Saturday 26 May 2012

ಕನ್ನಡ ಲಿಪಿಗಳು:

ಕನ್ನಡದಲ್ಲಿ ಇತ್ತೀಚೆಗೆ ಕನ್ನಡದ ಲಿಪಿಗಳನ್ನು ಸರಳೀಗೊಳಿಸಬೇಕು, ಕನ್ನಡದಲ್ಲಿ ಜಾಸ್ತಿ ಅಕ್ಷರಗಳಿವೆ ಅದನ್ನು ಕಡಿಮೆ ಮಾಡಬೇಕು. ಒತ್ತಕ್ಷರಗಳನ್ನು ಕಡಿಮೆ ಮಾಡಬೇಕು ಅವುಗಳನ್ನು ಬಳಸುವುದು ಕಷ್ಟ ಎಂಬ ವಾದ ವಿವಾದಗಳು ಹರಿದು ಬರುತ್ತಿವೆ. ಕೆಲವರಿಗೆ " ಶ, ಷ, ಸ, ಹ " ಮುಂತಾದ ಲಿಪಿಗಳು ಬೇಡ, ಮತ್ತೆ ಕೆಲವರಿಗೆ ಮಹಾ ಪ್ರಾಣ ಬೇಡ.  ಇದು ಇಂದಿನ ಮಾತಲ್ಲ. ವರ್ಷಕ್ಕೊಂದು ಬಾರಿ ಹೀಗೆ ಸುಮ್ಮನೆ ಜನ ಸಾಮಾನ್ಯರಲ್ಲಿ ಗೊಂದಲವೆಬ್ಬಿಸುತ್ತಿದ್ದಾರೆ. ತಮಿಳಿನಲ್ಲಿ ’ಕ " ಅಕ್ಷರವಿಲ್ಲ, ಹಾಗಾಗಿ ಕನ್ನಡಕ್ಕೊ " ಕ " ಅಕ್ಷರ ಬೇಡ. " ಕ " ಬದಲಿಗೆ  " ಗ " ಅಕ್ಷರವನ್ನು ಬಳಸೋಣ ಎಂಬ ಪುಕ್ಕಟ ಸಲಹೆ.   ಅವರಿಗೆ " ಕ " ಅಕ್ಷರ ಬೇಡ ಎನಿಸಿದರೆ ಅದು ಅವರ ಇಚ್ಚೆ.  (ಅವರು  " ವಿನಾಯಕ "ನಿಗೆ " ವಿನಾಯಗ " ಎಂದು ಹೇಳಿದರೆ ನಾವು ಹಾಗೆಯೇ ಹೇಳಬೇಕೇನು)  " ಕನ್ನಡ " ಕ್ಕೆ   ಗನ್ನಡ ಎನ್ನಬೇಕೇನು? ನಾವು ಅವರಂತೆ ಯಾಕಾಗಬೇಕು? ಪ್ರತಿಯೊಂದು ಭಾಷೆಗೊ ಅದರದೇ ಆದ ಲಯ, ಸೊಗಸು, ವಯ್ಯಾರ, ಒನಪು ಇರುತ್ತದೆ. ಪ್ರತಿಯೊಂದು ಭಾಷೆಯೂ ಬೇರೆ ಬೇರೆಯಾಗಿದ್ದರೇನೇ ಚೆನ್ನ, ಅದೇ ವೈವಿದ್ಯತೆ. ಅನೇಕ ಭಾಷಾ ವಿಜ್ಞಾನಿಗಳು ಕನ್ನಡ ಒಂದು ಅತ್ಯದ್ಭುತ ಭಾಷೆ, ಅದು ವೈಜ್ಞಾನಿಕವಾಗಿ ೯೯.೯೯% ಸರಿಯಾಗಿದೆ. " ನಾವು ಏನನ್ನು ಹೇಳುತ್ತೇವೆಯೋ ಅದನ್ನೇ ಕನ್ನಡದಲ್ಲಿ ಬರೆಯಬಹುದು ಮತ್ತು ಏನನ್ನು ಬರೆಯುತ್ತೇವೆಯೋ ಅದನ್ನೇ ಓದಬಹುದು. ಇದು ಜಗತ್ತಿನಲ್ಲಿ ಕೇವಲ ಕೆಲವೇ ಕೆಲವು ಭಾಷೆಗಳಿಗೆ ಅನ್ವಯವಾಗುತ್ತದೆ "  ಎಂದು ಅನೇಕ ಬಾರಿ ಹೇಳಿದ್ದಾರೆ. ಅದು ಸತ್ಯ ಕೂಡ ಹೌದು.  ನಾವುಗಳು ಸ್ವಲ್ಪ ಸರಿಯಾಗಿ ಯೋಚಿಸಿದರೆ ನಮಗೆ ಅದು ಸರಿ ಎಂದು ಕೂಡ ಅನ್ನಿಸುತ್ತದೆ. ಕೆಲವರಿಗೆ ಅದೇಕೋ ಅದು ಪಥ್ಯವಾದಂತಿಲ್ಲ.  ಕನ್ನಡದಲ್ಲಿ ಸಂಖ್ಯೆಗಳನ್ನೂ ಸಹ ಕನ್ನಡದ ಲಿಪಿಯಲ್ಲೇ ಬರೆಯಬಹುದು. ಇದೂ ಸಹ ಕೆಲವೇ ಭಾರತೀಯ ಭಾಷಗಳಲ್ಲಿ ಇಲ್ಲ.

ಮೊದಲು ನಮ್ಮ ವರ್ಣಮಾಲೆಯಲ್ಲಿ ೫೨ ಅಕ್ಷರಗಳು ಇದ್ದವು. ಕ್ರಮೇಣ ಅದನ್ನು ೫೦ ಕ್ಕೆ ಇಳಿಸಿದರು. ( " ೠ, ಆಃ " ಬೇಡ ಎಂದು.)  ಈಗ ೪೯ ಕ್ಕೆ ಇಳಿಸಿದ್ದಾರೆ. ( " ಜ್ಞ" ಬೇಡ ಎಂದು.) ಮುಂದೆ ಅದನ್ನು ಎಷ್ಟಕ್ಕೆ ಇಳಿಸುತ್ತಾರೋ ಗೊತ್ತಿಲ್ಲ. ಈಗ ನಾವು ಬಳಸುತ್ತಿರುವ ಕನ್ನಡದಿಂದ ಯಾರಿಗಾದರೂ ತೊಂದರೆ  ಉಂಟಾಗಿದ್ದರೆ, ಅವರು ಕನ್ನಡವನ್ನು ಚೆನ್ನಾಗಿ ಕಲಿತಿಲ್ಲ ಅಷ್ಟೇ. ಸ್ವಲ್ಪ ಪ್ರಯತ್ನ ಪಟ್ಟರೆ ಕಲಿಯಬಹುದು. ಅದು ಮಹಾ ದೊಡ್ಡ ವಿಷಯ ಅಲ್ಲ. ಈಗಿರುವ ಕನ್ನಡವನ್ನು ನಾವೆಲ್ಲೆರೂ ಕಲಿತಿಲ್ಲವೇ? ನಮ್ಮ ಮಕ್ಕಳೂ ಸಹ ಇದೇ ಕನ್ನಡವನ್ನು ಕಲಿತಿರುವುದು.  ಚಿಕ್ಕ ಮಕ್ಕಳೂ ಸಹ ಕಲಿಯುವುದರಲ್ಲಿ ಹಿಂದೆ ಬಿದ್ದಿಲ್ಲ. ಮಕ್ಕಳು ಇನ್ನೂ ಚೆನ್ನಾಗಿ ಬೇಗ ಅರ್ಥಮಾಡಿಕೊಳ್ಳುತ್ತಾರೆ. ನಾವು ಮೊದಲು ಸರಿಯಾಗಿ ಕಲಿತು  ನಂತರ ಅವರಿಗೆ ಕಲಿಸಬೇಕು ಅಷ್ಟೇ. ಇದನ್ನೇ ಕಷ್ಟ ಎಂದರೆ ಹೇಗೆ? ಒಂದೊಂದೇ ಲಿಪಿಯನ್ನು ಕಡಿಮೆ ಮಾಡಿಕೊಳ್ಳೂತ್ತಾ, ಕೊನೆಗೆ ಕನ್ನಡಕ್ಕೆ ಲಿಪಿ ಯಾಕೆ ಬೇಕು ಎಂಬ ವಾದ ಬಂದರೂ ಆಶರ್ಯವಿಲ್ಲ. ಈಗಿರುವ ಕನ್ನಡ ಹಳಗನ್ನಡ ಅಲ್ಲ, ಬಹಳ ಸರಳವಾಗಿದೆ. ಓದಲಿಕ್ಕಾಗಲೀ ಅಥವಾ ಬರೆಯಲಿಕ್ಕಗಲೀ ಕಷ್ಟ ಪಡಬೇಕಾಗಿಲ್ಲ. ಸ್ವಲ್ಪ ಪ್ರಯತ್ನ ಪಟ್ಟರೆ ಎಲ್ಲವೂ ಸರಳ, ಸುಲಭ. ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ಭಾಷೆಯನ್ನಗಲೀ ಕಲಿಯಲು ಮೊದಲು ಪ್ರೀತಿ, ಅಭಿಮಾನವಿದ್ದರೆ ಸಾಕು. ಅದಿಲ್ಲದಿದ್ದರೆ ಎಲ್ಲವೂ ಕಷ್ಟ. ಭಾಷಾ ವಿದ್ವಾಂಸರು, ವಿಜ್ಞಾನಿಗಳು ಈ ಮೊದಲೇ ನಮಗೆ ಸುಂದರ, ಸುಮಧುರ ಲಿಪಿಯನ್ನು ಕೊಟ್ಟಿರಬೇಕಾದರೆ ನಾವು ಅದನ್ನು ಸರಿಯಾಗಿ ಉಪಯೋಗಿಸಿ ಅದನ್ನು ಜೀವಂತವಾಗಿ ಇಡಲು ಪ್ರಯತ್ನಿಸೊಣ. ಅದನ್ನು ಹಾಳು ಮಾಡುವುದು ಎಷ್ಟು ಸರಿ? ಇದರ ಬದಲು ಕನ್ನಡವನ್ನು ಆಂಗ್ಲ ಲಿಪಿಯಲ್ಲೇ ಬರೆಯಬಹುದಲ್ಲಾ? ಯಾಕೆ ಇಷ್ಟು ಕಷ್ಟ ಪಡಬೇಕು?

ಕನ್ನಡವು ಹಳಗನ್ನಡದಿಂದ ಸಾಕಷ್ಟು ರೂಪಾಂತರ ಹೊಂದಿ ನಡುಗನ್ನಡವಾಗಿ ಈಗ ಸರಳಗನ್ನಡವಾಗಿದೆ. ಇನ್ನಷ್ಟು ಅದನ್ನು ಎಳೆಯುವುದು ಬೇಡ. ಮತ್ತಷ್ಟು ಎಳೆದರೆ ತುಂಡಾಗುವುದು. " ಕನ್ನಡ ಒಂದು ರಾಷ್ಟ್ರೀಯ ಭಾಷೆ. ಅದು ತನ್ನದೇ ಆದ ಭಾಷೆ ಸಂಪತ್ತನ್ನು ಹೊಂದಿದೆ, ಹೀಗಾಗಿ ಬದಲಾವಣೆಯ ಆಲೋಚನೆಯೇ ಸರಿಯಲ್ಲ. ಭಾಷೆಯನ್ನು ಅದರ ಬೆಳವಣಿಗೆಯ ದೃಷ್ಟಿಯಿಂದ ನೋಡಬೇಕು. ಲಿಪಿ ಎಂಬುದು ಒಂದು ಸಂಸ್ಕೃತಿ. ಇದನ್ನು ಬದಲಿಸಿದರೆ ಸಂಸ್ಕೃತಿಯನ್ನೇ ಬದಲಿಸಿದಂತೆ " ಎಂದು ಡಾ.ಚಿದಾನಂದ ಮೂರ್ತಿಯವರು ಸರಿಯಾಗಿಯೇ ಹೇಳಿದ್ದಾರೆಂದು ನನ್ನ ಭಾವನೆ. ಕನ್ನಡದಲ್ಲಿ ಆಗಬೇಕಾದ ಕೆಲಸಗಳು ಬಹಳ ಇವೆ. ಆ ಕೆಲಸಗಳನ್ನು ಮಾಡುವುದಕ್ಕೆ ಪ್ರಯತ್ನಿಸೋಣ. ಅದು ಸರಿಯಿಲ್ಲ, ಇದು ಸರಿಯಿಲ್ಲ ಅಂತ ಹೇಳಿ ನಾವುಗಳು ನಿಂತ ಜಾಗದಲ್ಲೇ ಸುತ್ತಾಡುತ್ತಿದ್ದೇವೆ. ಇತರ ಭಾಷಿಕರು ನಮ್ಮಿಂದ ಈಗಾಗಲೇ ಬಹಳ ದೂರ ಸಾಗಿದ್ದಾರೆ. ನಾವೆಲ್ಲರೂ ಹೀಗೆ ತಪ್ಪುಗಳನ್ನೇ ಹುಡುಕುತ್ತಾ ಕಾಲ ಕಳೆಯುತ್ತಿದ್ದೇವೆ ಅಂತ ನನಗನಿಸುತ್ತದೆ.




No comments:

Post a Comment