Saturday 4 August 2012

ಪತ್ತೇದಾರಿ ಕಾದಂಬರಿಗಳು:


ಕನ್ನಡ ಸಾಹಿತ್ಯ ಲೋಕದಲ್ಲಿ ಕಥೆ, ಕಾದಂಬರಿ, ಕಾವ್ಯ, ನಾಟಕ, ಜನಪದ ಸಾಹಿತ್ಯ, ವಚನ ಸಾಹಿತ್ಯ, ಚಿತ್ರಗೀತೆ, ಜನಪದ ಗೀತೆ, ಭಾವ ಗೀತೆ, ರಂಗ ಗೀತೆ ಹೀಗೆ ಅನೇಕ ಸಾಹಿತ್ಯ ಪ್ರಕಾರಗಳು. ಪತ್ತೇದಾರಿ ಕಾದಂಬರಿ ಸಹ ಇಂತಹದೇ ಒಂದು ಪ್ರಕಾರ. ಪತ್ತೇದಾರಿ ಕಾದಂಬರಿಗಳನ್ನು ಓದುವ ಒಂದು ದೊಡ್ಡ ವರ್ಗವೇ ೧೯೭೦-೮೦ರ ದಶಕದಲ್ಲಿ ಇತ್ತು. ಈ ಪ್ರಕಾರವು ಜನಸಾಮಾನ್ಯರಲ್ಲಿ ಅಚ್ಚುಮೆಚ್ಚಿನದಾಗಿದ್ದರೂ, ಬುದ್ದಿಜೀವಿಗಳ ವರ್ಗವು ಈ ಪ್ರಕಾರದಿಂದ ಒಂದು ಮಟ್ಟದ ಅಂತರವನ್ನು ಕಾಪಾಡಿಕೊಂಡೇ ಬಂದಿತು. ಪತ್ತೇದಾರಿ ಕಾದಂಬರಿಗಳನ್ನು ಬರೆದ ಲೇಖಕರು ಓದುವ ವರ್ಗದಲ್ಲಿ ಜನಪ್ರಿಯರಾದರೂ ಅವರಿಗೆ ಸಲ್ಲಲೇಬೇಕಾದ ಗೌರವವು ಅವರ ಜೀವಿತಕಾಲದಲ್ಲಿ ದೊರೆಯಲಿಲ್ಲವೆಂಬುದು ಸತ್ಯ.

೧೯೭೦-೮೦ರ ದಶಕದಲ್ಲಿ ಪತ್ತೇದಾರಿ ಕಾದಂಬರಿಗಳನ್ನು ಓದದೇ ಇರುವ ಯುವಕರೇ ಇರಲಿಲ್ಲ. ಅದೊಂದು ಜನಪ್ರಿಯ ಸಾಹಿತ್ಯ ಪ್ರಕಾರವಾಗಿತ್ತು. ನಾವುಗಳು ಶಾಲಾ ಪಠ್ಯ, ಪುಸ್ತಕಗಳನ್ನು ಬಿಟ್ಟರೆ ಹೆಚ್ಚು ಓದಿದ್ದು ಪತ್ತೇದಾರಿ ಕಾದಂಬರಿಗಳನ್ನೇ.  ನಾವುಗಳು ಪತ್ತೇದಾರಿ ಕಾದಂಬರಿಗಳನ್ನು ಆಗ ಬಹಳ ಓದುತ್ತಿದ್ದೆವು. ಆಗ ನಮ್ಮಂತೆಯೇ ಈ ಕುತೂಹಲ ಭರಿತ ಕಾದಂಬರಿಗಳನ್ನು ಓದುವ ಒಂದು ದೊಡ್ಡ ಯುವಕರ ಗುಂಪೇ ಇತ್ತು. ಆಗ ಹೆಚ್ಚಿನ ಯುವಕರು ಈ ಸಾಹಿತ್ಯ ಪ್ರಕಾರದಿಂದಲೇ ಮೊದಲು ಓದಲು ಶುರುಮಾಡಿ, ನಂತರ ಇತರ ಅನೇಕ ಕನ್ನಡ ಸಾಹಿತ್ಯ ಪ್ರಕಾರವನ್ನು ಓದಲು ಶುರುಮಾಡಿಕೊಂಡರು.

ನರಸಿಂಹಯ್ಯ, ಜಿಂದೆ ನಂಜುಂಡಸ್ವಾಮಿ, ಟಿ.ಕೆ.ರಾಮರಾವ್, ಮಾ.ಭೀ.ಶೆ., ಸುದರ್ಶನ ದೇಸಾಯಿ, ಮುಂತಾದವರು ಆಗ ಜನಪ್ರಿಯ ಪತ್ತೇದಾರಿ ಕಾದಂಬರಿಕಾರರಾಗಿದ್ದರು. ನರಸಿಂಹಯ್ಯನವರಂತೂ ಸುಮಾರು ಐನೂರಕ್ಕೂ ಹೆಚ್ಚಿನ ಪತ್ತೇದಾರಿ ಕಾದಂಬರಿಗಳನ್ನು ಬರೆದ ಪಿತಾಮಹರು. ೬೦-೭೦-೮೦ರ ದಶಕದಲ್ಲಿ ಪತ್ತೇದಾರಿ ಕಥೆಗಳನ್ನು ಆಧರಿಸಿದ ಚಲನಚಿತ್ರಗಳೂ ಸಹ ಬಂದವು. ಅವುಗಳಲ್ಲಿ ಅನೇಕ ಚಿತ್ರಗಳು ಯಶಸ್ವಿಯೂ ಆಯಿತು. ರಾಜ್ ಅವರೂ ಸಹ ಅನೇಕ ಪತ್ತೇದಾರಿ ಆಧರಿತ ಕಥೆಗಳಲ್ಲಿ ಅಭಿನಯಿಸಿದ್ದಾರೆ. ಬೆಂಗಳೂರು ಮೈಲ್, ಸಿ.ಐ.ಡಿ.ರಾಜಣ್ಣ, ಪ್ರೇಮದ ಕಾಣಿಕೆ ಹೀಗೆ ಅವರ ಜನಪ್ರಿಯ ಪತ್ತೇದಾರಿ ಆಧರಿತ ಚಿತ್ರಗಳು. ಬಾಂಡ್ ಚಿತ್ರಗಳೂ ಸಹ ಪತ್ತೇದಾರಿ ಕಥೆಗಳನ್ನು ಆಧರಿಸಿ ತಯಾರಾದ ಚಿತ್ರಗಳೇ. ಕನ್ನಡದಲ್ಲಿ ಮರಳು ಸರಪಣಿ, ಮಣ್ಣಿನ ದೋಣಿ, ಶ್, ಆಲೆಮನೆ, ಅಪರಿಚಿತ, ಆಗುಂತಕ, ತಿರುಗುಬಾಣ, ಪ್ರೇಮ ಪರ್ವ ಹೀಗೆ ಅನೇಕ ಪತ್ತೇದಾರಿ ಚಿತ್ರಗಳು ಜನಪ್ರಿಯವಾದವು.

ಈಗ ಹೊಸ ಹೊಸ ಪತ್ತೇದಾರಿ ಕಾದಂಬರಿಗಳು ಬರುತ್ತಿಲ್ಲ. ಈ ಪ್ರಕಾರದಲ್ಲಿ ಬರೆಯಲು ಹೊಸ ಲೇಖಕರು ಮುಂದೆ ಬರುತ್ತಿಲ್ಲ. ಓದುಗರೂ ಬಹಳ ಕಡಿಮೆಯಾಗಿದ್ದಾರೆ. ಟಿ.ವಿ ಯಲ್ಲಿ ಬರುವ ಕ್ರೈಂ ಸ್ಟೋರಿ, ವಾರೆಂಟ್ ನೋಡುವುದರಲ್ಲೇ ಕನ್ನಡಿಗರು ತಲ್ಲೀನರಾಗಿದ್ದಾರೆ ಎಂದೆನಿಸುತ್ತದೆ. ಒಂದು ಕನ್ನಡ ಸಾಹಿತ್ಯ ಪ್ರಕಾರ ಸದ್ದಿಲ್ಲದೆ ನಶಿಸಿಹೋಗುವ ಲಕ್ಷಣಗಳು ಕಾಣುತ್ತಿದೆ. ಇದೆಲ್ಲವೂ ಮೊನ್ನೆ ಸುದರ್ಶನ ದೇಸಾಯಿಯವರು ಮರಣಹೊಂದಿದರೆಂದು ಟಿ.ವಿಯಲ್ಲಿ ಸುದ್ದಿಬಂದಾಗ ಜ್ಞಾಪಕಕ್ಕೆ ಬಂದಿತು. ನರಸಿಂಹಯ್ಯನವರೂ ನಮ್ಮನ್ನು ಇತ್ತೀಚೆಗೆ ಅಗಲಿದರು. ನಮ್ಮನ್ನು ಅಗಲಿದ ಆ ಹಿರಿಯರ ಆತ್ಮಕ್ಕೆ ಶಾಂತಿಯನ್ನು ಭಗವಂತನು ಕರುಣಿಸಲಿ ಎಂದು ಆಶಿಸುತ್ತಾ……..

1 comment:

  1. Read this and provide feedback.
    https://honalu.net/2016/04/11/%E0%B2%AA%E0%B2%A4%E0%B3%8D%E0%B2%A4%E0%B3%87%E0%B2%A6%E0%B2%BE%E0%B2%B0%E0%B2%BF-%E0%B2%95%E0%B2%A4%E0%B3%86-%E0%B2%95%E0%B2%A8%E0%B2%B8%E0%B2%BF%E0%B2%A8%E0%B2%B2%E0%B3%8D%E0%B2%B2%E0%B2%BF/

    ReplyDelete