Thursday 13 September 2012

ದೇವರೆಲ್ಲಿದ್ದಾನೆ? ಭಾಗ-೬


ಕಳೆದ ಸಂಚಿಕೆಯಿಂದ

ದೇವರು ಇದ್ದಾನೆಯೋ? ಇಲ್ಲವೊ? ಅದನ್ನು ನಾವು ಸ್ವಲ್ಪ ಪಕ್ಕಕ್ಕಿಟ್ಟು ನೋಡಿದರೆ, ನಮ್ಮ ಪೂರ್ವಜರು ನಿಜವಾಗಿಯೂ ಅತ್ಯಂತ ಬುದ್ದಿವಂತರು. ನಮಗೆ ದೇವರು, ಸ್ವರ್ಗ, ನರಕದ ಕಲ್ಪನೆಯನ್ನು ಕೊಟ್ಟು ಒಳ್ಳೆಯದನ್ನೇ ಮಾಡಿದ್ದಾರೆ ಎಂದು ಅನಿಸುವುದುಂಟು. “ಒಳ್ಳೆಯ ಕೆಲಸವನ್ನು ಮಾಡಿದರೆ, ದೇವರ ಅನುಗ್ರಹ ಪಡೆಯಬಹುದು, ಪುಣ್ಯ ಸಂಪಾದಿಸಬಹುದು. ಅದರ ಮುಖಾಂತರ ಸ್ವರ್ಗದ ಸುಖವನ್ನು ಅನುಭವಿಸಬಹುದು.  ಕೆಟ್ಟ ಕೆಲಸ ಮಾಡಿದರೆ, ದೇವರಿಂದ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಪಾಪದ ಕೆಲಸದಿಂದ ನರಕ ಕಟ್ಟಿಟ್ಟ ಬುತ್ತಿ” ಎನ್ನುವುದರ ಮುಖಾಂತರ ಜನರು ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಲು ಪ್ರೇರೇಪಿಸುವ ರೀತಿ ನಿಜಕ್ಕೂ ಅಭಿನಂದನೀಯ ಮತ್ತು ಅನುಕರಣೀಯ ಕೂಡ.

ಸ್ವರ್ಗ, ನರಕಗಳು ಮೇಲೆ ಎಲ್ಲಿದೆಯೋ ಯಾರಿಗೂ ಗೊತ್ತಿಲ್ಲ, ಆದರೆ ಅದು ಇದೆ ಎಂದು ಎಲ್ಲಾ ಧರ್ಮದವರೂ ನಂಬುತ್ತಾರೆ. ನಾವು ಒಳ್ಳೆಯ ಕೆಲಸ ಮಾಡಿದರೆ ಸ್ವರ್ಗ ಪ್ರಾಪ್ತಿ, ಇಲ್ಲದಿದ್ದರೆ ನರಕ ಕಟ್ಟಿಟ್ಟ ಬುತ್ತಿ ಎಂದು ನಂಬುವ ನಾವು ಯಾಕೆ ಎಲ್ಲಾ ಗೊತ್ತಿದ್ದೂ ಕೆಟ್ಟ ಕೆಲಸಗಳನ್ನು ಮಾಡುತ್ತೇವೆ. ನಾವು ಮಾಡುತ್ತಿರುವ ತಪ್ಪು ನಮ್ಮ ಅರಿವಿಗೆ ಬರುತ್ತದೆ, ಆದರೂ ನಾವು ತಪ್ಪು ಮಾಡುತ್ತೇವೆ. ನಮ್ಮ ತಪ್ಪನ್ನು ಕ್ಷಮಿಸಲು ದೇವರಿಗೆ ಕಾಣಿಕೆ ಮುಖಾಂತರ ದೇವರನ್ನು ಒಲಿಸಿಕೊಳ್ಳಲು ನೋಡುತ್ತೇವೆ.

ಎಲ್ಲಾ ಧರ್ಮಗ್ರಂಥಗಳಲ್ಲಿ ಮಾನವ ಕುಲದ ಉದ್ದಾರಕ್ಕಾಗಿ, ಏಳಿಗೆಗಾಗಿ ಅನೇಕ ಉತ್ತಮ ವಿಷಯಗಳನ್ನು ತಿಳಿಸಿದ್ದಾರೆ. ನಾವು ಅದನ್ನು ಸರಿಯಾಗಿ ಓದದೆ ಅಥವಾ ಓದಿಯೂ ಸರಿಯಾಗಿ ಅರ್ಥಮಾಡಿಕೊಳ್ಳದೆ, ಅದರಲ್ಲಿರುವ ಉತ್ತಮವಾದ ವಿಚಾರಗಳನ್ನು ನಮ್ಮಿಷ್ಟಕ್ಕೆ ತಕ್ಕಂತೆ ತಿರುಚಿ ಅವುಗಳನ್ನು ನಮಗೆ ಸಾಧ್ಯವಾದಷ್ಟೂ ಅಧ್ವಾನಗೊಳಿಸಿಬಿಟ್ಟಿದ್ದೇವೆ. ಧರ್ಮ, ಸಂಸ್ಕೃತಿಯ ಹೆಸರಿನಲ್ಲಿ ಮೂಡನಂಬಿಕೆಗಳನ್ನು ಅನುಕರುಣೆ ಮಾಡುತ್ತಿದ್ದೇವೆ ಮತ್ತು ಅದನ್ನು ಮುಂದಿನ ಪೀಳಿಗೆಗೂ ವಿಸ್ತರಿಸುತ್ತಿದ್ದೇವೆ. (ಮಿಕ್ಕಿದ್ದು ನಾಳೆಗೆ)

No comments:

Post a Comment