Saturday 22 September 2012

ಪರಭಾಷಿಕರ ಮೇಲೆ ಪ್ರೀತಿ,ವಿಶ್ವಾಸವಿರಲಿ


ಈ ನಡುವೆ ಕೆಲವು ದಿನಗಳಿಂದ ಫೇಸ್ ಬುಕ್ ನಲ್ಲಿ ನಾನು ಕಂಡಂತೆ ಕೆಲವರು ನಮ್ಮ ಕನ್ನಡವನ್ನು ಪ್ರೀತಿಸುವ ಭರದಲ್ಲಿ ಪರಭಾಷೆಯನ್ನು/ಪರಭಾಷಿಕರನ್ನು/ಅವರ ಚಿತ್ರಗಳನ್ನು/ ಅವರ ನಟ/ನಟಿಯರನ್ನು ತೆಗಳುವುದು ಮಾಡುತ್ತಿರುತ್ತಾರೆ. ನಮಗೆ ನಮ್ಮ ಭಾಷೆಯ ಮೇಲೆ ಮತ್ತು ನಮ್ಮ ನಟರ ಬಗ್ಗೆ ಎಷ್ಟು ಪ್ರೀತಿ, ಅಭಿಮಾನವಿದೆಯೋ, ಅವರಿಗೆ ಅವರ ಭಾಷೆಯ/ನಟರ ಮೇಲೆ ಪ್ರೀತಿ, ಅಭಿಮಾನ ಇರುವುದು ಸಹಜ, ಇರಲಿ ಬಿಡಿ. ಅದರಿಂದ ನಮಗೇನು ತೊಂದರೆ. ನಾವು ಅವರನ್ನು ಪ್ರೀತಿಯಿಂದ ಗೆಲ್ಲಬೇಕೆ ಹೊರತು ದ್ವೇಷದಿಂದ ಅಲ್ಲ. ನಾವು ಅವರಿಗೆ ಕನ್ನಡವನ್ನು ಕಲಿಸೋಣ. ನಮ್ಮ ಒಳ್ಳೆಯ ಕನ್ನಡ ಚಿತ್ರಗಳನ್ನು ಅವರಿಗೆ ತೋರಿಸೋಣ. ನಮ್ಮ ಸಾಹಿತ್ಯವನ್ನು ಅವರಿಗೆ ಪರಿಚಯಿಸೋಣ. ನಮ್ಮ ಸಂಸ್ಕೃತಿಯನ್ನು ಅವರಿಗೆ ಹೇಳಿಕೊಡೋಣ. ನಮ್ಮ ಮಾಸ್ತಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಟಿ.ಪಿ.ಕೈಲಾಸಂ ಅವರ ಮನೆಯ ಭಾಷೆ ತಮಿಳು, ನಮ್ಮ ನಿಸಾರ್ ಅಹಮದ್ ಅವರ ಮನೆಯ ಬಾಷೆ ಉರ್ದು, ಕಾರ್ನಾಡ್ ಅವರ ಮನೆ ಮಾತು ಕೊಂಕಿಣಿ.  ಅನೇಕ ಪರಭಾಷಿಕರು ಕನ್ನಡಿಗರಿಗಿಂತ ಅಮೋಘ ಸೇವೆಯನ್ನು ಕನ್ನಡಕ್ಕೆ ಮಾಡಿದ್ದಾರೆ. ಇವರು ಕವಿ, ಸಾಹೈತಿಗಳು. ಸಾಮಾನ್ಯ ಜನ ಕೂಡ ಕನ್ನಡಿಗರಿಗಿಂತ ಹೆಚ್ಚಿನ ಪ್ರೀತಿಯನ್ನು ಕನ್ನಡಕ್ಕೆ ತೋರಿದ್ದಾರೆ. ಮಕ್ಕಳಿಗೆ ಕನ್ನಡವನ್ನು ಕಲಿಸಿದ್ದಾರೆ. ಮನೆಗೆ ಕನ್ನಡ ದಿನಪತ್ರಿಕಯನ್ನು ತರಿಸುವವರಿದ್ದಾರೆ. ಅನೇಕ ಮುಸ್ಲಿಂ ಭಾಂಧವರು ಮನೆಯಲ್ಲಿ ಉರ್ದು ಭಾಷೆಯನ್ನು ಮಾತನಾಡಿದರೂ ಕನ್ನಡ ಪತ್ರಿಕಯನ್ನು ಓದುತ್ತಾರೆ. ಅಂತಹ ಅನೇಕರು ನನ್ನ ಸ್ನೇಹಿತರಾಗಿದ್ದಾರೆ. ನನ್ನ ಸ್ನೇಹಿತರಲ್ಲಿ ಅನೇಕರು ತೆಲುಗು/ತಮಿಳು/ಉರ್ದು/ಮಲೆಯಾಳಂ ಮಾತೃಭಾಷೆಯವರಾಗಿದ್ದಾರೆ. ಅವರಲ್ಲಿ ಅನೇಕರು ಮನೆಯಲ್ಲಿ ಕೂಡ ಕನ್ನಡ ಮಾತನಾಡುತ್ತಾರೆ. ಇವರಿಗೆ ಏನು ಹೇಳುವಿರಿ? ನಾವು ಪರಭಾಷಿಕರಿಗೆ ಕನ್ನಡದ ವಾತಾವರಣವನ್ನು ಉಂಟುಮಾಡಿಕೊಟ್ಟರೆ ಎಲ್ಲವೂ ಸರಿಹೋದೀತು. ತಪ್ಪು ನಮ್ಮಲ್ಲಿ ಇಟ್ಟುಕೊಂಡು ಎಲ್ಲರನ್ನೂ ಬಾಯಿಗೆ ಬಂದಂತೆ ಬೈದರೆ ಹೇಗೆ ಸ್ನೇಹಿತರೆ.

No comments:

Post a Comment