Friday 14 September 2012

ದೇವರೆಲ್ಲಿದ್ದಾನೆ? ಭಾಗ-೭


ಕಳೆದ ಸಂಚಿಕೆಯಿಂದ

ಮನುಷ್ಯರು ಈ ಭೂಮಂಡಲದಲ್ಲಿ ಸುಖದಿಂದ ಸಂತೋಷದಿಂದ ಬದುಕಿ ಬಾಳಲು ನಮಗಾಗಿ ಶುದ್ದ ಗಾಳಿ, ನೀರು, ಕಾಡು, ಮೇಡು, ಪ್ರಾಣಿ ಸಂಕುಲಗಳು, ಖನಿಜ, ಆಹಾರ ಹೀಗೆ ಸಕಲವನ್ನೂ ಪ್ರಕೃತಿ ದಯಪಾಲಿಸಿದೆ. ಈ ಭೂಮಂಡಲದಲ್ಲಿ ನಮಗೆ ಯಾವುದಕ್ಕೂ ಕೊರತೆಯಾಗಿಲ್ಲ. ಆದರೆ ನಾವುಗಳು ಅದನ್ನು ನಮ್ಮ ನಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಸ್ವರ್ಗ ಸುಖವನ್ನು ಅನುಭವಿಸಿ ಮುಂದಿನ ಪೀಳಿಗೆಯನ್ನು ನರಕಕ್ಕೆ ದೂಡುತ್ತಿದ್ದೇವೆ. ನಾವು ನಮ್ಮಲ್ಲಿರುವ ಸಣ್ಣತನ, ಅಹಂ, ಸ್ವಾರ್ಥದಿಂದ ನಮ್ಮ ಮನ, ಮನೆ, ಹಾದಿ, ಬೀದಿ, ಊರು, ಕೇರಿ, ರಾಜ್ಯ, ದೇಶ ಅಷ್ಟೇ ಏಕೆ ಇಡೀ ಪ್ರಪಂಚವನ್ನೇ ನರಕಮಾಡಿಕೊಂಡುಬಿಟ್ಟಿದ್ದೇವೆ. ನಾವೆಷ್ಟು ಮೂರ್ಖರಿರಬೇಕು ಅಲ್ವಾ? ಸ್ವರ್ಗದಂತ ನಾಡನ್ನು ನರಕ ಮಾಡಿ ಇನ್ನೆಲ್ಲೋ ಸ್ವರ್ಗವಿದೆ ಎಂದು ನಂಬಿದ್ದೇವಲ್ಲಾ, ನಾವು ಎಷ್ಟು ಮೂರ್ಖರಿರಬೇಕು.

ಡಾರ್ವಿನ್ ಅವರ ವಿಕಾಸವಾದದ ತಿರುಳಿನಂತೆ ಮಂಗನಿಂದ ಮಾನವನಾದುದು ನಮಗೆಲ್ಲರಿಗೂ ತಿಳಿದೇ ಇದೆ. ನಾವು ನಮ್ಮ ದೈಹಿಕ ನೋಟದಲ್ಲಿ ಮನುಷ್ಯರಂತೆ ಕಂಡರೂ ನಮ್ಮಲ್ಲಿರುವ ಮಂಗನ ಬುದ್ದಿ ಕಡಿಮೆಯಾಗಿಲ್ಲ ಅಂತಲೇ ಹೇಳಬೇಕು. ಮಂಗನಂತೆ ನಾವು ಒಮ್ಮೊಮ್ಮೆ ಒಳ್ಳೆಯವರಾಗಿ ನಟಿಸುತ್ತಾ, ಅನೇಕ ಬಾರಿ ಮೃಗಗಳಂತೆ ವರ್ತಿಸುತ್ತಾ, ಕೆಲವೊಮ್ಮೆ ಹುಚ್ಚರಂತಾಡುವ ನಮ್ಮ ಸ್ಥಿತಿಯೇ ಅಯೋಮಯವಾಗಿದೆ.

ದೇವರು ಬೇರೆ ಎಲ್ಲಿಯೂ ಇಲ್ಲ ಅವನು ನಮ್ಮಲ್ಲಿಯೇ ಇದ್ದಾನೆ. ನೂರಾರು ಊರುಗಳನ್ನು ಸುತ್ತಿ, ಸಾವಿರಾರು ದೇವಸ್ಥಾನಗಳಲ್ಲಿ ಕಾಣದ ದೇವರನ್ನು ಹುಡುಕುವ ನಾವು ನಮ್ಮ ಮನದಲ್ಲಿರುವ ಸ್ನೇಹ, ಪ್ರೀತಿ, ವಿಶ್ವಾಸ, ಮಾನವೀಯತೆಯೆಂಬ ದೇವರನ್ನು ಮರತೇ ಬಿಟ್ಟಿರುವುದು ನಮ್ಮ ಬದುಕಿನ ಬಹು ದೊಡ್ಡ ವ್ಯಂಗ. ಮನೆಯೇ ಮಂತ್ರಾಲಯ, ಮನಸೇ ದೇವಾಲಯ ಎಂಬುದನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದರೆ ನಮ್ಮ ಜೀವನವು ಸಾರ್ಥಕವಾಗುವದಷ್ಟೇ ಅಲ್ಲದೆ, ನಮ್ಮ ಭೂಮಂಡಲವೇ ನೆಮ್ಮದಿಯಿಂದಿರುತ್ತದೆ ಎಂಬ ಸದಾಶಯದೊಂದಿಗೆ……….(ಮುಗಿಯಿತು)

No comments:

Post a Comment