Saturday 11 August 2012

ಲಕ್ಷ್ಮೀ ಪುತ್ರರಾಗುವುದು ಹೇಗೆ? ಭಾಗ-೧


ವಿಶ್ವದ ಅತೀ ಶ್ರೀಮಂತರಲ್ಲಿ ಪ್ರಥಮ ಸ್ಥಾನದಲ್ಲಿರುವ ಮೆಕ್ಸಿಕೋ ದೇಶದ ಕಾರ್ಲೋಸ್, ದ್ವಿತೀಯ ಸ್ಥಾನದ ಅಮೇರಿಕಾದವರಾದ ಬಿಲ್ ಗೇಟ್ಸ್, ಮೂರನೇ ಸ್ಥಾನದ ಅಮೇರಿಕಾದವರೇ ಆದ ವಾರೆನ್ ಬಫೆಟ್ ಮುಂತಾದ ವಿಶ್ವದ ಅತೀ ಶ್ರೀಮಂತ ೧೦ ವ್ಯಕ್ತಿಗಳು ಹೇಗೆ ಲಕ್ಷ್ಮೀ ಪುತ್ರರಾದರು ಎನ್ನುವ ಬಗ್ಗೆ ಒಂದು ಸೊಗಸಾದ ಕಾರ್ಯಕ್ರಮವನ್ನು ಟಿ.ವಿ.೯ ಇತ್ತೀಚೆಗೆ ಪ್ರಸಾರಮಾಡಿತ್ತು. ಚರ್ಚೆಯಲ್ಲಿ ಭಾಗವಹಿಸಿದ್ದ ವಿಶ್ವದ ಶ್ರೀಮಂತರಲ್ಲಿ ೧೦೫೧ನೇ ಸ್ಥಾನದ ಮತ್ತು ಕರ್ನಾಟಕದ ೬ನೇ ಶ್ರೀಮಂತರಾದ ರಾಜೇಶ್ ಎಕ್ಸ್ ಪೋರ್ಟ್ ಸಿ.ಇ.ಒ.ರಾಜೀವ್ ಮೆಹ್ತಾ, ಐ.ಐ.ಎಂ.ನಿರ್ದೇಶಕರಾದ ಮುರಳೀಧರ್ ಮತ್ತು ಹಣಕಾಸು ಹೂಡಿಕೆ ತಜ್ಞರಾದ ರುದ್ರಮೂರ್ತಿಯವರು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಶ್ರೀಮಂತರಾಗುವುದು ಹೇಗೆ? ಎಂಬ ಮೂಲಭೂತ ವಿಷಯವನ್ನು ಬಹಳ ಚೆನ್ನಾಗಿ ತಿಳಿಯಪಡಿಸಿದರು.

ಮೇಲೆ ತಿಳಿಸಿದ ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಅನೇಕರು ಸಾಮಾನ್ಯ ವ್ಯಕ್ತಿಗಳಾಗೇ ಜನ್ಮತಾಳಿದವರು, ಹೆಚ್ಚಿನವರಲ್ಲಿ ಯಾರೂ ಹುಟ್ಟುತ್ತಲೇ ಶ್ರೀಮಂತರಾದವರಲ್ಲ. ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆ ಅವರನ್ನು ಶ್ರೀಮಂತ ವ್ಯಕ್ತಿಗಳನ್ನಾಗಿ ರೂಪಿಸಿದೆ. ಅವರಲ್ಲಿ ಎಲ್ಲರೂ ಸುಮಾರು ೧೮ ತಾಸುಗಳು ಕೆಲಸ ಮಾಡುವವರು. ಶ್ರದ್ದೆಯಿಂದ ಪ್ರಾಮಾಣಿಕತೆಯಿಂದ ಕೆಲಸ ಮಾಡುವವರು, ಹೀಗಾಗಿ ಅವರಿಗೆ ಶ್ರೀಮಂತಿಕೆ ಒಲಿದಿದೆ. ಯಾವುದೇ ವ್ಯಕ್ತಿಗೆ ಶ್ರೀಮಂತಿಕೆ ಒಲಿಯಲು ಅನೇಕ ವರ್ಷಗಳು ಹಿಡಿಯುತ್ತವೆ.  ಯಾವುದೇ ವ್ಯಕ್ತಿ ರಾತ್ರೋರಾತ್ರಿ ಶ್ರೀಮಂತನಾಗಲು ಸಾಧ್ಯವಿಲ್ಲ. ವಾರೆನ್ ಬಫೆಟ್ ತಮ್ಮ ೧೨ನೇ ವರ್ಷದಿಂದ ಶೇರು ಮಾರುಕಟ್ಟೆಯಲ್ಲಿ ವ್ಯವಹಾರವನ್ನು ಪ್ರಾರಂಭಿಸಿ ಈಗ ಅವರು ತಮ್ಮ ೮೫ನೇ ವರ್ಷದ ಹೊಸಲಿನಲ್ಲಿ ಜಗತ್ತಿನ ೩ನೇ ಅತಿ ದೊಡ್ಡ ಶ್ರೀಮಂತರಾಗಿದ್ದಾರೆ. ಅತಿ ಕಡಿಮೆ ವಯಸ್ಸಿನಲ್ಲಿ ವ್ಯಾಪಾರ ವಹಿವಾಟಿಗೆ ತಮ್ಮನ್ನು ತಾವು ತೊಡಗಿಸಿಕೊಂಡು ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ತೊಡಗಿಸಿಕೊಂಡರೆ, ಯಾರು ಬೇಕಾದರೂ ಶ್ರೀಮಂತರಾಗಬಹುದು ಎಂಬುದು ಚರ್ಚೆಯಲ್ಲಿ ಭಾಗವಹಿಸಿದ್ದ ಅತಿಥಿಗಳ ಒಟ್ಟು ಮಾತಿನ ತಾತ್ಪರ್ಯವಾಗಿತ್ತು. (ಮಿಕ್ಕಿದ್ದು ನಾಳೆಗೆ)

No comments:

Post a Comment