Tuesday 14 August 2012

ಲಕ್ಷ್ಮೀ ಪುತ್ರರಾಗುವುದು ಹೇಗೆ? ಭಾಗ-೪


ಕಳೆದ ಸಂಚಿಕೆಯಿಂದ:


ಶ್ರೀಮಂತ ವ್ಯಕ್ತಿಗಳ ಜೀವನ ಶೈಲಿ ಅತ್ಯಂತ ಅದ್ದೂರಿಯಿಂದ ಕೂಡಿರುತ್ತದೆ, ದೊಡ್ಡ ದೊಡ್ಡ ಕಾರುಗಳು, ದೊಡ್ಡ ಬಂಗಲೆಯಲ್ಲಿ ವಾಸ, ಅತೀ ಹೆಚ್ಚು ಹಣ ತಮಗಾಗಿ ಖರ್ಚುಮಾಡಿಕೊಳ್ಳುತ್ತಾರೆ ಎಂಬುದು ಸಾಮಾನ್ಯ ವ್ಯಕ್ತಿಗಳ ಅನಿಸಿಕೆ. ಆದರೆ ಹೆಚ್ಚಿನ ಶ್ರೀಮಂತ ವ್ಯಕ್ತಿಗಳ ದೈನಂದಿಕ ಜೀವನ ಶೈಲಿಯು ಸಾಮಾನ್ಯವಾಗಿ ಅದ್ದೂರಿಯಿಂದೇನೂ ಕೂಡಿರುವುದಿಲ್ಲ. ಇನ್ಫೋಸಿಸ್ ನಾರಾಯಣ ಮೂರ್ತಿಯವರಾಗಲೀ, ವಾರೆನ್ ಬಫೆಟ್ ಅವರಾಗಲೀ ೨/೩ ಮಲಗುವ ಕೊಠಡಿಗಳ ಮನೆಯಲ್ಲೇ ಇರುವುದು, ಉಪಯೋಗಿಸುವುದೂ ಸಹ ಸಾಮಾನ್ಯರು ಬಳಸುವ ಕಾರನ್ನೇ ಎಂಬುದನ್ನು ಗಮನಿಸಬಹುದು. ಶ್ರೀಮಂತರೇನೂ ಜಿಪುಣತನದಿಂದ ತಮ್ಮ ಜೀವನವನ್ನು ನಡೆಸುವುದಿಲ್ಲ. ಅವರ ಜೀವನ ಶೈಲಿ ಅದ್ದೂರಿಯಿಂದ ಕೂಡಿದ್ದರೂ ಸಹ,  ಅದರ ಮೇಲೆ ಅವರಿಗೆ ಸಂಪೂರ್ಣ ನಿಯಂತ್ರಣವಿರುತ್ತದೆ. ತಮ್ಮಲ್ಲಿರುವ ಹಣವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆಮಾಡುವ ಕಲೆಯನ್ನು ಶ್ರೀಮಂತರು ಬೆಳೆಸಿಕೊಂಡಿರುತ್ತಾರೆ. ತಮ್ಮಲ್ಲಿ ಅತಿ ಹೆಚ್ಚಿನ ಹಣವಿದೆಯೆಂದು ದರ್ಪದಿಂದ ಅತಿ ದೊಡ್ಡ ಶ್ರೀಮಂತರಾರೂ ವ್ಯವಹರಿಸುವುದಿಲ್ಲ. ಹಾಗೆ ವ್ಯವಹರಿಸುವವರು ನಿಜವಾದ ಶ್ರೀಮಂತರೂ ಆಗಿರುವುದಿಲ್ಲ. ತಮ್ಮನ್ನು ತಾವು ಶ್ರೀಮಂತರೆಂಬ ಕಲ್ಪನೆಯಲ್ಲಿರುತ್ತಾರೆ ಅಷ್ಟೇ. ಕಲ್ಪನೆಯನ್ನು ಯಾರು ಬೇಕಾದರೂ ಮಾಡಿಕೊಳ್ಳಬಹುದು. ಆದರೆ ಅದಕ್ಕಾಗಿ ದುಡಿಯುವುದು ಬಹಳ ಮುಖ್ಯವಾಗುತ್ತದೆ.


ಕೆಲವರು ಹುಟ್ಟುವಾಗಲೇ ಶ್ರೀಮಂತರಾಗಿ ಜನ್ಮತಾಳಿರಬಹುದು. ನಾವು ಹುಟ್ಟಿನಿಂದಲೇ ಶ್ರೀಮಂತರೆಂದು, ಯಾವುದೇ ವ್ಯಾಪಾರ ವಹಿವಾಟು ನಡೆಸದೆ ತಮ್ಮಲ್ಲಿರುವ ಹಣವನ್ನು ಮೋಜು ಮಸ್ತಿಯಲ್ಲಿ ಕಳೆದರೆ, ಬೀದಿಗೆ ಬೀಳುವುದು ಮಾತ್ರ ನಿಶ್ಚಿತ. ವಂಶ ಪಾರಂಪರ್ಯವಾಗಿ ಬಂದಿರುವ ಶ್ರೀಮಂತಿಕೆಯನ್ನು ಉಳಿಸಿಕೊಂದು ಮತ್ತು ಅದನ್ನು ಬೆಳೆಸಿಕೊಂಡು ಹೊಗುವುದು ಬಹಳ ಮುಖ್ಯ. ತಮ್ಮಲ್ಲಿರುವ ಹಣ ಮತ್ತು ಬುದ್ದಿಶಕ್ತಿಯನ್ನು ಯಾರು ಸೂಕ್ತ ರೀತಿಯಲ್ಲಿ ನಿರ್ವಹಣೆಮಾಡುವ ಕಲೆಯನ್ನು ಬೆಳೆಸಿಕೊಂಡು ತಮ್ಮ ವ್ಯಾಪಾರ ವ್ಯವಹಾರವನ್ನು ಇನ್ನಷ್ಟು ಮತ್ತಷ್ಟು ಅಭಿವೃದ್ದಿಗೊಳಿಸುತ್ತಾರೊ, ಅವರ ಶ್ರೀಮಂತಿಕೆಗೆ ಯಾವುದೇ ತೊಂದರೆಯಾಗುವುದಿಲ್ಲ.

ನಾವು ಮಾಡುವ ಕೆಲಸದಿಂದ ಜೀವನ ನಡೆಸಲು ಆಡ್ಡಿಯಿಲ್ಲ, ಸುಖ ಜೀವನ ನಡೆಸಬಹುದು. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿರಲು ವ್ಯಾಪಾರ, ವಹಿವಾಟುಗಳನ್ನು ದೇಶದ ಎಲ್ಲೆಡೆ ಮತ್ತು ಹೊರ ದೇಶಗಳಲ್ಲೂ ವಿಸ್ತರಿಸಬೇಕಾಗುತ್ತದೆ, ಹತ್ತು ಹಲವು ಕಂಪನಿಗಳನ್ನು ಸ್ಥಾಪಿಸಬೇಕಾಗುತ್ತದೆ. ಇದಕ್ಕೆಲ್ಲಾ ದೊಡ್ಡ ಕನಸು, ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮುಖ್ಯವಾಗುತ್ತದೆ. ಇದೆಲ್ಲವನ್ನೂ ನೊಡಿದಾಗ ನಮ್ಮ ಹಿರಿಯರು ಹೇಳಿರುವ “ಆಳಾಗಿ ದುಡಿ ಅರಸನಾಗಿ ತಿನ್ನು “ಎಂಬ ಮಾತು ಎಷ್ಟು ಸತ್ಯವೆಂದು ಗೋಚರಿಸುತ್ತದೆ. (ಮಿಕ್ಕಿದ್ದು ನಾಳೆಗೆ)

No comments:

Post a Comment