗೆ ಯೋಚಿಸಬಹುದು. ವಿಚ್ಚೇದನ  ಕಟ್ಟ ಕಡೆಯ ಅಸ್ತ್ರವಾಗಬೇಕೇ ಹೊರತು ಅದೇ ಮೊದಲ  ಪರಿಹಾರವಾಗಬಾರದು. ಕಾಲವು ಯಾರನ್ನೂ ಕಾಯುವುದಿಲ್ಲ ಅಲ್ಲವೇ? ಮುಖ್ಯವಾಗಿ ನಾವು ಕಂಡ ಕನಸುಗಳೆಲ್ಲವೂ ನಿಜ ಜೀವನದಲ್ಲಿ ನನಸಾಗುವುದು ಬಹಳ ಕಷ್ಟ. ಕೇವಲ ೧೦% ಸಹ ಒಂದೊಂದು ಸಲ ನಿಜವಾಗುವುದಿಲ್ಲ. ಜೀವನವೆನ್ನುವುದು  ಆಶ್ಚರ್ಯಗಳ ಅಗರ, ಅದು ಹೀಗೇ ಆಗುತ್ತದೆ ಎಂದು ಹೇಳುವುದಕ್ಕಾಗುತ್ತದೆಯೇ? ವಿಚ್ಚೇದನ ಬಯಸುವವರು ತಮ್ಮ ತಮ್ಮ ತಂದೆ, ತಾಯಿಯರನ್ನು,  ಅವರು ಬದುಕುತ್ತಿರುವುದನ್ನು ನೋಡಿ ಅರಿತುಕೊಂಡರೆ, ಇಂತಹ ವಿಚ್ಚೇದನಕ್ಕೆ ಸ್ವಲ್ಪ ವಾದರೂ ಕಡಿವಾಣ ಹಾಕಬಹುದು. ಸಣ್ಣ ಪುಟ್ಟ ಸಂಗತಿಗಳನ್ನು ದೊಡ್ಡದು ಮಾಡಿಕೊಂಡು ನಮ್ಮ ಹಿರಿಯರು ವಿಚ್ಚೇದನ ಪಡೆದಿದ್ದರೆ ಇಡೀ ಭಾರತದಲ್ಲಿ ಬರೀ ವಿಚ್ಚೇದಿತರೇ ತುಂಬಿರುತ್ತಿದ್ದರೆನೋ? ಪಾಶ್ಚಿಮಾತ್ಯ ದೇಶದಲ್ಲಿ ವಿಚ್ಚೇದನ ಒಂದು ಹಕ್ಕು ಎಂದು ಪರಿಗಣಿಸಿದರೆ, ನಮ್ಮ ದೇಶದಲ್ಲಿ  ಒಂದು ಸಮಸ್ಯೆಯಾಗಿರುವುದು ವಿಪರ್ಯಾಸ.

No comments:

Post a Comment