Tuesday 25 September 2012

ಹಿಂದಿಯ ಬಲವಂತದ ಮಾಘಸ್ನಾನ: ಭಾಗ-೨


ಕಳೆದ ಸಂಚಿಕೆಯಿಂದ

ಎಲ್ಲರಿಗೂ ತಿಳಿದಿರುವಂತೆ ಎಲ್ಲಾ ಕೇಂದ್ರ ಸರ್ಕಾರದ ಕಛೇರಿಗಳಲ್ಲಿ, ಅಂಚೆ ಕಛೇರಿ, ಬ್ಯಾಂಕ್, ಜೀವ ವಿಮಾ ಕಛೇರಿಗಳು, ಪಾಸ್ ಪೋರ್ಟ್ ಮುಂತಾದ ಕಛೇರಿಗಳಲ್ಲಿ ಹಿಂದಿ ಮತ್ತು ಆಂಗ್ಲ ಭಾಷೆಗೆ ಮಹತ್ವವನ್ನು ಕೊಟ್ಟು ಕನ್ನಡ ಕಾಣಸಿಗುವುದೇ ಇಲ್ಲ. ಇನ್ನು ಅಲ್ಲಿಗೆ ಕಾರ್ಯನಿಮಿತ್ತ ಭೇಟಿ ಮಾಡುವ ಸಾರ್ವಜನಿಕರು ಇದನ್ನು ಯಾರಲ್ಲೂ ಪ್ರಶ್ನಿಸದೆ ಸಾಮಾನ್ಯವಾಗಿ ಆಂಗ್ಲ ಭಾಷೆಯಲ್ಲಿ ಕೊಟ್ಟಿರುವ ಅರ್ಜಿಯನ್ನು ತುಂಬಿಸಿ, ಆಂಗ್ಲಭಾಷೆಯಲ್ಲಿ ಅಲ್ಲಿರುವ ಸಿಬ್ಬಂದಿಯೊಂದಿಗೆ ವ್ಯವಹಿರಿಸಿ ತಮ್ಮ ಕಾರ್ಯವನ್ನು ಮುಗಿಸಿಕೊಂಡು ಹೊರಟುಬಂದುಬಿಡುತ್ತಾರೆ.

ಇದರಲ್ಲಿ ನಮ್ಮ ತಪ್ಪೂ ಬಹಳ ಇದೆ. ರೈಲ್ವೇ ಇಲಾಖೆ ಆಂಗ್ಲ, ಹಿಂದಿಯ ಜೊತೆಗೆ ಕನ್ನಡದಲ್ಲಿ ಅರ್ಜಿಯನ್ನು ಮುದ್ರಿಸುತ್ತದೆ. ಆದರೆ ಅದನ್ನು ಬಳಸುವವರು ಆಂಗ್ಲ ಭಾಷೆಯನ್ನೇ ಹೆಚ್ಚಾಗಿ ಉಪಯೋಗಿಸುತ್ತಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್, ಕರ್ನಾಟಕ ಬ್ಯಾಂಕ್, ಕೆನರಾ ಬ್ಯಾಂಕ್ ಮುಂತಾದವುಗಳಲ್ಲಿ ಕನ್ನಡದಲ್ಲಿ ಚಲನ್ ಸಹ ಇದೆ. ಆದರೆ ಅದನ್ನು ತುಂಬಿಸುವವರು ಹೆಚ್ಚಾಗಿ ಆಂಗ್ಲ ಭಾಷೆಯನ್ನು ಬಳಸುತ್ತಾರೆ. ಚಲನ್, ಚಕ್, ಅರ್ಜಿ ನಮೂನೆ ಮುಂತಾದುವಗಳನ್ನು ಕನ್ನಡದಲ್ಲಿ ಮುದ್ರಿಸುವುದು ಸುಲಭ, ಆದರೆ ಅದನ್ನು ಬಳಸುವವರು ಕನ್ನಡದಲ್ಲಿ ಬರೆದರೆ ಮಾತ್ರ ಅದಕ್ಕೆ ನಿಜವಾದ ಅರ್ಥ ಬರುವುದು. ಅದೇ ರೀತಿ ಎಲ್ಲಾ ಬ್ಯಾಂಕ್ ಎ.ಟಿ.ಎಂ ಗಳಲ್ಲಿ ಕನ್ನಡವೂ ಇದೆ. ಆದರೆ ಅದನ್ನು ಬಳಸುವವರು ಹೆಚ್ಚಾಗಿ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತಾರೆ. ಕನ್ನಡ ಎಲ್ಲಾ ಕಡೆ ಕೇವಲ ನೆಪ ಮಾತ್ರಕ್ಕೆ ಮಾತ್ರ ಇರುತ್ತದೆ. ಹೀಗಾದಾಗ ಮುಂದಿನ ಭಾರಿ ಚಲನ್, ಚಕ್ ಅರ್ಜಿ ಮುಂತಾದುವುಗಳನ್ನು ಮುದ್ರಿಸುವಾಗ ಆಡಳಿತ ನಡೆಸುವ ಮಂದಿ ಆಂಗ್ಲ ಭಾಷೆಯಲ್ಲೇ ಮುದ್ರಿಸಲು ಅಪೇಕ್ಷಿಸುತ್ತಾರೆ.  ಹೀಗಾಗಿ, ಕ್ರಮೇಣ ಕನ್ನಡ ಎಲ್ಲಾಕಡೆ ಕಾಣದಂತಾಗುತ್ತದೆ.


ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕನ್ನಡವನ್ನು ಬಳಸಲೇಬೇಕೆಂಬ ನಿಯಮ ಮೊದಲಿನಿಂದಲೂ ಇದೆ. ಆದರೆ ಅದನ್ನು ಯಾರು ಪಾಲಿಸುತ್ತಿಲ್ಲ ಅಷ್ಟೇ. ಅಲ್ಲಿ ಕೆಲಸ ಮಾಡುವ ಕನ್ನಡಿಗರೂ ಸಹ ಅಲ್ಲಿ ಕನ್ನಡವನ್ನು ಆಡಳಿತದ ಒಂದು ಭಾಷೆಯನ್ನಾಗಿ ಮಾಡಲು ಪ್ರಯತ್ನಿಸಿಲ್ಲದಿರುವುದು ಬಹಳ ಬೇಸರದ ಸಂಗತಿ. ಇಂತಹ ವಿಷಯಗಳಲ್ಲಿ ರಾಜ್ಯ ಸರ್ಕಾರದ ಪಾತ್ರ ಬಹಳಷ್ಟಿರುತ್ತದೆ. ಆದರೆ ನಮ್ಮ ದುದೈವ ನಮ್ಮ ರಾಜಕೀಯ ಪಕ್ಷಗಳಿಗೆ ಜಾಣ ಕುರುಡು ಮತ್ತು ಕಿವುಡು.


ಭಾರತವು ಅನೇಕ ಭಾಷೆ, ಸಂಸ್ಕೃತಿ, ಅಚಾರ ವಿಚಾರಗಳ ಜನ್ಮ ಸ್ಥಾನವಾಗಿದ್ದರೂ ಹಿಂದಿಯೊಂದೇ ನಮ್ಮ ರಾಷ್ಟ್ರ ಭಾಷೆಯಂಬಂತೆ ವಿಜೃಂಭಿಸಲು ಕೆಂದ್ರ ಸರ್ಕಾರವು ಹೊರಟಿರುವುದು ಅಕ್ಷಮ್ಯ ಅಪರಾಧ. ಕೇವಲ ಅಭಿಯಾನದಲ್ಲಿ ಸಹಿ ಮಾಡಿದರೆ ಮಾತ್ರ ನಮ್ಮ ಕರ್ತವ್ಯ ಕೊನೆಯಾಗುವುದಿಲ್ಲ. ಕೇಂದ್ರ ಸರ್ಕಾರದ ಕಛೇರಿಗಳಲ್ಲಿ ಕನ್ನಡದ ಅರ್ಜಿ ಮುಂತಾದವು ಕನ್ನಡದಲ್ಲಿ ಬಂದರೆ ಮಾತ್ರ ಪ್ರಯೋಜನವಾಗುವುದಿಲ್ಲ. ಕನ್ನಡ ಓದಲು ಬರೆಯಲು ಬರುವವರು ಕೇಂದ್ರ ಸರ್ಕಾರದ ಕಛೇರಿಗಳಲ್ಲಿ /ಬ್ಯಾಂಕ್ ಗಳಲ್ಲಿ ಅರ್ಜಿಯನ್ನು ತುಂಬುವಾಗ ಮತ್ತು ಇನ್ನಿತರ ಕಾರ್ಯಗಳಿಗೆ ಭೇಟಿ ಕೊಟ್ಟಾಗ ತಪ್ಪಿಲ್ಲದೇ ಕನ್ನಡದಲ್ಲಿ ಅರ್ಜಿಯನ್ನು ತುಂಬುವುದು ಮತ್ತು ಅಲ್ಲಿ ಆಂಗ್ಲ ಮತ್ತು ಹಿಂದಿ ಭಾಷೆಯನ್ನು ಬಂದರೂ ಅದನ್ನು ಬಳಸದೆ ಕೇವಲ ಕನ್ನಡವನ್ನೇ ಬಳಸಿದರೆ ಮಾತ್ರ, ಖಂಡಿತವಾಗಿಯೂ ಕನ್ನಡ ಎಲ್ಲಾ ಕೇಂದ್ರ ಸರ್ಕಾರದ ಕಛೇರಿಗಳಲ್ಲಿ ವಿಜೃಂಭಿಸಬಹುದು. (ಮುಗಿಯಿತು)

No comments:

Post a Comment